ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ

Author : ಮಲ್ಲಿಕಾರ್ಜುನ ಹೊಸಪಾಳ್ಯ

Pages 120

₹ 115.00




Year of Publication: 2018
Published by: ಧಾನ್ಯ ಪ್ರಕಾಶನ
Address: ತುಮಕೂರು

Synopsys

ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲಲಿತ ಪ್ರಬಂಧಗಳ ಸಂಕಲನ ’ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ’.

ಲೇಖಕರ ಜೀವನದ ಹಲವಾರು ಅನುಭವ ಪ್ರಸಂಗಗಳನ್ನು ಕಂಡುಂಡ ಬಗೆ ಈ ಪ್ರಬಂಧ ಸಂಕಲನದಲ್ಲಿದೆ.  ಗ್ರಾಮ್ಯ ಬದುಕು, ಭಾಷೆಯ ಸೊಗಡು, ಸುತ್ತಲಿನ ಸೂಕ್ಷ್ಮ ಪರಿಸರ , ಬಾಲ್ಯ ಜೀವನ, ಗ್ರಾಮೀಣ ಜನರ ವರ್ತನೆಗಳು ಇವೆಲ್ಲವನ್ನೂ ತಮ್ಮ ಜೀವನಾನುಭವದಲ್ಲಿ ಕಂಡ ಲೇಖಕರ ಪ್ರಬಂಧ ಬರಹಗಳು ಈ ಪುಸ್ತಕದಲ್ಲಿದೆ. ಅಲ್ಮೇರ ರಿಪೇರಿ, ಹೊಗೇನಕಲ್ – ಇನ್ನೊಂದು ಮುಖ, ಕೊರೆವ ಚಳಿ- ಉರಿವ ಬಿಸಿಲಿನ ಮಾಗಿಯ ಕಾಲ ಮುಂತಾದ ಪ್ರಬಂಧಗಳು ಇಲ್ಲಿವೆ.

About the Author

ಮಲ್ಲಿಕಾರ್ಜುನ ಹೊಸಪಾಳ್ಯ

ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಹೊಸಪಾಳ್ಯ. ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಅರ್ಥಶಾಸ್ತ್ರ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.  ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ...

READ MORE

Reviews

ಗ್ರಾಮ ಸೊಗಡಿನ ಲಲಿತ ಬರಹಗಳು

ಮಲ್ಲಿಕಾರ್ಜುನ ಹೊಸಪಾಳ್ಯ ಕಳೆದ ಹದಿನೈದು ವರ್ಷಗಳಿಂದ ವಿವಿಧ ಸಂದರ್ಭಗಳಲ್ಲಿ ಕಂಡುಂಡ ತಮ್ಮ ಜೀವನಾನುಭವದಿಂದ ಹಲವು ಪ್ರಸಂಗಗಳನ್ನು ಹೆಕ್ಕಿ ಇಲ್ಲಿ ಸ್ವಾರಸ್ಯಕರವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಮಲ್ಲಿಕಾರ್ಜುನ ಅವರು ಮಧುಗಿರಿ ತಾಲೂಕಿನ ಹೊಸಪಾಳ್ಯ ಗ್ರಾಮದ ಒಕ್ಕಲುತನದ ಹಿನ್ನೆಲೆಯುಳ್ಳವರಾಗಿದ್ದು ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು, ಮೈಸೂರು ನಗರಗಳನ್ನು ಸುತ್ತಿದವರು. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ದಟ್ಟ ಹಿನ್ನೆಲೆಯುಳ್ಳ ಅವರಲ್ಲಿ ಅದರ ಸೊಗಡಿನ ವ್ಯಕ್ತಿತ್ವ, ಭಾಷೆ ಮತ್ತು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಗಟ್ಟಿಯಾಗಿ ಮೈಗೂಡಿದೆ.

ಅವರ ಈ ಗ್ರಾಮೀಣ  ಹಿನ್ನೆಲೆಯ ಹತ್ತೊಂಬತ್ತು ಪ್ರಸಂಗಗಳನ್ನೊಳಗೊಂಡ ಈ ಪುಸ್ತಕದ ಬರಹದಲ್ಲಿನ ತುಮಕೂರು ಗ್ರಾಮೀಣ ಪರಿಸರದ ಜನರ ವಿಶಿಷ್ಟ ವರ್ತನೆಗಳು, ಸ್ಥಳೀಯ ಸೊಗಡಿನ ಭಾಷಾ ಶೈಲಿ ಮತ್ತು ಲೇಖಕರ ವಿಶಾಲ ಹರವಿನ ಆಸಕ್ತಿಗಳಿಂದ ಒದಗಿದ ಅನುಭವಗಳ ಸೊಗಸಾದ ಮತ್ತು ಲಘುಹಾಸ್ಯ ಮಿಶ್ರಿತ ವರ್ಣನೆಗಳಿಂದ ಓದುಗರನ್ನು ಸಾಕಷ್ಟು ರಂಜಿಸುವುದಲ್ಲದೆ ಸಮಕಾಲೀನ ಬದುಕಿನ ವಿವಿಧ ಮಗ್ಗುಲುಗಳ ಬಗ್ಗೆ ಹಲವು ಸೂಕ್ಷ್ಮ ಹೊಳಹುಗಳನ್ನು ಕೊಡುವಂತಿದೆ. 'ಕರಡಿ ಬೇಟೆ'ಯಲ್ಲಿನ ಬೇಟೆಯ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ವಿಶಿಷ್ಟ ವರ್ತನೆಗಳು, ಹಾಸ್ಯ ಪ್ರಸಂಗಗಳು, ಸ್ಥಳೀಯ ನುಡಿಗಟ್ಟುಗಳ ವಿನೋದಭರಿತ ಮಾತುಕತೆಗಳು ವಿಶೇಷ ರೋಮಾಂಚನವನ್ನ ಸೃಷ್ಟಿಸುತ್ತದೆ. 'ಪಕ್ಕದ ಮನೆಯ ಮುದ್ದಣ್ಣ ಮನೋರಮೆಯರು'ವಿನ ಒಂದು ತಳ ವರ್ಗ ಎನ್ನಬಹುದಾದ ದಂಪತಿಯರ ನಡುವೆ ಜಗಳದಿಂದ ಶುರುವಾಗಿ ಪ್ರಣಯದಲ್ಲಿ ಕೊನೆಗೊಳ್ಳುವ ದಾಂಪತ್ಯ ಸಂಬಂಧದಲ್ಲಿನ ವಿಶಿಷ್ಟ ಸೊಗಸಿನ ಆಯಾಮವನ್ನು ಕಟ್ಟಿಕೊಟ್ಟರೆ, ಸ್ಥಳೀಯವಾದ್ದೊಂದು ಕಸುಬು ಮಾಯವಾಗುತ್ತಿದ್ದ ಹಾಗೆ ಅದರ ಭಾಗವಾಗಿಯೇ ಬೆಳೆದುಬಂದ ದೇಸಿ ಜ್ಞಾನ, ಸಂಸ್ಕೃತಿ, ಕಥೆಗಳು, ಭಾಷಾಭಿವ್ಯಕ್ತಿ, ತಮಾಷೆಗಳು, ಪೋಲಿತನ ಎಲ್ಲವೂ ಮಾಯವಾಗಿ ಕೇವಲ ವ್ಯಾಪಾರಿಗಳ ದಾಸರಾಗುವ ದುರಂತವನ್ನು ಅತ್ಯಂತ ಹಾಸ್ಯದ ಹೊನಲಿನಲ್ಲಿ 'ಈಚಲು ಮರದ ಕಥೆ' ನಿರೂಪಿಸುತ್ತದೆ. ಆಧುನಿಕ ಶಿಕ್ಷಣ ರೂಪಿಸುತ್ತಿರುವ ಟೊಳ್ಳು ವ್ಯಕ್ತಿತ್ವಗಳನ್ನೂ ಮತ್ತು ಅದರ ವಿಪರ್ಯಾಸವನ್ನು ಹೇಳುವ 'ಪರಿಸರ ಸಂರಕ್ಷಕರು ಮಾಡಿದ ಕೊಲೆ', ಜಾಗತೀಕರಣದ ಪರಿಣಾಮ ಗ್ರಾಮೀಣ ಪರಿಸರವನ್ನೂ ತಟ್ಟಿ ಆಹಾರ ಪದ್ಧತಿಯಲ್ಲಿ ಆದ ಕ್ರಾಂತಿಕಾರಕ ಬದಲಾವಣೆ ಮತ್ತು ಜನರಲ್ಲಿ ಅದು ಮೂಡಿಸಿದ ರೋಮಾಂಚನದ ಪ್ರಸಂಗವನ್ನು ಅತ್ಯುತ್ತಮ ಹರಟೆಯ ಶೈಲಿಯಲ್ಲಿ ಹೇಳುವ 'ಪಲಾವೀಕರಣ', 'ಹುಲಿ ಬೇಟೆಯ ಜಾಡಿನಲ್ಲಿ' ಪ್ರವಾಸಿ ಕಥನದಲ್ಲಿನ ಅನ್ವೇಷಣಾತ್ಮಕ ಸಾಹಸಶೀಲ ಮನಸ್ಸು ಪಡುವ ರೋಮಾಂಚನ, ಗ್ರಾಮೀಣ ಕೃಷಿ ಮತ್ತು ಅದರ ಸಾಂಸ್ಕೃತಿಕ ಬದುಕಿನ ಸ್ಪರ್ಶ ಪಡೆದು ಸಂಪ್ರೀತಗೊಂಡು ಹೊಸ ನೋಟವನ್ನು ಪಡೆದುಕೊಳ್ಳುವ ನಗರೀಕೃತ ಮನಸ್ಸುಗಳ 'ನೆಟ್ಟಿ ಪ್ರವಾಸ'ದಂತಹ ಪ್ರಸಂಗಗಳ ನಿರೂಪಣೆ ಓದುಗರಿಗೆ ಹಲವು ವಿಶಿಷ್ಟ ಅನುಭವಗಳನ್ನು ನೀಡಿ ಗಮನ ಸೆಳೆಯುತ್ತದೆ. ಹಲವಾರು ವಿಶೇಷವಾದ ಕನ್ನಡ ಪದಗಳ ತಿಳುವಳಿಕೆ ಮತ್ತು ಅವುಗಳನ್ನು ಬಳಸುವ ವಿಶಿಷ್ಟ ಶೈಲಿಯ ಆಸ್ವಾದನೆಯನ್ನೂ ಒದಗಿಸುತ್ತದೆ. ಲೇಖಕರ ಸಮೃದ್ದ ಭಾಷೆ ಮತ್ತು ನಿರೂಪಣಾ ವೈಶಿಷ್ಟತೆ ಪುಸ್ತಕದಲ್ಲಿ ಶಕ್ತಿಶಾಲಿಯಾಗಿ ಮೂಡಿಬಂದಿದೆ.

ಇನ್ನು ತಮ್ಮ ನಿರೂಪಣೆಯನ್ನು ಆಕರ್ಷಕಗೊಳಿಸುವ, ಓದುಗರನ್ನು ಸೆಳೆಯುವ ಪ್ರಯತ್ನವಾಗಿಯೋ ಎಂಬಂತೆ ರೋಚಕತೆಯನ್ನೂ, ದಂಡಿಯಾಗಿ ಇಂಗ್ಲಿಷ್ ಪದಗಳನ್ನು, ಅದೂ ಒಂದು ಹಾಸ್ಯಮಯ ಶೈಲಿಗಾಗಿ, ಯಥೇಚ್ಛವಾಗಿ ಬಳಸುವುದು ತಮ್ಮ ಬರವಣಿಗೆಯ ಹದ ತಪ್ಪಿಸುತ್ತದೆ ಎಂಬುದು ಲೇಖಕರಿಗೆ ಗೊತ್ತಿದ್ದಂತಿಲ್ಲ. ಇನ್ನು 'ಅಲ್ಮೇರಾ ರಿಪೇರಿ' , 'ಹೊಗೇನಕಲ್-ಇನ್ನೊಂದು ಮುಖ', 'ಕೊರೆವ ಚಳಿ ಉರಿವ ಬಿಸಿಲಿನ ಮಾಗಿಯ ಕಾಲ' ಇತ್ಯಾದಿ ಪ್ರಬಂಧಗಳು ಭಾಷಾ ವರ್ಣನೆಯಲ್ಲಿ ಸುಂದರವಾಗಿದ್ದರೂ ತಮ್ಮ ಬರವಣಿಗೆಯ ಆರಂಭಿಕ ಹಂತದಲ್ಲಿ ಬರೆದಂತಿದ್ದು ಇವು ಈ ಸಂಗ್ರಹದಲ್ಲಿ ಇರುವ ಅಗತ್ಯವಿರಲಿಲ್ಲ ಎನಿಸದಿರದು.

-ಬಿ.ವಿ. ಸುರೇಂದ್ರ

ಕೃಪೆ : ಹೊಸ ಮನುಷ್ಯ (ಏಪ್ರಿಲ್ 2019)

Related Books