ಸಿಯಾಚೆನ್ ಗೆ ದೂರದಾರಿ: ಅದೇಕೆ?

Author : ಎಸ್.ಸಿ. (ಶ್ರೀಕೃಷ್ಣ) ಸರದೇಶಪಾಂಡೆ

Pages 316

₹ 350.00




Year of Publication: 2019
Published by: ಐಬಿಎಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080 2667 6003

Synopsys

‘ಸಿಯಾಚೆನ್ಗೆ ದೂರ ದಾರಿ : ಅದೇಕೆ ?’ ಎಂಬ ಆಂಗ್ಲ ಕೃತಿಯ ಮೂಲ ಲೇಖಕ ಶಿವ ಕುಣಾಲ ವರ್ಮಾ ಹಾಗೂ ಬ್ರಿಗೇಡಿಯರ್ ರಾಜೀವ್ ವಿಲ್ಲಿಯಂಸ್. ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. ಸರದೇಶಪಾಂಡೆ ಹಾಗೂ ಬ್ರಿಗೇಡಿಯರ್ ಎಸ್ ಜಿ ಭಾಗವತ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಿಯಾಚೆನ್ ಪ್ರದೇಶವು ಅತ್ಯಂತ ಚಳಿಯ ಪ್ರದೇಶ. ಅದು ನಿರ್ಗಲ್ಲು ಹಿಮಾಲಯದ ಪ್ರದೇಶ. ಭಾರತ-ಪಾಕಿಸ್ತಾನ ಗಡಿ ರೇಖೆ ಈ ಪ್ರದೇಶದಲ್ಲಿದೆ. ಜಗತ್ತಿನ ಅತೀ ಎತ್ತರದ ಯುದ್ಧ ಭೂಮಿ ಎಂಬ ಖ್ಯಾತಿ ಈ ಪ್ರದೇಶಕ್ಕಿದೆ. ಭಾರತೀಯ ಸೈನಿಕರು ಇಲ್ಲಿ ಕಾವಲು ಕಾಯಬೇಕಾಗುತ್ತದೆ. ಅಲ್ಲಿ ವಾಸಿಸುವುದೇ ಕಷ್ಟವಾಗಿರುವಾಗ ದೇಶ ಕಾಯುವ ಕೆಲಸದಲ್ಲಿ ಸೈನಿಕರು ನಿರತರಾಗಿರಬೇಕು. ಆ ಪ್ರದೇಶದ ಭೌಗೋಳಿಕ ಗುಣಲಕ್ಷಣಗಳನ್ನು ಪರಿಚಯಿಸುತ್ತಾ, ಸೈನಿಕರು ಈ ಪ್ರದೇಶದಲ್ಲಿ ಇದ್ದು ಎದುರಿಸುವ ಎಲ್ಲ ಸಮಸ್ಯೆಗಳನ್ನು ಇಲ್ಲಿ ವಿವರಿಸಲಾಗಿದೆ.

 

 

 

About the Author

ಎಸ್.ಸಿ. (ಶ್ರೀಕೃಷ್ಣ) ಸರದೇಶಪಾಂಡೆ

ವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. (ಶ್ರೀಕೃಷ್ಣ)  ಸರದೇಶಪಾಂಡೆ ಅವರು ಮೂಲತಃ ಧಾರವಾಡದವರು. ಭಾರತೀಯ ಸೇನೆಯ ಕುಮಾಂವು ರೆಜಿಮೆಂಟ್ ನಲ್ಲಿ 35 ವರ್ಷ ಸೇವೆ ಸಲ್ಲಿಸಿದರು. 1990ರಲ್ಲಿ ನಿವೃತ್ತರಾದರು. ಕಥೆ-ಕಾದಂಬರಿ ರಚಿಸುತ್ತಿದ್ದು, ಪರಿಸರ ಕುರಿತ ಲೇಖನಗಳನ್ನು ಬರೆಯುತ್ತಿದ್ದಾರೆ. ಸಮರ ಕುರಿತ ಬರಹಗಳೂ ಇವೆ. ಈಗಾಗಲೇ ಒಟ್ಟು 20 ಕೃತಿಗಳನ್ನು ರಚಿಸಿದ್ದಾರೆ. ಮಿಲಿಟರಿ ಸಂಬಂಧಿತ ಬರಹಗಳನ್ನು ಕನ್ನಡದಲ್ಲಿ ತರುವ ಪ್ರಯತ್ನ ಇವರದು.  ಕೃತಿಗಳು: ಭಾರತೀಯ ಯುದ್ಧ ಪರಂಪರೆ ಮತ್ತು ಸೈನಿಕನೇಕೆ ಹೋರಾಡು ತ್ತಾನೆ.  ‘ಸಿಯಾಚಿನ್ ಗೆ ದೂರ ದಾರಿ ಅದೇಕೆ? (ಅನುವಾದಿತ ಕೃತಿಗಳು), ಯುದ್ಧ ಯೋಧ (ಯುದ್ಧ ಹಾಗೂ ಯೋಧರ ಸ್ಥಿತಿಯ ಚಿತ್ರಣ)  ...

READ MORE

Reviews

ಶಿವ ಕುಣಾಲ ವರ್ಮಾ ಬ್ರಿಗೆಡಿಯರ್ ರಾಜೀವ ವಿಲಿಯಮ್ಸ್ ಅವರ ಸಿಯಾಚಿನ್ ಗೆ ದೂರದಾರಿ: ಅದೇಕೆ?

'ಜಗತ್ತಿನ ಅತೀ ಎತ್ತರದ ಯುದ್ಧರಂಗದಲ್ಲಿ ಸಾವು ಬದುಕು ಎರಡೂ ಅದೆಷ್ಟು ಘನಗಂಭೀರ' ಇದು ಈ ಕೃತಿಯ ಕೊನೆಯ ವಾಕ್ಯ. ಇಲ್ಲಿ ಸಾವು-ಬದುಕುಗಳು ಪರಸ್ಪರ ಮುಖಾಮುಖಿಯಾಗಿ ಹಿಮವತ್ ಗಾಂಭೀರ್‍ಯದಿಂದ ಮೌನಿಯಾಗಿ ಬಿಟ್ಟಿದೆ. ಎಮಚ್ಛಾದಿತ ಏರತ್ತರಗಳಲ್ಲಿ, ಆಳ ಕಂದರಗಳಲ್ಲಿ, ಇತಿಹಾಸದ ಪುಟಗಳ ನಡುವೆ ಮರೆಯಾಗಿ ನಿಂತ ಸತ್ಯದ ಬೆಳಕು ಇದು. ಇದಷ್ಟು ತೀಕ್ಷ್ಯಮಯವಾಗಿದೆಯೆಂದರೆ ಹಿಮಶಿಖರಕ್ಕೆ ಸೂರ್ಯಕಿರಣ ಬಿದ್ದು ಪ್ರತಿಫಲಿಸಿದಂತೆ ನೋಟಕ್ಕದರ ಇರಿತ ಅರಗಿಸಿಕೊಳ್ಳಲು ಆತಂಕ. ಒಂದಷ್ಟು ಅಂವ, ಕುತೂಹಲ, ಈ ತುಕ, ಭಯ, ದುಃಖ, ಖುಷಿ, ನಾಚಿಕೆ ಹೀಗೆ ಹತ್ತು ಹಲವು ಭಾವಗಳ ಸಮ್ಮಿಲನಕ್ಕೆ ಈ ಪುಸ್ತಕದ ಓದು ಕಾರಣವಾಗುತ್ತದೆ.

ಅನುಭವ ಕಥನದ ಮಾದರಿಗೆ ಸೇರುವ ಈ ಕೃತಿಯ ಮೂಲ ಲೇಖಕರು ಇಬ್ಬರು, ಅನುವಾದಕರು ಇಬ್ಬರು. ಹೀಗೆ ಒಟ್ಟು ನಾಲ್ಕು ಲೇಖಕರ ಕೂಸು ಈ ಪುಸ್ತಕ. ಇತಿಹಾಸ, ರಾಜಕೀಯ, - ಪರ್ವತಾಭಿಯಾನ, ಯುದ್ಧ, ಗಡಿರೇಖೆ ಹೀಗೆ ಹಲವು ಆಯಾಮಗಳಲ್ಲಿ ಹೆಣೆದುಕೊಂಡಿರುವ ಈ ಪುಸ್ತಕದ ಓದು ಕೆಲವು ಹಂತಗಳಲ್ಲಿ ಧ್ವನಿವೇಗಾಧಿಕ (Supersonic) ವಿಮಾನದಲ್ಲಿ ಕುಳಿತು ಸಿಯಾಚಿನ್ ಮೇಲೆ ಹಾರಿದಂತೆ: ನೋಡಿದ್ದೇವೆ. ಏನನ್ನೂ ಗೊತ್ತಿಲ್ಲ ಎಂಬಂತೆ ಓದಿರುತ್ತೇವೆ. ಆದರೆ ಹೇಗೆ? ಏನು? ಎಲ್ಲಿ? ಎಂಬ ಗೊತ್ತು ಗುರಿಯಿಲ್ಲದ ಓದಿನಂತೆ ಅದು ಸಾಗುತ್ತದೆ. ಹಾಗೆಂದು ಓದು ನಿಲ್ಲಿಸಲು ಮನಸ್ಸಾಗದಂತೆ ಓದು ಮುಂದುವರಿಯುತ್ತದೆ. ಆ ಹಿಡಿದಿಟ್ಟುಕೊಳ್ಳುವ ಗುಣ ಈ ಬರವಣಿಗೆಗಿದೆ. ಲೇಖಕರ ಅನುಭವ ಬಾಹುಳ್ಯ ಓದುಗನ ಅನುಭವರಾಹಿತ್ಯ ಇವೆರಡೂ ಇವರಿಬ್ಬರ ನಡುವೆ ಒಂದು ಅಂತರವನ್ನು ಸೃಷ್ಟಿಸುತ್ತದೆ. ಹಾಗಾಗಿಯೇ ಈ ಪುಸ್ತಕದ ಆರಂಭದ ಕೆಲವು ಭಾಗಗಳ ಓದಿಗೆ ಓದುಗನೂ ಒಂದು ಪೂರ್ವತಯಾರಿಯೊಂದಿಗೆ ಸಿದ್ಧವಾಗಬೇಕಾಗುತ್ತದೆ. ಪರ್ವತಾರೋಹಣಕ್ಕೆ ಹೊರಟಿ ಆರೋಹಿಯಂತೆ, ಜಮ್ಮು ಕಾಶ್ಮೀರದ ಕೆಲವು ಪ್ರದೇಶಗಳ ವಿವರಗಳು, ನಕ್ಷೆಗಳು, ಪಾರಿಭಾಷಿಕ ಪದಗಳು ಓದಿಗೆ ತೊಡಕನ್ನು ಉಂಟುಮಾಡುತ್ತವೆ. ನಕ್ಷೆಗಳನ್ನೂ ಚಿತ್ರಗಳನ್ನೂ ಪುಸ್ತಕ ಒಳಗೊಂಡಿರುವುದರಿಂದ ಒಂದು ಹಂತದವರೆಗೆ ವಿವರಗಳನ್ನು ತಕ್ಕಮಟ್ಟಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಎಲ್ಲಾ ತೊಡಕುಗಳನ್ನು ದಾಟಿ ಮುಂದುವರಿಯುತ್ತ ಹೋದಂತೆ ಅವ್ಯಕ್ತವಾದ ಅರಿವಿನಾಚೆಗಿನ ಅನುಭವವೊಂದರ ಖುಷಿ ನಮ್ಮದಾಗುತ್ತಾ ಹೋಗುತ್ತದೆ.

ಗಡಿರೇಖೆಯೊಂದಿಗೆ ತಳುಕು ಹಾಕಿಕೊಂಡ ಭಾರತ-ಪಾಕಿಸ್ತಾನ ಸಂಬಂಧ, ಇದಕ್ಕೆ ಕಾರಣವಾದ ಬ್ರಿಟಿಷರ ಹಸ್ತಕ್ಷೇಪ, ರಾಜಕೀಯವಾಳಗಳು, ಭಾರತದ ಮುಖ್ಯವಾಗಿ ಉತ್ತರಭಾರತ - ಜಮ್ಮು ಕಾಶ್ಮೀರದ ರಾಜರುಗಳ ಕುರಿತ ಐತಿಹಾಸಿಕ ವಿವರಗಳು, ಮರೆಯಲ್ಲೇ ನಿಂತು ಬಿಟ್ಟ ಧೀರನಾಯಕರು, ಸತ್ಯದ ತಿರುವುಗಳು, ವಿದೇಶಾಂಗ ನೀತಿಯಲ್ಲಿನ ನ್ಯೂನತೆಗಳು, ಸೈನಿಕ ಕಾರ್ಯಾಚರಣೆಗಳು ಹೀಗೆ ಜಮ್ಮು-ಕಾಶ್ಮೀರವೆಂಬ ಸುಂದರ ಸ್ವರ್ಗದ ನರಕ ಸದೃಶ್ಯವಾದ ಬಾಳು ಒಂದು ವಿಷಾದಮಯ ಸಂಗೀತದಂತೆ ಈ ಪುಸ್ತಕದಲ್ಲಿ ತಣ್ಣಗೆ ಕೊರೆಯುತ್ತಾ, ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇಲ್ಲಿನ ಮಾಹಿತಿಗಳಲ್ಲಿ ಅಧಿಕೃತತೆ ಇದೆ. ಹಾಗಾಗಿಯೇ ನೇರ ನಿರೂಪಣೆಯ ನಿಷ್ಟುರತೆಯೂ ಇದೆ. ಭಾವುಕತೆಗಿಂತಲೂ ವಾಸ್ತವಿಕತೆಯ ನೆಲೆಗಟ್ಟೆ ಹೆಚ್ಚು ಭದವೂ, ಸ್ಥಿರವೂ ಆಗಿರುವುದು ಎಂಬ ಎಚ್ಚರ ಬರವಣಿಗೆಯಲ್ಲಿದೆ. ಹಾಗಿದ್ದೂ “ದೇಶವಿಭಜನೆಯ ರಕ್ತಪಾತದಲ್ಲಿ ಐದು ಲಕ್ಷ ಜನ ಸತ್ತು 1.20 ಲಕ್ಷ ಜನ ನಿರ್ಗತಿಕರಾದದ್ದು ಎರಡೂ ದೇಶಗಳ ನಡುವೆ ಬಿರುಕನ್ನು ನಿರ್ಮಿಸಿದೆ. ಇದು ಬಲ ರಾಜಕೀಯ ತಿರುವಷ್ಟೇ ಅಲ್ಲ, ಭಾವುಕ ಮುಂತವೇ ಹೆಚ್ಚು" ಎಂಬ ಸಾಲುಗಳು, “ಭಾರತ ಮತ್ತು ಲಂಡನಿನ ಮೂಲೆಯಲ್ಲಡಗಿದ ಶಾಂತಕ್ಲಬ್‌ಗಳಲ್ಲಿ ಬ್ರಿಟಿಷ್ ಆಸಕ್ತಿ ಸಂಘದವರು ತಮ್ಮಲ್ಲೇ ಗ್ಲಾಸ್‌ಗಳಲ್ಲಿ ಯಶಸ್ಸಿನ ಪೇಯ ಹೀರುತ್ತಿರುವಾಗ ಭಾರತೀಯ ಮತ್ತು ಪಾಕಿಸ್ತಾನದ ರಕ್ತವು ತಾಯಾಡಿನ ಬಾಯೊಣಗಿದ ಭೂಮಿಯನ್ನು ಸಿಂಚಿಸುತ್ತದೆ” ಎಂಬ ಮಾತುಗಳು ವಿಭಜನೆಯ ರೌದ್ರತೆಗೆ ಅಕ್ಷರದ ರೂಪವನ್ನು ಭಾವುಕ ನೆಲೆಯಲ್ಲಿ ನೀಡುತ್ತದೆ.

ಹೃದಯದೊಳಗೆ ಮಾನವೀಯತೆಯ ಆರ್ದ್ರತೆಯನ್ನು ಬತ್ತದಂತೆ ಕಾಪಿಡುವ ಪ್ರತಿಯೊಬ್ಬನೂ ಓದಬೇಕಾದ ಪುಸ್ತಕವಿದು. ಭಾಷಾಂತರದ ಕೆಲವು ಅಡೆತಡೆಗಳನ್ನು ದಾಟಿಯೂ ಮುಂದೆ ಸಾಗುವಾಗ “ಅಲ್ಲಿ ಇನ್ನೂ ಎರಡೂ ದೇಶದವರು ಅವರ ನೂರಾರು ಪರಿವಾರಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಾರಲ್ಲ, ಸಾವಿರಾರು ಮಂದಿ ಅಪಂಗರಾಗಿ ಉತ್ತುಂಗ ಹಿಮಾಲಯದಿಂದ ಮರಳುತ್ತಾರಲ್ಲ.... ಎಂಬುವುದು ಬಗೆಹರಿಯದ ಪ್ರಶ್ನೆಯಾಗಿ ಮುಂದಿರುತ್ತದೆ. ವಿಜಯ ಹರ್ಷೋತ್ಕರ್ಷ ಇಳಿದಂತೆ ತೇಲುತ್ತಲೇ ಉಳಿಯುವ ಪ್ರತಿಬಿಂಬಗಳೆಂದರೆ ಯುದ್ಧದ ಭೀಕರತೆ, ಅದರ ಅಮಾನುಷತೆ ಮತ್ತೆ ಮತ್ತೆ ನಿರಂತರವಾಗಿ ಕಾಡುವ ಭೂತ ಸ್ವರೂಪಿ ಪ್ರಶ್ನೆ ಏಕೆ?” ಎಂಬುದಾಗಿ ಲೇಖಕರು ಎತ್ತುವ ಪ್ರಶ್ನೆ ನಮ್ಮನ್ನು ಕಾಡಬೇಕು, ಕಾಡುತ್ತಲೇ ಇರಬೇಕು.

(ಕೃಪೆ : ಪುಸ್ತಕಲೋಕ, ಬರಹ : ಕವಿತಾ ಕೂಡ್ಲು)

Related Books