ಐತಿಹಾಸಿಕ ಮಹತ್ವದ ಕಾದಂಬರಿ ‘ಚೆನ್ನಭೈರಾದೇವಿ’


ಇತಿಹಾಸದ ಪುಟಗಳಲ್ಲಿ ಕಡೆಗಣಿಸಲ್ಪಟ್ಟು, ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದ, ಹೈವ, ಕೊಂಕಣ, ತುಳುನಾಡುಗಳ ಮಹಾಮಂಡಳೇಶ್ವರಿ 'ಕರಿಮೆಣಸಿನ ರಾಣಿ ಚೆನ್ನಭೈರಾದೇವಿ' ಈ ಕೃತಿಯ ಮೂಲಕ ಜನಮನದಲ್ಲಿ ಅಮರವಾಗಿ ನಿಲ್ಲುತ್ತಾಳೆ ಎನ್ನುತ್ತಾರೆ ಡಾ. ಅಜಿತ್ ಹರೀಶಿ. ಅವರು ಗಜಾನನ ಶರ್ಮ ಅವರ ‘ಚೆನ್ನಭೈರಾದೇವಿ’ ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ…

ಕೃತಿ: ಚೆನ್ನಭೈರಾದೇವಿ
ಕರಿಮೆಣಸಿನ ರಾಣಿಯ ಅಕಳಂಕ ಚರಿತೆ
ಲೇಖಕ: ಗಜಾನನ ಶರ್ಮ
ಪ್ರಕಾಶನ: ಅಂಕಿತ ಪುಸ್ತಕ

'ಪುನರ್ವಸು' ಕಾದಂಬರಿಯ ನಂತರ ಡಾ. ಗಜಾನನ ಶರ್ಮ ಅವರ ಬಹುನಿರೀಕ್ಷಿತ ಕಾದಂಬರಿ 'ಚೆನ್ನಭೈರಾದೇವಿ'. ಓದಿ ಮುಗಿಸಿದಾಗ ನಾನೂರು ವರ್ಷಗಳ ಹಿಂದೆ ಹೋಗಿ ಬಂದ ಅನುಭವ. ಬಿಗಿಯಾದ ನಿರೂಪಣೆ ಮತ್ತು ಆ ಕಾಲದ ರಾಜನೀತಿ, ಅರ್ಥನೀತಿ ಹಾಗೂ ಯುದ್ಧನೀತಿಗಳ ಮಹತ್ವದ ವಿವರಗಳಿಂದಾಗಿ ಕಾದಂಬರಿ ಓದಲು ಹೆಚ್ಚು ಸಮಯ ಬೇಡುತ್ತದೆ.

ಕಾಡಿನಲ್ಲಿ ಬೆಳೆಯುತ್ತಿದ್ದ ಕಾಳುಮೆಣಸು ಅಥವಾ ಕರಿಮೆಣಸನ್ನು ತೋಟಗಳಲ್ಲಿ ಬೆಳೆಯಲು ಪ್ರಜೆಗಳನ್ನು ಪ್ರೋತ್ಸಾಹಿಸಿ, ಅದನ್ನು ಯುರೋಪಿಗೆ ರಫ್ತು ಮಾಡುವ ಮೂಲಕ ಕರಿಮೆಣಸಿನ ರಾಣಿ (ರೈನಾ ದಿ ಪಿಮೆಂಟಾ) ಎಂದು ಹೆಸರಾದ ಚೆನ್ನಭೈರಾದೇವಿ ಇಲ್ಲಿ ಪ್ರಜಾವತ್ಸಲ ರಾಣಿಯಾಗಿ, ಯುದ್ಧಕ್ಕೆ ನಿಂತರೆ ಧೀಮಂತ ದೇಶಭಕ್ತಳಾಗಿ, ತೀರಾ ಆಪ್ತರಿಗೆ ಸಣ್ಣಮ್ಮ, ಕಟ್ಟಕಡೆಯ ನಾಗರಿಕನಿಗೂ ನೆಮ್ಮದಿಯ ಜೀವನ ಕರುಣಿಸಿದ ಅವ್ವರಸಿ, ಜಿನ ಧರ್ಮದ ಪೂಜನಪರಳಾದ ಶ್ರಾವಕಿಯಾಗಿ ಕಾಣಿಸಿಕೊಂಡಿದ್ದಾಳೆ. ಬೇರೆ ಬೇರೆ ಪಾತ್ರಗಳಾಗಿ ರಾಣಿ ಚೆನ್ನಭೈರಾದೇವಿಯ ಸಮಗ್ರ ವ್ಯಕ್ತಿತ್ವ ಅನಾವರಣಗೊಂಡಿದೆ. ಲೇಖಕರೇ ಹೇಳಿದಂತೆ ಇದು ರಾಣಿಯ ಚರಿತ್ರೆ ಅಲ್ಲ, ವಾಸ್ತವ ಜೀವನವೂ ಅಲ್ಲ. ಐತಿಹಾಸಿಕ ಸತ್ಯಗಳಿಗೆ ಕಲ್ಪನೆಯನ್ನು ಬೆರೆಸಿ ಹದ ಮಾಡಿದ ಮಿಶ್ರಣ ಈ ಕಾದಂಬರಿಯ ಹೂರಣ. ಗೇರುಸೊಪ್ಪ, ಹೊನ್ನಾವರ ಭಾಗಗಳ ಇಂದಿನ ಕೆಲವು ಊರುಗಳ ಹೆಸರುಗಳು ರಾಣಿಯ ಕಾಲದ ಕೆಲವು ಘಟನಾವಳಿ ಮತ್ತು ಚಟುವಟಿಕೆಗಳ ಆಧಾರದ ಮೇಲೆಯೇ ಬಂದ ಹೆಸರುಗಳು ಎಂಬುದಕ್ಕೆ ಸಕಾರಣವಾದ ವಿವರಣೆ ಇಲ್ಲಿದೆ. ಇವು ಚೆನ್ನಭೈರಾದೇವಿಯ ಆಡಳಿತದ ಚರಿತ್ರೆಯನ್ನು ಇಂದಿಗೂ ಜೀವಂತವಾಗಿ ಉಳಿಸಿವೆ.

ಚೆನ್ನಭೈರಾದೇವಿಯ ರಾಜ್ಯದ ನಕಾಶೆ, ಜೈನ ಬಸದಿಗಳ ಸ್ಥಳ ಮತ್ತು ರಚನಾ ವಿನ್ಯಾಸದ ವಿವರಗಳು, ಪೋರ್ಚುಗೀಸರ ಜೊತೆಗಿನ ವ್ಯಾಪಾರ ತಂತ್ರ ಮತ್ತು ಸಾಂದರ್ಭಿಕವಾಗಿ ಅಲ್ಲಲ್ಲಿ ಬರುವ ಇತರ ಕೆಲವು ಉತ್ತಮ ಮಾಹಿತಿಗಳಿಂದ ಕೂಡಿದ ಮಾಹಿತಿಯುಕ್ತ ಕಾದಂಬರಿ ಇದು. ಜೊತೆಗೆ ಸಲ್ಲೇಖನ, ಪಂಚಾಣುವ್ರತ, ಅನೇಕಾಂತವಾದ ಮೊದಲಾದ ಜೈನ ಧರ್ಮದ ಧಾರ್ಮಿಕ ಆಚರಣೆಗಳ ವಿವರ ಕೂಡ ಇಲ್ಲಿದೆ. ಪೋರ್ಚುಗೀಸರ ವಶವಾದ ಗೋವಾದಲ್ಲಿ ನಡೆಯುತ್ತಿದ್ದ ಒತ್ತಾಯದ ಮತಾಂತರ, ಭಾರತೀಯರು ಮತ್ತು ಪೋರ್ಚುಗೀಸರ ನಡುವಿನ ಧಾರ್ಮಿಕ ದಂಗೆಗಳ ನೈಜವೆನಿಸುವ ಚಿತ್ರಣ ಓದಿದಾಗ ಹೃದಯ ದ್ರವಿಸುತ್ತದೆ. ಪೋರ್ಚುಗೀಸರ ನಿರ್ದಾಕ್ಷಿಣ್ಯ ನಿಲುವಿನಿಂದ ಮತಾಂತರಗೊಂಡು, ಬಲವಂತವಾಗಿ ಪೋರ್ಚುಗಲ್ಲಿಗೇ ಕರೆದೊಯ್ಯಲ್ಪಟ್ಟರೂ ಅಲ್ಲಿನ ಮಹತ್ವದ ಮಾಹಿತಿಗಳನ್ನು ಭಾರತಕ್ಕೆ ತಲುಪಿಸಲು ಪ್ರಯತ್ನಿಸುವ ಅಪ್ಪಟ ದೇಶಪ್ರೇಮಿ ಜಿನದತ್ತ ಸಿದ್ಧಾಂತಿಯ ಪಾತ್ರ ಬಹುವಾಗಿ ಕಾಡುತ್ತದೆ.

ಸಾಮಾಜಿಕ ಜೀವನದ ವಿವರಣೆ ನಮ್ಮನ್ನು ಆ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಗೇರುಸೊಪ್ಪ, ಹೊನ್ನಾವರ ಭಾಗಗಳ ಪರಿಚಯವಿರುವ ಜನರು ಇಂದು ಉಳಿದ ಜೈನ ಬಸದಿಗಳ ಅವಶೇಷಗಳೊಂದಿಗೆ ಕಥೆಯಲ್ಲಿ ಬರುವ ವಿವರಗಳನ್ನು ಜೋಡಿಸಿಕೊಂಡಾಗ ಚದುರಿದ ಚಿತ್ರದ ಚೂರುಗಳನ್ನು ಜೋಡಿಸಿ ಒಂದು ಪೂರ್ಣ ಚಿತ್ರವಾದಂತೆ ಒಂದು ಚಿತ್ರಣ ಸಿಗುತ್ತದೆ. ಸತ್ಯ ಮತ್ತು ಕಲ್ಪನೆಗಳ ಆಧಾರದ ಮೇಲೆ ವರ್ತಮಾನವನ್ನು ಭೂತಕಾಲದೊಂದಿಗೆ ಜೋಡಿಸಬಲ್ಲ ಲೇಖಕರ ಸೃಜನಶೀಲತೆ ಅಸಾಮಾನ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ರಾಜರುಗಳ ಒಳಜಗಳಗಳೇ, ಪೋರ್ಚುಗೀಸರು ಗೋವಾದಲ್ಲಿ ಬಹುಕಾಲ ನೆಲೆಯೂರಲು ಕಾರಣ ಎಂಬ ವಿವರ ಒಗ್ಗಟ್ಟಿನ ಪಾಠ ಕಲಿಸುತ್ತದೆ. ಚೆನ್ನಭೈರಾದೇವಿಯ ಕುರಿತು ಸುದೀರ್ಘ ಅಧ್ಯಯನ ನಡೆಸಿ, ಹಲವು ವಿಶಿಷ್ಟ ಮಾಹಿತಿಗಳನ್ನು ಗಜಾನನ ಶರ್ಮರು ಈ ಕಾದಂಬರಿಯ ಮೂಲಕ ಒದಗಿಸಿದ್ದಾರೆ.

ಇತಿಹಾಸದ ಪುಟಗಳಲ್ಲಿ ಕಡೆಗಣಿಸಲ್ಪಟ್ಟು, ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದ, ಹೈವ, ಕೊಂಕಣ, ತುಳುನಾಡುಗಳ ಮಹಾಮಂಡಳೇಶ್ವರಿ 'ಕರಿಮೆಣಸಿನ ರಾಣಿ ಚೆನ್ನಭೈರಾದೇವಿ' ಈ ಕೃತಿಯ ಮೂಲಕ ಜನಮನದಲ್ಲಿ ಅಮರವಾಗಿ ನಿಲ್ಲುತ್ತಾಳೆ. ಬೆನ್ನುಡಿಯಲ್ಲಿ ಜೋಗಿ ಅವರು ಹೇಳಿದಂತೆ 'ಈ ಕೃತಿ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ'. ಇಂತದ್ದೊಂದು ಅಪರೂಪದ, ಐತಿಹಾಸಿಕ ಮಹತ್ವದ ಕಾದಂಬರಿಗಾಗಿ ಡಾ. ಗಜಾನನ ಶರ್ಮರಿಗೆ ಧನ್ಯವಾದಗಳು.

**

ಗಜಾನನ ಶರ್ಮ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಚೆನ್ನಭೈರಾದೇವಿ ಕೃತಿ ಪರಿಚಯ ಇಲ್ಲಿದೆ...
ಅಜಿತ್ ಹರೀಶಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...