ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ


ಕನ್ನಡ ಪುಸ್ತಕಲೋಕದ ಚಿರಕೃತಿಗಳ ಬಗೆಗಿನ ತಮ್ಮ ಓದು-ಅಭಿಪ್ರಾಯಗಳನ್ನು ವಿಮರ್ಶಕ-ಲೇಖಕ ಶ್ರೀಧರ ಹೆಗಡೆ ಭದ್ರನ್‌ ಅವರು ’ಬದುಕಿನ ಬುತ್ತಿ’ ಸರಣಿಯಲ್ಲಿ ದಾಖಲಿಸಲಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಅಸ್ತಿತ್ವ ಉಳಿಸಿಕೊಂಡಿರುವ ಜೊತೆಗೆ ಜನಪ್ರೀತಿಯನ್ನೂ ಗಳಿಸಿರುವ ಪುಸ್ತಕಗಳ ಬಗ್ಗೆ ಬರೆಯಲಿದ್ದಾರೆ. ಈ ಬಾರಿಯ ಅಂಕಣದಲ್ಲಿ ಡಿ.ವಿ. ಗುಂಡಪ್ಪನವರ ಜನಪ್ರಿಯ ಕೃತಿ ಮಂಕುತಿಮ್ಮನ ಕಗ್ಗದ ಬಗ್ಗೆ ಬರೆದಿದ್ದಾರೆ.

ಡಿ.ವಿ.ಜಿ. ಎಂಬ ಮೂರಕ್ಷರದಿಂದ ಆಧುನಿಕ ಕನ್ನಡ ಸಾಹಿತ್ಯವನ್ನು ಹಲವು ಮುಖಗಳಲ್ಲಿ ಶ್ರೀಮಂತಗೊಳಿಸಿದವರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (1887-1975). ಅವರ ‘ಮಂಕುತಿಮ್ಮನ ಕಗ್ಗ’ ಹೊಸಗನ್ನಡದ ಚಿರಕೃತಿಗಳಲ್ಲೊಂದಾಗಿ ಜನಜನಿತವಾಗಿದೆ. “ಕನ್ನಡದ ಭಗವದ್ಗೀತೆ” ಎಂದು ಕೃತಿ ಪ್ರಸಿದ್ಧವಾಗಿದ್ದರೆ; ಆಧುನಿಕ ಸರ್ವಜ್ಞ; ತಿರುವಳ್ಳುವರ್; ವೇಮನ ಎಂಬ ಅಭಿದಾನವನ್ನು ಡಿವಿಜಿಯವರಿಗೆ ಕಗ್ಗ ತಂದುಕೊಟ್ಟಿದೆ. 1943ರಲ್ಲಿ ಎರಡನೆಯ ಮಹಾಯುದ್ಧದ ಕಾಲಕ್ಕೆ ಕರ್ನಾಟಕ ಪ್ರಕಟಣಾಲಯದಿಂದ ಮೊದಲ ಬಾರಿಗೆ ಪ್ರಕಟವಾದ ಮಂಕುತಿಮ್ಮನ ಕಗ್ಗ ಇದುವರೆಗೆ ಮೂವತ್ತಕ್ಕೂ ಹೆಚ್ಚು ಮುದ್ರಣವನ್ನು ಕಂಡಿದೆ. ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. ಬಹುಕಾಲ ಮೈಸೂರಿನ ಕಾವ್ಯಾಲಯ ಪ್ರಕಾಶಕರು ಪ್ರಕಟಿಸುತ್ತಿದ್ದ ಕಗ್ಗವನ್ನು ಇತ್ತೀಚೆಗೆ ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಮರುಮುದ್ರಿಸಿದೆ.

ಕಗ್ಗದಲ್ಲಿ ಚೌಪದಿಯ ಒಂಬೈನೂರ ನಲವತ್ತೈದು ಪದ್ಯಗಳಿವೆ. ಅವುಗಳನ್ನು ಪ್ರತಿ ಪುಟದ ಐದು ಪದ್ಯಗಳಿಗೆ ಒಂದರಂತೆ ವಿವಿಧ ವಿಭಾಗಗಳಡಿ ಹಂಚಲಾಗಿದೆ. ಪ್ರತಿಯೊಂದು ಪದ್ಯವೂ ಒಂದು ಮಿಂಚನ್ನು ಹೊಳೆಯಿಸುತ್ತದೆ. ಆದರೆ ಅದು ಮೂಡಿ ಮರೆಯಾಗುವ ಮಿಂಚಲ್ಲ. ಓದುಗರ ಮನಸ್ಸಿನಲ್ಲಿ ನೆಲೆ ನಿಲ್ಲುವಂಥ, ಆಲೋಚನೆಗೆ ಪ್ರೇರಿಸುವಂಥ ಕಾವ್ಯ ಮಿಂಚು. ವಿ. ಸೀ.ಯವರು ಹೇಳಿರುವಂತೆ; “ಆಲೋಚನೆ ಮಾಡುವ ಜನರಿಗೆ; ಜೀವನ ಕ್ಲೇಶಗಳು ಹೇಗೆ ಒದಗುತ್ತವೆ; ಸುಖದಲ್ಲಿ ದುಃಖದಲ್ಲಿ ಜನ ಹೇಗೆ ನಡೆದುಕೊಂಡರೆ ಮೇಲು; ಮನುಷ್ಯನ ಮನಸ್ಸು ಮತ್ತು ನಿಲುವು ಹೇಗೆ ಹದಗೊಂಡರೆ ಒಳಿತು? ಸಾರ ಸತ್ತ್ವ ಯಾವುದು? ಎಂಬುದನ್ನೆಲ್ಲಾ ಬಹು ಸೊಗಸಾಗಿ ಇಲ್ಲಿನ ಪದ್ಯಗಳು ರೂಪಿಸುತ್ತವೆ. ಒಂದೊದನ್ನೇ ಬಿಡಿ ಬಿಡಿಯಾಗಿ ಓದಿ ಅದನ್ನು ಮೆಲುಕು ಹಾಕಬೇಕು”.
ಡಿವಿಜಿಯವರು ಕಗ್ಗದಲ್ಲಿ ಒಂದೆಡೆ ಹೀಗೆ ಹೇಳಿದ್ದಾರೆ:

ವಿಶದಮಾದೊಂದು ಜೀವನಧರ್ಮದರ್ಶನವ
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು
ನಿಸದವಂ ಗ್ರಂಥಾನುಭವಗಳಿಂದಾರಿಸುತ
ಹೊಸೆದನೀ ಕಗ್ಗವನು- ಮಂಕುತಿಮ್ಮ.

ಇಲ್ಲಿ ಕವಿ ಹೇಳಹೊರಟಿರುವುದು ಒಂದು ಜೀವನದರ್ಶನವನ್ನು. ಅದನ್ನು ತಮ್ಮ ವಿಶಾಲವಾದ ಓದು; ಜೀವನಾನುಭವಗಳಿಂದ ಡಿವಿಜಿ ರೂಪಿಸಿಕೊಂಡಿದ್ದಾರೆ. ಇದೇ ವಿಚಾರವನ್ನು ಅವರೇ ಇನ್ನೊಂದೆಡೆ ಹೀಗೆ ಕಟ್ಟಿಕೊಟ್ಟಿದ್ದಾರೆ; “ಓದಿ; ಚಿಂತಿಸಿ; ಪ್ರತಿಭೆಯುಳ್ಳದ್ದಾಗಿರುವ ಮನಸ್ಸಿಗೆ ಅದು ತನ್ನ ಒಳಸರಕಿನ ಭಾರವನ್ನು ಯಾವುದಾದರೊಂದು ಬಗೆಯಲ್ಲಿ ಹೊರಕ್ಕೆ ತಳ್ಳದಹೊರತು ಸಮಾಧಾನವಿರದು. ಅದನ್ನು ಸಂಪೂರ್ಣವಾಗಿ ಒಳಗೆ ತಡೆದಿಡುವುದು ಯಾರಿಗೂ ಸಾಧ್ಯವಿಲ್ಲ. ಅದು ಹರಿದು ಬರಲು ಹೊರಗಣ ಪ್ರೇರಣೆಗಳಾಗಲೀ ಶಾಸನಗಳಾಗಲೀ ಬೇಕಿಲ್ಲ. ಹೀಗೆ ನೈಜವಾಗಿ ಕರ್ತೃವಿನ ಅಂತರಂಗದೊಳಗಿನ ಆವೇಶದ ಫಲವಾಗಿ ಕೇವಲ ಆತನ ಹೃದಯಭಾರ ನಿವಾರಣೆಗಾಗಿ ಹೊರಟುಬಂದಿರುವುವೇ ಈ ಲೋಕದ ಮಹಾಕೃತಿಗಳು” ಮಂಕುತಿಮ್ಮನ ಕಗ್ಗದ ಹುಟ್ಟನ್ನೂ ಈ ಹಿನ್ನೆಲೆಯಲ್ಲಿಯೇ ಪರಿಭಾವಿಸಬೇಕು. ಹೀಗಾಗಿ ಡಿವಿಜಿಯವರ ಜೀವನ ಸಿದ್ಧಾಂತಗಳು ತಾತ್ವಿಕ ಮೌಲ್ಯಗಳು ಮತ್ತು ಸಾಹಿತ್ಯ ಸೌಂದರ್ಯಗಳು ಮಂಕುತಿಮ್ಮನ ಕಗ್ಗದಲ್ಲಿ ಸ್ಫುಟವಾಗಿ ಗೋಚರಿಸುತ್ತವೆ.
ತಾತ್ವಿಕವಾಗಿ ತುಂಬ ಎತ್ತರದ ಜೀವನದರ್ಶನವನ್ನು ಕಾಣಿಸುವ ಕೃತಿಯಾದ ಮಂಕುತಿಮ್ಮನ ಕಗ್ಗವನ್ನು ರಚಿಸುವಾಗ ಡಿವಿಜಿಯವರಿಗೆ ಈ ಮಹತ್ವಾಕಾಂಕ್ಷೆ ಇರಲಿಲ್ಲವೆನಿಸುತ್ತದೆ. ಕಗ್ಗದ ನಾಲ್ಕನೆಯ ಮುದ್ರಣದ ಪ್ರಸ್ತಾವನೆಯಲ್ಲಿ; “ಇದು ಪಂಡಿತರನ್ನೂ ಪ್ರಸಿದ್ಧರನ್ನೂ ಪುಷ್ಟರನ್ನೂ ಉದ್ದೇಶಿಸಿದ್ದಲ್ಲ. ಬಹು ಸಾಮಾನ್ಯರಾದವರ ಮನೆಯ ಬೆಳಕಿಗೆ ಒಂದು ತೊಟ್ಟು ಎಣ್ಣೆಯಂತಾದರೆ ನನಗೆ ತೃಪ್ತಿ” ಎಂದಿದ್ದಾರೆ. ಜೊತೆಗೆ ಅವರು ಕಗ್ಗದಲ್ಲೇ ಹೇಳಿರುವಂತೆ; ತಮ್ಮ ಸಿದ್ಧಾಂತವೇ ಅಂತಿಮ ಎಂಬ ಭ್ರಮೆ ಅವರಿಗಿಲ್ಲ:

ಇದನ್ನು ಓದಿ: ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'

ಸಂದೇಹವೀ ಕೃತಿಯೊಳಿನ್ನಿಲ್ಲವೆಲ್ಲಂದಲ್ಲ
ಇಂದು ನಂಬಿಹುದೆ ಮುಂದುಮೆಂದಲ್ಲ
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು
ಇಂದಿಗೀ ಮತವುಚಿತ –ಮಂಕುತಿಮ್ಮ.

ಕಗ್ಗ ತೋರಿಸಿರುವ ಜೀವನ ಮಾರ್ಗ ಸಾರ್ಥಕ್ಯದ ದಾರಿಯಾಗಿ ತೆರೆದುಕೊಂಡಿರುವುದನ್ನು ಜನಸಾಮಾನ್ಯರು ಇದನ್ನು ಅಪ್ಪಿಕೊಂಡಿರುವ ರೀತಿಯಲ್ಲೇ ಗಮನಿಸಬಹುದು. ಈ ಕಗ್ಗದ ಹುಟ್ಟಿನ ಹಿನ್ನೆಲೆಯಾಗಿ ಡಿವಿಜಿ ಒಂದು ಕಥನವನ್ನು ಕಟ್ಟಿದ್ದಾರೆ. ಮೂಡಲೂರೆಂಬ ಹಳ್ಳಿಯಲ್ಲಿ ‘ಮಂಕುತಿಮ್ಮ’ನೆಂದು ಗುರುತಿಸಿಕೊಂಡಿದ್ದ ಶಿಕ್ಷಕನೊಬ್ಬನಿದ್ದನು. ಅವನು ಎಷ್ಟು ಜನಪ್ರಿಯನೆಂದರೆ;

ಹಳ್ಳಿ ಮಕ್ಕಳಿಂಗೆ ಗುರುವು ಹಳ್ಳಿಗೆಲ್ಲ ಗೆಳೆಯನು
“ಒಳ್ಳೆಹಾರುವಯ್ಯ” “ಹಸುವು” “ಹಸುಳೆ” ಎನುವರವನನು
ಮಂಕುತಿಮ್ಮನೆನುತಬ್ ಹೆಸರನವನು ಹೇಳಿಕೊಳುವನು
ಬಿಂಕು ಕೊಂಕು ಒಂದು ಅರಿಯದಿದ್ದ ಸಾಧುವಾತನು.

ಅವನ ತಾಯಿ ಅರ್ಧ ಕುರುಡಿ. ತಂಗಿಗೆ ಮದುವೆಯಾಗಿತ್ತು. ಅವಳ ಮನೆಯಲ್ಲೇ ತಾಯಿಯೊಡನೆ ಇವನ ವಾಸ. ಇವನು ಬ್ರಹ್ಮಚಾರಿ. ತಿಮ್ಮಗುರುವಿನ ತಂಗಿಗೊಬ್ಬ ಮಗನಿದ್ದಾನೆ. ಅವನೆಂದರೆ ತಿಮ್ಮನಿಗೆ ಜೀವ. ಅವನೆ ಲೋಕವೆಲ್ಲವು;

ಸೋಮಿಯಿವನು; ಮಾವನಿವನನೆತ್ತಿ ನಡೆಸಿ ಲಾಲಿಸಿ
ಪ್ರೇಮದಂಗಿ ತೊಡಿಸಿ ಪದ್ಯ ಕಲಿಸಿ ಬರಹ ತಿದ್ದಿಸಿ
ನೋಡಿ ಮುಂಜಿಯಾದುದನ್ನು ಕೇಳಿ ವಿದ್ಯೆ ಪೆಂಪನು
ಷೋಡಶಾಬ್ದದುತ್ಸವವನು ಮಾಡಿ ಮಾವ ನಲಿದನು

ಹೀಗಿರುವಾಗ ಕೆಲವೇ ದಿನಗಳಲ್ಲಿ ತಿಮ್ಮನ ತಾಯಿ ತೀರಿಕೊಂಡಳು. ಮುಂದಿನ ವಿದ್ಯಾಭ್ಯಾಸಕ್ಕೆ ಸೋಮಿ ಮೈಲಾರಕೆ ತೆರಳಿದನು. ಮತ್ತೆ ಐದು ವಾರಗಳಲ್ಲಿ ತಿಮ್ಮ ಗುರುವಿಗೂ ವರ್ಗವಾಯಿತು. ‘ಮೂಡಲೂರಿನಿಂದಲವನು ಮಂಡುಗೆರೆಯ ಸೇರ್ದನು’. ಹೀಗೆ ಹಲವು ತಿಂಗಳು ಕಳೆದ ಬಳಿಕ ಒಮ್ಮೆ ತಿಮ್ಮ ಗುರು ಸೋಮಿಯನ್ನು ಮೈಲಾರಕ್ಕೆ ಹೋಗಿ ಭೇಟಿಯಾಗಿ ಸಂತಸ ಪಡುತ್ತಾನೆ. ಇದಾದ ಒಂದು ತಿಂಗಳಿಗೆ ಸೋಮಿಯ ತಂದೆಗೆ ತಿಮ್ಮ ಗುರುವಿನಿಂದ ಒಂದು ಪತ್ರ ಬರುತ್ತದೆ. ಅದರಲ್ಲಿ ನನ್ನ ಲೌಕಿಕದ ಋಣ ತೀರಿದೆ. ತಿರುಪತಿಗೆ ಬಂದಿದ್ದೇನೆ. ಇಷ್ಟು ದಿನ ಅಳಿಯನ ಬಂಧನವಿತ್ತು. ಈಗ ಅವನು ತನ್ನ ಶಕ್ತಿಯಿಂದ ಬೆಳೆಯಲು ತಕ್ಕವನು. ಎಂದೆಲ್ಲಾ ಬರೆದು ಕೊನೆಯಲ್ಲಿ ಒಂದು ಸಂದೇಶವನ್ನು ತಿಮ್ಮ ಗುರು ನೀಡಿದ್ದ;

ನಾನು ಮಂಡುಗೆರೆಯೊಳಿದ್ದ ಮನೆಯೊಳೊಂದು ಗೂಡಿನೊಳ್
ಏನೊ ಬರೆದ ಕಡತವೊಂದನಿರಿಸಿರುವೆನು ಗಂಟಿನೊಳ್
ಸೋಮಿಯದನು ನೋಡಿ ತೆಗೆದುಕೊಳುವೊಡಂತು ಮಾಡಲಿ;

ಇಲ್ಲಿಗೆ ತಿಮ್ಮ ಗುರುವಿನ ಕಥೆ ಮುಗಿಯುತ್ತದೆ. ಅವನ ಅಕ್ಕ-ಭಾವ ಎಲ್ಲರೂ ತುಂಬಾ ದುಃಖಿಸುತ್ತಾರೆ. ಪತ್ರದಲ್ಲಿ ಬರೆದಿದ್ದ ಸಂದೇಶವನ್ನು ನೋಡಿ ಸೋಮಿ ಮಂಡುಗೆರೆಗೆ ಹೋಗುತ್ತಾನೆ;

ಮಂಡುಗೆರೆಗೆ ಸೋಮಿ ಹೋಗಿ ನೋಡಿದನಾ ಕಡತವ;
ಕಂಡನದರೊಳಿನಿತು ಬಾಳ್ಗೆ ಸಲುವ ತತ್ತ್ವ ಮಥಿತವ.
ಸಖರ ತೃಪ್ತಿಗೆಂದು ಸೋಮಿಯಾಯ್ದ್ದು ಹಲವು ಬಂತಿಯ
ಲಿಖಿಸಿದ ಪಡಿಹೊತ್ತಗೆಯಿದು ಮಂಕುತಿಮ್ಮ ಕಂತೆಯ.

ಹೀಗೆ ‘ಸೋಮಿ’ ಮಂಕುತಿಮ್ಮ ಗುರುವಿನ ಕಡತದಿಂದ ಆಯ್ದುಕೊಟ್ಟಿರುವುದು; ಮಂಕುತಿಮ್ಮನ ಕಗ್ಗ. ಹೀಗಾಗಿ ಮೊದಲ ಮುದ್ರಣದಲ್ಲಿ ಕೃತಿಯ ಸಂಪಾದಕ ಡಿ. ವಿ. ಜಿ. ಎಂದಿತ್ತು. ಮುಂದೆ ಮಿತ್ರರ ಒತ್ತಾಯಕ್ಕೆ ಮಣಿದು ಡಿವಿಜಿ ತಮ್ಮ ಹೆಸರಿನಲ್ಲೇ ಅದನ್ನು ಪ್ರಕಟಿಸಿದರು. ಇಲ್ಲಿಯ ತಿಮ್ಮ ಗುರುವಿನ ಕಥೆ ಕಗ್ಗದ ಪ್ರವೇಶಕ್ಕೆ ಅರ್ಥಪೂರ್ಣ ಪೀಠಿಕೆಯಾಗಿದೆ. ಈ ‘ತಿಮ್ಮ’ ಯಾವುದೋ ಒಂದು ಜಾತಿಯವರು ಮಾತ್ರ ಇಟ್ಟುಕೊಳ್ಳುವ ಹೆಸರೆಂದೂ ಡಿವಿಜಿಯವರು ಅವರನ್ನು ಅವಹೇಳನ ಮಾಡಿದ್ದಾರೆಂಬ ಆರೋಪವೂ ಕೇಳಿಬಂದಿತ್ತು. ಇಲ್ಲಿಯ ಮಂಕು - ತಿಮ್ಮ - ಕಗ್ಗ ಮೂರೂ ಪದಗಳೂ ಸಾಕಷ್ಟು ಚರ್ಚೆಗೆ ಗುರಿಯಾಗಿವೆ. ಕುಲುಮೆಯಲ್ಲಿ ಕಾದು, ಅಗ್ನಿಯಲ್ಲಿ ಹಾದು ಪಾರಾಗಿ ಬಂದಿವೆ. ಡಿವಿಜಿಯವರೇ ಕಗ್ಗದಲ್ಲಿ ಹೇಳಿದ್ದಾರೆ;

ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ
ವೆಂಕಣಿಗೊ ಕಂಕನಿಗೊ ಶಂಕರಾಚಾರ್ಯನಿಗೋ
ಅಂಕಿತವ ಮಾಳ್ಕೆ ಜನರೋದಿದರೆ ಸಾಕು
ಶಂಕೆ ನಿನಗೇನಿಹುದೊ- ಮಂಕುತಿಮ್ಮ.

ಇದನ್ನು ಓದಿ: ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

ಮಂಕುತಿಮ್ಮನ ಕಗ್ಗ ಆರಂಭದಲ್ಲಿ ನೂರಾರು ಪ್ರಶ್ನೆಗಳಿಂದ ಕೂಡಿದ ಒಂದು ಮಾಲಿಕೆಯನ್ನೇ ಹೆಣೆದಿದೆ. ಆದಿಮ ಕಾಲದಿಂದ ಮನುಷ್ಯನ ಬುದ್ಧಿಯನ್ನು ಕಾಡುತ್ತಿರುವ, ಹೃದಯವನ್ನು ಬಾಧಿಸುತ್ತಿರುವ ಪ್ರಶ್ನೆಗಳ ಕೋಶವಿಲ್ಲಿದೆ. ಕುತೂಹಲಕ್ಕೆ ಅಂತಹ

ಕೆಲವು ಪ್ರಶ್ನೆಗಳನ್ನು ಗಮನಿಸಬಹುದು;
ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? ಮಂಕುತಿಮ್ಮ.

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು?
ಬಗೆದು ಬಿಡಿಸುವರಾರು ಸೋಜಿಗವನಿದನು?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು
ಬಗೆಬಗೆಯ ಜೀವಗತಿ? ಮಂಕುತಿಮ್ಮ.

ಹೀಗೆ ಆಸ್ತಿಕ ಮನಸ್ಸು ಕಾಲಾಂತರದಿಂದ ಬಗೆ ಬಗೆಯಾಗಿ ಕೇಳಿಕೊಂಡಿರಬಹುದಾದ ಪ್ರಶ್ನೆಗಳನ್ನು ಇಲ್ಲಿ ಒತ್ತಟ್ಟಿಗೆ ಡಿವಿಜಿ ಮಂಡಿಸಿದ್ದಾರೆ. ಅಧ್ಯಾತ್ಮ-ವಿಜ್ಞಾನಗಳ ಮೂಲಕ ನಾವು ಪಡೆದಿರುವ ತಿಳುವಳಿಕೆ ಸ್ಪಷ್ಟವೇನು? ಅಂತಿಮ ರಹಸ್ಯವನ್ನು ನಾವು ಅರಿತಿದ್ದೇವೇನು? ಎಂದರೆ;

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವಿಲ್ಲಿ
ಎಲ್ಲಿ ಪರಿಪೂರಣವೊ ಅದನರಿಯುವನಕ
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ?
ಎಲ್ಲ ಬಾಳು ರಹಸ್ಯ-ಮಂಕುತಿಮ್ಮ.

ಯಾವುದೋ ಮಾರ್ಗದಿಂದ ಸಿದ್ಧಾಂತದಿಂದ ನಾವು ಗಮ್ಯವನ್ನು ತಲುಪುತ್ತೇವೆ ಎಂಬ ನಂಬಿಕೆ ಹುಸಿಯಾದುದು. ಅಥವಾ ತಾವು ತಿಳಿದಿರುವುದೇ ಅಂತಿಮ ಸತ್ಯ ಎಂಬ ವಾಗ್ವಾದ ಹುರುಳಿಲ್ಲದ್ದು. ಆದರೆ ಇದನ್ನು ಮರೆತು ವಾದ ಮಾಡುವವರನ್ನು

ಡಿವಿಜಿಯವರು ಹೀಗೆ ಗುರುತಿಸುತ್ತಾರೆ;
ತತ್ತ್ವಯುಕ್ತಿಗಳಿಂದ ತತ್ತ್ವಾರ್ಥವರಸುವರು
ಎತ್ತುಗಳ ಹಿಡಿದು ಹಾಲ್ಕರೆಯ ಹೊರಟವರು.

ಇಂತಹ ಸ್ಥಿತಿಯಲ್ಲಿ ನಮ್ಮ ಬಹುಪಾಲು ಜಗತ್ತು ಮುಳುಗಿದೆಯೆಂಬ ಗ್ರಹಿಕೆಯನ್ನು ಇಲ್ಲಿ ಕಾಣುತ್ತೇವೆ. ಮಂಕುತಿಮ್ಮನ ಕಗ್ಗವನ್ನು ಕಾವ್ಯದ ಓದಿನಂತೆ ಒಂದೇ ಉಸಿರಿಗೆ ಓದಬೇಕಾಗಿಲ್ಲ. ಯಾವುದಾದರೂ ಪುಟ ತೆರೆದು ಒಂದು ಅಥವಾ ಹಲವು ಪದ್ಯಗಳನ್ನು ಓದಿ ಚಿಂತನೆ ಮಾಡಬೇಕು. ಎಲ್ಲ ಪದ್ಯಗಳೂ ಎಲ್ಲರಿಗೂ ರುಚಿಸಲಿಕ್ಕಿಲ್ಲ. ಅವರವರ ಅಭಿರುಚಿಗೆ ಅನುಗುಣವಾಗಿ ಇಲ್ಲಿಯ ಪದ್ಯಗಳು ತಮ್ಮ ಸ್ವಾರಸ್ಯವನ್ನು ಬಿಟ್ಟುಕೊಡುತ್ತವೆ. ಇಲ್ಲಿನ ಶಬ್ದಾಕ್ಷರಗಳು ಭಾವ ಸ್ಫುರಣೆಗೆ ಚಿಂತನೆಗೆ ಪ್ರಚೋದಕವಾಗಿವೆ. ಮನನದಿಂದ ತಾತ್ವಿಕತೆ ಸಂವಹನವಾಗಬೇಕೆಂಬುದು ಕವಿಯ ಆಶಯವೂ ಆಗಿದೆ. ಡಿವಿಜಿಯವರ ದಾರ್ಶನಿಕ ಮನೋಭಾವದ ಶುದ್ಧ ಜೀವನದ ಆಳವಾದ ಚಿಂತನೆ ಮತ್ತು ಅನುಭವಗಳ ಬೆಳಕಿನಲ್ಲಿ ಅರಳಿಕೊಂಡಿರುವ ಕಗ್ಗದ ಚೌಪದಿಗಳು ಓದುಗನನ್ನು ಚಿಂತನೆಗೆ ತೊಡಗಿಸುತ್ತವೆ.

ಮಂಕುತಿಮ್ಮನ ಕಗ್ಗದ ಪದ್ಯಗಳ ವ್ಯಾಪ್ತಿ ವಿಶಾಲವಾದುದು. ಪ್ರತಿಮೆಗಳ ಬಳಕೆ ಅನಂತವಾದುದು. ಖಗೋಲದಿಂದ ಬಾಲPರ ಕಣ್ಣಾಮುಚ್ಚಾಲೆಯವರೆಗೆ; ವಿಜ್ಞಾನ ತತ್ತ್ವಶಾಸ್ತ್ರಗಳಿಂದ ಪುರಾಣ ಇತಿಹಾಸಗಳವರೆಗೆ ಹಬ್ಬಿಕೊಂಡಿರುವ ಕಗ್ಗದ ಬೇರುಗಳನ್ನು ಕಾಣುತ್ತೇವೆ. ಇವೆಲ್ಲವುಗಳನ್ನು ನಿತ್ಯ ಜೀವನದೊಂದಿಗೆ ಬೆಸೆದಿರುವ ಏಕಸೂತ್ರತೆ ಕೃತಿಯನ್ನು ಪ್ರಸ್ತುತಗೊಳಿಸುತ್ತದೆ. ಹೀಗಾಗಿ ಅನೇಕರು ಪಾರಾಯಣ ಗ್ರಂಥವಾಗಿಯೂ ಇದನ್ನು ಸ್ವೀಕರಿಸಿದ್ದಾರೆ.
ಮಂಕುತಿಮ್ಮನ ಕಗ್ಗ ನೀತಿಪರ ಕಾವ್ಯ ವರ್ಗಕ್ಕೆ ಸೇರುವ ಕೃತಿ. ಮುಕ್ತಕ -ಸುಭಾಷಿತಗಳ ಮಾದರಿಯದು. ನೀತಿಪರ ಕಾವ್ಯ ಯಾವಾಗಲೂ ಅತ್ಯುತ್ತಮ ಕಾವ್ಯವಾಗಲಾರದು. ಯಾಕೆಂದರೆ ಕಾವ್ಯ ಅನುಭವಗಳ ಅಭಿವ್ಯಕ್ತಿಯಾದರೆ ಇಲ್ಲಿ ಅನುಭವ ಹಿನ್ನೆಲೆಗೆ ಸರಿದು ಅದರ ಫಲಿತಾಂಶ ಮಾತ್ರ ಪ್ರಕಟಗೊಳ್ಳುತ್ತದೆ. ಇದು ಅನುಭವದಿಂದ ಒಡಮೂಡಿದ ತತ್ವವನ್ನು ಮಂಡಿಸುತ್ತದೆಯೇ ಹೊರತು ಸಂಕೀರ್ಣವಾದ ಅನುಭವಗಳನ್ನಲ್ಲ. ಹೀಗಾಗಿ ಮಾಧುರ್ಯಕ್ಕಿಂತ ಬೆಳಕು ಇಲ್ಲಿ ಹೆಚ್ಚು ಜಾಗ ಪಡೆದಿದೆ.

************

ಹಸ್ತಕ್ಕೆ ಬರೆ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈ ಮುಗಿದೆ-ಮಂಕುತಿಮ್ಮ.

ಇದು ರಾಷ್ಟ್ರಕವಿ ಕುವೆಂಪು ಅವರು ಮಂಕುತಿಮ್ಮನ ಕಗ್ಗದ ಕುರಿತು ಮಾಡಿರುವ ವ್ಯಾಖ್ಯಾನ. ಕನ್ನಡ ಜನ ಮಾನಸ ಮಂಕುತಿಮ್ಮನ ಕಗ್ಗವನ್ನು ಇನ್ನಿಲ್ಲದಂತೆ ಪ್ರೀತಿಸಿದೆ. ಸರ್ವಜ್ಞನ ತ್ರಿಪದಿಗಳಂತೆ ಕಗ್ಗದ ಪದ್ಯಗಳೂ ಜನರ ನಾಲಿಗೆಯ ತುದಿಯಲ್ಲಿ ನಲಿಯುತ್ತವೆ. ಪ್ರವಚನಕಾರರು, ಭಾಷಣಕಾರರು ಕಗ್ಗಕ್ಕೆ ಬಹುವಾಗಿ ಋಣಿಯಾಗಿದ್ದಾರೆ. ಅನೇಕ ಮಠಾಧೀಶರು, ಸ್ವಾಮೀಜಿಗಳು ತಮ್ಮ ಸಿದ್ಧಾಂತ ಮಂಡನೆಗೆ ಕಗ್ಗವನ್ನು ಪೂರಕವಾಗಿ ಬಳಸಿಕೊಂಡಿದ್ದಾರೆ. ಕಗ್ಗದ ಪ್ರವಚನದ ಮಾಸವನ್ನು ಹಲವೆಡೆ ಆಚರಿಸುತ್ತಾರೆ. ಪೆÇ್ರ. ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಹಲವು ದಶಕಗಳ ಕಾಲ ಕಗ್ಗದ ಮೇಲೆ ಉಪನ್ಯಾಸ ನೀಡುತ್ತ ಬಂದಿದ್ದಾರೆ. ಚಿನ್ಮಯ ಮಿಷನ್ನಿನ ಸ್ವಾಮಿ ಬ್ರಹ್ಮಾನಂದರು ಇದನ್ನು ಕನ್ನಡದ ಭಗವದ್ಗೀತೆ ಎಂದೇ ಪರಿಗಣಿಸಿದ್ದಾರೆ. ಕಗ್ಗದ ಹತ್ತಾರು ವ್ಯಾಖ್ಯಾನ ಗಂಥಗಳು ಪ್ರಕಟವಾಗಿವೆ; ಮಂಕುತಿಮ್ಮನಿಗೆ ಮೌನ ನಮನ (ಮೌನೇಶ ಗಾಡದ 1988); ಮಂಕುತಿಮ್ಮನ ಕಗ್ಗ ಒಂದು ವಿವೇಚನೆ (ಸ್ವಾಮಿ ಬ್ರಹ್ಮಾನಂದ 1993); ಆಡು ಕನ್ನಡದಲ್ಲಿ ಮಂಕುತಿಮ್ಮನ ಕಗ್ಗ (ಪೆÇ್ರ. ರಂಗನಾಥ ಶಾಸ್ತ್ರೀ 1999); ಮಂಕುತಿಮ್ಮನ ಕಗ್ಗ ತಾತ್ಪರ್ಯ (ಶ್ರೀಕಾಂತ 1999); ಮಂಥನ: ಮಂಕುತಿಮ್ಮನ ಕಗ್ಗ ಸಮೀಕ್ಷೆ (ಶ್ರೀಮತಿ ಸುಶೀಲಾ ದೇಶಪಾಂಡೆ 1999); ಕಗ್ಗಕ್ಕೊಂದು ಕೈಪಿಡಿ (ಡಿ. ಆರ್. ವೆಂಕಟರಮಣನ್ 2000) ಇತ್ಯಾದಿ ಕೃತಿಗಳು ಜನಪ್ರಿಯವಾಗಿವೆ. ಜನ ಸಾಮಾನ್ಯರಿಗೂ ಮಂಕುತಿಮ್ಮನ ಕಗ್ಗದ ಮಥಿತವನ್ನು ಹತ್ತಿರವಾಗಿಸಿವೆ.

ಶತಾವಧಾನಿ ಡಾ. ಆರ್. ಗಣೇಶ್, ಡಾ. ಗುರುರಾಜ ಕರ್ಜಗಿಯವರಂಥ ವ್ಯಾಖ್ಯಾನಕಾರರು ಮಂಕುತಿಮ್ಮನ ಕಗ್ಗವನ್ನು ಸಮಕಾಲೀನ ಸಂದರ್ಭದ ಹೊಸ ಬೆಳಕಿನಲ್ಲಿ ಅರ್ಥೈಸಿದ್ದಾರೆ. ಇತ್ತೀಚೆಗಂತೂ ಅನೇಕ ಜಾಲತಾಣಗಳಲ್ಲಿ ‘ಕಗ್ಗ’ದ ಗುಂಪುಗಳಿವೆ, ಫೇಸ್ ಬುಕ್ ಪುಟಗಳಿವೆ. ಅವರು ನಿಯಮಿತವಾಗಿ ಈ ಬಗ್ಗೆ ಚರ್ಚೆ ನಡೆಸುತ್ತಾರೆ. ಕಗ್ಗದ ಪದ್ಯಗಳಿಗೆ ಸ್ವರ ಸಂಯೋಜನೆ ಮಾಡಿ ಹಲವರು ಹಾಡಿದ್ದಾರೆ; ಹಾಡುತ್ತಿದ್ದಾರೆ.
ಮಂಕುತಿಮ್ಮನ ಕಗ್ಗ ಇಂದಿಗೂ ಈ ವರ್ಗದ ಆಚಾರ್ಯ ಕೃತಿಯಾಗಿದೆ. ಇದರಿಂದ ಪ್ರೇರಿತರಾಗಿ ಹಲವು ಲೇಖಕರು ಇದೇ ಮಾದರಿಯ ಚೌಪದಿಗಳನ್ನು ರಚಿಸಿದ್ದಾರೆ. ‘ಅತ್ರಿಸೂನು’ ಎಂಬ ಅಂಕಿತದಲ್ಲಿ ಹಿರಿಯ ವಿಜ್ಞಾನ ಲೇಖಕರಾಗಿದ್ದ ಜಿ. ಟಿ. ನಾರಾಯಣರಾಯರು ಹಲವು ಪದ್ಯಗಳನ್ನು ಬರೆದಿದ್ದಾರೆ. ಕೆ. ಸಿ. ಶಿವಪ್ಪನವರ ‘ಮುದ್ದುರಾಮ’ನಂತೂ ಅತ್ಯಂತ ಜನಪ್ರಿಯ. ಸುಮಾರು ನಾಲ್ಕು ಸಾವಿರ ಚೌಪದಿಗಳನ್ನು ಅವರು ನಾಲ್ಕು ಸಂಪುಟಗಳಲ್ಲಿ ನೀಡಿದ್ದಾರೆ. ಕವಿ ಶಿವಪ್ಪನವರೇ ಹೇಳಿಕೊಂಡಿರುವಂತೆ;

ದಾರಿ ತೋರಿತು ನನಗೆ ಮಂಕುತಿಮ್ಮನ ನೆನಪು
ಈ ಮನಸು ಮುಗ್ಗರಿಸಿ ಒಂಟಿ ನಿಂತಾಗ
‘ಮೌನದೊಳಮನೆ ಶಾಂತಿ’ ಬೆಳಕ ತಂದಿತು ಆಗ
ತಿಮ್ಮ ಜೀವನ ಮಿತ್ರ-ಮುದ್ದುರಾಮ.

ಎಂದು ಮಂಕುತಿಮ್ಮನ ಕಗ್ಗದ ಪ್ರಭಾವವನ್ನು ಸ್ವೀಕೃತಿಯನ್ನು ಸ್ಪಷ್ಟಪಡಿಸಿದ್ದಾರೆ.

************

ಗೌರವಿಸು ಜೀವನವ ಗೌರವಿಸು ಚೇತನವ
ಆರದೋ ಜಗವೆಂದು ಭೇದವೆಣಿಸದಿರು
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ
ದಾರಿಯಾತ್ಮೋನ್ನತಿಗೆ-ಮಂಕುತಿಮ್ಮ

ಇದು ಡಿವಿಜಿಯವರು ಮಾನವ ಜನಾಂಗಕ್ಕೆ ನೀಡಿರುವ ಸಂದೇಶವಾಗಿದೆ. ಸೌಂದರ್ಯ ಸಾಧಕಗಳಾದ ನಮ್ಮ ಲೋಕವ್ಯಾಪಾರಗಳನ್ನು ಗೌರವಿಸಬೇಕು. ನಮ್ಮ ಸುತ್ತ ಮುತ್ತ ಇರುವ ಸೌಂದರ್ಯವನ್ನು ಗ್ರಹಿಸುವ ಕಣ್ಣು ಬೇಕು. ಜಗದ ದೈನಂದಿನ ಜಂಗಮತೆಯೊಂದಿಗೆ ನಮಗಿರುವ ಸಂಬಂಧವನ್ನು ಅರಿಯಬೇಕು. ಆ ಮೂಲಕ ಜೀವನ ಸಮೃದ್ಧಿಯನ್ನು ಪಡೆಯುವುದು ಉದ್ಧಾರದ ದಾರಿಯಾಗಬೇಕು. ಪ್ರತಿಯೊಬ್ಬ ಮನುಷ್ಯನ ಬಾಳಿಗೂ ಇರುವ ಅರ್ಥ ಗ್ರಹಿಸಬೇಕು; ಗೌರವಿಸಬೇಕು. ಭೇದವೆಣಿಸಬಾರದು ಹೀಗೆ ವಿಸ್ತರಿಸಿದಷ್ಟೂ ಹಿಗ್ಗುವ ಅರ್ಥ ಸಾಧ್ಯತೆಯನ್ನು ಹೊಂದಿರುವ ಮಂಕುತಿಮ್ಮನ ಕಗ್ಗದ ಪದ್ಯಗಳು ಸಮಕಾಲೀನ ಬದುಕಿಗೂ ಸಲ್ಲುವ ಮೌಲ್ಯವನ್ನು ಹೊಂದಿರುವುದರಿಂದಲೇ ಆಪ್ಯಾಯಮಾನವೆನಿಸುತ್ತವೆ.

MORE FEATURES

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

20-04-2024 ಬೆಂಗಳೂರು

“ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗು...

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು

20-04-2024 ಬೆಂಗಳೂರು

'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದ...

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...