ಸುಂದರ ಕಿಚ್ಚು

Author : ರವಿಶಂಕರ್ ಎ.ಕೆ (ಅಂಕುರ)

Pages 124

₹ 150.00




Year of Publication: 2023
Published by: ಎಸ್.ಎಲ್.ಎನ್ ಪ್ರಕಾಶನ, ಬೆಂಗಳೂರು
Address: ಎಸ್.ಎಲ್.ಎನ್ ಪ್ರಕಾಶನ, ಬೆಂಗಳೂರು

Synopsys

‘ಸುಂದರ ಕಿಚ್ಚು’ ಕೃತಿಯು ರವಿಶಂಕರ್ ಎ.ಕರ ಅವರ ಕವನ ಸಂಕಲನವಾಗಿದೆ. ಬದುಕು ಸಂಘರ್ಷಗಳಿಗೆ ಮುಲಾಮು ಹಚ್ಚುತ್ತಾ, ಸಾಗುವ ಸಂಜೆಯ ನೌಕೆ. ನೆಮ್ಮದಿ ಎಂಬ ಯುದ್ಧವನ್ನು, ಎಲ್ಲರೂ ಜಯಿಸಲು ನಿತ್ಯ ಹೋರಾಟದಲ್ಲಿ ನಮಗೆ ನಾವೆ ಮುಖಾಮುಖಿಯಾಗಿದ್ದೇವೆ. ಸುಖ, ಉತ್ಸಾಹಗಳಂತೆ, ಬೇಸರ, ದುಃಖಗಳು ಕೂಡ ನಮ್ಮನ್ನು ಭಯಪಡಿಸಬಹುದು. ಆ ಭಯಕ್ಕೆ ನಾವೇ ಶಕ್ತಿ ಮತ್ತು ಪರಿಹಾರವೆಂಬ ಉತ್ತರ ತಿಳಿಯದೆ ಎಲ್ಲಾ ದಿಕ್ಕಿನಲ್ಲೂ ಸದಾ ಹುಡುಕುತ್ತೇವೆ. ಕವಿತೆ ಪ್ರಶ್ನಿಸುತ್ತದೆ. ಆ ಪ್ರಶ್ನೆಯಲ್ಲಿ ಹಲವು ಉತ್ತರಗಳನ್ನು ಕಂಡುಕೊಳ್ಳಲು ಎಚ್ಚರಿಸುತ್ತದೆ. ನಮ್ಮನ್ನು ನಾವು ಮನಸ್ಸಿನ ಮೂಲಕ ಕಂಡುಕೊಳ್ಳಲು ಕವಿತೆಗಳು ಬೇಕು.

About the Author

ರವಿಶಂಕರ್ ಎ.ಕೆ (ಅಂಕುರ)

ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು. ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ.  ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017), ...

READ MORE

Excerpt / E-Books

ಸುಂದರ ಕಿಚ್ಚು ಸುಂದರ ಕಿಚ್ಚಿನೊಳಗಣ ಎಷ್ಟೆಲ್ಲಾ ದಹನವಿದೆ ನಾನದರ ಪಾಲುದಾರ ನಿತ್ಯವೂ ಕೊರಡಾಗಿರುವೆ ಕೊರಳಿನಲಿ ನರಕವು ಅದುಮಿದ್ದರೂ ನೈದಿಲೆಯಾಗಿ ನಗುವ ನನ್ನ ಕಪಟ ನಗುವಿಗೆ ಈ ನಗರವೇ ಅಪರಾಧಿ ರಕ್ತ ಹೀರುವ ಸಮಯಕ್ಕೆ ಅನ್ನ ಸತ್ವಹೀನ ಪ್ರೋಟಿನ್ ಪೌಡರ್‌ಗಳು ಬಿಕ್ಕಳಿಸಿ ನಗುತ್ತವೆ ಟೊಳ್ಳಾದ ಮೂಳೆಗಳ ಇಲ್ಲಿ ಊಳಲೂ ಜಾಗವಿಲ್ಲ ಅಗ್ನಿ ಸುಡಲು ನಾಚುತ್ತದೆ ಇದು ನನ್ನ ಶರೀರ ಪ್ರೇಮ, ಪ್ರೀತಿಗಳು ಆಫರ್ ರಂಜನೆಯಂತೆ ಕಾಮ ಹಗಲಲ್ಲೆ ಬೆತ್ತಲು ಇಲ್ಲಿ ಮನುಷ್ಯನಿಲ್ಲ ನೋವುಗಳು ಏಕಾಂತದಲ್ಲಿ ಮಾತನಾಡುತ್ತವೆ ನೆನಪು ಚರ್ಮದಂತೆ ಸುಲಿದಷ್ಟೂ ಹೊಸತು ಜೀವ ಒಂದು ಸಂಪನ್ಮೂಲ ಇರುವಷ್ಟು ಸವೆದು ಮೇಣದಂತೆ ಕರಬೇಕು ಬೂದಿಗೂ ತೆರಿಗೆ ಕಟ್ಟಬೇಕಿದೆ ಇಕ್ಕೆಲಗಳಿಗೆ ಎನ್ನ ಮೆದುಳನ್ನು ಸಿಕ್ಕಿಸಿ ಸುಡಲಾಗುತ್ತಿದೆ ಅಲ್ಲಿ ಅಗ್ನಿಯಿಲ್ಲ, ಆತ್ಮವಿದೆ ಕನಸುಗಳ ಕೈಗಾರಿಕೆಗೆ ನಾನು ಬಾಡಿಗೆದಾರ ನಿದ್ರೆಗಳಿಗೆ ಬಿಡುವಿಲ್ಲ ಬೆಳಕು ಮಾತ್ರ ಅನಿವಾರ್ಯ ಇಲ್ಲಿ ಶುದ್ಧವೆಂದು ಉಳಿದಿರುವುದು ಕಣ್ಣೀರೊಂದೆ ರಕ್ತವೂ ಮಿಶ್ರಬಣ್ಣದಲಿ ನರಬಂಧಿಯಾಗಿದೆ ನೋಟವೆಲ್ಲಾ ಸತ್ಯವಲ್ಲ ಅನುಭವ ಕಾಲದ ಕೂಸು ಸೋಲು ಕೂಡ ಮೌಲ್ಯವೇ ಗೆಲುವು ಇಲ್ಲಿ ಪೂರ್ಣವಿರಾಮ. ಮೆಲ್ಲನೆ ಉಸಿರಾಡೋಣ ಕಿವಿಗೆ ಕಣ್ಣಿದೆ ಎದೆಗೆ ಬಾಡಿಗೆ ಬಲೆಯ ಕಿಲುಬು ಹೆಣಿಗೆ. - ಅಂಕುರ

Reviews

ಸಹೃದಯನಿಗೆ ಕಾವ್ಯಾಸ್ವಾದ ಉಂಟಾಗುವುದು ಆ ಕವನದ ವಸ್ತು ಹಾಗೂ ನಿರೂಪಣೆಯು ಆತನ ಅನುಭವಕ್ಕೆ ದಕ್ಕಿದಾಗ ಮಾತ್ರ. ಈ ಕವನ ಸಂಕಲನದಲ್ಲಿನ ಕವನಗಳು ಓದುವಾಗ ನಮ್ಮ ಸುತ್ತಮುತ್ತ ನಡೆದ ಘಟನೆಗೆ ಎಡತಾಗುತ್ತದೆ, ನೆನಪಿಸುತ್ತದೆ, ಕೆಣುಕುತ್ತದೆ ಮತ್ತು ನಮ್ಮೊಳಗೆ ಅಗೋಚರವಾದ ಸಾಮಾಜಿಕ ಪ್ರಜ್ಞೆಯನ್ನು, ಜವಾಬ್ದಾರಿಯನ್ನು ಜಾಗೃತಗೊಳಿಸುತ್ತದೆ. ಮುಖ್ಯವಾಗಿ ಅಲೋಚನೆಗೆ ಹಚ್ಚುತ್ತದೆ. ನಗರ ಕೇಂದ್ರಿತ ಜೀವನದಲ್ಲಿನ ಒಳಸುಳಿಗಳು ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಮನುಷ್ಯನ ಸಂವೇದನೆಗಳು ಇಲ್ಲಿ ಕವನ ರೂಪದಲ್ಲಿ ದಾಖಲಾಗಿವೆ. ಗಾಂಧಿ, ಬುದ್ಧ, ಅಂಬೇಡ್ಕ‌ರ್ ಅವರ ತಾತ್ವಿಕತೆಗೂ ವಾಸ್ತವ ಚಿತ್ರಣಕ್ಕೂ ತಾಳೆ ನೋಡುವ ಕವನಗಳು ಮರು ಚಿಂತನೆಗೆ ದಾರಿ ಮಾಡಿಕೊಟ್ಟಿವೆ. ಸಾವು, ಬದುಕು, ಪ್ರೀತಿ ಈ ಪರಿಕಲ್ಪನೆಗಳು ಇಲ್ಲಿ ಹೊಸ ಬಗೆಯ ನೋಟವನ್ನು ಕಾಣಿಸುತ್ತವೆ. ಪುರಾಣಗಳು ಕಾಲ ದೇಶಗಳನ್ನು ಮೀರಿದ ಸಾರ್ವಕಾಲಿಕ ಸತ್ಯ ಎಂಬುದನ್ನು ಇಲ್ಲಿನ ಕವನಗಳು ಸಾಕ್ಷೀಕರಿಸಿವೆ. ಜೀವಂತಿಕೆಗೆ ಸ್ಪಂದಿಸುವ ಕೆಲವು ಕವನಗಳು ಮನಸ್ಸಿನಲ್ಲಿ ಉಳಿಯುತ್ತವೆ. ಮಧ್ಯಮವರ್ಗ, ಟ್ರೋಲು ಸ್ವಾಮಿ ಟ್ರೋಲು, ಅನ್ನದ ಬಟ್ಟು, ನವಿಲು ಕೋಗಿಲೆಯಲ್ಲ, ಮಗೂ ಮೊದಲಾದ ಕವನಗಳು ಮತ್ತೊಮ್ಮೆ ಓದಬೇಕು ಎನಿಸುವಂತಿವೆ. ಸಾಹಿತ್ಯ ಲೋಕಕ್ಕೆ ಮತ್ತೊಂದು ಮಹತ್ವದ ಕೃತಿಯನ್ನು ನೀಡಿದ ಅಂಕುರ ಅವರಿಗೆ ಅಭಿನಂದನೆಗಳು.

ಡಾ. ಪ್ರವೀಣ್ ಕುಮಾರ ಎಸ್.

Related Books