ಬೇಕು ಬೇಕು ಎನ್ನುವಾತನೇ ಬಡವ, ಸಾಕು ಎನ್ನುವಾತ ಶ್ರೀಮಂತ...


ನಿಸ್ವಾರ್ಥಿ ಸದಾ ಸುಖಿ, ಸ್ವಾರ್ಥಿಗೆ ಎಂದೂ ಸುಖವಿಲ್ಲ. ಅಹಂಕಾರ ಅವನತಿಯ ಹುಟ್ಟು. ಬೇಕು ಬೇಕು ಎನ್ನುವಾತನೇ ಬಡವ, ಸಾಕು ಎನ್ನುವಾತ ಶ್ರೀಮಂತ. ಇದನ್ನರಿತು ಬಾಳಿದರೆ ಧರೆಯೇ ಸ್ವರ್ಗ,ಇಲ್ಲದಿದ್ದರೆ ನರಕ.ಸ್ವಾರ್ಥ ಅನ್ನುವ ಕಿಚ್ಚು ನಂದಿ, ನಿಸ್ವಾರ್ಥ ಅನ್ನುವ ಬಳ್ಳಿ ಹಂದರವಾಗಿ ಹಬ್ಬಿದರೆ ಬದುಕು ಸುಂದರ-ಬಂಧುರವಾಗುವುದರಲ್ಲಿ ಸಂದೇಹವಿಲ್ಲವೆಂದು ಕವಿಯ ಮನೋಭಾವನೆ ಎನ್ನುತ್ತಾರೆ ಪ.ಗು. ಸಿದ್ಧಾಪುರ. ಲೇಖಕ ವಿಶ್ವನಾಥ ಅರಬಿ ಅವರ ವಿಶ್ವ ಚೇತನ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅದು ನಿಂತ ನೀರಲ್ಲ. ಸದಾ ಚೈತನ್ಯದ ಚಿಲುಮೆ. ಅದುವೇ 'ವಿಶ್ವಚೇತನ'. ಕಲ್ಲು ಹೃದಯವನ್ನು ಅರಳಿಸುವುದೇ ಸಾಹಿತ್ಯ. ಸಹೃದಯರನ್ನು ತಣಿಸಿ ಕುಣಿಸುವುದೇ ಸಾಹಿತ್ಯ. ಇಂಥ ಸಾಹಿತ್ಯ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದಕ್ಕೆ ಒಳ್ಳೆಯ ಪರಿಸರ,ನೀರು-ಗೊಬ್ಬರ ದೊರಕಿದಾಗ ಬೆಳೆದು ಹೆಮ್ಮರವಾಗುತ್ತದೆ.ಒಳ್ಳೆಯ ಫಸಲು ನೀಡುತ್ತದೆ. ಪರಿಶ್ರಮ ಬೇಕು,ಪ್ರಯತ್ನವಿಲ್ಲದಲೇ ಶಿಲೆ ಮೂರ್ತಿಯಾಗದು. ಮಣ್ಣು-ನೀರಿಲ್ಲದೆ ಬೀಜ ಮೊಳಕೆಯೊಡೆಯದು. ಅಕ್ಷರ ಸಂಯೋಜನೆ ಇಲ್ಲದೆ ಶಬ್ದ ರೂಪ ತಾಳದು. ರೂಪತಾಳಿದ ಶಬ್ದವೇ ಸಾಹಿತ್ಯ. ಆಸಕ್ತಿಯೇ ಅಭಿವೃದ್ಧಿಯ ಹುಟ್ಟು, ಇದು ಸಾಹಿತ್ಯದ ಒಳಗುಟ್ಟು ಎಂದು ಬೇರೆ ಹೇಳಬೇಕಾಗಿಲ್ಲ. ತರುಣ ಕವಿಮಿತ್ರ ವಿಶ್ವನಾಥ ಅರಬಿ ಅವರ ಚೊಚ್ಚಲ ಕೃತಿ 'ವಿಶ್ವ ಚೇತನ' ಬಿಚ್ಚಿ ನೋಡಿದಾಗ ಅಚ್ಚರಿಯಾಗದಿರಲಿಲ್ಲ.

ವಿಶ್ವನಾಥ ಅರಬಿಯವರು ವೃತ್ತಿಯಿಂದ ಗ್ರಾಮಲೆಕ್ಕಾಧಿಕಾರಿ. ಗ್ರಾಮಲೆಕ್ಕಾಧಿಕಾರಿಗೂ ಸಾಹಿತ್ಯಕ್ಕೂ ಎತ್ತಣಿಂದೆತ್ತ ಸಂಬಂಧ? ಸದಾ ಜನರ ಮಧ್ಯದಲ್ಲಿ ಹೊಲ ಮನೆಯ ಉತಾರ ಕೊಡುವುದರಲ್ಲಿಯೇ ಸಮಯ ಸಾಲದು. ಅಧ್ಯಯನಕ್ಕೆಲ್ಲಿದೆ ಅವಕಾಶ? ಶ್ರದ್ಧೆಯಿಂದ ವ್ಯಕ್ತಿ ಅವಕಾಶ ಮಾಡಿಕೊಳ್ಳುತ್ತಾನೆ, ಸಿದ್ಧಯ್ಯ ಪುರಾಣಿಕರು ಜಿಲ್ಲಾಧಿಕಾರಿಗಳಾಗಿದ್ದರು, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದರು. ಹೀಗೆ ಹೆಸರಿಸುತ್ತಾ ಹೋದರೆ ಸಾಕಷ್ಟು ಜನ ಅಧಿಕಾರಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ದೊಡ್ಡ ಪಟ್ಟಿಯೇ ಆಗುತ್ತದೆ.ಇದಕ್ಕೆಲ್ಲ ಕಾರಣ ಸಾಹಿತ್ಯದ ಹಸಿವು. ಹಸಿವು ಇದ್ದವ ಆಹಾರ ಹುಡುಕುತ್ತಾನೆ, ಹಾಗೆಯೇ ಸಾಹಿತ್ಯ ಯಾರ ಸ್ವತ್ತಲ್ಲ. ಅದು ನಿಂತ ನೀರೂ ಅಲ್ಲ. ಅರಬಿ ವಿಶ್ವನಾಥ ಎಳೆತನದಲ್ಲಿಯೇ ಸಾಹಿತ್ಯದ ಗೀಳು ಅಂಟಿಸಿಕೊಂಡಾತ, ಅಂತೆಯೇ ಆತನಿಂದ ಹುಬ್ಬೇರಿಸುವ ಕೃತಿ ರಚನೆಗೊಂಡು ಸಾರಸ್ವತಕ್ಕೆ ಹೊಸ ಮೆರಗು ತಂದಿದೆ ಎಂದು ಹೇಳಲು ಅಭಿಮಾನವೆನಿಸುತ್ತದೆ. 'ವಿಶ್ವಚೇತನ' ಕೃತಿಯಲ್ಲಿ ಸುಮಾರು 58 ಕವಿತೆಗಳಿವೆ. ಎಲ್ಲ ಕವಿತೆಗಳೂ ಒಂದಕ್ಕಿಂತ ಒಂದು ಉತ್ತಮ ಸಂದೇಶ ನೀಡುತ್ತವೆ. ಓದುತ್ತಾ ಹೋದಂತೆ ಖುಷಿ ನೀಡುತ್ತವೆಯೇ ಹೊರತು, ಬೇಜಾರು ಎನಿಸುವುದಿಲ್ಲ. ಎಲ್ಲವೂ ಜ್ವಲಂತ ಸಮಸ್ಯೆಗಳನ್ನು ಅನಾವರಣಗೊಳಿಸುತ್ತ ಸಾಗಿವೆ. ಕಂಡುಂಡ ನೋವುಗಳನ್ನು ಅಕ್ಷರರೂಪದಲ್ಲಿ ಭಟ್ಟಿ ಇಳಿಸಲಾಗಿದೆ.

"ನಾವು ದುಡಿಯುತ್ತೇವೆ
ನಾವು ಶ್ರಮಿಸುತ್ತೇವೆ
ನಮ್ಮ ಹೊಟ್ಟೆಯ ಹಸಿವು ನೀಗಿಸಲು
ನಮ್ಮ ಬದುಕನು ಸಾಗಿಸಲು"
ಉಳ್ಳವರು ಕೀಳಾಗಿ ಕಂಡರು
ಕಾಲು ಕಸದಂತೆ ನೋಡುವರು
ನಮ್ಮನ್ನು ಹಿಂಸಿಸಿ ದುಡಿಸುವರು
ನಾವು ಜೀವಿಗಳೆಂದು ಮರೆತರು"
(ನೋವಿಗೆ ಅಂತ್ಯವಿಲ್ಲವೇ)

ಉಳ್ಳವರ ಪಾಲಿನ ಕಥೆ-ವ್ಯಥೆ ಮನ ಹಿಂಡುವಂತೆ ಚಿತ್ರಿಸಿದ್ದಾರೆ. ಬಡವರ ಒಡಲಾಳದ ನೋವು ಬಲ್ಲಿದರಿಗೆ ಅರ್ಥವಾಗುವುದಿಲ್ಲ! ಅನುಭವಿಸಿದವರಿಗೇ ಗೊತ್ತು, ನೋವಿನ ತುತ್ತು.

"ನಾವುಗಳಾರೂ ಸಂಬಂಧಿಕರಲ್ಲ
ಸಹೋದರರಲ್ಲ, ಶಾಶ್ವತರಲ್ಲ
ನಿರಂತರರಲ್ಲ ಹೊಂದಿ ಬಾಳೋಣ
ಶಾಂತಿ ಮಂತ್ರವು ಮೊಳಗಬೇಕಿದೆ
ವಿಶ್ವ ಶಾಂತಿ ಎಲ್ಲೆಡೆ ಸಾರಬೇಕಿದೆ
ಒಂದೇ ಎನ್ನುವ ಭಾವ ಮೂಡಲಿ
ಅಹಂಕಾರ ಬೂದಿಯಾಗಲಿ
ಸ್ವಾರ್ಥ ಗುಣ ಸಾಯಲಿ"
(ಸ್ವಾರ್ಥ ಸಾಯಲಿ)

ನಿಸ್ವಾರ್ಥಿ ಸದಾ ಸುಖಿ, ಸ್ವಾರ್ಥಿಗೆ ಎಂದೂ ಸುಖವಿಲ್ಲ. ಅಹಂಕಾರ ಅವನತಿಯ ಹುಟ್ಟು. ಬೇಕು ಬೇಕು ಎನ್ನುವಾತನೇ ಬಡವ, ಸಾಕು ಎನ್ನುವಾತ ಶ್ರೀಮಂತ. ಇದನ್ನರಿತು ಬಾಳಿದರೆ ಧರೆಯೇ ಸ್ವರ್ಗ,ಇಲ್ಲದಿದ್ದರೆ ನರಕ.ಸ್ವಾರ್ಥ ಅನ್ನುವ ಕಿಚ್ಚು ನಂದಿ, ನಿಸ್ವಾರ್ಥ ಅನ್ನುವ ಬಳ್ಳಿ ಹಂದರವಾಗಿ ಹಬ್ಬಿದರೆ ಬದುಕು ಸುಂದರ-ಬಂಧುರವಾಗುವುದರಲ್ಲಿ ಸಂದೇಹವಿಲ್ಲವೆಂದು ಕವಿಯ ಮನೋಭಾವನೆ. ಇದು ಎಲ್ಲರಲ್ಲೂ ನೆಲೆಸಲಿ ಎನ್ನುವ ಕಳಕಳಿ ವಿಶ್ವನಾಥರದಾಗಿದೆ.

"ದೇವರ ಹೆಸರಿನಲ್ಲಿ ನನ್ನನ್ನು
ದೇವದಾಸಿ ಎಂದು ಕರೆದರು
ನಾನು ಆದದ್ದು ರಕ್ಕಸರ ದಾಸಿ
ನನ್ನ ಸೀರೆಯ ಸೆರಗನ್ನು ಹಾಸಿ"
ನನ್ನ ನೋವಿಗೆ ಕೊನೆಯಿಲ್ಲ
ಭಾವನೆಗಳಿಗೆ ಬೆಲೆಯೂ ಇಲ್ಲ
ಮನವೀಗ ಸೋತು ಹೋಯಿತಲ್ಲ
ನನ್ನ ನೋವಿನ ಕಥೆ ಕೇಳುವರೇ ಇಲ್ಲ"
(ದೇವರ ಹೆಸರಿನಲ್ಲಿ)

ದೇವರ ಹೆಸರಿನಲ್ಲಿ ನಿತ್ಯ ನಡೆಯುವ ಅನ್ಯಾಯ, ಅತ್ಯಾಚಾರಗಳಿಗೆ ಮಿತಿಯೇ ಇಲ್ಲ. ನಾವು ಎಷ್ಟು ಪ್ರಜ್ಞಾವಂತರಾಗಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ದೇವರು ಎಂದೂ ಯಾರನ್ನೂ ಕಾಡುವುದಿಲ್ಲ, ಬೇಡುವುದಿಲ್ಲ. ಹಸಿ ಮಾಂಸ ತಿನ್ನುವ ನರ ರಕ್ಕಸರ ಅಟ್ಟಹಾಸಕ್ಕೆ ಮಿತಿಯೇ ಇಲ್ಲ. ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದರು ಶರಣರು, ಹೆಣ್ಣು ಬರೀ ಭೋಗದ ವಸ್ತು ಎಂದರು ರಣಹದ್ದುಗಳು. ದೇವರ ಹೆಸರಿನಲ್ಲಿ ನಡೆಯುವ ಇಂಥ ಹೇಯ ಕೃತ್ಯಗಳನ್ನು ವಿಶ್ವನಾಥ ಅವರು ಖಡ್ಗದ ಮೊನೆಗಿಂತಲೂ ಹರಿತವಾದ ತಮ್ಮ ಲೇಖನಿಯಿಂದ ತುಂಡಾಗಿಸಿದ್ದಾರೆ. ರಣಹದ್ದುಗಳನ್ನು ಚಂಡಾಡಿ ದೇವರಿಗೆ ನೈವೇದ್ಯ ಮಾಡಿದ್ದಾರೆ. ತಾಯಿಯಾಗಿ ಜನ್ಮ ನೀಡುವುದಲ್ಲದೆ ಸಹೋದರಿಯಾಗಿ, ಮಗಳಾಗಿ ಮಮತೆಯ ಧಾರೆಯೆರೆಯುವವರನ್ನು ಬೇರೆ ದೃಷ್ಟಿಯಿಂದ ನೋಡುವ ಹೇಯ ಮನಕೆ ಏನೆನ್ನಬೇಕು ಎಂದು ಖಾರವಾಗಿ ನುಡಿದಿದ್ದಾರೆ.

"ಒಂಬತ್ ತಿಂಗ್ಳು ಹೊತ್ತು
ಒಪ್ಪತ್ ಒಂದೊತ್ ಮಾಡಿ
ಆಪತ್ ನಲ್ಲೆ ನನ್ ಹೆತ್ತು
ತಾಕತ್ ಮೈಯಾಗ ತುಂಬಿ
ತುತ್ ಕೊಟ್ಟು ಮುತ್ ಕೊಟ್ಟು
ಬೆಳಿಸಿದಾಕಿ ನನ್ ಅವ್ವ
ನಾನೇನ್ ದುಡ್ ಗಿಡ್ ಕೊಡ್ಲಿಲ್ಲ
ಆದ್ರೂ ಜನ್ಮ ಕೊಟ್ಟಾಕಿ ನಮ್ಮವ್ವ"
(ಜನ್ಮ ಕೊಟ್ಟಾಕಿ ನಮ್ಮವ್ವ)

ಹೆತ್ತಮ್ಮನ ಬಗ್ಗೆ ಅರಿವು ಇದ್ದವರಿಂದ ಇಂತಹ ಮಾತುಗಳು ಬರಹದ ರೂಪದಲ್ಲಿ ಬರುತ್ತವೆ. ಕಾಣದ ದೇವರು ಊರಿಗೆ ನೂರು, ಕಾಣುವ ದೇವರು ಈ ಹೆತ್ತವರು. ಪ್ರತಿಯೊಬ್ಬರಲ್ಲೂ ಅರಿವು ಇದ್ದಿದ್ದರೆ ಇಂದು ದೇಶದ ತುಂಬಾ ವೃದ್ಧಾಶ್ರಮಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ಹತ್ತು ಮಕ್ಕಳ ಹೆತ್ತರೂ ಹಂಚಿಕೊಳ್ಳಲಿಲ್ಲ ಹೆತ್ತವರು, ಹೆತ್ತವರು ನನಗರ್ಧ ನಿನಗರ್ಧವೆಂದು ಇಬ್ಬರೇ ಮಕ್ಕಳು ಹಂಚಿಕೊಳ್ಳುತ್ತಾರೆ. ಅಮ್ಮ ನನಗಾದರೆ ಅಪ್ಪ ನಿನಗೆ ಇರಲೆಂದು. ಇದು ನಮ್ಮ ಸಂಸ್ಕೃತಿಯೇ? ನಮ್ಮದು ಅವಿಭಕ್ತ ಕುಟುಂಬ ಇಂದು ಇಂತಹ ಕುಟುಂಬಗಳು ನೋಡಲು ಸಿಗುತ್ತಿಲ್ಲ. ಕಾರಣ ಹೆತ್ತವರನ್ನೇ ಹೊರಹಾಕಿ ಗತ್ತುಗಾರಿಕೆಯಿಂದ ಬದುಕುವವರಿಗೆ ಕವಿತೆಗಳ ಸಾಲು ಕೆಂಡದುಂಡೆಯಾಗಿರಲಾರವು.

"ಸುಖವೆಂದರೆ;
ಮೂರಂತಸ್ತಿನ ಮಹಲಿನಲ್ಲಿ
ಚೆಲುವೆಯರ ಮಧ್ಯೆ
ಹೆಂಡದ ಅಮಲಿನಲ್ಲಿ ತೇಲಾಡುವುದಲ್ಲ
ಸುಖವೆಂದರೆ;
ನಿನ್ನನ್ನು ನೀ ಅರಿತು
ಬದುಕನ್ನು ಹರುಷದಿ ಆನಂದಿಸುವುದು
ಅನುಭವ,ಜ್ಞಾನವನ್ನು
ಪಡೆದು,ಹಂಚುವುದು" (ಸುಖವೆಂದರೆ)

ಸುಖ,ಸಂತೋಷ ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿಯಲ್ಲ.ಹರಾಜಿನಲ್ಲಿ ದೊರೆಯುವ ಗುಜರಿ ವಸ್ತುವಲ್ಲ.ನಿನ್ನನ್ನು ನೀ ಅರಿತು,ಬೆರೆತು ಬದುಕುವುದೇ ಸುಖಿ ಜೀವನವೆಂದು ಒತ್ತಿ ಹೇಳಿದ್ದಾರೆ.ಇಲ್ಲಿ ಅನುಭವದ ಸಾರ ಮಡುಗಟ್ಟಿನಿಂತಿದೆ.ಹದಿಹರೆಯದ ವಯಸ್ಸಿನಲ್ಲಿ ಇಂತಹ ಅನುಭವ ಬರಬೇಕಾದರೆ ಕವಿಯ ಮನ ಪಕ್ವವಾದುದೆಂದು ತಿಳಿದು ಬರುತ್ತದೆ.ಸುಖ ಅರಸಿದರೆ ದೊರೆಯದು,ಅರಿತುಕೊಂಡರೆ ಅಂಗೈಯಲ್ಲಿಯೇ ಉಂಟು.ಇಂತಹ ಅನುಭವದ ನುಡಿಗಳು ಪ್ರತಿಯೊಂದು ಕವಿತೆಯಲ್ಲೂ ಕಂಡು ಬರುತ್ತವೆ.

"ಕಟ್ಟುತ್ತೇನೆ ನಾನೂ;
ಪ್ರೀತಿಯ ಸ್ವರ್ಗವನ್ನು
ಸ್ನೇಹದ ಲೋಕವನ್ನು
ನಿಸ್ವಾರ್ಥದ ಭಾವವನ್ನು
ಮಮತೆಯ ಮಹಲನ್ನು
ಕಟ್ಟುತ್ತೇನೆ ನಾನೂ;
ಬಲಿಷ್ಠ ಮನಸ್ಸುಗಳನ್ನು
ಶಾಂತಿ-ನೀತಿಯ ಸಿರಿಯನ್ನು
ನೆಮ್ಮದಿಯ ತಾಣವನ್ನು
ಸಾಧನೆಯ ಹಾದಿಯನ್ನು
ದಿಗ್ವಿಜಯದ ಅಮರತ್ವವನ್ನು" (ಕಟ್ಟುತ್ತೇನೆ ನಾನೂ)

ಎಂಥ ಅರ್ಥಪೂರ್ಣವಾದ ಮಾತುಗಳಿಲ್ಲಿ ಮುತ್ತಾಗಿ ಮೂಡಿಬಂದಿವೆ.ನಾವು ಕಟ್ಟುತ್ತೇವೆ ಮಹಡಿಯ ಮನೆಗಳನ್ನು ಗಗನದೆತ್ತರ.ಆದರೂ, ತೃಪ್ತಿಯಿಲ್ಲ.ಇನ್ನೂ ಇನ್ನೂ ಕಟ್ಟುವಾಸೆ.ಬಿದ್ದು ಹೋಗುವ ಮಹಡಿಗಳನ್ನು ಕಟ್ಟಲು ನಾವು ಎಷ್ಟೊಂದು ಹರಸಾಹಸ ಮಾಡುತ್ತೇವೆ.ಅದರೊಂದಿಗೆ ನಾವೂ ಬಿದ್ದು ಹೋಗುತ್ತೇವೆನ್ನುವ ಅರಿವು ಇಲ್ಲದಲೆ ನಿತ್ಯ ಹೋರಾಟ ಮಾಡುತ್ತಲೆ ಇದ್ದೇವೆ.ಕವಿ ವಿಶ್ವನಾಥ ಅರಬಿ ಕಟ್ಟುವ ಮನೆ ಮೂರಂತಸ್ತಿನದಲ್ಲ; ಬಿರುಗಾಳಿಗೆ ಬೀಳದ,ಬಿಸಿಲಿಗೆ ಬಿರಿಯದ, ಸಿಡಿಲಿಗೆ ಚೂರಾಗದ ಮನೆ ಕಟ್ಟುತ್ತಾನೆ. ಪ್ರೀತಿ, ಸ್ನೇಹ, ಮಮತೆಯ ಕಲ್ಲು-ಮಣ್ಣಿನಿಂದ ನಿಸ್ವಾರ್ಥದ ಭಾವದಿಂದ ಮನೆ ಕಟ್ಟುತ್ತಾನೆ. ಅಂತೆಯೇ ಆತನ ಮನೆ ಎಂದಿಗೂ ಬೀಳುವುದಿಲ್ಲ.ನಾವು ಹಾಗೆ ಕಟ್ಟಲು ಸಾಧ್ಯವೆ? ಪ್ರಯತ್ನಿಸೋಣ.

ತರುಣ ಕವಿಮಿತ್ರ ಬರೆದ ಕವಿತೆಗಳೆಲ್ಲವೂ ಕಲ್ಲು-ಸಕ್ಕರೆ. ಹಲ್ಲಿದ್ದವರು ಅರಗಿಸಿಕೊಳ್ಳಬಹುದು.ಎಲ್ಲೆಲ್ಲೂ ಬಂಡಾಯದ ಛಾಯೆ ಎದ್ದು ಕಾಣುತ್ತದೆ.ನೋವು ಆಗದ ಹಾಗೆ ನವಿರಾಗಿ ಹೇಳಿದ ಮಾತು ಚಾಟಿ ಏಟಿನಂತಿವೆ. ಅಲ್ಲಲ್ಲಿ ಮಲ್ಲಿಗೆಯ ಪರಿಮಳ,ಹಾಲ್ಜೇನಿನ ಹೊನಲು ಎಲ್ಲವನ್ನು "ವಿಶ್ವ ಚೇತನ" ದಲ್ಲಿ ಕಾಣಬಹುದು.ಓದಲು ಕುಳಿತರೆ ಪೂರ್ಣಗೊಳಿಸಿಯೇ ಕೆಳಗಿಡಬೇಕು.ಚೊಚ್ಚಲು ಕೃತಿಯಾದರೂ ಬೆಲ್ಲದಚ್ಚಿನ ಹಾಗೆ ಮೂಡಿಬಂದಿದೆ.ಇದು ಅತಿಶಯೋಕ್ತಿಯ ಮಾತಲ್ಲ. ಒಳ್ಳೆಯ ಕವಿಯಾಗಿ ಕನ್ನಡಮ್ಮನ ವರಪುತ್ರನಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ. ಅಧ್ಯಯನ, ಚಿಂತನ ಹೀಗೆಯೇ ಮುಂದುವರೆಯಲೆಂದು ಶುಭ ಹಾರೈಸುವೆ.

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...