ಸಸ್ಯ ಸಗ್ಗ

Author : ಕೆ.ಎನ್. ಗಣೇಶಯ್ಯ

Pages 376

₹ 350.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ತಮ್ಮ ಅನುಭವದ ಪರಿಧಿಗೆ ಬಂದಿರುವ ಸಸ್ಯಶಾಸ್ತ್ರದ  ವಿಸ್ಮಯಕಾರಿ ಸಂಗತಿಗಳನ್ನು ಲೇಖಕರು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ಲೇಖಕ ಕೆ.ಎನ್. ಗಣೇಶಯ್ಯ ಅವರು ಸಸ್ಯಶಾಸ್ತ್ರದ ವಿಜ್ಞಾನಿ. ನಾಲ್ಕು ದಶಕಗಳ ಸಸ್ಯ ಸಂಶೋಧನೆಯಲ್ಲಿ ಅವರು ಕಂಡ ಸಸ್ಯ ಜಗತ್ತಿನ ಸೋಜಿಗಗಳನ್ನು ಸಾಹಿತ್ಯ ರೂಪಕ್ಕಿಳಿಸಿದ್ದಾರೆ. ತಮ್ಮ ಸಂಶೋಧನೆಯ ವಿವಿಧ ಆಯಾಮ ಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸಿರುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು 'ಹಸಿರು ಹೊನ್ನು’ ತಂದುಕೊಟ್ಟಿದೆ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Reviews

ಸಸ್ಯ ಸಗ್ಗ-ಟೆಕ್‌ ಕನ್ನಡ-ಗಣೇಶಯ್ಯ


ಸಸ್ಯ ಜಗತ್ತಿನ ವೈಚಿತ್ರ್ಯಗಳ ಆಕರ್ಷಕ ಗುಚ್ಛ

ತಮ್ಮ ವೃತ್ತಿಜೀವನದ ಅಮೂಲ್ಯ ಕ್ಷಣಗಳನ್ನು, ಈ ಸಸ್ಯ ಸಂಶೋಧನೆಯಲ್ಲಿ ಕಂಡುಕೊಂಡ ಅಪೂರ್ವ ಸತ್ಯಗಳನ್ನು 'ಸಸ್ಯ ಸಗ್ಗ'ದಲ್ಲಿ ಅತ್ಯಾಕರ್ಷಕವಾಗಿ ಕಟ್ಟಿಕೊಡುವಲ್ಲಿ ಡಾ.ಗಣೇಶಯ್ಯನವರು ಸಫಲರಾಗಿದ್ದಾರೆ. ಸಸ್ಯಗಳ ವರ್ತನೆಯನ್ನು ವಿಕಾಸವಾದದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವಾಗ ಕಂಡುಕೊಂಡ ಸತ್ಯಗಳನ್ನು ಜಿಜ್ಞಾಸೆ/ಸಂಭಾಷಣೆಗಳ ಮೂಲಕ ಪ್ರಜ್ಞಾಪೂರ್ವಕವಾಗಿ ರೂಪಿಸಿದ್ದರೂ ಯಾವುದನ್ನೂ ಉದ್ದೇಶಪೂರ್ವಕವಾಗಿ ಮುಚ್ಚಿಡುವಂತೆ ಕಾಣುವುದಿಲ್ಲ. ಒಂದು ವಿಶಿಷ್ಟ ರಭಸ ಅವರ ಬರವಣಿಗೆಯ ಉದ್ದಕ್ಕೂ ಕಾಣಿಸುತ್ತದೆ.

ಪುಸ್ತಕದಲ್ಲಿ ಎಂಟು ಅಧ್ಯಾಯಗಳು ಹಾಗೂ ಇಪ್ಪತ್ತೆಂಟು ಉಪ ಅಧ್ಯಾಯಗಳಿವೆ. 'ಪುಷ್ಪಲೀಲೆ' ಎಂಬ ಅಧ್ಯಾಯದಲ್ಲಿ ಅವರ ನಿಡುಗಾಲದ ಮಿತ್ರ, ವಿಜ್ಞಾನಿ ಡಾ. ಉಮಾಶಂಕರ್ ಅವರ ಭೇಟಿ, ಅವರೊಡನೆಗೆಳೆತನಬೆಳೆದದ್ದು,ಕಾಡುಪ್ರಭೇದಗಳನ್ನು ಕೃಷಿಕರಣಗೊಳಿಸುವಾಗ ವಿಕಾಸ ಪ್ರಕ್ರಿಯೆಯಲ್ಲಿ ಉಂಟಾದ ಬದಲಾವಣೆಗಳನ್ನು ಊಹಿಸಿ ಅದಕ್ಕೆ ಪುರಾವೆಗಳನ್ನು ಒದಗಿಸಿದ್ದು, ಇಬ್ಬರೂ ಡಾರ್ವಿನ್ನನ ವಿಕಾಸವಾದದತ್ತ ಆಕರ್ಷಿತರಾದ ವಿಚಾರಗಳು ಬಹಳ ಚೆನ್ನಾಗಿ ಮೂಡಿವೆ.. 'ಹಸಿರು ರಕ್ತ' ಅಧ್ಯಾಯದಲ್ಲಿ ಶೀಷ ಮರದಲ್ಲಿ ಬೆಳೆಯುವ ಕಾಯಿಗಳಲ್ಲಿ ಸ್ವಾರ್ಥದಿಂದ ಅಗ್ರಜ ಬೀಜ ಉಳಿದ ಸೋದರ ಬೀಜಗಳನ್ನು ಕೊಲೆಗೈಯುವ ಕ್ರಿಯೆ ಸಬೇದಾಶ್ಚರ್ಯ ಉಂಟುಮಾಡುತ್ತದೆ. ಸಸ್ಯ ಪ್ರಭೇದಗಳಲ್ಲಿ ಮನುಷ್ಯರಲ್ಲಿ ಇರುವಂತಹ ಹಿಂಸೆ, ಸ್ವಜನಪಕ್ಷಪಾತ, ಕ್ರೌರ್ಯ ಎಲ್ಲವನ್ನೂ ಇಲ್ಲಿ ಅನಾವರಣಗೊಳಿಸುತ್ತಾರೆ.

ಜೊತೆಗೆ ಸಸ್ಯಗಳಲ್ಲಿ ಮೊದಲ ಬಾರಿಗೆ, ಪ್ರಾಣಿಗಳಲ್ಲಿ ನಡೆಯುವಂತಹ 'ತಾಯಿ ಮಕ್ಕಳ ಕಲಹ'ವನ್ನು ತೋರಿಸಿದ ಹೆಗ್ಗಳಿಕೆ ಈ ಜೋಡಿಯದು. ಸಸ್ಯಗಳಲ್ಲಿ 'ಸ್ವಯಂವರ'ವೂ ನಡೆಯುತ್ತದೆ ಎಂಬುದನ್ನು ಸುಬಾಬುಲ್‌ ಗಿಡದ ಉದಾಹರಣೆಯೊಂದಿಗೆ ಬಹಳ ಸೊಗಸಾಗಿ ವಿವರ ನೀಡಿದ್ದಾರೆ. ಹದಿನಾಲ್ಕನೇ ಶತಮಾನದಲ್ಲಿ ಸೈನಿಕರು ಯುದಕ್ಕೆ ಹೊರಟಾಗ ತಮ್ಮ ಪತ್ನಿಯರಿಗೆ ಹಾಕುತ್ತಿದ್ದ 'ಶೀಲಪಟ್ಟಿ' ಯನ್ನು ಹೋಲುವ ಪ್ರಕ್ರಿಯೆ ಆನ್ಲೋವಿಯಾ ಹಾಸಿಟಾ ಎಂಬ ಸಸ್ಯದಲ್ಲಿದೆ ಎಂಬುದನ್ನು ತೋರಿಸುತ್ತಾರೆ. ಬೀಜ ಪ್ರಸಾರಕ್ಕಾಗಿ ಬಂಗಾರದ ಗಿಡ ನಿರ್ದಿಷ್ಟ ಸಮಯಕ್ಕೆ ಮಧುವನ್ನು ಸುರಿಸಿ ನಿರ್ದಿಷ್ಟ ಪ್ರಭೇದದೆ ಇರುವೆಗಳನ್ನು ಮಾತ್ರ ಆಕರ್ಷಿಸುವುದು ಇತ್ಯಾದಿಗಳ ಮೂಲಕ ಸಸ್ಯ, ಪ್ರಾಣಿ, ಇರುವೆ ಮುಂತಾದವು ಕೂಡಾ ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತವೆ. ಇದು ಎಲ್ಲ ಜೀವಿಗಳನ್ನು ರೂಪಿಸಿದ ವಿಕಾಸ ಪ್ರಕ್ರಿಯೆಯ ಕೈವಾಡ ಎಂಬ ಅರಿವನ್ನು ಮೂಡಿಸುತ್ತಾರೆ. ಜೊತೆಗೆ ಅರಳೀಮರ, ಆಲ, ಅತ್ತೆ ಗುಂಪಿನ ವೃಕ್ಷಗಳು ಹಾಗೂ ಅವುಗಳ ಪರಾಗಸ್ಪರ್ಶಕ್ಕೆ ವಿಕಾಸಗೊಂಡಿರುವ ನಿರ್ದಿಷ್ಟ ಕಣಜ ಪ್ರಭೇದಗಳ ವಿವರ ಕುತೂಹಲಕಾರಿ. - ಡಾ. ಗಣೇಶಯ್ಯ ಮತ್ತವರ ತಂಡ ಮಾಡಿದ ಇನ್ನೊಂದು ಗಮನಾರ್ಹ ಕೆಲಸವೆಂದರೆ ಭಾರತೀಯ ಸಸ್ಯ ಸಂಪತ್ತಿನ ಡಿಜಿಟಲೀಕರಣ, ನಮ್ಮ ದೇಶದ ಪಶ್ಚಿಮಘಟ್ಟ ಪೂರ್ವಬೆಟ್ಟ ಹಾಗೂ ಅಂಡಮಾನ್ ದೀಪಗಳ ಅಪಾರ ಸಸ್ಯಸಂಪತ್ತಿನ ಮೋಜಣಿ ಬಹಳ ಅಮೂಲ್ಯ ವಾದ ಮಾಹಿತಿ ನೀಡುವ ಕಾರ್ಯ. ಇದರ ಬಗ್ಗೆ ಎಸ್ಸೆತ ವಿವರ 'ವೈವಿಧ್ಯ ಕಾಂಡ' ಅಧ್ಯಾಯದಲ್ಲಿದೆ. - ಅವರ ದೈನಂದಿನ ಕೆಲಸಗಳಲ್ಲಿ ಸಂಶೋಧನಾ ಕೆಲಸಗಳಲ್ಲಿ ನನಗೆ ಗೊತ್ತಿರುವಂತೆ ಇನ್ನೂ ಹೆಚ್ಚಿನಹಾಸ್ಯ ಪ್ರಸಂಗಗಳಿತ್ತು. ಅವನ್ನು ಲೇಪಿಸಿದ್ದರೆ ಪುಸ್ತಕಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತೇನೋ.

'ವಿಜ್ಞಾನದಲ್ಲಿ ಯಾವುದೂ ಸಂಪೂರ್ಣ ಮುಗಿಯಿತು ಎಂಬುದಿಲ್ಲ. ಒಂದು ವಿಷಯ ಹೆಚ್ಚು ತಿಳಿದಂತೆಲ್ಲ ಇನ್ನಷ್ಟು ಆಳವಾಗುತ್ತಾ ಹೋಗುತ್ತದೆ. ಬಹುವರ್ಷಗಳಿಂದ ಸ್ಥಾಪಿತವಾದ ಸಿದ್ದಾಂತಗಳನ್ನೂ ಸರಿಯಾದ ಪ್ರಶ್ನೆ ಮತ್ತು ಅಂಕಿ-ಅಂಶಗಳ ಮೂಲಕ ತಿರಸ್ಕರಿಸಲು ಸಾಧ್ಯವಿದೆ. ವಿಜ್ಞಾನಿಗಳು ನಿರಾಶರಾಗುವ ಅಗತ್ಯವಿಲ್ಲ' ಎಂದು ಹುರಿದುಂಬಿಸುವ ಈ ಪುಸ್ತಕ ಇಂಗ್ಲೀಷಿಗೂ ಭಾಷಾಂತರವಾದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಪ್ರೇರಕವಾಗಬಲ್ಲದು. - ಕನ್ನಡ ಸಾಹಿತ್ಯಕ್ಕೆ ಸಂದ ಅನನ್ಯ ಕಥನ ಇದು. 

-ಮೋಹನ್ ತಲಕಾಲುಕೊಪ್ಪ

ಕೃಪೆ: ಕನ್ನಡ ಪ್ರಭ (2020 ಜನವರಿ 19)

..............................................................................................................................................................................

ಸಸ್ಯ ಸಾಮ್ರಾಜ್ಯಗಳ ಸೋಜಿಗದ ಅನನ್ಯ ಕಥನ

‘ಸಸ್ಯ ಸಗ್ಗ’ ಕೃತಿಯ ಲೇಖಕ, ಖ್ಯಾತ ವಿಜ್ಞಾನಿ ಡಾ. ಕೆ. ಎನ್. ಗಣೇಶಯ್ಯ ಕನ್ನಡ ಸಾಹಿತ್ಯ ಓದುಗರಿಗೆ ಚಿರಪರಿಚಿತ ಹೆಸರು. ಇವರ 23ನೇ ಕೃತಿ ಇದು. ಅವರ ವೃತ್ತಿಯಲ್ಲಿ ಕಂಡುಕೊಂಡ ಸಸ್ಯ ಜಗತ್ತಿನ ಸೋಜಿಗಗಳ ಕಥನ. ನಾಲ್ಕು ದಶಕಗಳ ಸಂಶೋಧನೆಯ ಸಾರಸರ್ವಸ್ವ ಇಲ್ಲಿ ಅನಾವರಣ. ಸಾಮಾನ್ಯರಿಗೆ ಅರಿವಿರದ ಸುತ್ತಮುತ್ತಲಿನ ಸಸ್ಯಗಳ ವಿಶಿಷ್ಟ ವಂಶಾಭಿವೃದ್ಧಿಯ ತಂತ್ರ ಹಾಗೂ ವಿಭಿನ್ನ ವರ್ತನೆಗಳನ್ನು ವಿಕಾಸವಾದದ ಹಿನ್ನೆಲೆಯಲ್ಲಿ ಅವರೇ ಮಾಡಿದ ಸಂಶೋಧನೆಗಳ ಮೂಲಕ ವಿವರಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.

ನಾನು ಅವರ ವಿದ್ಯಾರ್ಥಿಯಾಗಿ ಎಂಎಸ್ಸಿ ಮಾಡಲು ಸೇರಿದ್ದು ೧೯೯೫ನೇ ಇಸವಿಯಲ್ಲಿ. ಪಿಹೆಚ್ ಡಿ. ಮುಗಿದ ನಂತರ ಅವರೊಟ್ಟಿಗೆ ಭಾರತೀಯ ಸಸ್ಯ ಸಂಪತ್ತಿನ ಗಣಕೀಕರಣದ ಪ್ರಾಯೋಜನೆಯಲ್ಲಿ ಭಾಗಿಯಾಗಿದ್ದೆ. ಅವರ ನೇರ ಸಂಪರ್ಕದಲ್ಲಿದ್ದುದು ಒಟ್ಟು ೫ ವರ್ಷ. ನಾನವರಲ್ಲಿ ಅಧ್ಯಯನಕ್ಕೆ ಸೇರುವ ಮುಂಚೆ ಡಾ. ಗಣೇಶಯ್ಯ ಮತ್ತು ಅವರ ಬಹುಕಾಲದ ಸಹವರ್ತಿ ಡಾ. ಉಮಾಶಂಕರ್ ತಮ್ಮ ಅತ್ಯಂತ ಗಟ್ಟಿಯಾದ ತಳಹದಿ ಇರುವ ಹಾಗೂ ಅಷ್ಟೇ ಕುತೂಹಲಕಾರಿಯಾದ ವಿಜ್ಞಾನ ಜೀವನವನ್ನು ಹೇಗೆ ರೂಪಿಸಿಕೊಂಡರು ಮತ್ತು ಆ ಪ್ರಕ್ರಿಯೆಯಲ್ಲಿ ಅವರು ಕ್ರಮಿಸಿದ ಅರ್ಥಪೂರ್ಣ ಹಾದಿಯ ಸ್ವರೂಪ ಅಷ್ಟಾಗಿ ಗೊತ್ತಿರಲಿಲ್ಲ. ನನ್ನ ಸಮಕಾಲೀನರಾದ ಅವರ ಇತರ ವಿದ್ಯಾರ್ಥಿಗಳಿಗೂ ತಿಳಿದಿರುವ ಸಾಧ್ಯತೆ ಕಡಿಮೆ. ಈ ಪುಸ್ತಕ ಓದಿದಾಗ ನನಗನಿಸಿದ್ದು - ನಾವೆಲ್ಲ ಗಣೇಶಯ್ಯ ಮತ್ತು ಉಮಾಶಂಕರ್ ಅವರ ಸಂಶೋಧನೆಗಳನ್ನು ಗ್ರಹಿಸಿದ್ದು ಒಂದು ಕಾಲಘಟ್ಟದ ಕಿಟಕಿಯ ಮೂಲಕ ಮಾತ್ರ. ನಮ್ಮರಿವಿಗೆ ನಿಲುಕದೆ ಇದ್ದ ವಿಷಯಗಳೇ ಜಾಸ್ತಿ. ಬದುಕಿನ ಎಲ್ಲ ವಿಷಯದಲ್ಲಿಯೂ ಹಾಗೇ ಅಲ್ಲವೆ?

ಗುರುವಿನ ಪುಸ್ತಕದ ಪರಿಚಯ/ವಿಮರ್ಶೆ ಶಿಷ್ಯ ಮಾಡುವುದು ಕೆಲವೊಮ್ಮೆ ಅಪಾಯಕಾರಿ! ವಸ್ತುನಿಷ್ಠತೆ ಕಳೆದುಹೋಗುವ ಸಂಭವ. ಗುರುವಿನೆಡಗಿನ ಆರಾಧನಾ ಭಾವ ನಮಗರಿವಿಲ್ಲದಂತೆಯೇ ಲೇಖನದಲ್ಲಿ ವ್ಯಕ್ತವಾಗುವ ಸಾಧ್ಯತೆ ಇರುತ್ತದೆ. ಆ ಎಚ್ಚರಿಕೆಯನ್ನು ಇಟ್ಟುಕೊಂಡೇ ಕೆಲ ಅಂಶಗಳನ್ನು ಬರೆದಿದ್ದೇನೆ.

ವಿಶಿಷ್ಟ ರಭಸದ ಪುಸ್ತಕ

ಸಸ್ಯ ಸಂಶೋಧನೆಯಲ್ಲಿ ಕಂಡುಬಂದ ವಿಶಿಷ್ಟ ಸಂಗತಿಗಳನ್ನು ಪುಸ್ತಕ ಆಪ್ತವಾಗಿ ಕಟ್ಟಿಕೊಡುತ್ತದೆ. ಸಸ್ಯ ಜಗತ್ತಿನ ಸೋಜಿಗವನ್ನು ತೆರೆದಿಡುವಲ್ಲಿ ಇದು ಅವರ ವೃತ್ತಿ ಜೀವನದ ಸೋಜಿಗವೂ ಆಗಿ ಪರಿಣಮಿಸಿದೆ. ಅವರ ಬರವಣಿಗೆಯ ವೈಶಿಷ್ಟ್ಯ- ಸ್ಪಷ್ಟತೆ ಮತ್ತು ತೀವ್ರತೆ. ಶುಭ್ರ ಸಲಿಲ ಸರೋವರದ ತಳದಲ್ಲಿರುವ ಕಲ್ಲು, ಮಣ್ಣು, ನೆಲವೆಲ್ಲವೂ ಹೇಗೆ ತೋರುತ್ತದೋ ಹಾಗೆ ತಮ್ಮ ಸಂಶೋಧನಾ ಕಾಯಕದಲ್ಲಿ ಎದುರಾದ ಹಲವಾರು ಘಟನೆಗಳನ್ನು ರೂಪಿಸಿದ್ದಾರೆ. ಸಸ್ಯಗಳ ವರ್ತನೆಯನ್ನು ವಿಕಾಸವಾದದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವಾಗ ಕಂಡುಕೊಂಡ ಸತ್ಯಗಳನ್ನು ಜಿಜ್ಞಾಸೆ/ಸಂಭಾಷಣೆಗಳ ಮೂಲಕ ಪ್ರಜ್ಞಾಪೂರ್ವಕವಾಗಿ ರೂಪಿಸಿದ್ದಾರೆ. ಒಂದು ವಿಶಿಷ್ಟ ರಭಸ ಅವರ ಬರವಣಿಗೆಯ ಉದ್ದಕ್ಕೂ ಕಾಣಿಸುತ್ತದೆ ಮತ್ತು ಅದು ಎಲ್ಲೂ ಕುಂದುವುದಿಲ್ಲ. ಪ್ರಾಮಾಣಿಕವಾಗಿ ನನಗನ್ನಿಸಿದ್ದು – ಇದೊಂದು ಕನ್ನಡ ಸಾಹಿತ್ಯಕ್ಕೆ ಸಂದ ಅನನ್ಯ ಕಥನ. ಈ ಪುಸ್ತಕದಲ್ಲಿ ಮತ್ತೊಂದು ಬಹಳ ಇಷ್ಟವಾದದ್ದು ಎಂದರೆ – ರೇಖಾಚಿತ್ರಗಳು. ರಚಿಸಿದ ಕಲಾವಿದ ಸುನಿಲ್ ಮಿಶ್ರಾ ಅಭಿನಂದನಾರ್ಹರು. ಇಲ್ಲಿ ರೇಖೆಗಳು ಕಲಾಕೃತಿಗಳಾಗಿವೆ. ಜೊತೆಗೆ ಗಣೇಶಯ್ಯನವರು ತಮ್ಮ ಕಾದಂಬರಿಗಳಲ್ಲಿ ಕೊಡುವ ಹಾಗೆ ಆಕರ ಗ್ರಂಥಗಳ ಪಟ್ಟಿ, ಅಲ್ಲಲ್ಲಿ ಗ್ರಾಫ್ ಗಳು, ಪೂರಕ ಅಂಕಿ-ಅಂಶಗಳೆಲ್ಲವೂ ಇವೆ. ಇವೆಲ್ಲವೂ ಓದಿನ ರುಚಿಯನ್ನು ಹೆಚ್ಚಿಸುವ ಪರಿಕರಗಳಂತಿವೆ.

ಸಸ್ಯಗಳಲ್ಲಿ ಕೊಲೆ, ಹಿಂಸೆ, ಸ್ವಜನ ಪಕ್ಷಪಾತ !

ಸಸ್ಯಪ್ರಭೇದಗಳಲ್ಲಿ ಮನುಷ್ಯರಲ್ಲಿ ಇರುವಂತಹ ಹಿಂಸೆ, ಸ್ವಜನಪಕ್ಷಪಾತ, ಕ್ರೌರ್ಯ ಎಲ್ಲವನ್ನೂ ತಮ್ಮ ಸಂಶೋಧನೆಯ ಮೂಲಕ ಡಾ. ಗಣೇಶಯ್ಯ ಅನಾವರಣಗೊಳಿಸುತ್ತಾರೆ. ಡಾರ್ವಿನ್ನನ ವಿಕಾಸವಾದದ ಹಿನ್ನೆಲೆಯಲ್ಲಿ ನಡೆಸಿದ ಸಂಶೋಧನೆಗಳು ಹಾಗೂ ಅವರಿಗೆ ದೊರಕಿದ ಸಂಶೋಧನೆಯ ಸಹವರ್ತಿ ಡಾ. ಉಮಾಶಂಕರ್ ಭೇಟಿಯ ಪ್ರಸಂಗಗಳು ಮನೋಜ್ಞವಾಗಿ ನಿರೂಪಿತವಾಗಿವೆ. ಶೀಷ ಮರದಲ್ಲಿ ಬೆಳೆಯುವ ಕಾಯಿಗಳಲ್ಲಿ ಸ್ವಾರ್ಥದಿಂದ ಅಗ್ರಜ ಬೀಜ ಉಳಿದ ಸೋದರ ಬೀಜಗಳನ್ನು ಕೊಲೆಗಯ್ಯುವ ಕ್ರಿಯೆ, ಪ್ರಾಣಿಗಳಲ್ಲಿ ನಡೆಯುವಂತಹ ‘ತಾಯಿ ಮಕ್ಕಳ ಕಲಹ’ದ ಅಸ್ತಿತ್ವ ಇವೆಲ್ಲಾ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಸಸ್ಯಗಳಲ್ಲಿ ಭ್ರೂಣಗಳಿಗೆ ಪೋಷಕಾಂಶ ನೀಡುವ ಎಂಡೋಸ್ಪರ್ಮ್ ಅಂಗಾಂಶದ ವಿಕಾಸ, ಕಿತ್ತಳೆ ವರ್ಗದ ಹಣ್ಣುಗಳಲ್ಲಿ ತೊಳೆಗಳ ವಿಕಾಸವಾದದದ್ದು ತಾಯಿ ತನ್ನ ಮಕ್ಕಳ ನಡುವಿನ ಕಲಹ ಕಡಿಮೆ ಮಾಡಲು ಹೂಡಿರುವ ಉಪಾಯ ಎಂಬ ವಿವರ ಚಕಿತಗೊಳಿಸುತ್ತದೆ. ಸಸ್ಯಗಳಲ್ಲಿ ‘ಸ್ವಯಂವರ’(!), ಹದಿನಾಲ್ಕನೇ ಶತಮಾನದಲ್ಲಿ ಸೈನಿಕರು ಯುದ್ಧಕ್ಕೆ ಹೊರಟಾಗ ತಮ್ಮ ಪತ್ನಿಯರಿಗೆ ಹಾಕುತ್ತಿದ್ದ ‘ಶೀಲಪಟ್ಟಿ’ ಯನ್ನು ಹೋಲುವ ಪ್ರಕ್ರಿಯೆ, ಬೀಜ ಪ್ರಸಾರಕ್ಕಾಗಿ ಗಿಡವೊಂದು ನಿರ್ದಿಷ್ಟ ಸಮಯಕ್ಕೆ ಮಧುವನ್ನು ಸುರಿಸುವುದು ಇತ್ಯಾದಿಗಳ ಮೂಲಕ ಸಸ್ಯ, ಪ್ರಾಣಿ, ಇರುವೆ ಮುಂತಾದವು ಕೂಡಾ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದನ್ನು ಕಂಡರಿಸುತ್ತಾರೆ. ಇದು ಎಲ್ಲ ಜೀವಿಗಳನ್ನು ರೂಪಿಸಿದ ವಿಕಾಸ ಪ್ರಕ್ರಿಯೆಯ ಕೈವಾಡ ಎಂಬ ಸತ್ಯದ ಗೋಚರ ಇಲ್ಲಾಗುತ್ತದೆ.

ಆಲದ ಹೂವುಗಳ ರೋಚಕ ಲೋಕ ಹಾಗೂ ಜೀವವೈವಿಧ್ಯ ದಾಖಲಾತಿ

‘ಅಶ್ವತ್ಥಾವತಾರ’ ಅಧ್ಯಾಯದಲ್ಲಿ ಅರಳೀಮರ, ಆಲ, ಅತ್ತಿ ಗುಂಪಿನ ವೃಕ್ಷಗಳು ಹಾಗೂ ಅವುಗಳ ಪರಾಗಸ್ಪರ್ಶಕ್ಕೆ ವಿಕಾಸಗೊಂಡಿರುವ ನಿರ್ದಿಷ್ಟ ಕಣಜ ಪ್ರಭೇದಗಳ ವಿವರ ಬಹಳ ಆಸಕ್ತಿಕರವಾಗಿದೆ. ಆದರೆ ಈ ಅಧ್ಯಾಯದಲ್ಲಿ ಒಮ್ಮೊಮ್ಮೆ ಮರಗಳ ಹೆಸರು ಅದಲು ಬದಲಾಗಿ ಗೊಂದಲವಾಗುತ್ತದೆ. ಅರಳೀಮರಕ್ಕೆ ಅದೇ ಕುಟುಂಬದ ಇನ್ನಿತರ ಪ್ರಭೇದಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ನಮ್ಮ ಪೂರ್ವಜರು ಕೊಟ್ಟಿದ್ದರು ಎಂಬ ವಿಷಯ ನಮಗೆಲ್ಲಾ ಗೊತ್ತಿದೆ. ಇಲ್ಲಿ ಈ ಕುಟುಂಬದ ಪ್ರಭೇದಗಳು ಒಂದಲ್ಲಾ ಒಂದು ಮರದಲ್ಲಿ ಯಾವಾಗಲೂ ಹಣ್ಣು ಬಿಡುವಂತೆ ವಿಕಾಸವಾಗಿದೆ ಹಾಗಾಗಿ ಅವುಗಳು ಪ್ರಾಣಿಪಕ್ಷಿಗಳಿಗೆ ಸದಾ ಆಹಾರ ಪೂರೈಸಿ ಪರಿಸರವನ್ನು ಉಳಿಸುವಲ್ಲಿ ಗಮನಾರ್ಹ ಪಾತ್ರವಹಿಸಿವೆ ಎಂಬ ಅಂಶವನ್ನು ಎತ್ತಿ ತೋರಿಸಿ ಅವುಗಳ ಇನ್ನೊಂದು ಮಗ್ಗುಲಿನ ಪ್ರಾಮುಖ್ಯತೆಯನ್ನು ಪ್ರಚುರಪಡಿಸುತ್ತಾರೆ. ಈ ಅಧ್ಯಾಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಅವರ ಇಬ್ಬರು ವಿದ್ಯಾರ್ಥಿನಿಯರು ತಾವು ಕಂಡುಕೊಂಡ ವಿವರಗಳನ್ನು ತನ್ನ ಮಾರ್ಗದರ್ಶಕರಿಗೆ ವಿವರಿಸಿ ಚರ್ಚೆ ನಡೆಸುವ ಘಟನೆಗಳನ್ನು ಹೆಣೆದಿದ್ದಾರೆ. ಇದು ಹೊರಗಿನವರಿಗೆ ಅಚ್ಚರಿ ಎನಿಸಬಹುದಾದರೂ, ಸಂಶೋಧನಾ ರಂಗದಲ್ಲಿ ಸಾಧ್ಯವಾಗುವ ದ್ವಿಮುಖ ಕಲಿಕೆಯನ್ನು ಇದು ಸೂಚಿಸುತ್ತದೆ.

ಸಸ್ಯಗಳ ಮೇಲೆ ಈ ರೀತಿಯ ಅಧ್ಯಯನಗಳಿಂದ ಪ್ರಕೃತಿ ರಹಸ್ಯವನ್ನು ತಿಳಿದ ಖುಷಿ ಬಿಟ್ಟರೆ ನಮಗೇನು ಪ್ರಯೋಜನ ಎನ್ನುವ ಪ್ರಶ್ನೆ ಆಗ ನನ್ನಲ್ಲಿ ಮೂಡಿತ್ತು. ಈ ಪುಸ್ತಕವನ್ನು ಓದಿದ ಕೆಲವರಲ್ಲೂ ಇದೇ ಪ್ರಶ್ನೆ ಮೂಡುವ ಸಾಧ್ಯತೆ ಇದೆ. ಅದಕ್ಕೆ ಡಾ. ಗಣೇಶಯ್ಯನವರು ‘ಇದು ಮೂಲ ವಿಜ್ಞಾನ ಹಾಗೂ ಅದರ ಸಿದ್ಧಾಂತಗಳು ಬೆಳೆಯುವ ರೀತಿ. ಅದನ್ನು ಅನ್ವಯಿಕ ವಿಜ್ಞಾನಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಬೇರೆ ವಿಭಾಗದ ಅಗತ್ಯವೇ ಇದೆ” ಎಂದುತ್ತರಿಸಿದ್ದರು.

ವೈವಿಧ್ಯಕಾಂಡ’ ಅಧ್ಯಾಯದಲ್ಲಿ ಡಾ. ಗಣೇಶಯ್ಯ ಮತ್ತವರ ತಂಡ ಮಾಡಿದ ಇನ್ನೊಂದು ಗಮನಾರ್ಹ ಕೆಲಸದ ವಿವರವಿದೆ. ಭಾರತೀಯ ಸಸ್ಯಸಂಪತ್ತಿನ ಡಿಜಿಟಲೀಕರಣದ ಭಾಗವಾಗಿ ನಮ್ಮ ದೇಶದ ಪಶ್ಚಿಮಘಟ್ಟ, ಪೂರ್ವಬೆಟ್ಟ ಹಾಗೂ ಅಂಡಮಾನ್ ದ್ವೀಪಗಳ ಅಪಾರ ಸಸ್ಯಸಂಪತ್ತಿನ ಮೋಜಣಿ (ಎಲ್ಲೆಲ್ಲಿ ಏನಿದೆ/ ಎಷ್ಟಿದೆ) ಬಹಳ ಅಮೂಲ್ಯವಾದ ಮಾಹಿತಿ ನೀಡುವ ಕಾರ್ಯ. ಡಾ. ಗಣೇಶಯ್ಯನವರ ಪತ್ನಿ ಡಾ. ವೀಣಾರವರು ಕೈಗೊಂಡ ಸಂಶೋಧನಾ ವಿಷಯಗಳು- ಸೋಮನಾಥಪುರದ ದೇವಾಲಯದಲ್ಲಿರುವ ಮೂರ್ತಿಗಳ ಕೈಯಲ್ಲಿರುವ ಮುಸುಕಿನ ಜೋಳದಂತಹ ರಚನೆಯ ಹಿಂದಿನ ರಹಸ್ಯ, ಹಸುವಿನ ಮೂತ್ರವನ್ನು ಗೋಧಿ ಮೊಳಕೆ ಪರೀಕ್ಷೆಗೆ ಬಳಸಿ ಹಸು ಗರ್ಭ ಧರಿಸಿದೆಯೇ ಇಲ್ಲವೇ ಅಂತ ಕಂಡುಹಿಡಿಯುವುದು, ಆಹಾರ ಹುಡುಕುವಾಗ ಇರುವೆಗಳ ಚಲನೆಯ ರಹಸ್ಯ ಇತ್ಯಾದಿ ಅತ್ಯಂತ ಆಸಕ್ತಿಕರ ವಿಷಯಗಳೂ ಇಲ್ಲಿವೆ.

‘ಸಸ್ಯ ಸಗ್ಗ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ.ಉಮಾಶಂಕರ್ – ವೈಜ್ಞಾನಿಕ ಸಂಶೋಧನೆಯಲ್ಲಿ ಸರಿಯಾದ ಗೆಳೆಯರ/ಸಹಪಾಠಿಯ ಅಗತ್ಯವನ್ನು ಒತ್ತಿ ಹೇಳಿದ್ದರು. ಸಂಶೋಧನೆ ಬಹುಮುಖಿ ಹಾಗೂ ಫಲಪ್ರದವಾಗಿ ಸಾಗಬೇಕಾದರೆ ಅದಕ್ಕೆ ಸರಿಯಾದ ಸಾಥಿ ಇದ್ದರೆ ಬಹಳ ಒಳ್ಳೆಯದು ಎಂಬುದು ಅವರ ಮಾತಿನ ಇಂಗಿತ. ಇವರಿಬ್ಬರ ಸ್ನೇಹ ನಲವತ್ತು ವರ್ಷಗಳ ನಂತರ ಇಂದಿಗೂ ಬದಲಾಗಿಲ್ಲ. ಅದು ನಮಗೆಲ್ಲ ಕೌತುಕದ ವಿಷಯವೇ. ಬಹಳ ಸ್ಪರ್ಧಾತ್ಮಕ ವೈಜ್ಞಾನಿಕ ಸಂಶೋಧನಾ ರಂಗದಲ್ಲಿ ಎರಡು ವಿಭಿನ್ನ ವ್ಯಕ್ತಿತ್ವಗಳ ನಡುವೆ ಮನಸ್ತಾಪ ಬಂದು ಗೆಳೆತನ ಹಾಳಾಗುವುದನ್ನು ಯಾರಾದರೂ ನಿರೀಕ್ಷಿಸಬಹುದು. ಆದರೆ ಇವೆಲ್ಲದರ ನಡುವೆ ಎಂದೂ ಅಹಂ ಅಡ್ಡಿ ಬರದಂತೆ ಗೆಳೆತನವನ್ನು ಹೇಗೆ ನಿಭಾಯಿಸಬೇಕೆಂಬುದಕ್ಕೂ ಇವರಿಬ್ಬರು ನಿದರ್ಶನ.

ಅವರ ದೈನಂದಿನ ಕೆಲಸಗಳಲ್ಲಿ, ಸಂಶೋಧನಾ ಕೆಲಸಗಳಲ್ಲಿ ನನಗೆ ಗೊತ್ತಿರುವಂತೆ ಇನ್ನೂ ಹೆಚ್ಚಿನ ಹಾಸ್ಯ ಪ್ರಸಂಗಗಳಿತ್ತು. ಅವನ್ನು ಇಲ್ಲಿ ಸೇರಿಸಿದ್ದರೆ ಇನ್ನಷ್ಟು ಆಕರ್ಷಣೀಯವಾಗುತ್ತಿತ್ತು. ಅದರ ಬದಲಾಗಿ ಪಾತ್ರಗಳು ಜಿಜ್ಞಾಸೆ/ಚರ್ಚೆಯ ಮೂಲಕ ಓದುಗನ ಎದೆಯೊಳಗೆ ವಿಷಯವನ್ನು ತಲುಪಿಸುವ ಶೈಲಿಯನ್ನು ಅನುಸರಿಸಿದ್ದಾರೆ. ಹಾಗಂತ ಪರಿಣಾಮದಲ್ಲಿ ಇದೇನು ಕೊರತೆಯೆನಿಸುವುದಿಲ್ಲ. ಜೊತೆಗೆ ಸಸ್ಯಗಳಲ್ಲಿರುವ ಪರಾಗಸ್ಪರ್ಶದ ವಿಧಗಳು - ಸ್ವಕೀಯ, ಪರಕೀಯ(ಗಾಳಿ, ಕೀಟ, ಪ್ರಾಣಿಗಳ ಮೂಲಕ) ಹಾಗೂ ವಿವಿಧ ಬೀಜ ಪ್ರಸಾರದ ವಿಧಗಳನ್ನು (ಸಿಡಿಯುವ ಮೂಲಕ, ಗಾಳಿ, ಪ್ರಾಣಿ, ಕೀಟಗಳ ಮೂಲಕ) ಅವರ ತಂಡ ವಿಸ್ತೃತ, ವೈವಿಧ್ಯಮಯ ಅಧ್ಯಯನ, ಅಧ್ಯಾಪನ ಮಾಡಿದೆ. ಅದರ ಬಗ್ಗೆಯೂ ವಿಶಿಷ್ಟ ಉದಾಹರಣೆಗಳ ಮೂಲಕ ಒಂದೆರಡು ಪುಟಗಳ ವಿವರ ಇದ್ದಿದ್ದರೆ ಬಹಳ ರಂಜನೀಯವಾಗುತ್ತಿತ್ತು.

ಹಸುರು ಹೊನ್ನು ಮತ್ತು ಸಸ್ಯ ಸಗ್ಗ

ಪುಸ್ತಕದ ಬೆನ್ನುಡಿಯಲ್ಲಿ ‘ಸಂಶೋಧನೆಯ ವಿವಿಧ ಆಯಾಮಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು ಹಸಿರು ಹೊನ್ನನ್ನು ತಂದುಕೊಟ್ಟಿದೆ” ಎಂದು ಪ್ರಕಾಶಕರು ಅಭಿಪ್ರಾಯಪಟ್ಟಿದ್ದಾರೆ. ಹಸುರು ಹೊನ್ನು – ಎಲ್ಲರಿಗೂ ಗೊತ್ತಿರುವಂತೆ ಪ್ರೊ. ಬಿ.ಜಿ.ಎಲ್. ಸ್ವಾಮಿಯವರ ಅನನ್ಯ ಕೃತಿ. ಸಸ್ಯ ಪರಿಚಯ ಹಾಗೂ ಸಸ್ಯ ಶಾಸ್ತ್ರದ ವಿಷಯಗಳನ್ನು ತಿಳಿಹಾಸ್ಯದ ಮೂಲಕ ನಿರೂಪಿಸುವ, ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಕೃತಿ ೧೯೭೬ರಷ್ಟು ಮೊದಲು ಬರೆದದ್ದು. ‘ಸಸ್ಯ ಸಗ್ಗ’ ಇದಕ್ಕಿಂತ ವಿಭಿನ್ನವಾದ ಕೃತಿ. ಸಾಮಾನ್ಯರಿಗೆ ಅರಿವಿರದ ಸುತ್ತಮುತ್ತಲಿನ ಸಸ್ಯಗಳ ವಿಶಿಷ್ಟ ವಂಶಾಭಿವೃದ್ಧಿಯ ತಂತ್ರ ಹಾಗೂ ಅನನ್ಯ ವರ್ತನೆಗಳನ್ನು ವಿಕಾಸವಾದದ ಹಿನ್ನೆಲೆಯಲ್ಲಿ ಲೇಖಕರೇ ಮಾಡಿದ ಸಂಶೋಧನೆಗಳ ಮೂಲಕ ವಿವರಿಸುವುದು ಇಲ್ಲಿನ ಮುಖ್ಯ ಉದ್ದೇಶ. ಭಿನ್ನ ವಿಷಯಗಳಿರುವ ಇವೆರಡು ಸಸ್ಯ ಸಂಬಂಧೀ ಕೃತಿಗಳನ್ನು ಹೋಲಿಸುವುದು ಅಷ್ಟು ಸಮಂಜಸವಾ ಎಂಬ ಪ್ರಶ್ನೆ ನನ್ನನ್ನು ಕಾಡಿತು. ನನಗನ್ನಿಸುವಂತೆ ಎರಡನ್ನೂ ಪ್ರತ್ಯೇಕವಾಗಿ ಆಸ್ವಾದಿಸುವುದಕ್ಕೆ ಯಾವ ತೊಂದರೆಯೂ ಇಲ್ಲ. ಇವೆರಡೂ ತಮ್ಮ ತಮ್ಮ ನೆಲೆಯಲ್ಲಿ ವಿಶಿಷ್ಟ ಕೃತಿಗಳೇ.

ಪುಸ್ತಕದಲ್ಲಿ, ವಿಜ್ಞಾನಿಗಳು ವೃತ್ತಿ ಬದುಕಿನಲ್ಲಿ ಮೇಲೇರುತ್ತಾ ಹೋದಂತೆ ತಮ್ಮ ಮೂಲ ವೈಜ್ಞಾನಿಕ ಆಸಕ್ತಿಯಿಂದ ವಿಷಯದಿಂದ ದೂರ ಸರಿದು ಎದುರಿಸಬೇಕಾದ ಸ್ಥಿತಿಗಳನ್ನು ಹಾಗೂ ಅವುಗಳಿಂದ ತಪ್ಪಿಸಿಕೊಳ್ಳುವ ವಿಧಾನಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ಸಹಾಯ ಎಲ್ಲಿಂದಲಾದರೂ ಬರುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳಿಲ್ಲಿವೆ. ‘ಎಲ್ಲರೂ ನೋಡುವುದನ್ನೇ ವಿಜ್ಞಾನಿ/ಸಂಶೋಧಕನೂ ನೋಡುತ್ತಾನೆ. ಅದರೆ ಅವನಿಗೆ ಹೊಳೆಯುವುದೇ ಬೇರೆ’ ಎಂಬ ಮಾತಿನ ಸಾಕಾರ ಇಲ್ಲಿ ಆಗುತ್ತದೆ. ಜೀವನ ಬೇರೆಯಲ್ಲ, ವೃತ್ತಿ ಬೇರೆಯಲ್ಲ ಎನ್ನುವುದಕ್ಕೆ ಇಲ್ಲಿ ಹಲವು ಉದಾಹರಣೆಗಳಿವೆ. ಈ ಪುಸ್ತಕ ಇಂಗ್ಲೀಷಿಗೂ ಭಾಷಾಂತರವಾದರೆ ಭಾರತ/ವಿಶ್ವದ ಹಲವಾರು ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಪ್ರೇರಕವಾಗಬಲ್ಲ ಶಕ್ತಿ ಹೊಂದಿದೆ.
ವಿಜ್ಞಾನ ಅದರಲ್ಲೂ ಸಸ್ಯ ವಿಜ್ಞಾನದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಶೋಧಕರು ಓದಲೇಬೇಕಾದ ಪುಸ್ತಕ ಇದು. ಫೇಸ್ಬುಕ್, ವಾಟ್ಸಪ್ಪಿನ ಬೆರಳುಗಳಾಟದಲ್ಲಿ ಕಳೆದುಹೋಗಿರುವ ಯುವಪೀಳಿಗೆ ಇದನ್ನು ಓದಿದರೆ ವಿಜ್ಞಾನದಲ್ಲಿ ಆಸಕ್ತಿ ಮೂಡೀತು. ಸಂಶೋಧನಾ ರಂಗದಲ್ಲಿರಬೇಕಾದ ತೀವ್ರತೆ, ಸಾಗಬೇಕಾದ ದಾರಿ ಎಲ್ಲವೂ ನಿಚ್ಚಳವಾದೀತು.

ಕನ್ನಡಿಗರು ತಪ್ಪಿಸಿಕೊಳ್ಳಬಾರದ, ತಪ್ಪಿಸಿಕೊಳ್ಳಲಾಗದ ಹೊತ್ತಿಗೆ ಇದು !!

ಯುವ ವಿಜ್ಞಾನಿಗಳಿಗೆ ಪ್ರೇರಣಾದಾಯಕ ಸಾಧನೆ

ಡಾ, ಗಣೇಶಯ್ಯನವರು ಕಾದಂಬರಿಕಾರರಷ್ಟೇ ಅಲ್ಲ. ಅವರ ಮಿತ್ರ ಡಾ. ಉಮಾಶಂಕರ್ ಅವರೊಡಗೂಡಿ ೨೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರಿಬ್ಬರೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಸಂರಕ್ಷಣೆಗಾಗಿ ಪ್ರತ್ಯೇಕ ವಿಭಾಗವನ್ನು ಕಟ್ಟಿದ್ದಾರೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ನಲವತ್ತು ವರ್ಷಗಳಿಂದ ಇಂದಿಗೂ ವಾರಕ್ಕೊಮ್ಮೆ ನಡೆಸುತ್ತಿರುವ ಫ್ರೈಡೇ ಗ್ರೂಪ್ ಎಂಬ ವಿಜ್ಞಾನ ವಿಷಯ ಕುರಿತಾದ ಚರ್ಚಾಕೂಟದ ವ್ಯವಸ್ಥೆ, ವಿಶ್ವವಿದ್ಯಾಲಯಕ್ಕೆ ಪ್ರಾಜೆಕ್ಟ್ ಗಳ ಮೂಲಕ ಹಲವು ಕೋಟಿಗಳ ಅನುದಾನ, ಹಲವು ದೇಶಗಳಿಗೆ ಪ್ರಬಂಧ ಮಂಡನೆಗೆ, ವಿಷಯತಜ್ಞರಾಗಿ ಓಡಾಟ, ಅಂತಾರಾಷ್ಟ್ರೀಯ ಮಟ್ಟದ ಏಟ್ರಿ ಎಂಬ ಪರಿಸರ ಸಂಶೋಧನಾ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದು – ಇವೆಲ್ಲಾ ಸಾಧನೆಗಳು ಯುವ ವಿಜ್ಞಾನಿಗಳಿಗೆ ನಿಸ್ಸಂಶಯವಾಗಿ ಉತ್ತೇಜನಕಾರಿ.

-ಮೋಹನ್ ತಲಕಾಲುಕೊಪ್ಪ

ಕೃಪೆ: ಪ್ರಜಾವಾಣಿ (2020 ಜನವರಿ 23)

...........................................................................................................................................................................................

ಸಸ್ಯಲೋಕದ ರಹಸ್ಯಗಳ ಅನಾವರಣ 

ನಮಗೆಲ್ಲಾ ಪ್ರಾಣಿ ಜಗತ್ತು ಹೆಚ್ಚು ಗೊತ್ತು.(ಹಾಗೆಂದು ಅಂದುಕೊಂಡಿದ್ದೇವೆ). ಕಾರಣ ಅವುಗಳೊಂದಿಗಿನ ನಿರಂತರ ಒಡನಾಟ ಅಥವಾ ನಾವೂ ಪ್ರಾಣಿಗಳೇ ಆಗಿರುವುದು ಸಹಾ ಆಗಿರಬಹುದು. ಆದರೆ ಯಾವುದೇ ಕಾಡಿನ ಮರಗಳನ್ನು ನೋಡಿದರೆ ನಮಗನಿಸುವುದು ಇದನ್ನು ಕಡಿದರೆ ಎಷ್ಟು ಡೈನಿಂಗ್‌ಟೇಬಲ್, ಕುರ್ಚಿಗಳು ಆಗುತ್ತವೆ. ರೀಪು ಪಕಾಸಿಗಳು ಆಗಬಹುದು. ಕಂಬ ಹಲಗೆಗಳು ಆಗುತ್ತವೆ ಎಂದೇ ಆಲೋಚಿಸುತ್ತೇವೆ. ಅಂದರೆ ಅವುಗಳಲ್ಲಿ ಜೀವವಿದೆ ಎನ್ನುವುದನ್ನೇ ಮರೆತು ಹಣದ ಲೆಕ್ಕಾಚಾರ ಮಾಡುತ್ತೇವೆ. ಅವು ಚಲಿಸದಿದ್ದರೂ ತಮ್ಮಲ್ಲಿ ಅನೇಕ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿವೆ ಎನ್ನುವುದನ್ನು ಅನೇಕ ವಿದೇಶೀ ಸಂಶೋಧಕರು ನೂರಾರು ಪುಸ್ತಕಗಳನ್ನು ಬರೆಯುತ್ತಲೇ ಬಂದಿದ್ದಾರೆ. ಅವುಗಳ ಕುರಿತು ಸಾಕಷ್ಟು ಡಾಕ್ಯುಮೆಂಟರಿ ಫಿಲ್ಮಂಗಳು ಬಂದಿವೆ. ಆದರೆ ಕನ್ನಡದಲ್ಲಿ ಬಂದಿರುವುದು ಕಡಿಮೆ. ಅದರಲ್ಲೂ ಅವುಗಳ ರಹಸ್ಯಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ, ಅದರೊಂದಿಗೆ ತಮ್ಮದೇ ಬದುಕಿನ ಪುಟಗಳನ್ನು ಅನಾವರಣಗೊಳಿಸುತ್ತಾ ಬರೆದವರು ಇನ್ನೂ ಕಡಿಮೆ. ಅವುಗಳ ಸಾಲಿಗೆ ಅಂದರೆ ಸಸ್ಯಗಳ ಕುರಿತಾದ ಸಂಶೋಧನೆಗಳನ್ನು ಹೇಳುತ್ತಾ ಬಯಾಗ್ರಫಿ ಬರೆದ ಡಾ. ಕೆ. ಎನ್. ಗಣೇಶಯ್ಯನವರ ಈ ರೀತಿ ಎಲ್ಲಾ ರೀತಿಯ ಓದುಗರಿಗೆ ಆಪ್ತವಾಗುವುದರಲ್ಲಿ ಸಂಶಯವಿಲ್ಲ, ವಾಸ್ತವದಲ್ಲಿ ಯಾವ ವಿಜ್ಞಾನಿಗಳೂ ತಮ್ಮ ಸಂಶೋಧನೆ ಗಳನ್ನು ನುಡಿಚಿತ್ರದ ಮಾದರಿಯಲ್ಲಿ ಬರೆಯುವುದಿಲ್ಲ. ಅದನ್ನು ಪ್ರಸ್ತುತ ಪಡಿಸುವಾಗ ಸ್ವಲ್ಪ ಹಾಸ್ಯ ಬೆರೆಸಿ, ಸ್ವಲ್ಪ ಕರುಣೆ, ರೋಚಕತೆ ಇವುಗಳನ್ನೆಲ್ಲಾ ಸೇರಿಸಿ ಹೇಳಬಹುದು. ಕಾರಣ ಅದು ಬರೀ ಭಾಷಣವಾದರೆ 10-15 ನಿಮಿಷಗಳ ಬಳಿಕ ಬೋರ್ ಆಗಿ ಯಾವುದೂ ಮನದಲ್ಲಿ ಉಳಿಯದೇ ಹೋಗಬಹುದು ಎನ್ನುವ ಕಾರಣಕ್ಕೆ ಅಥವಾ ನೀರಸ ವ್ಯಾಖ್ಯಾನದಿಂದಾಗಿ ಪ್ರಸ್ತುತ ಪಡಿಸಿದ ಸಂಗತಿಗೆ ಪ್ರಾಧಾನ್ಯ ದೊರಕದೇ ಹೋದರೆ ಎನ್ನುವ ಭಯಕ್ಕೆ ಅಥವಾ ಹೆಚ್ಚು ಚರ್ಚೆ ಆಗದೇ ಉಳಿದರೆ ವಿಷಯಕ್ಕೆ ಹಿನ್ನಡೆ ಉಂಟಾಗಿ ಕಣ್ಮರೆಯಾದರೆ ಎನ್ನುವ ಆತಂಕಕ್ಕೆ ತಮ್ಮ ಸಂಶೋಧನಾ ಸಮಯದಲ್ಲಿ ಆದ ಘಟನೆಗಳನ್ನು ಹೇಳುತ್ತಾರೆ. ಯಾರೂ ಬರೆಯದ ಕಾರಣ ವಿಷಯಗಳು ಜನಸಾಮಾನ್ಯರ ಮಟ್ಟಕ್ಕೆ ಇಳಿಯುವುದೇ ಇಲ್ಲ. ಇದೆಲ್ಲಕ್ಕಿಂತ ಹೊರತು ಡಾ. ಕೆ.ಎನ್. ಗಣೇಶಯ್ಯನವರ ಬರೆಹಗಳು. ವಿಷಯಗಳು ಸಾಮಾನ್ಯರನ್ನು ತಲುಪಬೇಕೆಂಬ ಉದ್ದೇಶದಿಂದಲೇ ಬರೆದಂತೆ ಇರುತ್ತವೆ. ಆದರೆ ಅದರಲ್ಲಿ ಅವರ ಅಥವಾ ಅವರ ಜೊತೆಗಾರರ ಸಂಶೋಧನೆಗಳು ಮಿಳಿತವಾಗಿರುತ್ತವೆ. ಕಲ್ಪನೆಗಳು, ಸಂಭಾಷಣೆಗಳು, ಕಥಾ ನಿರೂಪಣಾ ಶೈಲಿ, ವಸ್ತುವಿನ ಪ್ರಸ್ತಾವನೆ ಹಾಗೂ ಅದನ್ನು ಇಡುವ ಆವರಣ ಎಲ್ಲವನ್ನು ಯೋಚಿಸಿ ಬರೆದಂತೆ ಅನಿಸುತ್ತದೆ, ಅಂದರೆ ನೇರವಾಗಿ ಪ್ರಜ್ಞಾಪೂರ್ವ ಬರೆಹ ಎನ್ನಬಹುದು. ಹೀಗೆ ಜನಪ್ರಿಯ ಕಾದಂಬರಿಗಳನ್ನು ಬರೆದ ಮೇಲೆ ಅವರು ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದು, ಅವುಗಳನ್ನು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದು. ಹೀಗೆ ಅವರೂ ಅದರೊಂದಿಗೆ ಜನಪ್ರಿಯರಾಗಿದ್ದು,

ವಿಷಯ ಪ್ರವೇಶಿಕೆ ಎನ್ನುವುದು ಯಾವಾಗಲೂ ಒಂದು ರೋಚಕ ಘಟನೆಯಿಂದ ಪ್ರಾರಂಭವಾದರೆ ಅದು ಓದುಗರನ್ನು ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ತಿಳಿದ ಮೇಲೆ ಅದರಿಂದ ಹೊರಬರಲು ಆ ಬರೆಹಗಾರನಿಗೆ ಎಂದಿಗೂ ಸಾಧ್ಯವಾಗುವುದೇ ಇಲ್ಲ. ಅದರಲ್ಲೂ ಮಾನವರ ವರ್ತನೆಯ ಕುರಿತಾದ ಪ್ರಾರಂಭ ಅಥವಾ ಘಟನೆಗಳ ಉಲ್ಲೇಖ ಸಸ್ಯ ಸಗ್ಗದ ತುಂಬಾ ಕಾಣಬಹುದು. ಅಥವಾ ಸಂಶೋಧನಾ ಪ್ರಬಂಧಗಳ ಏಕತಾನತೆಯನ್ನು ಮುರಿಯಲು ಹೀಗೆ ಬರೆದಿರಲೂಬಹುದು. ಜೀವಂತ ವ್ಯಕ್ತಿಗಳೇ ಇಲ್ಲಿ ಪಾತ್ರಗಳಾಗಿ ಮಾತನಾಡುತ್ತಾರೆ. ಚರ್ಚಿಸುತ್ತಾರೆ. ವಾದಿಸುತ್ತಾರೆ. ತಮ್ಮ ಸಂಶೋಧನೆಗಳನ್ನು ವರ್ಣಿಸುತ್ತಾರೆ. ಹೀಗಾಗಿ ಅವೆಲ್ಲಾ ಇನ್ನಷ್ಟು ಕುತೂಹಲ ಮೂಡಿಸುತ್ತವೆ. ಕೆಲವೊಮ್ಮೆ ಗೊಂದಲವನ್ನೂ ಉಂಟು ಮಾಡುತ್ತವೆ. ಉದಾಹರಣೆಗೆ; ಆಲ, ಅಶ್ವತ್ಥ ಮತ್ತು ಅರಳಿಯ ಕುರಿತಾಗಿ ಹೇಳುತ್ತಾ ಅಶ್ವತ್ಥವನ್ನು ಕೈಗೆತ್ತಿಕೊಳ್ಳುತ್ತಾರೆ. (ಮಲೆನಾಡಿನ ಹಳ್ಳಿಗಳಲ್ಲಿ ಅಶ್ವತ್ಥವನ್ನೇ ಅರಳಿ ಎನ್ನುತ್ತಾರೆ, ಅತ್ತಿಯನ್ನು

ಔದುಂಬರ ಎನ್ನುತ್ತಾರೆ). ಬಳಿಕ ಅತ್ತಿಯ ಹಣ್ಣಿನ ಕಥೆಯನ್ನು ತಮ್ಮ ವಿದ್ಯಾರ್ಥಿನಿಯ ಬಾಯಲ್ಲಿ ಹೇಳಿಸುತ್ತಾರೆ. ಇಲ್ಲಿ ಅಶ್ವತ್ಥ ಹಾಗೂ ಅತ್ತಿ ಒಂದೇಯಾ? ಇವೆರಡರ ಕುಟುಂಬ ಒಂದೇ ಆದರೂ ಅಲ್ಲಿ ನಡೆಯುವ ಕ್ರಿಯೆಗಳು, ಕ್ರಿಯಾಗಾರರೂ ಬೇರೆಯೇ ಆಗಿರುವುದರಿಂದ ಅನ್ವಯ ಮಾಡಿಕೊಳ್ಳುವಲ್ಲಿ ಗೊಂದಲ ಉಂಟಾಗುತ್ತದೆ. ಸಸ್ಯಗಳಲ್ಲಿ ಸಹೋದರ ದ್ವೇಷ, ತಾಯಿ ಮಕ್ಕಳ ಕಲಹ ಮತ್ತು ಸ್ವಯಂವರ ಸಸ್ಯ ಜಗತ್ತಿನ ಪದ್ಧತಿ ಹಾಗೂ ಶೀಲ ಪಟ್ಟಿಗಳ ಕುರಿತಾದ ಬರೆಹವು ಸಂಶೋಧನೆ, ಸಂವಾದ ಮತ್ತು ಸಂವೇದನೆಗಳ ಪ್ರತಿಫಲ, ಜೊತೆಗೆ ಲೇಖಕರ ವಿಭಿನ್ನ ಜಗತ್ತು, ಅವರಿಗೆ ಸಿಕ್ಕ ಸಹಪಾಠಿಗಳು, ಆ ಮೂಲಕ ಅವರು ಬೆಳೆಯುತ್ತಾ ಹೋದ ಪರಿ ಪ್ರತಿಯೊಂದೂ ವಿದ್ಯಾರ್ಥಿಗಳಿಗೂ ಮಾದರಿ. ಎಷ್ಟೋ ಜನರಿಗೆ ಸರಿಯಾದ ಸಂವಾದಿಗಳೇ ಸಿಗದೆ ಅವರ ಸಂಶೋಧನೆಗಳು ಏಕಮುಖವಾಗಿ ಸ್ವಲ್ಪ ದೂರ ಹರಿದು ಬತ್ತಿಹೋಗುತ್ತವೆ. ಅಥವಾ ಸಿಕ್ಕ ಸಂವಾದಿಗಳೇ ಅಸೂಯೆಯಿಂದ ಶೀಷ ಮರದ ಹಿರಿಯ ಬೀಜ ಉಳಿದ ತಮ್ಮಂದಿರನ್ನು ಕೊಲೆ ಮಾಡುವಂತೆ ಅಮುಕಿ ಬಿಡುವುದೂ ಉಂಟು. ಹಿರಿಯ ಸಂಶೋಧಕರ ಬೀರುವಿನಲ್ಲೇ ಉಳಿದ ರಾಸಾಯನಿಕಗಳಂತೆ ಹರಡದೇ ಕಣ್ಮರೆಯಾಗುವುದನ್ನೂ ನೋಡಬಹುದು. ಶೀಲ ಪಟ್ಟಿ ಕಟ್ಟಿಸಿಕೊಂಡಂತೆ ಬಂದಿಯಾಗಿ ಉಳಿದೂ ಹೋಗಿರಬಹುದು.

ಇಂತಹಾ ಎಲ್ಲಾ ಮಾನವಾಸಕ್ತ ವಿಚಾರಗಳೊಂದಿಗೆ ಸಸ್ಯಲೋಕದ ರೋಚಕಗಳನ್ನು ಹದವಾಗಿ ಬೆರೆಸಿ ನೀಡಲು ಸಾಧ್ಯವಾಗುವುದು ಹೊರಜಗತ್ತಿಗೆ ತನ್ನನ್ನು ತೆರೆದುಕೊಂಡ ವಿಜ್ಞಾನಿಗೆ ಮಾತ್ರ. ಅವರ ಚಾರಣ, ಪ್ರವಾಸ, ಫ್ರೈಡೇ ಗ್ರೂಪ್, ಚರ್ಚಾ ವೇದಿಕೆಯ ಚಟುವಟಿಕೆಗಳೆಲ್ಲಾ ಕೆಲವೊಮ್ಮೆ ಪಾತ್ರಗಳಾಗಿ, ಸಾಕ್ಷಿಗಳಾಗಿ, ಕೊನೆಗೆ ಪ್ರೇಮಿಗಳ ಲೋಕವೂ ಆಗಿ ಬದಲಾಗುತ್ತದೆ. ಇದು ಇಡೀ ಬರೆಹಗಳಿಗೆ ಬೇರೊಂದು ಆಯಾಮವನ್ನೂ ಕೊಡುವುದರ ಮೂಲಕ ಓದುಗರಿಗೆ ಸಂಶೋಧನೆಯ ಭಾರ ಅರಿವಾಗದಂತೆ ಮಾಡಿ ಅವರೊಳಗೆ ಲೀನಗೊಳ್ಳಲು ಸಹಕಾರಿಯಾಗುತ್ತದೆ. ಕೆಲವೊಮ್ಮೆ ಪುನರಾವರ್ತನೆ ಸ್ವಲ್ಪ ಕಿರಿಕಿರಿಯನ್ನು ಉಂಟು ಮಾಡಿದರೂ ಅದೂ ಸಹಾ ಲೇಖಕರ ಬದುಕೇ ಆಗಿರುವುದರಿಂದ ಒಪ್ಪಿಕೊಳ್ಳಬಹುದು. 

ಇರುವೆಗಳ ಲೋಕ ಇನ್ನೊಂದು ಕುತೂಹಲಕರ ಜಗತ್ತಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅವುಗಳ ಆಹಾರ ಕ್ರಮ, ಲೆಕ್ಕಾಚಾರದ ಬದುಕು, ಸಸ್ಯಗಳೊಂದಿಗಿನ ಸಹ ಜೀವನ, ಅಬ್ಬಾ..... ಪುಟ್ಟ ಕೀಟವೊಂದರ ಅದ್ಭುತ ಪ್ರಪಂಚ. ಅವುಗಳ ರಾಗದ್ವೇಷ, ಹೋರಾಟ, ಮಿತವ್ಯಯ ಹೀಗೆ ಸೂಕ್ತ ವಾದ ವೈವಿಧ್ಯಮಯವಾದ ವಿಚಾರಧಾರೆ ಇಲ್ಲಿಯದು. 'ಶ್ರದ್ದಾವಂತ ವಿಜ್ಞಾನಿಗೆ ಎಂದೂ ಸಂಶೋಧನೆಗೆ ಬೇಕಾದ ವಸ್ತುವಿನ ಬಡತನ ಬರುವುದಿಲ್ಲ, ಅದು ಕುತೂಹಲಗಳ ವಿಶ್ವಗರ್ಭ, - ಒಂದು ಪ್ರಶ್ನೆಗೆ ಸಿಕ್ಕ ಉತ್ತರ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅದನ್ನು ಗುರುತಿಸುವ ಕಿವಿ ಮತ್ತು ಕಣ್ಣುಗಳು ಬೇಕಷ್ಟೆ' ಎಂಬ ಮಾತು ಕೇವಲ ಜೀವಜಗತ್ತಿಗೆ ಮಾತ್ರ ಸೀಮಿತವಲ್ಲ, ಬದುಕಿಗೇ ಅನ್ವಯ.

ಅಶ್ವತ್ಥಾವತಾರದ ವಿಶ್ವವ್ಯಾಪ್ತಿ; ಇಲ್ಲಿ ಪ್ರಾರ್ಥನಾರವರ ಸಂಶೋಧನೆಯನ್ನು ಮಂಜುಳ ಪೂರ್ಣಗೊಳಿಸಿ ಅತ್ತಿಮರದ ಕುರಿತಾದ ಪುರಾತನ ನಂಬಿಕೆಯೊಂದನ್ನು ಬುಡಮೇಲು ಮಾಡುವ ಪರಿ ಅನನ್ಯ. ಅಂದರೆ ನಮ್ಮ ಸಂಶೋಧಕರ ಜ್ಞಾನ ಮತ್ತು ಸಂಶೋಧನಾಲಯಗಳು ಯಾವುದೇ ದೇಶಕ್ಕಿಂತಲೂ ಕಡಿಮೆಯದಲ್ಲ ಎನ್ನುವುದರ ಪರೋಕ್ಷ ಪ್ರತಿಪಾದನೆಯನ್ನೂ ಇಲ್ಲಿ ಕಾಣಬಹುದು. ಕೀಟ ಆಟಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ, ಯಾವುದೇ ಸಿದ್ಧಾಂತಗಳಿಗೆ ನಮ್ಮದೇ ದೇಶದ ಉದಾಹರಣೆಗಳನ್ನು ನೀಡಲು ಪ್ರೇರೇಪಿಸುತ್ತದೆ. ಇಲ್ಲಿಯವರೆಗಿನ ಬರಹಗಳದೇ ಒಂದು ಆಯಾಮವಾದರೆ ಇವುಗಳದ್ದು ಮತ್ತೊಂದು ಆಯಾಮ. ವೃತ್ತಿ ಬೇರೆ, ಜೀವನ ಬೇರೆ ಎನ್ನುವ ಭೇದ ಇದ್ದಾಗ ಸಂಶೋಧನೆಗಳಿಗೆ ಜೀವ ಬರುವುದಿಲ್ಲ ಅಥವಾ ವೃತ್ತಿ ಸಂತೋಷ ನೀಡುವುದಿಲ್ಲ ಎನ್ನುವ ಸಂದೇಶವನ್ನು ನೀಡುವ ಘಟನೆಗಳನ್ನು ಹೇಳುತ್ತಾ, ಸ್ಥಳೀಯ ಉದಾಹರಣೆಗಳೇ ಆಪ್ತವಾಗುತ್ತವೆ ಎನ್ನುವುದನ್ನು ತಿಳಿಸುತ್ತಾರೆ.

ಇಲ್ಲಿರುವ ಎಲ್ಲಾ ಅಧ್ಯಾಯಗಳೂ ಲೇಖಕರ, ಅವರ ಪತ್ನಿ, ಗೆಳೆಯ ಹಾಗೂ ವಿದ್ಯಾರ್ಥಿಗಳ ಸಂಶೋಧನೆಗಳ ಹೂರಣ. ಬರೀ ಹೂರಣವಾಗಿದ್ದರೆ ಅದು ಹಳಸಿಹೋಗುತ್ತಿತ್ತೇನೋ. ಅದನ್ನು ಹಿಟ್ಟಿನಲ್ಲಿ ತುಂಬಿ, ಗುಂಡಗೆ ಲಟ್ಟಿಸಿ, ಹದವಾಗಿ ಬೇಯಿಸಿ ಹೋಳಿಗೆ ಮಾಡಿ ಬಡಿಸಿದ್ದಾರೆ. ಹೀಗಾಗಿ ಇಡೀ ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಗಡದ್ದಾಗಿ ಸಿಹಿ ಊಟ ಮಾಡಿದಂತೆ ಅನಿಸುತ್ತದೆ. ಇಲ್ಲಿರುವ ಪ್ರತಿಯೊಂದು ವಿಷಯವೂ ನೆನಪಾಗಿ ಉಳಿದು ನಾವು ಇರುವೆಗಳನ್ನು, ಅತ್ತಿಮರವನ್ನು, ಶೀಷೆ ಮರಗಳನ್ನು ಹಾಗೂ ಎಲ್ಲೋ ಒಮ್ಮೆ ದೇವಸ್ಥಾನಕ್ಕೆ ಹೋದರೆ ಅಲ್ಲಿರುವ ದೇವತೆಗಳು ಕೈಯಲ್ಲಿ ಹಿಡಿದ ಯಾವುದೋ ವಸ್ತುವನ್ನೂ ಸಹಾ ಪರ್ಯಾಯ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತದೆ. ಪುಸ್ತಕದ ಸಾರ್ಥಕತೆ ಎಂದರೆ ಇದೇ; ನಾನೂ ವಿಜ್ಞಾನಿಯಾಗಬಹುದು ಎಂಬ ಆತ್ಮವಿಶ್ವಾಸ ಮೂಡಿಸುತ್ತದೆ. ತೊಡಕುಗಳ ಮಧ್ಯೆಯೂ ಪ್ರಾಮಾಣಿಕ ಪ್ರಯತ್ನವಿದ್ದರೆ ಎಲ್ಲೋ ಯಾರಿಂದಲೋ ಸಹಾಯ ಸಿಗುತ್ತದೆ ಎನ್ನುವ ಆಶಾವಾದ ಉಂಟುಮಾಡುತ್ತದೆ. ಸ್ನೇಹದ ಆಯಾಮದ ವಿಶಾಲತೆಯನ್ನು ಪರಿಚಯಿಸುತ್ತದೆ. ಚರ್ಚೆಯ ಫಲಶೃತಿಯನ್ನು ಎದುರಲ್ಲಿ ಇಡುತ್ತದೆ.

ಸಂಶೋಧನೆಗಳ ಮಹತ್ವವನ್ನು ಮನಗಾಣಿಸುತ್ತದೆ. ಸಹಜೀವನದ ಅಗತ್ಯವನ್ನು ತಿಳಿಸುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಸಸ್ಯ ಜಗತ್ತೂ ಸಹಾ ನಮ್ಮ ಜಗತ್ತಿನಂತೇ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸಲ್ಯಗಳೆಂಬ ಅರಿಷಡ್ವರ್ಗಗಳಿಂದ ತುಂಬಿದೆ ಎನ್ನುವ ಸತ್ಯವನ್ನು ಘಂಟಾಘೋಷದೊಂದಿಗೆ ಸಾರುತ್ತದೆ. ಕೃತಿಯ ಮುಖಪುಟ ಮತ್ತು ಒಳಗಿನ ರೇಖಾಚಿತ್ರಗಳು ಪುಸ್ತಕಕ್ಕೆ ಪೂರಕವಾಗಿರುವು ದಷ್ಟೇ ಅಲ್ಲ, ವಿಶಿಷ್ಟ ಸೊಬಗನ್ನು ನೀಡಿವೆ.

- ಪೂರ್ಣಪ್ರಜ್ಞ ಬೇಳೂರು
ಕೃಪೆ: ಹೊಸದಿಗಂತ (2020 ಜನವರಿ 05)

Related Books