ಪದಗಳಿವೆ ಎದೆಯೊಳಗೆ

Author : ಎನ್. ಜಗದೀಶ್ ಕೊಪ್ಪ

Pages 352

₹ 390.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

ಲೇಖಕ ಎನ್. ಜಗದೀಶ್ ಕೊಪ್ಪ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕಥನ ಕೃತಿ ʻಪದಗಳಿವೆ ಎದೆಯೊಳಗೆʼ (ದೇವದಾಸಿಯರ ಸಾಂಸ್ಕೃತಿಕ ಪಲ್ಲಟಗಳ ಕಥನ). ಭಾರತೀಯ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಮತ್ತು ಅಸ್ಪೃಶ್ಯತೆ ನೆಪದಲ್ಲಿ ಮೇಲ್ವರ್ಗದವರ ಎಲ್ಲಾ ಕಠಿಣ ನಿಯಮ ಹಾಗೂ ಪದ್ಧತಿಗಳನ್ನು ಸಹಿಸಿಕೊಂಡು ಬಂದ ತಳ ಸಮುದಾಯದವರ, ಅದರಲ್ಲೂ ದೇವದಾಸಿಯರ ಜೀವನ ಕತೆ ಶೋಚನೀಯವಾಗಿದ್ದರೂ ಅವರು ಕಲೆಗೆ ನೀಡಿದ ಪ್ರೋತ್ಸಾಹ ಅಪಾರವಾದುದು. ಹೇಳಿಕೊಳ್ಳಲಾಗದ ತಮ್ಮ ಎದೆಯ ಪಾಡುಗಳನ್ನು ಬಚ್ಚಿಟ್ಟುಕೊಂಡು ಶತಮಾನಗಳುದ್ದಕ್ಕೂ ಅನಾಮಿಕರಂತೆ ಬದುಕಿ ಭಾರತದ ಪ್ರಧಾನ ಕಲೆಗಳಾದ ನೃತ್ಯ, ಸಂಗೀತ, ವಾದನಕ್ರಿಯೆಗಳನ್ನು ಪೋಷಿಸಿಕೊಂಡು ಬಂದ ಕುರಿತಾಗಿ ಈ ಪುಸ್ತಕ ವಿವರಿಸುತ್ತದೆ.  

 ಭಾರತದ ಸಾಂಸ್ಕೃತಿಕ ಇತಿಹಾಸ ಹಾಗೂ ಕಲಾ ಜಗತ್ತಿನಲ್ಲಿ ವಿದುಷಿಯರಾಗಿ ಹಾಗೂ ಅಕ್ಷರಸ್ಥರಾಗಿ ಬ್ರಾಹ್ಮಣ ವಿದ್ವಾಂಸರ ಸರಿಸಮಾನರಾಗಿ ಬೆಳೆದುಬಂದ ದೇವದಾಸಿಯರನ್ನು ಪುರುಷಲೋಕದ ಭಾರತೀಯ ಸಮಾಜವು ಶತಮಾನದುದ್ದಕ್ಕೂ ಕಂಡುಕೊಂಡು ಬಂದ ಇತಿಹಾಸದ ದುರಂತವನ್ನು ನೆನೆಯುತ್ತಾ ಜಗದೀಶ್ ಕೊಪ್ಪ ಅವರು ಕೃತಿಯನ್ನು ಆರಂಭಿಸುತ್ತಾರೆ. 

 ಅದಕ್ಕಾಗಿ ದೇವದಾಸಿ ಸಮುದಾಯದವರ ಬಗ್ಗೆ ಸಾಕಷ್ಟು ಅಧ್ಯಾಯಗಳನ್ನು ಮಾಡಿ ಅಂತಹ ಸಮುದಾಯದ ಜನರ ಹುಟ್ಟು, ಬೆಳವಣಿಗೆ, ದೇವಸ್ಥಾನಗಳ ಪರಿಕಲ್ಪನೆ ಮತ್ತು ಅವುಗಳ ಕಾರ್ಯ ಕಾರ್ಯಚಟುವಟಿಕೆ, ಆಗಮ ಸಂಸ್ಕೃತಿಯಲ್ಲಿ ದೇವದಾಸಿಯರು, ನಾಟ್ಯ ಶಿಲ್ಪಗಳ ಪರಂಪರೆ, ಭಾರತದ ನಾಟ್ಯ ಪ್ರಕಾರಗಳು ಮತ್ತು ಅವುಗಳಲ್ಲಿ ದೇವದಾಸಿಯರ ಪಾತ್ರ, ದೇವದಾಸಿಯರ ಸಾಂಸ್ಕೃತಿಕ ಪಲ್ಲಟಗಳ ಕಥನ, ಆಧುನಿಕ ದೇವದಾಸಿಯರ ಕಥನ ಹೀಗೆ 15 ಅಧ್ಯಾಯಗಳಲ್ಲಿ ವಿವರವಾಗಿ ವಿಸ್ತೃತವಾಗಿ ಚರ್ಚಿಸಿದ್ದಾರೆ.  

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Excerpt / E-Books

ಡಾ. ಎನ್.‌ ಜಗದೀಶ್‌ ಕೊಪ್ಪ ಅವರ ʻಪದಗಳಿವೆ ಎದೆಯೊಳಗೆʼ ಪುಸ್ತಕದಲ್ಲಿ ಅಗ್ರಹಾರ ಕೃಷ್ಣ ಮೂರ್ತಿ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ...

ದೇವದಾಸಿ ಪದ್ಧತಿಯೆಂದ ಕೂಡಲೆ ಸಂಪ್ರದಾಯಶೀಲರ ಮತ್ತು ವಿಚಾರವಂತರ ಮನಸ್ಸಿನಲ್ಲಿ ಕೆಲವು ಸಂದಿಗ್ಧಗಳು, ವಿಪರ್ಯಾಸಗಳು ಮೂಡುತ್ತವೆ. ವೇದಾಗಮ ಪಾರಂಗತರು, ಪುರೋಹಿತಶಾಹಿ, ಆಳುವ ಪ್ರಭುಗಳೇ ಮುಂತಾದ ಸಂಪ್ರದಾಯಕರೇ ಈ ಪದ್ಧತಿಯ ಪೋಷಕರುಗಳಾಗಿ ನಮಗೆ ಕಾಣಿಸುವುದು; ದೇವಾಲಯಗಳಲ್ಲಿನ ನೃತ್ಯ, ಸಂಗೀತ ಸೇವೆಯಂತೆಯೇ ಕ್ರಮೇಣ ಅರಮನೆ ಗುರುಮನೆಗಳಲ್ಲೂ ಅದು ನಡೆಯುವುದು. (ಎಷ್ಟಾದರೂ ರಾಜರುಗಳು ಪ್ರತ್ಯಕ್ಷ ದೇವತೆಗಳೇ ತಾನೆ!); ದೇವದಾಸಿಯರು ನೃತ್ಯ ಸಂಗೀತವನ್ನು ರಕ್ಷಿಸಿದವರು ನಿಜ, ಆದರೆ ಮನುಷ್ಯ ಕಲ್ಪಿಸಿದ ದೇವರು ಎಷ್ಟರಮಟ್ಟಿಗೆ ಈ ಕಲೆಯನ್ನು ಆಸ್ವಾದಿಸುತ್ತಾನೋ ತಿಳಿಯುವುದಿಲ್ಲ. ಆದರೆ ಅದು ಅವನತಿಗೊಳ್ಳುತ್ತಾ ವೃತ್ತಿಯಾದ ದುರಂತ ಕಾಣುತ್ತದೆ. ದೇವನಡಿಗಳಿಂದ ಪಾಪಕೂಪದ ತಳ ಮುಟ್ಟಿಬಿಡುತ್ತದೆ. ಇವೆಲ್ಲ ಗೊಂದಲಗಳ ನಡುವೆ ನಾವು ಕಲೆಯ ಪಾವಿತ್ರ್ಯ, ಕಲಾಸ್ವಾದನೆ, ಕಲಾ ರಸಿಕತೆ, ಮನರಂಜನೆ ಮುಂತಾದ ಸಿದ್ಧಾಂತಗಳನ್ನೂ ಕಟ್ಟುತ್ತೇವೆ! ಇದು ಸಾಮಾಜಿಕ ರಿವಾಜು, ಬಡತನ ಮತ್ತು ಧರ್ಮದ ನಡುವಿನ ಒಂದು ಕ್ಲಿಷ್ಟ ಪ್ರಶ್ನೆ. ಈ ಸಮಸ್ಯೆಯನ್ನು ನೋಡುವವರ ದೃಷ್ಟಿಕೋನಗಳೂ ಭಿನ್ನ ಸ್ವರೂಪದಲ್ಲಿರುತ್ತವೆ. ನನಗೆ ಅರ್ಥವಾದಂತೆ ಜಗದೀಶ್ ಕೊಪ್ಪ ಅವರ ದೃಷ್ಟಿಕೋನ ಶ್ರೇಷ್ಠಕಲೆಯನ್ನು ಉಳಿಸಿ ಬೆಳೆಸಿದ ಕಲಾವಿದೆ (ದೇವದಾಸಿ)ಯರ ಬಗ್ಗೆ ಅವರ ಬದಲಾದ ಜೀವನ ವಿಧಾನದ ಬಗ್ಗೆ ಕಾಳಜಿ ಮತ್ತು ಸಹಾನುಭೂತಿಪರ ನಿಲುವುಳ್ಳದ್ದು. ಅಂಥವರಲ್ಲಿದ್ದ ಸಂಗೀತ ನೃತ್ಯ ಪರಂಪರೆ ಕಾಲಕ್ರಮದಲ್ಲಿ ಮೇಲ್ವಾತಿ, ಮೇಲ್ವರ್ಗದವರ ವಶವಾಗುವುದರ ಬಗೆಗೆ ಒಂದು ರೀತಿಯ ನಷ್ಟಭಾವನೆ ಇವರಲ್ಲಿದೆ.

- ಅಗ್ರಹಾರ ಕೃಷ್ಣಮೂರ್ತಿ

 

Related Books