‘ಚೆಂಬೆಳಕು ಕವಿ’ಯ ನುಡಿಗಳಿವೆ ಇಲ್ಲಿ...


"ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ" ಎಂದು ಬರೆದಿದ್ದವರು ಕವಿ ಚೆನ್ನವೀರ ಕಣವಿ. ಅವರ ಕಾವ್ಯದಲ್ಲೊಂದು ಅನನ್ಯ ಪ್ರೀತಿಯ ಧಾರೆಯಿತ್ತು. ಅದು ಈ ಬದುಕನ್ನು ಮತ್ತೆ ಮತ್ತೆ ಮೊಗೆದುಕೊಳ್ಳುವೆಡೆಗಿನ ಉತ್ಸಾಹವೂ ಆಗಿತ್ತು. ಇಂದು (ಜೂನ್ 28) ಅವರ ಜನ್ಮದಿನ. ಈ ಸಂದರ್ಭದಲ್ಲಿ, ಅವರು ಬೇರೆ ಬೇರೆ ಸಂದರ್ಶನಗಳಲ್ಲಿ ಆಡಿದ್ದ ಮಾತುಗಳ ಒಂದು ಗೊಂಚಲು ನಿಮ್ಮ ಓದಿಗಾಗಿ...

ಸಂದರ್ಶಕಿ: ಕೆ.ಎನ್. ವಿಜಯಲಕ್ಷ್ಮಿ; *ಆಧುನಿಕ ಕನ್ನಡ ಕಾವ್ಯ ಚಳವಳಿಗಳು ನಿಮ್ಮ ಕಾವ್ಯ ಧೋರಣೆಯನ್ನು ನಿಯಂತ್ರಿಸಿತೇ ? ಅಥವಾ ಅಂಥ ಚಳವಳಿಗಳ ನೆಲೆಗಳನ್ನು ನೀವು ಮೀರಿದಿರೇ ಹೇಗೆ ?
ಕಣವಿ :
ನವೋದಯ, ನವ್ಯ, ದಲಿತ, ಬಂಡಾಯ ಯಾವ ಹೊಸ ಪ್ರವಾಹ ಬಂದರೂ ಅವುಗಳೊಂದಿಗೆ ಸಂಪರ್ಕ ಬೆಳೆಸುವ ಬಯಕೆ ನನ್ನದು. ನನಗೆ ಬಂಡಾಯ ಕಾವ್ಯಕ್ಕಿಂತಲೂ ದಲಿತರ ಸಂವೇದನೆ ಸೂಕ್ಷ್ಮತೆಗಳು ನನ್ನನ್ನು ಮುಟ್ಟಿತು. ಸರ್ವಜ್ಞ ವಚನಕಾರರಲ್ಲೂ ಬಂಡಾಯ ಪ್ರವೃತ್ತಿಯ ಶ್ರೇಷ್ಠ ವಚನಗಳಿವೆ.1950ರಲ್ಲಿ ಅಡಿಗರಿಂದ ನವ್ಯಕಾವ್ಯ ಪ್ರಾರಂಭವಾಯಿತು. ಆಡುಮಾತಿನ ಲಯ ಪ್ರತಿಮೆ, ಶಿಲ್ಪ ಕಾವ್ಯಸ್ವರೂಪ ಇವುಗಳಲ್ಲಿ ಹೊಸತು ಮೂಡಿಬಂತು. ನಿರಾಶೆ, ಲೈಂಗಿಕ ವಿಕೃತಿ, ಯಾಂತ್ರಿಕತೆ, ಜೀವನದ ಅರ್ಥಹೀನತೆ ಇಂಥ ವಸ್ತುವನ್ನು ಹೊರತುಪಡಿಸಿ ನನಗೆ ಒಗ್ಗುವ ಮೂಲಸತ್ವ ಮಾತ್ರ ಸ್ವೀಕರಿಸಿ ನಾನು ಕಾವ್ಯ ಬರೆಯತೊಡಗಿದೆ.

ಸಂದರ್ಶಕಿ: ಕಮಲಾ ಹೆಮ್ಮಿಗೆ; ನಿಮ್ಮ ಕಾವ್ಯವನ್ನು ಅಭ್ಯಾಸ ಮಾಡಿದಾಗ ಅಲಂಕಾರಿಕತೆ, ನಾದಮಯತೆಗಳಿಗೆ ವಿರುದ್ದವಾಗಿ ಸರಳತೆ, ವರ್ಣಕತೆಗಳು ಸ್ಥಾನ ಪಡೆದಿರುವುದನ್ನು ಗುರ್ತಿಸಿದ್ದೇನೆ. ಇದಕ್ಕೆ ನಿಮ್ಮದೇ ಆದ ಉದ್ದೇಶ ಕಾರಣಗಳು ಇವೆಯೇ? ಹೇಳಿ.
ಕಣವಿ : ಸರಳತೆ ನನ್ನ ಕಾವ್ಯದ ಸಹಜ ಗುಣ ಅಷ್ಟೇ. ವರ್ಣಕತೆಯಿಂದ ಓದುಗರು ಆಕರ್ಷಿತರಾಗುವುದಿಲ್ಲವೆ? ಆ ಮೇಲೆ ಅದರ ಆಳಕ್ಕೆ ಅವರನ್ನು ಕರೆದೊಯ್ಯಲಿಕ್ಕೆ ಸುಲಭ. ಕಾವ್ಯ ಆಡುವ ಮಾತಿನಲ್ಲೇ ಅಲಂಕಾರವಿದೆ; ಹೊರಗಲ್ಲ. ಇನ್ನು ’ನಾದಮಯತೆ’ ನನ್ನ ಕಾವ್ಯದಲ್ಲಿ ಕಾಣದು ಎಂದಿರಿ. ನಾನು ಕಾವ್ಯದಲ್ಲಿ ಬಯಸುವುದು ಭಾವನಾದಗಳ ಪರಿಣತಿಯನ್ನು.

ಸಂದರ್ಶಕ: ಗಂಗಾಧರ ಕುಷ್ಟಗಿ; ಇಂದಿನ ಸುಶಿಕ್ಷಿತ ಸಾಹಿತ್ಯ ಶಕ್ತಿ ಗ್ರಾಮೀಣ ಯುವಕರಲ್ಲಿ ಹಳ್ಳಿಗಳ ಬಗ್ಗೆ ತಿರಸ್ಕಾರ ಹೆಚ್ಚುತ್ತಿದೆಯಲ್ಲ?
ಕಣವಿ: ಈ ತಿರಸ್ಕಾರದ ಹಿಂದೆ ಸ್ವಷ್ಟ ಉದ್ದೇಶವಿದ್ದಲ್ಲಿ ಸಿದ್ದಲಿಂಗಯ್ಯನಂಥವರ ದಲಿತ ಕಾವ್ಯ ಸೃಷ್ಟಿಯಾಗುತ್ತದೆ. ಅಂತಿಮವಾಗಿ ಅದು ಹಳ್ಳಿಗಳ ಸಮಷ್ಟಿಯನ್ನೇ ಪುಷ್ಟೀಕರಿಸುವಂಥದು!

ಸಂದರ್ಶಕ: ಸಿದ್ದರಾಮ ಪೂಜಾರಿ ಪ್ರಶ್ನೆ; ನಿಮ್ಮ ಸಮಕಾಲೀನ ಕವಿಗಳಿಗಿಂತ ನೀವು ಹೇಗೆ ಭಿನ್ನ? ಓರ್ವ ಕವಿಯಾಗಿ ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ ?
ಕಣವಿ:
ಪ್ರತಿಯೊಬ್ಬರ ವ್ಯಕ್ತಿತ್ವ ನಿರ್ಮಾಣದಲ್ಲಿಯೇ ಆ ಭಿನ್ನತೆಯಿದೆ. ಅದಕ್ಕನುಸರಿಸಿ ಸಮಕಾಲೀನರಾಗಿಯೂ ನಮ್ಮದು ಭಿನ್ನ ರುಚಿ. ಕನ್ನಡ ಕಾವ್ಯ ಪರಂಪರೆಯ ಒಂದು ಅಂಗವಾಗಿಯೇ ನಾನು ನನ್ನನ್ನು ಗುರುತಿಸಿಕೊಳ್ಳುತ್ತೇನೆ.

ಸಂದರ್ಶಕಿ: ವಿನಯಾ ಒಕ್ಕುಂದ; ಸಾನೆಟ್- ನಿಮ್ಮ ಪ್ರೀತಿಯ ಅಭಿವ್ಯಕ್ತಿಯ ಪ್ರಕಾರ. ಆದರೆ ಸರ್, ವ್ಯಕ್ತಿಚಿತ್ರ ಮತ್ತು ಸಾನೆಟ್ ಎಂಬ ಸಂಕರ ಆ ರೂಪದ ವಿಶಿಷ್ಟತೆಯೇ? ಅಥವಾ ನೀವು ಅದನ್ನು ಮಿದ್ದಿ ಹದಗೊಳಿಸಿದ್ದೇ?
ಕಣವಿ: ನನ್ನ ಪ್ರಥಮ ಕವನಸಂಕಲನ ಕಾವ್ಯಾಕ್ಷಿಯಲ್ಲಿ 15ಕ್ಕೂ ಹೆಚ್ಚು ಸಾನೆಟ್ ಗಳು ಬಂದಿವೆ. ಹೌದು; ಸಾನೆಟ್ ನನ್ನ ಪ್ರೀತಿಯ ಅಭಿವ್ಯಕ್ತಿ ಪ್ರಕಾರ. ವ್ಯಕ್ತಿಚಿತ್ರ ಪ್ರಕಾರ. ವ್ಯಕ್ತಿಚಿತ್ರ ಮತ್ತು ಸಾನೆಟ್ ಸಂಕರ ರೂಪವೂ ಅದರ ವೈಶಿಷ್ಟ್ಯ. ಆಮೇಲೆ ಮತ್ತೆ ಅದನ್ನು ಮಿದ್ದಿ ಹದಗೊಳಿಸಿದ್ದೂ ನಿಜ. ಭಾಷೆ ನಮ್ಮ ಬೆಂಬಲಕಿರಬೇಕು. ಭಾಷೆಯಲ್ಲಿ ಅದನ್ನು ತಿದ್ದಿ ತಿಡಬೇಕು. ಬಳ್ಳಾರಿಯ ಲೋಹಿಯಾ ಪ್ರಕಾಶನ ನನ್ನ ‘ಸುನೀತ ಸಂಪುಟ’ ವನ್ನು ಪ್ರಕಟಿಸಿದೆ. ಅದರ ಎರಡನೆಯ ಮುದ್ರಣ ಹೆಚ್ಚಿನ ಸಾನೆಟ್ ಗಳನ್ನು ಹೊಂದಿದೆ. ಶ್ರೀ ಅತ್ರಿ ‘ಗಾಯಕ’ ರವರು ಡಾ.ಜಿ.ಎಸ್. ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ ನನಗೆ ‘ಸುನೀತ ಸಾಮ್ರಾಟ್’ ಎಂದು ಬಿರುದು ಕೊಟ್ಟುದನ್ನು ಇಲ್ಲಿ ನೆನಪಿಸಬಹುದು.

ಇದಕ್ಕೆ ಚತುರ್ದಶಿ ಪದ ಎಂದು ರಾಷ್ಟ್ರಕವಿ ಗೋವಿಂದ ಪೈಯವರು ಕರೆಯುತ್ತಿದ್ದರು. ಮಾಸ್ತಿಯವರು ಸಾನೆಟ್ ಗೆ ‘ಸುನೀತ’ ಎಂದು ಕರೆದರು. ಬೇಂದ್ರೇಯವರು ಅಷ್ಟಷಟ್ಪದಿ ಎಂದು ಕರೆದರು. ಮೊದಲ ಎಂಟು ಸಾಲುಗಳಲ್ಲಿ ಭಾವ ತುಂಬಿ ಬರುತ್ತಿತ್ತು. ಉಳಿದ ಆರು ಸಾಲುಗಳಲ್ಲಿ ವೈಚಾರಿಕತೆ ಮಿನುಗುತ್ತಿತ್ತು. ಕುವೆಂಪು ಅವರು ‘ಕೃತ್ತಿಕೆ’ ಸಂಗ್ರಹದಲ್ಲಿ ಪ್ರಾಸಗಳನ್ನು ಕಟ್ಟುನಿಟ್ಟಾಗಿ ಬಳಸುತ್ತಿದ್ದರು. ಕೊನೆಯ ಎರಡು ಸಾಲಿನಲ್ಲಿ ಸಾರವತ್ತಾದುದನ್ನು ಹೇಳುತ್ತಿದ್ದರು.

ಇವರೆಲ್ಲರ ಪ್ರಭಾವ ನನ್ನ ಮೇಲಿದೆ. ವಿನಾಯಕ ಸಾನೆಟ್ಟಿನಲ್ಲಿ ಅದೇನದಲ್ಲ ಅಂತ ಒಂದು ಶಬ್ಧ ಬರುತ್ತದೆ. ಅದು ವಿನಾಯಕರ mannerism ಆಗಿದೆ. ಅವರ ವ್ಯಕ್ತಿತ್ವದಲ್ಲಿಯ, ಅವರ ಮಾತುಗಾರಿಕೆಯಲ್ಲಿ ಈ ವಿಶಿಷ್ಟವಾದ ಮತ್ತು ಉಪಯುಕ್ತವಾದ ರೀತಿಯಲ್ಲಿ ಬಳಸಿಕೊಂಡಿದ್ದೇನೆ ಎಂದು ಅನಿಸುತ್ತದೆ. ಹಾಗೆ ಅದನ್ನು ಮಿದ್ದಿ ಹದಗೊಳಿಸಿದ್ದೇನೆ.

ಉದಾಹರಣೆಗೆ ‘ತುಂಬುದಿಂಗಳು’ ಸಾನೆಟ್ಟಿನಲ್ಲಿ ‘ಮಿಟ್ಟು ಮಿಸುಕದೆ ಇರುವ’ (ನಾನು ಅಪರಿಚಿತನೇ ?) ಎಂದು ಕಂಸಿನಲ್ಲಿ ಹಾಕಿ, ಬೇರೆ ಅರ್ಥಕ್ಕೆ ಎಡೆಗೊಡುವುದುಂಟು . ಕೊನೆಯ ಎರಡು ಸಾಲುಗಳಲ್ಲಿ...

‘ಹಸಿವೆಯಾದರೆ ಬಂದು ತಡೆಯಲು ಒಲ್ಲ’
ಇರಬಹುದು ( ಅದು ಮಾತ್ರ ನನ್ನ ಖಾತೆಯದಲ್ಲ)

ಎಂದು ವಿನೋದದಲ್ಲಿ ಬೇರೆ ಧ್ವನಿಸುವುದುಂಟು.

‘ಕಾಲಾತೀತ’ ಎನ್ನುವ ಸಾನೆಟ್ಟಿನಲ್ಲಿ ‘ಬಿಡುವಿಲ್ಲ ಅರ್ಜಂಟು’ ಎಂದು ಪ್ರಾರಂಭಿಸಿ, ಕೊನೆಯ ಸಾಲಿನಲ್ಲಿ...

‘ಅಂಥ ಮನಸ್ಸಿನಲ್ಲಿ ಶಾಂತಿ ಯಾರಿಗಿಹುದೋ ಕಾಣೆ’ ಎಂದು ಮುಕ್ತಾಯಿಸುವುದು ಒಂದು ಚಮತ್ಕಾರವೇ.

ಹಳಕಟ್ಟಿಯವರ ಸಾನೆಟ್ಟಿನಲ್ಲಿ ಕೊನೆಯ ಎರಡು ಸಾಲುಗಳು :
'ಗೋಳಗುಮ್ಮಟ ತಾನೆ ತಲೆಬಾಗಿಸಿತು ನಿಮಗೆ
ಏಳು ಸಲ ಕರೆದರೂ ಎಚ್ಚರಾಗದು ನಮಗೆ'
ಎಂದು ನಾಡಿನ ಸ್ಥಿತಿಯನ್ನು ಸೂಚಿಸುವುದುಂಟು.

ಚೆನ್ನವೀರ ಕಣವಿ ಅವರ ಸಂದರ್ಶನಗಳನ್ನು ಓದಲು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ:
'ಹಾಡೆನ್ನ ದೈವತವು ಹಾಡೆನ್ನ ಜೀವಿತವು...’ : ಡಾ. ಚೆನ್ನವೀರ ಕಣವಿ
ನಾನು ಕಾವ್ಯದಲ್ಲಿ ಬಯಸುವುದು ಭಾವನಾದಗಳ ಪರಿಣತಿಯನ್ನು: ಚೆನ್ನವೀರ ಕಣವಿ
ಒಳ್ಳೆ ಕವಿಗಳನ್ನು, ಲೇಖಕರನ್ನು ಗುರುತಿಸಿ ಅವರ ಪುಸ್ತಕ ಪ್ರಕಟಿಸಬೇಕು. : ಚೆನ್ನವೀರ ಕಣವಿ
ಕಾವ್ಯವನ್ನು ಪ್ರಕಾರಕ್ಕಷ್ಟೇ ಸೀಮಿತಗೊಳಿಸುವುದು ಸರಿಯಲ್ಲ : ಕಣವಿ
ಕಾವ್ಯಕ್ಕೆ ಪ್ರತ್ಯೇಕವಾದ ಭಾಷೆಯಿದೆ ಎಂದು ಭಾವಿಸುವುದೇ ತಪ್ಪು: ಚೆನ್ನವೀರ ಕಣವಿ

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...