ಹುರಿಗೆಜ್ಜೆ: ನಡೆದು ಬಂದ ಹಾದಿಯ ಕುರುಹು


ತಣ್ಣಗೆ ಹರಿಯುವ ನದಿಯಂತೆ ಹುರಿಗೆಜ್ಜೆ ಕವನ ಸಂಕಲನದ ಕವಿತೆಗಳು ಓದುಗನಿಗೆ ಮುಖಾಮುಖಿಯಾಗುತ್ತವೆ. ಭಾವಸೂಕ್ಷ್ಮತೆಯೇ ಇಲ್ಲಿನ ಕಾವ್ಯದ ಉಸಿರು. ಕೌಟುಂಬಿಕ ಪ್ರೀತಿಯ ಹೊಸ ಭಾಷೆಯೊಂದು ಮಡಿವಾಳರ ಕವಿತೆಗಳಲ್ಲಿ ಮೈದಳೆಯುತ್ತದೆ ಎನ್ನುತ್ತಾರೆ ವಿಮರ್ಶಕ ಸಿ. ಎಸ್. ಭೀಮರಾಯ. ಅವರು ರಾಜಕುಮಾರ ಮಡಿವಾಳರ ಅವರ ‘ಹುರಿಗೆಜ್ಜೆ’ ಕವನ ಸಂಕಲನದ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಹುರಿಗೆಜ್ಜೆ
ಲೇ: ರಾಜಕುಮಾರ ಮಡಿವಾಳರ
ಪುಟ:80
ಬೆಲೆ: 80
ಪ್ರಕಾಶನ: ಕನಸು ಪ್ರಕಾಶನ, ರಟ್ಟೀಹಳ್ಳಿ

ರಾಜಕುಮಾರ ಮಡಿವಾಳರ ನಮ್ಮ ನಡುವೆ ಹೊಸ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ಕವಿ ಮತ್ತು ಲೇಖಕ. ಗ್ರಾಮೀಣ ಪ್ರದೇಶದಿಂದ ಬಂದ ರಾಜಕುಮಾರ ಕನ್ನಡ ಸಾಹಿತ್ಯದ ಆಳವಾದ ಅಧ್ಯಯನ, ಸಾಹಿತ್ಯದ ಗಾಢ ಪ್ರೀತಿಯನ್ನಿಟ್ಟುಕೊಂಡು ಬರವಣಿಗೆಯ ಬೆನ್ನು ಹತ್ತಿ ಹೊರಟಿದ್ದಾರೆ.

ಪ್ರಸ್ತುತ ‘ಹುರಿಗಜ್ಜೆ’ ರಾಜಕುಮಾರ ಮಡಿವಾಳರ ದ್ವಿತೀಯ ಕವನಸಂಕಲನ. ಐವತ್ತೇಳು ಕವಿತೆಗಳು ಈ ಸಂಕಲನದಲ್ಲಿವೆ. 2013ರಲ್ಲಿ ಅವರ ‘ಹಣೆಬರಹವಿಲ್ಲದ ಹಾಡುಗಳು’ ಸಂಕಲನ ಪ್ರಕಟವಾಗಿದೆ. ‘ಹುರಿಗೆಜ್ಜೆ’ ಕವನಸಂಕಲನದಲ್ಲಿ ಕವಿಯ ಕಾವ್ಯಪ್ರಜ್ಞೆಯನ್ನು ಗಾಢವಾಗಿ ಕಲಕಿದವರು ಅಪ್ಪ. ಅಪ್ಪನ ನಿರ್ಗಮನದಿಂದ ಹುಟ್ಟಿದ ಭಾವತೀವ್ರತೆಯೇ ಈ ಕವಿತೆಗಳ ಕುದಿಬಿಂದು. ಇಲ್ಲಿನ ಯಾವ ಮಗ್ಗುಲನ್ನು ತಟ್ಟಿದರೂ ಅಪ್ಪನ ವ್ಯಕ್ತಿತ್ವವೇ ಹೊಳೆಯುತ್ತದೆ. ಅಪ್ಪನ ಇರುವಿಕೆ, ಇಲ್ಲದಿರುವಿಕೆ ಎರಡೂ ಕಾವ್ಯಕ್ಕೆ ಹೊಸ ಮೆರಗು ತಂದಿವೆ. ಜೊತೆಗೆ ಪ್ರೀತಿ, ವಾತ್ಸಲ್ಯಭಾವ, ಸ್ನೇಹ, ನಂಬಿಕೆ, ಹಗಲು, ನದಿ, ಇರುಳು, ಮಹಿಳೆ, ಮಗು, ಹಣತೆ-ಹೀಗೆ ತನ್ನ ಅನುಭವಕ್ಕೆ ನಿಲುಕುವ ವಸ್ತುಗಳನ್ನು ಕವಿತೆಯಾಗಿಸಲು ರಾಜಕುಮಾರ ಪ್ರಯತ್ನಿಸಿದ್ದಾರೆ. 

ಅವರ ಕವಿತೆಗಳು ಓದುಗನನ್ನು ದಿಕ್ಕು ತಪ್ಪಿಸುವುದಿಲ್ಲ. ಹಾಗೆಯೇ ಬೆಚ್ಚಿ ಬೀಳಿಸುವುದೂ ಇಲ್ಲ. ಆದರೆ ತಣ್ಣಗೆ ಹರಿಯುವ ನದಿಯಂತೆ ಸಂಕಲನದ ಕವಿತೆಗಳು ಓದುಗನಿಗೆ ಮುಖಾಮುಖಿಯಾಗುತ್ತವೆ. ಭಾವಸೂಕ್ಷ್ಮತೆಯೇ ಇಲ್ಲಿನ ಕಾವ್ಯದ ಉಸಿರು. ಕೌಟುಂಬಿಕ ಪ್ರೀತಿಯ ಹೊಸ ಭಾಷೆಯೊಂದು ಮಡಿವಾಳರ ಕವಿತೆಗಳಲ್ಲಿ ಮೈದಳೆಯುತ್ತದೆ. ಬೇಂದ್ರೆಯವರ ಕವಿತೆಗಳಿಂದ ಪ್ರಭಾವಿತಗೊಂಡಿದ್ದು ಆರ್ದ್ರತೆ ಇಲ್ಲಿನ ಭಾಷೆಯ ಮುಖ್ಯ ಗುಣ. ಅಲ್ಲದೆ ಗ್ರಾಮೀಣ ಜೀವನಕ್ಕೆ ಸೇರಿದ ಸಂಗತಿಗಳು ಕಾವ್ಯಭಾಷೆಗೆ ಹೊಳಪು ಒದಗಿಸಿವೆ.

ರಾಜಕುಮಾರ ಯಾವುದೇ ನಿರ್ದಿಷ್ಟ ಕಾವ್ಯಪಂಥದ ಹಂಗಿಲ್ಲದೆ ಬರೆಯುತ್ತಾರೆ. ಆದ್ದರಿಂದಲೇ ಅವರು ತಮ್ಮ ಧ್ವನಿಯನ್ನು ತಮ್ಮದೇ ಭಾಷೆಯಲ್ಲಿ ಕಂಡುಕೊಳ್ಳುವಂತಾಗಿದೆ. ಕವಿ ರಾಜಕುಮಾರ ಭಾವುಕ. ಆರ್ದ್ರ ಭಾವಗಳ ಎರಕ ಹೊಯ್ಯುವ ಅವರ ಕಾವ್ಯ ನಿಜಕ್ಕೂ ರೂಪಕ.

ಕಾಲೂರಿದಷ್ಟು ಮಲ್ಲಿಗೆ ನೆಲ
ಇಂದಿಗೂನು ಹಾದಿ ತುಂಬ ನಿನ್ನ ಮಾತ
ಇರಬೇಕಿತ್ತು ಇನ್ನೀಸು ದಿನ, ಯಾವ ಮುನಿಸು?
ಹ್ಯಾಂಗ ಬಿಟ್ಟು ಹ್ವಾದಿ? ಎದಿ ತನಕ
ಬೆಳೆದು ನಿಂತ ಈ ನಿನ್ನ ಕನಸು!
 (ಅಪ್ಪ-1)

ಸ್ವಗತವೆಂಬಂತೆ ದಾಖಲಾಗಿರುವ ‘ಅಪ್ಪ’ನ ಕುರಿತು ಬರೆದ ಇಪ್ಪತ್ತೆರಡು ಕವಿತೆಗಳಲ್ಲಿ ದುಃಖ ಮಡುಗಟ್ಟಿದೆ, ಕರುಣಾರಸ ಹರಿದಿದೆ. ಅನೇಕ ಕವಿತೆಗಳು ಸಾವು ಮತ್ತು ನೆನಪುಗಳ ಸಮ್ಮಿಶ್ರ ಒಗರಿನೊಂದಿಗೆ ಮನಸ್ಸನ್ನು ಮೃದುವಾಗಿ ತಟ್ಟುತ್ತವೆ. ಕವಿ ತನ್ನನ್ನು ತಾನೇ ಸಂಭಾಳಿಸಿಕೊಳ್ಳುವುದಕ್ಕೆ ಬರೆದಂತಿರುವ ಈ ಕವಿತೆಗಳು ಅದೇ ವೇಳೆಗೆ ಸಾರ್ವತ್ರಿಕ ಅನುಭವವೂ ಆಗುತ್ತವೆ. ಆದರೆ ನಡುನಡುವೆ ಕೆಲವು ಕವಿತೆಗಳು ಏನನ್ನೂ ಹೇಳದೆ ಕೇವಲ ಹಳಹಳಿಕೆಗಳಲ್ಲಿ ಮುಗಿದುಹೋಗುತ್ತವೆ. ಆದರೆ ಕವಿತೆ ಕಟ್ಟುವ ಕ್ರಮದ ಮೇಲಿನ ಹಿಡಿತ ಮಾತ್ರ ಎದ್ದು ಕಾಣುತ್ತದೆ.

ನಿಂತಲ್ಲೇ ನಿಂತವರಿಗೆ ನಿಂತಲ್ಲಿ ಬೇರೆ!
ನಿಂತು ನೋಡುವ ಕಣ್ಣು, ಕಣ್ಗೊಂಬೆ ತುಂಬಿ
ತುಳುಕಿ ಕೂಡಿರುವ ದಿಗಿಲೇ ಬೇರೆ!
(ನೆಲ-ಮುಗಿಲು)

ಈ ಸಂಕಲನದ ಅನೇಕ ಕವಿತೆಗಳದು ಒಳಮುಖವಾದ, ವಿಚಾರಶೀಲತೆಯ, ಕೇಳಿಸಿಯೂ ಕೇಳಿಸದಂತಹ ಮೃದುವಾದ ಧಾಟಿ. ಅಪಾರವನ್ನು ಸಂಗ್ರಹವಾಗಿ ಹೇಳುವ, ಭಾವನೆಗಳನ್ನು ಹದ್ದುಮೀರದಂತೆ ನಿಯಂತ್ರಿಸುವ ಮತ್ತು ಅನುಭವವನ್ನು ಹೊಸದೇ ಆಕೃತಿಯಲ್ಲಿ ಹಿಡಿದುಕೊಡುವ ಈ ಧಾಟಿಯಿಂದಾಗಿ ಕೆಲವು ಕವಿತೆಗಳು ಬಹುಮಟ್ಟಿಗೆ ನೇರವಾಗಿ ಹೃದಯದಿಂದಲೇ ಮೂಡಿಬಂದಂತಿವೆ; ಸ್ವಚ್ಛಂದವಾಗಿದ್ದೂ ಬಂಧ ಮತ್ತು ಲಯಗಳ ಆಸರೆಯನ್ನು ಬಿಟ್ಟುಕೊಡದೆ ಅತ್ಯಂತ ಎಚ್ಚರದಿಂದ ರೂಪುಗೊಂಡಿವೆ. ಕಾವ್ಯದ ಭಾಷೆ, ಬಂಧ ಮತ್ತು ಲಯಗಾರಿಕೆಗಳನ್ನು ಸಾಧಿಸಿರುವ ರಾಜಕುಮಾರ ಮಡಿವಾಳರ ಸಮಕಾಲೀನ ಸಾಮಾಜಿಕ ಸಂಗತಿಗಳ ಕಡೆ ಹೆಚ್ಚು  ಗಮನ ಹರಿಸದಿರುವುದು ದೊಡ್ಡ ಮಿತಿಯಾಗಿ ಕಾಣುತ್ತದೆ. ಈ ಮಿತಿಯ ನಡುವೆಯೂ  ‘ಹುರಿಗೆಜ್ಜೆ’ ಸಂಕಲನದ ‘ಹಾರಬಾರದೆ’, ‘ನೆಲ-ಮುಗಿಲು’, ‘ಹೊಸ ಬದುಕು’, ‘ದನಕಾಯ್ವ ದುರ್ಗವ್ವ’, ‘ಕೊಡೆಯವ’ದಂಥ ಕವಿತೆಗಳನ್ನು ಮರೆಯುವಂತಿಲ್ಲ. ಅವು ಉತ್ತಮ ರಚನೆಗಳಾಗಿದ್ದು ಭರವಸೆಯನ್ನು ಮೂಡಿಸುತ್ತವೆ.

ರಾಜಕುಮಾರ ಮಡಿವಾಳರ ಅವರ ಹೆಚ್ಚಿನ ಮಾಹಿತಿ ಇಲ್ಲಿದೆ..
‘ಹುರಿಗೆಜ್ಜೆ’ ಕವನ ಸಂಕಲನದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

ಸಿ.ಎಸ್. ಭೀಮೃಆಯ ಅವರ ಪರಿಚಯ ಇಲ್ಲಿದೆ..

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...