ಜಾತಿ ಪದ್ಧತಿಯ ಮೈಮನಗಳು-ಹನ್ನೆರಡನೇ ಕಂತು

Date: 15-11-2020

Location: .


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಹನ್ನೆರಡನೇ ಕಂತಿನ ಬರಹ ಇಲ್ಲಿದೆ.

ನಾಲ್ಕು ವರ್ಣಗಳನ್ನೊಳಗೊಂಡ ಶ್ರೇಣೀಕೃತ ವ್ಯವಸ್ಥೆಯೊಂದನ್ನು ಪರಿಕಲ್ಪಿಸಿಕೊಳ್ಳುವುದು ಕಷ್ಟಸಾಧ್ಯವಾದ ಮಾತಾಗಿರಲಿಲ್ಲ. ಆದರೆ ನಗರೀಕರಣದ ಪ್ರಕ್ರಿಯೆಯು ತೀವ್ರಗೊಳ್ಳುತ್ತ ಹೋದಂತ ಈ ವ್ಯವಸ್ಥೆಯ ಪಾಲನೆಯು ಮೇಲಿಂದ ಮೇಲೆ ಗೊಂದಲಗಳನ್ನು ಹುಟ್ಟು ಹಾಕಿತು. ಕೋಸಲ, ಮಗಧ ಇತ್ಯಾದಿ ಪ್ರದೇಶಗಳಲ್ಲಿ ರಾಜ್ಯಗಳ ನಿರ್ಮಾಣ ಕಾರ್ಯ ಮುಂದೆ ಸಾಗಿದಂತೆ ಕ್ಷತ್ರಿಯರಲ್ಲದ ಹಿನ್ನೆಲೆಗಳಿಂದ ಬಂದ ಅನೇಕ ಮನೆತನಗಳು ಆಡಳಿತ ಪರಿಯಂತ್ರವನ್ನು ತಮ್ಮ ಹತೋಟಿಗೆ ತಂದುಕೊಳ್ಳುವಲ್ಲಿ ಯಶಸ್ವಿಯಾದರು. ಮಗಧದಲ್ಲಿ ಬಿಂಬಿಸಾರನ ಮನೆತನದ ಆಳ್ವಿಕೆ ಕೊನೆಗೊಂಡ ಮೇಲೆ ಹೊಸ ರಾಜ್ಯವನ್ನು ಸ್ಥಾಪಿಸಿದ ಶಿಶುನಾಗ ಎಂಬಾತ ಕ್ಷತ್ರಿಯನಾಗಿದ್ದ ಎಂಬ ಉಲ್ಲೇಖವನ್ನು ಎಲ್ಲಿಯೂ ಕಾಣೆವು. ಈತನ ಮನೆತನಕ್ಕೆ ಸೇರಿದ ಅರಸರಲ್ಲಿ ಕಾಕವರ್ಣ (ಇವನನ್ನು ಕಾಲಾಶೋಕ ಎಂದೂ ಕರೆಯಲಾಗಿದೆ), ನಂದಿವರ್ಧನ ಹಾಗೂ ಮಹಾನಂದಿ ಪ್ರಮುಖರು. ಈ ಮನೆತನದ ಕೊನೆಯ ಅರಸನನ್ನು (ಬಹುಶಃ ಮಹಾನಂದಿಯನ್ನು) ಕೊಂದು ಅಧಿಕಾರ ವಹಿಸಿಕೊಂಡ ಮಹಾಪದ್ಮನಂದನಾದರೂ ಕ್ಷತ್ರಿಯನಾಗಿರಲಿಲ್ಲ. ಇವನಿಂದ ಶುರುವಾದ ನಂದವಂಶದ ಆಳ್ವಿಕೆ ಮುಕ್ತಾಯ ಕಂಡಮೇಲೆ ಮಗಧವು ಮೌರ್ಯರ ವಶಕ್ಕೆ ಬಂತು. ಈ ಮೌರ್ಯರಾಗಲಿ ಅವರ ತರುವಾಯ ರಾಜ್ಯ ನಡೆಸಿದ ಶುಂಗರಾಗಲಿ ಕ್ಷತ್ರಿಯ ಕುಲಕ್ಕೆ ಸೇರಿದವರಾಗಿರಲಿಲ್ಲ.
ಈ ಕಾಲದ ಆಕರಗಳನ್ನು ವಿಶ್ಲೇಷಿಸಿದಾಗ ಕೃಷಿ, ವ್ಯಾಪಾರ ಮುಂತಾದ ವೃತ್ತಿಗಳನ್ನು ಕೈಗೊಳ್ಳಬೇಕಾದ ವೈಶ್ಯರು ರಾಜ್ಯಾಡಳಿತದಲ್ಲಿ ಪಾಲ್ಗೊಳ್ಳುವುದನ್ನು ಕಾಣುತ್ತೇವೆ. ಬ್ರಾಹ್ಮಣರು ತಮಗೆ ಹೇಳಿರದ ಕೃಷಿ, ವ್ಯಾಪಾರ, ಆಡಳಿತ ಮೊದಲಾದ ವ್ಯವಹಾರಗಳಲ್ಲಿ ತೊಡಗಿರುವುದನ್ನು ಹೇರಳವಾಗಿ ಕಾಣುತ್ತೇವೆ. ಶೂದ್ರರು ಕಾರ್ಷಿಕ ಜೀವನ ನಡೆಸುತ್ತಿದ್ದುದಕ್ಕೆ ನಿದರ್ಶನಗಳಿವೆ, ಅರಸುಗಳಾಗಿದ್ದುದಕ್ಕೆ ಉದಾಹರಣೆಗಳಿವೆ. ಇವು ಚಾತುರ್ವರ್ಣ್ಯದ ಸಿದ್ಧಾಂತಕ್ಕೂ ಚಾರಿತ್ರಿಕ ವಾಸ್ತವಕ್ಕೂ ನಡುವೆ ಅಪಾರವಾದ ಕಂದರವೊಂದು ನೆಲೆಗೊಂಡಿದ್ದುದನ್ನು ಸ್ಪಷ್ಟಪಡಿಸುವ ದತ್ತಾಂಶಗಳಾಗಿವೆ.
ಸಮಸ್ಯೆಗಳು ಇಲ್ಲಿಗೇ ಕೊನೆಗೊಳ್ಳಲಿಲ್ಲ. ನಗರಕೇಂದ್ರಿತ ಭೌತಿಕ ಪರಿಸರವೊಂದು ತನ್ನ ಎಲ್ಲ ವೈವಿಧ್ಯತೆ ಹಾಗೂ ಸಂಕೀರ್ಣತೆಯೊಂದಿಗೆ ಅನಾವರಣಗೊಳ್ಳುತ್ತ ಹೋದಂತೆ ಹಲವಾರು ಹೊಸ ವೃತ್ತಿಗಳೂ ಅಂಥ ವೃತ್ತಿಗಳಲ್ಲಿ ನಿರತರಾದ ಒಕ್ಕೂಟಗಳೂ ಕಾಣಿಸಿಕೊಳ್ಳತೊಡಗಿದವು. ಮೌರ್ಯ ಹಾಗೂ ಶುಂಗ ವಂಶಗಳ ಆಳ್ವಿಕೆಯ ದಿನಗಳಲ್ಲಿ ಸಾಂಚಿ, ಭಾರ್ಹುತ್, ತಕ್ಷಶಿಲೆಯೇ ಮೊದಲಾದ ಕೇಂದ್ರಗಳಲ್ಲಿ ಹೊಸ ವಾಸ್ತು ನಿರ್ಮಿತಿಗಳು ತಲೆದೋರಿದವು. ಸ್ತೂಪಗಳ ಮತ್ತು ಚೈತ್ಯಗಳ ನಿರ್ಮಾಣವು ಭರದಿಂದ ಸಾಗಿತು. ಗ್ರೀಕ್ ಜನರೊಂದಿಗೆ ಸಂಪರ್ಕ ಸ್ಥಾಪನೆಯಾದ ಮೇಲೆ ಆ ದೇಶದ ಶಿಲ್ಪಕಲೆಯ ಪ್ರೇರಣೆಯಿಂದ ಗಾಂಧಾರ, ಮಥುರಾ ಮೊದಲಾದ ಶಿಲ್ಪಕಲೆಯ ಶೈಲಿಗಳು ಏಳಿಗೆ ಪಡೆದವು. ಬುದ್ಧನ ಬದುಕಿಗೆ ಹಾಗೂ ಆತನ ಜಾತಕ ಕಥೆಗಳ ಪ್ರಸಂಗಗಳಿಗೆ ಸಂಬಂಧಿಸಿದ ಒಂಟಿ ಪ್ರತಿಮೆಗಳನ್ನೂ ಭಿತ್ತಿಯ ಮೇಲಿನ ಕೆತ್ತನೆಗಳನ್ನೂ ಹೆಚ್ಚೆಚ್ಚು ಪ್ರಮಾಣದಲ್ಲಿ ನಿರ್ಮಿಸಲಾಯ್ತು. ಇದನ್ನು ತಕ್ಷಶಿಲೆ, ಮಥುರಾ, ಸಾಂಚಿ, ಬಾರ್ಹುತ್, ಸಂತಿ (ಈ ಊರನ್ನು ಇತಿಹಾಸಕಾರರು ಸನ್ನತಿ ಎನ್ನುತ್ತಾರೆ), ಅಮರಾವತಿ, ನಾಗಾರ್ಜುನಕೊಂಡ, ಹೀಗೆ ಹತ್ತಾರು ಕಡೆಗಳಲ್ಲಿ ಕಾಣಬಹುದು.
ಇದರ ಜೊತೆಯಲ್ಲೇ ಬೌದ್ಧ ಭಿಕ್ಷುಗಳ ಚೈತ್ಯಗಳಿಗೆಂದು ಗುಡ್ಡಗಾಡು ಪ್ರದೇಶಗಳಲ್ಲಿ ಶಿಲೆಗಳನ್ನು ಕೊರೆದು ಗವಿಗಳನ್ನು ನಿರ್ಮಿಸುವ ಕಾರ್ಯವೂ ಚಾಲನೆ ಪಡೆಯಿತು. ಜೈನ ಮುನಿಗಳ ವಸತಿಯ ಸಲುವಾಗಿಯೂ ಇಂಥ ಗವಿಗಳನ್ನು ಕಟ್ಟಲಾಯ್ತು. ಅಜಂತಾ, ಎಲ್ಲೋರಾ, ಎಲಿಫಾಂಟಾ, ಕಾರ್ಲೇ, ಭಾಜಾ, ಬೇಡ್ಸಾ, ಜುನ್ನಾರ್, ಭುಬನೇಶ್ವರದ ಖಂಡಗಿರಿ ಮತ್ತು ಉದಯಗಿರಿ ಬೆಟ್ಟಗಳು, ಹೀಗೆ ಭಾರತದ ವಿವಿಧೆಡೆಗಳಲ್ಲಿ ಈ ಸಾಲಿಗೆ ಸೇರಿದ ಗವಿಗಳಿವೆ. ಇಂಥ ಎಲ್ಲ ವಾಸ್ತುನಿರ್ಮಿತಿಗಳೂ ಕ್ರಿ.ಪೂ. 300ರ ನಂತರ ಆರಂಭಗೊಂಡು ಕ್ರಿ.ಪೂ. 200 ಹಾಗೂ ಕ್ರಿ.ಶ. 200ರ ನಡುವಲ್ಲಿ ತನ್ನ ಉಚ್ಛ್ರಾಯ ಸ್ಥಿತಿ ತಲುಪಿತು. ಇವು ಹೊಸ ತರಹದ ದುಡಿಮೆಯ ಪ್ರರೂಪಗಳನ್ನು ಬಯಸುವ ನಿರ್ಮಿತಿಗಳಾಗಿದ್ದವು. ಕಲ್ಲುಕುಟಿಕರಿಂದ ಶಿಲ್ಪಿಗಳ ವರೆಗೆ ಹಲವು ರೀತಿಯ ಕಾಯಕವನ್ನು ಕೈಗೆತ್ತಿಕೊಂಡವರ ನೆರವಿಲ್ಲದೆ ಇಂಥ ವಾಸ್ತು ನಿರ್ಮಿತಿಗಳು ಸಾಧ್ಯವಿರಲಿಲ್ಲ. ಈ ಯಾವತ್ತು ಕಾಯಕಗಳು ಭಾರತದಲ್ಲಿ ಈ ಹಿಂದೆ ಇದ್ದಿರಲಿಲ್ಲ. ಹೀಗಾಗಿ, ಅವುಗಳ ತಂತ್ರವನ್ನು ಕಟ್ಟಿಕೊಳ್ಳುವುದು ಅಗತ್ಯವಾಗಿತ್ತು. ಅಷ್ಟೇ ಅಲ್ಲ, ಜನರನ್ನು ನಿರ್ಮಾಣ ಕಾರ್ಯಕ್ಕೆಂದು ನೇಮಿಸಿ ಅವರಿಗೆ ಅಗತ್ಯವಾದ ತರಬೇತಿಯನ್ನೂ ನೀಡಬೇಕಿತ್ತು.
ಅಶೋಕನ ಕಾಲದಿಂದೀಚೆಗೆ ಆರಂಭವಾದ ಮತ್ತೊಂದು ಕಾರ್ಯ ಶಾಸನಗಳ ಕೆತ್ತನೆ. ಇದು ಕೂಡ ಹಿಂದೆ ನಡೆದಿದ್ದಿರದ ಕೆಲಸವಾದ್ದರಿಂದ ತನ್ನದೇ ಆದ ತರಬೇತಿಯನ್ನು ಬಯಸುವ ಕೆಲಸವಾಗಿತ್ತು. ಶಾಸನಗಳ ಕೆತ್ತನೆ ಕೆಲವೊಮ್ಮೆ ಗವಿಗಳ ಒಳಗೆ ಛಾವಣಿಗಳ ಮೇಲೆ ನಡೆದಿತ್ತು. ಅಂಥ ಸಂದರ್ಭಗಳಲ್ಲಿ ಛಾವಣಿಯು ಎಂಟೋ ಹತ್ತೋ ಅದಕ್ಕಿಂತ ಹೆಚ್ಚೋ ಅಡಿ ಎತ್ತರದಲ್ಲಿದ್ದರೆ ಅಲ್ಲಿ ಅಕ್ಷರಗಳನ್ನು ಕೆತ್ತಲು ಬೇರೆಯದೇ ಸಾಮರ್ಥ್ಯದ ಅಗತ್ಯವಿತ್ತು. ಭುಬನೇಶ್ವರ ನಗರದ ಉದಯಗಿರಿ ಬೆಟ್ಟದಲ್ಲಿರುವ ಖಾರವೇಲನ ಹಾಥೀಗುಂಫಾ ಶಾಸನ ಅಂಥವುಗಳಲ್ಲಿ ಒಂದು. ಅಶೋಕನ ಸ್ತಂಭಶಾಸನಗಳಿಗೆ ಬಳಕೆಯಾದ ಮರಳುಗಲ್ಲು (ಸ್ಯಾಂಡ್ ಸ್ಟೋನ್) ಉತ್ತರ ಪ್ರದೇಶದ ಚುನಾರ್ ಎಂಬಲ್ಲಿಂದ ತಂದದ್ದು. ಈ ಸ್ತಂಭಗಳನ್ನು ಸಾಕಷ್ಟು ನಯವಾಗಿ ತಿಕ್ಕಿ ಮೆರುಗುಪಡಿಸಲಾಗಿದ್ದವು. ಅದಕ್ಕೆ ಬೇಕಾದ್ದು ಬೇರೆಯೇ ರೀತಿಯ ತರಬೇತಿ.
ನಾಣ್ಯಗಳು ಚಲಾವಣೆಗೆ ಬಂದ ಸಂದರ್ಭದಲ್ಲಿ ಟಂಕಸಾಲೆಗಳು ಸ್ಥಾಪಿತವಾದವು. ಅಲ್ಲಿಯೂ ಪ್ರತ್ಯೇಕ ಪ್ರಾವೀಣ್ಯ ಹೊಂದಿದ ಕುಶಲಕರ್ಮಿಗಳ ಅಗತ್ಯವಿತ್ತು. ಕ್ರಿ.ಪೂ. ಮೊದಲನೆಯ ಸಹಸ್ರಮಾನದ ಉತ್ತರಾರ್ಧದಲ್ಲಿ ಅಭಿವೃದ್ಧಿ ಹೊಂದಿದ ಅನೇಕ ನಗರಗಳಲ್ಲಿ ಉತ್ಖನನ ಕೈಗೊಂಡಾಗ ಬಾವಿಗಳ ಅವಶಿಷ್ಟಗಳು ಪತ್ತೆಯಾಗಿವೆ. ಈ ಬಾವಿಗಳನ್ನು ಬಿಗಿಪಡಿಸಲು ಬೇಯುಮಣ್ಣಿನ (ಟೆರಾಕೋಟಾ) ದೊಡ್ಡ ನಳಿಕೆಗಳನ್ನು ಒಂದರ ಮೇಲೆ ಒಂದರಂತೆ ಅಳವಡಿಸಲಾಗಿತ್ತು. ಅಂಥ ಬಾವಿಗಳನ್ನು ಅಗೆಯುವ ಕೆಲಸ ಈ ಹಿಂದೆ ನಡೆದಿರಲಿಲ್ಲ. ಅದಕ್ಕೆಂದು ವ್ಯಯವಾದದ್ದು ಹೊಸ ಪ್ರಕಾರದ ದುಡಿಮೆ. ನೇಕಾರಿಕೆ, ಕಮ್ಮಾರಿಕೆ, ಮರಗೆಲಸ ಮೊದಲಾದ ವೃತ್ತಿಗಳೆಲ್ಲವೂ ಈಗ ಹೆಚ್ಚು ಸುಯೋಜಿತವಾದ ರೂಪದಲ್ಲಿ ಜರುಗತೊಡಗಿದವು. ಜೊತೆಯಲ್ಲೇ ಹೊಸ ಬಗೆಯ ಕುಶಲಕರ್ಮಿಗಳೂ ಹುಟ್ಟಿಕೊಂಡರು. ಆನೆಯ ಕೊಂಬಲ್ಲಿ ವಿವಿಧ ಕರಕುಶಲ ವಸ್ತುಗಳನ್ನು ನಿರ್ಮಿಸುವವರು, ಮುತ್ತುರತ್ನಗಳನ್ನು ಬಳಸಿ ಯಾ ಇಂದ್ರನೀಲ, ಪುಷ್ಯರಾಗ, ಪಚ್ಚೆಯಂತ ಕಲ್ಲುಗಳಲ್ಲಿ ಅನೇಕ ತರಹದ ಆಭರಣಗಳನ್ನು ತಯಾರಿಸುವವರು, ಸುಗಂಧ ದ್ರವ್ಯಗಳನ್ನು ಉತ್ಪಾದಿಸುವವರು ಈ ಕುಶಲಕರ್ಮಿಗಳ ಸಾಲಿಗೆ ಸೇರಿದ್ದಾರೆ. ಅಂದಿನ ಆಕರಗಳಲ್ಲಿ ಉಪ್ಪು ನಿರ್ಮಿಸುವವರ ಉಲ್ಲೇಖವಿದೆ, ಮುತ್ತು ಹುಡುಕಿ ತೆಗೆಯಲೆಂದು ಕಡಲಿಗೆ ಧುಮುಕುವ ಮುತ್ತುಮುಳುಕರ ಪರಾಮರ್ಶೆ ಇದೆ. ಮೌರ್ಯರ ಕಾಲಕ್ಕಾಗಲೇ ಅರಸುಗಳ ಸೈನ್ಯದಲ್ಲಿ ಸಾವಿರಾರು ಆನೆಗಳನ್ನು ಹೊಂದಿದ ಗಜದಳಗಳಿರುತ್ತಿದ್ದವು. ಈ ಆನೆಗಳನ್ನು ದೇಶದ ವಿವಿಧೆಡೆಯ ಬನಗಳಿಂದ ಹಿಡಿದು ಪಳಗಿಸಲಾಗುತ್ತಿತ್ತು. ಕಲಿಂಗ ಹಾಗೂ ಅಂಗ ದೇಶಗಳ ಆನೆಗಳು ಶ್ರೇಷ್ಟವೆಂದು ಕೌಟಿಲ್ಯನ ಅರ್ಥಶಾಸ್ತ್ರವು ಹೇಳುತ್ತದೆ. ಆನೆಯನ್ನು ಹಿಡಿದು ಪಳಗಿಸುವುದೂ ಸುಯೋಜಿತವಾದ ವೃತ್ತಿಯಾಗಿ ಬೆಳೆದಿರಬೇಕೆಂದು ಸಕಾರಣವಾಗಿಯೇ ಊಹಿಸಬಹುದಾಗಿದೆ.
ಹೀಗೆ ನಗರಜೀವನದ ಸಂದರ್ಭದಲ್ಲಿ ವೃತ್ತಿಗಳ ಸಂಖ್ಯೆಯಲ್ಲಿ ತೀವ್ರವಾದ ಹೆಚ್ಚಳ ಉಂಟಾಯ್ತು. ಅಲ್ಲಿ ತಲೆದೋರಿದ ಕಾಯಕಗಳನ್ನೆಲ್ಲ ಚಾತುರ್ವರ್ಣ್ಯ ಎಂಬ ಸರಳ ಪರಿಕಲ್ಪನೆಯೊಂದರ ಅಡಿಯಲ್ಲಿ ತಂದುನಿಲ್ಲಿಸುವುದು ಸಮಂಜಸವಾಗಿರಲಿಲ್ಲ. ನಾಲ್ಕು ವರ್ಣಗಳ ವಿವರಣೆಗೆ ನಿಲುಕದ ವೃತ್ತಿಗಳನ್ನು ಬೇರೆಯೇ ರೀತಿಯಲ್ಲಿ ನಿರೂಪಿಸಬೇಕಿತ್ತು. ಅದಕ್ಕೆ ಚಾತುರ್ವರ್ಣ್ಯದ ವಕ್ತಾರರು ಗುರುತಿಸಿದ ಒಂದು ಕ್ರಮವೆಂದರೆ ಈ ಹೊಸ ವೃತ್ತಿಗಳಲ್ಲಿ ತೊಡಗಿದ ಜನರನ್ನೆಲ್ಲ ಶೂದ್ರರ ಸಾಲಿಗೆ ಸೇರಿಸುವುದು. ಇದಕ್ಕಿಂತ ಹೆಚ್ಚು ಮನ್ನಣೆ ಪಡೆದ ಮತ್ತೊಂದು ವಿಧಾನವಿತ್ತು. ಅದೆಂದರೆ ವರ್ಣಧರ್ಮಕ್ಕೆ ಬಾಹಿರವಾದ ವಿವಿಧ ವೃತ್ತಿಗಳಲ್ಲಿ ತೊಡಗಿದವರನ್ನು ಅನುಲೋಮ ಯಾ ಪ್ರತಿಲೋಮ ವಿವಾಹಗಳ ಮೂಲಕ ನಡೆಯುವ ವರ್ಣಸಂಕರದ ಸಂತತಿಗಳೆಂದು ಬಣ್ಣಿಸುವುದು. ಅನುಲೋಮ ಎಂದರೆ ಮೇಲ್ವರ್ಣದ ಗಂಡು ಕೆಳವರ್ಣದ ಹೆಣ್ಣನ್ನು ಮದುವೆಯಾಗುವುದು. ಪ್ರತಿಲೋಮವು ಇದಕ್ಕೆ ವಿಪರೀತ. ಅಲ್ಲಿ ಮೇಲ್ವರ್ಣದ ಹೆಣ್ಣು ಕೆಳವರ್ಣದ ಗಂಡನ್ನು ವಿವಾಹವಾಗುತ್ತಾಳೆ. ಇಂಥ ಅನುಲೋಮ ಪ್ರತಿಲೋಮ ವಿವಾಹಗಳ ಸಂತತಿಗಳ ವರ್ಣನೆಯನ್ನು ಅನೇಕ ಗ್ರಂಥಗಳಲ್ಲಿ ಕಾಣುತ್ತೇವೆ. ಆದರೆ ಅಲ್ಲಿ ಹೇಳಲಾಗಿರುವ ಹಲವು ಜನವಿಭಾಗಗಳನ್ನು ಐತಿಹಾಸಿಕವಾಗಿ ಗುರುತಿಸುವುದು ಸಾಧ್ಯವಿಲ್ಲ. ಅಂತೆಯೇ ನಗರೀಕರಣದ ಮೂಲಕ ಹುಟ್ಟಿಕೊಂಡ ಬಹುತೇಕ ವೃತ್ತಿಗಳನ್ನು ಈ ವರ್ಣಸಂಕರದ ವಿವರಣೆಯಲ್ಲಿ ಅಳವಡಿಸಿಕೊಳ್ಳಲಾಗಿಲ್ಲ. ಇದು ಚಾತುರ್ವರ್ಣ್ಯದ ವಕ್ತಾರರಲ್ಲಿ ಹಾಸುಹೊಕ್ಕಾಗಿದ್ದ ವಾಸ್ತವದ ಬಗೆಗಿನ ಮೌಢ್ಯವನ್ನು ಒತ್ತಿಹೇಳುತ್ತದೆ.
ವರ್ಣಸಂಕರದಿಂದ ಜನಿಸುವ ಸಂತತಿಗಳ ವರ್ಣನೆಯನ್ನು ಧರ್ಮಸೂತ್ರಗಳಲ್ಲಿಯೇ ಕಾಣುತ್ತೇವೆ. ಗೌತಮ ಧರ್ಮಸೂತ್ರದಲ್ಲಿ ಇದರ ಪ್ರಪ್ರಥಮ ನಿರೂಪಣೆಗಳಲ್ಲಿ ಒಂದನ್ನು ಕಾಣಬಹುದು. ಅನುಲೋಮದ ಸಂದರ್ಭದಲ್ಲಿ ಹೆಣ್ಣು ಗಂಡಿಗಿಂತ ಒಂದು ವರ್ಣ ಕೆಳಗಿದ್ದರೆ ಜನಿಸುವ ಕೂಸು ಸವರ್ಣ, ಅಂಬಷ್ಠ ಮತ್ತು ಉಗ್ರ, ಎರಡು ವರ್ಣಗಳು ಕೆಳಗಿದ್ದರೆ ನಿಷಾದ ಮತ್ತು ದೌಷ್ಯಂತ, ಮೂರು ವರ್ಣಗಳು ಕೆಳಗಿದ್ದರೆ ಪಾರಶವ. ಪ್ರತಿಲೋಮದಲ್ಲಿ ಹೆಣ್ಣು ಗಂಡಿಗಿಂತ ಒಂದು ವರ್ಣ ಮೇಲಿದ್ದರೆ ಆಗುವುದು ಸೂತ, ಮಾಗಧ ಯಾ ಆಯೋಗವ, ಎರಡು ವರ್ಣಗಳು ಮೇಲಿದ್ದರೆ ಕ್ಷತೃ ಮತ್ತು ವೈದೇಹ, ಮೂರು ವರ್ಣಗಳು ಮೇಲಿದ್ದರೆ ಚಾಂಡಾಲ. ಬ್ರಾಹ್ಮಣ ಹೆಣ್ಣು ಬ್ರಾಹ್ಮಣನಿಂದ ಬ್ರಾಹ್ಮಣ, ಕ್ಷತ್ರಿಯನಿಂದ ಸೂತ, ವೈಶ್ಯನಿಂದ ಮಾಗಧ ಮತ್ತು ಶೂದ್ರನಿಂದ ಚಾಂಡಾಲ ಕೂಸನ್ನು ಹಡೆಯುತ್ತಾಳೆ. ಈ ನಾಲ್ಕು ವರ್ಣಕ್ಕೆ ಸೇರಿದ ಗಂಡಿನಿಂದ ಕ್ಷತ್ರಿಯ ಹೆಣ್ಣು ಕ್ರಮವಾಗಿ ಮೂರ್ಧಾವಸಿಕ್ತ, ಕ್ಷತ್ರಿಯ, ಧೀವರ, ಪುಲ್ಕಸರನ್ನು ಹಡೆದರೆ ವೈಶ್ಯ ಹೆಣ್ಣು ಭೃಜ್ಯಕಂಠ, ಮಾಹಿಷ್ಯ, ವೈಶ್ಯ, ವೈದೇಹರಿಗೆ ಮತ್ತು ಶೂದ್ರ ಹೆಣ್ಣು ಪಾರಶವ, ಯವನ, ಕರಣ ಮತ್ತು ಶೂದ್ರರಿಗೆ ಜನ್ಮ ನೀಡುತ್ತಾಳೆ.
ಗೌತಮ ಧರ್ಮಸೂತ್ರದ ಈ ವಿವರಣೆಯೇ ಅನೇಕ ಗೊಂದಲಗಳಿಂದ ಕೂಡಿವೆ. ಹೆಣ್ಣು ಗಂಡಿಗಿಂತ ಒಂದು ವರ್ಣ ಕೆಳಗಿದ್ದರೆ ಎಂಬಲ್ಲಿನ ಮೂರು ಸಂಜ್ಞೆಗಳಲ್ಲಿ ಒಂದು ಸವರ್ಣ. ಉಳಿದ ಎರಡು ಅಂಬಷ್ಠ ಮತ್ತು ಉಗ್ರ ಎಂಬುದಾಗಿರುವುದರಿಂದ ಸವರ್ಣ ಎಂದರೆ ಬ್ರಾಹ್ಮಣ ಗಂಡಿಗೆ ಕ್ಷತ್ರಿಯ ಹೆಣ್ಣಲ್ಲಿ ಹುಟ್ಟಿದ ಕೂಸು ಎನ್ನುವುದು ಸ್ಪಷ್ಟವಾಗುತ್ತದೆ. ಇಲ್ಲಿ ಸವರ್ಣ ಎಂದರೆ ಆ ಕೂಸು ಬ್ರಾಹ್ಮಣ ಎಂದರ್ಥ. ಆದರೆ ಮುಂದೆ ಇದೇ ಸಂಬಂಧದಿಂದ (ಅಂದರೆ ಬ್ರಾಹ್ಮಣ ಗಂಡಿಗೆ ಕ್ಷತ್ರಿಯ ಹೆಣ್ಣಲ್ಲಿ) ಹುಟ್ಟುವ ಕೂಸನ್ನು ಮೂರ್ಧಾವಸಿಕ್ತ ಎನ್ನಲಾಗಿದೆ. ಕ್ಷತ್ರಿಯ ಗಂಡಿಗೆ ವೈಶ್ಯ ಹೆಣ್ಣಲ್ಲಿ ಅಂಬಷ್ಠ ಕೂಸು ಹುಟ್ಟುವುದೆಂಬ ಸೂಚನೆ ಮೊದಲು ದೊರೆತರೆ ಅನಂತರ ಇದೇ ಸಂಬಂಧದಲ್ಲಿ ಹುಟ್ಟುವುದು ಮಾಹಿಷ್ಯ ಕೂಸು ಎನ್ನಲಾಗಿದೆ. ಈ ರೀತಿಯ ಹಲವಾರು ಸಮಸ್ಯೆಗಳು ಗೌತಮ ಧರ್ಮಸೂತ್ರದಲ್ಲಿದೆ.
ಈ ಕಾರಣದಿಂದಾಗಿ ಇಂಥ ವಿವರಣೆಗಳನ್ನು ನೀಡಿದವರಲ್ಲಿ ತಕ್ಕ ಮಟ್ಟಿಗೆ ಒಮ್ಮತ ಇತ್ತೆಂದು ಹೇಳಬೇಕಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವರ್ಣಸಂಕರದ ನಿರೂಪಣೆಯಿದೆ. ಅದನ್ನು ಗೌತಮ ಧರ್ಮಸೂತ್ರದೊಂದಿಗೆ ಹೋಲಿಸಿದಾಗ ಇದು ಸ್ಪಷ್ಟವಾಗುತ್ತದೆ. ಅರ್ಥಶಾಸ್ತ್ರದ ಪ್ರಕಾರ ಬ್ರಾಹ್ಮಣನಿಗೆ ವೈಶ್ಯ ಹೆಣ್ಣಲ್ಲಿ ಹುಟ್ಟುವ ಕೂಸು ಅಂಬಷ್ಠ. ಆದರೆ ಗೌತಮ ಧರ್ಮಸೂತ್ರದಲ್ಲಿ ಅಂಬಷ್ಠ ಎಂಬುದು ಕ್ಷತ್ರಿಯನಿಗೆ ವೈಶ್ಯ ಹೆಣ್ಣಲ್ಲಿ ಜನಿಸಿದ ಕೂಸು ಎಂದು ಪ್ರತೀತಿ. ಕ್ಷತ್ರಿಯನಿಗೆ ಶೂದ್ರ ಹೆಣ್ಣಲ್ಲಿ ಹುಟ್ಟಿದ ಕೂಸನ್ನು ಅರ್ಥಶಾಸ್ತ್ರವು ಉಗ್ರ ಎನ್ನುತ್ತದೆ. ಆದರೆ ಗೌತಮ ಧರ್ಮಸೂತ್ರದಲ್ಲಿ ಇರುವುದು ಉಗ್ರ ವೈಶ್ಯನಿಗೆ ಶೂದ್ರಳಲ್ಲಿ ಜನಿಸಿದ ಮಗು ಎಂಬ ಸೂಚನೆ.
ಅರ್ಥಶಾಸ್ತ್ರದ ವಿವರಣೆ ಈ ಮುಂದೆ ಹೇಳಿದಂತಿದೆ. ಬ್ರಾಹ್ಮಣ ಅಥವಾ ಕ್ಷತ್ರಿಯ ಪುರುಷರಿಗೆ ಅನಂತರದ ಸ್ತ್ರೀಯಲ್ಲಿ (ಅಂದರೆ, ಕ್ರಮವಾಗಿ ಕ್ಷತ್ರಿಯ ಹಾಗೂ ವೈಶ್ಯ ಸ್ತ್ರೀಯಲ್ಲಿ) ಜನಿಸುವುದು ಸವರ್ಣರು. ಇವರಿಗೆ ತಮಗಿಂತ ಎರಡು ವರ್ಣ ಕೆಳಗಿರುವ ಸ್ತ್ರೀಯಲ್ಲಿ ಹುಟ್ಟುವ ಕೂಸು ಅವರ್ಣರ ಸಾಲಿಗೆ ಸೇರುತ್ತದೆ. ಅಂಥಲ್ಲಿ ಬ್ರಾಹ್ಮಣನಿಗೆ ವೈಶ್ಯಳಲ್ಲಿ ಹುಟ್ಟುವುದು ಅಂಬಷ್ಠ, ಶೂದ್ರಳಲ್ಲಿ ನಿಷಾದ ಅಥವಾ (ಗೌತಮ ಧರ್ಮಸೂತ್ರವೂ ಹೇಳುವಂತೆ) ಪಾರಶವ. ಕ್ಷತ್ರಿಯನಿಗೆ ಶೂದ್ರಳಲ್ಲಿ ಜನಿಸುವುದು ಉಗ್ರ. ವೈಶ್ಯನಿಗೆ ಶೂದ್ರ ಹೆಣ್ಣಲ್ಲಿ ಆಗುವ ಕೂಸು ಶೂದ್ರ ಅನ್ನಿಸಿಕೊಳ್ಳುತ್ತದೆ. ವ್ರತಗಳನ್ನು ಪಾಲಿಸದಂತ ಗಂಡಿಗೆ ಆತನಿಗಿಂತ ಒಂದು ವರ್ಣ ಕೆಳಗಿನ ಹೆಣ್ಣಲ್ಲಿ ಜನಿಸುವ ಮಕ್ಕಳು ವ್ರಾತ್ಯರು. ಇದು ಅರ್ಥಶಾಸ್ತ್ರದಲ್ಲಿ ಹೇಳಿರುವ ಅನುಲೋಮದ ಕ್ರಮ. ಪ್ರತಿಲೋಮದಲ್ಲಿ ಶೂದ್ರನಿಗೆ ವೈಶ್ಯ, ಕ್ಷತ್ರಿಯ ಹಾಗೂ ಬ್ರಾಹ್ಮಣ ಹೆಣ್ಣಲ್ಲಿ ಜನಿಸುವ ಮಗುವು ಕ್ರಮವಾಗಿ ಆಯೋಗವ, ಕ್ಷತ್ತ ಮತ್ತು ಚಂಡಾಲ ಅನ್ನಿಸಿಕೊಳ್ಳುತ್ತದೆ. ವೈಶ್ಯನಿಗೆ ಕ್ಷತ್ರಿಯಳಲ್ಲಿ ಜನಿಸುವುದು ಮಾಗಧ, ಬ್ರಾಹ್ಮಣಳಲ್ಲಿ ವೈದೇಹಕ. ಕ್ಷತ್ರಿಯನಿಗೆ ಬ್ರಾಹ್ಮಣಳಲ್ಲಿ ಆಗುವುದು ಸೂತ.
ಗೌತಮ ಧರ್ಮಸೂತ್ರಕ್ಕೂ ಅರ್ಥಶಾಸ್ತ್ರಕ್ಕೂ ಕೆಲವೆಡೆಗಳಲ್ಲಿ ಮಾತ್ರ ಹೊಂದಾಣಿಕೆ ಇರುವುದನ್ನು ಇಲ್ಲಿ ಗಮನಿಸಬೇಕು. ವರ್ಣಸಂಕರದಿಂದ ಜನಿಸಿದವರಲ್ಲೇ ಮಿಶ್ರಸಂಬಂಧಗಳು ಉಂಟಾದಲ್ಲಿ ಹುಟ್ಟುವ ಮಕ್ಕಳನ್ನು ಅರ್ಥಶಾಸ್ತ್ರವು ಅಂತರಾಲರೆಂದು ಕರೆಯುತ್ತದೆ. ಇದರಲ್ಲಿ ಉಗ್ರನು ನಿಷಾದಳಲ್ಲಿ ಪಡೆಯುವ ಮಗು ಕುಕ್ಕುಟ. ಗಂಡು ನಿಷಾದನಾಗಿ ಹೆಣ್ಣು ಉಗ್ರಳಾದರೆ ಅವರು ಪುಲ್ಕಸರನ್ನು ಪಡೆಯುತ್ತಾರೆ. ಆದರೆ ಗೌತಮ ಧರ್ಮಸೂತ್ರದಲ್ಲಿ ಪುಲ್ಕಸರು ಕ್ಷತ್ರಿಯ ಹೆಣ್ಣು ಹಾಗೂ ಶೂದ್ರ ಗಂಡಿನ ಮಿಲನದಿಂದ ಆಗುವ ಮಕ್ಕಳು. ಅರ್ಥಶಾಸ್ತ್ರವು ಅಂಬಷ್ಠ ಗಂಡಿಗೆ ವೈದೇಹಕ ಹೆಣ್ಣಲ್ಲಿ ಹುಟ್ಟುವವರನ್ನು ವೈನ್ಯ ಎಂದೂ ವೈದೇಹಕ ಗಂಡಿಗೆ ಅಂಬಷ್ಠ ಹೆಣ್ಣಲ್ಲಿ ಆಗುವವರನ್ನು ಕುಶೀಲವ ಎಂದೂ ಕರೆಯುತ್ತದೆ. ಉಗ್ರನಿಗೆ ಕ್ಷತ್ತಳಲ್ಲಿ ವಪಾಕರು ಜನಿಸುತ್ತಾರೆ.
ಧರ್ಮಶಾಸ್ತ್ರಗಳಲ್ಲಿಯೂ ವರ್ಣಸಂಕರದ ನಿರೂಪಣೆಗಳಿವೆ. ಅದರ ಒಟ್ಟು ಸ್ವರೂಪವು ಗೌತಮ ಧರ್ಮಸೂತ್ರ ಯಾ ಅರ್ಥಶಾಸ್ತ್ರಕ್ಕಿಂತ ಭಿನ್ನವಲ್ಲ. ವಿವರಣೆಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳಿವೆ. ಮನುಸ್ಮೃತಿಯಲ್ಲಿ ಅನುಲೋಮ ಮತ್ತು ಪ್ರತಿಲೋಮದ ವರ್ಣನೆ ಅರ್ಥಶಾಸ್ತ್ರದಲ್ಲಿ ಕಂಡಂತೆಯೇ ಇದೆ. ಬಹುಶಃ ಮನುಸ್ಮೃತಿಯ ಕರ್ತಾರರು ಇದನ್ನು ಅರ್ಥಶಾಸ್ತ್ರದಿಂದಲೇ ಪಡೆದುಕೊಂಡಿರಬಹುದು. ಅನಂತರದ ವಿವರಣೆ ಮನುಸ್ಮೃತಿಯಲ್ಲಿ ಇನ್ನಷ್ಟು ವಿಸ್ತೃತವಾಗಿದೆ. ಅದರಂತೆ ಬ್ರಾಹ್ಮಣನಿಗೆ ಉಗ್ರಳಲ್ಲಿ ಆವೃತರು ಜನಿಸುತ್ತಾರೆ, ಅಂಬಷ್ಠಳಲ್ಲಿ ಆಭೀರರು, ಆಯೋಗವಳಲ್ಲಿ ಧಿಗ್ವಣರು. ನಿಷಾದನಿಗೆ ಶೂದ್ರಳಲ್ಲಿ ಪುಕ್ಕಸ, ಶೂದ್ರನಿಗೆ ನಿಷಾದಳಲ್ಲಿ ಕುಕ್ಕುಟಕ, ಕ್ಷತೃವಿಗೆ ಉಗ್ರಳಲ್ಲಿ ಶ್ವಪಾಕ, ವೈದೇಹಕನಿಗೆ ಅಂಬಷ್ಠಳಲ್ಲಿ ವೇನ. ವ್ರತಹೀನರಾದ ದ್ವಿಜರಿಗೆ ತಮ್ಮದೇ ವರ್ಣದಲ್ಲಿ ಜನಿಸುವ ಮಕ್ಕಳು ವ್ರಾತ್ಯರು. ಬ್ರಾಹ್ಮಣರಿಂದಾದ ವ್ರಾತ್ಯರಿಗೆ ಜನಿಸುವ ಮಕ್ಕಳು ಭೂರ್ಜಕಂಟಕ, ಆವಂತ್ಯ, ವಾಟಧಾನ, ಪುಷ್ಪಧ ಮತ್ತು ಶೈಖರು ಎನ್ನಿಸಿಕೊಳ್ಳುತ್ತಾರೆ. ಕ್ಷತ್ರಿಯಮೂಲದ ವ್ರಾತ್ಯರಿಂದ ಝಲ್ಲ, ಮಲ್ಲ, ನಿಚ್ಚಿವಿ, ನಟ, ಕರಣ, ಖಸ ಮತ್ತು ದ್ರವಿಡರುಗಳು, ವೈಶ್ಯರಿಂದ ಹುಟ್ಟಿದ ವ್ರಾತ್ಯರಿಂದ ಸುಧನ್ವ, ಆಚಾರ್ಯ, ಕಾರುಷ, ವಿಜನ್ಮ, ಮೈತ್ರ ಮತ್ತು ಸಾತ್ವತರು ಜನ್ಮ ಪಡೆಯುತ್ತಾರೆ. ಮುಂದೆ ಮನುಸ್ಮೃತಿ ಹೆಚ್ಚೆಚ್ಚು ಸಂಕೀರ್ಣವಾದ ವಿವರಣೆಗಳನ್ನು ನೀಡುತ್ತ ಹೋಗುತ್ತದೆ.
ಈ ರೀತಿಯ ನಿರೂಪಣೆಗಳು ಹೆಸರಿಸಿರುವ ಜನಾಂಗಗಳಲ್ಲಿ ಕೆಲವನ್ನು ಮಾತ್ರ ಐತಿಹಾಸಿಕವಾಗಿ ಗುರುತಿಸುವುದು ಸಾಧ್ಯ. ಇದು ಅತ್ತ ಚಾತುರ್ವರ್ಣ್ಯದ ವ್ಯವಸ್ಥೆ ವರ್ಣಸಂಕರದ ಸಂದರ್ಭದಲ್ಲಿ ಎದುರಿಸಿದ ಗೊಂದಲವನ್ನು ತೋರಿಸುತ್ತಿದ್ದರೆ ಇತ್ತ ನಗರೀಕರಣವು ಚುರುಕುಗೊಂಡಂತೆ ಅನಾವರಣಗೊಂಡ ವೃತ್ತಿಯ ಹೊಸ ರೂಪಗಳೊಂದಿಗೆ ಹೊಂದಾಣಿಕೆ ನಡೆಸುವಲ್ಲಿ ಚಾತುರ್ವರ್ಣ್ಯವು ವಿಫಲಗೊಂಡುದನ್ನು ಬೆಳಕಿಗೆ ತರುತ್ತದೆ.
ಕ್ರಿ.ಶ. 200ರ ಸುಮಾರಿಗೆ ಮನುಸ್ಮೃತಿ ತನ್ನ ಈಗಿನ ರೂಪ ಪಡೆದುಕೊಂಡಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಆಗ ಅದರಲ್ಲಿ ರಾಜಧರ್ಮದ ಅಧ್ಯಾಯ ಇರಲಿಲ್ಲ. ಈ ಅಧ್ಯಾಯವನ್ನು ಅನಂತರ ಜೋಡಿಸಿಕೊಳ್ಳಲಾಯ್ತು. ಜೊತೆಗೆ ಅಲ್ಲಲ್ಲಿ ಕೆಲವು ಸಣ್ಣಪುಟ್ಟ ಮಾರ್ಪಾಟುಗಳನ್ನೂ ತಂದುಕೊಳ್ಳಲಾಯ್ತು. ಹೀಗಾಗಿ ಕ್ರಿ.ಶ. 200ರ ಹೊತ್ತಿಗೆ ಸಿದ್ಧವಾದ ಮನುಸ್ಮೃತಿಯ ಪಾಠವು ಹೆಚ್ಚಿನ ಪರಿವರ್ತನೆಗಳನ್ನೇನೂ ಕಾಣಲಿಲ್ಲ ಎನ್ನಬಹುದು. ಆ ವೇಳೆಗಾಗಲೇ ಕ್ರಿ.ಪೂ. ಆರನೆಯ ಶತಮಾನದಲ್ಲಿ ಆರಂಭಗೊಂಡ ನಗರೀಕರಣದ ಪ್ರಕ್ರಿಯೆ ಕೊನೆಗೊಳ್ಳತೊಡಗಿ ಭಾರತದ ಇತಿಹಾಸದಲ್ಲಿ ಅಪಾರ ಮಹತ್ವದ ಪಲ್ಲಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಜಾತಿಪದ್ಧತಿಯ ಉಗಮವು ಈ ಪಲ್ಲಟದೊಂದಿಗೆ ಬೆಸೆದುಕೊಂಡಿದೆ. ಮುಂಬರುವ ಅಧ್ಯಾಯಗಳಲ್ಲಿ ಅದರ ಚರ್ಚೆಯನ್ನು ಕೈಗೆತ್ತಿಕೊಳ್ಳೋಣ.

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಹನ್ನೊಂದನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಏಳನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂದನೇ ಕಂತು

 

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...