"ಭಿನ್ನ ಮಕ್ಕಳು, ವ್ಯಕ್ತಿಗಳು ಎಲ್ಲರಿಗಿಂತ ಭಿನ್ನ, ಶಕ್ತಿಯುತರು " : ನ. ರತ್ನ


"ಅನೇಕ ಸಲ ಗ್ರಾಮೀಣ ಜನ ಸಮಂಜಸವಲ್ಲದ ‘ಕುಂಟ, ಕುಂಡ, ಕೆಪ್ಪ’ ಎಂಬಂತಹ ಪದಗಳನ್ನು ಉಪಯೋಗಿಸಿದರೂ ಆ ಮಕ್ಕಳನ್ನು, ವ್ಯಕ್ತಿಗಳನ್ನು ಬಲು ಪ್ರೀತಿಯಿಂದ ಕಂಡು ಅವರ ಶಕ್ತ್ಯಾನುಸಾರ ದುಡಿಯಲು, ಬದುಕಲು ಬಿಡುವುದನ್ನು ಕಾಣಬಹುದು. ಆ ಅಕ್ಕರೆ, ಗೌರವ ಮತ್ತು ಆರೈಕೆಯೇ ಮುಖ್ಯ!" ಎನ್ನುತ್ತಾರೆ ಲೇಖಕ, ವಾಕ್‌ಶ್ರವಣ ಚಿಕಿತ್ಸಾ ತಜ್ಞ ನ. ರತ್ನ. ಅವರು ಲೇಖಕ ಉಮೇಶ್ ಡಿ. ಅವರ ‘ವಿಕಲತೆಗಳ ಪರಿಚಯ’ ಪುಸ್ತಕಕ್ಕೆ ಬರೆದ ಮುನ್ನುಡಿಯ ಸಾಲುಗಳು ಇಲ್ಲಿವೆ...

ಉಮೇಶ ಅವರ ‘ವಿಕಲತೆಗಳ ಪರಿಚಯ’ ಪುಸ್ತಕದ ಕರಡು ಪ್ರತಿಯನ್ನು ನಾನು ಬಹಳ ಸಂತೋಷದಿಂದ ಓದಿದೆ. ಈ ಕ್ಷೇತ್ರದಲ್ಲಿ ಅನೇಕ ವರ್ಷ ದುಡಿದಿರುವ ನಾನೂ ಕೂಡ ಇವರ ಪುಸ್ತಕದಿಂದ ಅನೇಕ ಹೊಸ ವಿಷಯಗಳನ್ನು ತಿಳಿದುಕೊಂಡೆ. ಈ ಪುಸ್ತಕ ಇಂದು ಅಪೇಕ್ಷಣೀಯ, ಸ್ವಾಗತಾರ್ಹ ಮತ್ತು ಶ್ಲಾಘನೀಯ. ಹೀಗಾಗಿ ನಾನು ಉತ್ಸಾಹದಿಂದ ಈ ಮುನ್ನುಡಿ ಬರೆಯುತ್ತಿದ್ದೇನೆ.

ಕನ್ನಡದಲ್ಲಿ ಭಿನ್ನರ ಬಗ್ಗೆ ಹಲವು ಹೊತ್ತಿಗೆಗಳು ಬಂದಿವೆ. ನಾನು ಹೆಚ್ಚು ಬಳಸಲು ಇಷ್ಟಪಡುವುದು ‘ಭಿನ್ನರು’ ಮತ್ತು ‘ಭಿನ್ನ ಮಕ್ಕಳು’ ಎನ್ನುವ ಪದಗಳು. ನನ್ನ ಮನಸ್ಸಿಗೆ ‘ವಿಕಲತೆ–ವಿಕಲಚೇತನ’ ಅನ್ನುವಂತಹ ಪದಗಳು ಅಷ್ಟು ಹಿಡಿಸುವುದಿಲ್ಲ. ಅಂತಹ ಪದಗಳು ಒಂದು ವಿಧವಾಗಿ ‘ನ್ಯೂನತೆ’ಯನ್ನು ಸೂಚಿಸುತ್ತದೆ. ಅದರಿಂದಾಗಿ ಈ ಮಕ್ಕಳ ಅಥವ ವ್ಯಕ್ತಿಗಳ ಅಬಲತೆಗೆ ಹೆಚ್ಚು ಒತ್ತು ಕೊಡುತ್ತದೆ. ಅದಕ್ಕೆ ಬದಲಾಗಿ ನಾವು ಅತಂಹವರ ಸಬಲತೆಯ ಕಡೆ ಮುಖ್ಯವಾಗಿ ಗಮನಹರಿಸುವುದು ಹೆಚ್ಚು ಸೂಕ್ತ ಎನ್ನುವ ಅಭಿಪ್ರಾಯ ಎಲ್ಲೆಡೆ ಬಲಿಯುತ್ತಿದೆ. ಈ ಮಕ್ಕಳು ಅಥವಾ ವ್ಯಕ್ತಿಗಳು ಎಲ್ಲರಂತೆ ಇಲ್ಲದಿದ್ದರೂ, ಎಲ್ಲರಿಗಿಂತ ಭಿನ್ನರಾಗಿದ್ದರೂ ಅವರು ಎಲ್ಲಾ ಶಕ್ತಿಗಳನ್ನು ಕಳೆದುಕೊಂಡಿರುವುದಿಲ್ಲ. ಅವರು ಪೂರ್ಣ ಅಶಕ್ತರಲ್ಲ. ಹಲವು ಸಾಮಾರ್ಥ್ಯಗಳನ್ನು ಉಳಿಸಿಕೊಂಡಿರುತ್ತಾರೆ. ಹಲವು ಅವರದ್ದೇ ಸ್ವಾತಂತ್ರ್ಯಗಳನ್ನು ಬೆಳೆಸಿಕೊಳ್ಳಬಲ್ಲರು. ತಮ್ಮದೇ ಭಿನ್ನರೀತಿಯಲ್ಲಿ ಸಾಧನೆ ಮಾಡಬಲ್ಲರು. ನಮ್ಮ ಸಹಾಯದಿಂದ ಸಶಕ್ತರೇ ಆಗಬಲ್ಲರು. ದೃಷ್ಟಿದೋಷವಿದ್ದರೆ ನಮ್ಮಂತೆ ಓದಲಾಗದಿದ್ದರೂ ಬ್ರೈಲ್ ಲಿಪಿಯನ್ನು ಉಪಯೋಗಿಸಿ ಓದಬಲ್ಲರು. ಶ್ರವಣ ಮಾಧ್ಯಮ ಮೂಲಕ, ಹೆಚ್ಚು ಚುರುಕುಕಾಗಿಸಿಕೊಂಡ ಸ್ಪರ್ಷ ಶಕ್ತಿಯಿಂದ ಹೆಚ್ಚು ಕಲಿಯಬಲ್ಲರು. ಶ್ರವಣದೋಷವಿರುವವರು ಸಕಾಲದಲ್ಲಿ ಸೂಕ್ತ ಶಿಕ್ಷಣ ಸಿಕ್ಕರೆ ಮಾತು ಭಾಷೆ ಕಲಿಯಬಲ್ಲರು ಅಥವಾ ಸಂಜ್ಞಾ ಭಾಷೆ ಬಳಸಿ ಸಂವಹಿಸಬಲ್ಲರು. ತೀವ್ರ ದೋಷವುಳ್ಳವರು, ಬಹುರೀತಿಯ ತೊಂದರೆಯುಳ್ಳವರು ಬಿಟ್ಟರೆ, ಮಿಕ್ಕವರು ಸ್ವತಂತ್ರರಾಗಿ ಬದುಕಬಲ್ಲರು. ಹೀಗಾಗಿ ನಾನು ಅವರನ್ನು ‘ಭಿನ್ನರು’ ಎಂದು ಕಾಣುತ್ತೇನೆ. ಮುಖ್ಯವಾಗಿ, ನಾವು ಉಪಯೋಗಿಸುವ ಪದಗಳು, ನಾವು ಉಪಯೋಗಿಸುವ ಭಾಷೆ ಈ ವ್ಯಕ್ತಿಗಳ ಬಗ್ಗೆ, ಅವರ ಭಿನ್ನತೆಯ ಬಗ್ಗೆ ನಮ್ಮ ಧೋರಣೆಯನ್ನು ಬಿಂಬಿಸುತ್ತವೆ. ಬಲು ಅಪೇಕ್ಷಣಿಯವಾದುದು. ನಾವು ಅವರ ಬಲಗಳನ್ನು ಗುರುತಿಸಿ, ಅವರನ್ನು ಪ್ರೀತಿಯಿಂದ ಗೌರವದಿಂದ ಕಾಣುವುದು ಎಲ್ಲರ ಪರಿ ಆಗಬೇಕು.

ಅನೇಕ ಸಲ ಗ್ರಾಮೀಣ ಜನ ಸಮಂಜಸವಲ್ಲದ ‘ಕುಂಟ, ಕುಂಡ, ಕೆಪ್ಪ’ ಎಂಬಂತಹ ಪದಗಳನ್ನು ಉಪಯೋಗಿಸಿದರೂ ಆ ಮಕ್ಕಳನ್ನು, ವ್ಯಕ್ತಿಗಳನ್ನು ಬಲು ಪ್ರೀತಿಯಿಂದ ಕಂಡು ಅವರ ಶಕ್ತ್ಯಾನುಸಾರ ದುಡಿಯಲು, ಬದುಕಲು ಬಿಡುವುದನ್ನು ಕಾಣಬಹುದು. ಆ ಅಕ್ಕರೆ, ಗೌರವ ಮತ್ತು ಆರೈಕೆಯೇ ಮುಖ್ಯ! ಅದಿರಲಿ… ಭಿನ್ನತೆಯ ಬಗ್ಗೆ ಕನ್ನಡದಲ್ಲಿ ಅನೇಕ ಪುಸ್ತಕಗಳು ಬಂದಿವೆ. ಮನೋರೋಗಗಳ ಬಗ್ಗೆ ಡಾ. ರಾ. ಶಿವರಾಂ, ಡಾ. ಸಿ.ಆರ್. ಚಂದ್ರಶೇಖರ್, ಡಾ. ಅಶೋಕ್ ಪೈ, ವಾಕ್‌ಶ್ರವಣ ತೊಂದರೆಗಳ ಬಗ್ಗೆ ಡಾ. ಪುರುಷೋತ್ತಮ, ಡಾ. ಶಾಂತಾ ರಾಧಾಕೃಷ್ಣ, ರವೀಂದ್ರ ಭಟ್, ರತ್ನ ಶೆಟ್ಟಿ, ವಿವಿಧ ತೊಂದರೆಗಳ ಬಗ್ಗೆ ಶ್ರೀಮತಿ ಚಂಪಾ ಮುಂತಾದವರು ಕಿರುಹೊತ್ತಿಗೆಗಳನ್ನು ಬರೆದಿದ್ದಾರೆ. ಹಲವು ಸಂಸ್ಥೆಗಳು ಪುಟ್ಟ ಪುಟ್ಟ ಕೈಪಿಡಿಗಳನ್ನು ಪ್ರಕಟಿಸಿವೆ. ಆದರೆ, ಸರ್ಕಾರವು ಗುರುತಿಸಿರುವ ಇಪ್ಪತೊಂದೂ ವಿಕಲತೆಗಳ ಬಗ್ಗೆ ಉಮೇಶ ಅವರದೇ ಮೊದಲ ಪುಸ್ತಕ ಎಂದು ಅವರೇ ಸರಿಯಾಗಿ ಹೇಳಿಕೊಂಡಿದ್ದಾರೆ. ಉಮೇಶ ಅವರು ಬಹಳ ಶ್ರದ್ಧೆಯಿಂದ ಈ ವಿಷಯವನ್ನು ಅಧ್ಯಯನ ಮಾಡಿ, ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಎಲ್ಲ ಬಗೆಯ ವಿಕಲತೆಗಳನ್ನು ಸಮರ್ಥವಾಗಿ ಪರಿಚಯಿಸಿದ್ದಾರೆ. ಇದು ಪ್ರಸ್ತುತ ಪುಸ್ತಕದ ಹೆಮ್ಮೆ ಮತ್ತು ವೈಶಿಷ್ಟ್ಯ! ಈ ಪುಸ್ತಕವು ಭಿನ್ನರ ಶಿಕ್ಷಣದ ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯವಾಗುವುದರಲ್ಲಿ ಸಂಶಯವಿಲ್ಲ. ಇತರರಿಗೂ ಇದು ಅತ್ಯುಪಯುಕ್ತ ಕೈಪಿಡಿ ಆಗಬಲ್ಲುದು. ಹಾಗಾಗಿ ಈ ಪುಸ್ತಕ ಸ್ವಾಗತಾರ್ಹ!

ಉಮೇಶ ಅವರು ಸರಳ, ಸಹಜ ಕನ್ನಡದಲ್ಲಿ ಸುಲಲಿತವಾಗಿ ಬರೆದಿದ್ದಾರೆ. ಹಲವು ಕಡೆ ಅವರು ತಮ್ಮ ಉದ್ದೇಶಕ್ಕೆ ತಕ್ಕಂತೆ ಹಲವು ಹೊಸ ಪದಗಳನ್ನು ಉಪಯೋಗಿಸಿ ಇಂಗ್ಲೀಷ್ ಪದಗಳಿಗೆ ಪರ‍್ಯಾಯವಾಗಿ ತಂದಿದ್ದಾರೆ. ಅವು ಸುಲಭವಾಗಿ ಸಹಜವಾಗಿ ಅರ್ಥವಾಗುತ್ತವೆ. ಅವರು ಈ ಸರಣಿಯಲ್ಲಿ ಇನ್ನೂ ಎರಡು ಪುಸ್ತಕಗಳನ್ನು ಬರೆಯುವ ಯೋಜನೆ ಹಾಕಿಕೊಂಡಿದ್ದಾರೆ. ಅವೂ ಇಷ್ಟೇ ಸರಳವಾಗಿ ಉಪಯುಕ್ತವಾಗಿರಲಿ, ಶೀಘ್ರವಾಗಿ ಹೊರಬರಲಿ ಎಂದು ಹಾರೈಸುತ್ತೇನೆ.

- ನ. ರತ್ನ ಅವರ ಪರಿಚಯ

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...