ಅಡಿಕೆ ಚೊಗರಿಗೂ ಈಗ ಬೇಡಿಕೆ : ʼಅಪʼ ಚೊಗರಿನ ರಾಯಭಾರಿ!


"ಹಲಸು ಮತ್ತು ಬಾಕಾಹು ಹೊಸ ಎತ್ತರಕ್ಕೇರಿದವು. ಅಂತಹುದೇ ಕೊಂಡಿಯನ್ನು ಈಗ ಚೊಗರಿಗೆ ಸಂಬಂಧಿಸಿಯೂ ಅಪ ಕಲ್ಪಿಸುತ್ತಿದೆ. ಚೊಗರಿನ ಪಾರ್ಸೆಲ್‌ಗಳು ಹಲವೆಡೆಗಳಿಗೆ ರವಾನೆಯಾಗಿದ್ದು ಅಡಿಕೆ ಬಣ್ಣದಲ್ಲಿ ಮಿಂದೆದ್ದ ಬಟ್ಟೆ-ಬುಗುರಿಗಳ ಮಾದರಿಗಳು ಪುತ್ತೂರಿಗೆ ಬರತೊಡಗಿವೆ. ಅಪ ಈಗ ಚೊಗರಿನ ರಾಯಭಾರಿ!" ಶ್ರೀ ಪಡ್ರೆ ಅವರ ಅಡಿಕೆ ಚೊಗರುʼ ಕೃತಿಯ ಕುರಿತು ಶಿವರಾಂ ಪೈಲೂರು ಅವರು ಬರೆದಿದ್ದಾರೆ.

ಅಡಿಕೆ ಪತ್ರಿಕೆ ಇನ್ನೊಂದು ಮಹತ್ವದ ಕೆಲಸ ಮಾಡಿದೆ. ಹಲಸು, ಬಾಕಾಹು ಹಾದಿಯಲ್ಲಿ ಇದೀಗ ಅಡಿಕೆ ಚೊಗರಿನ ಬೆನ್ನತ್ತಿ ಜಗತ್ತನ್ನೇ ಜಾಲಾಡಿ ಆಸಕ್ತಿಯುತ ಹಲವಾರು ಮಾಹಿತಿಗಳನ್ನು ಕಲೆಹಾಕಿದೆ; ರುಚಿಕಟ್ಟಾದ ಪಾಕ ಸಿದ್ಧಪಡಿಸಿ ಓದುಗರಿಗೆ ಉಣಬಡಿಸಿದೆ. ಮಾತ್ರವಲ್ಲ, ಉದ್ಯಮ ರಂಗಕ್ಕೂ ಪ್ರೇರಣೆ ನೀಡಿದೆ.ಕನ್ನಡ ಪತ್ರಿಕೋದ್ಯಮದಲ್ಲಿ ಇದೊಂದು ಮೈಲಿಗಲ್ಲೇ ಸರಿ. ಇಂತಹ ಬೇರೆ ಉದಾಹರಣೆ ಸಿಗಲಾರದು.

ಇದು ಲೇಖನದ ವಸ್ತುವಾಗಿ ಬರಿಗಣ್ಣಿಗೆ ಕಾಣುವಂತಹ ಸಂಗತಿಯೇ ಅಲ್ಲ. ಜಿಗ್‌ಸಾ ಪಝಲ್ (ಚಿತ್ರಬಂಧ) ಊಹಿಸಿಕೊಳ್ಳಿ. ಒಂದು ಚಿತ್ರದ ಬೇರೆಬೇರೆ ರಟ್ಟಿನ ತುಣುಕುಗಳನ್ನು ಇಂಟರ್‌ಲಾಕ್‌ನಂತೆ ಒಂದಕ್ಕೊಂದು ಜೋಡಿಸುತ್ತಾ ಕೊನೆಯಲ್ಲಿ ಎಲ್ಲ ತುಂಡುಗಳು ಸೇರಿದಾಗ ಸುಂದರ ದೃಶ್ಯ ಅನಾವರಣಗೊಳ್ಳುವ, ಮಿದುಳಿಗೆ ಕಸರತ್ತು ನೀಡುವ ಆಟವಿದು.

ಅಂಕುಡೊಂಕಾಗಿ ಕತ್ತರಿಸಲ್ಪಟ್ಟ ಪ್ರತಿಯೊಂದು ತುಂಡಿನಲ್ಲೂ ಇಡೀ ಚಿತ್ರದ ಯಾವುದಾದರೊಂದು ಭಾಗವಿರುತ್ತದೆ. ಆ ದೃಶ್ಯ ಯಾವುದೆಂದು ಚಿತ್ರಬಂಧದ ತುಂಡುಗಳಿರುವ ಪೆಟ್ಟಿಗೆಯ ಮೇಲ್ಭಾಗದಲ್ಲಿ ಮುದ್ರಿಸಿರುತ್ತಾರೆ. ಹಾಗಾಗಿ ಅದನ್ನು ನೋಡಿಕೊಂಡು ಆಕಾಶ ಎಲ್ಲಿ ಬರುತ್ತದೆ, ಗುಡ್ಡಬೆಟ್ಟಗಳು ಎಲ್ಲಿವೆ, ಹಕ್ಕಿಗಳು ಎಲ್ಲಿ ಹಾರುತ್ತವೆ ಎಂಬುದನ್ನು ಮನದಲ್ಲಿ ಚಿತ್ರಿಸಿಕೊಂಡು ಅದಕ್ಕೆ ಅನುಗುಣವಾಗಿ ತುಂಡುಗಳನ್ನು ಹೊಂದಿಸುತ್ತಾ ಹೋದರಾಯಿತು.

ಆದರೆ ಅಡಿಕೆ ಪತ್ರಿಕೆ ಬಳಿ ಆರಂಭದಲ್ಲಿ ಇದ್ದದ್ದು ಹೆಗ್ಗೋಡಿನ ಚರಕ ಮತ್ತು ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ಅಡಿಕೆ ಚೊಗರನ್ನು ಬಟ್ಟೆಗೆ ಬಣ್ಣವಾಗಿ ಬಳಸುತ್ತಿವೆ ಎಂಬ ಮಾಹಿತಿ ಮಾತ್ರ. ಚಿತ್ರಬಂಧದ ಒಂದೆರಡೇ ತುಣುಕುಗಳು! ಅಂತಿಮ ಸ್ವರೂಪದ ಚಿತ್ರಣವೂ ಇಲ್ಲ; ಬೇರೆ ತುಂಡುಗಳೂ ಇಲ್ಲ. ಅಬ್ಬಬ್ಬಾ ಎಂದರೆ ಒಂದು ವಿಶೇಷ ಲೇಖನದಲ್ಲಿ ಮುಗಿದುಹೋಗಬಹುದಾದ ವಸ್ತುವಿದು. ಅಷ್ಟಕ್ಕೇ ಸೀಮಿತವಾಗಿದ್ದರೂ ಅದು ಕೂಡ ಎಕ್ಸ್‌ಕ್ಲೂಸಿವ್ ಲೇಖನವೇ.

ಆದರೆ ಅಪ ತಂಡ ಕಳೆದ ನಾಲ್ಕೆ ದು ತಿಂಗಳಲ್ಲಿ ಚೊಗರಿಗೆ ಸಂಬಂಧಿಸಿದ ಹತ್ತಾರು ಸಂಗತಿಗಳನ್ನು ಕರ್ನಾಟಕದ ವಿವಿಧೆಡೆಗಳಿಂದ ಮಾತ್ರವಲ್ಲ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ, ಗುಜರಾತಿನಿಂದಲೂ ಶೋಧಿಸಿದ್ದಲ್ಲದೆ ಸಾಗರದಾಚೆಗಿನ ಅಮೆರಿಕ, ಜಪಾನ್, ಇಂಡೋನೇಷ್ಯಾ, ಚೀನಾ, ತೈವಾನ್, ಬಾಂಗ್ಲಾದೇಶದಿಂದಲೂ ಕಲೆಹಾಕಿತು. ಶ್ರೀ ಪಡ್ರೆ ಅವರು ತಮ್ಮೆಲ್ಲ ‘ಪತ್ರಿಕೋದ್ಯಮ ಹತ್ಯಾರು’ಗಳನ್ನು ಬಳಸಿ ಚೊಗರು ಚಿತ್ರಬಂಧದ ಒಂದೊಂದೇ ಎಸಳನ್ನು ಎಲ್ಲೆಲ್ಲಿಂದಲೋ ಹೆಕ್ಕಿತಂದು ಜೋಡಿಸುತ್ತಾ ಬಂದರು. ಪರಿಣಾಮವಾಗಿ, ಚೊಗರಿನ ಚಿತ್ರ ಒಂದೆರಡಲ್ಲ, ನಾಲ್ಕೆ ದು ಸಂಚಿಕೆ ದಾಟಿ ಮುಂದುವರಿದಿದೆ. ಈ ಅಪರೂಪದ, ಆದರೆ ಅಪೂರ್ಣವಾಗಿರುವ ಚಿತ್ರಕ್ಕೆ ಈಗ ಆಗಿರುವಷ್ಟಕ್ಕೇ ಒಂದು ಫ್ರೇಮು ಹಾಕಿ ನಿಮ್ಮ ಮುಂದಿಡುತ್ತಿದ್ದೇವೆ.

ಯಾವುದೇ ಗಂಭೀರ ವಿಷಯಕ್ಕೆ ಸಂಬಂಧಿಸಿ ಎದುರುಬದುರು ಕೂತು ಸಂದರ್ಶನ ಮಾಡುವುದೇ ತ್ರಾಸದಾಯಕ. ಹೀಗಿರುವಾಗ ದೇಶವಿದೇಶದ ಯಾವುದೋ ಮೂಲೆಯಲ್ಲಿರುವ, ನೂರಕ್ಕೆ ನೂರು ಅಪರಿಚಿತವಾಗಿರುವ ವ್ಯಕ್ತಿಯನ್ನು ಮಾತಿಗೆಳೆಯುವುದು ಪತ್ರಕರ್ತನಿಗೆ ದೊಡ್ಡ ಸವಾಲೇ ಸರಿ. ಸಾಮಾನ್ಯವಾಗಿ ನಮ್ಮ ಬಳಿ ಆ ಕಡೆಯವರಿಗೆ ಪ್ರಯೋಜನವಾಗುವ ಏನಾದರೂ ಮಾಹಿತಿ ಇದೆ ಎಂಬುದು ಅವರ ಅರಿವಿಗೆ ಬಂದರೆ ಅವರು ಒಂದು ಹೆಜ್ಜೆ ಮುಂದಿಡುತ್ತಾರೆ. ಇಲ್ಲವಾದರೆ ಏನಾದರೊಂದು ನೆಪಒಡ್ಡಿ ಹಿಂದೆಸರಿಯುವ ಪ್ರಮೇಯವೇ ಹೆಚ್ಚು.

ಪಡ್ರೆಯವರ ಹಿರಿಮೆಯೆಂದರೆ, ತಾವು ಕೈಗೆತ್ತಿಕೊಳ್ಳುವ ಹೊಸ ವಸ್ತುವಿನ ಬಗ್ಗೆ ಬಹುಬೇಗನೆ ಅಗಾಧ ಜ್ಞಾನಭಂಡಾರವನ್ನು ರೂಪಿಸಿಕೊಳ್ಳುವುದು. ಬೆರಳತುದಿಯಲ್ಲೇ ಸರ್ವಸಾರ. ಇದನ್ನು ಆಧಾರವಾಗಿಟ್ಟುಕೊಂಡೇ ಅವರು ಹೊರಗಿನವರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಸೂಕ್ತ ಸಮಯದಲ್ಲಿ ಆ ಕಡೆಯವರಿಗೆ ಇಷ್ಟಿಷ್ಟೇ ವಿವರ ನೀಡುತ್ತಾ, ತಮಗೆ ಬೇಕಾದ್ದನ್ನು ಅವರಿಂದ ಪಡೆಯುತ್ತಾ, ಕೊನೆಗೆ ಸಂದರ್ಶನ ಮುಗಿಯುವಷ್ಟರಲ್ಲಿ ಆ ಕಡೆಯ ವ್ಯಕ್ತಿ ಪಡ್ರೆಯವರಿಗೆ ಪೂರ್ಣ ಫಿದಾ ಆಗಿರುತ್ತಾರೆ! ‘ನಿಮ್ಮಲ್ಲಿಂದ ಚೊಗರಿನ ಸ್ಯಾಂಪಲ್ ಪಡೆಯುವುದು ಸಾಧ್ಯವೇ’ ಎಂದು ಅವರು ವಿನಂತಿಮಾಡುವಷ್ಟರ ಮಟ್ಟಿಗೆ ಅಪ ಸಂಪಾದಕರು ಪರಿಣಾಮ ಬೀರಿರುತ್ತಾರೆ.

ಹಿಂದೆ ಹಲಸು ಅಭಿಯಾನ ಕೈಗೊಂಡಾಗಲೂ ಇತ್ತೀಚೆಗೆ ಬಾಕಾಹು ಆಂದೋಲನ ನಡೆಸಿದಾಗಲೂ ಅಡಿಕೆ ಪತ್ರಿಕೆ ಆಯಾ ರಂಗಕ್ಕೆ ಸಂಬಂಧಿಸಿದ ಎಲ್ಲರನ್ನೂ, ಅಂದರೆ ರೈತರು, ವಿಜ್ಞಾನಿಗಳು, ಸಂಶೋಧನಾ ಕೇಂದ್ರಗಳು, ವಿವಿಗಳು, ಉದ್ಯಮಿಗಳು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಗೆ ತಂದು, ವ್ಯಾಪಕ ವಿಚಾರವಿನಿಮಯ ಏರ್ಪಡಿಸಿ, ಅದರಿಂದ ಎಲ್ಲರಿಗೂ ಪ್ರಯೋಜನವಾಗುವಂತೆ ಮಾಡಿರುವುದು ನಮಗೆಲ್ಲ ತಿಳಿದಿದೆ. ಅಪದಲ್ಲಿನ ಸರಣಿ ಲೇಖನಗಳು, ವಾಟ್ಸಪ್-ಫೇಸ್‌ಬುಕ್ ಪೋಸ್ಟ್‌ಗಳು, ಯೂಟ್ಯೂಬ್ ವೀಡಿಯೋಗಳು, ವಿವಿಧೆಡೆ ಏರ್ಪಾಡಾದ ಕಾರ್ಯಾಗಾರ-ತರಬೇತಿ ಶಿಬಿರಗಳು, ಮೇಳ- ಹಬ್ಬಗಳು... ಇವೆಲ್ಲವುಗಳಿಂದಾಗಿ ಹಲಸು ಮತ್ತು ಬಾಕಾಹು ಹೊಸ ಎತ್ತರಕ್ಕೇರಿದವು. ಅಂತಹುದೇ ಕೊಂಡಿಯನ್ನು ಈಗ ಚೊಗರಿಗೆ ಸಂಬಂಧಿಸಿಯೂ ಅಪ ಕಲ್ಪಿಸುತ್ತಿದೆ. ಚೊಗರಿನ ಪಾರ್ಸೆಲ್‌ಗಳು ಹಲವೆಡೆಗಳಿಗೆ ರವಾನೆಯಾಗಿದ್ದು ಅಡಿಕೆ ಬಣ್ಣದಲ್ಲಿ ಮಿಂದೆದ್ದ ಬಟ್ಟೆ-ಬುಗುರಿಗಳ ಮಾದರಿಗಳು ಪುತ್ತೂರಿಗೆ ಬರತೊಡಗಿವೆ. ಅಪ ಈಗ ಚೊಗರಿನ ರಾಯಭಾರಿ!

ಪತ್ರಿಕೆ ಒಂದು ವಿಷಯದ ಬೆನ್ನುಹಿಡಿದು ಇಷ್ಟೆಲ್ಲ ಉತ್ಕಟವಾಗಿ ತೊಡಗಿಕೊಳ್ಳುವುದರ ಹಿಂದಿರುವ ಏಕೈಕ ಉದ್ದೇಶವೆಂದರೆ ರೈತಹಿತ. ಈ ಉದ್ದೇಶ ಸಾಧನೆಗಾಗಿ ಅದು ಸತತವಾಗಿ ನವನವೀನ ಹಾದಿಯನ್ನು ಶೋಧಿಸುತ್ತಲೇ ಇದೆ; ಹೊಸಹೊಸ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದೆ. ಈ ಮೂಲಕ ಪತ್ರಿಕೋದ್ಯಮದ ವ್ಯಾಖ್ಯೆಯೂ ವಿಸ್ತಾರಗೊಳ್ಳುತ್ತಿದೆ. ಶ್ರೀ ಪಡ್ರೆ ಮುಂದಾಳತ್ವದ ಇಡೀ ಅಡಿಕೆ ಪತ್ರಿಕೆ ತಂಡಕ್ಕೆ ಅಕ್ಕರೆಯ ಅಭಿನಂದನೆಗಳು. ಜಂಟಿ ಸಹಭಾಗಿತ್ವದಲ್ಲಿ ಈ ಪುಸ್ತಕ ಪ್ರಕಟಣೆಗೆ ಅವಕಾಶ ಕಲ್ಪಿಸಿರುವುದಕ್ಕಾಗಿ ಫಾರ್ಮರ್ ಫಸ್ಟ್ ಟ್ರಸ್ಟಿಗೆ ನಮನಗಳು.

- ಶಿವರಾಂ ಪೈಲೂರು

ಕೃಷಿ ಮಾಧ್ಯಮ ಕೇಂದ್ರ

MORE FEATURES

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...