ದೇವರೆಂಬ ದಿಕ್ಕಿಲ್ಲದ ಪ್ರಶ್ನೆ!!?


ನಂಬಿ ಕರೆದರೆ ಓ ಎನ್ನನೇ ಶಿವನು? ಎನ್ನುತ್ತಾರೆ ನಮ್ಮ ಪೂರ್ವ ನಾಡಿನ ಶರಣರು. 'ದೋಷ ರಾಶಿ ದೂರ ಮಾಡೋ ಶ್ರೀಶಕೇಶವ' ಎನ್ನುತ್ತಾರೆ ದಾಸರು. 'ಕಣ್ಣೀರಾಗದೆ ಕಾಣುವಳೆ ಕಾಳಿ?' ಎಂದು ಕೇಳುತ್ತಾರೆ ಪರಮಹಂಸರು. ‘ಅಧ್ಯಾತ್ಮ, ದೇವರುಗಳೆಂಬ ಬುರುಡೆ ಕಥೆಗೆ ಬಡವಾಗಿ ಹೋಯಿತು ಲೋಕ' ಎಂದು ವ್ಯಂಗ್ಯ ಮಾಡುತ್ತಾನೆ. ಕಾರ್ಲ್ ಮಾರ್ಕ್ಸ್, ಈ ವಿಚಾರಗಳ ಮಧ್ಯದಲ್ಲೆಲ್ಲೋ ನೇತಾಡುತ್ತಿದೆ ಲೇಖಕ ಸಂಗಮೇಶ ಉಪಾಸೆಯವರ ನಾಟಕ 'ದೇವರುಗಳಿವೆ ಎಚ್ಚರಿಕೆ’, ಅವರು ನಾಸ್ತಿಕರಲ್ಲ.ಸಾಹಿತಿ, ಚಿಂತಕ ರಾಜಶೇಖರ ಮಠಪತಿ(ರಾಗಂ) ಅವರು ಬರೆದ ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

'ದೇವರು' ಎನ್ನುವ ಈ ಪದದಷ್ಟು ಟೀಕೆ, ಚರ್ಚೆ, ವ್ಯಂಗ್ಯ, ಆಪಾದನೆ, ಆರಾಧನೆಗಳಿಗೆ ಒಳಪಟ್ಟ ಮತ್ತೊಂದು ಪದ ಬಹುತೇಕ ಪ್ರಪಂಚದ ಯಾವ ಭಾಷೆಯಲ್ಲಿಯೂ ಇರಲಿಕ್ಕಿಲ್ಲ. ಇದು ಭಾವವೋ, ನಿರ್ಭಾವರ್ವೋ ಮೂರ್ತವೋ, ಅಮೂರ್ತವೋ, ಸುಳ್ಳೋ ಅಥವಾ ಸತ್ಯವೋ, ಅಮೃತವೋ ಇಲ್ಲಾ ಆಫೀಮೋ; ಅವಶ್ಯಕವೋ, ಅನಾವಶ್ಯಕವೋ ಇದೆಲ್ಲವೂ ಅಂತ್ಯವಿಲ್ಲದ ಹುಡುಕಾಟ, ಗೆಳೆಯ ಸಂಗಮೇಶ ಉಪಾಸೆಯವರ ಪ್ರಸ್ತುತ ನಾಟಕ 'ದೇವರುಗಳಿವೆ ಎಚ್ಚರಿಕೆ' ಕೃತಿಯೂ ಕೂಡ ಇಂಥದೇ ಹುಡುಕಾಟ ಮತ್ತು ತಡಕಾಟದ ಫಲಶೃತಿ.

ಈ ನಾಟಕ ಪ್ರಶ್ನೆಗಳ ಒಂದು ದೊಡ್ಡ ಗೊಂಚಲು. ಉತ್ತರ ನಿಮ್ಮ ನಿಮ್ಮ ಭಾವ-ಭಕುತಿ, ವಿಚಾರ ಮತ್ತು ವಿವೇಕಕ್ಕೆ ಬಿಟ್ಟಿದ್ದು,ಜೀವವಿಲ್ಲದಲ್ಲಿಯೂ ದೇವ ಅಥವಾ ದೇವರ ಪರಿಕಲ್ಪನೆ ಇರಬಹುದೆ? ದೇಹ ಹೊತ್ತ ಪಶು-ಪಾಣಿ ಪಕ್ಷಿಗಳ ಪ್ರಪಂಚದಲ್ಲಿ ಈ ನಮ್ಮ ದೇವರು ಯಾವ ರೂಪದಲ್ಲಿರಬಹುದು? ಈ ದೇವರು ಭರವಸೆಯೋ ಆಥವಾ ಭರವಸೆ ಇಟ್ಟವರನ್ನ ಬಲಿತೆಗೆದುಕೊಳ್ಳುವ ಅಮಾನುಷ ವ್ಯವಸ್ಥೆಯೋ?, ನಾಟಕಕಾರ ಉಪಾಸ ಬರೆದಿರುವಂತೆ-

ದೇವರು
ಒಂದು ಬಾಂಬರ್!
ತಾಳ ತಪ್ಪಿದರೆ
ಎಲ್ಲರೂ ಢಮಾರ್?

God is dead ಎನ್ನುತ್ತಾನೆ ಯೂರೋಪಿನ ಚಿಂತಕ ಒಬ್ಬ. ಇಲ್ಲ. ಹಾಗೇನಿಲ್ಲ If there is no God then create a God ಎನ್ನುತ್ತಾನೆ ಅದೇ ಯೂರೋಪಿನ ಇನ್ನೊಬ್ಬ.

ಇಂಗ್ಲೀಷ್‌ನಲ್ಲಿ 'Waiting for Godot' ಎನ್ನುವ ನಾಟಕವೊಂದಿದೆ. ಇಬ್ಬರು ಹುಲುಮಾನವರು ದೇವರು ಬರುತ್ತಾನೆ ಎಂದು ರಸ್ತೆಯೊಂದರ ಪಕ್ಕ ಕಾಯುತ್ತ ಕುಳಿತುಕೊಳ್ಳುವುದೇ ಈ ನಾಟಕದ ವಸ್ತು. ನಾಟಕ ಮುಗಿಯುತ್ತದೆ 'ಗೋಡಾಟ್' ಬರುವುದೇ ಇಲ್ಲ. ಚಿಂತಕರು ಈ 'ಗೋಡಾಟ್' ಮತ್ಯಾರೂ ಅಲ್ಲ. ನಾವು-ನೀವೆಲ್ಲ ನಂಬಿರುವ ಗಾಡ್, ದೇವರು, ಖುದಾ, ಪರ್ವರ್ದಿಗಾರ್‌ ಜಗತ್ತಿನ ತುಂಡು-ಲಂಡು ಧರ್ಮಗಳು ಇದಕ್ಕೆ ಮತ್ತಿನ್ಯಾವ ಪದಗಳನ್ನೋ, ಚಿತ್ರ-ಮೂರ್ತಿಗಳನ್ನೂ ಬಳಸಿರಬಹುದು. ನನಗೆ ಗೊತ್ತಿರುವುದೇ ಇಷ್ಟೆ. ನಾಟಕಕಾರ ಉಪಾಸೆ ಅವರು ಅಷ್ಟೆ, ತಮಗೆ ಗೊತ್ತಿರುವ ಅನುಭವಕೆ ದಕ್ಕಿದ ಲೋಕದೊಳಗಿನ ದೇವರು-ಧರ್ಮ ಕುರಿತಾದ ದ್ವಂದ್ವ ಮತ್ತು ವೈರುಧ್ಯದ ವಿಚಾರಗಳನ್ನು ಇಲ್ಲಿ ಮರುಚರ್ಚಿಸಲು ಒಂದು ವೇದಿಕೆಯನ್ನು ಸೃಷ್ಟಿಸಿದ್ದಾರೆ. ನಾಟಕ ಒಂದರ್ಥದಲ್ಲಿ ಬರೀ ವೇದಿಕೆ ಅಷ್ಟ ಇತ್ಯರ್ಥಗಳಿಗೆ ಇಲ್ಲಿ ಯಾವ ಕೋರ್ಟು ಸೃಷ್ಟಿಯಾಗಿಲ್ಲ. ಸೃಷ್ಟಿಯಾದ ಕೋರ್ಟು ಒಂದು ದೃಶ್ಯ ಆಷ್ಟೆ.

ನಂಬಿ ಕರೆದರೆ ಓ ಎನ್ನನೇ ಶಿವನು? ಎನ್ನುತ್ತಾರೆ ನಮ್ಮ ಪೂರ್ವ ನಾಡಿನ ಶರಣರು. 'ದೋಷ ರಾಶಿ ದೂರ ಮಾಡೋ ಶ್ರೀಶಕೇಶವ' ಎನ್ನುತ್ತಾರೆ ದಾಸರು. 'ಕಣ್ಣೀರಾಗದೆ ಕಾಣುವಳೆ ಕಾಳಿ?' ಎಂದು ಕೇಳುತ್ತಾರೆ ಪರಮಹಂಸರು. ‘ಅಧ್ಯಾತ್ಮ, ದೇವರುಗಳೆಂಬ ಬುರುಡೆ ಕಥೆಗೆ ಬಡವಾಗಿ ಹೋಯಿತು ಲೋಕ' ಎಂದು ವ್ಯಂಗ್ಯ ಮಾಡುತ್ತಾನೆ. ಕಾರ್ಲ್ ಮಾರ್ಕ್ಸ್, ಈ ವಿಚಾರಗಳ ಮಧ್ಯದಲ್ಲೆಲ್ಲೋ ನೇತಾಡುತ್ತಿದೆ ಉಪಾಸೆಯವರ ನಾಟಕ 'ದೇವರುಗಳಿವೆ ಎಚ್ಚರಿಕೆ, ಅವರು ನಾಸ್ತಿಕರಲ್ಲ. ಯಾಕೆಂದರೆ, ಈ ಬದುಕನ್ನು ಒಂದಿಲ್ಲಾ ಒಂದು ರೂಪ, ವಿಚಾರ, ವಿಷಯಗಳನ್ನು ನಂಬಿರುವ ಯಾರೂ ನಾಸ್ತಿಕರಾಗಲು ಸಾಧ್ಯವಿಲ್ಲ, ಉಪಾಸೆ ಇದರಿಂದ ಹೊರತಲ್ಲ. ಆದರೆ, ನಮ್ಮ ನಂಬಿಕೆಗಳಿಗೆ ವಿವೇಚನೆಯ ಸ್ಪರ್ಶವಿದೆಯೇ ಇದು ನಾಟಕದ ಪ್ರಶ್ನೆ.

ಅದು ಬಿಡಿ, ನನ್ನ ಪ್ರಶ್ನೆ ಅಥವಾ ನಮ್ಮ ಪ್ರಶ್ನೆ ನಾವೀಗ ಏನಾಗಬೇಕು? 'ನನಗೆ ನೀನಲ್ಲದೆ ಬೇರಾರೂ ಗತಿ ಇಲ್ಲವಯ್ಯ' ಎಂದು ದೇವರನ್ನು ನಂಬಿತ್ತಲೇ ಆತ್ಮಾಹುತಿ ಮಾಡಿಕೊಂಡ ಬಸವಣ್ಣನಾಗಬೇಕೋ? ಮಾಂಸ-ಮಜ್ಜಿಗಳಾಚಿನ ಮನುಷ್ಯ ಆಲೋಚನೆಗಳೆಲ್ಲವೂ ಬರೀ ಕಲ್ಪನೆಗಳಾಗಿವೆ ಎಂದು ಮಾರ್ಕ್ಸ್‌ನನ್ನು ನಂಬಿ ಈ ದೇವರುಗಳನ್ನು ಆಚೆ ನೂಕಿ ಬಿಡಬೇಕೊ?

ಯಾಕಣ್ಣಾ ಕಪಾಳಿಗೆ ಹೊಡೆದೆ?
ದೇವರಂದ್ರೇನು ಅಂತ ಪ್ರಶ್ನೆ ಮಾಡ್ತಿ ಮಗನ?

ಈ ಮೇಲಿನ ಸಂವಾದ ನಾಟಕದ ಆರಂಭದಲ್ಲೆಲ್ಲೋ ಬರುತ್ತದೆ. ದೇವರು-ಧರ್ಮಗಳು ಪ್ರಶ್ನಾತೀತ ಎನ್ನುವುದರ ಸಂಕೇತ ಇದು. ಆದರೆ, ಇದು ನಮ್ಮ ವಾಸ್ತವವಾಗಿರುವುದು ದುರಂತವಲ್ಲವೆ? ಕಲ್ಪನೆ ಒಂದು ಬದುಕನ್ನು ನಿರ್ದೇಶಿಸುವುದು, ಭಾಷೆಬಲ್ಲವರ ಬಂಡವಾಳವಾಗುವುದು ಎಷ್ಟರ ಮಟ್ಟಿಗೆ ಸರಿ? ಇದು ಕೃತಿಕಾರನ ಪ್ರಶ್ನೆ.

ಕೆಲವೊಮ್ಮೆ ಹುಸಿರಾಷ್ಟ್ರೀಯವಾದವೂ ಧಾರ್ಮಿಕ ಆಯಾಮದೊಂದಿಗೆ ಜನಾಂಗೀಯವಾದ ಮತ್ತು ಸಾಂಸ್ಕೃತಿಕ ದುರಹಂಕಾರವನ್ನು ಪೋಷಿಸುತ್ತದೆ. ಆಡಳಿತವು ಅದರ ಪೋಷಣೆ ಮಾಡುತ್ತಾ ತನ್ನ ಅಧಿಕಾರ ಲಾಭಕ್ಕಾಗಿ ನಿಲ್ಲುತ್ತದೆ. ದೇವರು ಮತ್ತು ಧರ್ಮಗಳು ಈ ನೆಲದಲ್ಲಿ ಹೀಗೆ ಬಳಕೆಯಾಗಿವೆ ಎನ್ನುವುದು ಉಪಾಸೆಯವರ ಅಸಮಾಧಾನ.

ನಾಟಕಕಾರರ ಕಾಳಜಿ ದೇವರನ್ನು ಅಥವಾ ಧರ್ಮವನ್ನು ಹೀಗಳೆಯುವುದಲ್ಲ, ಲೋಕಕ್ಕೆ ಒಳಿತನ್ನು ಬಯಸಿ ಹೊಸ ಹೊಸ ಧರ್ಮಮಾರ್ಗಗಳನ್ನು ತೋರಿದ ಶ್ರೀಕೃಷ್ಣ, ಬುದ್ಧ, ಮಹಾವೀರ, ಏಸುಕ್ರಿಸ್ತ, ಪೈಗಂಬರ, ಬಸವಣ್ಣವರುಗಳು ದೇವಲೋಕದ ನ್ಯಾಯಸ್ಥಾನದಲ್ಲಿ ಕಟಕಟೆಗೆ ಬಂದು ನಿಲ್ಲುವುದು, ಅವರು ಸ್ಥಾಪಿಸಿದ ಧರ್ಮಗಳ ಬಗ್ಗೆ ನಿವೇದಿಸುವುದು ನಾಟಕದಲ್ಲಿನ ಇನ್ನೊಂದು ವಿಡಂಬನೆಯ ನಾಟಕವಾಗಿದೆ. ಹಲೋಕದಲ್ಲಿ ಇವರ ಹೆಸರಿನಲ್ಲಿ ತಾವೇ ಅವತಾರಪುರುಷರಾಗಿ ಸಮಾಜ ಮತ್ತು ಜನರನ್ನು ಶೋಷಿಸುವ ತಂತ್ರವನ್ನು ನಿರೂಪಿಸಿದ್ದಾರೆ.

“ಶ್ರೀಕೃಷ್ಣ, ಬುದ್ಧ, ಮಹಾವೀರ, ಏಸು, ಪೈಗಂಬರ್, ಬಸವ ಅವರು ದೇವಮಾನವರಾಗೊ ಬದಲು ಅವರೇ ದೇವರಾಗಿ ಮೇರಿತಿದ್ದಾರೆ.”

ಆಧುನಿಕ ಅವತಾರಗಳನ್ನು, ದೇವರ ವಿಕಾರವಾದ ರೂಪಗಳನ್ನು ಹಾಸ್ಯಕ್ಕೆ ಒಡ್ಡುವ ಜೊತೆಜೊತೆಗೆ ಧರ್ಮ-ದೇವರಲ್ಲಿ ಇರಬೇಕಾದ ನಂಬಿಕೆಯನ್ನು ಪ್ರಸ್ತಾಪಿಸುವುದು ನಾಟಕಕಾರರ ಉದ್ದೇಶವಾಗಿದೆ. ಭಾಷಿಕ ಗುಲಾಮಗಿರಿ, ಮಾಧ್ಯಮ ರಾಜಕೀಯ, ಜ್ಯೋತಿಷಿಗಳ ಬಂಡವಾಳ, ರಾಜಕೀಯ ಪ್ರೇರಿತ ರೋಗ, ಮತೀಯ ಸಂಘರ್ಷ ಎಲ್ಲವುಗಳನ್ನು ನಾಟಕಕಾರ ಕೃತಿಯ ವ್ಯಾಪ್ತಿಯಲ್ಲಿ ತರುತ್ತಾರೆ. ಮಾಸ್ಕ್ ಹಾಕಿಕೊಂಡು ಏನನ್ನೂ ಮಾತನಾಡುವಂತಿಲ್ಲ. ಮಾತಾಡಿದರೆ ಅದರ ಪರಿಣಾಮಗಳೇನು ಎನ್ನುವುದರ ಸ್ಪಷ್ಟ ಅರಿವಿದ್ದೂ ಜೇನು ಗೂಡಿಗೆ ಕೈಹಾಕಿದ್ದಾರೆ. ಉಪಾಸೆ. ಇಲ್ಲಿ ಉದಾಹರಣೆಗೆ:

“ಈ ದೇವರ ಬಗ್ಗೆ ಮಾತನಾಡುವುದು ಬೇಡಾಂತ...
ಮಹಾರಾಷ್ಟ್ರದ ಪನ್ಸಾರೆ, ಧಾಬೊಲ್ಕರ್
ಮತ್ತು ಕರ್ನಾಟಕದ ಕಲ್ಬುರ್ಗಿ, ಗೌರಿನಾ
ಈ ಭೂಲೋಕಿಗಳು ಸುಮಾರಿ ಕೊಟ್ಟು ಕೊಲ್ಲಿಸಿದ್ದಾರೆ.”

ದುರಂತವೆಂದರೆ ಇದು ಲೇಖಕನೊಬ್ಬ ಕ್ರಮಿಸಲೇಬೇಕಾದ ಕಂತ್ತಿಯಂಚಿನ ದಾರಿ, ಈ ದಾರಿಯನ್ನು ಎದೆಗುಂದದೆ ಕ್ರಮಿಸಿದ್ದಾರೆ ಸಂಗಮೇಶ.

ನಾಟಕ ಒಟ್ಟು ಒಂಬತ್ತು ದೃಶ್ಯಗಳನ್ನು ಒಳಗೊಂಡಿದ್ದು, ಕೊನೆಯ ಎರಡು-ಮೂರು ದೃಶ್ಯಗಳು ತಾತ್ವಿಕ ಸಂಘರ್ಷದ ಗಂಭೀರ ಸಾಕ್ಷಿಯಾಗಿವೆ. ನಾಟಕದ ಮಧ್ಯದಲ್ಲಿ ಒಟ್ಟಾರೆಯಾಗಿ

“ಒಬ್ಬರು ದ್ವೈತ
ಇನ್ನೊಬ್ಬರು ಅದ್ವೈತ
ಮತ್ತೊಬ್ಬರು ವಿಶಿಷ್ಟಾದ್ವೈತ
ಮಗದೊಬ್ಬರು ಶಕ್ತಿವಿಶಿಷ್ಟಾದ್ವೈತ
ಮತ್ತೆ ಕೆಲವರು ದೇವರೇ ಇಲ್ಲಾ
ಯಾರ ರೂಪ ಯಾರ ಚಿಹ್ನೆ ಸರಿ?
ನಂದು ಸರಿ ನಿಂದು ಸರಿ"

ಸರಿ-ತಪ್ಪುಗಳನ್ನು ಸರಿದೂಗಿಸುವ ಲೆಕ್ಕಾಚಾರದ ದೃಶ್ಯಗಳಿವೆ.

ಉಪಾಸೆಯವರು ಗಡಿ ಕರ್ನಾಟಕದ ಭೀಮಾತೀರದವರು ಎನ್ನುವ ಅಂಶದೊಂದಿಗೆ ನಾವಿಬ್ಬರೂ ಒಂದೇ ನೆಲದ, ವಯೋಮಾನದ, ವೈಚಾರಿಕ ನೆಲೆಯ ಲೇಖಕರೆನ್ನುವ ಸಹಜ ಪ್ರೀತಿ ಮತ್ತು ಸೆಳೆತ ಇದ್ದೇ ಇದೆ. ನಾಟಕ ನಮ್ಮೆಲ್ಲರ ಧ್ವನಿಯಾಗಿದೆ. ವ್ಯತ್ಯಾಸವಿಷ್ಟೇ, ಅವರದು ಪ್ರಕಟವಾಗಿದೆ. ನಾವು ಅಪ್ರಕಟಿತರಾಗಿದ್ದೂ ಓದುಗರಾಗಿದ್ದೇವೆ.

ಮೂಲತಃ ಸಿನಿಮಾ ನಟ, ರಂಗಕರ್ಮಿ, ಜನಪರ ಅಧಿಕಾರಿ, ಬಡತನ ಬವಣೆಗಳ ಹಿನ್ನಲೆಯಿಂದ ಉಪಾಸೆಯವರು ಬಂದವರಾದುದರಿಂದ ಕೃತಿಯ ರಂಗ ಸಾಧ್ಯತೆ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ನಾಟಕವನ್ನು ಓದುತ್ತ ಹೋದಂತೆ ಅದು ನಮ್ಮ ಮುಂದೆ ಪ್ರದರ್ಶನವಾದ ಅನುಭವ ನಮ್ಮದಾಗುತ್ತದೆ. ಹೀಗಾಗಿ, ಇದು ಬರೀ ಶ್ರವ್ಯ ಪಠ್ಯವಲ್ಲ ಬದಲಾಗಿ ರಂಗ ಪ್ರದರ್ಶನ ಪಠ್ಯವೂ ಕೂಡ.

ಸಂಗಮೇಶ ಉಪಾಸೆ ಅವರ ಈ ವೈಚಾರಿಕ ಮುನ್ನಡೆ ಸಮಾಜವನ್ನೂ ಮುನ್ನಡೆಯಿಸಲಿ ಎಂದು ಹಾರೈಸುತ್ತೇನೆ.

 

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...