ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ 

Date: 11-08-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯ ಬಗ್ಗೆ ಬರೆದ ಆರಂಭದ ಟಿಪ್ಪಣಿ ಇಲ್ಲಿದೆ-

ಅಂಕಣ- ೧

ಆರಂಭಿಕ ಟಿಪ್ಪಣಿ: ಈ ಅಂಕಣಮಾಲೆ ಕಲೆಯ ಚರಿತ್ರೆಯ ಕುರಿತಾದ ಕ್ರೊನೊಲಾಜಿಕಲ್ ಅಂಕಣಮಾಲೆ ಅಲ್ಲ. ಆದರೆ, ಸಮಕಾಲೀನ ಕಲೆಯ ಚರಿತ್ರೆಯಲ್ಲಿರುವ ಒಂದು ದೊಡ್ಡ ಗ್ಯಾಪ್ ಅನ್ನು ತುಂಬುವ ಪ್ರಯತ್ನ. ಸಾಹಿತ್ಯ, ಕಲೆ, ಸಂಗೀತ ಹೀಗೆ ಎಲ್ಲ ಸೃಜನಶೀಲ ಕ್ಷೇತ್ರಗಳಲ್ಲೂ ಈ ಸವಾಲು ಇದೆ. ಕಲೆಗೆ ಸಂಬಂಧಿಸಿದಂತೆ ಅದನ್ನು ವಿವರವಾಗಿ ನೋಡುವ ಪ್ರಯತ್ನ ಇದು.

ನಮ್ಮಲ್ಲಿ ಜಾಗತಿಕವಾಗಿ ಆಧುನಿಕ ಕಲೆ ಎಂದ ಕೂಡಲೆ ತಲೆಗೆ ಹೊಳೆಯುವ ಹೆಸರುಗಳೆಂದರೆ- 1500-1600ರ ನಡುವೆ ಬದುಕಿದ್ದ ಲಿಯೊನಾರ್ಡೊ ಡ ವಿಂಚಿ, ರಫೇಲ್, ಮೈಕಲೇಂಜೆಲೊ ಅಥವಾ 1600-1700ರ ನಡುವೆ ಬದುಕಿದ್ದ ಪೀಟರ್ ಪೌಲ್ ರುಬೆನ್ಸ್, ಆಂಟನಿ ವಾನ್ ಡೈಕ್, ರೆಂಬ್ರಾಂಟ್ ವಾನ್ ರಿನ್ ಅಥವಾ 1700-1800ರ ನಡುವೆ ಬದುಕಿದ್ದ ವಿಲಿಯಂ ಹೊಗಾರ್ಥ್, 1800-1900ರ ನಡುವೆ ಬದುಕಿದ್ದ ಫ್ರಾನ್ಸೆಸ್ಕೊ ಡೆ ಗೋಯಾ, ಜಾನ್ ಕಾನ್ ಸ್ಟೇಬಲ್, ಎಡ್ವರ್ಡ್ ಮಾನೆಟ್, ವಿನ್ಸೆಂಟ್ ವಾನ್ ಗೋ, ಪೌಲ್ ಗಾಗಿನ್ ಅಥವಾ 19 ನೇ ಶತಮಾನದ ಆದಿಯಲ್ಲಿದ್ದ ಪೌಲ್ ಸೆಜಾನ್, ಪೌಲ್ ಕ್ಲೀ, ಸಾಲ್ವಡೋರ್ ಡಾಲಿ, ಪಾಬ್ಲೊ ಪಿಕಾಸೊ, ಹೆನ್ರಿ ಮಾತೀಸ್ ಅಂತಹ ಸಾರ್ವಕಾಲಿಕ ಮಹತ್ವದ ಹೆಸರುಗಳು.

ಈ ಎಲ್ಲ ಹೆಸರುಗಳೂ ಅಂದಾಜು ನೂರು ವರ್ಷ ಹಿಂದಿನವು. ಈ ನೂರು ವರ್ಷಗಳಿಂದೀಚೆಗೆ ಕಲಾಜಗತ್ತು ಕೂಡ ಹಲವು ಬದಲಾವಣೆಗಳನ್ನು ಕಂಡಿದೆ. ಸಮಕಾಲೀನ ಕಲಾ ವ್ಯವಸಾಯ (ಕಂಟೆಂಪರರಿ ಆರ್ಟ್ ಪ್ರಾಕ್ಟೀಸ್)ದಲ್ಲಿ ಹೊಸ ತಳಿಗಳು, ಹೊಸ ಬೆಳೆಗಳು, ಹೊಸ ಪ್ರಯೋಗಗಳು ನಡೆದಿವೆ- ನಡೆಯುತ್ತಿವೆ. ಆದರೆ ಕನ್ನಡದಲ್ಲಿ ಈ ವಿಚಾರಗಳ ಅರಿವಾಗಲೀ, ದಾಖಲೀಕರಣವಾಗಲೀ ನಡೆದದ್ದಿಲ್ಲ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಲಾಜಗತ್ತಿನಲ್ಲಿ ಏನಾಗುತ್ತಿದೆ ಎಂದು ಕೇಳಿದರೆ, ನಮಗೆ ಅದರ ಕಲ್ಪನೆ ಬಹುತೇಕ ಇಲ್ಲವೇ ಇಲ್ಲ. ಇದು ಸಾಹಿತ್ಯದಂತಹ ಬೇರೆ ಸೃಜನಶೀಲ ಚಟುವಟಿಕೆಗಳಿಗೂ ಸತ್ಯ. ಆ ಹಿನ್ನೆಲೆಯಲ್ಲಿ, ಸಮಕಾಲೀನ ಕಲಾಜಗತ್ತಿನೊಳಗೆ ಏನಾಗುತ್ತಿದೆ ಎಂಬುದರ ಒಂದು ಇಣುಕು ನೋಟವನ್ನು ದಾಖಲಿಸುವ ಪ್ರಯತ್ನ ಇದು.

ಜಾಗತಿಕ ಸಂದರ್ಭದಲ್ಲಿ1860-1970ರ ಅವಧಿಯನ್ನು ಆಧುನಿಕ ಕಲೆಯ ಅವಧಿ (ಮಾಡರ್ನ್ ಆರ್ಟ್) ಎಂದು ಪರಿಗಣಿಸಲಾಗುತ್ತದೆ. ಈ ಆಧುನಿಕ ಕಲೆ ಭಾರತಕ್ಕೆ ತಲುಪಿದ್ದು, 1910 – 1930 ರ ಹೊತ್ತಿಗೆ. ಅಲ್ಲಿಯ ತನಕ ರಾಜಾ ರವಿವರ್ಮ ಅವರ “ಇದ್ದುದನ್ನ ಇದ್ದಂತೆ ಫೋಟೋಗ್ರಫಿಯ ಹಾಗೆ” ಚಿತ್ರಿಸುವ ವಿಧಾನ ನಮ್ಮಲ್ಲಿ ಇತ್ತು. ಅದನ್ನು ಮುರಿದು ರವೀಂದ್ರನಾಥ್ ಟಾಗೋರ್, ನಂದಲಾಲ್ ಬೋಸ್, ಜೆಮಿನಿ ರಾಯ್, ಅಮೃತಾ ಷೇರ್ಗಿಲ್ ಅಂತಹ ಕಲಾವಿದರು ಹೊಸ ವಿಧದ ಆರ್ಟ್ ಅನ್ನು ಕೋಲ್ಕತಾದಲ್ಲಿ (ಬೆಂಗಾಲ್ ಸ್ಕೂಲ್ ಆಫ್ ಆರ್ಟ್) ಆರಂಭಿಸಿದರು. ಇದು ಭಾರತದ ಮಟ್ಟಿಗೆ ಮೊದಲ ’ಮಾಡರ್ನ್ ಆರ್ಟ್’. ಸ್ವಾತಂತ್ರ್ಯದ ನಂತರ, 1947ರಲ್ಲಿ ಪ್ರೋಗ್ರೆಸಿವ್ ಆರ್ಟ್ ಗ್ರೂಪ್ ಹೆಸರಿನಲ್ಲಿ ಮುಂಬಯಿಯಲ್ಲಿ ಎಸ್. ಎಚ್. ರಝಾ, ಎಂ. ಎಫ್. ಹುಸೇನ್, ಏಫ್. ಎನ್. ಸೋಜಾ, ಕೆ. ಎಚ್. ಆರಾ, ಎಚ್. ಎ. ಗಾಢೆ, ಎಸ್. ಕೆ. ಬಾಕ್ರೆ ಮೊದಲಾದವರು ಆರಂಭಿಸಿದ ಚಳುವಳಿ ಬೆಂಗಾಳದ ಮಾದರಿಯನ್ನು ಮುರಿದು ಯುರೋಪಿಯನ್ ಮಾದರಿಯ ಪ್ರಯೋಗಗಳನ್ನು ಆರಂಭಿಸಿತು. ಇದು ಬಹಳ ಸರಳವಾಗಿ ಭಾರತದ ಕಲಾ ಚರಿತ್ರೆ.

ಭಾರತದಲ್ಲಿ ಈ ಪ್ರೋಗ್ರೆಸಿವ್ ಚಳುವಳಿ ಆರಂಭ ಆದ ಮೇಲೆ, ಈ ಯುರೋಪಿಯನ್ ಮಾದರಿಯ ಅನುಕರಣೆ ಹಿಂದೆ-ಮುಂದೆ ಗೊತ್ತುಗುರಿಯಿಲ್ಲದೆ ನಡೆಯುತ್ತಾ ಬಂದಿದೆ. ಆ ಕಾರಣದಿಂದಾಗಿ, ಮತ್ತು ಆ ಅನುಕರಣೆಯನ್ನೂ ಹಳೆಯ ಯುರೋಪಿಯನ್ ಮಾದರಿಗಳ ಕಟ್ – ಕಾಪಿ – ಪೇಸ್ಟ್ ಸ್ವರೂಪದಲ್ಲಿ ಮಾಡಿದ್ದರಿಂದಾಗಿ ಭಾರತದಲ್ಲಿ “ಮಾಡರ್ನ್ ಆರ್ಟ್” ಅಂದರೆ “ಯಾರಿಗೂ ಅರ್ಥ ಆಗದ್ದು” ಎಂಬ ಸರಳೀಕರಣ ಬಂದುಬಿಟ್ಟಿತು. ಈ ಅನುಕರಣೆಯನ್ನು ದಾಟುವ, ಆಧುನಿಕ ಕಲೆಯಲ್ಲಿ ಭಾರತದ ಸ್ವಂತದ್ದೇನು ಎಂಬುದನ್ನು ಹುಡುಕುವ ಬೆರಳೆಣಿಕೆಯ ಪ್ರಯತ್ನಗಳು ಏಕಾಕಿ ಪ್ರಯತ್ನಗಳಾಗಿಯೇ ಉಳಿದುಬಿಟ್ಟವು. ಇದು, ಭಾರತದ ಸಂದರ್ಭದಲ್ಲಿ ಸಮಕಾಲೀನ ಕಲೆ (ಇತ್ತೀಚಿನ ಕಲೆ) ದೊಡ್ಡದೊಂದು ಗ್ಯಾಪ್ ಉಳಿಸಿಕೊಳ್ಳಲು ಮೂಲ ಕಾರಣ. ಜಾಗತಿಕವಾಗಿ ಸಮಕಾಲೀನ ಕಲೆಯು ಕ್ಲಾಸಿಕಲ್ ಶಿಲ್ಪಗಳು-ಪೇಂಟಿಂಗ್ ಗಳ ಜೊತೆಗೆ ಇನ್ಸ್ಟಾಲೇಷನ್, ವೀಡಿಯೊ ಆರ್ಟ್, ಪರ್ಫಾರ್ಮೆನ್ಸ್ ಆರ್ಟ್, ಸೈಟ್ ಸ್ಪೆಸಿಫಿಕ್ ಆರ್ಟ್, ಕಾನ್ಸೆಪ್ಚುವಲ್ ಆರ್ಟ್, ಮಿನಿಮಲ್ ಆರ್ಟ್, ಪಬ್ಲಿಕ್ ಆರ್ಟ್, ಲ್ಯಾಂಡ್ ಆರ್ಟ್, ಟೈಮ್ ಬೇಸ್ಡ್ ಆರ್ಟ್ ಎಂದೆಲ್ಲ ಹತ್ತಾರು ಕವಲೊಡೆದಿವೆ.

ಈ ಅಂಕಣದಲ್ಲಿ ಪ್ರತೀಹದಿನೈದು ದಿನಕ್ಕೆ ಒಮ್ಮೆ, 1950ರಿಂದ ಈಚೆಗೆ ಈವತ್ತಿನ ತನಕದ ಪ್ರಮುಖ ಕಲಾವಿದರೆಂದು ಕಲಾಜಗತ್ತು ಗುರುತಿಸಿರುವ ನೂರು ಮಂದಿ ಕಲಾವಿದರು, ಅವರ ಕಲೆ ಮತ್ತು ಚಾರಿತ್ರಿಕವಾಗಿ ಅವರು ಕಲಾಜಗತ್ತಿನಲ್ಲಿ ಪಡೆದಿರುವ ಜಾಗದ ಕುರಿತು ವಿವರಗಳನ್ನು ಒದಗಿಸಲಾಗುತ್ತದೆ.

[ಅಂಕಣಕಾರನ ಮಾತು: ’ಬುಕ್ ಬ್ರಹ್ಮ’ ಕಡೆಯಿಂದ ಕನ್ನಡ, ಸಂಸ್ಕೃತಿ, ಸಾಹಿತ್ಯ ಅಥವಾ ಕಲೆಯ ಬಗ್ಗೆ ಅಂಕಣ ಬರೆಯಬಹುದೆ ಎಂಬ ಕೋರಿಕೆ ಬಂದಾಗ, ತಕ್ಷಣಕ್ಕೆ ನಾನು ಆಯ್ಕೆ ಮಾಡಿಕೊಂಡದ್ದು ಕಲೆಯನ್ನು. ಇದಕ್ಕೆ ಎರಡು ಕಾರಣಗಳಿವೆ.

ಮೊದಲನೆಯದು, ಕನ್ನಡದಲ್ಲಿ ಕಲೆ-ಕಲೆಯ ವಿಮರ್ಶೆ/ಚರಿತ್ರೆಗಳ ಬಗ್ಗೆ ಬರಹಗಳಿರುವುದು ತೀರಾ ಕಡಿಮೆ; ಶಬ್ದಸಂಪತ್ತೂ ಕಡಿಮೆ. ಹಾಗಾಗಿ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದಲೂ ಆ ಬಗ್ಗೆ ಮನೆಯಲ್ಲೇ ಒತ್ತಾಸೆ ಇದ್ದರೂ, ನಾನು ಆ ಸಾಹಸಕ್ಕಿಳಿದಿರಲಿಲ್ಲ. ಯಾಕೆಂದರೆ, ಅದು ಬಹಳ ಓದು ಬೇಡುವ ಕ್ಷೇತ್ರ. ಈಗ ಅಯಾಚಿತವಾಗಿ ಒಂದು ಅವಕಾಶ ದೊರೆತಾಗ, ಆ ಅವಕಾಶವನ್ನು ಬಳಸಿಕೊಂಡರೆ ಕಲೆಯ ಕುರಿತಾದ ನನ್ನ ಓದನ್ನು ಸ್ವಲ್ಪ ವ್ಯವಸ್ಥಿತಗೊಳಿಸಿಕೊಳ್ಳಬಹುದೆಂಬುದು ನನ್ನ ಹುನ್ನಾರ.

ಎರಡನೆಯದಾಗಿ, ಮನೆಯೊಳಗೆ ದೇಶದ ಪ್ರಮುಖ ಸಮಕಾಲೀನ ಕಲಾವಿದರೊಬ್ಬರನ್ನು ಹೊಂದಿರುವ ಲಕ್ಸುರಿ. ಈ ಕಾರಣದಿಂದಾಗಿ, ಸಮಕಾಲೀನ ಕಲೆಯ ಕುರಿತಾದ ಹಲವು ಬರಹಗಳ ಓದು, ಚರ್ಚೆ, ವಿಮರ್ಶೆಗಳು ನಿರಂತರವಾಗಿ ಸಾಧ್ಯವಾಗುತ್ತಿದ್ದವು. ಅವುಗಳಿಗೆ ಒಂದು ಮೂರ್ತರೂಪ ನೀಡುವುದಕ್ಕೂ ಮತ್ತು ಚರ್ಚೆಯ ಹರವನ್ನು ವಿಸ್ತರಿಸಿಕೊಳ್ಳುವುದಕ್ಕೂ ಇದೊಂದು ಅವಕಾಶ ಅನ್ನಿಸಿತು.

ಸಮಕಾಲೀನ ಸಂಗತಿಗಳನ್ನು ಚರಿತ್ರೆಯಾಗಿ ದಾಖಲಿಸುವುದು ಸವಾಲಿನ ಕೆಲಸ. ಏಕೆಂದರೆ ಹೀಗೆ ಬರೆಯುವ ಹೊತ್ತಿನಲ್ಲೂ ಚರಿತ್ರೆ ನಿರ್ಮಾಣ ಆಗುತ್ತಿರುತ್ತದೆ. ಅರ್ಥಾತ್, ಈ ಅಂಕಣದಲ್ಲಿ ಮೂಡಿ ಬರಲಿರುವ ನೂರು ಮಂದಿ ಸಮಕಾಲೀನ ಕಲಾವಿದರಲ್ಲಿ ಬಹುತೇಕ ಮಂದಿ ಈಗಲೂ ಕಲಾ ವ್ಯವಸಾಯ ನಿರತರು. ಕೆಲವೇ ಕೆಲವು ಮಂದಿ ಇಂದು ನಮ್ಮೊಂದಿಗೆ ಇಲ್ಲದವರು; ಆದರೆ ಸಮಕಾಲೀನ ಕಲಾ ಚರಿತ್ರೆಯಲ್ಲಿ ಈಗಾಗಲೇ ಮಹತ್ವದ ಸ್ಥಾನ ಪಡೆದವರು. ಹಾಗಾಗಿ, ಕಲಾವಿದರ ಕುರಿತು ಚರಿತ್ರೆಯ ಶರಾ ಬರೆಯುವ ಬದಲು ಕಲಾವಿದರ ವ್ಯಾವಸಾಯಿಕ ಹಿನ್ನೆಲೆ, ಅವರ ಕೃತಿಗಳು ಮತ್ತು ಕಲಾಚರಿತ್ರೆಯಲ್ಲಿ ಅವರ ವ್ಯವಸಾಯ ಪಡೆಯಬಹುದಾದ ಸ್ಥಾನ… ಇವನ್ನು ಪರಿಚಯಿಸುತ್ತಾ ಹೋದಾಗ, ಸ್ಥೂಲವಾಗಿ ಸಮಕಾಲೀನ ಕಲಾ ಚರಿತ್ರೆಯ ಮೇಲೆ ಓದುಗರಿಗೂ ಹಿಡಿತ ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಈ ಅಂಕಣ ಆರಂಭಿಸುತ್ತಿದ್ದೇನೆ.

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...