ದೇಶಿ ಸಂಸ್ಕೃತಿಯ ಹಿನ್ನಲೆಯಲ್ಲಿ ಭೂತಾರಾಧನೆ ಮತ್ತು ಥೈಯಂ ನೃತ್ಯಗಳ  ಅವಲೋಕನ


"ಕನ್ನಡ ಸಿನಿಮಾಗಳ ಕುರಿತಂತೆ ಗಂಭೀರವಾದ ಆಸಕ್ತಿಯಿಲ್ಲದ ನಾನು ಅಪರೂಪಕ್ಕೆ ಆಯ್ದ ಕೆಲವು ಸಿನಿಮಾಗಳನ್ನು ನೋಡುವುದುಂಟು. ಇತ್ತೀಚೆಗೆ ಮೂರು ತಿಂಗಳ ಹಿಂದೆ ರಿಷಬ್ ಶೆಟ್ಟಿಯ ಕಾಂತಾರ ಎಂಬ ವರ್ಷದ ಹಿಂದಿನ ಸಿನಿಮಾವನ್ನು ನೋಡಿದೆ," ಎನ್ನುತ್ತಾರೆ ಲೇಖಕ ಜಗದೀಶ್ ಕೊಪ್ಪ. ಅವರು ದೇಶಿ ಸಂಸ್ಕೃತಿಯ ಹಿನ್ನಲೆಯಲ್ಲಿ ಭೂತಾರಾಧನೆ ಮತ್ತು ಥೈಯಂ ನೃತ್ಯಗಳ ಕುರಿತು ಬರೆದ ಅವಲೋಕನವಿದು..

ಇತ್ತೀಚೆಗೆ ರಿಷಬ್ ಶೆಟ್ಟಿ ಎಂಬ ದಕ್ಷಿಣ ಕನ್ನಡ ಕಿಲ್ಲೆಯ ಪ್ರತಿಭಾವಂತ ನಿರ್ದೇಶಕ ಮತ್ತು ಕಲಾವಿದನ ಕಾಂತಾರಾ-೧ ಎಂಬ ಸಿನಿಮಾ ಬಿಡುಗಡೆಯಾಗಿ ದೇಶಾದ್ಯಂತ ಹಣ ಮಾಡುವುದರೊಂದಿಗೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಕುತೂಹಲಕರ ಸಂಗತಿ ಎಂದರೆ, ದಕ್ಷಿಣ ಭಾರತದ ಕಡಲ ತೀರದ ದೇಶಿ ಸಂಸ್ಕೃತಿಯಾದ ಭೂತಾರಾಧನೆ ಕುರಿತಂತೆ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರೇಕ್ಷಕರು ರೋಮಾಂಚನಗೊಂಡಿದ್ದಾರೆ. ಅವರುಗಳಿಗೆ ನಮ್ಮ ಕರಾವಳಿಯ ದೇಶಿ ಸಂಸ್ಕೃತಿಯ ಪರಿಚವಿಲ್ಲ. ಇದರ ಜೊತೆಗೆ ಭೂತಾರಾಧನೆಯ ದೃಶ್ಯಗಳನ್ನು ಅದ್ದೂರಿಯಾಗಿ ಸೆರೆ ಹಿಡಿದಿರುವುದು ಇದಕ್ಕೆ ಪರೋಕ್ಷವಾಗಿ ಕಾರಣವಾಗಿದೆ.

ಕನ್ನಡ ಸಿನಿಮಾಗಳ ಕುರಿತಂತೆ ಗಂಭೀರವಾದ ಆಸಕ್ತಿಯಿಲ್ಲದ ನಾನು ಅಪರೂಪಕ್ಕೆ ಆಯ್ದ ಕೆಲವು ಸಿನಿಮಾಗಳನ್ನು ನೋಡುವುದುಂಟು. ಇತ್ತೀಚೆಗೆ ಮೂರು ತಿಂಗಳ ಹಿಂದೆ ರಿಷಬ್ ಶೆಟ್ಟಿಯ ಕಾಂತಾರ ಎಂಬ ವರ್ಷದ ಹಿಂದಿನ ಸಿನಿಮಾವನ್ನು ನೋಡಿದೆ. ಒಂದು ಕಥೆಯನ್ನು ಮತ್ತು ಸಿನಿಮಾದ ಸನ್ನಿವೇಶಗಳನ್ನು ರೋಮಾಂಚಕವಾಗಿ ಮತ್ತು ಅದ್ದೂರಿಯಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ರಿಷಬ್ ಶೆಟ್ಟಿ ಶ್ರಮಪಟ್ಟಿರುವುದು ಗೋಚರವಾಗುತ್ತದೆ. ಕಾಂತಾರಾ ಸಿನಿಮಾದ ಆರಂಭದ ದೃಶ್ಯಗಳನ್ನು ನೋಡಿ ನಾನು ಆಶ್ಚರ್ಯಪಟ್ಟಿದ್ದುಂಟು. ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಅತ್ಯಾಧುನಿಕ ಛಾಯಾಗ್ರಹಣದ ತಂತ್ರಜ್ಞಾನ ಮತ್ತು ದ್ರೋಣ್ ಕ್ಯಾಮರಾ ವ್ಯವಸ್ಥೆ ಸಿನಿಮಾಗಳನ್ನು ಅದ್ದೂರಿಯಾಗಿ ಬಿಂಬಿಸಬಲ್ಲವು.

ಕುದುರೆಗಿಂತ ಅದರ ಲದ್ದಿ ಬಿರುಸು ಎಂಬ ಗಾದೆಯಂತೆ ಕಥೆಗಿಂತ ಇತರೆ ಅಂಶಗಳನ್ನು ಅದ್ದೂರಿ ಶೈಲಿಯಲ್ಲಿ ಹೇಳುವುದು ಅಥವಾ ತೋರಿಸುವುದು ಇಂದಿನ ನಿರ್ದೇಶಕರ ಚಾಳಿಯಾಗಿದೆ. ತೆಲುಗಿನ ರಾಜಮೌಳಿಯ ಚಿತ್ರಗಳು, ಪ್ರಶಾಂತ್ ನೀಲ್ ಎಂಬ ನಿರ್ದೇಶಕನ ಕೆ.ಜಿ.ಎಫ್ ಹೆಸರಿನ ಎರಡು ಸಿನಿಮಾ ಮತ್ತು ಸುಕುಮಾರ್ ಎಂಬ ತೆಲುಗು ಮಿರ್ದೇಶಕನ ಪುಷ್ಪ ಎಂಬ ಭಾಗ ಒಂದು ಮತ್ತು ಎರಡು ಹಾಗೂ ತಮಿಳಿನಲ್ಲಿ ತಯಾರಾಗುತ್ತಿರುವ ರಜನಿ, ಕಮಲ್ ಮತ್ತು ವಿಜಯ್ ಇಂತಹವರ ಚಿತ್ರಗಳಲ್ಲಿ ಡಿಜಿಟಲ್ ಗ್ರಾಫಿಕ್ ಮತ್ತು ಅದ್ದೂರಿ ನಿರ್ಮಾಣ ಇವುಗಳು ಬಂಡವಾಳವಾಗಿದೆ. ಈ ಚಿತ್ರಗಳ ಟ್ರೈಲರ್ಗಳನ್ನು ನೋಡಿ ಸುಧಾರಿಸಿಕೊಳ್ಳಲು ನನಗೆ ಎರಡು ದಿನ ಬೇಕಾಯಿತು. ಇಂತಹ ಸಿಇಮಾಗಳತ್ತ ನಾನು ತಲೆ ಹಾಕಿಯೂ ಮಲಗುವುದಿಲ್ಲ.

ಈಗ ಅದೇ ಹಾದಿಯಲ್ಲಿ ರಿಷಬ್ ಹೊರಟಿರುವುದು ಸ್ಪಷ್ಟವಾಗಿದೆ. ಕಥೆಯನ್ನು ವ್ಯವಸ್ಥಿತವಾಗಿ ಮತ್ತು ವಸ್ತುನಿಷ್ಟವಾಗಿ ಹೇಳುವ ಕಲೆ ರಿಷಬ್ ಶೆಟ್ಟಿಗೆ ಇನ್ನೂ ದಕ್ಕಿಲ್ಲ. ಇದಕ್ಕೆ ಉದಾಹರಣೆಯಾಗಿ ಕಾಂತಾರ ಚಿತ್ರದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಒಳ್ಳೆಯ ಅಭಿನಯ ನೀಡಿರುವ ಕಿಶೋರ್ ಕುಮಾರ್ ಸೊಂಟಕ್ಕೆ ನಿರ್ದೇಶಕ ರಿಷಬ್ ಶೆಟ್ಟಿ ಪೊಲೀಸ್ ಇನ್ಸೆಪೆಕ್ಟರ್ ರೀತಿಯಲ್ಲಿ ಸೊಂಟಕ್ಕೆ ಪಿಸ್ತೂಲ್ ಕಟ್ಟಿರುವುದು ನಿರ್ದೇಕನ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ವಲಯ ಅರಣ್ಯಾಧಿಕಾರಿ ಮತ್ತು ಆತನ ಕೈಕೆಳಗೆ ಕಾರ್ಯನಿರ್ವಹಿಸುವ ಉಪವಲಯ ಅರಣ್ಯಾಧಿಕಾರಿಗಳು ಪಿಸ್ತೂಲ್ ಬಳಸುವುದಿಲ್ಲ. ಬಂದೂಕು ಹಿಡಿದ ಫಾರೆಸ್ಟ್ ಗಾರ್ಡ್ ಗಳ ಜೊತೆಯಲ್ಲಿ ಅವರು ಅರಣ್ಯ ಸುತ್ತುವುದು ವಾಡಿಕೆ. ಆದರೆ, ಕಾಂತಾರಾ ಸಿನಿಮಾದಲ್ಲಿ ಉಪವಲಯ ಅರಣ್ಯಾಧಿಕಾರಿ ಪಿಸ್ತೂಲ್ ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಅಬ್ಬರಿಸುವುದನ್ನು ನೋಡಿದಾಗ, ರಿಷಬ್ ಶೆಟ್ಟಿಗೆ ಸಿನಿಮಾ ಎನ್ನುವುದು ಮನರಂಜನೆಯ ಒಂದು ಸರಕು ಎಂಬುದು ಗೋಚರವಾಗುತ್ತದೆ.

ಈಗ ಕರಾವಳಿ ಪ್ರದೇಶದ ಭೂತಾರಾಧನೆ, ಕೋಲ ಇಂತಹ ಆಚರಣೆಗಳ ಹಿಂದೆ ಸ್ಥಳೀಯ ಜನರ ಜನರ ಧಾರ್ಮಿಕ ನಂಬಿಕೆಗಳಿರುವುದು ಮತ್ತು ಈ ಸಾಂಸ್ಕೃತಿಕ ಆಚರಣೆಗಳು ಸ್ಥಳೀಯವಾಗಿ ಎಲ್ಲಾ ವರ್ಗದ ಜನರನ್ನು ಬೆಸೆಯುವುದು ವಾಡಿಕೆ. ಇದು ಕೇವಲ ಕರಾವಳಿಗೆ ಮಾತ್ರ ಸೀಮಿತವಾಗಿಲ್ಲ, ಕೇರಳದ ಉತ್ತರ ಭಾಗದ ಮಲಬಾರ್ ಎಂದು ಕರೆಯಲಾಗುವ ಕಣ್ಣೂರು, ಕಾಸರಗೂಡು, ಪ್ರದೇಶಗಳಲ್ಲಿಯೂ ಥ್ಯೆಯಂ ಹೆಸರಿನಲ್ಲಿ ದೈವಿಕ ಆರಾಧನೆಗಳು ಆಚರಣೆಯಲ್ಲಿವೆ. ನಮ್ಮ ದಕ್ಷಿಣ ಕರ್ನಾಟಕದಲ್ಲಿ ಗ್ರಾಮದೇವತೆಗಳ ಹಬ್ಬಗಳಲ್ಲಿ ದೇವರನ್ನು ಹೊತ್ತ ದೇವರ ಗುಡ್ಡ ಕೂಡಾ ಮೈ ಮೇಲೆ ದೇವರು ಬಂದು ಭಕ್ತರ ಸಮಸ್ಯೆಗಳಿಗೆ ಪರಿಹಾರ ಹೇಳುತ್ತಿದ್ದದನ್ನು ನಾನು ಬಾಲ್ಯದಲ್ಲಿ ನನ್ನೂರು ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ನೋಡಿದ್ದೆ.

ಕರಾವಳಿಯಲ್ಲಿ ನಡೆಯುವ ಯಾವುದೇ ಭೂತಾರಾಧನೆಯನ್ನು ನಾನು ನೋಡಿಲ್ಲ. ಆದರೆ, ಇಂಗ್ಲೀಷ್ ಲೇಖಕ ವಿಲಿಯಂ ಡಾಲಿಂಪ್ರೆಲ್ ಅವರ ನೈನ್ ಲಿವ್ಸ್ ಎಂಬ ಕೃತಿಯಲ್ಲಿ ಕೇರಳದ ಥ್ಯೆಯಂ ನೃತ್ಯದ ಕುರಿತಾಗಿ ಬರೆದಿರುವ ಅಧ್ಯಾಯವನ್ನು ಓದಿದ ನಂತರ ಹತ್ತು ವರ್ಷಗಳ ಹಿಂದೆ ಕಣ್ಣೂರು ಜಿಲ್ಲೆಯಲ್ಲಿ ಆ ನೃತ್ಯ ಮತ್ತು ಸಂಸ್ಕೃತಿಯನ್ನು ನೋಡಿಬಂದಿದ್ದೆ. ಥ್ಯೆಯಂ ನೃತ್ಯ ಮತ್ತು ಆರಾಧನೆಯಲ್ಲಿ ವೇ಼ಷ ಧರಿಸಿ ನೃತ್ಯ ಮಾಡುವವರು ಬಹುತೇಕ ಮಂದಿ ತಳ ಸಮುದಾಯದವರಾಗಿರುವುದು ವಿಶೇಷ. ಕರಾವಳಿಯಲ್ಲಿ ವೇಷ ಕಟ್ಟುವವರ ಕುರಿತಾಗಿ ನನಗೆ ಗೊತ್ತಿಲ್ಲ.

ಅತ್ಯಂತ ಆಳವಾದ ಅಧ್ಯಯನದ ಮೂಲಕ ನನ್ನನ್ನು ತೀವ್ರವಾಗಿ ಪ್ರಭಾವಿಸಿದ ಲೇಖಕರಲ್ಲಿ ಬಿ.ಬಿ.ಸಿ. ಚಾನಲ್ ಗೆ ಭಾರತದ ಪ್ರತಿನಿಧಿಯಾಗಿದ್ದ ಮಾರ್ಕ್ ಟುಲಿ ಮತ್ತು ಸ್ಕಾಟ್ಲೆಂಡ್ ಮೂಲದ ಹಾಗೂ ಭಾರತದ ಸಂಸ್ಕೃತಿ, ಇತಿಹಾಸ ಕುರಿತು ಬರೆವಣಿಗೆ ಮತ್ತು ಅಧ್ಯಯನವನ್ನು ವೃತ್ತಿಯಾಗಿಸಿಕೊಂಡು, ದೆಹಲಿ ಹೊರವಲಯದಲ್ಲಿ ವಾಸಿಸುತ್ತಿರುವ ವಿಲಿಯಂ ಡಾಲಿಂಪ್ರೆಲ್ ಮುಖ್ಯರಾದವರು. ಈ ಇಬ್ಬರ ಲೇಖಕರ ಬಹುತೇಕ ಕೃತಿಗಳು ನನ್ನ ಸಂಗ್ರಹದಲ್ಲಿವೆ. ಇವರಿಂದ ಪ್ರಭಾವಿತರಾಗಿ ನಾನು ವಿಭಿನ್ನ ವಿಷಯಗಳ ಕುರಿತಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.

ವಿಲಿಯಂ ಡಾಲಿಂಪ್ರೇಲ್ ಅವರ ನೈನ್ ಲಿವ್ಸ್ ಎಂಬ ಕೃತಿಯನ್ನು ದಶಕದ ಹಿಂದೆ ನವೀನ್ ಗಂಗೋತ್ರಿ ಎಂಬುವರು ನವಜೀವಗಳು ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ವಸುಧೇಂದ್ರ ತಮ್ಮ ಛಂದ ಪ್ರಕಾಶನದಲ್ಲಿ ಪ್ರಕಟಿಸಿದ್ದರು. ಈ ದೇಶದ ವಿವಿಧ ಮೂಲೆಗಳಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮತ್ತು ಧಾರ್ಮಿಕ ವೃತ್ತಿಯಲ್ಲಿರುವ ಒಂಬತ್ತು ವಿವಿಧ ವ್ಯಕ್ತಿಗಳ ಬದುಕನ್ನು ತಿಂಗಳಾನುಗಟ್ಟಲೆ ಅಧ್ಯಯನ ಮಾಡಿ ಲೇಖಕ ಬರೆದಿದ್ದಾರೆ. ಇದರಲ್ಲಿ ಕರ್ನಾಟಕದ ಸವದತ್ತಿ ಬಳಿ ದೇವದಾಸಿಯಾಗಿದ್ದ ಒಬ್ಬ ಹೆಣ್ಣುಮಗಳ ಕಥನ ಮತ್ತು ಶ್ರವಣ ಬೆಳಗೂಳದಲ್ಲಿ ಹರೆಯದಲೇ ಜೈನ ಧೀಕ್ಷೆ ಪಡೆದು ಸನ್ಯಾಸಿನಿಯಾದ ಹೆಣ್ಣುಮಗಳ ಕಥನ ಹಾಗೂ ತಮಿಳುನಾಡಿನಲ್ಲಿ ಕುಂಭಕೋಣಮ ಸಮೀಪದ ಸ್ವಾಮಿ ಮಲೈ ಎಂಬ ಊರಿನಲ್ಲಿ ದೇವತ ಪ್ರತಿಮೆ ಮಾಡುವ ಸ್ಥಪತಿಗಳು ಎಂಬುವವ ವೃತ್ತಿ ಮತ್ತು ಸ್ವಾಮಿನಿಷ್ಠೆಯ ಕಥೆಗಳಿವೆ.

ಈ ಎಲ್ಲಾ ಕಥೆಗಳಿಗಿಂತ ಮುಖ್ಯವಾಗಿ ರಾಜಸ್ತಾನದಲ್ಲಿ ಇಡೀ ರಾತ್ರಿ ಹಾಡುಗಳ ಮೂಲಕ ಜಾನಪದ ಮತ್ತು ಪೌರಾಣಿಕ ಕಥೆ ಹೇಳುವ ಅನಕ್ಷರಸ್ಥ ಕಲಾವಿದನ ಕುರಿತು ಮತ್ತು ಕೇರಳದಲ್ಲಿ ಥ್ಯೆಯಂ ನೃತ್ಯಕ್ಕೆ ವೇಷ ಧರಿಸುವ ದಲಿತ ಸಮುದಾಯದ ಕೂಲಿ ಕಾರ್ಮಿಕನ ಕಥೆಗಳು ನನ್ನಲ್ಲಿ ಆಸಕ್ತಿ ಮೂಡಿಸಿದ್ದವು. ರಾಜಸ್ಥಾನದಲ್ಲಿ ಒಂಟೆಯ ಗಾಡಿಯ ಮೇಲೆ ಹಳ್ಳಿಯಿಂದ ಹಳ್ಳಿಗೆ ತನ್ನ ಕುಟುಂಬದೊಂದಿಗೆ ಸುತ್ತುವ ಕಲಾವಿದನು, ಸೀರೆಯ ಮಾದರಿಯಲ್ಲಿರುವ ಹಾಗೂ ಸುಮಾರು ನೂರರಿಂದ ನೂರೈವತ್ತು ಅಡಿ ಉದ್ದದ ಬಟ್ಟೆಯ ಮೇಲೆ ಚಿತ್ರಿಸಿರುವ ಚಿತ್ರಗಳನ್ನು ನೋಡಿ, ಹಾಡಿನ ಮೂಲಕ ಕಥೆ ಹೇಳುವ ಕಲಾವಿದನ ಬದುಕನ್ನು ಲೇಖಕ ಡಾಲಿಂಪ್ರೆಲ್ ಕಟ್ಟಿಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದುಕೊಂಡು, ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ಅಲೆಯುವ ಕೇರಳದ ದಲಿತ ಕಾರ್ಮಿಕ ಪ್ರತಿ ವರ್ಷ ಡಿಸಂಬರ್ ತಿಂಗಳಲ್ಲಿ ತ್ಯೆಯಂ ನೃತ್ಯದ ಸಂದರ್ಭದಲ್ಲಿ ತನ್ನೂರಿಗೆ ಹಿಂತಿರುಗುತ್ತಾನೆ.

ಆ ಊರಿನ ಹೊರಗಿರುವ ದೇವಸ್ಥಾನದ ಬಳಿ ಆ ದಿನ ಕಂಠಪೂರ್ತಿ ಸೇಂದಿ ಕುಡಿದು ಹೆಣೆದ ತೆಂಗಿನ ಗರಿಯ ಮೇಲೆ ಅಂಗಾತ ಮಲಗುವ ಈ ಕಲಾವಿದನಿಗೆ ಕನಿಷ್ಠ ನಾಲ್ಕರಿಂದ ಐದುಗಂಟೆಯವರೆಗೆ ವೇಷ ಭೂಷಣದ ತಯಾರಿ ನಡೆಯುತ್ತದೆ. ನಂತರ ರಾತ್ರಿ ಬೆಂಕಿಯ ದೊಂದಿಯ ಜೊತೆ ಕುಣಿಯುತ್ತಾನೆ. ಈ ಆಚರಣೆಗೆ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮದ ಎಲ್ಲಾ ವರ್ಗದ ಮತ್ತು ಜಾತಿಯ ಜನರು ನೆರೆಯುತ್ತಾರೆ ಹಾಗೂ ದೈವದ ಆಶೀರ್ವಾದ ಪಡೆಯುತ್ತಾರೆ. ಈ ಕುರಿತು ಲೇಖಕ ಡಾಲಿಂಪ್ರೆಲ್ ಕಲಾವಿದನನ್ನು ಪ್ರಶ್ನಿಸುವುದು ಹೀಗೆ ‘’ ವರ್ಷ ಪೂರ್ತಿ ಹೊರ ಜಿಲ್ಲೆಗಳಲ್ಲಿ ದುಡಿಯುವ ನೀನು ಈ ಆಚರಣೆ ಮತ್ತು ನೃತ್ಯಕ್ಕೆಹಾಜರಾಗಲು ಪ್ರೇರಣೆ ಏನು? ಇದಕ್ಕೆ ಕಲಾವಿದನು, ‘’ ಸ್ವಾಮಿ, ದಲಿತ ಸಮುದಾಯದ ನಮ್ಮನ್ನು ಮೇಲ್ವರ್ಗದ ಜನ ಮುಟ್ಟಲು ಮತ್ತು ಮಾತನಾಡಿಸಲು ಅಸಹ್ಯ ಪಡುತ್ತಾರೆ. ಆದರೆ, ನಾನು ಈ ಸಂದರ್ಭದಲ್ಲಿ ವೇಷ ಕಟ್ಟಿದಾಗ, ನನಗೆ ಕೈ ಮುಗಿದು, ಆಶೀರ್ವಾದ ಪಡೆಯುತ್ತಾರೆ ಹಾಗೂ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಇದು ನನಗೆ ಮತ್ತು ನನ್ನ ಸಮುದಾಯಕ್ಕೆ ಹೆಮ್ಮೆಯ ಸಂಗತಿ’’ ಎನ್ನುತ್ತಾನೆ.

ಇದನ್ನು ವಿಶ್ಲೇಷಣೆ ಒಳಪಡಿಸಿ ವ್ಯಾಖ್ಯಾನಿಸುವ ಲೇಖಕ ಡಾಲಿಂಪ್ರೆಲ್, ಅಸ್ಪಶ್ಯತೆಗೆ ಭಾರತೀಯ ದೇಶಿ ಸಂಸ್ಕೃತಿಯ ಒಳಗೆ ಆಚರಣೆಗಳ ಹೆಸರಿನಲ್ಲಿ ಮದ್ದು ಸಹ ಇದೆ ಎನ್ನುತ್ತಾರೆ. ಹೌದಲ್ಲವೆ? ನಾವು ನಮ್ಮ ದೇಶಿ ಸಂಸ್ಕೃತಿಯನ್ನು ಒಳಹೊಕ್ಕು ಹಲವು ಆಯಾಮಗಳಲ್ಲಿ ಪರಿಶೀಲಿಸಿದರೆ ಏನೆಲ್ಲಾ ಸಂಗತಿಗಳು ದೊರೆಯಬಹುದು ಎಂದು ಆಶ್ಚರ್ಯವಾಗುತ್ತದೆ.

ನನ್ನೂರಿನ ಗ್ರಾಮದೇವತೆ ಪಟ್ಟಲದಮ್ಮನ ಹಬ್ಬದಲ್ಲಿ ಪೂಜಾರಿ ಬೆಸ್ತರ ಸಮುದಾಯದವನು, ದೇವರು ಹೊರುವ ದೇವರ ಗುಡ್ಡ ಒಕ್ಕಲಿಗ, ಕೊಂಡಕ್ಕೆ ಭೂಮಿ ಅಗೆಯುವವನು ಕುರುಬ, ತಮಟೆ ಬಾರಿಸುವವನು ದಲಿತ, ದೇವರಿಗೆ ಕಳಸ ಹಿಡಿಯುವ ಹೆಣ್ಣುಮಗಳು ಬಣಜಿಗ ಸಮುದಾಯದವಳು ಮತು ಹಬ್ಬದಲ್ಲಿ ದೇವರ ಮೂರ್ತಿಯ ಪೂಜಾ ಕುಣಿತದ ವ್ಯವಸ್ಥೆ ಸಿದ್ಧವಾಗುವುದು ಬ್ರಾಹ್ಮಣರ ಬೀದಿಯ ದೇಗುಲದಲ್ಲಿ. ಒಂದು ಹಬ್ಬದ ಆಚರಣೆಗೆ ಸಕಲೆಂಟು ಜಾತಿಗಳನ್ನ ಬೆಸೆಯುವ ಇಂತಹ ದೇಸಿ ಸಂಸ್ಕೃತಿಯನ್ನು ನಾವು ಆಳವಾಗಿ ಅಧ್ಯಯನ ಮಾಡಬೇಕಿದೆ. ಸಿನಿಮಾ ಹಾಗೂ ಇತ್ತೀಚೆಗಿನ ಪ್ರಭಾವಿ ದೃಶ್ಯ ಮಾಧ್ಯಮಗಳು ಅವುಗಳ ಮೇಲೆ ಬೆಳಕು ಚೆಲ್ಲುತ್ತಿವೆ. ಆದರೆ, ಆವುಗಳನ್ನು ವಿಶ್ಲೇಷಿಸಬೇಕಾಗಿರುವುದು ಪ್ರಜ್ಞಾವಂತರ ಕರ್ತವ್ಯ.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...