ಸೀತಾ ರಾಮಾಯಣದ ಸಚಿತ್ರ ಮರುಕಥನ

Author : ಪದ್ಮರಾಜ ದಂಡಾವತಿ

Pages 374

₹ 700.00




Year of Publication: 2020
Published by: ಮನೋಹರ ಗ್ರಂಥಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: +91 9845447002 / 0836-2441822

Synopsys

‘ಸೀತಾ ರಾಮಾಯಣದ ಸಚಿತ್ರ ಮರುಕಥನ’ ದೇವದತ್ ಪಟ್ನಾಯಕ್ ಅವರ ಇಂಗ್ಲಿಷ್ ಕೃತಿಯ ಕನ್ನಡಾನುವಾದ. ಲೇಖಕ ಪದ್ಮರಾಜ ದಂಡಾವತಿ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ದೇವದತ್ ಪಟ್ನಾಯಕ್ ಭಾರತದ ಪ್ರಮುಖ ಪುರಾಣಶಾಸ್ತ್ರಜ್ಞರಲ್ಲೊಬ್ಬರು. ಪೌರಾಣಿಕ ಕತೆಗಳ ಮೂಲ ಹುಡುಕುತ್ತಾ ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ದೇವದತ್ , ಈ ಕೃತಿಯಲ್ಲಿ ಸೀತೆಯ ಕಣ್ಣುಗಳಲ್ಲಿ ಇಡೀ ರಾಮಾಯಣವನ್ನು ಮರುಚಿತ್ರಿಸಿದ್ದಾರೆ. 

About the Author

ಪದ್ಮರಾಜ ದಂಡಾವತಿ
(30 August 1955)

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು.  ಕೃತಿಗಳು:  ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...

READ MORE

Conversation

Awards & Recognitions

Reviews

ಸೀತೆಯೊಂದಿಗೆ ರಾಮನನ್ನು ಕಾಣಿಸುವ ಆದ್ರ-ಆಪ್ತ ಚಿತ್ರಣ: ಪ್ರಜಾವಾಣಿ

ದೇವದತ್ತ ಪಟ್ಟನಾಯಕರ ಸೀತಾ-ಸಚಿತ್ರ ಮರುಕಥನ: ವಾರ್ತಾಭಾರತಿ

ರಾಮಾಯಣದ ಗಂಡಿನ ಓದನ್ನು ಗಂಡೇ ಮುರಿವ ಮಹತ್ವದ ಪ್ರಯತ್ನ: ಮಯೂರ    

ಎಲ್ಲಾ ಪರಂಪರೆಗಳಲ್ಲೂ ಕೆಲವು ನಿತ್ಯನೂತನ ಪಂಡಿತಪಾಮರರಲ್ಲಿ, ಗಂಡು ಹೆಣ್ಣುಗಳಲ್ಲಿ, ಸಾಂಪ್ರದಾಯಿಕರು-ಆಧುನಿಕರಲ್ಲಿ, ವಿದ್ಯಾವಂತ ಅವಿದ್ಯಾವಂತರಲ್ಲಿ ಒಂದಕ್ಕೊಂದು ಹೊಂದಲಾರದ ಆಸಮಾನ, ಅವ್ಯಕ್ತ ಪಾತಳಿಗಳಲ್ಲಿ ಸ್ವರೂಪಗಳಲ್ಲಿ ಜೀವಂತವಾಗಿರುತ್ತವೆ. ಈ ದೃಷ್ಟಿಯಿಂದ ಅವು ಅಕ್ಷಯ ಪಾತ್ರಗಳು. ಈ ಪಾತ್ರಗಳು ಬದಲಾದ ದೃಷ್ಟಿಕೋನಗಳಿಗೂ, ಸಂದರ್ಭಗಳಿಗೂ ತಾಕುವ ಪರಿಯೂ ಅಷ್ಟೇ ಅಪೂರ್ವವಾಗಿರುತ್ತದೆ. ಭಾರತೀಯ ಜನಮಾನಸವನ್ನು ಹಾಸಾಗಿ ಹೊಕ್ಕಿರುವ ಪರಿಯೂ ಇಂಥದ್ದೇ. ರಾಮಾಯಣದ ಜೊತೆಯಲ್ಲೇ ನೆರಳಿನಂತೆ ಸೀತೆಯ ಶೀರ್ಷಿಕೆಯಲ್ಲೂ ಕಂಡೂ ಕಾಣದಂತೆ ಧ್ವನಿಸುತ್ತಾಳೆ, ಎಷ್ಟೇ ಆಗಲಿ ಛಾಯಾ ಪತ್ತಿ ಎನ್ನುವ ಬಿರುದಾಂಕಿತಳು ತಾನೇ! ಹೆಣ್ಣಿನ ನೇಪಥದ ಬದುಕಿಗೊಂದು ಭಾಷ್ಯದಂತೆಯೇ ಸೀತೆಯ ಮಾದರಿಯನ್ನು ಗಟ್ಟಿಯಾಗಿ ಬೇರೂರಿಸಲಾಗಿದೆ. ಭಾರತವೆನ್ನುವ ಧರಣಿ ಮಂಡಲದ ಉದ್ದಗಲಕ್ಕೂ ಸೀತೆಯನ್ನು ಕುರಿತ ಸಾವಿರಾರು ಅದ್ಭುತ ಕಥನಗಳಿವೆ. ಸೀತೆಯನ್ನು ತಾಯಿ ಬೇರಾಗಿಸಿ ಒಡೆದಿರುವ ಟಿಸಿಲುಗಳ ಅಧ್ಯಯನವೇ ಮಹಿಳಾ ಸಂಕಥನದ ಪ್ರಾತಿನಿಧಿಕ ಮೈಲಿಗಲ್ಲುಗಳನ್ನು ಸೂಚಿಸಬಲ್ಲದು ಎಂದೂ ಅನ್ನಿಸುತ್ತದೆ. ಅದೆಷ್ಟು ವೈವಿಧ್ಯಮಯವಾದ ಚಿತ್ರಗಳಿವೆ ಎಂದರೆ, ನನಗೆ ಅನೇಕ ಸಲ, ಹೆಣ್ಣು ತನ್ನ ಸಾಧ್ಯತೆಗಳನ್ನೆಲ್ಲ ಈ ಸಾವಿರಾರು ಸೀತೆಯರನ್ನು ಕಲ್ಪಿಸಿ ಕಾಣಿಸಿ, ಹಂಬಲಿಸಿದ್ದಾರೇನೋ ಆನ್ನಿಸುತ್ತದೆ. ಈ ಮಾತನ್ನು ಜನಪದ ಕಾವ್ಯದಲ್ಲಿ, ಆ ಮಾತಾಯಿ ಸೀತೆಗೇ ಇಂಥ ಕಷ್ಟ ಬಂದ ಮ್ಯಾಗೆ ನಮ್ಮ ದಿನ್ನೇನು ತೆಗಿ ಎಂದು ಸೀತೆಯನ್ನು ಧೈರ್ಯದ ಊರುಗೋಲಾಗಿಯೂ, ಹೆಣ್ಣಿನ ಅವಸ್ಥೆಯನ್ನು ಒಪ್ಪಿಕೊಳ್ಳುವ ವಾಸ್ತವದ ಮಾದರಿಯಾಗಿಯೂ ನೋಡುವ ಉದಾಹರಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೇಳುತ್ತಿಲ್ಲ. ಸೀತೆಯ ಪಾತ್ರದ ಸಾಧ್ಯತೆಗಳು, ಅದರ ತೆರೆದ ಅಂಚು (open endedness) ಆಸಾಧಾರಣ ಎನ್ನುವ ನನ್ನ ನಂಬಿಕೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ವಿಪರ್ಯಾಸದಂತೆ ಕಾಣಿಸುವ ವಿರುದ್ಧ ಧ್ರುವಗಳ ಸಾಧ್ಯತೆ ಮತ್ತು ಶಕ್ತಿ ಸೀತೆಯ ಪಾತ್ರಕ್ಕಿದೆ. ದೇಶ ಕಾಲಾತೀತವಾಗಿ ಸೀತೆಯ ಪಾತ್ರ ಮತ್ತೆ ಮತ್ತೆ ನಮ್ಮನ್ನು ಕಾಡುತ್ತಿರುವುದು ಇದೇ ಕಾರಣಕ್ಕಿರಬೇಕು.

ಸ್ತ್ರೀವಾದಿ ನೆಲೆಯಲ್ಲಿ ಇದನ್ನು ಹೀಗೂ ಹೇಳಬಹುದು. ಯಾವ ಸತ್ಯವನ್ನು ನೀವು ಮುಚ್ಚಿಡಲು ಪ್ರಯತ್ನಿಸುತ್ತೀರೋ ಆ ಸತ್ಯ ಬೇರೊಂದು ರೂಪದಲ್ಲಿ ನಿಮ್ಮೆದುರಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆ ಅರಿವಿನಿಂದಲೇ, ಅದನ್ನು ಇನ್ನೂ ಇನ್ನೂ ಆಳಕ್ಕೆ ಹುಗಿಯುವ ಅಥವಾ ಅದನ್ನು ರೂಪಾಂತರಿಸುವ ಪ್ರಯತ್ನವೂ ಇನ್ನೂ ತೀವ್ರವಾಗುತ್ತಾ ಹೋಗುತ್ತದೆ. ನಮ್ಮ ಚಾರಿತ್ರಿಕ, ಪೌರಾಣಿಕ ಪಾತ್ರಗಳನ್ನು ಪಿತೃಸಂಸ್ಕೃತಿಯ ಅಚ್ಚಿನಿಂದ ಹೊರತೆಗೆಯುವ ಪ್ರಯತ್ನಗಳು ಅನೇಕರಿಗೆ ಗಾಬರಿಯನ್ನೂ ಅಸಹನೆಯನ್ನೂ ಹುಟ್ಟಿಸುವುದು ಇದೇ ಕಾರಣಕ್ಕೆ, ಅದರಲ್ಲೂ ಯಾವ ಪಾತ್ರಗಳನ್ನು ಹೆಣ್ಣನ್ನು ಗಂಡಾಳಿಕೆಯ ಮುಂದುವರಿಕೆಗೆ ಅನುಕೂಲವಾಗುವಂತೆ ಕಟ್ಟಿ ವ್ಯಾಖ್ಯಾನಿಸಿದ್ದಾರೋ ಅಂಥ ಪಾತ್ರಗಳ ಮರು ವ್ಯಾಖ್ಯಾನವಂತೂ ಅವರಿಗೆ ಅಪಥ್ಯ.

ದೇವದತ್ತ ಪಟ್ಟನಾಯಕರ 'ಸೀತಾ' ಈ ಎಲ್ಲ ಕಾರಣಗಳಿಗಾಗಿ ಮುಖ್ಯ. ಇದನ್ನೊಂದು ಸಾಹಿತ್ಯಕ ಪಠ್ಯ ಎಂದು ನೋಡಲೇಬಾರದು. ಇದೊಂದು 'ಸಾಂಸ್ಕೃತಿಕ ಪಠ್ಯ'. ಈ ಬಗೆಯ ಪಠ್ಯಗಳನ್ನು ನಾವು “ರಾಜಕೀಯ ಪಕ್ಕ'ಗಳಾಗಿಯೂ ನೋಡಬೇಕು. ಆಗ ಮಾತ್ರ ಈ ಪಠ್ಯಗಳ ಸರಿಯಾದ ಓದು, ಗ್ರಹಿಕೆ ಮತ್ತು ಪರಿಣಾಮಗಳು ಘಟಿಸುತ್ತವೆ. ರಾಮಾಯಣದ ನಾಯಕಿಯೂ ಭಾರತೀಯ * ಮಾದರಿಯೂ ಆಗಿರುವ ಸೀತೆಯನ್ನು ಪಟ್ಟನಾಯಕರು ಯಾವ ಬಗೆಯ ವ್ಯಾಖ್ಯಾನಕ್ಕೆ, ತಾತ್ತಿಕತೆಗೆ ಒಗ್ಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಪ್ರಶ್ನೆಯಿಂದಲೇ ಈ ಕೃತಿಯ ಚರ್ಚೆಯನ್ನು ಆರಂಭಿಸಬಹುದು.

ಇದನ್ನು ಹೊಚ್ಚ ಹೊಸದು ಎಂದು ಹೇಳಲಾಗುವುದಿಲ್ಲ ನಿಜ; ಈ ಬಗೆಯ ಪ್ರಯತ್ನಗಳು ಎಂದಿನಿಂದಲೂ ನಡೆಯುತ್ತಲೇ ಬಂದಿವೆ. ಕುವೆಂಪು 'ಶ್ರೀ ರಾಮಾಯಣ ದರ್ಶನಂ' ದಲ್ಲಿ ಚಿತ್ರಿಸುವ ಸೀತೆ, ಫೋಲಂಕಿ ರಾಮಮೂರ್ತಿಯವರು “ಸೀತಾಯಣ'ದಲ್ಲಿ ಎತ್ತುವ ಪ್ರಶ್ನೆಗಳು, 'ರಾಮಾಯಣ ವಿಷ ವೃಕ್ಷ' ಕೃತಿಯಲ್ಲಿ ವ್ಯಕ್ತವಾಗಿರುವ ನಿಲುವುಗಳು, ಅಸಂಖ್ಯಾತವಾದ ಜನಪದ ಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಗಟ್ಟಿಗಿತ್ತಿಯಾದ ಸೀತೆ... ಈ ಎಲ್ಲರಿಗಿಂತ ಭಿನ್ನವಾದ ಏನನ್ನು ಈ ಕೃತಿ ಹೇಳಲು ಹಂಬಲಿಸುತ್ತಿದೆ? ಕುವೆಂಪು ಸೀತೆಯನ್ನು ರಾಮನಿಗೆ ಸರಿದೊರೆಯಾದ ಔನ್ನತ್ಯದಲ್ಲಿ ಚಿತ್ರಿಸುತ್ತಾರೆ. ಪೋಲಂಕಿಯವರ ಕೃತಿಯು ಕೆಲವೊಮ್ಮೆ ಅತಿ ಭಾವುಕ ಅನ್ನಿಸಿದರೂ, ಅಸಾಮಾನ್ಯ ಪ್ರಯತ್ನ. ಏಕೆಂದರೆ, ಸ್ಥಾವರವಾದುದನ್ನು ಅಲ್ಲಾಡಿಸಲು ಹೆಚ್ಚಿನ ಬಲಪ್ರಯೋಗವೇ ಬೇಕು ಎನ್ನುವಂತೆ ಆ ಕೃತಿಯಲ್ಲಿ ಅವರು ಸೀತೆಯ ಪರವಾದ, ಆ ಮೂಲಕ ಮಹಿಳಾಪರ ವಕಾಲತ್ತನ್ನು ಸಮರ್ಥವಾಗಿಯೇ ಮಂಡಿಸುತ್ತಾರೆ. (ಈ ಕೃತಿಯ ಅರ್ಪಣೆಯನ್ನು ನೋಡಿದರೆ ನನ್ನ ಮಾತು ಸ್ಪಷ್ಟವಾಗುತ್ತದೆ. ಹೆಣ್ಣಿನ ಶಕ್ತಿಯನ್ನು ಗೊತ್ತಿದ್ದೂ ಅದುಮುವ ಮೃfಯತೆಯನ್ನು ಮೀರುವುದು ಯಾವಾಗ ಎನ್ನುವ ಪ್ರಾಮಾಣಿಕವಾದ ಕಾಳಜೆ, ನೋವು ಅಲ್ಲಿದೆ).

ದೇವದತ್ತ ಪಟ್ಟನಾಯಕ (ಇವರ ಹೆಸರೇ ಎಷ್ಟು ಫ್ಲಡಲ್! ಆದರೆ ಅದನ್ನು ಪ್ರಯತ್ನಪೂರ್ವಕವಾಗಿ ಮೀರುವ ತಮ್ಮ ನಿಲುವಿನಿಂದಾಗಿ ಇವರನ್ನು ಪಟ್ಟನಾಯಕರೆಂದು ಒಪ್ಪಬಹುದೇನೋ!) ಅವರ ಈ ಕೃತಿಯ ಮಹತ್ವ ಎಲ್ಲಿದೆಯೆಂದರೆ, ರಾಮಾಯಣವನ್ನು ಸೀತಾಯಣವಾಗಿ ಪ್ರತಿಪಾದಿಸಲು ಬೇಕಾದ ಬೌದ್ಧಿಕ, ತಾತ್ವಿಕ ತಯಾರಿಯಲ್ಲಿ ನಿರಾಕರಿಸಲು ಸಾಧ್ಯವಾಗದ ಸಿದ್ಧತೆಯಲ್ಲಿ ಅವರು ಸೀತೆಯನ್ನು ಹೊಸ ಬೆಳಕಿನಲ್ಲಿ ಕಾಣಿಸಲು ಯತ್ನಿಸಿದ್ದಾರೆ. ಇದರ ಜೊತೆಗೆ ಅವರು ರಾಮಾಯಣದಂತಹ ಮಹಾಕಾವ್ಯಕ್ಕೆ ಇರುವ ಇತರ ಆಯಾಮಗಳನ್ನೂ ಅಷ್ಟೇ ಗಂಭೀರವಾಗಿ ಚರ್ಚಿಸುತ್ತಾರೆ. ರಾಮಾಯಣದ ಸ್ತ್ರೀವಾದಿ ಓದಿಗೆ ಇವು ಪೂರಕವಾಗಿ ಬಂದಿರುವುದು ಕೃತಿಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

'ಜಯ' ಮತ್ತು 'ಸೀತಾ' ಎರಡೂ ಕೃತಿಗಳಲ್ಲಿ ದೇವದತ್ತರು ನಮ್ಮ ಗಮನ ಸೆಳೆಯುವುದು ಒಂದು ಮುಖ್ಯ ಕಾರಣದಿಂದ, ಈ ತನಕದ ಪಠ್ಯಗಳ ಓದು 'ಗಂಡೋದು' ಎನ್ನುವುದರ. ಅದರ ಮಿತಿಯ, ಅದರ ಕ್ರೌರ್ಯದ ಅರಿವು ಇವರ ಬರವಣಿಗೆಗೆ ಪ್ರಾಮಾಣಿಕತೆಯ ಧಾತುವನ್ನು ಒದಗಿಸಿದೆ. ಗಂಡಾಳಿಕೆಯ ಪ್ರತಿಫಲನವೇ ಈ ಪಠ್ಯಗಳ ರಾಚನಿಕತೆಯನ್ನು, ಮೂಲಕೇಂದ್ರಗಳನ್ನು ನಿರ್ಧರಿಸಿದೆ ಮತ್ತು ನಿರ್ದೇಶಿಸಿದೆ ಎನ್ನುವ ಅರಿವು ಕೃತಿಯುದ್ದಕ್ಕೂ ತಿಪ್ಪಿಗೆಯ ಮತ್ತು ಅದನ್ನು ತಿದ್ದುವ ಮಾನವೀಯ ಪ್ರಯತ್ನವಾಗಿ ಫಲ ಕೊಟ್ಟಿದೆ. ಇದು ಎಷ್ಟು ಶಕ್ತವಾಗಿದೆ ಎಂದರೆ, ಇದು ಹೆಣ್ಣಿನ ಬಿಡುಗಡೆಯ ಪ್ರಯಾಣ ಮಾತ್ರವಲ್ಲ, ಗಂಡಿನ ಬಿಡುಗಡೆಯ ಪ್ರಯಾಣವೂ ಹೌದು ಎನ್ನುವ ಸತ್ಯ ಮತ್ತು ಸಾಧ್ಯತೆಯನ್ನು ತೋರಿಸಿಕೊಡುತ್ತದೆ. ಗಂಡು ತನ್ನ ಕಾರಣ ಅಹಂಕಾರದ ಬಂಧನದಿಂದ ಹೊರ ಬಂದು ಮಾನವೀಯವಾಗುವ ಸತ್ಯದ ನವದರ್ಶನದ ಹಂಬಲ ಈ ಕೃತಿಗಿದೆ. ಇದರ ಮಿತಿಗಳು, ಸೋಲುಗಳು, ತೊಡಕುಗಳು ಏನೇ ಇರಲಿ ಇದರ ಆಶಯವೇ ಇದನ್ನೊಂದು ಪ್ರಾಮಾಣಿಕ ಕೃತಿಯಾಗಿಸಿದೆ.

ಆರಂಭದಲ್ಲಿ ಇದನ್ನೊಂದು ಸಾಂಸ್ಕೃತಿಕ ಮತ್ತು ರಾಜಕೀಯ ಪಠ್ಯವೆಂದು ಗುರುತಿಸಿದೆ. ಸಾಹಿತ್ಯಕ ಪಠ್ಯಗಳನ್ನು ಅವುಗಳ ಸೌಂದರ್ಯ ಮೀಮಾಂಸೆಯಿಂದ ಹೊರತಂದು ಅವುಗಳ ಸಾಮಾಜಿಕ ಮತ್ತು ರಾಜಕೀಯ ಉತ್ತರದಾಯಿತ್ವವನ್ನು ಮೌಲ್ಯವಾಗಿಸುತ್ತಿರುವ ಕಾಲಘಟ್ಟ ಇದು, ದಮನಿತರ ಪಾಲಿಗೆ ಈ ಬಗೆಯ ಪ್ರಯತ್ನಗಳೂ ಅವರ ಹೋರಾಟದ ಮುಖ್ಯ ಭಾಗಗಳಾಗಿವೆ. ಸೀತೆಯನ್ನು ಶೋಷಿತಳೆಂದು, ದಮನಿತಳೆಂದು ಗುರುತಿಸುತ್ತಲೇ ಅದನ್ನು ಪ್ರತಿರೋಧಿಸುವ ಶಕ್ತಿಯೂ ಅವಳಿಗಿತ್ತು, ಅವಳು ಆ ಪ್ರಯತ್ನಗಳನ್ನು ಮಾಡಿಯೂ ಮಾಡಿದಳು ಎನ್ನುವ ಅಂಶಗಳನ್ನು ಎತ್ತಿ ಹಿಡಿಯುವ ಮೂಲಕ ಹೆಣ್ಣಿನ ಹೋರಾಟದ ಪರಂಪರೆಯ ನಾಯಕಿಯಾಗಿ ಸೀತೆಯನ್ನು ಸ್ಥಾಪಿಸಲು ಈ ಕೃತಿ ಉದ್ದೇಶಿಸಿದೆ. ಅರಮನೆಯಿಂದ ಕಾಡಿಗೂ ಕಾಡಿನಿಂದ ಅಪಹರಣಕ್ಕೂ ಅಪಹರಣದಿಂದ ಅಗ್ನಿಪರೀಕ್ಷೆಯ ಅವಮಾನಕ್ಕೂ ಅವಮಾನದಿಂದ ತಿರಸ್ಕಾರಕ್ಕೂ ಒಳಗಾಗುವ ಸೀತೆಯ ಬದುಕಿನ ಪ್ರಯಾಣವು ಅವಳದೇ ಕಣ್ಣಿನಿಂದ ನೋಡಿದಾಗ, ಅವಳು ತನ್ನನ್ನು, ತನ್ನ ಅಸ್ಮಿತೆಯನ್ನು, ಆತ್ಮಗೌರವವನ್ನು ನಿಧಾನಕ್ಕೆ ಕಂಡುಕೊಳ್ಳುವ, ಅದನ್ನು ಉಳಿಸಿಕೊಳ್ಳಲು ನಡೆಸಿದ ನಿಶ್ಯಬ್ದ ಕಾರ್ಯಕರ್ತೆಯಂತೆ ಕಾಣಿಸತೊಡಗುತ್ತಾಳೆ, ಬೇಟೆಯನ್ನು, ಶೂರ್ಪನಖಿಯ ಅಂಗ ಛೇದನವನ್ನು ವಿರೋಧಿಸುವ ಮೂಲಕ ತನ್ನ ಆಯ್ಕೆಯನ್ನು, ಭಿನ್ನಾಭಿಪ್ರಾಯವನ್ನು ಮಾತ್ರ ಹೇಳುತ್ತಿಲ್ಲ, ಹೆಣ್ಣಿನ ಜೀವಪರ ನಿಲುವುಗಳನ್ನೂ ಎತ್ತಿ ಹಿಡಿಯುತ್ತಾಳೆ. ಬದುಕಿನ ಆರಂಭದಿಂದಲೂ 'ಅನ್ನ ವೆನಿಸುವ 'ಪರಕೀಯ'ವೆನಿಸುವ ಸಂದರ್ಭ ಮತ್ತು ಬೆಳವಣಿಗೆಗಳನ್ನು ಸಿಣಿ'ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ ಹೋಗುತ್ತಾಳೆ, ಅದು ಜನಕನನ್ನು ತಂದೆಯಾಗಿ ಸ್ವೀಕರಿಸುವ ಸಂದರ್ಭವೇ ಇರಬಹುದು.

ಮೆಚ್ಚಿ ಮದುವೆಯಾದ ರಾಮನ ಬದುಕಿನ ಏರಿಳಿತಗಳಲ್ಲಿ ಅವನ ಆಯ್ಕೆ ಆದ್ಯತೆಗಳು ತನ್ನನ್ನು ದೂರ ಸರಿಸುತ್ತಿರುವಾಗಲೂ ಸಹಿಸಿ ನಿಭಾಯಿಸುವ ಸನ್ನಿವೇಶಗಳಿರಬಹುದು, ಸೀತೆ ಎಲ್ಲವನ್ನೂ ಮನಃಪೂರ್ವಕವಾಗಿಯೇ ಮಾಡುತ್ತಾಳೆ, ರಾಮನಂತಹ ಕರ್ತವ್ಯಬದ್ಧ ಗಂಡನ ಜೊತೆಯಲ್ಲಿ ಸೀತೆ ನಡೆದುಕೊಳ್ಳುವುದು ಕರ್ತವ್ಯಬದ್ಧ ಹೆಂಡತಿಯಾಗಲ್ಲ. ಪ್ರೀತಿ ತುಂಬಿದ ಮಡದಿಯಾಗಿ ದಾಂಪತ್ಯವು ಅವಳಿಗೆ ಕೇವಲ ಕರ್ತವ್ಯವಲ್ಲ, ಅನುರಾಗ, ಆದರೆ ಯಾವ ಸಂದರ್ಭದಲ್ಲೂ ಸೀತೆ ತನ್ನ ಅಸಮ್ಮತಿಯನ್ನು ತೋರಿಸದೆಯೂ ಬಿಡುವುದಿಲ್ಲ ಎನ್ನುವುದನ್ನು ಪಟ್ಟನಾಯಕರು ಅನೇಕ ಸಂದರ್ಭಗಳಲ್ಲಿ ಕಾಣಿಸುತ್ತಾರೆ. ಹೊಂದಾಣಿಕೆ ಮತ್ತು ಭಿನ್ನಾಭಿಪ್ರಾಯಗಳು ಸೀತೆಯ ವ್ಯಕ್ತಿತ್ವದ ಅಖಂಡ ಅಂಶಗಳು ಎನ್ನುವುದನ್ನು ಕಾಣಿಸುವ ಮೂಲಕ ಸೀತೆಗಿದ್ದ 'ಸ್ವ', 'ಸ್ವಪ್ರಜ್ಞೆ'ಯನ್ನು ಸ್ಥಾಪಿಸುತ್ತಾರೆ. ಛಾಯಾ ವ್ಯಕ್ತಿತ್ವವಾದ ಸೀತೆಗೆ ತನ್ನದೇ, ತನ್ನದು ಮಾತ್ರವಾದ ಮನೊಬೌದ್ಧಿಕ ವಿನ್ಯಾಸ ಇರುವುದನ್ನು ಎಲ್ಲ ತಪ್ಪದಂತೆ ಪಟ್ಟನಾಯಕರು ತೋರಿಸುತ್ತಾ ಹೋಗುತ್ತಾರೆ. ಆದ್ದರಿಂದಲೇ ಕೃತಿಯ ಕೊನೆಗೆ ಬರುವ ಹೊತ್ತಿಗೆ ಸೀತೆ ಎನ್ನುವ ರೇಖಾಚಿತ್ರ ಪೂರ್ಣವಾಗುತ್ತದೆ. ಅದು ಕೇವಲ 'ಅನುಕೂಲ ಸತಿ'ಯ ಚಿತ್ರವಲ್ಲ, `ಸುತ್ತೇಳು ನೆರೆಗಂಜಿ' ಬದುಕುವ ಅಳುಮುಂಜಿಯದ್ದಲ್ಲ, ಬದುಕಿನ ಅನಿರೀಕ್ಷಿತಗಳನ್ನು ಧೀರವಾಗಿ ಎದುರಿಸುವ ಹೆಣ್ಣಿನದು. ರಾಮನ ಬಗೆಗೆ ಯಾವಾಗಲೂ ಉದ್ದರಿಸುವ ವಿಶೇಷಣವೊಂದಿದೆ; ಸ್ಮಿತಾಪೂರ್ವಾಭಿಭಾಷಿ ಎನ್ನುವುದು. ಅದು ಯಾಕೋ ನನಗೆ ಇದು ರಾಮನಿಗಿಂತ ಸೀತೆಗೇ ಹೆಚ್ಚು ಸರಿಯಾಗಿ ಅನ್ವಯಿಸುತ್ತದೆ ಎನ್ನಿಸುತ್ತದೆ, ಎಂಥ ಕಷ್ಟಗಳು ಬಂದಾಗಲೂ ಸೀತೆ ಎಲ್ಲವನ್ನೂ ಮಂದಹಾಸದಿಂದಲೇ ಎದುರಿಸಿದವಳು,

ಸ್ವ-ಸ್ಯಪ್ರಜ್ಞೆ ಎನ್ನುವುದು ಹೆಣ್ಣಿಗೆ ಅತ್ಯಗತ್ಯವಾಗಿ ಬೇಕಾಗಿರುವ ಜೀವಧಾತುಗಳು, ಸೀತೆಯಲ್ಲಿ ಅದು ಅತ್ಯಂತ ಪ್ರಖರವಾಗಿತ್ತು. ರಾಮನ ಮೇಲೆ ಅವಳಿಗಿದ್ದ ಅಸಮಾಧಾನಗಳನ್ನು ಅವಳು ಅಳುತ್ತಾ, ಅಸಹಾಯಕತೆಯಲ್ಲಿ, ಅಬಲೆ ಎನ್ನುವ ಆರೋಪಿತ ಮನಸ್ಥಿತಿಯಲ್ಲಿ ಮಾಡುವುದಿಲ್ಲ. ನಿಯಮಗಳು, ನೀತಿಗಳು ಹೆಣ್ಣು ಮತ್ತು ಗಂಡಿಗೆ ಏಕೆ ಮತ್ತು ಹೇಗೆ ಬೇರೆ ಎನ್ನುವ ತಾರ್ಕಿಕ, ನೈತಿಕ ಪ್ರಶ್ನೆಗಳನ್ನು ಸೀತೆ ಸ್ಪಷ್ಟವಾಗಿ ತನಗೂ ಕೇಳಿಕೊಳ್ಳುತ್ತಾಳೆ ಮತ್ತು ನಿರ್ಭಿಡೆಯಿಂದ ಎದುರಿಗಿರುವವರನ್ನೂ ಕೇಳುತ್ತಾಳೆ. ಈ ಆಯಾಮಕ್ಕೆ ಪಟ್ಟನಾಯಕರು ಉದ್ದೇಶಪೂರ್ವಕವಾಗಿಯೇ ಒತ್ತು ಕೊಟ್ಟಿದ್ದಾರೆ. ಕೃತಿಯನ್ನು ಗಂಭೀರವಾಗಿರುವ ಅಂಶ ಇದು.

ಓದುಗರ ಗಮನ ಸೆಳೆಯುವ ಇತರ ಕೆಲವು ಅಂಶಗಳೂ ಇದರಲ್ಲಿವೆ. ನಿಜಕ್ಕೂ ಸುಂದರವಾದ ಚಿತ್ರಗಳನ್ನು ಪಟ್ಟನಾಯಕರು (250ಕ್ಕೂ ಹೆಚ್ಚು) ರಚಿಸಿದ್ದಾರೆ. ಹೆಣ್ಣಿನ ರೇಖಾಚಿತ್ರಗಳಂತೂ ಅವಳನ್ನು ದೇಹದಾಚೆಗೆ ಗುರುತಿಸಲು ತುಡಿಯುತ್ತವೆ, ಅವಳ ವ್ಯಕ್ತಿತ್ವದ ಉಜ್ವಲತೆ, ಪ್ರಖರ ಬುದ್ಧಿಮತ್ತೆ, ಅವಳ ಬಂಡಾಯ, ಆವಳ ಪ್ರೀತಿ, ಅಧಿಕಾರದ ಮದ, ಗಂಡಿನ ಮದ ಈ ಎಲ್ಲವೂ ಚಿತ್ರಗಳಲ್ಲಿ ಶಕ್ತವಾಗಿ ಮೂಡಿವೆ. ಕೃತಿಯುದ್ದಕ್ಕೂ ಇರುವ ಟಿಪ್ಪಣಿಗಳು ಕೆಲವೊಮ್ಮೆ ಅನವಶ್ಯಕ, ಪ್ರದರ್ಶಕ ಅಂತ ಅನ್ನಿಸುತ್ತವೆ. ರೋಚಕ ಮಾಡಲು ನಡೆಸಿರುವ ಗಿಮಿಕ್ ಎಂದೂ ಕೂಡ ಕೆಲವು ಕಡೆಗಳಲ್ಲಿ ಅನ್ನಿಸಿದರೂ ಪಟ್ಟನಾಯಕರ ಓದಿನ ಹರಹನ್ನು, ಅವರ ಆಶಯದ ಗಾಂಭೀರ್ಯವನ್ನು ಈ ಟಿಪ್ಪಣಿಗಳೇ ಹೇಳುತ್ತವೆ.

ರಾಮಾಯಣದ ಗಂಡಿನ ಓದನ್ನು ಗಂಡೇ ಮುರಿಯುವ ಅತ್ಯವಶ್ಯಕ, ಮಹತ್ವದ ಪ್ರಯತ್ನದ ಈ ಕೃತಿಯನ್ನು, ಮೂಲದ ಸಂಕೀರ್ಣತೆ, ಆದ್ರತೆಯೊಂದಿಗೆ ಪದ್ಮರಾಜ ದಂಡಾವತಿಯವರು ಕನ್ನಡಕ್ಕೆ ತಂದಿದ್ದಾರೆ. ಕನ್ನಡಕ್ಕೆ ಇದೊಂದು ಮಹತ್ವದ ಕೊಡುಗೆ, ಇದಕ್ಕಾಗಿ ಅವರಿಗೂ 'ಮನೋಹರ ಗ್ರಂಥಮಾಲೆ'ಯವರಿಗೂ ಅಭಿನಂದನೆಗಳು.

Related Books