ಅಬ್ಬೆ ಎನ್ನುವುದು ಸಂಕೇತವಾಗಿಯೂ ತೀರಾ ವಾಚ್ಯವಾಗಿಲ್ಲ: ಬಿ ಜನಾರ್ದನ ಭಟ್


ನಿರೂಪಕನಿಗೆ ಕಾಣಸಿಗುವ ಅಬ್ಬೆ, ಚಿಪ್ಪುಹಂದಿ, ಕೊಕ್ಕರೆಗಳು, ಅಪರೂಪದ ಪುತ್ರಜಾಜಿ ಗಿಡ ಮುಂತಾದ ವಿಷಯಗಳು ಕಾದಂಬರಿಯ ಪಾತ್ರಗಳಷ್ಟೇ ಜೀವಂತವಾಗಿ ಸಾಕಾರಗೊಳ್ಳುವುದು ಕಾದಂಬರಿಯ ಧನಾತ್ಮಕ ಅಂಶಗಳಲ್ಲೊಂದು. ನಿರೂಪಕನಿಗೆ ಕೇವಲ ತನ್ನ ಕತೆ ಹೇಳುವುದು, ಅಥವಾ ಅವ್ಯವಹಾರಗಳ ಮೂಲಕ ಸಮಾಜದಲ್ಲಿ 'ಅಬ್ಬೆ'ಗಳಂತೆ ನಿಗೂಢವಾಗಿ ಅಪಾಯಕಾರಿಗಳಾಗಿರುವ ಜನಗಳ ಕತೆ ಹೇಳುವಷ್ಟೆ ಮುಖ್ಯ, ಆ ಪ್ರದೇಶದ ಪಾರಿಸಾರಿಕ ಜೀವಂತಿಕೆ ಎಷ್ಟು ನಾಶವಾಗಿದೆ ಮತ್ತು ಎಷ್ಟು ಉಳಿದುಕೊಂಡಿದೆ ಎಂದು ಅನ್ವೇಷಿಸುವುದು ಎನ್ನುತ್ತಾರೆ ಲೇಖಕ ಬಿ. ಜನಾರ್ದನ ಭಟ್. ಲೇಖಕ ಶಶಿಧರ ಹಾಲಾಡಿ ಅವರ ಅಬ್ಬೆ ಕಾದಂಬರಿಯ ಕುರಿತು ಅವರು ಬರೆದ ಅನಿಸಿಕೆ ನಿಮ್ಮ ಓದಿಗಾಗಿ..

ಅಬ್ಬೆ (ಕಾದಂಬರಿ)
ಲೇಖಕರು - ಶಶಿಧರ ಹಾಲಾಡಿ
ಪ್ರಕಾಶಕರು - ಅಂಕಿತ ಪುಸ್ತಕ, ಬೆಂಗಳೂರು
ಪ್ರಥಮ ಮುದ್ರಣ - ನವೆಂಬರ್, 2022
ಪುಟಗಳು – 264, ಬೆಲೆ – 250
ಪ್ರತಿಗಳಿಗಾಗಿ ಸಂಪರ್ಕಿಸಿ : 9448676770

ಶಶಿಧರ ಹಾಲಾಡಿ ಅವರ ಹೊಸ ಕಾದಂಬರಿ 'ಅಬ್ಬೆ' ಒಂದು ವಿಶಿಷ್ಟ ಕಾದಂಬರಿ. ಉತ್ತಮ ಪುರುಷದಲ್ಲಿ (ಫಸ್ಟ್ ಪರ್ಸನ್) ಕತೆಯನ್ನು ನಿರೂಪಿಸುವ ನಿರೂಪಕನಿಗೆ (ಅವನ ಹೆಸರು ಶಿವರಾಂ) ಆಗ ತಾನೇ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿ ಬಯಲುಸೀಮೆಯ ಊರು, ಅರಸೀಕೆರೆಯ ಬಳಿಯ ಕಲ್ಕೆರೆಯ ಶಾಖೆಗೆ ಪೋಸ್ಟಿಂಗ್ ಆಗಿರುತ್ತದೆ. ಅವನನ್ನು ಸೇರಿಸಿಕೊಳ್ಳುವಾಗಲೇ ಮ್ಯಾನೇಜರಿಗೆ ಕೆಲಸ ಗೊತ್ತಿಲ್ಲದ ಹೊಸಬ ಬಂದನಲ್ಲ ಎನ್ನುವ ಅಸಹನೆ ಇರುತ್ತದೆ. ಬಹುಶಃ ಇದೇ ಅಸಹನೆ ಬೃಹದಾಕಾರವಾಗಿ ಬೆಳೆದು ಅವನನ್ನು ಸತಾಯಿಸುವುದರಲ್ಲಿ ಸ್ಯಾಡಿಸ್ಟಿಕ್ ಆನಂದವನ್ನು ಕಾಣುತ್ತಾನೆ. ಉಳಿದ ಸಹೋದ್ಯೋಗಿಗಳು ಇಸ್ಪೀಟು, ಕುಡಿತ ಇತ್ಯಾದಿಗಳ ಸಾಹಚರ್ಯಕ್ಕಾಗಿ ಒಗ್ಗಟ್ಟಾಗಿರುವುದರಿಂದ ಮ್ಯಾನೇಜರನ ಅಸಹನೆ ಮತ್ತು ದುಷ್ಟತನಗಳೆಲ್ಲ ಈ ಅಬ್ಬೇಪಾರಿಯ ಮೇಲೆ ಕೇಂದ್ರೀಕೃತವಾಗುತ್ತದೆ. ಬ್ಯಾಂಕಿನ ಉದ್ಯೋಗಿಯಾಗಿ ಹಳ್ಳಿಪ್ರದೇಶದಲ್ಲಿ ದಿನ ಸಾಗಿಸುವ ನಿರೂಪಕನ ಅನುಭವಗಳು ಸ್ವಾರಸ್ಯಕರವಾಗಿವೆ. ಇಲ್ಲಿ ನಾಯಕನನ್ನು ಮೇಲಧಿಕಾರಿ ವಿನಾಕಾರಣ ಹಿಂಸಿಸುವ, ಬೇಟೆಯಾಡುವ ಕಥಾವಸ್ತು ಕಾಫ್ಕಾ, ಚಿತ್ತಾಲ ಮುಂತಾದವರಲ್ಲಿ ಕಂಡುದೇ ಆಗಿದೆ. 

ಈ ಕಾದಂಬರಿ 'ಮನುಷ್ಯನಿಂದ ಮನುಷ್ಯನ ಬೇಟೆ' ಥೀಮಿನ ಕಾರಣದಿಂದ ಓದಿನ ಕುತೂಹಲವನ್ನು ಉದ್ದಕ್ಕೂ ಉಳಿಸಿಕೊಂಡು ಸಾಗುತ್ತದೆ. ಕಾದಂಬರಿಯಲ್ಲಿ ಇರುವ ಮುಖ್ಯ ವೈಶಿಷ್ಟ್ಯ ಇದರ ಪರಿಸರ ಪ್ರಜ್ಞೆಯೇ ಆಗಿದೆ. ಬೆನ್ನುಡಿಯಲ್ಲಿ ಬೆಳಗೋಡು ರಮೇಶ್ ಭಟ್ಟರು, “ಇದು ಪೂರ್ಣಚಂದ್ರ ತೇಜಸ್ವಿಯವರು ಸೃಷ್ಟಿಸಿದ ಜಗತ್ತಿನ ಮುಂದುವರಿಕೆಯಂತೆ ಇದೆ” ಎಂದು ಇದನ್ನು ಗುರುತಿಸಿದ್ದಾರೆ. ಕನ್ನಡದಲ್ಲಿ ಹಿರಿಯ ವಿಜ್ಞಾನಿ- ಕಾದಂಬರಿಕಾರ “ಶಶಿಧರ ವಿಶ್ವಾಮಿತ್ರ” ಅವರು ಕೂಡ ಈ ಬಗೆಯ ಪರಿಸರ - ನೈತಿಕ ಪ್ರಜ್ಞೆಯಿಂದ ಕಾದಂಬರಿಗಳನ್ನು ಕಟ್ಟಿದ್ದಾರೆ. ಶಶಿಧರ ಹಾಲಾಡಿಯವರು ಕಥನದ ಹೆಣಿಗೆಯಲ್ಲಿ ಶಶಿಧರ ವಿಶ್ವಾಮಿತ್ರರ ಪರಿಸರ ನಿಷ್ಠೆಯನ್ನು ನೆನಪಿಸುತ್ತಾರೆ. ಹಾಲಾಡಿಯವರು ಸ್ವತಃ ಈ ಬಗೆಯ ಪರಿಸರ ಪ್ರೀತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವುದರ ಜತೆಗೆ ತಮ್ಮ ಬರಹಗಳಲ್ಲಿ ಅದನ್ನೇ ದಾಖಲಿಸುತ್ತಾ ಬಂದಿದ್ದಾರೆ.

ಈ ಕಾದಂಬರಿಯಲ್ಲಿ ನಾಯಕ ಕರಾವಳಿಯ ದಟ್ಟ ಗಿಡಮರಗಳ ಪರಿಸರದಿಂದ ಬಂದವನು. ಬಯಲುಸೀಮೆಯಲ್ಲಿ ಪರಿಸರದ ಜೀವಿಗಳು, ಸಸ್ಯಗಳು ಮಾನವನ ದಾಳಿಗೆ ತುತ್ತಾಗುತ್ತ ಬಹಳ ವಿರಳವಾಗುತ್ತ ಸಾಗುತ್ತಿರುವುದನ್ನು ದಾಖಲಿಸುವ (ಉದಾಹರಣೆಗೆ ಹಳ್ಳಿಗನೊಬ್ಬ ಚಿಪ್ಪುಹಂದಿಯನ್ನು ಮಾರಾಟಕ್ಕೆಂದು ಹಿಡಿದುತಂದಿರುವುದು, ಹಳ್ಳಿಗರು ತಲೆಹೊರೆಯ ಮೂಲಕ ಕಟ್ಟಿಗೆಯ ಹೊರೆಗಳನ್ನು ತಂದು ಮಾರುವುದು) ನಿರೂಪಕ ಆಸಕ್ತ ಯುವಕರ ಜತೆಗೆ ಸ್ನೇಹ ಸಂಪಾದಿಸಿಕೊಂಡು, ಆಗಾಗ ಸಮೀಪದ ಗರುಡನಗಿರಿ ಬೆಟ್ಟಕ್ಕೋ, ಹಿರೇಕಲ್ಲು ಗುಡ್ಡಕ್ಕೋ, ಕ್ರಿಕೆಟ್ ಗೆಳೆಯರ ಹಾಗೂ ಸಸ್ಯಶಾಸ್ತ್ರಜ್ಞ ಡಾ. ಕಲ್ಲೂರಾಯರ ಜೊತೆಗೆ ಚಾರಣವನ್ನು ಕೈಗೊಳ್ಳುತ್ತಿರುತ್ತಾನೆ. ಬದುಕಿಗಾಗಿ ಬ್ಯಾಂಕಿನ ಲೆಕ್ಕಪುಸ್ತಕಗಳ ಜತೆಗೆ, ದುಷ್ಟ ಮೇಲಧಿಕಾರಿಯ ಕಿರುಕುಳದ ನಡುವೆ ಏಗುತ್ತ ಕಷ್ಟ ಪಡುವ ನಿರೂಪಕನ ಆಸಕ್ತಿಯ ಬದುಕು ಪರಿಸರದ ಅಧ್ಯಯನದಲ್ಲಿ ಹೀಗೆ ನಡೆಯುತ್ತಿರುತ್ತದೆ.

ನಿರೂಪಕನಿಗೆ ಕಾಣಸಿಗುವ ಅಬ್ಬೆ, ಚಿಪ್ಪುಹಂದಿ, ಕೊಕ್ಕರೆಗಳು, ಅಪರೂಪದ ಪುತ್ರಜಾಜಿ ಗಿಡ ಮುಂತಾದ ವಿಷಯಗಳು ಕಾದಂಬರಿಯ ಪಾತ್ರಗಳಷ್ಟೇ ಜೀವಂತವಾಗಿ ಸಾಕಾರಗೊಳ್ಳುವುದು ಕಾದಂಬರಿಯ ಧನಾತ್ಮಕ ಅಂಶಗಳಲ್ಲೊಂದು. ನಿರೂಪಕನಿಗೆ ಕೇವಲ ತನ್ನ ಕತೆ ಹೇಳುವುದು, ಅಥವಾ ಅವ್ಯವಹಾರಗಳ ಮೂಲಕ ಸಮಾಜದಲ್ಲಿ 'ಅಬ್ಬೆ'ಗಳಂತೆ ನಿಗೂಢವಾಗಿ ಅಪಾಯಕಾರಿಗಳಾಗಿರುವ ಜನಗಳ ಕತೆ ಹೇಳುವಷ್ಟೆ ಮುಖ್ಯ, ಆ ಪ್ರದೇಶದ ಪಾರಿಸಾರಿಕ ಜೀವಂತಿಕೆ ಎಷ್ಟು ನಾಶವಾಗಿದೆ ಮತ್ತು ಎಷ್ಟು ಉಳಿದುಕೊಂಡಿದೆ ಎಂದು ಅನ್ವೇಷಿಸುವುದು. ಒಂದು ರೀತಿಯಲ್ಲಿ ಅದಕ್ಕಾಗಿಯೇ ಬಂದಿರುವ ಪತ್ತೇದಾರನಂತೆ ಅವನು ಕಾಣಿಸುತ್ತಾನೆ. ಅವನು 'ಗರುಡನಗಿರಿ ರಿಸರ್ವ್ ಫಾರೆಸ್ಟ್' ಎಂಬ ಹೆಸರಿನ ಪ್ರದೇಶದಲ್ಲಿ ಅವನತಿಯನ್ನು ಹೊಂದಿದ್ದ ಕಾಡನ್ನು ಪುನರುಜ್ಜೀವನಗೊಳಿಸಲು ಒತ್ತಾಯಿಸಿ, ಚಿತ್ರಸಹಿತ ಬರಹವನ್ನು ಪತ್ರಿಕೆಯಲ್ಲಿ ಪ್ರಕಟಿಸುವುದನ್ನು ಉಲ್ಲೇಖಿಸಬಹುದು.

ಈ ಕಾದಂಬರಿಗೆ 'ಅಬ್ಬೆ' ಎನ್ನುವ ಕುತೂಹಲಕರ ಶೀರ್ಷಿಕೆಯಿದೆ. ದೊಡ್ಡ ಗಾತ್ರದ, ಮೈತುಂಬಾ ರೋಮ ಹೊಂದಿದ, ಹೊಲದಲ್ಲಿ ಕಾಣಸಿಗುವ `ಅಬ್ಬೆ' ಎಂಬ ಜೇಡ ಕಚ್ಚಿದರೆ, ಮನುಷ್ಯನು ಮೃತನಾಗಬಹುದು ಎಂದೇ ಅಲ್ಲಿನ ಗ್ರಾಮೀಣ ಪ್ರದೇಶದ ಜನರು ಹೇಳುತ್ತಾರೆ. `ಅಬ್ಬೆ ಕಚ್ಚಿದರೆ ಹೆಬ್ಬಾಗಿಲ ತನಕ ಬರುವಷ್ಟು ಸಮಯವಿಲ್ಲ' ಎಂಬ ಗಾದೆಯೇ ಅರಸಿಕೆರೆ, ಹೊಸದುರ್ಗ ಮೊದಲಾದ ಪ್ರದೇಶಗಳಲ್ಲಿದೆ. ಹೊಲಕ್ಕೆ ಹೋದಾಗ, ಅಕಸ್ಮಾತ್ ಅಬ್ಬೆ ಕಚ್ಚಿದರೆ, ಅಂತಹ ವ್ಯಕ್ತಿಯನ್ನು ಊರಿನ ಹೆಬ್ಬಾಗಿಲಿಗೆ ತರುವಷ್ಟರಲ್ಲಿ ಮೃತನಾಗಬಹುದು ಎನ್ನುವ ಗಾದೆ ಅದು. ಪ್ರಸ್ತುತ ಕಾದಂಬರಿ 'ಅಬ್ಬೆ'ಯ ಶೀರ್ಷಿಕೆಯಲ್ಲಿರುವ 'ಅಬ್ಬೆ' ಪದ ಇದೇ ಅಬ್ಬೆ ಜೇಡವನ್ನು ಸೂಚಿಸುತ್ತದೆ. ಕನ್ನಡನಾಡಿನ ಕೆಲವು ಪ್ರದೇಶಗಳಲ್ಲಿ 'ಅಬ್ಬೆ' ಎನ್ನುವ ಪದವು ತಾಯಿ ಎನ್ನುವ ಅರ್ಥವುಳ್ಳದ್ದು. ಬಳಸುವವರ ಸಂಖ್ಯೆಯ ದೃಷ್ಟಿಯಿಂದ ಅಬ್ಬೆ ಪದಕ್ಕೆ ತಾಯಿ ಎನ್ನುವ ಅರ್ಥವೇ ಪ್ರಧಾನವಾದದ್ದು. ಆದರೆ ಇಲ್ಲಿ ಆ ಪದಕ್ಕೆ ತಾಯಿ ಅನ್ನುವ ಅರ್ಥವ್ಯಾಪ್ತಿ ಇಲ್ಲ. ಆದರೆ ಇಲ್ಲಿ 'ಅಬ್ಬೆ' ಪದ-ಪರಿಕಲ್ಪನೆಯು ಒಂದು ನಿಗೂಢ ಜೇಡ ಎನ್ನುವ ವಿಶಿಷ್ಟಾರ್ಥದ ಜತೆಗೆ ಒಂದು ಸಂಕೇತವೂ ಆಗಿ ಕಾರ್ಯನಿರ್ವಹಿಸುತ್ತದೆ.

'ಅಬ್ಬೆ' ಕಾದಂಬರಿಯಲ್ಲಿ ಹಲವು ಮಂದಿ ಅಬ್ಬೆ ಕಚ್ಚಿ ಸತ್ತ ಉದಾಹರಣೆಗಳು ಬರುತ್ತವೆ. ಆದರೂ ಅವರು ಅಬ್ಬೆ ಕಚ್ಚಿಯೇ ಸತ್ತಿರುವುದನ್ನು ಯಾರೊಬ್ಬನೂ ನೋಡಿರುವುದಿಲ್ಲ. ಶಿವರಾಂ ಮತ್ತು ಡಾ. ಕಲ್ಲೂರಾಯರು ಈ ಬಗ್ಗೆ ಚರ್ಚಿಸುತ್ತಾರೆ ಕೂಡ. ಆದರೆ ಇದಮಿತ್ಥಂ ಎಂಬ ತೀರ್ಮಾನ ಕಾದಂಬರಿಯಲ್ಲಿಲ್ಲ.

ಒಂದು ಕಡೆ 'ಅಬ್ಬೆ' ಒಂದು ಸಂಕೇತವಾಗಿಯೂ ಇದೆ ಎನ್ನುವುದು ಸ್ವಲ್ಪ ಸ್ಪಷ್ಟವಾಗಿ ಗೋಚರಿಸುತ್ತದೆ. ಶಿವರಾಂ ಹಿರೇಕಲ್ಲುಗುಡ್ಡಕ್ಕೆ ಹೋದದ್ದು ಯಾಕೆ ಎಂಬ ತನ್ನ ಸಹೋದ್ಯೋಗಿ ರಾಜೇಶನ ಪ್ರಶ್ನೆಗೆ ಅಬ್ಬೆಯ ಕುರಿತು ಹೆಚ್ಚಿನ ಮಾಹಿತಿಗೆ ಎಂದು ಹೇಳುತ್ತಾನೆ. ಅದಕ್ಕೆ, ರಾಜೇಶ – “ದಾವಣಗೆರೆ ಕಡೆಯಲ್ಲೂ ಅಬ್ಬೆಯ ಕುರಿತು ಹೇಳುತ್ತಾರೆ. ನೀವೊಬ್ಬ ಬ್ಯಾಂಕ್ ಉದ್ಯೋಗಿ, ಈಗ ತಾನೇ ಕೆಲಸಕ್ಕೆ ಸೇರಿದ್ದೀರಿ. ನಿಮಗೇಕೆ ಅಬ್ಬೆಯ ಉಸಾಬರಿ? ಅದು ವಿಷಕಾರಿಯೋ ಅಲ್ಲವೋ, ನಿಮಗೇಕೆ? ಇಲ್ಲೇ ಅಂದರೆ ಬ್ಯಾಂಕಿನಲ್ಲೇ ಇರುವ ವಿಷಪ್ರಾಣಿಯ ಕುರಿತು ಎಚ್ಚರವಹಿಸಿ. ಅದನ್ನು ಕಣ್ಣುಬಿಟ್ಟು ನೋಡಿ” ಎಂದು ಎಚ್ಚರಿಸುತ್ತಾನೆ.

ಆಗಲೇ ಶಿವರಾಮನಿಗೆ ರಾಜೇಶನ ಮೂಲಕ ಮ್ಯಾನೇಜರ್ ತನ್ನ ಮೇಲೆ ವಿನಾಕಾರಣ ದ್ವೇಷ ಸಾಧಿಸುತ್ತಿದ್ದಾನೆ, ತನ್ನ ಪ್ರೊಬೇಶನರಿ ಪೀರಿಯಡ್ ತೃಪ್ತಿಕರ ಎಂದು ಘೋಷಣೆ ಆಗದ ಹಾಗೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾನೆ ಎನ್ನುವುದು ತಿಳಿಯುವುದು. ಮುಂದೆ ಮ್ಯಾನೇಜರ್ನ ದುಷ್ಟತನ, ಧೂರ್ತತನ, ಸರಳ ಸ್ವಭಾವದ ಹೊಸದಾಗಿ ಉದ್ಯೋಗಕ್ಕೆ ಸೇರಿದ ಹುಡುಗ - ಶಿವರಾಂನ ಸುತ್ತ ಅವನು ಹೆಣೆಯುತ್ತಿದ್ದ ವಿಷವೃತ್ತ ಎಲ್ಲವೂ ಸೂಕ್ಷ್ಮ್ಮವಾಗಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ಶಿವರಾಮನ ಪರವಾಗಿಯೂ ಸಹೋದ್ಯೋಗಿಗಳು ತಮ್ಮಿಂದಾದಷ್ಟು ದಾಖಲೆಗಳನ್ನು ದುಷ್ಟ ಮ್ಯಾನೇಜರನ ವಿರುದ್ಧ ಮೇಲಧಿಕಾರಿಗಳಿಗೆ ಕಳುಹಿಸುತ್ತಿರುತ್ತಾರೆ. ಅಂತಿಮವಾಗಿ ಶಿವರಾಮನಿಗೆ ಶಿಕ್ಷೆಯ ರೂಪದಲ್ಲಿ ಅಂಡಮಾನ್ನ ಪೋರ್ಟ್ ಬ್ಲೇರ್‌ಗೆ ವರ್ಗಾವಣೆ ಆಗುತ್ತದೆ. ಮ್ಯಾನೇಜರನಿಗೂ ಶಿಕ್ಷೆಯ ರೂಪದಲ್ಲಿ ಕಲ್ಕತ್ತಾಗೆ ವರ್ಗಾವಣೆ ಆಗುತ್ತದೆ. ಹೀಗಾಗುವುದು ಯಾವುದೋ ಒಂದು ಆಶಯವನ್ನು ಹೇಳುವುದಕ್ಕಿಂತ, ಸಂದೇಶವನ್ನು ನೀಡುವುದಕ್ಕಿಂತ ವಾಸ್ತವ ಚಿತ್ರಣವಾಗಿಯೇ ಗಮನಸೆಳೆಯುತ್ತದೆ.

ಅಬ್ಬೆ ಎನ್ನುವುದು ಸಂಕೇತವಾಗಿಯೂ ತೀರಾ ವಾಚ್ಯವಾಗಿಲ್ಲ. ಕಾದಂಬರಿಯ ಪ್ರಾರಂಭದಲ್ಲಿ ಪಟೇಲ್ ನರಸಿಂಹಯ್ಯ ಅವರ ಬಾವಿಯಲ್ಲಿ ಕುಪ್ಪೂರು ತಿಮ್ಮಪ್ಪ ಎಂಬ ದುಷ್ಟನ ಹೆಣ ತೇಲುತ್ತಿತ್ತು. ಕಾದಂಬರಿಯಲ್ಲಿ ಕೆಲವೊಮ್ಮೆ ಜನ ಸತ್ತಾಗ ಅಬ್ಬೆಯ ಉಲ್ಲೇಖ ಬರುವಂತೆ ಇಲ್ಲಿ ಅಬ್ಬೆಯ ಪ್ರಸ್ತಾಪ ಅಥವಾ ಪ್ರಚಾರ ಇರುವುದಿಲ್ಲ; ಅದು ಆತ್ಮಹತ್ಯೆ ಎಂದು ಮುಚ್ಚಿಹೋಗುತ್ತದೆ. ಕಾದಂಬರಿಯ ಕೊನೆಯಲ್ಲಿ ನಿರೂಪಕನಿಗೆ ಅದು ಪಟೇಲರ ಕೈವಾಡದಿಂದ ನಡೆದ ಕೊಲೆ ಎಂದು ತಿಳಿಯುತ್ತದೆ.

ಕಾದಂಬರಿಯಲ್ಲಿ ಊರನ್ನು ಪ್ರತಿನಿಧಿಸುವ ಹಲವು ವೈವಿಧ್ಯಮಯ ಪಾತ್ರಗಳಿವೆ. ಊರಿನ ಗಣ್ಯ ಪಟೇಲ್ ನರಸಿಂಹಯ್ಯ, ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್, ತುಕಾರಾಂ, ರಾಜೇಶ, ಭಾಸ್ಕರ, ಕಾಲೇಜಿನ ಪ್ರಿನ್ಸಿಪಾಲ್ ಡಾ. ಕಲ್ಲೂರಾಯ, ಕರಾವಳಿಯಿಂದ ಬಂದು ಇಲ್ಲಿ ಸಣ್ಣ ಕ್ಯಾಂಟೀನ್ ನಡೆಸುವ ಬ್ರಾಹ್ಮಣರಲ್ಲದ ಹೋಟೆಲ್ 'ಭಟ್ಟರು', ಕಾಡಿನಿಂದ ಏನೇನೋ ತಂದು ಮಾರುವ ಕೆಂಚಪ್ಪ, ಕ್ರಿಕೆಟ್ ಆಡುವ ಹುಡುಗರ ಗುಂಪು, ಒಳ್ಳೆಯವರು, ವ್ಯಭಿಚಾರಿಗಳು, ಶೀಲಗೆಟ್ಟ ಹೆಂಗಸರು ಹೀಗೆ ಹಲವು ಪಾತ್ರಗಳಿವೆ. ಹಾಗಾಗಿ ಕಥಾನಕಕ್ಕೆ ವಿಸ್ತಾರವೂ, ಗಾಂಭೀರ್ಯವೂ ಲಭಿಸಿದೆ. ಇವೆಲ್ಲದರ ಜತೆಗೆ, ನಿರೂಪಕನ ಮಿತಭಾಷೀ ಸೌಮ್ಯ ವ್ಯಕ್ತಿತ್ವವನ್ನು ಘಟನೆ-ಸಂಭಾಷಣೆಗಳ ಮೂಲಕ ಕಟ್ಟಿಕೊಟ್ಟಿರುವ ನಿರೂಪಣೆ ಸಶಕ್ತವಾಗಿದೆ. ಒಟ್ಟಿನಲ್ಲಿ 'ಅಬ್ಬೆ' ಒಂದು ಅಪರೂಪಕ ಕಾದಂಬರಿ; ಸ್ಮರಣೆಯಲ್ಲಿ ಉಳಿಯುವಷ್ಟು ವೈಶಿಷ್ಟ್ಯವುಳ್ಳ ಕಾದಂಬರಿ.

-ಡಾ. ಬಿ. ಜನಾರ್ದನ ಭಟ್
ಬಿ. ಜನಾರ್ದನ ಭಟ್ ಅವರ ಲೇಖಕ ಪರಿಚಯ

MORE FEATURES

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...

ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’

20-04-2024 ಬೆಂಗಳೂರು

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ...

ಈ ಪುಸ್ತಕ ಇರಬೇಕಾದದ್ದು ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ

20-04-2024 ಬೆಂಗಳೂರು

`ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ, ಮನದಲ್ಲಿ ಎಂಬ ಆಸೆಯಿಂದಾಗಿ ಹರಿಯುವ ಸ್ಥಿತಿಯಲ್ಲಿದ್ದ ಆ ಹಾಳೆಗಳನ್ನೇ ಚೀಲದಲ...