ಭಾವನೆಯ ಸಾಗರದಿ ಈಜಾಡಿ ಕವನವೆಂಬ ಮುತ್ತನ್ನು ಪಡೆದ ಕವಿ..


ಕನ್ನಡ ಸಾರಸ್ವತ ಲೋಕಕ್ಕೆ ಸೇರ್ಪಡೆಯಾಗಲು ಹೊರಟಿರುವ ಶೋಭಾ ಸಾಗರ ಮತ್ತು ಅವರ “ಕಡಲ ತೀರದ ಮೌನ” ಚೊಚ್ಚಲ ಕೃತಿ ವಿಭಿನ್ನವಾಗಿದೆ. ನಾನು ಮೊದಲು ಶೋಭಾರವರನ್ನು ಗುರುತಿಸಿದ್ದು ಒಬ್ಬ ಕವಿಯಾಗಿ ಅಲ್ಲ ಒಬ್ಬ ಗಾಯಕಿಯಾಗಿ. ಆದರೆ ಸಂಪರ್ಕದ ಪ್ರಭಾವದಿಂದಾಗಿ, ಅದೂ ನಮ್ಮ ಹನಿಹನಿ ಇಬ್ಬನಿ ಸಾಹಿತ್ಯದ ಬಳಗದ ಸಂಪರ್ಕಕ್ಕೆ ಬಂದ ಮೇಲೆ. ನಾನು ಏಕೆ ಬರೆಯ ಬಾರದು ಎಂದು ಪ್ರಯತ್ನಿಸಿದ ಪ್ರತಿಫಲವೆ ಅವರೊಳಗಿನ ಒಬ್ಬ ಉತ್ತಮ ಕವಿ ಅನಾವರಣ ಗೊಂಡಿದ್ದಾನೆ. ಕವಿ ಶೋಭಾ ಸಾಗರ ಅವರ ‘ಕಡಲ ತೀರದ ಮೌನ’ ಕವನ ಸಂಕಲನಕ್ಕೆ ಲೇಖಕ ಜೀವರಾಜ ಹ ಛತ್ರದ ಮುನ್ನುಡಿ ಬರೆದಿದ್ದು, ನಿಮ್ಮ ಓದಿಗಾಗಿ..

“ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ
ಬಲ್ಲವರಿದ್ದೂ ಬಲವಿಲ್ಲ | ಸಾಹಿತ್ಯ
ಎಲ್ಲರಿಗೂ ಇಲ್ಲ ಸರ್ವಜ್ಞ||”

ಎಂಬ ಲೋಕ ಸಂಚಾರಿ ಕವಿ ಸರ್ವಜ್ಞನ ಮಾತಿನಂತೆ, ಸಾಹಿತ್ಯವೆಂಬುದು ಸಾವಿರಕ್ಕೊಬ್ಬನಲ್ಲಿ ಅರಳಬಹುದಾದ ಪ್ರತಿಭೆಯ ಕೂಸಾಗಿದೆ. ಸಾವಿರಕ್ಕೊಬ್ಬರಲ್ಲಿ ಇದು ಅರಳಬಹುದಾದ್ದರೂ ಕೂಡಾ ಹೂಬಿಟ್ಟು ಫಲವಾಗುವುದು ಲಕ್ಷಕ್ಕೊಬ್ಬರಲ್ಲಿ.ಲಕ್ಷಕ್ಕೊಬ್ಬರಲ್ಲಿ ಫಲ ಮಾಗಿದರು ಕೂಡಾ, ಯಶಸ್ಸು ಕೀರ್ತಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವದು ಕೋಟಗೊಬ್ಬರಲ್ಲಿ ಮಾತ್ರ ಎಂದು ಹೇಳಬಹುದು.

ಸಾಹಿತ್ಯವನ್ನೆ ಬರೆದು ಜೀವನ ನಡೆಸುತ್ತೇವೆ ಎಂದರೆ ಅದು ಆಗದ ಮಾತು. ಸಾಹಿತ್ಯ ಇದೇನಿದ್ದರು ಪ್ರವೃತ್ತಿಯೆ ಹೊರತು ವೃತ್ತಿಯನ್ನಾಗಿ ಸ್ವೀಕರಿಸಲಾಗದು. ಸಾಹಿತ್ಯವನ್ನು ನಂಬಿ ಜೀವನ ಕಟ್ಟಿಕೊಂಡವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಹಾಗಾದರೆ ಸಾಹಿತ್ಯವನ್ನು ಏಕೆ ಬರೆಯ ಬೇಕೆಂದು ಕೇಳಿದರೆ ಅದಕ್ಕೆ ಉತ್ತರ ನೀಡುವದು ಸ್ವಲ್ಪು ಕಷ್ಟದ ವಿಷಯವಾಗಬಹುದು. ಮನುಷ್ಯನಿಗೆ ಖುಷಿ ಯಾವುದರಿಂದ ಸಿಗುತ್ತದೆಯೆಂದು ಹೇಳಲಿಕ್ಕಾಗದು. ಸಾಹಿತ್ಯವನ್ನು ವ್ಯಕ್ತಿ ಮೊದಲು ತನ್ನ ಖುಷಿಗಾಗಿ ಬರೆಯುತ್ತಾನೆ. ಆನಂತರ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹೇಳುತ್ತಾನೆ. ಹೀಗಾಗಿ ಹಕ್ಕಿ ಹಾಡುವುದು ತನ್ನ ಮನಸ್ಸಂತೋಷಕ್ಕಾಗಿ, ಆದರೆ ಜನರು ಅದರ ಸ್ವಾದವನ್ನು ಸವಿಯುತ್ತಾರೆ. ಹೀಗೆಯೆ ಬರವಣಿಗೆಗಾರನೂ ಕೂಡಾ ತನ್ನ ಸಂತೋಷಕ್ಕಾಗಿಯೆ ಬರೆದು ಕೊಂಡಿದ್ದರು ಕೂಡಾ, ತಾನು ಬರೆದ ಸಾಹಿತ್ಯ ಒಮ್ಮೆ ಜನಾರ್ಪಣೆಯಾದರೆ ಅದು ತನ್ನದಾಗಿ ಉಳಿಯದೆ ಲೋಕದ್ದಾಗಿ ಬಿಡುತ್ತದೆ. ಒಂದೊಂದು ಸಾರೆ ಕವಿಯ ಕರ್ಮ ಕವಿಯನ್ನೂ ಮೀರಿ ಬೆಳೆಯುತ್ತದೆ. ಉದಾಹರಣೆಗಾಗಿ ಕವಿ ಬರೆದ ಹಾಡನ್ನು ಎಲ್ಲರು ಹಾಡುತ್ತಾರೆ. ಆದರೆ ಸಾಹಿತ್ಯ ಬರೆದವನು ಎದುರಿಗೆ ಇದ್ದರೂ ಅವನನ್ನು ಗುರುತಿಸಲಾಗದಷ್ಟು ಪ್ರಸಿದ್ದಿ ಪಡೆದಿರುತ್ತದೆ.

ಈಗ ನಾನು ಇಷ್ಟೆಲ್ಲಾ ಬರೆಯುತ್ತಾ ಪೀಠಿಕೆ ಹೇಳುತ್ತಿರುವುದು ಕೂಡಾ ಕನ್ನಡ ಸಾರಸ್ವತ ಲೋಕಕ್ಕೆ ಸೇರ್ಪಡೆಯಾಗಲು ಹೊರಟಿರುವ ಶೋಭಾ ಸಾಗರ ಮತ್ತು ಅವರ “ಕಡಲ ತೀರದ ಮೌನ” ಚೊಚ್ಚಲ ಕೃತಿಯ ಕುರಿತು. ನಾನು ಮೊದಲು ಶೋಭಾರವರನ್ನು ಗುರುತಿಸಿದ್ದು ಒಬ್ಬ ಕವಿಯಾಗಿ ಅಲ್ಲ ಒಬ್ಬ ಗಾಯಕಿಯಾಗಿ. ಆದರೆ ಸಂಪರ್ಕದ ಪ್ರಭಾವದಿಂದಾಗಿ, ಅದೂ ನಮ್ಮ ಹನಿಹನಿ ಇಬ್ಬನಿ ಸಾಹಿತ್ಯದ ಬಳಗದ ಸಂಪರ್ಕಕ್ಕೆ ಬಂದ ಮೇಲೆ. ನಾನು ಏಕೆ ಬರೆಯ ಬಾರದು ಎಂದು ಪ್ರಯತ್ನಿಸಿದ ಪ್ರತಿಫಲವೆ ಅವರೊಳಗಿನ ಒಬ್ಬ ಉತ್ತಮ ಕವಿ ಅನಾವರಣ ಗೊಂಡಿದ್ದಾನೆ. ಹಾಗಂತ ಕವಿತ್ವವೆಂಬುದು ಎಲ್ಲರ ಮನೆಯ ಹಿತ್ತಲಲ್ಲಿ ಬೆಳೆವ ಹೀರಿಯ ಹೂವಲ್ಲ. ಅದು ಕೆಲವೇ ಜನರ ಎದೆಯಲ್ಲಿ ಬೆಳೆಯುವ ಮಂದಾರ ಪುಷ್ಫವಾಗಿದೆ. ಹೀಗಾಗಿ ನಮ್ಮ ವೇದಿಕೆ ಅವರಿಗೊಂದು ನೆಪವಷ್ಟೆ. ಅವರೊಳಗಿರುವ ಕವಿ ಈ ಮೂಲಕ ಪ್ರಕಟವಾಗಿದ್ದಾನೆ. ಹೀಗಾಗಿ ಶೋಭಾರವರು ಉತ್ತಮ ತಯಾರಿಯೊಂದಿಗೆ ಬರೆಯಲು ಪ್ರಾರಂಭಿಸಿದ ಹಾಗಿದೆ. ಮಲೆನಾಡಿನ ಒಂದು ಹಳ್ಳಿಯಲ್ಲಿ ಹುಟ್ಟಿ ಬೆಳೆದ ಇವರಿಗೆ ಸಹಜವಾಗಿಯೆ ನಮ್ಮ ನೆಲ ಸಂಸ್ಕೃತಿಯ ಪರಿಚಯ ಚೆನ್ನಾಗಿ ಗೊತ್ತಿದೆ. ಹೀಗಾಗಿ ಇವರಿಗೆ ಲೋಕಾನುಭವ ಆಗಿದೆ, ಪ್ರತಿಯೊಂದು ಬದುಕನ್ನು ಸೂಕ್ಷ್ಮ ದೃಷ್ಠಿಯಿಂದ ನೋಡಿದ್ದಾರೆ. ಹೀಗಾಗಿ ಇವರ ಕವಿತ್ವ ಶಕ್ತಿ ಪಕ್ವಗೊಂಡಿದೆಯೆಂದು ಹೇಳಬಹುದು. ಉತ್ತಮ ತಯಾರಿಯೊಂದಿಗೆ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿರುವುದರಿಂದ ಶೋಭಾರವರು ಸಾಹಿತ್ಯ ಲೋಕಕ್ಕೆ ಗಟ್ಟಿಯಾಗಿ ನಿಲ್ಲುವ ಶುಭ ಸೂಚನೆಗಳಿದ್ದು ಇದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು.

ಕವಯಿತ್ರಿಯವರ ಶೀರ್ಷಿಕೆಯೆ ಅತೀ ಸುಂದರವಾಗಿದೆ. “ಕಡಲ ತೀರದ ಮೌನ” ಕಡಲಿಗೆ ಮತ್ತೊಂದು ಹೆಸರು ರತ್ನಾಕರ ಗಂಭೀರ ವಾರಿಧಿಯೆಂದು ಭೋರ್ಗರೆಯಲಾರದು ಮೌನವಾಗಿದ್ದುಕೊಂಡೆ ತನ್ನೊಳಗೆ ಮುತ್ತು ರತ್ನಗಳನ್ನು ಒಳಗೊಂಡಿರುತ್ತದೆ. ಹಾಗೆಯೆ ಈ ಕೃತಿಯಲ್ಲಿರುವ ಮೌಲಿಕ ಕವನಗಳು ಕೂಡಾ ಕವಯಿತ್ರಿಗೆ ಭರವಸೆ ಮೂಡಿಸುವ ಲಕ್ಷಣಗಳನ್ನು ಹೊಂದಿದೆ.

ಸದರ ಕವನ ಸಂಕಲನವು ಒಟ್ಟು ಅರವತ್ತು ಕವನಗಳನ್ನು ಹೊಂದಿದೆ. ಪ್ರತಿಯೊಂದು ಕವನವೂ ಕೂಡಾ ವಸ್ತು ವೈವಿದ್ಯತೆಯಿಂದ ಕೂಡಿದೆ. ಓದುಗನನ್ನು ಹಿಡಿದಿಡುವ ಶಕ್ತಿ ಪ್ರತಿ ಕವನದಲ್ಲಿ ಅಡಕವಾಗಿದೆ.

ಕವಯಿತ್ರಿಯವರ ಮೊದಲನೆ ಕವನ ‘ಭಾವ ಶರಧಿಯ ಮೊದಲ ನುಡಿಯೆ’ ಮೋಹಕವಾಗಿ ಮೂಡಿ ಬಂದಿದೆ.

“ಹೊಮ್ಮಿಬಂದ ಒಡಲ ಕಡಲು
ಕಣ್ಣೀರು ನಾನಾದೆ
ದಡದ ಅಡಿಯ ಗುರುತು ಅಳಿದ
ಮುನ್ನೀರು ನಾನಾದೆ”

ನದಿತೊರೆ ಹಳ್ಳ ಕೊಳ್ಳಗಳು ಹರಿಯುವಾಗ ಇಕ್ಕೆಲಗಳನ್ನು ಕೊರೆಯುತ್ತಾ ರಭಸವಾಗಿ ಓಡುತ್ತವೆ. ಹರಿಯುವಾಗ ಸಿಕ್ಕ ಪ್ರಾಣಿ ಪಕ್ಷಿ ವಸ್ತುಗಳನ್ನು ತಮ್ಮೊಂದಿಗೆ ಸೆಳೆದೊಯ್ಯುತ್ತವೆ. ಆದರೆ ಓಡಿದ ಸಾವಿರಾರು ನದಿಗಳು ಶರಧಿಯನ್ನು ಸೇರಿದ ಮೇಲೆ ಶಾಂತವಾಗಿ ಬಿಡುತ್ತವೆ. ಇವರ ಮತ್ತೊಂದು ಕವನ ಭಾವ ಸಾಗರದಲ್ಲಿ ಕವಿಯಾದವನು ವಿಹರಿಸುವ ಪರಿಯನ್ನು ವರ್ಣಿಸುತ್ತ ಹೀಗೆ ಹೇಳುತ್ತಾರೆ.

“ನೆರೆ ಕೆರೆಗಳು ನದಿಗೆ ಹರಿದು
ಸಾಗರದಲಿ ಸಂಗಮ
ಒಡಲ ಕಡಲಾಳಕಿಳಿದು
ಮುತ್ತು ಪಡೆದ ಸಂಭ್ರಮ”

ಈ ಕವಿತೆಯಲ್ಲಿ ಕವಿಯು ಭಾವನೆಯ ಸಾಗರದಿ ಈಜಾಡಿ ಕೊನೆಗೆ ಕವನವೆಂಬ ಮುತ್ತನ್ನು ಪಡೆಯುವ ಬಗೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ.

ಶೋಭಾರವರ ಮಲೆನಾಡಿನ ಮೂಲೆಯಲ್ಲಿಯ ಶಿರಾಳಕೊಪ್ಪದವರು. ಹೀಗಾಗಿ ಮಲೆನಾಡಿನ ಕುರಿತು ಮತ್ತು ಸಹ್ಯಾದ್ರಿ ತಪ್ಪಲಿನ ಸಮೀಪದವರಾಗಿದ್ದರಿಂದ ಇವರಿಗೂ ಮತ್ತು ಮಲೆನಾಡಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಇವರ ಮತ್ತೊಂದು ಕವನ ಸಹ್ಯಾದ್ರಿ ಕವನದಲ್ಲಿ

“ಗಿರಿ ತರು ಮಲೆಗಳಲದೇನೋ ಮೌನ
ಝರಿ ತೊರೆಗಳಲಿ ಝೇಂಕಾರದ ಗಾನ
ಸಹ್ಯಾದ್ರಿ ಬೆಟ್ಟವದು ನಿತ್ಯ ಹರಿದ್ವರ್ಣ
ಪರ್ವತ ಶ್ರೇಣಿಗಳಲದೇನೋ ಕಂಪನ”...

“ತಾಯಿ ಶರಾವತಿಯು ಜಲ ಜಲಿಸಿ
ಹರಿದಳು ಎಲ್ಲೆಡೆ ಝಗಮಘಿಸಿ
ಕಲರವಮೂಡಿಸಿ ಕಂಗಳಲಿ
ಕೇಲಾಸದ ಕಂಪನ ಸಹ್ಯಾದ್ರಿಯಲಿ”

ಕವಯಿತ್ರಿಯವರು ವಸ್ತು ವೈವಿದ್ಯತೆ ಹೊಂದಿವೆಯೆಂದು ಹೇಳಿದ್ದೇನೆ. ಇವರು ಬರೆದ ಅನೇಕ ಭಕ್ತಿ ಭಾವವನ್ನು ಹೊಂದಿರುವ ಭಕ್ತಿ ಗೀತೆಗಳನ್ನು ಬರೆದಿದ್ದಾರೆ. ಇವರ ಓಂಕಾರ ಎಂಬ ಕವನ ಬಹಳ ಸುಂದರವಾಗಿ ಮೂಡಿ ಬಂದಿದೆ.

“ಎದೆಯ ಬಣವ ಹದವ ಮಾಡಿ
ಜ್ಞಾನದ ಬೀಜ ಬಿತ್ತಿದವರು
ಮನದ ತಮವ ವಧೆಯ ಮಾಡಿ
ಅಜಾÐನವ ಅಳಿಸಿದವರು”

ಶೋಭಾರವರು ಹೆಣ್ಣಾಗಿರುವುದರಿಂದ ಸಹಜವಾಗಿ ಇವರ ಸ್ತ್ರೀಪರ ಚಿಂತನೆಯ ಕವನಗಳು ಬರದೆ ಇರುತ್ತಾವೆಯೆ? ಬಂದೆ ಬರುತ್ತಾವೆ. ಹೀಗಾಗಿ ಇವರ ಸ್ತ್ರೀ ಎಂಬ ಕವನವು ಗಮನ ಸೆಳೆಯುತ್ತದೆ. ಬಂದಿರುವ ಸ್ತ್ರೀ ಜನ್ಮವನ್ನು ಸಕಾರಾತ್ಮಕವಾಗಿ ಸ್ವೀಕರಿಸಲು ಒಂದು ಹೆಣ್ಣಾಗಿ ಶೋಭಾರವರ ಕರೆ ಗಮನ ಸೆಳೆಯುತ್ತದೆ.

“ಬೇಸರದ ಭಾವಗಳನು
ತುಟಿಯಲಿ ಬಿಗಿ ಹಿಡಿದು
ಮೊಗವೆಂಬ ನೆರಕೆಗೆ
ನಗುವೆಂಬ ಬಣ್ಣ ಹಚ್ಚಿಬಿಡು”

“ಮನದಲ್ಲಿ ಮೈನೆರೆದ
ಹದಿ ಹರೆಯದ ಭಾವಗಳಿಗೆ
ಸಂಕೋಲೆ ಎಂಬ ಸೀರೆ ಉಡಿಸಿ
ನಿನ್ನನ್ನು ನೀನೆ ಸ್ತ್ರೀಯಾಗಿಸಿ ಬಿಡು”

ಶೋಭಾರವರು ಸ್ವಾಭಿಮಾನಿಯಾಗಿರುವವರು. ಹಾಗಾಗಿಯೆ ಅವರ ಲೇಖನಿಯಿಂದ ಸೌಭಿಮಾನದ ಕವಿತೆಗಳು ಹುಟ್ಟಿ ಬಂದಿವೆ. ಅವರ ಸ್ವಾಭಿಮಾನದ ಕವಿತೆಯಲ್ಲಿ ಅವರ ಮನೋಭೂಮಿಕೆ ಸುಂದರವಾಗಿ ಮೂಡಿ ಬಂದಿದೆ.

“ಒಪ್ಪಲಾರೆ ತಿರಸ್ಕಾರ
ಸಂದೇಶ ತಲುಪಿರಲೆ ಬೇಕು
ಬರೆದ ಪತ್ರಗಳು ಸಾವಿರ
ಒಂದಾದರೂ ಓದಿರಲೆ ಬೇಕು”
ಮನೋಹರವಾಗಿ ಮೂಡಿ ಬಂದಿದೆ.

ಇವರ ಮತ್ತೊಂದು ಕವನ ಮುಖವಾಡ ಎಂಬ ಕವನವು ಬಹಳ ಸುಂದರವಾಗಿ ಮೂಡಿ ಬಂದಿದೆ.

“ಬುದ್ಧ ಬಸವರ ಬಳಸಿ
ಬಣ್ಣ ಬಣ್ಣದ ಮಾತು
ಹಸಿ ಸುಳ್ಳುಗಳ ಮೇಲೆ
ಸಮರಸದ ರುಜುವಾತು”

ಹೀಗೆ ಕವಯಿತ್ರಿ ಶೋಭಾ ಸಾಗರರವರು ಉತ್ತಮವಾಗಿ ಬೆಳೆಯ ಬಹುದಾದ ಭರವಸೆ ಮೂಡಿಸಿದ್ದಾರೆ. ಬರೆಯುವುದರ ಜೊತೆಗೆ ಇನ್ನೂ ಹತ್ತು ಹಲವಾರು ಪುಸ್ತಕಗಳನ್ನು ಓದಬೇಕು. ಆಗ ಇವರಿಂದ ಇನ್ನೂ ಉತ್ತಮವಾದ ಮೌಲಿಕ ಕೃತಿಗಳ ತಾವಾಗಿಯೆ ಮೂಡಿ ಬರುತ್ತವೆ.

ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಇವರ ಮಾತಿನಲ್ಲಿ ಉಲ್ಟಾ ಆಗಿ ಕಾಣುತ್ತಿದೆ. ಕಾರಣವೇನೆಂದರೆ ಶೋಭಾರವರ ಪ್ರತಿಯೊಂದು ಯಶಸ್ವಿ ಹೆಜ್ಜೆಯಲ್ಲಿಯೂ ಕೂಡಾ ಇವರ ಯಜಮಾನರ ಪಾತ್ರ ತುಂಬಾ ಇದೆ. ಹೀಗಾಗಿ ಇವರನ್ನು ನಾಡಿನಲ್ಲಿ ಇವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಪ್ರಮುಖ ಜವಾಬ್ದಾರಿಯನ್ನು ಇವರ ಹೆಗಲಿಗೆ ನೀಡುತ್ತಿದ್ದೇವೆ.

ಸದರ ಈ “ಕಡಲ ತೀರದ ಮೌನ” ಕೃತಿ ಸಾರಸ್ವತ ಲೋಕದಲ್ಲಿ ಹೊಸತೊಂದು ಮೈಲುಗಲ್ಲು ಸ್ಥಾಪಿಸಲಿ ಹಾಗೂ ಮುಂದಿನ ಕೃತಿಗಳಿಗೆ ಮುನ್ನುಡಿಯಾಗಲಿಯೆಂದು ಈ ಮೂಲಕ ಶುಭ ಹಾರೈಸುತ್ತ ಎರಡು ಅನಿಸಿಕೆ ಮುಗಿಸುತ್ತೇನೆ. ಮತ್ತೇಕೆ ತಡ ಬೇಗನೆ ಬಂದು ಬಿಡಿ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ. ಎಲ್ಲರಿಗೂ ಧನ್ಯವಾದಗಳು.

 

ಶೋಭಾ ಸಾಗರ್ ಅವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

 

MORE FEATURES

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

20-04-2024 ಬೆಂಗಳೂರು

“ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗು...

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು

20-04-2024 ಬೆಂಗಳೂರು

'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದ...

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...