ಜಾತಿ ಪದ್ಧತಿಯ ಮೈಮನಗಳು-ಹದಿನಾಲ್ಕನೇ ಕಂತು

Date: 29-11-2020

Location: .


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಹದಿನಾಲ್ಕನೇ ಕಂತಿನ ಬರಹ ಇಲ್ಲಿದೆ.

ಕ್ರಿ.ಪೂ. ಆರನೆಯ ಶತಮಾನದಲ್ಲಿ ಆರಂಭಗೊಂಡ ನಗರೀಕರಣದ ಪ್ರಕ್ರಿಯೆ ಕ್ರಿ.ಶ. ಮೊದಲನೆಯ ಶತಮಾನದ ವೇಳೆಗೆ ತನ್ನ ಉಚ್ಛ್ರಾಯ ತಲುಪಿತ್ತು. ಬಳಿಕ ಎರಡನೆಯ ಶತಮಾನದ ಉತ್ತರಾರ್ಧದಿಂದ ನಾಲ್ಕನೆಯ ಶತಮಾನದ ಪೂರ್ವಾರ್ಧದ ವರೆಗಿನ ಅವಧಿಯಲ್ಲಿ ಬಹುತೇಕ ನಗರಗಳು ನಶಿಸಿ ಹೋದವು. ಇದು ಭಾರತದ ಇತಿಹಾಸದ ನಿರ್ಣಾಯಕ ತಿರುವುಗಳಲ್ಲಿ ಒಂದಾಗಿದೆ. ಜಾತಿಪದ್ಧತಿಯೂ ಸೇರಿದಂತೆ ಭಾರತದ ಜನಜೀವನದ ಎಲ್ಲ ನೆಲೆಗಳಿಗೂ ನಗರಗಳ ನಾಶದ ತರುವಾಯ ಶುರುವಾದ ಭಿನ್ನ ಭೌತಿಕ ಸ್ಥಿತಿಗತಿಗಳೊಂದಿಗೆ ಆಳದ ಸಂಬಂಧವಿದೆ.

ನಗರಗಳ ಅವನತಿ ಕುರಿತು ಕೂಲಂಕಶವಾದ ಅಧ್ಯಯನ ನಡೆಸಿದ ಇತಿಹಾಸಕಾರರು ರಾಮ್ ಶರಣ್ ಶರ್ಮ. 1970ರ ದಶಕದ ಆರಂಭದಲ್ಲೇ ಅವರು ಈ ವಿಷಯದಲ್ಲಿ ಗಮನ ಸೆಳೆಯುವ ಲೇಖನವೊಂದನ್ನು ಪ್ರಕಟಿಸಿದ್ದರು. ತಮ್ಮ ಅಧ್ಯಯನವನ್ನು ವಿಸ್ತರಿಸಿ 1987ರಲ್ಲಿ ಅರ್ಬನ್ ಡೀಕೇ ಇನ್ ಇಂಡಿಯಾ ಎಂಬ ಪುಸ್ತಕವನ್ನು ಹೊರತಂದರು. ಪ್ರಾಕ್ತನ ತಜ್ಞರು ನಡೆಸಿದ ಉತ್ಖನನಗಳ ವರದಿಯನ್ನು ಆಶ್ರಯಿಸಿ ಕೆಲವು ಸಾಹಿತ್ಯ ಕೃತಿಗಳ ಹಾಗೂ ಫಾ ಹ್ಯಾನ್ ಮತ್ತು ಹ್ಯುವೆನ್ ತ್ಸಾಂಗ್‌ರ ಪ್ರವಾಸ ಕಥನಗಳಂಥ ಆಕರಗಳ ನೆರವಿನೊಂದಿಗೆ ನಗರಗಳು ನಿರ್ಮಾಣವಾದ ಬಗ್ಗೆ ಶರ್ಮ ಅವರು ಧೀಮಂತ ವಾದವೊಂದನ್ನು ಮುಂದಿಟ್ಟರು. ಇತಿಹಾಸಕಾರರ ನಡುವಲ್ಲಿ ಬಹಳಷ್ಟು ಚರ್ಚೆಗಳಿಗೆ ಗುರಿಯಾಗಿರುವ ವಾದವು ಇದಾಗಿದೆ.

ಶರ್ಮರ ಪ್ರಕಾರ ಕ್ರಿ.ಶ. 300ರಿಂದ 1000ದ ವರೆಗಿನ ಏಳು ಶತಾಬ್ದಗಳು ಭಾರತದಲ್ಲಿ ನಗರಗಳ ಪತನದ ಕಾಲವಾಗಿತ್ತು. ಗ್ರಾಮೀಣ ಜೀವನವು ಆದ್ಯತೆ ಪಡೆದುಕೊಂಡ ಈ ಅವಧಿಯಲ್ಲಿ ನಗರವಾಸಿಗಳು ತಮ್ಮ ನೆಲೆಗಳನ್ನು ತೊರೆದು ಹಳ್ಳಿಗಳತ್ತ ವಲಸೆ ಹೋದರೆಂದು ಶರ್ಮ ಹೇಳುತ್ತಾರೆ. ಹೀಗಾಗಿ ಅಂದಿನ ನೂರಾರು ನಗರಗಳು ಬರಿದಾದವು. ಉತ್ಖನನದ ವರದಿಗಳು ಹಳೆಯ ಬಹುಪಾಲು ನೆಲೆಗಟ್ಟುಗಳಲ್ಲಿ ಆವಾಸ, ಉತ್ಪಾದನೆ ಮುಂತಾದ ಮಾನವ ಚಟುವಟಿಕೆಗಳು ನಿಂತು ಹೋದುದ್ದನ್ನು ಅಥವಾ ಬಹುಕಾಲದವರೆಗೆ ಸ್ಥಗಿತಗೊಂಡುದನ್ನು ಹೇಳುತ್ತವೆ. ಅನೇಕ ನೆಲೆಗಟ್ಟುಗಳಿಂದ ಒದಗಿ ಬರುವ ಸಮಾನ ರೀತಿಯ ಮಾಹಿತಿಯನ್ನು ತೌಲನಿಕ ದೃಷ್ಟಿಯಿಂದ ಪರಿಶೀಲಿಸದ ಕಾರಣ ಈ ವಿದ್ಯಮಾನವು ಪ್ರಾಕ್ತನ ತಜ್ಞರ ಅವಗಾಹನೆಗ ಗುರಿಯಾಗಲಿಲ್ಲ. ಶರ್ಮ ಅಂಥ ಎಲ್ಲ ದತ್ತಾಂಶಗಳನ್ನೂ ಕಲೆ ಹಾಕಿ ಅಲ್ಲಿ ನಿರ್ದಿಷ್ಟವಾದ ಕ್ರಮವೊಂದನ್ನು ಗುರುತಿಸಿದರು. ಹಾಗೆ ಪತ್ತೆ ಹಚ್ಚಿದ ಕ್ರಮವನ್ನು ಪುಷ್ಟಿಪಡಿಸುವಂತೆ ಲಿಖಿತ ಮೂಲಗಳಿಂದ ಪೂರಕವಾದ ಮಾಹಿತಿಯನ್ನು ಸಂಗ್ರಹಿಸಿದರು. ಅವುಗಳ ಬೆಂಬಲದಿಂದ ಭಾರತದ ಇತಿಹಾಸದಲ್ಲಿ ನಾಲ್ಕರಿಂದ ಹತ್ತರವರೆಗಿನ ಶತಮಾನಗಳು ನಗರ ಜೀವನದ ದೃಷ್ಟಿಯಿಂದ ಆಶಾದಾಯಕವಾಗಿರಲಿಲ್ಲ ಎಂಬ ವಾದವನ್ನು ಶರ್ಮ ಮಂಡಿಸಿದರು.

ನಗರಗಳು ಯಾಕೆ ಅವನತಿ ಹೊಂದಿದವು ಎಂಬುದನ್ನು ಶರ್ಮ ವ್ಯಾಪಾರ ವ್ಯವಸ್ಥೆಯ ನೆಲೆಯಲ್ಲಿಟ್ಟು ವಿಶ್ಲೇಷಿಸಿದರು. ಅವರು ಹೇಳಿದಂತೆ ಭಾರತವು ರೋಮನ್ ಸಾಮ್ರಾಜ್ಯ ಹಾಗೂ ಮಧ್ಯ ಏಷ್ಯಾದೊಂದಿಗೆ ಅಪಾರವಾದ ವ್ಯಾಪಾರ ಸಂಪರ್ಕವನ್ನು ಹೊಂದಿತ್ತು. ನಗರಗಳ ಸಮೃದ್ಧಿಯು ಈ ದೀರ್ಘದೂರದ ವ್ಯಾಪಾರವನ್ನು ಅವಲಂಭಿಸಿತ್ತು. ನಾಲ್ಕನೆಯ ಶತಮಾನದ ಉತ್ತರಾರ್ಧದ ವೇಳೆಗೆ ರೋಮನ್ ಸಾಮ್ರಾಜ್ಯವು ಕ್ಷೀಣಿಸಿ ಹೋಗಿತ್ತು. ನಂತರದ ದಶಕಗಳಲ್ಲಿ ಅದು ಜರ್ಮನೇಕ್ ಜನಾಂಗದ ಹಲ್ಲೆಗಳಿಗೆ ಗುರಿಯಾಗಿ ಪತನ ಹೊಂದಿದ್ದು ಇತಿಹಾಸಕಾರರಿಗೆಲ್ಲ ತಿಳಿದೇ ಇದೆ. ರೋಮನ್ ಸಾಮ್ರಾಜ್ಯದ ಅವನತಿಯಿಂದ ಭಾರತದ ಪಾಶ್ಚಿಮಾತ್ಯ ವ್ಯಾಪಾರ ಸಂಪರ್ಕಗಳಿಗೆ ತೀವ್ರ ಪೆಟ್ಟು ಬಿದ್ದವು. ಆ ವ್ಯಾಪಾರವು ಕೊನೆಗೊಂಡಾಗ ಭಾರತದ ನಗರಗಳಿಗೆ ಉಳಿಗಾಲವಿಲ್ಲದ ಪರಿಸ್ಥಿತಿ ಉದ್ಭವಿಸಿತು. ಏಕೆಂದರೆ ಅವುಗಳ ಸಮೃದ್ಧಿಯ ಸೆಲೆಯು ಈಗ ಬತ್ತಿಹೋಗಿತ್ತು. ಬೈಜ಼ಂಟೈನ್ ಸಾಮ್ರಾಜ್ಯದೊಂದಿಗೆ ಸ್ವಲ್ಪಮಟ್ಟಿಗಿನ ವ್ಯಾಪಾರ ವಹಿವಾಟುಗಳು ಮುಂದುವರೆದಿದ್ದವು. ಐದನೆಯ ಶತಮಾನದಲ್ಲಿ ಹೂಣರು ಭಾರತದ ಮೇಲೆ ನಡೆಸಿದ ಹಲ್ಲೆಯಿಂದಾಗಿ ಈ ಸಂಪರ್ಕವೂ ಕೊನೆಗೊಂಡಿತು. ಇದು ಹತ್ತಾರು ಬಗೆಯ ಸಾಮಗ್ರಿಗಳ ವಿನಿಮಯವನ್ನು ಮಾತ್ರವಲ್ಲ, ರೋಮ್ ಹಾಗೂ ಮಧ್ಯ ಏಷ್ಯಾದಿಂದ ಬಂಗಾರ ಆಮದುಗೊಳ್ಳುತ್ತಿದ್ದುದನ್ನೂ ನಿಲ್ಲಿಸಿಬಿಟ್ಟಿತು.

ಶರ್ಮರ ವಾದವು ಇತಿಹಾಸಕಾರರ ನಡುವಲ್ಲಿ ಸಾಕಷ್ಟು ಚರ್ಚೆಗಳಿಗೆ ಗುರಿಯಾಯ್ತು. ಅವರ ವಾದಕ್ಕೆ ಕೆಲವರು ಅನುಮೋದನೆ ಸೂಚಿಸಿದರು. ಅಂಥವರಲ್ಲಿ ನಾಕಾರು ಮಂದಿ ಈ ವಾದಸರಣಿಯನ್ನು ಮುಂದಕ್ಕೆ ಬೆಳೆಸುವಂಥ ಅಧ್ಯಯನಗಳನ್ನು ಕೈಗೊಂಡರು. ಅದೇ ವೇಳೆಗೆ ನಗರಗಳ ಅವನತಿ ನಡೆಯಲೇ ಇಲ್ಲ ಎಂಬ ನಿಲುವನ್ನು ತಾಳುವ ಅಚಾತುರ್ಯ ಕೆಲವರದಾಗಿದ್ದರೆ, ಇವರಿಗಿಂತ ಹೆಚ್ಚಿನ ಸೂಕ್ಷ್ಮತೆ ತೋರುವ ಇತರರು ಶರ್ಮರು ಮುಂದಿಡುವ ಮಾಹಿತಿಯನ್ನು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ, ಆದರೆ ಶರ್ಮರ ವಿವರಣೆಯನ್ನು ಮಾತ್ರ ನಿರಾಕರಿಸಿದ್ದಾರೆ. ಈವರೆಗೆ ನಡೆದಿರುವ ಚರ್ಚೆಗಳ ಬೆಳಕಲ್ಲಿ ಶರ್ಮರ ಸಿದ್ಧಾಂತ ಕುರಿತು ಕೆಲವು ನಿರ್ಣಯಗಳನ್ನು ಕೈಗೊಳ್ಳಬಹುದು.

ಹರಪ್ಪಾ, ಮೊಹೆಂಜೊ ದಾರೋ ಮುಂತಾದ ನೆಲೆಗಳ ಪತನದ ಬಳಿಕ ಮತ್ತೆ ನಗರೀಕರಣ ಪ್ರಕ್ರಿಯೆಗೆ ಚಾಲನೆ ದೊರೆತದ್ದು ಕ್ರಿ.ಪೂ. ಆರನೆಯ ಶತಮಾನದಲ್ಲಿ. ಬುದ್ಧ, ಮಹಾವೀರರ ಆಯುಷ್ಕಾಲವಾದ ಈ ದಿನಗಳಲ್ಲಿ ಭಾರತಕ್ಕೆ ರೋಮ್‌ನೊಂದಿಗಾಗಲಿ ಮಧ್ಯ ಏಷ್ಯಾದೊಂದಿಗಾಗಲಿ ಯಾವುದೇ ವ್ಯಾಪಾರ ಸಂಬಂಧಗಳಿದ್ದವೆಂದು ಹೇಳಲಾಗದು. ಪಾಶ್ಚಿಮಾತ್ಯ ವ್ಯಾಪಾರ ಸಂಬಂಧಗಳು ಸ್ಥಾಪಿತವಾದದ್ದು ಮೌರ್ಯರ ಕಾಲದಲ್ಲಿ, ಅಲೆಕ್ಸಾಂಡರ್‌ನ ಹಲ್ಲೆಯ ನಂತರ. ರೋಮನ್ ಸಾಮ್ರಾಜ್ಯದೊಂದಿಗಿನ ವ್ಯಾಪಾರವು ಕ್ರಿ.ಶ. ಒಂದನೆಯ ಶತಮಾನಕ್ಕಿಂತ ಹಳೆಯದಲ್ಲ. ಅಷ್ಟು ಕಾಲ ಯಾವುದೇ ಪಾಶ್ಚಿಮಾತ್ಯ ವ್ಯಾಪಾರದ ಬೆಂಬಲವಿಲ್ಲದೆ ನೆಲೆಗೊಂಡಿದ್ದ ನಗರಗಳು ನಾಲ್ಕನೆಯ ಶತಮಾನದ ನಂತರ ಅಂಥ ಸಂಪರ್ಕವು ಕೊನೆಗೊಂಡಾಗ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು ಎನ್ನುವುದು ತರ್ಕದ ದೃಷ್ಟಿಯಿಂದಾಗಲಿ ಐತಿಹಾಸಿಕ ದತ್ತಾಂಶಗಳ ದೃಷ್ಟಿಯಿಂದಾಗಲಿ ಸಮರ್ಥನೀಯವಲ್ಲ.

ಶರ್ಮರು ತಮ್ಮ ವಾದದಲ್ಲಿ ಹೆಚ್ಚಿನ ಒತ್ತು ನೀಡುವುದು ಗುಪ್ತೋತ್ತರ ಕಾಲಕ್ಕೆ. ಗುಪ್ತವಂಶದ ಆಳ್ವಿಕೆ ಕೊನೆಗೊಂಡ ತರುವಾಯ ಅಸ್ತಂಗತವಾದ ಕೆಲವು ನಗರಗಳ ವಿವರವನ್ನು ಶರ್ಮ ನೀಡುತ್ತಾರ. ಆದರೆ ಅಂಥ ಉದಾಹರಣೆಗಳು ಗೌಣ. ಶರ್ಮರ ಬಹುತೇಕ ಉಲ್ಲೇಖಗಳು ಕ್ರಿ.ಶ. ಸುಮಾರು 150-350 ಕಾಲಕ್ಕೆ ಸೇರಿದ್ದು. ಅದಾದ ಬಳಿಕ ಬಿಡಿಯಾದ ಕೆಲವಾರು ಉದಾಹರಣೆಗಳು ಸಿಗುತ್ತ ಹೋಗುತ್ತವೆ. ಆದರೆ ಅಂಥ ಉದಾಹರಣೆಗಳ ಸ್ವರೂಪವು ಕ್ರಿ.ಶ. 150-350ರ ಅವಧಿಯ, ತನ್ನದೇ ರೀತಿಯಲ್ಲಿ ಸಮಗ್ರತೆ ಹೊಂದಿರುವ ಮಾಹಿತಿಯ ಸಂಚಯಕ್ಕಿಂತ ಭಿನ್ನವಾದ್ದು ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಿದೆ. ಆದರೆ ಕ್ರಿ.ಶ. ಎರಡನೆಯ ಶತಮಾನದಲ್ಲೇ ನಗರಗಳು ಇಲ್ಲವಾಗತೊಡಗಿದ್ದವು ಎಂದು ಉತ್ಖನನಗಳು ಹೇಳುವ ಮಾಹಿತಿಯನ್ನು ನಮ್ಮ ಮುಂದಿಡುವಾಗಲೂ ಶರ್ಮ ಈ ಪ್ರಕ್ರಿಯೆಯು ಕ್ರಿ.ಶ. 300-1000 ಅವಧಿಗೆ ಸೇರಿದ್ದು ಎನ್ನುತ್ತಾರೆ. ಅದರಲ್ಲಿಯೂ ಗುಪ್ತವಂಶದ ಆಳ್ವಿಕೆಯ ನಂತರದ ಅವಧಿಗೆ ಇನ್ನಿಲ್ಲದ ಮಹತ್ವ ಕಲ್ಪಿಸುತ್ತಾರೆ ಶರ್ಮ. ಇದಕ್ಕೆ ಕಾರಣವೇನು?

ಶರ್ಮರು 1965ರಲ್ಲಿ ತಮ್ಮ ಇಂಡಿಯನ್ ಫ್ಯೂಡಲಿಸಮ್ ಎಂಬ ಗ್ರಂಥ ಪ್ರಕಟಿಸಿದರು. ಈ ಕೃತಿಯ ಪ್ರಕಟನೆ ಭಾರತದ ಇತಿಹಾಸ ಸಂಶೋಧನೆಯ ಅತಿದೊಡ್ಡ ಮೈಲಿಗಲ್ಲುಗಳಲ್ಲಿ ಒಂದು. ಈ ಕೃತಿಯೊಂದಿಗೆ ಇತಿಹಾಸಕಾರರು ಹಲವು ನೆಲೆಯಲ್ಲಿ ನಡೆಸಿದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅನುಸಂಧಾನಗಳು ಕ್ರಿ.ಶ. ಮೊದಲನೆಯ ಸಹಸ್ರಮಾನ ಕುರಿತ ಭಾರತದ ಇತಿಹಾಸರಚನೆಯ ಗತಿಯನ್ನು ನಿರ್ಣಯಿಸಿದೆ. ಈ ಗ್ರಂಥದಲ್ಲಿ ಶರ್ಮ ಗುಪ್ತೋತ್ತರ ಕಾಲವನ್ನು ಫ್ಯೂಡಲ್ ಎಂದು ಬಣ್ಣಿಸಿದ್ದರು. ಫ್ಯೂಡಲ್ ವ್ಯವಸ್ಥೆ ಎಂದರೆ ನಗರಗಳಿಲ್ಲದ ವ್ಯವಸ್ಥೆ ಎಂದು ಮಾರ್ಕ್ಸ್ ಮತ್ತು ಎಂಗಲ್ಸ್ ಹತ್ತೊಂಬತ್ತನೆಯ ಶತಮಾನದಲ್ಲಿಯೇ ಒತ್ತಿ ಹೇಳಿದ್ದರು. ರೋಮನ್ ಸಾಮ್ರಾಜ್ಯದ ಪತನದ ನಂತರ ಯೂರೋಪ್‌ನಲ್ಲಿ ಬೆಳೆದುಬಂದ ಫ್ಯೂಡಲ್ ವ್ಯವಸ್ಥೆಯ ಸಮೀಕ್ಷೆಯು ಅವರಿಗೆ ಈ ನಿಲುವು ತಾಳಲು ಪ್ರೇರಣೆಯಾಗಿತ್ತು. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಆನ್ರಿ ಪಿರೇನ್ ಎಂಬ ಬೆಲ್ಜಿಯನ್ ಇತಿಹಾಸಕಾರರು ಯೂರೋಪ್‌ನ ಫ್ಯೂಡಲ್ ವ್ಯವಸ್ಥೆಯ ಬಗ್ಗೆ ಹಲವು ನೆಲೆಯಲ್ಲಿ ಸಮೀಕ್ಷೆ ಕೈಗೊಂಡರು. ಯೂರೋಪ್‌ನಲ್ಲಿ ಫ್ಯೂಡಲ್ ವ್ಯವಸ್ಥೆ ಆರಂಭಗೊಳ್ಳುತ್ತಿದ್ದಂತೆಯೇ ನಗರಗಳು ಅವನತಿ ಹೊಂದಿದ್ದನ್ನು ಪಿರೇನ್ ತೋರಿಸಿಕೊಟ್ಟರು. ದೀರ್ಘದೂರದ ವ್ಯಾಪಾರವು ಕೊನೆಗೊಂಡಿದ್ದನ್ನು ಅವರು ನಗರಗಳ ನಾಶಕ್ಕೆ ಕಾರಣವೆಂದು ಹೇಳಿದರು. ಶರ್ಮರ ಮೇಲೆ ಈ ಬರಹಗಳು ಗಾಢವಾದ ಪ್ರಭಾವ ಬೀರಿದ್ದವು.

ಗುಪ್ತೋತ್ತರ ಕಾಲವನ್ನು ಶರ್ಮರು ಫ್ಯೂಡಲ್ ಎಂದಿದ್ದರು. ಮಾರ್ಕ್ಸ್, ಎಂಗಲ್ಸ್ ಹಾಗೂ ಪಿರೇನ್‌ರ ಪ್ರೇರಣೆಯಿಂದಾಗಿ ಫ್ಯೂಡಲ್ ವ್ಯವಸ್ಥೆಯಲ್ಲಿ ನಗರಗಳು ಇರಬಾರದು ಎಂಬ ನಿರ್ಣಯಕ್ಕೂ ಅವರು ಈಗಾಗಲೇ ಬಂದಿದ್ದರು. ಸುಯೋಗದಿಂದಲೋ ಮತ್ತೊಂದರಿಂದಲೋ, ಕ್ರಿ.ಶ. ಮೊದಲ ಸಹಸ್ರಮಾನದ ಭಾರತದ ಆಕರಗಳಲ್ಲಿ ನಗರಗಳ ಅವನತಿಯನ್ನು ಸಮರ್ಥಿಸಿಕೊಳ್ಳತಕ್ಕ ಉದಾಹರಣೆಗಳು ಹೇರಳವಾಗಿಯೇ ದೊರೆತವು. ಆದರೆ ಅಂಥ ಉದಾಹರಣೆಗಳು ಸಾಮಾನ್ಯವಾಗಿ ಕ್ರಿ.ಶ. 150-350 ಕಾಲಕ್ಕೆ ಸೇರಿದ್ದವು. ಅನಂತರದ ಕಾಲದಿಂದ ದೊರೆತದ್ದು ಕೆಲವು ಬಿಡಿ ಉದಾಹರಣೆಗಳು ಮಾತ್ರ. ತಮ್ಮ ದತ್ತಾಂಶದ ಸ್ವರೂಪವನ್ನು ಅಲಕ್ಷಿಸಿ ಶರ್ಮರು ತಾವು ಹಿಂದೆ ಮಂಡಿಸಿದ್ದ ಫ್ಯೂಡಲ್ ಸಿದ್ಧಾಂತಕ್ಕೆ ಹೊಂದಿಕೊಳ್ಳುವಂತೆ ಕ್ರಿ.ಶ. 300-1000ದ ಅವಧಿಯನ್ನು ನಗರಗಳ ಅವನತಿಯ ಯುಗವೆಂದು ಬಣ್ಣಿಸಿ ಅದರಲ್ಲಿ ಗುಪ್ತೋತ್ತರ ಕಾಲವನ್ನು ನಿರ್ಣಾಯಕವೆಂದು ಬಗೆದರು.

ಈ ಕಾರಣಗಳಿಂದಾಗಿ, ಇಂದು ಇತಿಹಾಸಕಾರರು ಸಾಮಾನ್ಯವಾಗಿ ಶರ್ಮರ ವಾದಸರಣಿಗೆ ಸಮರ್ಥನೆ ನೀಡುವುದಿಲ್ಲ. ಆದರೆ ಶರ್ಮರು ನೀಡುವ ದತ್ತಾಂಶಗಳು ಅಮೂಲ್ಯವಾಗಿಯೇ ಉಳಿದಿವೆ. ಈ ದತ್ತಾಂಶಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ಗೊಂದಲಭರಿತ ಪ್ರಶ್ನೆಯಾಗಿರುವುದರಿಂದಲೋ ಏನೋ, ಆ ಕುರಿತು ಹೆಚ್ಚಿನ ವಿಶ್ಲೇಷಣೆಗಳು ನಡೆದಿಲ್ಲ.

ಕರ್ನಾಟಕದ ಅತ್ಯಂತ ಹಳೆಯ ನಗರಗಳಲ್ಲಿ ಬೆಳಗಾವಿಯ ವಡಗಾವ್-ಮಾಧವಪುರ ಒಂದು. ಕ್ರಿ.ಪೂ. ೪೦೦ರ ಸುಮಾರಿಗೆ ಆವಾಸಕೇಂದ್ರವು ತಲೆಯೆತ್ತಿದ ಈ ನಗರದಲ್ಲಿ ಕ್ರಿ.ಶ. ೨೨೫ರ ನಂತರ ಜನವಾಸ ಕೊನೆಗೊಂಡಿತು. ಅಶೋಕನ ಕಾಲದ ನೆಲೆಗಳಾಗಿದ್ದ ಮಸ್ಕಿ, ಚಂದ್ರವಳ್ಳಿ, ಬ್ರಹ್ಮಗಿರಿ, ಸನ್ನತಿ ಮುಂತಾದ ನಗರಗಳೆಲ್ಲವೂ ಕ್ರಿ.ಶ. ೩೫೦ರ ವೇಳೆಗೆ ಕಣ್ಮರೆಯಾಗಿದ್ದವು. ಈ ಊರುಗಳಲ್ಲಿ ಮತ್ತೆ ಆವಾಸದ ನೆಲೆಗಳು ಏಳತೊಡಗಿದ್ದು ಅನೇಕ ಶತಮಾನಗಳ ತರುವಾಯ. ಹಳೆಯ ನೆಲೆಗಳಲ್ಲಿ ನಾಲ್ಕನೆಯ ಶತಮಾನದ ಬಳಿಕವೂ ಮುಂದುವರೆದದ್ದು ಬನವಾಸಿ ಮಾತ್ರ. ಕದಂಬರ ರಾಜಧಾನಿಯಾಗಿ ಅದು ಪ್ರಾಮುಖ್ಯತೆ ಹೊಂದಿತ್ತಾದರೂ ಸಾತವಾಹನರ ಕಾಲದ ಪಳೆಯುಳಿಕೆಗಳಿಗೆ ಹೋಲಿಸಿದಾಗ ಅಲ್ಲಿಯೂ ನಗರಜೀವನವು ಜೀರ್ಣಾವಸ್ಥೆಯನ್ನೇ ಹೊಂದಿತ್ತೆಂದು ಹೇಳಬೇಕು. ಆದರೆ ವಡಗಾವ್-ಮಾಧವಪುರ, ಸನ್ನತಿ ಮತ್ತಿತರ ನೆಲೆಗಳಂತೆ ಅಲ್ಲಿನ ಆವಾಸ ವ್ಯವಸ್ಥೆ ಅಂತ್ಯಗೊಳ್ಳಲಿಲ್ಲ.

ಆಂಧ್ರದಲ್ಲಿಯೂ ಇದೇ ಸ್ಥಿತಿಯನ್ನು ಕಾಣುತ್ತೇವೆ. ಪೆದ್ದಬಂಕೂರನ್ನು ಕ್ರಿ.ಶ. ಮೂರನೆಯ ಶತಮಾನದಲ್ಲಿ ಕೈಬಿಡಲಾಯಿತು. ಅದೇ ಹೊತ್ತಿಗೆ ನಾಣ್ಯಮುದ್ರಣದ ಕೇಂದ್ರವಾಗಿತ್ತೆಂದು ನಂಬಲಾಗಿರುವ ಧೂಲಿಕಟ್ಟಾದಲ್ಲಿ ಜನಜೀವನ ನಿಂತುಹೋಯ್ತು. ಪೆದ್ದಮರ್ರೂರು, ರಾಜಮಂಡ್ರಿ, ಕೇಸರ್ಪಲ್ಲಿ, ಸಾತನಿಕೋಟ, ಧರಣಿಕೋಟ, ನಾಗಾರ್ಜುನಕೊಂಡದಂತ ಹಲವು ಕೇಂದ್ರಗಳು ನಾಲ್ಕನೆಯ ಶತಮಾನ ಆರಂಭವಾಗುವ ವೇಳೆಗೆ ನಾಮಾವಶೇಷಗೊಂಡಿದ್ದವು. ಕೊಂಡವಳ್ಳಿಯಲ್ಲಿ ಇದೇ ಕಾಲಕ್ಕೆ ನಗರಜೀವನ ಕ್ಷೀಣಿಸಿತಾದರೂ ಅದು ಕೊನೆಗೊಳ್ಳಲಿಲ್ಲ, ಆರನೆಯ ಶತಮಾನದ ವರೆಗೆ ಮುಂದುವರೆಯಿತು. ಸಾಲಿಹುಂಡಂನಲ್ಲಿಯೂ ನಾಲ್ಕರಿಂದ ಎಂಟರ ವರೆಗಿನ ಶತಮಾನಗಳಲ್ಲಿ ಆವಾಸ ಕೇಂದ್ರವು ಉಳಿದುಕೊಂಡಿತ್ತಾದರೂ ವಾಸ್ತು ನಿರ್ಮಿತಿಗಳಲ್ಲಿ ಹಳೆಯ ಸಾಮಗ್ರಿಗಳ ಮರುಬಳಕೆಯೇ ಹೆಚ್ಚಾಗಿ ಕಂಡುಬಂತು. ಯೇಲೇಶ್ವರದ ಹಳೆಯ ಪ್ರತಾಪವು ಕ್ರಿ.ಶ. ೩೦೦ರ ಹೊತ್ತಿಗೆ ಮುಗಿದುಹೋಗಿ ಮುಂದಿನ ಎರಡು ಶತಮಾನಗಳ ಕಾಲದಲ್ಲಿ ಸೊರಗುತ್ತ ಕ್ರಿ.ಶ ೫೦೦ರ ಸುಮಾರಿಗೆ ಕಣ್ಮರೆಯಾಯ್ತು. ಅಮರಾವತಿಯಲ್ಲಿನ ಬೌದ್ಧರ

ಸ್ತೂಪವು ಸುಮಾರು ಹದಿನಾಲ್ಕನೆಯ ಶತಮಾನದ ವರೆಗೆ ಆಕರ್ಷಣೆಯ ಕೇಂದ್ರವಾಗಿತ್ತು. ಆದರೆ ಕ್ರಿ.ಶ. 300ರ ಬಳಿಕ ಈ ಊರಲ್ಲಿಯೂ ಉತ್ಖನನದ ವರದಿಗಳು ಆವಾಸಕೇಂದ್ರದ ಸೂಚನೆ ಒದಗಿಸುವುದಿಲ್ಲ. ಈ ರೀತಿ ಒಂದೊಂದೇ ಪ್ರದೇಶಗಳನ್ನು ವಿಶ್ಲೇಷಿಸುತ್ತ ಹೋದಾಗ ಕರ್ನಾಟಕ ಹಾಗೂ ಆಂಧ್ರದಲ್ಲಿ ಕಂಡ ವಿದ್ಯಮಾನವನ್ನೇ ಉತ್ಖನನದ ವರದಿಗಳು ಮತ್ತು ಇತರ ಆಕರಗಳು ಎಲ್ಲೆಡೆಯಲ್ಲೂ ಸೂಚಿಸುತ್ತವೆ. ಕೇರಳದ ಮುಸಿರಿ ಎಂಬ ರೇವು ನಗರವು ಯಾವುದೆಂದು ನಮಗೆ ತಿಳಿದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೊಡುಙ್ಙಲ್ಲೂರ್ ಸಮೀಪದ ಪಟ್ಟಣಂನಲ್ಲಿ ಪ್ರಮುಖ ನೆಲೆಯೊಂದು ಪತ್ತೆಯಾಯ್ತು. ಅದನ್ನೇ ಪ್ರಾಕ್ತನ ತಜ್ಞರು ಹಾಗೂ ಇತಿಹಾಸಕಾರರು ಮುಸಿರಿ ಎನ್ನುತ್ತ ಬಂದಿದ್ದಾರೆ. ಇಲ್ಲಿ ನಾಲ್ಕನೆಯ ಶತಮಾನದ ನಂತರ ನಗರಜೀವನದ ಸೂಚನೆಗಳು ಕಾಣುವುದಿಲ್ಲ. ಗ್ರೀಕ್ ಸೂತ್ರಗಳಲ್ಲಿ ಹೇಳಲಾಗಿರುವ ತಿಂಡಿಸ್ (ಸಂಗಂ ಗೀತೆಗಳ ತೊಂಡಿ) ಮತ್ತು ನೆಲ್‌ಚಿಂದಾ ಯಾವ ಊರುಗಳೆಂದು ಹೇಳಲಾಗದು. ಈ ಊರುಗಳ ಉಲ್ಲೇಖಗಳು ಕೂಡ ಕ್ರಿ.ಶ.300ರ ನಂತರ ಎಲ್ಲಿಯೂ ಕಾಣುವುದಿಲ್ಲ. ತಮಿಳುನಾಡಿಗೆ ಬಂದಾಗ ಕ್ರಿ.ಶ. 300-600ರ ಅವಧಿಯಲ್ಲಿ ಕಾಂಚೀಪುರಂ ನಗರವನ್ನು ಹಿಂದಿಗಿಂತ ಸಾಕಷ್ಟು ದುರ್ಬಲಗೊಂಡ ಸ್ಥಿತಿಯಲ್ಲಿ ಕಾಣುತ್ತೇವೆ, ಆದರೆ ಪಲ್ಲವರ ರಾಜಧಾನಿಯಾಗಿ ಅದು ತಕ್ಕಮಟ್ಟಿಗೆ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳುತ್ತದೆ. ನಟ್ಟಮೇಡು, ವಾಸವಸಮುದ್ರಂ ಮತ್ತು ಅರಿಕಮೇಡು ಮೂರನೆಯ ಶತಮಾನ ಆರಂಭವಾಗುವ ಮುನ್ನವೇ ಕೊನೆಗೊಂಡಿದ್ದವು. ಕೋರ್ಕೈ ಮತ್ತು ಕೊಡುಮಣಲ್ ಮೂರನೆಯ ಶತಮಾನದಲ್ಲಿ ನಶಿಸಿಹೋದವು. ನಾಲ್ಕನೆಯ ಶತಮಾನದ ಆರಂಭದಲ್ಲಿ ಕುಸಿಯತೊಡಗಿದ ಉಱೈಯೂರ್ ಐದನೆಯ ಶತಮಾನದಲ್ಲಿ ಜನವಸತಿ ಇಲ್ಲದಂತಾಗಿ ಮುಂದೆ ಸುಮಾರು ಎರಡು ಶತಮಾನಗಳ ಕಾಲ ಆವಾಸಹೀನವಾಗಿ ಉಳಿಯಿತು. ಮಧುರೈ ನಗರದ ಬಗ್ಗೆ ನಮ್ಮಲ್ಲಿ ಹೆಚ್ಚಿನ ಮಾಹಿತಿಗಳಿಲ್ಲ. ಆದರೆ ಅಲ್ಲಿ ಆವಾಸಕೇಂದ್ರವು ಕೊನೆಗೊಳ್ಳಲಿಲ್ಲ ಎನ್ನಲು ಆಧಾರಗಳಿವೆ.

ದಕ್ಷಿಣಭಾರತದ ಮೂಲಗಳಲ್ಲಿ ಕಾಣುವ ಈ ಚಿತ್ರದ ಆವರ್ತನೆಯೇ ಭಾರತದ ಇತರ ಪ್ರದೇಶಗಳ ಸೂತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅದು ರಾಜಸ್ಥಾನದ ಬೈರಾಟ್ (ಮಹಾಭಾರತದ ವಿರಾಟನಗರ) ಆಗಬಹುದು, ಅಥವಾ ಮಧ್ಯಪ್ರದೇಶದ ಸಾಂಚಿಯಾಗಬಹುದು, ಒಡಿಶಾದ ಶಿಶುಪಾಲ್‌ಗಢ್, ಕಾಂಕಿಯಾ (ರಾಧಾನಗರ್) ಮೊದಲಾದ ಊರುಗಳಾಗಿರಬಹುದು, ಇಲ್ಲವೇ ಮಹಾರಾಷ್ಟ್ರದ ನಾಶಿಕ್, ಪೈಠನ್, ಬ್ರಹ್ಮಪುರಿ, ಕೌಸಮ್, ಭೋಕರ್ದಾನ್, ತೇರ್ ಮುಂತಾದ ಕೇಂದ್ರಗಳಾಗಿರಬಹುದು. ಬೌದ್ಧರ ಪ್ರಮುಖ ಕೇಂದ್ರವಾದ ಶ್ರಾವಷ್ಟಿಯು ಚೀನಾದ ಪ್ರವಾಸಿ ಫಾ ಹ್ಯಾನ್‌ನ ಆಗಮನ ವೇಳೆಗಾಗಲೇ ಜೀರ್ಣಗೊಂಡಿತ್ತು. ಆದರೆ ಆವಾಸಕೇಂದ್ರವಾಗಿ ಅದು ಮುಂದುವರೆಯಿತು. ಶೃಂಗವೇರಪುರದಲ್ಲಿಯೂ ಆವಾಸವು ಕೊನೆಗೊಳ್ಳದಿದ್ದರೂ ಗುಪ್ತರ ಆಳ್ವಿಕೆಯ ಕಾಲದಲ್ಲಿ ನಗರಜೀವನ ಸಾಕಷ್ಟು ಸಡಿಲಗೊಂಡಿತು. ಈ ಸ್ಥಿತಿಯನ್ನೇ ಕೌಶಾಂಬಿ, ಚಂಪಾ ಮತ್ತು ವೈಶಾಲಿಯಲ್ಲಿ ಕಾಣುತ್ತೇವೆ. ವಾರಾಣಸಿ, ಉಜ್ಜಯಿನಿ ಮುಂತಾದ ಕೆಲವು ನಗರಗಳಲ್ಲಿ ಜನಜೀವನ ಮುಂದುವರೆದಿತ್ತಾದರೂ ಕ್ರಿ.ಶ.300ಕ್ಕಿಂತ ಹಿಂದೆ ಇದ್ದಂತ ಸಮೃದ್ಧಿಯನ್ನು ಸೂಚಿಸುವ ಅವಶೇಷಗಳು ಪತ್ತೆಯಾಗಿಲ್ಲ. ಪಾಟಲೀಪುತ್ರ ಹಾಗೂ ತಕ್ಷಶಿಲೆ ಕ್ರಿ.ಶ. 300ರ ನಂತರವೂ ತಮ್ಮ ಮಹತ್ವ ಉಳಿಸಿಕೊಂಡಿದ್ದವು. ಈ ನೆಲೆಗಳಲ್ಲಿಯೂ ಆರನೆಯ ಶತಮಾನಕ್ಕೆ ತೆರೆ ಏಳುವ ಹೊತ್ತಿಗೆ ನಗರಜೀವನ ಅಸ್ತವ್ಯಸ್ತಗೊಂಡಿತ್ತು.

ನಗರಗಳ ಅವನತಿಗೆ ಕಾರಣವೇನು? ಶರ್ಮರ ವಿವರಣೆ ಈಗ ಮನ್ನಣೆ ಕಳೆದುಕೊಂಡಿರುವುದರಿಂದ ಬೇರೆಯೇ ಆದ ಚಾರಿತ್ರಿಕ ಕಾರಣಗಳನ್ನು ಹುಡುಕುವುದು ಅನಿವಾರ್ಯವಾಗಿತ್ತದೆ. ಆಕರಗಳನ್ನು ಸೂಕ್ಷ್ಮವಾಗಿ ಶೋಧಿಸಿದಾಗ ದೊರಕುವ ಚಿತ್ರ ಹೀಗಿದೆ.

ಮೌರ್ಯೋತ್ತರ ಯುಗದಲ್ಲಿ ನಗರಗಳ ಸಂಖ್ಯೆಯು ಅಪಾರ ವೃದ್ಧಿಯನ್ನು ಕಂಡಿತು. ಹೆಚ್ಚೆಚ್ಚು ಕನ್ನೆನೆಲದ ಪ್ರದೇಶಗಳಿಗೆ ಆರಂB ಕಾರ್ಯ ವಿಸ್ತರಿಸಿ ಕಾರ್ಷಿಕ ಜೀವನ ಸುದೃಢ ಬುನಾದಿಯನ್ನು ಪಡೆಯುತ್ತ ಹೋದ ಸಂದರ್ಭದಲ್ಲಿ ಈ ನಗರಗಳು ಏಳಿಗೆ ಪಡೆದವು. ಕ್ರಿ.ಪೂ. ಆರನೆಯ ಶತಮಾದಲ್ಲಿ ವಿಕಾಸ ಹೊಂದಿದ ನಗರಗಳ ಅಸ್ತಿತ್ವವು ದೂರದ ಪ್ರದೇಶಗಳಿಂದ ಒದಗಿಬರುವ ಸಂಪನ್ಮೂಲಗಳನ್ನು ಅವಲಂಭಿಸಿತ್ತು. ಸಾರ್ತವಾಹರ ಮುಖಾಂತರ ಈ ನಗರಗಳ ಉಪಭೋಗದ ಬೇಡಿಕೆಗಳು ಸರಬರಾಜಾಗುತ್ತಿದ್ದವು. ಅಂದಿನ ವ್ಯಾಪಾರಮಾರ್ಗಗಳು ಮೂಲತಃ ಈ ಉಪಭೋಗವಸ್ತುಗಳ ಪೂರೈಕೆಯ ಉದ್ದೇಶದಿಂದ ಸ್ಥಾಪಿತವಾದುದ್ದಾಗಿವೆ.

ಕೃಷಿ ವಿಸ್ತಾರಗೊಳ್ಳುತ್ತ ಹೋದಂತೆ ಉಪಭೋಗದ ಸ್ಥಳೀಯ ನೆಲೆಗಳು ಹುಟ್ಟಿಕೊಂಡವು. ರಾಜಕೀಯ ಹಾಗೂ ಧಾರ್ಮಿಕ ಮಹತ್ವ ಹೊಂದಿದ್ದ ದೊಡ್ಡದೊಡ್ಡ ನಗರಗಳಲ್ಲಿ ಕಂಡುಬಂದಂಥ ವೈವಿಧ್ಯಮಯ ಕುಶಲಕರ್ಮಿಗಳ ಯಾ ವಾಸ್ತುವಿದ್ಯಾತಜ್ಞರ ಅಗತ್ಯವು ಈ ಸಣ್ಣ ನೆಲೆಗಳಲ್ಲಿ ಇರಲಿಲ್ಲ. ಅಲ್ಲಿನ ಉಪಭೋಗವು ಕಾರ್ಷಿಕ ಉತ್ಪನ್ನಗಳಿಗೆ ಹಾಗೂ ಉಪ್ಪು, ಲೋಹ, ವಸ್ತ್ರಗಳೇ ಮೊದಲಾದ ವಸ್ತುಗಳಿಗೆ ಸೀಮಿತವಾಗಿತ್ತು. ಇಂಥ ಬೇಡಿಕೆಯನ್ನು ಪೂರೈಸುವ ಸ್ಥಳೀಯ ವ್ಯಾಪಾರಿ ವರ್ಗಗಳು ಈ ಸಂದರ್ಭದಲ್ಲಿ ಏಳಿಗೆ ಪಡೆದರು. ಅಂಥ ವ್ಯಾಪಾರಿಗಳು ನೂರೋ ಇನ್ನೂರೋ ಕಿಲೋಮೀಟರ್ ಸುತ್ತಳತೆಯ ಪ್ರದೇಶಗಳಲ್ಲಿ ಮಾತ್ರ ವ್ಯವಹಾರ ನಡೆಸುತ್ತಿದ್ದರು. ಮಹಾರಾಷ್ಟ್ರದ ಕಾರ್ಲೆಯನ್ನು ಕೇಂದ್ರವಾಗಿಟ್ಟುಕೊಂಡ ಧೇನುಕಾಕಟದ ವ್ಯಾಪಾರಿಗಳು ಈ ಸಾಲಿಗೆ ಸೇರಿದವರು. ಸ್ಥಳೀಯ ವ್ಯಾಪಾರಜಾಲಗಳು ಇಲ್ಲದ ಪ್ರದೇಶಗಳಲ್ಲಿ ಅವು ವಿಕಾಸಹೊಂದಿದವು, ಈಗಾಗಲೇ ಇದ್ದಂತ ಪ್ರದೇಶಗಳಲ್ಲಿ ಇನ್ನಷ್ಟು ಆಳಕ್ಕೆ ಬೇರೂರಿಕೊಂಡವು. ಉಪಭೋಗದ ಸ್ವರೂಪವೂ, ವಿತರಣೆ ಹಾಗೂ ಮರುವಿತರಣೆಯ ಕ್ರಮಗಳೂ ಈ ಬೆಳವಣಿಗೆಯಿಂದಾಗಿ ತೀವ್ರ ಮಾರ್ಪಾಟು ಪಡೆದುಕೊಂಡವು. ಸಾರ್ತವಾಹನ ಕೇಂದ್ರಿತ ವ್ಯಾಪಾರ ವ್ಯವಸ್ಥೆಗೆ ಇದರಿಂದ ಹೊಡೆತ ಬಿತ್ತು. ಆ ವ್ಯವಸ್ಥೆ ಮುಂದುವರೆಯಿತು ನಿಜ, ಆದರೆ ಅದಕ್ಕೆ ಹಿಂದೆ ಇದ್ದ ತೀವ್ರತೆ ಉಳಿಯಲಿಲ್ಲ. ಹೀಗೆ, ಕೃಷಿ ವಿಸ್ತರಣೆಯಿಂದ ಉಂಟಾದ ಈ ಎಲ್ಲ ಬದಲಾವಣೆಗಳಿಂದಾಗಿ ಕ್ರಿ.ಶ. 150-350ರ ಅವಧಿಯಲ್ಲಿ ನಗರಗಳು ಒಂದೊಂದಾಗಿ ನಶಿಸುತ್ತ ಬಂದವು. ಕೆಲವೆಡೆಗಳಲ್ಲಿ ಆವಾಸಕೇಂದ್ರಗಳೇ ಇಲ್ಲದಂತಾದರೆ ಇತರೆಡೆಗಳಲ್ಲಿ ನಗರಜೀವನ ಮಂಕು ಕವಿದ ಅವಸ್ಥೆಯಲ್ಲಿ ಮುಂದಕ್ಕೆ ಸಾಗಿತು. ಕಾರ್ಷಿಕ ಜೀವನವು ನಗರಜೀವನದ ಮೇಲೆ ಮೇಲುಗೈ ಸಾಧಿಸಿಕೊಂಡು ಭಾರತದ ಇತಿಹಾಸದಲ್ಲಿ ನಿರ್ಣಾಯಕ ಪಲ್ಲಟವೊಂದಕ್ಕೆ ಹೇತುವಾಯ್ತು. ಈ ಕಾರ್ಷಿಕ ಜೀವನದ ಸ್ವರೂಪದ ಹತ್ತಾರು ಸಂಕೀರ್ಣ ಆಯಾಮಗಳಲ್ಲಿ ಜಾತಿಪದ್ಧತಿಯೂ ಒಂದು.

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಹದಿಮೂರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹನ್ನೆರಡನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹನ್ನೊಂದನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಏಳನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂದನೇ ಕಂತು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...