“ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ ʻಸೆರೆಂಡಿಪಿಟಿ”: ಶ್ರೀವತ್ಸ ಜೋಶಿ


“ಪರಂತು ಮನುಕುಲವನ್ನು ಕಾಲಾನುಕಾಲಕ್ಕೆ ಬಾಧಿಸುತ್ತಲೇ ಬಂದಿರುವ ಕಾಯಿಲೆಗಳು, ಅವುಗಳನ್ನು ಮೆಟ್ಟಿ ನಿಲ್ಲಲು ನಡೆದಿರುವ ಮತ್ತು ಯಶಸ್ಸು ಕಂಡಿರುವ ಪ್ರಯತ್ನಗಳು, ಉದ್ದೇಶಿಸಿರದ ಆದರೆ ಒಳ್ಳೆಯ ಫಲಿತಾಂಶ ಬೀರಿದ ಘಟನೆಗಳು ಮತ್ತು ಬೆಳವಣಿಗೆಗಳು- ಇವೆಲ್ಲವನ್ನು ವಿಶೇಷವಾಗಿ ಪ್ರಸ್ತುತ ಕೋವಿಡಾಯಣ ಕಾಲಘಟ್ಟದಲ್ಲಿ ಓದಿ ತಿಳಿದುಕೊಳ್ಳುವುದು ಒಂದು ವಿಶೇಷ” ಎನ್ನುತ್ತಾರೆ ಶ್ರೀವತ್ಸ ಜೋಶಿ. ಅವರು ಕಿರಣ್‌ ವಿ.ಎಸ್.‌ ಅವರ ʻಸೆರೆಂಡಿಪಿಟಿʼ ಪುಸ್ತಕದಲ್ಲಿ ʻಮುನ್ನೋಟʼ ಶೀರ್ಷಿಕೆಯಡಿ ಬರೆದ ಸಾಲುಗಳು ನಿಮ್ಮ ಓದಿಗಾಗಿ...

ಅರಸುತ್ತಿದ್ದ ಬಳ್ಳಿ ಬಂದು ಕಾಲಿಗೆ ತೊಡರಿತು ಅಂತೊಂದು ಗಾದೆ ಮಾತಿದೆ. ಯಾವುದೋ ವಸ್ತುವನ್ನು ಹುಡುಕುವುದಕ್ಕಾಗಿ ಎಲ್ಲಿಲ್ಲದ ಶ್ರಮ ಸಮಯ ವ್ಯಯಿಸಲು ತಯಾರಿರುತ್ತೇವೆ, ಆದರೆ ಅದೃಷ್ಟವಷಾತ್ ಆ ವಸ್ತು ತುಂಬ ಸುಲಭವಾಗಿಯೇ ಸಿಕ್ಕಿಬಿಡುತ್ತದೆ. ಅಂಥ ಸನ್ನಿವೇಶದ ಬಣ್ಣನೆಗೆ ಈ ಗಾದೆಯನ್ನು ಬಳಸುತ್ತೇವೆ. ಮತ್ತೆ ಕೆಲವೊಮ್ಮೆ ಹೀಗೂ ಆಗುವುದಿದೆ- ಯಾವುದೋ ವಸ್ತುವನ್ನು ಹುಡುಕುವುದಕ್ಕಾಗಿ ಎಲ್ಲಿಲ್ಲದ ಶ್ರಮ ಸಮಯ ವ್ಯಯಿಸಿರುತ್ತೇವೆ, ಆ ವಸ್ತುವಂತೂ ಇನ್ನೂ ಸಿಕ್ಕಿರುವುದಿಲ್ಲ, ಆದರೆ ಬೇರೆಯೇ ಒಂದು ವಸ್ತು ಬಳ್ಳಿಯಂತೆ ಬಂದು ಕಾಲಿಗೆ ತೊಡರಿಕೊಳ್ಳುತ್ತದೆ. ಬಳ್ಳಿಯೆಂದರೆ ಸಾಮಾನ್ಯ ಬಳ್ಳಿ ಅಲ್ಲ, ಅಮೃತಬಳ್ಳಿ! ಅದು ಸಿಕ್ಕ ಸಂಭ್ರಮ ಎಷ್ಟಿರುತ್ತದೆಂದರೆ ಅಸಲಿ ಹುಡುಕಾಟವನ್ನು ನಾವು ಕೈಬಿಟ್ಟುಬಿಡುವುದೂ ಇದೆ! ಒಂದು ಒಳ್ಳೆಯ ಉದಾಹರಣೆ ಕೊಡು ವುದಾದರೆ, ಪ್ರಾಣಿಗಳ ಬೇಟೆಗೆಂದು ಕಾಡಿಗೆ ಹೋಗಿದ್ದ ದುಷ್ಯಂತ ಮಹಾರಾಜನಿಗೆ ಕಣ್ವಮಹರ್ಷಿಯ ಆಶ್ರಮದ ಬಳಿಯಲ್ಲಿ ಚೆಲುವೆ ಶಕುಂತಲೆ ಭೇಟಿಯಾದದ್ದು. ಇಂಥ ಸನ್ನಿವೇಶದ ಬಣ್ಣನೆಗೆ ನನಗೆ ಗೊತ್ತಿದ್ದಂತೆ ಕನ್ನಡದಲ್ಲಿ ಗಾದೆ ಮಾತಿಲ್ಲ. ಆದರೆ ಇಂಗ್ಲಿಷ್ ಭಾಷೆಯಲ್ಲೊಂದು ಶಕುಂತಲೆಯಷ್ಟೇ ಅತಿ ಸುಂದರವಾದ ಪದ ಇದೆ, ಅದೇ Serendipity ಎಂಬ ಪದ. ಸೆರೆಂಡಿಪಿಟಿ ಎಂದು ಉಚ್ಚಾರ. ನಿಘಂಟು ತೆರೆದು ನೋಡಿದರೆ the occurrence and development of events by chance in a happy or beneficial way ಎಂಬ ಅರ್ಥ.

ಈ ಸೆರೆಂಡಿಪಿಟಿ ಎಂಬ ಸುಂದರ ಪದ ಇಂಗ್ಲಿಷ್ ಭಾಷೆಗೆ ಸೇರಿಕೊಂಡಿದ್ದೂ ಒಂದು ಸ್ವಾರಸ್ಯಕರ ಕಥೆ. ತುಂಬ ಹಿಂದೆ ಶೇಕ್ಸ್‌ಪಿಯರ್‌ನ ಕಾಲದಲ್ಲೆಲ್ಲ ಇದು ಇಂಗ್ಲಿಷ್ ಭಾಷೆಯ ಶಬ್ದಭಂಡಾರದಲ್ಲಿ ಇರಲಿಲ್ಲ. ಈಗ್ಗೆ 266 ವರ್ಷಗಳ ಹಿಂದೆ, ಅಂದರೆ 1754ರಲ್ಲಿ, ಹೊರಾಸ್ ವಾಲ್ಲೋಲ್ ಎಂಬ ಆಂಗ್ಲ ಲೇಖಕ (ಆತ ಒಬ್ಬ ರಾಜಕಾರಣಿಯೂ ಆಗಿದ್ದನಂತೆ) ತನ್ನ ಸ್ನೇಹಿತ ಹೊರಾಸ್ ಮಾನ್ಸ್ ಎಂಬುವನಿಗೆ ಬರೆದ ಪತ್ರದಲ್ಲಿ ಮೊತ್ತಮೊದಲ ಬಾರಿ ಈ ಪದವನ್ನು ಬಳಸಿದನಂತೆ. 'ಸೆ- ರೆಂಡಿಷ್ ದೇಶದ ಮೂವರು ರಾಜಕುಮಾರರು' ಎಂದು ಪರ್ಷಿಯಾದ ಒಂದು ಜನಪದ ಕಥೆ. ಅದನ್ನು ಸ್ನೇಹಿತನಿಗೆ ವಿವರಿಸುವಾಗ ಹೊರಾಸ್ ವಾಲ್ವೇಲ್ 'ಸೆರೆಂಡಿಪಿಟಿ' ಎಂಬ ಪದವನ್ನು ಟಂಕಿಸಿದ್ದು. ಸೆರೆಂಡಿಷ್ ದೇಶ ಅಂದರೆ ಯಾವುದು? ಅದೊಂದು ದ್ವೀಪರಾಷ್ಟ್ರ, ಭೂಪಟದಲ್ಲಿ ನಮ್ಮ ಭಾರತದ ದಕ್ಷಿಣಕ್ಕಿರುವ ಶ್ರೀಲಂಕಾ ಇರಬಹುದು. ಅಥವಾ ಇನ್ನೂ ಸ್ವಲ್ಪ ಆಗ್ನೇಯ ದಿಕ್ಕಿನತ್ತ ಹೋದರೆ ಸಿಗುವ ಹತ್ತು ಹಲವು ದ್ವೀಪರಾಷ್ಟ್ರಗಳ ಪೈಕಿಯದೂ ಇರಬಹುದು. ಏಕೆಂದರೆ, ಸಿಂಹಳ ದ್ವೀಪವನ್ನೂ ಸ್ವರ್ಣದ್ವೀಪ ಎನ್ನುವುದಿದೆ. ಆಗ್ನೆಯ ಏಷ್ಯಾದ ಬೇರೆ ಕೆಲ ದ್ವೀಪಗಳನ್ನೂ ಪ್ರಾಚೀನ ಸಾಹಿತ್ಯದಲ್ಲಿ ಸ್ವರ್ಣದ್ವೀಪ ಎಂದು ಬಣ್ಣಿಸಿದ್ದಿದೆ. 'ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ । ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ' (ಎಲೈ ಲಕ್ಷ್ಮಣನೇ, ಲ೦ಕೆಯು ಸ್ವರ್ಣಮಯಿಯೇ ಇರಬಹುದು, ಆದರೆ ನನಗಿದರಲ್ಲಿ ಆಸಕ್ತಿಯಿಲ್ಲ. ನನ್ನ ತಾಯಿ ಮತ್ತು ತಾಯಿನಾಡು ಇವೆರಡೂ ಸ್ವರ್ಗಕ್ಕಿಂತಲೂ ಶ್ರೇಷ್ಠವಾದುವು) ಎಂಬ ಶ್ರೀರಾಮ ಉವಾಚವನ್ನು ಇಲ್ಲೊಮ್ಮೆ ನೆನಪಿಸಿಕೊಳ್ಳಿ. ನಮ್ಮ ಸಂಸ್ಕೃತ ಭಾಷೆಯ 'ಸ್ವರ್ಣದ್ವೀಪ'ವೇ ಪರ್ಷಿಯನ್ನರ ಬಾಯಿಯಲ್ಲಿ ಸೆರೆಂಡಿಷ್ ಆದದ್ದಿರಬೇಕು. ಸ್ವರ್ಣದ್ವೀಪದ ಜನರ ಗುರುತನ್ನು ಭಾವವಾಚಕವಾಗಿ ಸ್ವರ್ಣದ್ವೀಪತ್ವ ಎಂದರೆ ಹೇಗೋ ಹಾಗೆ ಸೆರೆಂಡಿಷ್ ದೇಶದ ಪ್ರಜೆಗಳ ಗುರುತು ಸೆರೆಂಡಿಪಿಟಿ ಆಯಿತು!

ಏನದು ಸೆರೆಂಡಿಷ್ ದೇಶದ ಪ್ರಜೆಗಳ ಗುರುತು? ಅದು ಗೊತ್ತಾಗಬೇಕಾದರೆ ನಾವು ಆ ಮೂವರು ರಾಜಕುಮಾರರ ಕಥೆಯನ್ನೂ ಅರಿತುಕೊಳ್ಳಬೇಕು. ಒಂದಾನೊಂದು ಕಾಲದಲ್ಲಿ ಸೆರೆಂಡಿಪ್ ದೇಶವನ್ನು ಜ್ಯಾಫ‌ ಎಂಬ ಹೆಸರಿನ ರಾಜನು ಆಳುತ್ತಿದ್ದನಂತೆ. ಆತನಿಗೆ ಮೂವರು ಗಂಡು ಮಕ್ಕಳು. ಆ ರಾಜಕುಮಾರರು ಬೆಳೆದು ದೊಡ್ಡವರಾಗುತ್ತಿದ್ದಾಗ ಅವರ ಬುದ್ದಿಮತ್ತೆ ಮತ್ತು ಅಧಿಕಾರ- ಯೋಗ್ಯತೆಯನ್ನು ಪರೀಕ್ಷಿಸಬೇಕೆಂದು ರಾಜ ಅಂದುಕೊಂಡನು. ಅದಕ್ಕೋಸ್ಕರ ಮೂವರನ್ನೂ ಸೆರೆಂಡಿಪ್‌ನಿಂದ ಹೊರಕ್ಕೆ ಪ್ರಪಂಚ ನೋಡಿಕೊಂಡು ಬರಲು ಕಳುಹಿಸಿದನು. ರಾಜಕುಮಾರರು ವಿದೇಶಗಳಲ್ಲಿ ಕಾಡುಮೇಡುಗಳನ್ನು ಅಲೆಯುತ್ತ ನದಿಪರ್ವತಗಳನ್ನು ದಾಟುತ್ತ ಕೊನೆಗೆ ಒಂದು ಮರುಭೂಮಿಯನ್ನು ತಲುಪಿದರು. ಅಲ್ಲಿ ಒಬ್ಬ ವ್ಯಾಪಾರಿಯನ್ನು ಭೇಟಿಯಾದರು. ಆ ವ್ಯಾಪಾರಿಯ ಒಂಟೆಯು ಆಗಷ್ಟೇ ಅವನಿಂದ ತಪ್ಪಿಸಿಕೊಂಡದ್ದು ವ್ಯಾಪಾರಿಯು ಅದರ ಹುಡುಕಾಟದಲ್ಲಿದ್ದ, “ನೀವೇನಾದರೂ ನನ್ನ ಒಂಟೆಯನ್ನು ನೋಡಿದಿರಾ?” ಎಂದು ಆತ ರಾಜಕುಮಾರರನ್ನು ಕೇಳಿದ. “ಇಲ್ಲ” ಎಂದು ಅವರು ಪ್ರಾಮಾಣಿಕವಾಗಿ ಸತ್ಯವನ್ನೇ ನುಡಿದರು. ಆದರೂ ವ್ಯಾಪಾರಿಯನ್ನು ಕೇಳಿದರು: “ಆ ಒಂಟೆಯ ಒಂದು ಕಣ್ಣು ಕುರುಡಾಗಿತ್ತೇ? ಒಂದು ಹಲ್ಲು ಉದುರಿಹೋಗಿತ್ತೇ? ಒಂದು ಕಾಲನ್ನು ಕುಂಟುತ್ತ ನಡೆಯುತ್ತಿತ್ತೇ? ಅದರ ಬೆನ್ನಿಗೆ ಅಕ್ಕಪಕ್ಕ ಹೇರಿದ್ದ ಮೂಟೆಗಳ ಪೈಕಿ ಒಂದರಲ್ಲಿ ಜೇನು ಮತ್ತೊಂದರಲ್ಲಿ ಬೆಣ್ಣೆ ಇತ್ತೇ?” ಎಂದು.

ವ್ಯಾಪಾರಿಗೋ ಮಹದಾಶ್ಚರ್ಯ! ಒಂಟೆಯನ್ನು ನೋಡಿಲ್ಲವೆನ್ನುತ್ತಾರೆ, ಆದರೆ ತನ್ನದೇ ಒಂಟೆಯ ಕರಾರುವಾಕ್ಕಾದ ಬಣ್ಣನೆ ಮಾಡುತ್ತಿದ್ದಾರೆ! ಇದು ಹೇಗೆ ಸಾಧ್ಯ? “ಒಂಟೆಯನ್ನು ರಾಜಕುಮಾರರೇ ಕದ್ದಿರಬೇಕು” ಎಂದು ವ್ಯಾಪಾರಿಯು ಅವರ ಮೇಲೆ ಆರೋಪ ಮಾಡಿ, ಅವರನ್ನೂ ಕರೆದುಕೊಂಡು ತನ್ನ ಚಕ್ರವರ್ತಿಯ ಬಳಿಗೆ ನ್ಯಾಯಕ್ಕಾಗಿ ಹೋದನು. “ನೀವು ಒಂಟೆಯನ್ನು ನೋಡಿಲ್ಲವೆಂದಾದರೆ ಅಷ್ಟು ನಿಖರವಾಗಿ ಅದರ ಬಗ್ಗೆ ಹೇಗೆ ಹೇಳುತ್ತಿದ್ದೀರಿ?' ಎಂದು ಚಕ್ರ ವರ್ತಿಯು ರಾಜಕುಮಾರರನ್ನು ಕೇಳಿದನು. ಆಗ ರಾಜಕುಮಾರರು ಹೀಗೆಂದರು: “ದಾರಿಯ ಒಂದು ಬದಿಯ ಹುಲ್ಲು ಹುಲುಸಾಗಿ ಬೆಳೆದಿದೆ, ಇನ್ನೊಂದು ಬದಿಯ ಹುಲ್ಲನ್ನು ಯಾವುದೋ ಪ್ರಾಣಿ ಮೇಯುತ್ತ ಸಾಗಿದೆಯೆಂದು ಗೊತ್ತಾಗುತ್ತಿದೆ, ಆದ್ದರಿಂದ ವ್ಯಾಪಾರಿಯ ಒಂಟೆಗೆ ಒಂದು ಕಣ್ಣು ಕುರುಡಾಗಿರಬೇಕು. ಹಾಗೆಯೇ, ಹುಲ್ಲು ಮೇಯ್ದಿರುವ ಬದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಲ್ಲಿ ಹುಲ್ಲಿನ ಒಂದಿಷ್ಟು ಗುಪ್ಪೆಗಳು ಒಂಟೆಯ ಒಂದು ಹಲ್ಲಿನಷ್ಟು ಗಾತ್ರದವು ಬಿದ್ದಿವೆ, ಹುಲ್ಲನ್ನು ಮೇಯುವಾಗ ಹಲ್ಲಿಲ್ಲದೆಡೆಯಿಂದ ಬಿದ್ದಿರಬೇಕು. ಒಂಟೆ ನಡೆದ ಹಾದಿಯಲ್ಲಿ ಎಲ್ಲ ಕಡೆ ಮೂರು ಗೆರಸು(ಹೆಜ್ಜೆ) ಗುರುತುಗಳು ಕಾಣುತ್ತಿವೆ, ಒಂದು ಕಾಲನ್ನು ಎಳೆದುಕೊಂಡು ನಡೆಯುತ್ತಿತ್ತೆಂದು ಗೊತ್ತಾಗುತ್ತಿದೆ. ಹಾದಿಯ ಒಂದು ಬದಿಯಲ್ಲಿ ಇರುವೆಗಳೂ ಮತ್ತೊಂದು ಬದಿಯಲ್ಲಿ ನೊಣ ಗಳೂ ಇವೆ, ಅದರರ್ಥ ಒಂಟೆಯ ಬೆನ್ನಿಗೆ ಕಟ್ಟಿದ ಹೊರೆಗಳಲ್ಲಿ ಒಂದರಲ್ಲಿ ಜೇನುತುಪ್ಪವೂ ಇನ್ನೊಂದರಲ್ಲಿ ಬೆಣ್ಣೆಯೂ ಇದ್ದಿರಬೇಕು”! ಚಕ್ರವರ್ತಿಯ ಬಳಿ ರಾಜಕುಮಾರರು ಇದನ್ನೆಲ್ಲ ನಿವೇದಿಸುವಷ್ಟರಲ್ಲೇ ಅಲ್ಲೊಬ್ಬ ಆಗಂತುಕನು ಒಂದು ಒಂಟೆಯೊಂದಿಗೆ ಬಂದನು. ಅದು ವ್ಯಾಪಾರಿಯು ಕಳೆದುಕೊಂಡಿದ್ದ ಒಂಟೆಯೇ! ಚಕ್ರವರ್ತಿಯು ರಾಜಕುಮಾರರ ಅದ್ಭುತ ಜಾಣೆಗೆ ಬೆರಗಾಗಿ ಮೂವರನ್ನೂ ತನ್ನ ಸಲಹೆಗಾರರಾಗುವಂತೆ ಕೇಳಿಕೊಂಡನು. “ಇಲ್ಲ; ನಾವು ಸೆ- ರೆಂಡಿಪ್ ದೇಶಕ್ಕೆ ಮರಳುತ್ತಿದ್ದೇವೆ' ಎಂದು ಹೇಳಿ, ಅವನ ಅಪ್ಪಣೆ ಪಡೆದು ರಾಜಕುಮಾರರು ತಾಯ್ನಾಡಿಗೆ ಮರಳಿದರು. ಕಥೆಯ ಸಾರಾಂಶವೇನೆಂದರೆ, ಉದ್ದೇಶಿಸಿರದ, ಆದರೆ ಒಳ್ಳೆಯ ಘಟನೆ ಅಥವಾ ಬೆಳವಣಿಗೆ ನಡೆದಾಗ ಮೇಲ್ನೋಟಕ್ಕೆ ಅದು ಸಂಪೂರ್ಣವಾಗಿ ಅದೃಷ್ಟದಿಂದಲೇ ಸಂಭವಿಸಿದುದೆಂದು ಕಂಡುಬಂದರೂ, ನಿಜವಾಗಿಯಾದರೆ ಅಲ್ಲಿ ನಮ್ಮ ಸೂಕ್ಷ್ಮಗ್ರಾಹಿತನ, ಸುತ್ತಮುತ್ತಲಿನ ಸಂಗತಿಗಳನ್ನು ಗಮನವಿಟ್ಟು ನೋಡುವುದು ಇದ್ದೇ ಇರುತ್ತದೆ. ದುಷ್ಯಂತನಾದರೂ ಅಷ್ಟೇ, ಬರೀ ಚಿಗರೆಗಳ ಮೇಲಷ್ಟೇ ದೃಷ್ಟಿಯಿಟ್ಟುಕೊಂಡು ಹೋಗಿದ್ದರೆ ಚಿಗರೆ ಕಂಗಳ ಚೆಲುವೆ ಅವನ ದೃಷ್ಟಿಗೆ ಬೀಳುತ್ತಿರಲಿಲ್ಲವೇನೋ!

ನಾವೆಲ್ಲ ಇಷ್ಟ ಪಡುವ ಕೆಲವು ತಿಂಡಿಗಳು ಹುಟ್ಟಿಕೊಂಡದ್ದೂ ಸೆರೆಂಡಿಪಿಟಿಯೇ. ಉದಾಹರಣೆಗೆ ಮೈಸೂರುಪಾಕ್. ಕೃಷ್ಣರಾಜ ಒಡೆಯರ್‌ರ ಆಡಳಿತ ಕಾಲದಲ್ಲಿ ನಡೆದ ಘಟನೆ. ವಿವಿಧ ಆಹಾರ ರುಚಿಗಳ ಬಗ್ಗೆ ಉತ್ತಮ ಅಭಿರುಚಿ ಹೊಂದಿದ್ದ ಅರಸರು ಅಂಬಾವಿಲಾಸ ಅರಮನೆಯಲ್ಲಿ ದೊಡ್ಡದೊಂದು ಪಾಕ- ಶಾಲೆಯನ್ನು ವ್ಯವಸ್ಥೆಗೊಳಿಸಿದ್ದರಂತೆ. ಯುರೋಪ್‌ನ ಖಾದ್ಯವೈವಿಧ್ಯದಿಂದ ಹಿಡಿದು ಅರಮನೆಯ ವಿವಿಧ ದೇವಾಲಯಗಳಲ್ಲಿ ನೈವೇದ್ಯ ಪ್ರಸಾದಗಳ ವರೆಗೆ ತರಹೇವಾರಿ ತಿಂಡಿತಿನಸುಗಳು ಅಲ್ಲಿ ತಯಾರಾಗುತ್ತಿದ್ದವು. ಕಾಕಾಸುರ ಮಾದಪ್ಪ ಎಂಬುವರು ಅರಮನೆಯ ಮುಖ್ಯ ಬಾಣಸಿಗ. ಒಮ್ಮೆ ಕೃಷ್ಣರಾಜ ಒಡೆಯರು ವಿದೇಶೀ ಗಣ್ಯರೊಬ್ಬರ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು. ಎಲ್ಲ ಸಿದ್ಧವಾಗಿತ್ತು, ಆದರೆ ಸಿಹಿತಿಂಡಿ (ಡೆಸರ್ಟ್) ಮಾಡಲಿಕ್ಕೆ ಮಾದಪ್ಪ ಮರೆತು ಹೋಗಿದ್ದರು. ರಾಜದರ್ಬಾರಿನಲ್ಲಿ ಭೋಜನಾಪೂರ್ವ ಶಿಷ್ಟಾಚಾರಗಳೆಲ್ಲ ಆಗಲೇ ಆರಂಭವಾಗಿಬಿಟ್ಟಿವೆ. ಸಮಯವಿಲ್ಲ, ಏನಪ್ಪಾ ಮಾಡೋದು ಎಂದು ಚಿಂತಿತರಾದ ಮಾದಪ್ಪ ಅಡುಗೆಮನೆಯಲ್ಲಿದ್ದ ಒಂದಿಷ್ಟು ಕಡ್ಲೆಹಿಟ್ಟು, ತುಪ್ಪ, ಮತ್ತು ಸಕ್ಕರೆಗಳನ್ನು ಬೆರೆಸಿ ಹದವಾದ ಉರಿಯ ಮೇಲೆ ಬಾಣಲೆಯಲ್ಲಿ ಗೊಟಾಯಿಸಿ ಒಂದು 'ಪಾಕ' ತಯಾರಿಸಿಯೇಬಿಟ್ಟರು. ಅದನ್ನೇ ಡೆಸರ್ಟ್ ಎಂದು ಭೋಜನಶಾಲೆಗೆ ಸೇವಕರ ಮೂಲಕ ಕಳುಹಿಸಲಾಯಿತು. ಮಹಾರಾಜರಿಗೂ ವಿದೇಶೀ ಗಣ್ಯರಿಗೂ ಅದು ಅಪಾರವಾಗಿ ಮೆಚ್ಚುಗೆಯಾಯಿತು. ಮಾದಪ್ಪನನ್ನು ಕರೆಸಿ “ಏನಿದು ಹೊಸ ರೀತಿಯ ಭಕ್ಷ್ಯ? ಬಹಳ ರುಚಿಕರವಾಗಿದೆ. ಏನಿದರ ಹೆಸರು?” ಎಂದು ಕೇಳಿದರು. ಎಲ್ಲಿ ಬೈಯುತ್ತಾರೇನೋ ಎಂದು ಅಳುಕಿನಿಂದಲೇ ಹೋಗಿದ್ದ ಮಾದಪ್ಪನಿಗೆ ಆಶ್ಚರ್ಯ. “ಮಹಾಸ್ವಾಮೀ, ಇದು ಮೈಸೂರುಪಾಕ್” ಎಂದು ಆ ಕ್ಷಣದಲ್ಲಿ ತಲೆಗೆ ಹೊಳೆದದ್ದನ್ನೇ ಉಸುರಿದ ಮಾದಪ್ಪ. ಈಗ ದಕ್ಷಿಣ ಭಾರತದಲ್ಲೇ ಅತ್ಯಧಿಕ ಮಾರಾಟವಾಗುವ ಸಿಹಿತಿಂಡಿ ಎಂಬ ಖ್ಯಾತಿಯ ಮೈಸೂರುಪಾಕ್‌ನ ಪಿತಾಮಹ! ಭಾರತದಲ್ಲಿ ಬಹುವಿಧ ಭಕ್ಷ್ಯಭೋಜ್ಯಗಳಲ್ಲಿ ಯಾವುವೆಲ್ಲ ಹೀಗೆ ಆಕಸ್ಮಿಕ ಆವಿಷ್ಕಾರವಾದಂಥವೋ ಯಾರಿಗೆ ಗೊತ್ತು!

ಐಸ್‌ಕ್ರೀಂ ಕೋನ್. ಸೆರೆಂಡಿಪಿಟಿಯ ಬಗ್ಗೆ ಮಾತಾಡಿದಾಗೆಲ್ಲ ಇದರ ಉಲ್ಲೇಖ ಬರಲೇಬೇಕು. ಕೋನ್‌ನ ಆವಿಷ್ಕಾರವಾಗುವ ಮೊದಲೇ ಐಸ್‌ಕ್ರೀಂ ಸಾಕಷ್ಟು ಜನಪ್ರಿಯವಾಗಿತ್ತು. 1904ರಲ್ಲಿ ಅಮೆರಿಕದ ಸೈಂಟ್ ಲೂಯಿ ನಗರದ ಲ್ಲಿ ನಡೆದ ವರ್ಲ್ಡ್ ಫೇರ್‌ನಲ್ಲಿ ಐಸ್‌ಕ್ರೀಂ ಮಾರಾಟ ಭರದಿಂದ ಸಾಗಿತ್ತು. ಒಂದು ಸ್ಟಾಲ್‌ನಲ್ಲಿ ಐಸ್‌ಕ್ರೀಂ ಮಾರುತ್ತಿದ್ದವನ ವ್ಯಾಪಾರ ಎಷ್ಟು ಭರಾಟೆಯದಿತ್ತೆಂದರೆ, ಅವನ ಬಳಿಯಿದ್ದ ಖಾಲಿ ಕಪ್‌ಗಳೆಲ್ಲ ಮುಗಿದುಹೋದವು. ಗಿರಾಕಿಗಳು ಇನ್ನೂ ದುಂಬಾಲುಬೀಳುತ್ತಿದ್ದಾರೆ. ಏನಪ್ಪಾ ಮಾಡೋದು ಎಂದು ಆತ ಚಿಂತಾಕ್ರಾಂತನಾಗಿದ್ದಾಗ, ಪಕ್ಕದ ಸ್ಟಾಲ್‌ನಲ್ಲಿ ಕ್ರಿಸ್ಪಿ ಪೇಸ್ಟ್ರಿ ಎಂಬ ಚಪ್ಪಟೆ ಸಿಹಿರೊಟ್ಟಿಗಳನ್ನು ಮಾರುತ್ತಿದ್ದ ಸಿರಿಯನ್ ವ್ಯಾಪಾರಿ ಹಾಮ್‌ ಎಂಬಾತ ತನ್ನಲ್ಲಿದ್ದ ಚಪ್ಪಟೆ ಸಿಹಿರೊಟ್ಟಿಗಳನ್ನು ಶಂಕುವಿನಾಕಾರದಲ್ಲಿ ಸುರುಳಿಸುತ್ತಿ ಕಡ್ಲೆಕಾಯಿ ತುಂಬಲಿಕ್ಕೆ ಕಾಗದದ ಪೊಟ್ಟಣ ಮಾಡುತ್ತೇವಲ್ವಾ ಅದೇ ರೀತಿ ಐಸ್‌ಕ್ರೀಂ ಸ್ಟಾಲ್‌ನವನಿಗೆ ಕೊಟ್ಟ. ಆತ ಆ ಶಂಕು ಆಕೃತಿಗಳೊಳಗೆ ಐಸ್‌ಕ್ರೀಂ ತುಂಬಿ ಗಿರಾಕಿಗಳಿಗೆ ಮಾರಿದ. “ಕಪ್ ಐಸ್‌ಕ್ರೀಂಗಿಂತ ಇದೇ ಚೆನ್ನ” ಎಂದು ಅದು ಏಕ್‌ದಂ ಸುಪರ್‌ಹಿಟ್ ಆಯಿತು. ಅಮೆರಿಕದ ತಿಂಡಿತಿನಸುಗಳ ಪೈಕಿ ಐಸ್‌ಕ್ರೀಂ ಕೋನ್ ಮಾತ್ರವಲ್ಲ, ಪಾಕಲ್ಸ್(ಐಸ್‌ಕ್ಯಾಂಡಿ), ಚೀಸ್ ಪಫ್, ನಾಚೋಸ್, ಚಾಕೋಲೆಟ್ ಚಿಪ್ ಕೂಕೀಸ್, ಡಿಪ್ಪಿನ್ ಡಾಟ್ಸ್, ಕ್ಲರ್ಪೀ, ಪಿಂಕ್ ಲೆ- ಮನೇಡ್ ಮುಂತಾದುವೆಲ್ಲವೂ, ಅಮೆರಿಕನ್ನರಿಗೆಲ್ಲ ವಾರದ ದಿನಗಳ ಬ್ರೇಕ್‌ಫಾಸ್ಟ್ ಐಟಮ್ ಎನಿಸಿರುವ ಕಾರ್ನ್ ಪ್ಲೇಕ್ಸ್, ಮಧುಮೇಹಿಗಳು ಸಕ್ಕರೆಯ ಬದಲಿಗೆ ಬಳಸುವ ಸ್ಯಾಕ್ರೀನ್ ಕೂಡ, ಸೆರಿಂಡಿಪಿಟಿಯಿಂದಾದವುಗಳೇ. ಒಂದೊಂದರದೂ ಒಂದೊಂದು ಕುತೂಹಲಕಾರಿ ಕಥೆ. ಅಂತೆಯೇ, ಮೈಕ್ರೋವೇವ್ ಅವನ್ ಹೇಗೆ ಆವಿಷ್ಕಾರಗೊಂಡಿತೆಂಬ ಕಥೆ ಕೇಳಿದಿರಾದರೆ ಅದೂ ಒಂದು ಸೆರೆಂಡಿಪಿಟಿಯೇ. ಬೇರೆಲ್ಲ ಯಾಕೆ, ಇಡೀ ಅಮೆರಿಕದ ಸಂಶೋಧನೆಯಾದದ್ದೇ ಕೊಲಂಬಸ್, ಅಮೆರಿಗೋ ವೆಸ್‌ಪುಸಿ ಮೊದಲಾದ ಯುರೋಪಿಯನ್ ನಾವಿಕರು ಮಸಾಲೆಪದಾರ್ಥಗಳ ಹುಡುಕಾಟದಲ್ಲಿ ಭಾರತಕ್ಕೆ ಬರಬೇಕಿದ್ದವರು ಅಟ್ಲಾಂಟಿಕ್ ಸಾಗರದಲ್ಲಿ ಪಶ್ಚಿಮದತ್ತ ಸಾಗಿ ಭೂಪ್ರದೇಶವನ್ನು ಕಂಡುಹಿಡಿದ ಸೆರೆಂಡಿಪಿಟಿಯಿಂದಲೇ ತಾನೆ? ಮತ್ತೆ ನೀರಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿದ್ದ ಆರ್ಕಿಮಿಡೀಸ್ ಒಮ್ಮೆಲೆ ನೀರಿನಿಂದ ಹೊರಕ್ಕೆ ಜಿಗಿದು ಯುರೇಕಾ ಎನ್ನುತ್ತ ಬೆತ್ತಲೆ ಓಡಿದ್ದು ಸೆರೆಂಡಿಪಿಟಿಯೇ? ಹದಿನಾರಾಣೆಗೂ ಹೌದು. ಕೆಲವು ವಿಶಿಷ್ಟ ಗುಂಪಿನ ಪರಮಾಣುಗಳು ಒಂದರೊಡನೊಂದು ಹಾವಿನಂತೆ ಸುತ್ತಿಕೊಂಡಂತೆ, ಅಥವಾ ಹಾವೊಂದು ತನ್ನದೇ ಬಾಲವನ್ನು ನುಂಗುತ್ತ ಗಿರ್ರನೆ ತಿರುಗುತ್ತಿದ್ದಂತೆ ಕನಸು ಕಂಡ ಫ್ರೆಡ್ರಿಕ್ ಕೆಕುಲೆ ಎಂಬ ರಸಾಯನಶಾಸ್ತ್ರಜ್ಞನಿಗೆ ಬೆಸ್ಟೀನ್‌ನ ಉಂಗುರ ರಚನೆಯ ಕಲ್ಪನೆ ಕಣ್ಮುಂದೆ ಬಂದದ್ದು? ಡಿಟ್ಟೋ.

ಅಲ್ಲಿಗೆ, ಶಕುಂತಲೆಯಿಂದ ಶುರುಮಾಡಿ, ಮೂವರು ರಾಜಕುಮಾರರ ಸಾಹಸಗಾಥೆಯನ್ನೋದಿ, ಮೈಸೂರು ಪಾಕನ್ನೂ ಸವಿದು, ಕೋನ್ ಐಸ್‌ಕ್ರೀಂ ಚಪ್ಪರಿಸುತ್ತ ಅಮೆರಿಕದ ಉದ್ದಗಲಕ್ಕೆ ಸುತ್ತಾಡಿ, ಕೊನೆಗೀಗ ವಿಜ್ಞಾನ ಲೋಕವನ್ನು ತಲುಪಿದೆವು. ಅದರಲ್ಲೂ ವೈದ್ಯಕೀಯ ವಿಜ್ಞಾನ ಅಥವಾ ಔಷಧಶಾಸ್ತ್ರವನ್ನೇನಾದರೂ ಅವಲೋಕಿಸಿದೆವೆಂದಾದರೆ ಸಾಲುಸಾಲು ಸೆರೆಂಡಿಪಿಟಿಗಳು!

ಡಾ. ಅಲೆಕ್ಸಾಂಡರ್ ಫ್ಲಮಿಂಗ್ 1928ರಲ್ಲಿ ಕಂಡುಹುಡುಕಿದ ಬ್ಯಾಕ್ಟಿರಿಯಾ ನಾಶಕ 'ಪೆನ್ಸಿಲಿನ್', ಕ್ರಿಕೆಟ್ ಬ್ಯಾಟುಗಳ ತಯಾರಿಕೆಗೆ ಬಳಸಲಾಗುವ ವಿಲ್ಲೋ ಮರದ ತೊಗಟೆಯಲ್ಲಿ ಸಿಗುವ ಅಸೆಟೈಲ್ ಸಾಲಿಸಿಲೇಟ್ ರಾಸಾಯನಿಕದಿಂದ ಸಂಶೋಧಕ ಫೆಲಿಕ್ಸ್ ಹಾಪ್ಟನ್ ತಯಾರಿಸಿದ 'ಆಸ್ಪಿರಿನ್, ಗಳಗಂಡ (ಥೈರಾಯ್ಡ್) ಕಾಯಿಲೆಗೆ ರಾಮಬಾಣವೆನಿಸಿದ ಐಯೋಡಿನ್- ಒಂದೊಂದರ ಆವಿಷ್ಕಾರವೂ ಆಕಸ್ಮಿಕ ಅಷ್ಟೇ ಅಲ್ಲ, ಆ ಕಥಾನಕಗಳೆಲ್ಲ ಬಲು ರೋಚಕ! ಅವೇನಾದರೂ ಸರಳಗನ್ನಡದಲ್ಲಿ ಓದಲಿಕ್ಕೆ ಸಿಕ್ಕಿದರೆ? ಏನು, ಸಿಕ್ಕಿವೆ, ಇದೋ ನೋಡಿ 'ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು' ಎಂಬ ಕನ್ನಡ ಪುಸ್ತಕ! ಒಂದಲ್ಲ ಎರಡಲ್ಲ ಒಟ್ಟು ಐವತ್ತು ಬೇರೆಬೇರೆ ರೋಚಕ ಕಥಾನಕಗಳು. ವೈದ್ಯಕೀಯ ಕ್ಷೇತ್ರದ ಆಕಸ್ಮಿಕ ಆವಿಷ್ಕಾರಗಳನ್ನು ಒಂದೇಕಡೆ ಒಟ್ಟುಗೂಡಿಸಿ ಪ್ರಸ್ತುತ ಪಡಿಸಿರುವ ಪ್ರಪಂಚದ ಅತಿ ದೊಡ್ಡ ಸಂಗ್ರಹ. ಇಂಥದೊಂದು ಪುಸ್ತಕ ಬೇರಾವ ಭಾಷೆಗಳಲ್ಲೂ ಇಲ್ಲದ್ದು ನಮ್ಮ ಕನ್ನಡದಲ್ಲಿ ಬಂದಿದೆಯೆನ್ನುವುದು ಒಂದು ರೀತಿಯ ಹೆಮ್ಮೆಯಾದರೆ, ಇದನ್ನು ಬರೆದವರು ನನ್ನ ತಿಳಿರುತೋರಣ (ವಿಶ್ವ- ವಾಣಿ ಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟ) ಅಂಕಣದ ನಿಯತ ಓದುಗರಲ್ಲೊಬ್ಬರಾದ, ಬೆಂಗಳೂರಿನಲ್ಲಿ ವೈದ್ಯವೃತ್ತಿಯಲ್ಲಿರುವ ಡಾ.ಕಿರಣ್ ವಿ.ಎಸ್. ಎಂಬುವವರು ಎನ್ನುವುದು ಹೆಮ್ಮೆದುಪ್ಪಟ್ಟಾಗಲಿಕ್ಕೆ ಕಾರಣ.

ಡಾ.ಕಿರಣ್ ವಿ.ಎಸ್. ಅವರನ್ನು ನಾನು ಇದುವರೆಗೆ ಮುಖತಃ ಭೇಟಿ ಮಾಡಿಲ್ಲ. ಅವರ ಧ್ವನಿ ಹೇಗಿದೆಯೆಂದು ಗೊತ್ತಿಲ್ಲ. ವಿಶ್ವವಾಣಿ ಪತ್ರಿಕೆಯಲ್ಲಿ ಆಗೊಮ್ಮೆ ಈಗೊಮ್ಮೆ ವೈದ್ಯಕೀಯ ವಿಷಯಗಳ ಲೇಖನ ಬರೆಯುತ್ತಿರುತ್ತಾರೆ. ಅಲ್ಲಿ ಪ್ರಕಟವಾಗುವ ಅವರ ಭಾವಚಿತ್ರದಲ್ಲಿ ಮುಖವಷ್ಟೇ ಕಾಣುವುದು. ನಾನವರನ್ನು 'ತೂಕದ ವ್ಯಕ್ತಿ' ಎಂದೇ ಪರಿಗಣಿಸುತ್ತೇನೆ. ಅದು, ಅವರು ಫೇಸ್‌ಬುಕ್‌ನಲ್ಲಿ ಬರೆಯುವ ಪೋಸ್ಟುಗಳಲ್ಲಿ, ಕಾಮೆಂಟುಗಳಲ್ಲಿ ತೋರುವ ಸಮಚಿತ್ತ ಸಮಭಾವ ಸುಸಂಸ್ಕೃತ ಸಜ್ಜನಿಕೆಯನ್ನು ಗಮನಿಸಿ ನಾನು ಗೇಜ್ ಮಾಡಿಟ್ಟಿರುವ ಗೌರವ. ಅವರೊಬ್ಬ ನೋ-ನಾನ್‌ಸೆನ್ಸ್ ವ್ಯಕ್ತಿ. ಫೇಸ್‌ಬುಕ್‌ನಲ್ಲಿ ಕಾಣಸಿಗುವ ಉಳಿದ ತೊಂಬತ್ತೆಂಟು ಶೇಕಡಾ ಜನರಂತೆ ಕಲಹಪ್ರಿಯರು ಅಲ್ಲ, ಶಾಂತಿಪ್ರಿ ಯರು. ಏನನ್ನೇ ಬರೆದರೂ ಅಲ್ಲೊಂದು ವಿಚಾರಸ್ಪಷ್ಟತೆ ಇರುತ್ತದೆ. ಅದು ಈ ಪುಸ್ತಕದಲ್ಲಿಯೂ ಢಾಳಾಗಿ ಗೋಚರಿಸುತ್ತದೆ. ಅಲ್ಲದೇ ಪುಸ್ತಕದ ಆರಂಭಿಕ ಮಾತುಗಳಲ್ಲಿ ಅವರೇ ಬರೆದುಕೊಂಡಿರುವಂತೆ ವಿಜ್ಞಾನದ ವಿಷಯವನ್ನು ಬರೆಯುವಾಗ ವಸ್ತು, ವಿಷಯ, ನಿರೂಪಣೆ, ಮಾಹಿತಿಯ ಅಧಿಕೃತತೆ, ಇತಿಹಾಸ ಇವೆಲ್ಲದರಲ್ಲೂ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಒಂದಕ್ಕೆರಡು ಬಾರಿ ಪರಿಶೀಲಿಸಿ ಮಾಹಿತಿ ಖಚಿತಪಡಿಸಿಕೊಳ್ಳುವುದು ಅಗತ್ಯ. ಅದರಲ್ಲೂ ವೈದ್ಯಕೀಯ ಕ್ಷೇತ್ರದ ಕ್ಲಿಷ್ಟ ಮಾಹಿತಿಗಳು ಓದುಗರಿಗೆ ಸುಲಭವಾಗಿ ಅರ್ಥವಾಗಬಲ್ಲ ಭಾಷೆಯಲ್ಲಿ ಬರೆಯುವ ಕೆಲಸ ಸವಾಲಿನದು. ಅಂಥದರಲ್ಲಿ ಪ್ರಾಮಾಣಿಕ ಪ್ರಯತ್ನವಂತೂ ಆಗಿದೆ. ಇದು ಕನ್ನಡ ಬಲ್ಲ ಯಾರೊಬ್ಬರೂ ಸುಲಭವಾಗಿ ಓದಲು ಬರೆದಿರುವ ಪುಸ್ತಕ.

'ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು' ಪುಸ್ತಕದ ಎಲ್ಲ ಐವತ್ತು ಪ್ರಸಂಗಗಳನ್ನೂ ನಾನು ಕಳೆದ ಒಂದು-ಒಂದೂವರೆ ತಿಂಗಳ ಅವಧಿಯಲ್ಲಿ ಸಾವಕಾಶವಾಗಿ ಓದಿದ್ದೇನೆ. ಇದರಲ್ಲಿ ಬರುವ ಪಾಶ್ಚಾತ್ಯ ವಿಜ್ಞಾನಿಗಳ, ವೈದ್ಯರ, ಕಾಯಿಲೆಗಳ, ಕಾಯಿಲೆಕಾರಕ ಅಂಶಗಳ, ಮತ್ತು ಔಷಧಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ತುಂಬ ಕಷ್ಟದ ವಿಚಾರವೇ. ಆದರೆ ಇದನ್ನೇನೂ ಬರೀ ಕೈಯ ಸಿಲೆಬಸ್ ಎಂದು ಓದುತ್ತಿರುವುದು ಅಲ್ಲವಲ್ಲ! ಹಾಗಾಗಿ ಆ ಚಿಂತೆ ಬೇಕಿಲ್ಲ. ಪರಂತು ಮನುಕುಲವನ್ನು ಕಾಲಾನುಕಾಲಕ್ಕೆ ಬಾಧಿಸುತ್ತಲೇ ಬಂದಿರುವ ಕಾಯಿಲೆಗಳು, ಅವುಗಳನ್ನು ಮೆಟ್ಟಿ ನಿಲ್ಲಲು ನಡೆದಿರುವ ಮತ್ತು ಯಶಸ್ಸು ಕಂಡಿರುವ ಪ್ರಯತ್ನಗಳು, ಉದ್ದೇಶಿಸಿರದ ಆದರೆ ಒಳ್ಳೆಯ ಫಲಿತಾಂಶ ಬೀರಿದ ಘಟನೆಗಳು ಮತ್ತು ಬೆಳವಣಿಗೆಗಳು- ಇವೆಲ್ಲವನ್ನು ವಿಶೇಷವಾಗಿ ಪ್ರಸ್ತುತ ಕೋವಿಡಾಯಣ ಕಾಲಘಟ್ಟದಲ್ಲಿ ಓದಿ ತಿಳಿದುಕೊಳ್ಳುವುದು ಒಂದು ವಿಶೇಷ.

- ಶ್ರೀವತ್ಸ ಜೋಶಿ ಅವರ ಪರಿಚಯ

MORE FEATURES

ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’

20-04-2024 ಬೆಂಗಳೂರು

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ...

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...