ಅಭಿವೃದ್ಧಿಯ "ಸೈಡ್ ಅಫೆಕ್ಟುಗಳ" ಕಥನ ಇದು : ರಾಜಾರಾಂ ತಲ್ಲೂರು


"ಕುತ್ಲೂರು ಕಥೆ ಕೇವಲ ಒಂದು ಬೆಳಕಿಗೆ ಬಂದಿರುವ ಕಥೆ. ಕರಾವಳಿಯ ಘಟ್ಟದ ತಪ್ಪಲಿನ ಕಾಡುಗಳ ಉದ್ದಗಲಕ್ಕೂ ಇಂತಹ ನೂರಾರು ಕಥೆಗಳು ಕಾದು ಕುಳಿತಿರಬಹುದು. ಈ ಕಾಡಿನಂಚಿನ ಬದುಕು ಯಾವತ್ತೂ ಕಾಡಿಗೆ ಹಾನಿ ಮಾಡುವಂತಹದಾಗಿರಲಿಲ್ಲ. ಯಾವತ್ತು ಕಾಡುತ್ಪನ್ನಗಳು ವಾಣಿಜ್ಯಕ್ಕೆ/ಕೈಗಾರಿಕೀಕರಣದ ಬಳಿಕ ಕಚ್ಛಾವಸ್ತುಗಳ ಸರಬರಾಜಿಗೆ/ವಸತಿ ಕ್ಷೇತ್ರ-ಜನಸಂಖ್ಯೆ ಬೆಳೆದು ಮರಮಟ್ಟುಗಳಿಗೆ ವ್ಯಾಪಾರಿ ಬೆಲೆ ಬಂದಂತೆ ಯಾವಾಗ ಊರ ನಡುವೆ ಇದ್ದವರು ಕಾಡು ಹೊಕ್ಕರೋ ಅಂದಿನಿಂದಲೇ ಕಾಡುಗಳ ಅವನತಿ ಶುರುವಾಯಿತು" ಎಂದು ಪತ್ರಕರ್ತ ರಾಜಾರಾಂ ತಲ್ಲೂರು ಅವರು ನವೀನ್‌ ಸೂರಿಂಜೆ ಅವರ ಕೃತಿ ಕತ್ಲೂರು ಕಥನ ವನ್ನು ವಿಮರ್ಶಿಸಿದ್ದಾರೆ. ನಿಮ್ಮ ಓದಿಗಾಗಿ...

ಅವಿಭಜಿತ ಕನ್ನಡ ಜಿಲ್ಲೆಗಳು ಕೈಯಾರೆ ಮಾಡಿಕೊಂಡಿರುವ ದುರಂತ ಕಥನವೊಂದರ ಓದು ಇದು. ಆದರೆ ಇದರ ಅಂತಿಮ ಪರಿಣಾಮ – ಕನ್ನಡಕ್ಕೆ ಒಬ್ಬ ಪ್ರಜ್ಞಾವಂತ, ನೆಲಕಚ್ಚಿ ನಿಲ್ಲಬಲ್ಲ ಪತ್ರಕರ್ತ ಸಿಕ್ಕಿದರು – ಎಂಬ ಆಶಾದಾಯಕ ಹೇಳಿಕೆಯೊಂದಿಗೇ ಈ ಪುಸ್ತಕದ ಬಗ್ಗೆ ಬರೆಯಬಯಸುತ್ತೇನೆ. ಇತ್ತೀಚೆಗಷ್ಟೇ ಪ್ರಜಾವಾಣಿಯಲ್ಲಿ ಕೆಲಸ ಆರಂಭಿಸಿರುವ ವಿಠಲ ಮಲೆಕುಡಿಯ ಅವರು ಒಳ್ಳೆಯ ಕಸುಬುದಾರ ಪತ್ರಕರ್ತ ಆಗಿ ಬೆಳೆಯಲಿ ಎಂಬ ನನ್ನ ಹಾರೈಕೆಗಳಿಗೆ ನೀವೂ ದನಿ ಸೇರಿಸಿ.

ಈ ಅಕ್ಷತ, ಒಬ್ಬ ಪ್ರಕಾಶಕರಾಗಿ ಪುಸ್ತಕಗಳನ್ನು ಆಯ್ಕೆ ಮಾಡುವಾಗ ಅದೇನು ಮಾಟ ಮಾಡ್ತಾರೋ ಗೊತ್ತಿಲ್ಲ; ಸಮಕಾಲೀನ ಓದಿಗೆ ತುರ್ತಾಗಿ ಬೇಕಿರುವ ಪುಸ್ತಕಗಳೆಲ್ಲ ಅವರ ಕೈಗಳಿಗೇ ಹೋಗಿ ತಲುಪುತ್ತಿರುವುದು ಸುಳ್ಳಲ್ಲ. ಮಾರುಕಟ್ಟೆಯ ಆಟಗಳ ಗೋಜಿಗೆ ಹೋಗದೆ ಈ ಕಠಿಣ ವ್ಯವಹಾರ ನಡೆಸುತ್ತಿರುವ ಅವರು ಕೈ ಸುಟ್ಟುಕೊಳ್ಳದಂತೆ ಜಾಗ್ರತೆ ವಹಿಸುವುದು ಓದುಗರಾಗಿ ನಮ್ಮೆಲ್ಲರ ಕರ್ತವ್ಯ.

ನನ್ನಜ್ಜ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದವರು. ಈ ಕಥೆ ನಡೆದ ಬೆಳ್ತಂಗಡಿಯಲ್ಲಿಯೇ ದೀರ್ಘಕಾಲ ಫಾರೆಸ್ಟ್ ಗಾರ್ಡ್ ಆಗಿ, ಆ ಬಳಿಕ ಫಾರೆಸ್ಟರ್ ಆಗಿ, ಅದಾಗಿ ಬಂದ ರೇಂಜರ್ ಹುದ್ದೆಗೆ ಪದೋನ್ನತಿಯನ್ನು ತನ್ನ ಶಿಕ್ಷಣದ ಮಿತಿ ಅದಕ್ಕೆ ಅವಕಾಶ ಮಾಡಿಕೊಡದು ಎಂಬ ಕಾರಣಕ್ಕಾಗಿ ನಿರಾಕರಿಸಿ, ಫಾರೆಸ್ಟರ್ ಆಗಿಯೇ ನಿವೃತ್ತರಾದವರು. ಕಾಡಿನ ಕಥೆಗಳನ್ನು ಅವರಿಂದಲೇ ಕೇಳಿದ್ದ ನಾನು ಒಂದು ಹಂತದಲ್ಲಿ ಬಿಎಸ್ಸಿ ಫಾರೆಸ್ಟರಿ ಮಾಡಿ, ನಮ್ಮ ಕುಟುಂಬದ ರಿವಾಜಿನಂತೆ ಅರಣ್ಯ ಇಲಾಖೆ ಸೇರಬೇಕೆಂದು ಮನಸ್ಸು ಮಾಡಿದ್ದಿದೆ. ನನ್ನ ಅಂದಿನ ಮಾರ್ಕುಗಳಿಗೆ ಸೀಟು ಸಿಗದೆ ಮೂಲವಿಜ್ಞಾನಗಳ ಬಿಎಸ್ಸಿಗೆ ಸೇರಿಕೊಂಡೆ. ಅದು ಹಳೇಕಥೆ.

ಆದರೆ, ಬ್ರಿಟಿಷ್ ಆಡಳಿತದ ಕೊನೆಯ ಕಾಲದಲ್ಲಿ ಮತ್ತು ಧರ್ಮಸ್ಥಳದಲ್ಲಿ ರತ್ನವರ್ಮ ಹೆಗ್ಗಡೆ ಅವರು ಮುಖ್ಯಸ್ಥರಾಗಿದ್ದ ಕಾಲದಲ್ಲಿ ಬೆಳ್ತಂಗಡಿಯಲ್ಲೇ ದೀರ್ಘಕಾಲ ಇದ್ದ (ಆ ಬಳಿಕ ಹೆಬ್ರಿ, ಕಾರ್ಕಳ, ಕೊಲ್ಲೂರು, ಕಿರಿಮಂಜೇಶ್ವರ) ಅಜ್ಜ ಯಾವಾಗಲೂ ಕಾಡಿನ, ಅವರ ವೃತ್ತಿಯ ಕಥೆಗಳನ್ನು ಹೇಳುವಾಗ ಅಲ್ಲಿ, ಆನೆ ಚಾರ್ಜಿನ, ಕಾಡು ಬೆಳೆಸಿದ, ಕಾಡನ್ನು ಬೆಂಕಿಯಿಂದ ಕಾಪಾಡಿದ, ಕಳ್ಳನಾಟಾದವರನ್ನು ಹಿಡಿದ, ಊರಿನ ಹಿತರಕ್ಷಣೆಗೆ ಅಧಿಕಾರಿಗಳೊಂದಿಗಿನ ಜಟಾಪಟಿಗಳ ಕಥೆಗಳನ್ನೇ ಹೇಳುತ್ತಿದ್ದರು. ಹಾಗಾಗಿ ಕಾಡಿಗೆ ಮತ್ತು ಕಾಡಿನ ಬದುಕಿಗೆ ಕಾಡಿನ ರಕ್ಷಕರೇ ಎರವಾಗುವ ಸಾಧ್ಯತೆಗಳೂ ಇರಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ನಾನು ಮಾಧ್ಯಮ ವೃತ್ತಿಗೆ ಬಂದ ಬಳಿಕವೇ ಇಂತಹದಕ್ಕೆಲ್ಲ ಕಣ್ಣು ತೆರೆಯತೊಡಗಿದ್ದು.

ಇಲ್ಲಿ ಹೇಳಲಾಗಿರುವ ಕುತ್ಲೂರು ಕಥೆ ಕೇವಲ ಒಂದು ಬೆಳಕಿಗೆ ಬಂದಿರುವ ಕಥೆ. ಕರಾವಳಿಯ ಘಟ್ಟದ ತಪ್ಪಲಿನ ಕಾಡುಗಳ ಉದ್ದಗಲಕ್ಕೂ ಇಂತಹ ನೂರಾರು ಕಥೆಗಳು ಕಾದು ಕುಳಿತಿರಬಹುದು. ಈ ಕಾಡಿನಂಚಿನ ಬದುಕು ಯಾವತ್ತೂ ಕಾಡಿಗೆ ಹಾನಿ ಮಾಡುವಂತಹದಾಗಿರಲಿಲ್ಲ. ಯಾವತ್ತು ಕಾಡುತ್ಪನ್ನಗಳು ವಾಣಿಜ್ಯಕ್ಕೆ/ಕೈಗಾರಿಕೀಕರಣದ ಬಳಿಕ ಕಚ್ಛಾವಸ್ತುಗಳ ಸರಬರಾಜಿಗೆ/ವಸತಿ ಕ್ಷೇತ್ರ-ಜನಸಂಖ್ಯೆ ಬೆಳೆದು ಮರಮಟ್ಟುಗಳಿಗೆ ವ್ಯಾಪಾರಿ ಬೆಲೆ ಬಂದಂತೆ ಯಾವಾಗ ಊರ ನಡುವೆ ಇದ್ದವರು ಕಾಡು ಹೊಕ್ಕರೋ ಅಂದಿನಿಂದಲೇ ಕಾಡುಗಳ ಅವನತಿ ಶುರುವಾಯಿತು.

ಒಮ್ಮೆ ಕೊಲ್ಲೂರು ಕಡೆ ಒಟ್ಟಿಗೆ ಕಾರಲ್ಲಿ ಹೋಗುತ್ತಿದ್ದಾಗ, ಆವರ ಅಂತಿಮ ದಿನಗಳಲ್ಲಿದ್ದ ಅಜ್ಜ ಹೇಳಿದ ಮಾತು ನೆನಪಿದೆ. “ನಮ್ಮ ಕಾಲದಲ್ಲಿ ಒಬ್ಬ ಫಾರೆಸ್ಟರ್ ನೋಡಿಕೊಳ್ಳುತ್ತಿದ್ದ ಕಾಡಿನ ವ್ಯಾಪ್ತಿಗೆ ಈಗ ಒಬ್ಬ ಎಸಿಎಫ್, ಮೂರು ನಾಲ್ಕು ರೇಂಜರು, ಹತ್ತಾರು ಫಾರೆಸ್ಟರ್ ಇದ್ದಾರೆ ಆದರೆ, ಕಾಡು ಜಾಸ್ತಿ ಆಗುವ ಬದಲು ಕಡಿಮೆ ಆಗ್ತಿದೆ!”

ನನ್ನ ಅಜ್ಜನ ಈ ಮಾತು, ನಮ್ಮ ಸರ್ಕಾರಗಳ ಅರಣ್ಯ ಪ್ರೀತಿ, ಅರಣ್ಯ ನೀತಿ, ಈ ಪುಸ್ತಕದ ಹೂರಣ ಎಲ್ಲವನ್ನೂ ಒಂದೇ ವಾಕ್ಯದಲ್ಲಿ ವಿವರಿಸುತ್ತದೆ. ಇಷ್ಟು ಸಾಕು. ಉಳಿದಂತೆ, ನೀವು ಓದಲೇ ಬೇಕಾದ ಪುಸ್ತಕ ಇದು. ಮಲೆಕುಡಿಯರು, ನಕ್ಸಲ್ಬಾರಿ, ಅರಣ್ಯ ಇಲಾಖೆ, ರಾಜಕೀಯ, ಹೋರಾಟ, ಮಾಧ್ಯಮ, ನ್ಯಾಯಾಲಯ… ಒಂದು ಕ್ರೈಮ್ ಥ್ರಿಲ್ಲರಿಗೆ ಬೇಕಾದ ಎಲ್ಲ ಹೂರಣಗಳೂ ಇಲ್ಲಿವೆ. ಹಾಗಾಗಿ ನೀವು ಪರಿಸರದ ಪರ ಇದ್ದರೂ, ಪರಿಸರದ ಕುರಿತು ಆಸಕ್ತಿ ಇಲ್ಲದಿದ್ದರೂ ಓದಬಹುದಾದ ಪುಸ್ತಕ ಇದು. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ ಎಂಬ ಭರವಸೆಯನ್ನು ನಾನು ಕೊಡುತ್ತೇನೆ. ನಾಳೆ ಮಂಗಳೂರಿನಲ್ಲಿ ಬಿಡುಗಡೆ ಆಗಲಿರುವ ಈ ಪುಸ್ತಕವನ್ನು ದಯವಿಟ್ಟು ಕೊಂಡು ಓದಿ.

ಇಂತಹದೊಂದು ಎದೆ ಹಿಂಡುವ (ಬೇಕಿದ್ದರೆ ಎದೆ ನಡುಗಿಸುವ ಎಂದುಕೊಳ್ಳಿ) ಕಥನವನ್ನು ಕಟ್ಟಿಕೊಡುವ ಮೂಲಕ ತಮ್ಮ ವೃತ್ತಿ ಅನುಭವವನ್ನು ಲೋಕಾನುಭವಕ್ಕೆ ತೆರೆದದ್ದಕ್ಕಾಗಿ ಲೇಖಕ ನವೀನ್ ಸೂರಿಂಜೆ (Naveen Soorinje) ಅವರಿಗೆ ಅಭಿನಂದನೆಗಳು. ಅವರು ಇದು ರಾಜಕೀಯ - ಸಾಮಾಜಿಕ ಚರ್ಚೆಗಾಗಿ ಬರೆದ ಪುಸ್ತಕ ಎಂದು ಲೇಖಕರ ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಈ ಚರ್ಚೆ ನಡೆಯುವುದಿದ್ದರೆ, ನಮಗೆ ಈಗಿರುವಂತಹ ಅರಣ್ಯ ಇಲಾಖೆ, ಅರಣ್ಯ ರಕ್ಷಕರು ಅಗತ್ಯ ಇದೆಯೆ ಎಂಬಲ್ಲಿಂದಲೇ ಚರ್ಚೆ ಆರಂಭ ಆಗಬೇಕು.

- ರಾಜಾರಾಂ ತಲ್ಲೂರು

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...