‘ಚೆಕ್ ಪೋಸ್ಟ್’ ಟ್ರಕ್ ನೊಂದಿಗೆ ಸಾಗುವ ಬಾಲ್ಯದ ನೆನಪು


ಲೇಖಕಿ, ಅಂಕಣಕಾರ್ತಿ ಶ್ರೀದೇವಿ ಕೆರೆಮನೆ ಅವರು ‘ಸಿರಿ ಕಡಲು’ ಸರಣಿ ಬರೆಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದೊಂದಿಗಿನ ತಮ್ಮ ಸಹಯಾನವನ್ನು ನಿಮ್ಮ ಮುಂದಿಡಲಿದ್ದಾರೆ. ಈ ಬಾರಿಯ ಸರಣಿಯಲ್ಲಿ ಲೇಖಕ ರಾಜು ಗಡ್ಡಿ ಅವರ ‘ಚೆಕ್ ಪೋಸ್ಟ್’ ಕೃತಿ ಮತ್ತು ಆ ಕೃತಿಯ ಓದಿನೊಂದಿಗೆ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.  

ಚೆಕ್ ಪೋಸ್ಟ್
ಲೇ- ರಾಜು ಗಡ್ಡಿ
ಪ್ರಕಾಶನ
ಬೆಲೆ- 150/- 

ಕನ್ನಡ ಸಾಹಿತ್ಯದಲ್ಲಿ ಟ್ರಕ್ ದಂಧೆಯ ಬಗ್ಗೆ ನಾನು ಓದಿದ್ದು ತುಂಬಾ ಕಡಿಮೆ. ಕಡಿಮೆ ಏನು ಬಂತು? ನಾನಂತೂ ಓದಿಯೇ ಇರಲಿಲ್ಲ. ಇದೇ ಮೊದಲ ಕಾದಂಬರಿ ಎನ್ನಬಹುದು. ಹಾಗೆ ನೋಡಿದರೆ ಪಾಶ್ಚಾತ್ಯ ಸಾಹಿತ್ಯದಲ್ಲಿ ರಚಿತವಾದಂತಹ ಬಹಳಷ್ಟು ಉದ್ಯೋಗ, ದಂಧೆಯ ಬಗ್ಗೆ ಕನ್ನಡ ಸಾಹಿತ್ಯ ಮುಗುಮ್ಮಾಗಿಯೇ ಉಳಿದು ಬಿಟ್ಟಿದೆ. ಸಾಹಿತ್ಯ ರಚನೆಗಾಗಯೇ ಅನೇಕ ಪಾಪದ, ವ್ಯಭಿಚಾರದ ಕೆಲಸಗಳನ್ನು ಮಾಡಿ ಸ್ವತಃ ಅನುಭವ ಪಡೆಯುತ್ತಿದ್ದ ಪಾಶ್ಚಾತ್ಯ ಲೇಖಕರಂತಹ ಬರಹಗಾರರು ಕನ್ನಡದಲ್ಲಷ್ಟೇ ಏಕೆ ಭಾರತೀಯ ಸಾಹಿತ್ಯ ಲೋಕದಲ್ಲೇ ಇಲ್ಲ. ಭಾರತೀಯರು ರಾಜ ಮಹಲಿನ ಕೋಶದ ಮೇಲೆ ಅದರಲ್ಲೂ ಕೂಲಿ ಕಾರ್ಮಿಕರ, ಶ್ರಮಿಕರ ಕೆಲಸಗಳ ಬಗ್ಗೆ ನಾವು ಬಹಳ ಮಡಿವಂತಿಕೆ ತೋರಿಸಿದ್ದೇವೆ. ನನ್ನ ದೃಷ್ಟಿಗೆ ನಿಲುಕಿದ ಮೊಟ್ಟಮೊದಲ ಟ್ರಕ್ ದಂಧೆಯ ಬರವಣಿಗೆ ಇದು.

ಕೆಲವು ವರ್ಷಗಳ ಹಿಂದೆ ನಾವು ಉತ್ತರ ಕನ್ನಡ ಜಿಲ್ಲೆಯವರು, ಅದರಲ್ಲೂ ಅಂಕೋಲೆಯವರು ಟ್ರಕ್ ನೋಡಿದರೆ ಸಾಕು ಶಾಪ ಹಾಕುತ್ತಿದ್ದೆವು. ಬಳ್ಳಾರಿಯ ಅದಿರನ್ನು ಬೇಲೆಕೇರಿ ಹಾಗೂ ಕಾರವಾರ ಬಂದರಿನಿಂದ ರಪ್ತು ಮಾಡಲಾಗುತ್ತಿತ್ತು. ನಂತರ ಕಾರವಾರ ಬಂದರಿನಲ್ಲಿ ಅದಿರು ವಹಿವಾಟನ್ನು ನಿಲ್ಲಿಸಿ ಕೇವಲ ಬೇಲೆಕೇರಿ ಬಂದರಿನಲ್ಲಿ ಮಾತ್ರ ವ್ಯವಹರಿಸುವಂತಾಯ್ತು. ಆಗಂತೂ ಅಂಕೋಲೆ ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆಯ ಧಾರಣ ಶಕ್ತಿಯನ್ನು ಮೀರಿ ಟ್ರಕ್ ಓಡಾಟ ನಡೆಯುತ್ತಿತ್ತು. ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಅರಬೈಲ್ ಘಾಟ ದಾಟಿ ಬರಬೇಕಿದ್ದ ಟ್ರಕ್ ಗಳು ಘಾಟ್ ನಲ್ಲಿ ಅಪಘಾತಕ್ಕೀಡಾಗಿ ಅಂಕೋಲಾ ಹುಬ್ಬಳ್ಳಿ ರಸ್ತೆಯನ್ನೇ ಬಂದು ಮಾಡಿಬಿಡುತ್ತಿದ್ದವು. ಅರ್ಜೆಂಟ್ ಹುಬ್ಬಳ್ಳಿಗೆ ಹೋಗಬೇಕಾದವರು ಒದ್ದಾಡುವಂತಾಗುತ್ತಿತ್ತು. ಈ ಅದಿರು ಟ್ರಕ್ ಓಡಾಟದಿಂದ ಪ್ರಾಣ ಕಳೆದುಕೊಂಡ ಬೈಕ್ ಸವಾರರ ಕಾರು ಸವಾರರ ಲೆಕ್ಕ ಸಾವಿರದ ಗಟಿ ದಾಟಿದೆ. ಟ್ರಕ್ ಎಂದರೆ ಯಮದೂತ ಎಂದೆ ಭಾವಿಸಿ ಭಯಪಡುತ್ತಿದ್ದ ನನಗೆ ಅರಬೈಲ್ ಘಾಟ್ ನ ವಿವರಣೆಯನ್ನೂ ಒಳಗೊಂಡ ಚೆಕ್ ಪೋಸ್ಟ್ ಕಾದಂಬರಿಯ ಓದು ವಿಚಿತ್ರ ಕುತೂಹಲ ಹುಟ್ಟಿಸಿದ್ದು ಸುಳ್ಳಲ್ಲ.

ಬಹುಶಃ ನಾನಾಗ ಹತ್ತನೆಯ ತರಗತಿ. ಸಂಜೆಯ ಹೊತ್ತು ಒಂದು ಸುತ್ತು ಪಕ್ಕದ ಮನೆಯ ಕ್ಲಾಸ್ ಮೇಟ್ ಭಾರತಿ ಶಾನಭಾಗ್ ಜೊತೆ ವಾಕ್ ಹೋಗುತ್ತಿದ್ದೆ. ಹೈಸ್ಕೂಲಿನ ಮಾತುಗಳು ಬಹಳಷ್ಟು ಇರುತ್ತಿದ್ದವು. ಗೆಳತಿಯರ ಬಗ್ಗೆ, ಅವರ ಪ್ರೇಮದ ಬಗ್ಗೆ, ಕ್ಲಾಸಿನ ಹುಡುಗರ ಬಗ್ಗೆ ತಡೆಯೇ ಇಲ್ಲದೇ ಮಾತನಾಡುತ್ತ ರಸ್ತೆಯ ಮೇಲೆ ಒಂದಿಷ್ಟು ದೂರ ಹೋಗಿ, ರಸ್ತೆ ಪಕ್ಕದ ಸಂಕದ ಮೇಲೆ ಸ್ವಲ್ಪ ಹೊತ್ತು ಕುಳಿತು ಹಿಂದಿರುಗುತ್ತಿದ್ದೆವು. ರಸ್ತೆಯ ಮೇಲೆ ಓಡಾಡುವ ವಾಹನಗಳನ್ನು ಗಮನಿಸುವುದೂ ಒಂದು ರೀತಿಯಲ್ಲಿ ತಮಾಷೆ ಎನ್ನಿಸುತ್ತಿತ್ತು. ಅದರಲ್ಲೂ ಟ್ರಕ್ ಬಂದರೆ ಒಂದು ರೀತಿಯ ಒಳನಡುಕ, ಜೊತೆಗೆ ಚೇಷ್ಟೆ ಮಾಡುವುದರಲ್ಲಿ ಟ್ರಕ್ ಡ್ರೈವರ್ ಗಳು ಎತ್ತಿದ ಕೈಯಾದ್ದರಿಂದ ತಮಾಷೆ ಕೂಡ. ಜೋರಾಗಿ ಹೋಗುವ ಟ್ರಾವೆಲ್ಸ್ ನವರು ಕೂಡ ಕೆಲವೊಮ್ಮೆ ಚೇಷ್ಟೇ ಮಾಡುವುದಿರುತ್ತಿತ್ತು. ಎದುರು ಬರುತ್ತಿರುವ ಟ್ರಕ್ ನ ಒಂದೇ ಬದಿಯ ಲೈಟ್ ಆನ್ ಆಗಿ ಆಫ್ ಆದರೆ ಅದು ಕಣ್ಣು ಹೊಡೆದಂತೆ ಎಂದು ಹೇಳಿಕೊಟ್ಟವಳೂ ಅವಳೇ. ಯಾಕೆಂದರೆ ಅವರದ್ದೊಂದು ಅಂಗಡಿ ಇತ್ತು. ಕಿರಾಣಿ ಸಾಮಾನಿನ ಜೊತೆ ಚಹಾ ಕೂಡ ಕೊಡುತ್ತಿದ್ದರು. ಹೀಗಾಗಿ ಬಹಳಷ್ಟು ವಾಹನಗಳು ಅಲ್ಲಿ ನಿಲ್ಲುತ್ತಿದ್ದುದರಿಂದ ಈ ವಾಹನಗಳ ಬಗ್ಗೆ ಹಾಗೂ ವಾಹನ ಚಾಲಕರ ಬಗ್ಗೆ ಅವಳಿಗೆ ಅದೆಷ್ಟೋ ವಿಷಯಗಳು ಗೊತ್ತಿರುತ್ತಿದ್ದವು. ಶಿಕ್ಷಕರ ಮಗಳಾದ ನನಗೆ ಅದೊಂದು ಅಪರಿಚಿತವಾದ ಹೊಸತೇ ಆದ ಲೋಕ. ಹೀಗಾಗಿ ಟ್ರಕ್ ನವರು ಮತ್ತು ಟ್ರಾವೆಲ್ಸ್ ನವರು ಒಂದು ಬದಿಯ ಲೈಟ್ ಹಾಕಿದರೆ ಬಿದ್ದು ಬಿದ್ದು ನಗುತ್ತಿದ್ದೆವು.

ಅಂತಹುದ್ದೇ ಒಂದು ದಿನ. ಸಂಕದ ಮೇಲೆ ಕುಳಿತು ಯಾವುದೋ ಮಾತಲ್ಲಿ ಮಗ್ನರಾಗಿದ್ದೆವು. ಒಂದು ಮಿನಿ ಟ್ರಕ್ ನಮ್ಮೆದುರಿಗೆ ಬಂದಿದ್ದು ಸಡನ್ ಆಗಿ ಬ್ರೆಕ್ ಹಾಕಿ ಕ್ರೀಚ್ ಎಂದು ಶಬ್ಧ ಮಾಡುತ್ತ ನಿಂತಿತು. ಡ್ರೈವರ್ ಕಿಟಕಿಯಿಂದ ಮುಖ ಹೊರಹಾಕಿ ಏನೋ ಹೇಳಿದ. ನಾನು ಗಡಗಡ ನಡುಗಲು ಆರಂಭಿಸಿದೆ. ಪಕ್ಕದಲ್ಲಿ ಕುಳಿತ ಗೆಳತಿ ಎಲ್ಲಿ ಎಂದು ನೋಡಿದರೆ ಎಲ್ಲಿಯೂ ಕಾಣುತ್ತಿಲ್ಲ. ಅತ್ತಿತ್ತ ದೃಷ್ಟಿ ಹಾಯಿಸಿದರೆ ನಾವು ನಡೆದು ಬರುವಾಗ ಮುರಿದುಕೊಂಡ ರಸ್ತೆಯ ಪಕ್ಕದ ಗಿಡವೊಂದರ ಟೊಂಗೆಯನ್ನು ಆ ಟ್ರಕ್ ನ ಹಿಂಬದಿಗೆ ಸಿಕ್ಕಿಸುವುದರಲ್ಲಿ ಮಗ್ನಳಾಗಿದ್ದಳು. ಇತ್ತ ಟ್ರಕ್ ಡ್ರೈವರ್ ನ ಪ್ರೇಮಾಲಾಪನೆಗೆ ಸಿಟ್ಟು, ಅತ್ತ ಅವಳ ಕೆಲಸ ನೋಡಿ ನಗು ಎರಡೂ ಏಕಕಾಲದಲ್ಲಿ ಅನುಭವಿಸುತ್ತ ನಾನು ತಲೆತಗ್ಗಿಸಿ ನಿಂತಿದ್ದೆ. ಅಂತೂ ಹೇಳಬೇಕಾದುದನ್ನೆಲ್ಲ ಬಾಯಿಪಾಠ ಹಾಕಿಕೊಂಡಂತೆ ಹೇಳಿ ಕೊನೆಗೆ ‘ಮೆರಾ ಸಪ್ನೊಂಕಿ ರಾಣಿ ತೂ ಆಯೆಗಿ ಕಬ್...’ ಎನ್ನುತ್ತ ಟ್ರಕ್ ಹೊರಟಾಗ ಭಯ ಹಾಗು ನಗುವಿನ ನಡುವಿನ ನಾನು ಅವಳನ್ನು ದರದರನೆ ಎಳೆದುಕೊಂಡು ಮನೆ ಸೇರಿದ್ದೆ. ನಂತರ ಅವಳೆಷ್ಟೇ ಹೇಳಿದರೂ ಕುಮಟಾ ಶಿರಸಿಯ ಆ ರಾಜ್ಯ ಹೆದ್ದಾರಿ ಬಿಟ್ಟು ಕಾಡಿನ ದಾರಿ ಆರಿಸಿಕೊಂಡಿದ್ದೆ. ಇಡೀ ಕಾದಂಬರಿ ಓದುವಾಗ ನನಗೆ ಪದೆ ಪದೆ ನೆನಪಾದ ಘಟನೆ ಇದು.

ಟ್ರಕ್ ಡ್ರೈವರ್ ಹಾಗೂ ಕ್ಲೀನರ್ ಗಳ ಬಗ್ಗೆ ರಂಜನೀಯವಾದ ಕಥೆಗಳನ್ನಷ್ಟೇ ಕೇಳಿದ್ದ ನನಗೆ ಈ ಕಾದಂಬರಿಯ ಓದು ಹೊಸತೇ ಆದ ಅನುಭವ ನೀಡಿತು. ಪದೇ ಪದೇ ಹಾಳಾಗುವ ಟ್ರಕ್ ಗಳು, ಸೋರುವ ಇಂಜಿನ್ ಗಳು, ಕೈಕೊಡುವ ಬಿಡಿ ಭಾಗಗಳು ಎಲ್ಲವೂ ಒಬ್ಬ ಟ್ರಕ್ ಡ್ರೈವರ್ ನನ್ನ ಯಾವ ಪರಿ ಕಂಗೆಡಿಸಬಹುದು ಎಂಬುದನ್ನು ಸ್ವತಃ ಅನುಭವಿಸಿ ಬರೆದಿದ್ದಾರೆ ರಾಜು ಗಡ್ಡಿ. ಇಲ್ಲಿನ ಕಥೆಯ ಬಹುತೇಕ ಅನುಭವ ಸ್ವತಃ ಅವರದ್ದೇ. ಎಲ್ಲೋ ಕೆಲವಷ್ಟನ್ನು ಕಾಲ್ಪನಿಕವಾಗಿ ಕಾದಂಬರಿಯಾಗಿಸುವ ದೃಷ್ಟಿಯಿಂದ ಸೇರಿಸಿರಬಹುದೇನೋ. ಆದರೆ ಅವರೇ ಹೇಳುವಂತೆ ಇದೊಂದು ಅವರ ಆತ್ಮಕಥೆಯ ತುಣುಕು.  ಈಗ ಕೆ ಇ ಬಿ ಯಲ್ಲಿ ನೌಕರರಾಗಿರುವ ರಾಜು ಆಟೊಮೊಬೈಲ್ ಡಿಪ್ಲೋಮಾ ಮುಗಿಸಿದ್ದರಿಂದ ಟ್ರಕ್ ನಿಭಾಯಿಸಬಲ್ಲೆ ಎಂಬ ಹುಂಬು ಧೈರ್ಯಕ್ಕೆ ಸಿಲುಕಿ ಟ್ರಕ್ ಕೊಂಡು ಸ್ವತಃ ಡ್ರೈವರ್ ನಾಗಿಯೂ ಕೆಲಸ ಮಾಡಿದ ಮೂರ್ನಾಲ್ಕು ವರ್ಷದ ಅನುಭವಗಳ ಸಾರ ಇಲ್ಲಿದೆ.

ಆಟೊಮೊಬೈಲ್ ಡಿಪ್ಲೋಮಾ ಓದುವಾಗ ತನ್ನ ಜೊತೆಗೇ ಓದುತ್ತ ಕಡಿಮೆ ಅಂಕ ಗಳಿಸುತ್ತ ಎಲ್ಲದಕ್ಕೂ ಇವರನ್ನೇ ಆಶ್ರಯಿಸುತ್ತಿದ್ದ ಸ್ನೇಹಿತನೊಬ್ಬ ನಂತರ ಆರ್ ಟಿ ಓ ಆದ ನಂತರ ತೋರುವ ದರ್ಪ, ದೌಲತ್ತುಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ತಾನು ಪಡೆದ ಸಹಾಯ ಮರೆತು ಯಾವುದೋ ಡಾಕ್ಯುಮೆಂಟ್ ಹೆಸರು ಹೇಳಿ ಸಾವಿರಗಟ್ಟಲೆ ಲಂಚ ಪಡೆವ ಕುಟಿಲತೆಯನ್ನು ಎತ್ತಿ ಹಿಡಿದಿದ್ದಾರೆ. ಜಾತಿಯ ಆಧಾರದಿಂದ ದೊಡ್ಡ ಹುದ್ದೆಗೇರಿದ ಪ್ರಸ್ತಾಪ ಮುಜುಗರ ಹುಟ್ಟಿಸುತ್ತದೆಯಾದರೂ ಒಳ್ಳೆಯ ಅಂಕ ಪಡೆದೂ ತನ್ನ ಓದಿಗೆ ತಕ್ಕುನಾದ ನೌಕರಿ ಸಿಗದ ಅಸಮಧಾನ ಈ ಸಾಲುಗಳಂತೆಯೇ ಅಲ್ಲಲ್ಲಿ ಇಣುಕಿ ಹಾಕುತ್ತದೆ. ಜಿಲ್ಲೆಯ ಗಡಿಯಲ್ಲಿಯೇ ಕಾದು ಹಣ ಪೀಕುವ ಇನ್ನೊಬ್ಬ ಆರ್ ಟಿ ಓ ಕುರಿತಾದ ಸುದೀರ್ಘ ವಿವರಣೆಯೂ ಇಲ್ಲಿದೆ. ಕಾರ್ ನ್ನು ಸರಿಯಾಗಿ ರಿವರ್ಸ್ ಹಾಕಿ ನಿಲ್ಲಿಸಲು ಬರದ ನನಗೆ ‘ನಿನಗ್ಯಾರು ಲೈಸನ್ಸ್ ಕೊಟ್ಟಿದ್ದು? ನಾನಾದರೆ ಕೊಡ್ತಾ ಇರಲಿಲ್ಲ.’ ಎಂದ ಆರ್ ಟಿ ಓ ಹುದ್ದೆಯಿಂದ ನಿವೃತ್ತರಾದ ನನ್ನ ಕಸಿನ್ ಒಬ್ಬರು ಕೆಲವು ದಿನಗಳ ಹಿಂದೆ ಕಿಚಾಯಿಸಿದ್ದು ನೆನಪಿಗೆ ಬಂತು. ‘ಅದಕ್ಕೇ ಲೈಸೆನ್ಸ್ ಮಾಡಿಸುವಾಗ  ನಿನಗೆ ಫೋನ್ ಮಾಡಿರಲಿಲ್ಲ’ ಎಂದು ನಾನೂ ನಕ್ಕಿದ್ದೆ.

ನಾನು ಹೈಸ್ಕೂಲ್ ನಲ್ಲಿರುವಾಗ ನನ್ನ ಸ್ನೇಹಿತೆಯೊಬ್ಬಳು ದೂರದಿಂದ ಬರುತ್ತಿದ್ದಳು. ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ್ದರಿಂದ ಆ ರಸ್ತೆಯಲ್ಲಿ ಬರುವ ಯಾವುದಾದರೂ ವಾಹನಗಳಿಗೆ ಕೈ ತೋರಿಸಿ ಶಾಲೆಗೆ ಬರುತ್ತಿದ್ದರು. ಆಗ ಕಾಲ ಇಷ್ಟೊಂದು ಕೆಟ್ಟಿರಲಿಲ್ಲ. ಶಾಲೆಯ ಯುನಿಫಾರ್ಮ್ ನೋಡಿ ಓದುವ ಮಕ್ಕಳು ಎಂದು ಖುಷಿಯಿಂದಲೇ ಹೆಚ್ಚಿನವರು ಶಾಲೆಯ ಬಳಿ ಬಿಟ್ಟು ಹೋಗುತ್ತಿದ್ದರು. ಮಕ್ಕಳ ಕಳ್ಳರು ಇರುತ್ತಾರೆ ಎನ್ನುವ ಅಂಜಿಕೆಯೊಂದು ಬಿಟ್ಟರೆ ಈಗಿನಂತೆ ಹುಡುಗಿಯರು ಯಾರೋ ಅಪರಿಚಿತರ ಜೊತೆ ಬಂದರೆ ಅನಾಹುತವಾಗಬಹುದು ಎಂಬ ಭಯ ಇರಲಿಲ್ಲ. ಒಂದು ದಿನ ನನ್ನ ಗೆಳತಿ ಹೀಗೆ ಒಂದು ಟ್ರಕ್ ಗೆ ಕೈ ಮಾಡಿ ಹತ್ತಿದ್ದಾಳೆ. ಶಿರಸಿ ಕುಮಟಾ ರಸ್ತೆಯಲ್ಲಿ ಒಂದು ಕಾಲದಲ್ಲಿ ಎಲ್ಲ ವಾಹನಗಳೂ ನಿಂತು ಚಹಾ ಕುಡಿದು ಹೋಗುತ್ತಿದ್ದ ಅಂಗಡಿ ಅವಳ ಅಪ್ಪನದ್ದು. ಹೀಗಾಗಿ ಅವಳಿಗೆ ಅಂತಹ ಯಾವ ಭಯವೂ ಇರಲಿಲ್ಲ. ಆದರೆ ಸ್ವಲ್ಪ ದೂರ ಬರುವಷ್ಟರಲ್ಲಿ ಟ್ರಕ್ ಡ್ರೈವರ್ ಅವಳ ಬಳಿ ಮಾತಾಡಿ ಅವಳು ಯಾರ ಮಗಳು ಎಂದು ತಿಳಿದುಕೊಂಡಿದ್ದಾನೆ. ಟ್ರಕ್ ನಿಲ್ಲಿಸಿ ಹಣ ಕೊಡು ಎಂದು ಒಂದೇ ಸಮ ಒತ್ತಾಯಿಸಿದ್ದಾನೆ. ಕಾರಣವೇನೆಂದರೆ ಹಿಂದೊಮ್ಮೆ ಅವಳ ಅಪ್ಪನ ಅಂಗಡಿಯಲ್ಲಿ ಚಹಾ ಕುಡಿದಿದ್ದ ಆತ ನೂರು ರೂಪಾಯಿಯ ಚಿಲ್ಲರೆ ಬಿಟ್ಟು ಹೋಗಿದ್ದನಂತೆ. ಈಗ ಅವಳು ಆ ಹಣ ಕೊಟ್ಟರೆ ಮಾತ್ರ ಶಾಲೆಗೆ ಬಿಡುತ್ತೇನೆ, ಇಲ್ಲವಾದರೆ ಟ್ರಕ್ ಇಲ್ಲಿಯೇ ನಿಲ್ಲಿಸಿಬಿಡುತ್ತೇನೆ ಎಂದು ರೋಪ್ ಹಾಕಿದ್ದಾನೆ. ಬಸ್ ಗೆ ಬಂದರೆ ವರ್ಷ ಪೂರ್ತಿ ಪಾಸ್ ಇರುತ್ತದೆ. ಹೀಗೆ ಬೇರೆ ಯಾವುದೋ ವಾಹನಕ್ಕೆ ಬಂದರೆ ಅಲ್ಲಿಯವರೆಗೆ ಶಾಲೆಯ ಮಕ್ಕಳಿಂದ ಹಣ ತೆಗೆದುಕೊಂಡ ಇತಿಹಾಸವೇ ಇಲ್ಲ. ಹಾಗಿರುವಾಗ ಐದು ರೂಪಾಯಿಗಿಂತ ಹೆಚ್ಚಿನ ಹಣ ಯಾವ ವಿದ್ಯಾರ್ಥಿಯ ಬಳಿಯೂ ಇರುತ್ತಿರಲಿಲ್ಲ. ಹಾಗಿರುವಾಗ ನೂರು ರೂಪಾಯಿನ ಚಿಲ್ಲರೆ ಕೊಡು ಅಂದರೆ ಅವಳಾದರೂ ಹೇಗೆ ಕೊಟ್ಟಾಳು? ಮತ್ತೊಂದು ಸಲ ಅಂಗಡಿಗೆ ಹೋದಾಗಲೂ ನಿಮ್ಮಪ್ಪ ಹಣದ ನೆನಪು ಮಾಡಲಿಲ್ಲ. ಈಗ ನನಗೆ ನೆನಪಾಗಿದೆ. ಹಣ ಕೊಟ್ಟು ಬಿಡು ಎಂದು ಒರಾತೆ ತೆಗೆದಿದ್ದಾನೆ. ಅಂತೂ ಕಾಡಿ ಬೇಡಿ, ಅಪ್ಪನ ಬಳಿ ಹಣ ಕೊಡಿಸುವ ವಾಗ್ಧಾನ ಮಾಡಿ ಅವಳು ಶಾಲೆಗೆ ಬರುವಷ್ಟರಲ್ಲಿ ಒಂದು ಅವಧಿ ಮುಗಿದೇ ಹೋಗಿತ್ತು. ಆ ಘಟನೆಯನ್ನು ಅವಳು ವಿವರಿಸುವಾಗ ಅವಳ ಕಣ್ಣು ಧ್ವನಿಯಲ್ಲಿದ್ದ ಹೆದರಿಕೆ ನನಗೆ ಎಷ್ಟು ತಾಗಿತ್ತೆಂದರೆ ನಾನೂ ಅಕ್ಷರಶಃ ನಡುಗಿ ಹೋಗಿದ್ದೆ. ಯಾಕೋ ಮೂಡುಬಿದೆರೆಯಲ್ಲಿ ಓದುತ್ತಿದ್ದ ಕರಿಯಪ್ಪ ಆರ್ ಟಿ ಓ ನ ಮಗಳಿಗೆ ಧಮಕಿ ಹಾಕಿದ ಪ್ರಸಂಗ ಓದುವಾಗ ಇದೆಲ್ಲ ನೆನಪಾಗಿ ಮತ್ತೊಮ್ಮೆ ಭಯ ಒತ್ತರಿಸಿ ಬಂತು.

ಟ್ರಕ್ ನ ವ್ಯವಹಾರ, ರಿಪೇರಿ ಮುಂತಾದುವುಗಳೆಲ್ಲ ಕೆಲವೆಡೆ ಪೇಜುಗಟ್ಟಲೆ ಆಕ್ರಮಿಸಿ ಅಲ್ಲಲ್ಲಿ ಡಾಕ್ಯುಮೆಂಟರಿ ಓದಿದಂತಾಗಿ ನೀರಸ ಎನ್ನಿಸಿದರೂ ಇಡೀ ಕಾದಂಬರಿಯನ್ನು ಓದುವಾಗ ಅದರ ಎಲ್ಲಾ ಪುಟಗಳೂ ರೋಚಕವಾಗಿಯೇ ಇರಬೇಕಿಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ. ಪ್ರಸಿದ್ದರ ಕಾದಂಬರಿಯ ಮಧ್ಯೆ ಕೂಡ ಬೇಸವೆನಿಸಿ ಪುಟ ತಿರುವುದನ್ನು ಅಲ್ಲಗಳೆಯಲಾಗದು. ಕನ್ನಡ ಕಾದಂಬರಿ ಲೋಕಕ್ಕೆ ಒಂದು ಹೊಸತೇ ಆದ ವಿಷಯವನ್ನು ಎದುರಿಗಿಟ್ಟು ಕುತೂಹಲಕರವಾದ ಓದನ್ನು ಹಾಕಿಕೊಟ್ಟ ಚೆಕ್ ಪೋಸ್ಟ್ ನ್ನು ಖಂಡಿತವಾಗಿಯೂ ಓದಿ ಆನಂದಿಸಬಹುದು. ಪುಸ್ತಕ ಪ್ರಿಯರಿಗೆ, ಹೊಸ ವಿಷಯವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ ನಿರಾಸೆ ಮಾಡದ ಪುಸ್ತಕ ಇದು ಎಂದು ಧೈರ್ಯವಾಗಿ ಹೇಳಬಹುದು.

ಚೆಕ್ ಪೋಸ್ಟ್ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

MORE FEATURES

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...

ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ ಓದಬೇಕಾದ ಕೃತಿ ‘ಇರುವುದೆಲ್ಲವ ಬಿಟ್ಟು’

19-04-2024 ಬೆಂಗಳೂರು

'ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂ...

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...