ಹೃದಯದವರೆಗೂ ಬರುವ ಪಾತ್ರಗಳು


ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಹೀಗೆ ಸಾಹಿತ್ಯಕವಾದ ಪರಿಣಾಮಕಾರಿ ಅಂಶಗಳಿಂದ ಡಾ. ಅಜಿತ್ ಹರೀಶಿ ಅವರ ‘ಮೂಚಿಮ್ಮ’ ಸಂಕಲನದಲ್ಲಿಯ ಕಥೆಗಳು ಓದುಗರ ಹೃದಯವನ್ನು ತಟ್ಟುತ್ತವೆ ಎಂದು ಲೇಖಕ ಹರೀಶ ಕೇರ ಅವರು ಪ್ರಶಂಸಿಸಿ ಬರೆದ ಮುನ್ನುಡಿ ಇಲ್ಲಿದೆ.

ಕತೆ ಹೇಳುವುದು ಮುಖ್ಯ ಎಂಬ ಪರಂಪರೆಗೆ ಸೇರಿದವರು ಅಜಿತ್ ಹರೀಶಿ. ಸಾವಕಾಶವಾಗಿ, ಕವಳ ಹಾಕುತ್ತಾ, ಸುತ್ತ ನೆರೆದವರ ಮೇಲೆ ತಮ್ಮ ಕತೆಯ ಪ್ರಭಾವ ಆಗುತ್ತಿದೆಯೇ ಎಂದು ನೋಡಿಕೊಳ್ಳುತ್ತಾ, ಕೆಲವೊಮ್ಮೆ ಕ್ಲೈಮ್ಯಾಕ್ಸ್‌ನಲ್ಲಿ ಕತೆಯನ್ನು ನಿಲ್ಲಿಸಿ ಅಂಗಳದ ತುದಿಗೆ ಹೋಗಿ ಚರಟ ಉಗಿದು ಬಾಯಿ ಮುಕ್ಕಳಿಸಿ ಬಂದು ಕತೆ ಮುಂದುವರಿಸುವ ಹಿರಿಯರನ್ನು ನೀವು ನೋಡಿರುತ್ತೀರಿ. ಅಂಥ ಒಂದು ಸಾವಧಾನ ಮತ್ತು ಕತೆ ಹೇಳಿ ಆತ್ಮೀಯತೆ ಬೆಳೆಸಿಕೊಳ್ಳುವ ಕೌಶಲ ಅಜಿತ್ ಅವರಿಗೆ ಒಲಿದಿದೆ. ಪುಟ್ಟ ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರು ತಮ್ಮ ಊರಿನ ಬೇರಿನ ನಂಟನ್ನು ಸಾಕಷ್ಟು ಹೊಂದಿರುತ್ತಾರೆ. ಯಾಕೆಂದರೆ ಪ್ರತಿ ವ್ಯಕ್ತಿಯ ಚೆಹರೆಗಳನ್ನು ಆಳವಾಗಿ ನೋಡುವ, ಪ್ರತಿ ಘಟನೆಯನ್ನೂ ವಿವರವಾಗಿ ಮೆಲುಕುಹಾಕುವ ವಿಶಿಷ್ಟ ವ್ಯವಧಾನವೊಂದು ಅವರಲ್ಲಿರುತ್ತದೆ. ಮಲೆನಾಡಿನ ಸೊರಬದಲ್ಲಿ ಹುಟ್ಟಿ, ಶಿರಸಿ ಮುಂತಾದ ಕಡೆ ಬೆಳೆದ ಅಜಿತ್ ಅವರ ಕತೆಗಳಲ್ಲೂ ಇದು ಕಾಣಿಸುತ್ತದೆ.

ಉದಾಹರಣೆಗೆ ಅವರ ಮೂಚಿಮ್ಮ ಎಂಬ ಕತೆಯನ್ನೇ ನೋಡಬಹುದು. ಅದರಲ್ಲಿ ಹಳ್ಳಿಯ ನಾಟಿಮದ್ದು ನೀಡುವ ಮೂಚಿಮ್ಮ ಎಂಬ ಮುದುಕಿ, ಕತೆಯ ಮುಖ್ಯ ವ್ಯಕ್ತಿಯಾಗಿರುವ ರವೀಶ ಎಂಬಾತನ ಮನೆಗೆ ಬರುತ್ತಾಳೆ. ತನ್ನ ನಾಟಿ ಮದ್ದಿನ ಕೌಶಲವನ್ನು ಆತನಿಗೆ ನೀಡುವುದು ಉದ್ದೇಶ. ಆದರೆ ಒಳ ಉದ್ದೇಶವೊಂದು ಗುಪ್ತಗಾಮಿನಿಯಾಗಿ ಇರುವುದು ಆಕೆ ಹೋದ ನಂತರವಷ್ಟೇ ಗೋಚರವಾಗುತ್ತದೆ. ಅದೇನು ಎಂಬುದನ್ನು ಕತೆಗಾರ ನೇರವಾಗಿ ಹೇಳುವುದಿಲ್ಲ. ಆದರೆ ಅದು ಗೊತ್ತಾಗುವ ಕ್ಷಣದಲ್ಲಿ ಈತನ ಮನದಲ್ಲಿ ಉಂಟಾಗುವ ಪ್ರಲೋಭನೆಯ ಒಂದು ಕ್ಷಣವನ್ನು ಹೌದೋ ಅಲ್ಲವೋ ಎಂಬಂತೆ ಕ್ವಚಿತ್ತಾಗಿ ಕಾಣಿಸುವುದು ಕತೆಗಾರನ ಕೌಶಲವೇ ಸರಿ.

ಅಜಿತ್ ತಮ್ಮ ಕತೆಗಳ ಪಾತ್ರಗಳನ್ನು ತೀರಾ ನೋಯಿಸಲಾರರು. ಹಾಗೆಯೇ ಒಳ್ಳೆಯತನದ ಮೇಲೆ ಅವರಿಗೆ ತುಂಬಾ ನಂಬಿಕೆ. ಈ ಸಂಕಲನದ ಮೊದಲ ಕತೆ ‘ಆವಿ’ ಯಲ್ಲಿ ಬರುವ ಶರತ್, ದಿಶಾ ಮತ್ತು ಸುನಿಲ್ ಎಂಬ ಪಾತ್ರಗಳನ್ನು ನೋಡಿ. ಅವು ಜೀವನದಲ್ಲಿ ಹಲವು ಆಘಾತಗಳನ್ನು ಕಾಣುತ್ತವೆ. ಶರತ್‌ನ ಮೆಡಿಕಲ್ ಡಿಗ್ರಿ ನಿಷ್ಪ್ರಯೋಜಕ ಆಗುತ್ತದೆ, ಆತ ತನ್ನ ಪುರುಷತ್ವ ಕಳೆದುಕೊಳ್ಳುತ್ತಾನೆ. ಆದರೆ ದಿಶಾಗೆ ಆಕೆಯ ಜೀವನವನ್ನು ಬೇರೆ ರೀತಿಯಲ್ಲಿ ಕಟ್ಟಿಕೊಳ್ಳುವ ಅವಕಾಶ ನೀಡುವಷ್ಟು ಆತ ಸಹೃದಯಿ. ಆದರೆ ಈ ಪಾತ್ರಗಳು ಮತ್ತೆ ಪ್ರೀತಿಯ ಬೆಳಕಿನಲ್ಲಿ ತಮ್ಮ ಜೀವನವನ್ನು ಕಟ್ಟಿಕೊಳ್ಳುವಂತೆ ಕತೆಗಾರ ಮಾಡುತ್ತಾರೆ.

 

ಕತೆ ಓದುಗನ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಉಳಿಸಬೇಕು ಎಂಬುದರಲ್ಲಿ ಅಜಿತರಿಗೆ ಅಷ್ಟೊಂದು ವಿಶ್ವಾಸವಿಲ್ಲ. ಹಾಗೆ ಪ್ರಶ್ನೆಯನ್ನು ಉಳಿಸಲೇಬೇಕೆನ್ನಲು ಕತೆಯೆಂದರೇನು ಕ್ವಿಜ್ ಕಾರ್ಯಕ್ರಮವೇ. ಉದಾಹರಣೆಗೆ ವಿಲಿಪ್ತ ಎಂಬ ಕತೆಯಲ್ಲಿ ಅವರು ಸ್ವಾಮೀಜಿಯೊಬ್ಬನ ಕತೆಯನ್ನು ಎತ್ತಿಕೊಳ್ಳುತ್ತಾರೆ. ಈ ಸ್ವಾಮೀಜಿ ದುರುಳನಲ್ಲವಾದರೂ ಸಮಯ ಸಂದರ್ಭಕ್ಕೆ ಬಲಿ ಬಿದ್ದು ಸ್ತ್ರೀ ವ್ಯಾಮೋಹ ಬೆಳೆಸಿಕೊಳ್ಳುವನು. ಅದರಿಂದಾಗಿ ಉಂಟಾಗುವ ಆತನ ಅಂತರಂಗದ ತುಮುಲ ಮುಖ್ಯವಾದುದು. ಇದು ನಮ್ಮ ಸಮಾಜದ ಹಲವು ಗುರೂಜಿಗಳನ್ನು ನೆನಪಿಸಿದರೆ ಆಶ್ಚರ್ಯವಿಲ್ಲ. ಆದರೆ ಅಜಿತರಿಗೆ ಈ ಸನ್ನಿವೇಶದ ರೋಚಕ ವಿವರಗಳಿಗಿಂತಲೂ, ಅಂಥ ಸಂಬಂಧಗಳು ಅದರಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲಿ ಎಂಥ ವಿಷಣ್ಣತೆ ಅಥವಾ ನಿರ್ವಾತವನ್ನು ಸೃಷ್ಟಿಸುತ್ತದೆ ಎಂಬುದು ಮುಖ್ಯ. ಮತ್ತು ಅದನ್ನು ಅವರು ನೇರವಾಗಿ ಹೇಳಿ ಕತೆಯನ್ನು ಮುಗಿಸುವ ಹಾದಿಯನ್ನು ಹಿಡಿಯುತ್ತಾರೆ.

ಹೆಣ್ಣು- ಗಂಡಿನ ಸಂಬಂಧವನ್ನು ಅಜಿತ್ ಒಂದು ವಿಶಿಷ್ಟ ಬಗೆಯಲ್ಲಿ ನಿರ್ವಹಿಸುತ್ತಾರೆ. ಉದಾಹರಣೆಗೆ ಪತನ ಎಂಬ ಕತೆಯನ್ನು ನೋಡಬಹುದು. ಅಲ್ಲಿ ಬರುವ ವಿನಯಮಾಧವ ಕತೆಗಾರ, ಚಿಂತಕ, ಲೇಖಕ. ಸಾಹಿತ್ಯಕ ಸೃಷ್ಟಿಶೀಲತೆಯ ಜೊತೆಗೆ ಲೈಂಗಿಕ ಸೃಷ್ಟಿಶೀಲತೆಯೂ ಸೇರಿಕೊಂಡ ಒಂದು ವ್ಯಕ್ತಿತ್ವ ಆತನದು. ನಮ್ಮ ಕಣ್ಣ ಮುಂದೆ ಕಾಣುವ ಅನೇಕ ಲೇಖಕರಂತೆ ಆತನೊಂದು ವರ್ಣರಂಜಿತ ವ್ಯಕ್ತಿ. ಇಂಥವನ ದಾಂಪತ್ಯದಲ್ಲಿ ಇರುವ ಹೆಣ್ಣು, ಅವನ ಪತ್ನಿ ಅವನ ಏರುಮುಖವನ್ನು ಕಂಡಂತೆ ಅವನ ಪತನವನ್ನೂ ಕಾಣಬಲ್ಲಳು. ಅದು ಆತನನ್ನು ತಿಂದುಹಾಕುವ ಸನ್ನಿವೇಶದಲ್ಲಿ ಆಕೆ ಬರೆಯುವ ಆತನ ಕತೆ ಅವಳ ಆಂತರಿಕ ಸಂಘರ್ಷದ ಪ್ರತಿಫಲನ. ಆತನನ್ನು ಬೆತ್ತಲೆ ಮಾಡಬೇಕೋ ಬೇಡವೋ ಎಂಬ ಸಂಘರ್ಷದಲ್ಲಿ ಆಕೆಯ ನಲುಗುವಿಕೆಯನ್ನು ಅಜಿತ್ ಕಾಣಿಸುವ ರೀತಿ ಸೂಕ್ಷ್ಮವಾದುದು. ಇಂಥ ಕಡೆ ಅಜಿತ್‌ಗೆ ಭಾಷೆ ಹಾಗೂ ಭಾವದ ಸಮ್ಮಿಶ್ರಿತ ಕುಸುರಿಯೊಂದು ಒಲಿಯುತ್ತದೆ.

ದಹನ ಎಂಬ ಕತೆಯಲ್ಲಿ ಇನ್ನೊಂದು ಬಗೆಯ ಸಂಘರ್ಷವನ್ನು ಅವರು ಮುಂದಿಡುತ್ತಾರೆ. ಅಲ್ಲಿ ಗಂಗಾಧರ ಎಂಬ, ಕನಸಿನಲ್ಲಿ ಬಂದದ್ದೆಲ್ಲ ನಿಜವಾಗುವ ಅವಧೂತನೊಬ್ಬನಿದ್ದಾನೆ. ಆತನ ಆಶ್ರಮ ಸಮಕಾಲೀನ ರಾಜಕೀಯ, ಆರ್ಥಿಕತೆ, ಬದುಕು ಎಲ್ಲದಕ್ಕೂ ತಳುಕುಹಾಕಿಕೊಂಡಿದೆ. ಅವನ ಮೂಲಕವೇ ನದಿ ದಾಟಿಸಿಕೊಂಡು ಮುಂಬಯಿಗೆ ಹೋಗಿ ಪಾಪದ ಹಣ ದುಡಿದ ವ್ಯಕ್ತಿ, ಮರಳಿ ಊರಿಗೆ ಬಂದಾಗ ಕಾಣುವ ಗಂಗಾಧರನ ಕತೆಯನ್ನು ಮುಖಾಮುಖಿಯಾಗಿಸಿ, ತನ್ನ ಜೀವನದ ಹೋರಾಟ ಮತ್ತು ವ್ಯರ್ಥತೆಯನ್ನೂ ಕಾಣಿಸುತ್ತಾನೆ. ಗಂಗಾಧರನಿಗೆ ಇಬ್ಬರ ಸಾವಿನ ಕನಸುಗಳೂ ಬೀಳುತ್ತವೆ. ಮೊದಲು ಮೊದಲು ಉತ್ಕರ್ಷದ ಕನಸುಗಳನ್ನು ಕಾಣುತ್ತಿದ್ದ ಗಂಗಾಧರ ಇತ್ತೀಚೆಗೆ ಬರೀ ಸಾವಿನ ಕನಸುಗಳನ್ನು ಕಾಣುತ್ತಿದ್ದಾನೆ. ಅವನ ಅಂತಃಪ್ರಜ್ಞೆ ಅವನಿಗೆ ಸಾವಿನ ಕನಸನ್ನು ಊಡುತ್ತಿದೆಯೋ ಅಥವಾ ಅವನೇ ತನ್ನ ಕನಸಿಗೆ ಸಾವಿನ ಪಥವನ್ನು ನಿರ್ದೇಶಿಸುತ್ತಿದ್ದಾನೆಯೋ ತಿಳಿಯುವುದಿಲ್ಲ. ಬದುಕಿನ ವ್ಯರ್ಥತೆಯೂ ಬದುಕಿಲ್ಲದ ಮತ್ತು ಸಾವಿಲ್ಲದ ಕನಸು ಎಂದು ಹೇಳಲು ಕತೆ ಮುಂದಾಗಿದೆಯೇ ಎಂಬ ಪ್ರಶ್ನೆಯನ್ನು ಕೇಳಬೇಕೆನಿಸುತ್ತದೆ.

ನಟ- ಎಂಬ ಹೆಸರಿನ ಕತೆ ಅಜಿತರ ಕತೆಗಳಲ್ಲೆಲ್ಲ ಸ್ವಲ್ಪ ಬೇರೆಯಾಗಿ ನಿಲ್ಲುವಂಥದು. ಸಾಂಕೇತಿತೆ ಅಥವಾ ಪ್ರತಿಮಾ ವಿಧಾನ ಎಂದು ಗುರುತಿಸಬಹುದಾದ ಒಂದು ಪ್ರಯೋಗವನ್ನು ಅವರು ಇಲ್ಲಿ ಮಾಡಿದ್ದಾರೆ. ಆದರೆ ಇದು ಸಹಜವಾಗಿಯೇ ಮೂಡಿದ ಹಾಗೆ ಇದೆ. ಯುವಂತಿಕಾ ಎಂಬ ನಟಿ, ತನ್ನ ಕೆರಿಯರ್ ಉದ್ಧಾರಕ್ಕಾಗಿ ಏನನ್ನು ಬೇಕಿದ್ದರೂ ಮಾಡಬಲ್ಲ ನಟಿ, ನಟರಾಜ ಎಂಬ ಹಳ್ಳಿಯ ಯುವಕನ ಜೊತೆಗೆ ವ್ಯವಹರಿಸುವಾಗ ಎಲ್ಲ ನಟನೆಯನ್ನು ಹಿಂದೆ ಬಿಟ್ಟು ಬರಿಯ ತಾನೇ ಆಗುತ್ತಾಳೆ. ಹಳ್ಳಿಯ ಯುವಕನಾದ ನಟರಾಜ, ಯುವಂತಿಕಾಳ ಜೊತೆ ವ್ಯವಹರಿಸುವಾಗ ತನ್ನ ಸಹಜತೆಯನ್ನು ಮರೆತು ನಟಿಸುತ್ತಾನೆ. ಯುವಂತಿಕಾ ಹಾಗೂ ನಟರಾಜ - ಇಬ್ಬರ ಪಾತ್ರಗಳೂ ಅದಲುಬದಲಾಗುವ, ನಟನೆ ಮತ್ತು ಮುಗ್ಧತೆ- ಎರಡೂ ಕೈ ಕೈ ಮಿಲಾಯಿಸುವ ಅಥವಾ ಧಿಕ್ಕರಿಸಿಕೊಳ್ಳುವ ಒಂದು ವಿಶಿಷ್ಟ ಕತೆ, ಸನ್ನಿವೇಶವನ್ನು ಅಜಿತ್ ಇಲ್ಲಿ ತರುತ್ತಾರೆ. ಪಂಚಮಿ ಎಂಬ ಪುಟ್ಟ ಜಿಂಕೆ ಮರಿ ಈ ಕತೆಯಲ್ಲಿ ಐಸ್‌ಕ್ರೀಮ್‌ನ ಮೇಲೆ ಬರುವ ಚೆರ್ರಿ ಹಣ್ಣಿನಂತೆ ಇದೆ. ಅಜಿತ್‌ರ ಅತ್ಯುತ್ತಮ ಕತೆ ಇದೆಂದು ಹೇಳಬಹುದು.

ಎಲ್ಲ ಒಳ್ಳೆಯ ಕತೆಗಾರರಂತೆ ಅಜಿತರಿಗೂ ಮಾನವ ಸಂಬಂಧಗಳೇ ಪ್ರಮುಖ. ಅವರು ಪಾತ್ರಗಳನ್ನು ನಡುನೀರಿನಲ್ಲಿ ಕೈಬಿಡದೆ ನಮ್ಮ ಹೃದಯದವರೆಗೂ ತಂದು ಬಿಡುತ್ತಾರೆ. ಅಲ್ಲಿಂದ ಅವುಗಳನ್ನು ಮುನ್ನಡೆಸುವುದು ಅಥವಾ ಕೈಬಿಡುವುದು ನಮಗೇ ಬಿಟ್ಟದ್ದು. ಹಲವು ವರ್ಷಗಳಿಂದ ನಿರಂತರ ಬರೆಯುತ್ತಿರುವ ಅಜಿತರ ಮೂರನೇ ಕತೆ ಸಂಕಲನ, ಅವರ ದಾರಿಯನ್ನು ಸ್ಪಷ್ಟಗೊಳಿಸಿದಂತಿದೆ. ಅಜಿತ್ ಹೀಗೇ ನಮ್ಮನ್ನು ಮುದಗೊಳಿಸುತ್ತಿರಲಿ.

MORE FEATURES

ಕೋಮುವಾದಿ ಚಕ್ರವ್ಯೂಹ ಭೇದಿಸುವವರ ಕೈಪಿಡಿ ‘ನಡು ಬಗ್ಗಿಸದ ಎದೆಯ ದನಿ’

29-03-2024 ಬೆಂಗಳೂರು

'ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧ...

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...