ಜ್ಞಾನದ ದೌಲತ್ತನ್ನು ತಮ್ಮ ಆಳದ ಸುಜ್ಞಾನದಿಂದ ಸಾಣೆ ಹಿಡಿಯುವವರು ಚೊಕ್ಕಾಡಿ: ವಿಕಾಸ ನೇಗಿಲೋಣಿ


ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಗೆ ಎಂಬತ್ತೆರಡು. ಅವರ ಅನುಭವವನ್ನು ನೋಡಿದಾಗ, ಮಾಗಿನ ಅಭಿವ್ಯಕ್ತಿಯನ್ನು ಕಂಡಾಗ ಅಷ್ಟಾಗಿರಲಿಕ್ಕೆ ಸಾಕು ಅನ್ನಿಸಿದರೂ ಅವರಿಗೆ ಅಷ್ಟೆಲ್ಲ ಆಗಿರಲಿಕ್ಕೇ ಇಲ್ಲ ಬಿಡಿ. ನನ್ನ ಕವಿತೆಯ ಹಸಿವಿನಿಂದ ನಾನು ಮೊದಮೊದಲು ಕಾವ್ಯಕ್ಕೆ ಫ್ಯಾನ್ ಆಗಿದ್ದು ಚೊಕ್ಕಾಡಿ ಅವರಿಗೇ ಎನ್ನುತ್ತಾರೆ ಲೇಖಕ ವಿಕಾಸ ನೇಗಿಲೋಣಿ. ಕವಿ ಸುಬ್ರಾಯ ಚೊಕ್ಕಾಡಿಯವರ ಹುಟ್ಟುಹಬ್ಬದ ಪ್ರಯುಕ್ತ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ನನ್ನ ಅತಿ ಹಿರಿಯ ಸ್ನೇಹಿತರೆಂದರೆ ಚೊಕ್ಕಾಡಿ. ಅತ್ಯಂತ ಮೆಲು ದನಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳುವವರೆಂದರೆ ಚೊಕ್ಕಾಡಿ. ಎಲ್ಲ ಗೊತ್ತಿದ್ದೂ ಏನೂ ಗೊತ್ತಿಲ್ಲ ಅನ್ನುವ ಹಾಗೆ ಇರುವವರೆಂದರೆ ಚೊಕ್ಕಾಡಿ. ನಮ್ಮ ಎಳಸು ಅಭಿವ್ಯಕ್ತಿ, ಜ್ಞಾನದ ದೌಲತ್ತನ್ನು ತಮ್ಮ ಆಳದ ಸುಜ್ಞಾನದಿಂದ ಸಾಣೆ ಹಿಡಿಯುವವರು ಚೊಕ್ಕಾಡಿ. ಎಲ್ಲ ಥರದ ನೆನಪುಗಳಿಗೂ ತಮ್ಮ ಮನದಲ್ಲಿ ಒಂದು ಕೋಣೆ ಕೊಟ್ಟು, ಬೇಕಾದ ಸಂದರ್ಭದಲ್ಲಿ ಅದನ್ನು ಬೇಕಾದಷ್ಟೇ ಆಚೆ ತೆಗೆಯುವ ನೆನಪು ಗೃಹದ ಮಾಲೀಕ ಚೊಕ್ಕಾಡಿ. ಕಟು ಮಾತುಗಳನ್ನೂ ಮೆಲುವಾದ ಪ್ರೀತಿಯ ವೀಳ್ಯದಲ್ಲಿ ಮಡಚಿ ಕೊಡಬಹುದು ಅಂತ ತೋರಿಸಿದವರು ಚೊಕ್ಕಾಡಿ.

ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಗೆ ಎಂಬತ್ತೆರಡು. ಅವರ ಅನುಭವವನ್ನು ನೋಡಿದಾಗ, ಮಾಗಿನ ಅಭಿವ್ಯಕ್ತಿಯನ್ನು ಕಂಡಾಗ ಅಷ್ಟಾಗಿರಲಿಕ್ಕೆ ಸಾಕು ಅನ್ನಿಸಿದರೂ ಅವರಿಗೆ ಅಷ್ಟೆಲ್ಲ ಆಗಿರಲಿಕ್ಕೇ ಇಲ್ಲ ಬಿಡಿ. ನನ್ನ ಕವಿತೆಯ ಹಸಿವಿನಿಂದ ನಾನು ಮೊದಮೊದಲು ಕಾವ್ಯಕ್ಕೆ ಫ್ಯಾನ್ ಆಗಿದ್ದು ಚೊಕ್ಕಾಡಿ ಅವರಿಗೇ. ಕಾಲೇಜು ಓದುತ್ತಿದ್ದ ವೇಳೆ, ಭಾವಗೀತೆಗಳ ಮಗ್ಗುಲಲ್ಲಿ ಅದೇಕೋ ನವ್ಯ ಕವಿತೆಗಳು ವಿಚಿತ್ರವಾಗಿ ಆಕರ್ಷಿಸುತ್ತಿದ್ದವು. ಸಿಕ್ಕಷ್ಟನ್ನೇ ಬಾಚಿ ತಬ್ಬಿ, ಅದರೊಳಗಿನ ಅರ್ಥವಾಗದ ಆದರೆ ರೋಮಾಂಚ ತರುವ ಸಾಲುಗಳನ್ನು ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದ ಹೊತ್ತು. ಆ ಹೊತ್ತಿಗೆ ಮ.ಸು.ಮ. ಎನ್ನುವ ನನ್ನ ಸೀನಿಯರ್, ಸದ್ಯ ಉಪನ್ಯಾಸಕರಾಗಿರುವ ಸಾಹಿತ್ಯಪ್ರೇಮಿ ಚೊಕ್ಕಾಡಿಯವರನ್ನು ಪರಿಚಯಿಸಿದರು. ಆಗ ಓದಿದ್ದು, ‘ಇವು ನಿಮ್ಮವೂ ಇರಬಹುದು’. ಊರಲ್ಲಿ ಅನಾಥವಾಗಿ ಬಿದ್ದ ಕನಸುಗಳನ್ನು ನೋಡಿ, ಅಲ್ಲಿ ಕನಸುಗಳು ಬಿದ್ದಿದ್ದವು ಅಂತ ಲೇಖಕನಿಗೆ ಯಾರೋ ಬಂದು ಹೇಳುತ್ತಾರೆ. ಅವನು ಆ ಕನಸನ್ನು ಹುಡುಕಿ ಹೋಗುತ್ತಾನೆ. ಕಡೆಯಲ್ಲಿ ಕವಿ, ಕವಿತೆಯ ಬಗ್ಗೆ ಹೇಳುತ್ತಾ ‘ಅವು ನಿಮ್ಮವೂ ಇರಬಹುದು’ ಅನ್ನುತ್ತಾನೆ. 

ಹೀಗೆ ಒಂದು ಬಣ್ಣ ತುಂಬಿದ ಬಲೂನ್ ನನ್ನೆದುರು ಝಲ್ಲೆಂದು ಒಡೆದು, ರಕ್ತಪಾತವಾದಂತೆ ಮನಸ್ಸನ್ನು ಬೆಚ್ಚಿ ಬೀಳಿಸಿದವರು ಚೊಕ್ಕಾಡಿ. ಅದಾದಮೇಲೆ ಅವರ ಸಮಗ್ರ ಸಂಕಲನಕ್ಕಾಗಿ ನಾನು ಆ ಕಾಲಕ್ಕೆ ಅಲೆದಿದ್ದು ಅದೆಷ್ಟೋ. ಆದರೆ ಅವರ ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೇ, ಮುನಿಸು ಥರವೇ ಮುಗುದೇ, ಸಂಜೆಯ ರಾಗಕೆ- ಮೊದಲಾದ ಭಾವಗೀತೆಗಳನ್ನೇ ಹಾಡಿ ನನ್ನ ಕಾವ್ಯದ ಹಸಿವನ್ನು ರಾಗದಲ್ಲಿ ತೀರಿಸಿಕೊಳ್ಳುತ್ತಿದ್ದೆ. ಇವತ್ತಿಗೂ ನನ್ನ ಹೆಂಡತಿಗೆ ಮುನಿಸು ಥರವೇ ಇಷ್ಟ, ಸಂಜೆಯ ರಾಗಕೆ, ನನಗೂ, ನನ್ನ ತಮ್ಮನಿಗೂ ಆಪ್ತ. ಇದೆಲ್ಲವೂ ಇದ್ದಾಗಲೂ ಅದೇನೋ ಚೊಕ್ಕಾಡಿ ಎನ್ನುವ ಹೆಸರೇ ಅದೇನೋ ರೋಮಾಂಚನವನ್ನು ತರುತ್ತಿತ್ತು, ಅವರ ಮತ್ತಷ್ಟು ನವ್ಯ ರೂಪದ ಕವಿತೆಯನ್ನು ಓದುವ ಆಸೆಯನ್ನು ನನ್ನೊಳಗೆ ಮೊಳೆಸುತ್ತಲೇ ಇತ್ತು.

ಅಂಥ ನೆಚ್ಚಿನ ಕವಿಯನ್ನು ಅತಿ ಹತ್ತಿರದಿಂದ, ಮತ್ತೂ ಆಪ್ತವಾಗಿ ಅರ್ಥ ಮಾಡಿಕೊಂಡಿದ್ದು- ಕಥೆಕೂಟದ ಮೂಲಕ. ಮಳೆಗಾಲ, ಚಳಿಗಾಲ, ಬೇಸಗೆಗಾಲ, ವಸಂತ, ಗ್ರೀಷ್ಮ ಅಂತಿಲ್ಲ- ಪ್ರತಿ ಸಲವೂ ಯಾರೇ ಏನೇ ಬರೆದರೂ ಅದರಲ್ಲಿ ಭೇದ ಭಾವವನೆಣಿಸದೇ ಪ್ರತಿಯೊಬ್ಬರಿಗೂ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಅದರ ಬಗ್ಗೆ ಬರೆಯುವುದು ಒಂದು. ಮತ್ತೊಂದು, ಅದರ ಬಗ್ಗೆ ವ್ಯಾಲ್ಯೂಯೆಬಲ್ ಆಗಿರುವುದನ್ನೇ ಬರೆಯುವುದು ಮತ್ತೊಂದು. ಅವರು ಅಭಿಪ್ರಾಯ ಬರೆಯುವಾಗ ಮಾಸ್ಕ್ ಹಾಕಿಕೊಳ್ಳುವುದಿಲ್ಲ, ಯಾರ ಜೊತೆಗೂ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳುವುದಿಲ್ಲ. ಮೆತ್ತಗೆ ಹೇಳುತ್ತಾರೆ, ಆದರೆ ಸ್ಪಷ್ಟವಾಗಿರುತ್ತದೆ ಅಭಿಪ್ರಾಯ. ಈ ಥರದ ಬೇರೆ ಯಾವ ಕತೆಗಳನ್ನು ಯಾರು ಬರೆದಿದ್ದಾರೆ ಅಂತ ನಿಖರವಾಗಿ ಜ್ಞಾಪಿಸಿಕೊಂಡು ಹೇಳಬಲ್ಲ ಪಂಡಿತರವರು. ಹಾಗೊಮ್ಮೆ ಹೇಳಿದ್ದು ಕಟುವಾಯಿತು ಅಂತ ಕಂಡರೆ ಅನ್ಯತಾ ಭಾವಿಸಬೇಡಿ ಅಂತ ಇನ್ ಬಾಕ್ಸ್ ಗೆ ಬಂದು ಗುಟ್ಟಾಗಿ ಸಂಕೋಚದಿಂದಲೇ ತೀರಾ ಚಿಕ್ಕವರ ಬಳಿಯೂ ಕ್ಷಮೆ ಕೋರುವಷ್ಟು ದೊಡ್ಡಗುಣ. ಹಾಗೇ ಕಾಲೆಳೆದು, ತಮಾಷೆ ಮಾಡುವುದಕ್ಕೂ ಸೈ. 

ಕೆಲ ತಿಂಗಳಾಯಿತು ಮಾತಾಡದೇ ಅಂತ ಕಂಡರೆ ನಾನು ಮುಲಾಜಿಲ್ಲದೇ ಅವರಿಗೆ ಫೋನ್ ಮಾಡಿ ಮಾತಾಡುತ್ತೇನೆ, ಸಾಹಿತ್ಯ, ಸಿನಿಮಾ, ಜೀವನ- ಹೀಗೆ ಏನೆಲ್ಲ ಅವರ ಜೊತೆ ಮಾತಾಡುವುದಕ್ಕೆ ನನಗೆ ಕೊಂಚವೂ ಸಂಕೋಚವಿಲ್ಲ. ಅವರ ಅನುಭವ, ಅಪ್ ಡೇಟೆಡ್ ಆದ ಜ್ಞಾನ, ವಿಮರ್ಶೆಯ ಪರಿಭಾಷೆ ಗೊತ್ತಿದ್ದೂ ಅದನ್ನು ಮನೆಯಲ್ಲೇ ಬಿಟ್ಟು ಕೈಬೀಸಿಕೊಂಡು ಬಂದು, ಸರಳವಾಗಿ ಸ್ಪಷ್ಟವಾಗಿ ಮಾರ್ಗದರ್ಶನ ಮಾಡುವಂಥ ವ್ಯಕ್ತಿತ್ವ, ಮೇಷ್ಟ್ರಾದರೂ ಪಾಠ ಮಾಡಿದಂತೆ ಕಾಣದ ಆತ್ಮೀಯತೆ, ಅಪಾರ ಅಪಾರ ಸಜ್ಜನಿಕೆ, ಸೆನ್ಸ್ ಆಫ್ ಹ್ಯೂಮರ್... ಇನ್ನೂ ತುಂಬ ಹೇಳುತ್ತಲೇ ಇರುವಷ್ಟು ಅವರಿಂದ ನಾನು ಕಂಡುಂಡಿದ್ದೇನೆ.

ಎಂಬತ್ತೆರಡು ಆಗಿದ್ದು ನಿಮಗಲ್ಲ ಅಂತ ಝಾಡಿಸಿಕೊಂಡು ಬಿಡಿ, ಅಜ್ಜ ಅಂತ ನಾನು ಕರೆದರೆ ಕೊಂದು ಬಿಡಿ. ಎವರ್ ಗ್ರೀನ್, ಎವರ್ ಯಂಗ್, ಎವರ್ ರೆಡಿ ಚೊಕ್ಕಾಡಿ ಸರ್ ಗೆ ಅವರ ಅಭಿಮಾನಿ ಕಡೆಯಿಂದ ಜನ್ಮ ದಿನದ ಶುಭಾಶಯ.

ವಿಕಾಸ ನೇಗಿಲೋಣಿ ಅವರ ಲೇಖಕ ಪರಿಚಯ..

MORE FEATURES

ಕೋಮುವಾದಿ ಚಕ್ರವ್ಯೂಹ ಭೇದಿಸುವವರ ಕೈಪಿಡಿ ‘ನಡು ಬಗ್ಗಿಸದ ಎದೆಯ ದನಿ’

29-03-2024 ಬೆಂಗಳೂರು

'ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧ...

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...