ಅನುವಾದವೆಂದರೆ ಚಿಕ್ಕವಳಿದ್ದಾಗ ಮಣ್ಣಿನಲ್ಲಿ ಮನೆ ಕಟ್ಟಿ, ಆಡಿದಾಗಿನದ್ದೇ ಖುಷಿ: ಮೈತ್ರೇಯಿ ಕರ್ನೂರು


ತೇಜೋ ತುಂಗಭದ್ರಾದಲ್ಲಿ ಕಥೆಗೆ ಪ್ರಾಮುಖ್ಯವಿರುವುದರಿಂದ ನನಗೆ ವಸ್ತುನಿಷ್ಟ ವಿವರಗಳಿಗೆ ಹೆಚ್ಚುಗಮನಕೊಡಬೇಕಾಗಿ ಬಂತು; ಇಲ್ಲಿ ಶಬ್ದಗಳಿಗಿಂತ ಹೆಚ್ಚಾಗಿ ಭಾವಗಳ ಜತೆ ಕಸರತ್ತುಮಾಡುವ ಅನುಭವವಾಯಿತು. ಕಥೇಯ ವೇಗ, ಹೊಸಹೊಸ ತಿರುವುಗಳು ಮನರಂಜನೆ ನೀಡುವಂಥವು. ತೇಜೋ ತುಂಗಭದ್ರಾ ನನ್ನನ್ನುಆಯಾಸಕ್ಕೆ ಅವಕಾಶಕೊಡದೇ ದುಡಿಸಿಕೊಂಡು ಹೋಯಿತು ಎನ್ನುತ್ತಾರೆ ಲೇಖಕಿ ಮೈತ್ರೇಯಿ ಕರ್ನೂರು. ವಸುಧೇಂದ್ರ ಅವರ ’ತೇಜೋ ತುಂಗಭದ್ರಾ’ ಕಾದಂಬರಿಯನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ಅವರು ಬುಕ್ ಬ್ರಹ್ಮ ಜೊತೆಗೆ ಆ ಅನುಭವವನ್ನು ಹಂಚಿಕೊಂಡಿದ್ದಾರೆ.

ಬುಕ್ ಬ್ರಹ್ಮ: ನಮಸ್ಕಾರ. ವಸುಧೇಂದ್ರ ಅವರ ’ತೇಜೋ ತುಂಗಭದ್ರಾ’ ಕಾದಂಬರಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದೀರಿ. ಅನುವಾದಕ್ಕೆ ಇದನ್ನು ತೆಗೆದುಕೊಳ್ಳುವಾಗ ನಿಮಗೆ ಅನ್ನಿಸಿದ್ದೇನು?
ಮೈತ್ರೇಯಿ ಕರ್ನೂರು: ವಸುಧೇಂದ್ರರವರು ಅವರ ಕಥಾಸಂಕಲನ ಒಂದನ್ನು ಅನುವಾದ ಮಾಡುವುದಕ್ಕೆ ನನ್ನನ್ನ ಒಂದು ಮೂರು ವರ್ಷಗಳ ಹಿಂದೆ ಕೇಳಿದ್ದರು. ಆವಾಗ ನಾನು ಡಿಪ್ರೆಶ್ಶನ್ನಿಂದ ಬಳಲುತ್ತಿದ್ದೆ. ಯಾವುದೇ ಕಥೆ-ಕವನ ಆಳವಾಗಿ ಓದುವ ಮನಃಸ್ಥಿತಿಯಲ್ಲಿರಲಿಲ್ಲ ಹಾಗಾಗಿ ಒಲ್ಲೆ ಅಂದಿದ್ದೆ. ತೇಜೋ ತುಂಗಭದ್ರಾ ಬರುವರಷ್ಟರಲ್ಲಿ ಸಾಕಷ್ಟು ಸುಧಾರಿಸಿಕೊಂಡಿದ್ದೆ. ಆಗಷ್ಟೇ ನನ್ನ ಸ್ವಂತ ಕಾದಂಬರಿ Sylvia: Distant Avuncular Ends ಪ್ರಕಟಗೊಂಡಿತ್ತು. ಒಂದು ರೀತಿಯ creative exhaustion ಬಂದಿತ್ತು. ಅಂಥ ಸಮಯದಲ್ಲಿ ಅನುವಾದದಷ್ಟು ಹೊಸ ಹುರುಪು ಬೇರೆ ಯಾವ ಕೆಲಸವೂ ನೀಡುವುದಿಲ್ಲ. ಅದಕ್ಕೆ ತುಂಬಾ ಖುಷಿಯಿಂದ ತೇಜೋ ತುಂಗಭದ್ರಾದ ಅನುವಾದ ಶುರು ಮಾಡಿದೆ.

ಬುಕ್ ಬ್ರಹ್ಮ: ಒಂದು ಅಪರೂಪದ ಕಥನವುಳ್ಳ ಮತ್ತು ಚರಿತ್ರೆ-ಕಲ್ಪನೆಗಳ ಬೆಸುಗೆಯಿಂದ ಮೂಡಿದ ಈ ಕಾದಂಬರಿಯನ್ನು ಇಂಗ್ಲಿಷ್‌ನಲ್ಲಿ ಅನುವಾದಿಸುವಾಗಿನ ಅನುಭವವನ್ನು ವಿವರಿಸುವುದಾದರೆ?
ಮೈತ್ರೇಯಿ ಕರ್ನೂರು: ನಾನು ಈ ಮೊದಲು ಶ್ರೀನಿವಾಸ್‌ ವೈದ್ಯರವರ ʼಹಳ್ಳ ಬಂತು ಹಳ್ಳʼದ ಅನುವಾದ ಮಾಡಿದ್ದೆ. ಹಾಗಾಗಿ ಕಾದಂಬರಿ ಅನುವಾದಕ್ಕೆ ಬೇಕಾಗುವ ಮಾನಸಿಕ ಕಮಿಟ್ಮೆಂಟ್‌ ಮತ್ತು ಶಿಸ್ತಿನ ಅನುಭವ ನನಗಿತ್ತು. ಅದಕ್ಕೆ ಇದಕ್ಕೆ ವ್ಯತ್ಯಾಸವೇನೆಂದರೆ, ವೈದ್ಯರ ಕಾದಂಬರಿಯಲ್ಲಿ ಭಾಷೆಯ ಬಳಕೆ ನನಗೆ ಚ್ಯಾಲೆಂಜಿಂಗ ಆದರೆ, ತೇಜೋ ತುಂಗಭದ್ರಾದಲ್ಲಿ ಕಥೆಗೆ ಪ್ರಾಮುಖ್ಯವಿರುವುದರಿಂದ ನನಗೆ ವಸ್ತುನಿಷ್ಟ ವಿವರಗಳಿಗೆ ಹೆಚ್ಚುಗಮನಕೊಡಬೇಕಾಗಿ ಬಂತು; ಇಲ್ಲಿ ಶಬ್ದಗಳಿಗಿಂತ ಹೆಚ್ಚಾಗಿ ಭಾವಗಳ ಜತೆ ಕಸರತ್ತುಮಾಡುವ ಅನುಭವವಾಯಿತು. ಕಥೇಯ ವೇಗ, ಹೊಸಹೊಸ ತಿರುವುಗಳು ಮನರಂಜನೆ ನೀಡುವಂಥವು. ತೇಜೋ ತುಂಗಭದ್ರಾ ನನ್ನನ್ನುಆಯಾಸಕ್ಕೆ ಅವಕಾಶಕೊಡದೇ ದುಡಿಸಿಕೊಂಡು ಹೋಯಿತು.

ಬುಕ್ ಬ್ರಹ್ಮ: ಎರಡು ನದೀತೀರಗಳ ಹಿನ್ನೆಲೆಯಲ್ಲಿ ನಡೆಯುವ ಬೇರೆ ಬೇರೆ ಕಥೆಗಳ ಈ ಕಾದಂಬರಿಯನ್ನು ಇಂಗ್ಲಿಷ್ ಓದುಗರ ದೃಷ್ಟಿಯಿಂದ ನೀವು ಗ್ರಹಿಸುವ ಬಗೆ?
ಮೈತ್ರೇಯಿ ಕರ್ನೂರು: ಸಾಮಾನ್ಯವಾಗಿ ಭಾರತೀಯ ಭಾಷೆಯ ಕೃತಿಗಳಲ್ಲಿ ಕಥಾವಸ್ತು ಮತ್ತು ಭಾಷೆ ಸಾವಯವವಾಗಿ ಬೆರೆತಿರುತ್ತವೆ; ಕನ್ನಡದ ಕಾದಂಬರಿಯೊಂದು ಸಹಸಹ ಕನ್ನಡಿಗರ ಕಥೆಯಾಗಿರುತ್ತವೆ. ಆದರೆ ತೇಜೋ ತುಂಗಭದ್ರಾದ ಅರ್ಧಕ್ಕರ್ಧ ವಸ್ತು ಪೋರ್ಚುಗಲ್‌ನದ್ದು. ಕನ್ನಡ ಕಾದಂಬರಿಕಾರರ ಮೇಲೆ ಇಂತಹ ಪ್ರಸಂಗದಲ್ಲಿ ಸೊಲ್ಪ ಮಟ್ಟಿಗೆ ಶೈಕ್ಷಣಿಕ ಜವಾಬ್ದಾರಿಯಿರುತ್ತದೆ: ಅಲ್ಲಿನ ಜೀವನ ಶೈಲಿ, ಆಚಾರ-ವಿಚಾರ, ಚರಿತ್ರೆ, ಈ ಎಲ್ಲದರ ವಿವರಗಳನ್ನು ಬಿಡಿಸಿ ಹೇಳಬೇಕಾಗುತ್ತದೆ. ಅದೇ ಕಥೆ ಇಂಗ್ಲೀಶಿನಲ್ಲಿ ಅಕ್ಷರಶಃ ಹೇಳಿದರೆ ಅದಕ್ಕೆ ಉಪದೇಶಾತ್ಮಕ ಬಣ್ಣ ಬರುತ್ತದೆ. ಅದು ಓದುವ ಅನುಭವಕ್ಕೆ ಅಡ್ಡಿ ಮಾಡುವಂಥದ್ದು. ಹಾಗಾಗಿ ನಾನು ಆಯ್ದ ಶಬ್ದಗಳು ಯುರೋಪಿಯನ್/ಇಂಗ್ಲೀಷ್‌ ಓದುಗರನನ್ನು ಕೃತಿಯೊಳಗೆ ಬರಮಾಡಿಕೊಂಡು ಕಥೆಯಲ್ಲಿ ಜತೆಗಾರರನ್ನಾಗಿಸಿಗೊಂಡು ಹೋಗುವ ಸೂಕ್ಷ್ಮತೆ ಹೊಂದಿರಬೇಕು ಎಂಬುದು ನನ್ನ ಆಶಯವಾಗಿತ್ತು. ಅದೇ ರೀತಿಯಲ್ಲಿ ವಿಜಯನಗರದ ಸಂಗತಿಗಳು ಹಚ್ಚು exoticise ಆಗಬಾರದು, ಸಹಜವಾಗಿರಬೇಕು ಎಂಬ ಎಚ್ಚರಿಕೆಯೂ ಕೂಡ ಆಗಾಗ ಮನಸಿಗೆ ತಂದುಕೊಡುತ್ತಿದ್ದೆ. ನನ್ನ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗಿವೆಯೆಂಬುದು ಇಂಗ್ಲೀಷ್ ಓದುಗರು ತಿಳಿಸಬೇಕು.

ಬುಕ್ ಬ್ರಹ್ಮ: ಒಬ್ಬ ಅನುವಾದಕರಾಗಿ ನೀವು ಅನುವಾದದ ಮಹತ್ವವನ್ನು ಕನ್ನಡದ ಸಂದರ್ಭದಲ್ಲಿ ಪರಿಭಾವಿಸುವುದಾದರೆ?
ಮೈತ್ರೇಯಿ ಕರ್ನೂರು: ಕನ್ನಡ ಸಾಹಿತ್ಯ ತುಂಬಾ ಶ್ರೀಮಂತವಾದದ್ದು. ಎಲ್ಲಾ ಭಾಷೆಗಳಂತೆ ನಮ್ಮಲ್ಲಿಯೂ ಅನನ್ಯತೆ ಇದೆ. ಕಥೆ-ಕವನ-ಕಾದಂಬರಿಗಳು ಭಾಷೆಯ ಬೇಲಿ ದಾಟಿ ನಡೆದಾಗ ಹೊಸ ರೂಪ ತಾಳುತ್ತವೆ – ಕಲ್ಪನೆ, ಅನುಭವ, ವಿಚಾರಗಳು ಸಮೃದ್ಧಗೊಳ್ಳುತ್ತವೆ. ಹಾಗಾಗಿ ಅನುವಾದದ ಕಾರ್ಯಕ್ಕೆ ದೊಡ್ಡ ಸಾಮಾಜಿಕ ಜವಾಬ್ದಾರಿಯಿದೆ. ಆದರೆ ನಾನು ಆನುವಾದ ಮಾಡುವಾಗ ಇವೆಲ್ಲ ಮಹತ್ವಾಕಾಂಕ್ಷಿ ಯೋಚನೆಗಳನ್ನು ಬದಿಗಿಟ್ಟು ನನ್ನೆದುರಿಗಿರುವ ಪೇಜಿನ ಮೇಲಷ್ಟೇ ಗಮನ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಅದರಿಂದ ನನಗೆ ಚಿಕ್ಕವಳಿದ್ದಾಗ ಮಣ್ಣಿನಲ್ಲಿ ಮನೆ ಕಟ್ಟಿ, ಗೊಂಬೆ ಮಾಡಿ ಆಡುವಾಗ ಸಿಕ್ಕಷ್ಟೇ ಸಂತೋಷ, ಸಮಾಧಾನ ಸಿಗುತ್ತದೆ.

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...