ಕಾಲ ಸಂವೇದನೆಗಳ ಸಶಕ್ತ ಕವಿತೆಗಳು ‘ಬಾಲ್ಕನಿ ಕಂಡ ಕವಿತೆಗಳು’


ಪ್ರತಿ ಸಂಗತಿಯನ್ನು ಸೂಕ್ಷ್ಮವಾಗಿ ಗ್ರಹಿಸಿ, ವಸ್ತುಸ್ಥಿತಿಯನ್ನು ಅರಿತು ಧನಾತ್ಮಕವಾಗಿ ಕಾಣುವ ಗುಣದ ಕಾವ್ಯಗಳನ್ನು ಹೆಣೆಯುವುದು ಕವಯತ್ರಿ ವಿಭಾ ಪುರೋಹಿತ್ ಅವರ ‘ಬಾಲ್ಕನಿ ಕಂಡ ಕವಿತೆಗಳು’ ಸಂಕಲನದ ಬಲವಾಗಿದೆ ಎಂದು ಪ್ರಶಂಸಿಸಿರುವ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು, ಆ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ;

ಹೊಸಬರನ್ನು ಓದುವುದು ಮತ್ತು ಹಿರಿಯರನ್ನು ಮತ್ತೊಮ್ಮೆ ಓದಿ ಮನನ ಮಾಡುವ ಸುಖವನ್ನು ಕೋವಿಡ್ ಕಾಲದಲ್ಲಿ ನಾನು ಕಂಡುಕೊಂಡೆ. ಕಾವ್ಯ ನನ್ನ ಮೊದಲ ಮತ್ತು ಕೊನೆಯ ಪ್ರೀತಿ. ಮನಸ್ಸು ಮತ್ತು ಹೃದಯಗಳನ್ನು ಅರಳಿಸುವ ಒಳ್ಳೆಯ ಕಾವ್ಯ ಬಾಂಧವ್ಯವನ್ನು ಕಟ್ಟಿಕೊಡುತ್ತದೆ. ಇಂತಹ ಪ್ರೀತಿಯನ್ನು ಉಕ್ಕಿಸಿದ ಕವನಸಂಕಲನ ’ಬಾಲ್ಕನಿ ಕಂಡ ಕವಿತೆಗಳು’.

ಈಗಾಗಲೆ ಮಲ್ಲಿಗೆ ಮತ್ತು ಇತರೆ ಕವಿತೆಗಳು, ದೀಪ ಹಚ್ಚು ಹಾಗೂ ಕಲ್ಲೆದೆ ಬಿರಿದಾಗ ಎಂಬ ಮೂರು ಸಂಕಲನಗಳನ್ನು ಪ್ರಕಟಿಸಿ ಸಾರಸ್ವತ ಲೋಕದ ನಜರಿಗೆ ಬಂದಿರುವ ಶ್ರೀಮತಿ ವಿಭಾ ಪುರೋಹಿತ ಅವರ ’ಬಾಲ್ಕನಿ ಕಂಡ ಕವಿತೆಗಳು’ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆಯುವುದು ನನ್ನ ಪಾಲಿಗೆ ಮಹತ್ವದ ಸಂಗತಿ ಎಂದು ತಿಳಿದಿರುವೆ. ಗೃಹಿಣಿ ಮತ್ತು ಶಿಕ್ಷಕಿಯಾಗಿರುವ ಶ್ರೀಮತಿ ವಿಭಾ ಮನೆ ಎಂಬ ಕೇಂದ್ರದಿಂದಲೇ ತಮ್ಮ ಸುತ್ತಲೂ ಆವರಿಸಿರುವ ಹಲವು ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಕಾವ್ಯ ರೂಪ ಕೊಟ್ಟಿರುತ್ತಾರೆ. ವಸ್ತುಸ್ಥಿತಿಯನ್ನು ಅರಿಯುವುದರ ಜೊತೆಗೆ ಧನಾತ್ಮಕವಾಗಿಯೂ ನೋಡಿರುವುದು ‘ಬಾಲ್ಕನಿ ಕಂಡ ಕವಿತೆಗಳು’ ಕಾವ್ಯದ ಮುಖ್ಯ ಗುಣ.

ಹಿಂದಿನ ಕವನ ಸಂಕಲನಗಳಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿ ಯಾವ ವಿಷಾದ ಭಾವವಿಲ್ಲದೆ ವರ್ತಮಾನಕ್ಕೆ ದನಿ ಕೊಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ವಾಸ್ತವದ ನೆಲೆಯಲ್ಲಿ ಕಾಲದ ಸೂಕ್ಷ್ಮಗಳು ಇಲ್ಲಿ ನಿಕಷಗೊಂಡಿವೆ. ವಿಶೇಷವೆಂದರೆ ಮೊದಲ ಮೂರು ಸಂಕಲನಗಳನ್ನು ಹೃದಯವಂತ ಹಿರಿಯರಾಗಿದ್ದ ದಿ.ಎನ್.ಪಿ. ಭಟ್ಟರು ತಮ್ಮ ಅವನಿ ರಸಿಕರಂಗ ಪ್ರಕಾಶನದ ಅಡಿಯಲ್ಲಿ ಹೊರ ತಂದದ್ದು, ಈಗ ಭಟ್ಟರು ನಮ್ಮ ಜೊತೆಗಿಲ್ಲ. ಈ ಸಂಕಲನದಲ್ಲಿ ಒಂದು ಅತ್ಯುತ್ತಮ ಕವಿತೆ ಅವರ ಕುರಿತಾಗಿದೆ.

ಕಾವ್ಯ ನಿರಂತರವಾಗಿ ಹರಿಯುವ ಹೊಳೆ ಇದ್ದಂತೆ. ಈಗೀಗ ಕನ್ನಡದಲ್ಲಿ ಸರಿ ಸುಮಾರು ಐದನೂರಕ್ಕೂ ಹೆಚ್ಚು ಕವನ ಸಂಕಲನಗಳು ಪ್ರತಿ ವರ್ಷ ಪ್ರಕಟವಾಗುತ್ತಿವೆ. ಅವುಗಳಲ್ಲಿ ಮಹಿಳೆಯರದೇ ಸಿಂಹಪಾಲು. ಮಾಹಿತಿ ತಂತ್ರಜ್ಞಾದ ಈ ದಿನಗಳಲ್ಲಿ ಯಾವ ವೇದಿಕೆಗಳನ್ನು ಅವಲಂಬಿಸದೆ ತಮ್ಮ ಕವಿತ್ವವನ್ನು ಪ್ರಕಟಿಸುವ ಕಾಲವಿದು. ಹದಿಹರೆಯದವರಿಂದ ಹಿಡಿದು ಹಿರಿಯರೂ ಕೂಡ ತಮ್ಮ ಕಾವ್ಯ ಶಕ್ತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ತಂತ್ರಜ್ಞಾನ ಕೊಟ್ಟಿದೆ. ಅದರಲ್ಲಿಯೂ ಸಂಸಾರವನ್ನು ನಿಭಾಯಿಸುತ್ತಲೇ ಸಾಮಾಜಿಕ ಜಾಲ ತಾಣಗಳಲ್ಲಿ ಕವಿತೆಗಳನ್ನು ಪ್ರಕಟಿಸುತ್ತಿರುವ ಕವಯತ್ರಿಯರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇಷ್ಟೆಲ್ಲ ತಂತ್ರಜ್ಞಾನವನ್ನು ಒಪ್ಪಿ ಪ್ರೋತ್ಸಾಹಿಸಿದರೂ ಪುಸ್ತಕದ ಸತ್ವ ಸೂಸು ಅದರ ರುಚಿಯೇ ಬೇರೆ. ಕಣ್ಣೆದುರು ಚೆಕ್ಕನೆ ಮಿಂಚಿ ಮಾಯವಾಗುವ ಸೆಳಕು ಚಿತ್ರಗಳಿಗಿಂತ ನಮ್ಮೊಂದಿಗೆ ಉಳಿಯುವ ಪುಸ್ತಕದ ಸ್ಪರ್ಶ ಸುಖವೇ ಅಮೂಲ್ಯ.

ಪ್ರಸ್ತುತ ‘ಬಾಲ್ಕನಿ ಕಂಡ ಕವಿತೆಗಳು’ ಸಂಕಲನದಲ್ಲಿ ಮೂರು ಧಾರೆಯ ಕವಿತೆಗಳಿವೆ. ವ್ಯಕ್ತಿಗತ ಅನ್ನಬಹುದಾದ, ಜೀವನ ದರ್ಶನ ಮತ್ತು ಕೋವಿಡ್ ಸಂದರ್ಭ ಇಲ್ಲಿ ಚಿತ್ರಿತವಾಗಿವೆ. ಇವುಗಳ ಒಟ್ಟು ಆಶಯ ಹಸನಾದ ಮನಸ್ಸು ಮತ್ತು ಸಮಾಜವೇ ಆಗಿದೆ. ಯಾವ ಸಂಗತಿಗೂ ಮುಖ ತಿರುಗಿಸದೆ, ಅದನ್ನು ಪರೀಕ್ಷಿಸಿ ಅದಕ್ಕೊಂದು ಸದಾಶಯದ ಭಾವ ತುಂಬಿರುವುದು ವಿಭಾ ಕಾವ್ಯದ ಬಲವಾಗಿದೆ.

ಜೀವನದ ಸರಳ ಸಂಗತಿಗಳು ಮತ್ತು ತಮಗೆ ನಿಲುಕಿದ ವಸ್ತು ವಿಚಾರಗಳನ್ನು ಆಯ್ದು ಕವಿತೆಗಳನ್ನು ರಚಿಸಿದ್ದಾರೆ. ನಮ್ಮ ನಿತ್ಯದ ಒಂದು ಕಪ್ ಚಹಾ, ಅಡುಗೆ ಮನೆಯ ಗ್ಯಾಸ್ ಸಿಲೆಂಡರಿನ ನೀಲಿ ಬೆಂಕಿ, ಅಪಾರ್ಟಮೆಂಟಿನ ಒಂದೇ ಬಾಗಿಲು, ಮನೆಯ ಅಂಗಳದ ಇಣಿಚಿ ನೋಡಿ ಬರೆದ ಮಾಳಿಗೆ ಮತ್ತು ಬಿಲ, ಜೀವ ಜಗತ್ತನ್ನು ಜಾಲಾಡಿದ ಕೋರೋನಾ ಕೈಯಲ್ಲೊಂದು ಕರಪತ್ರ - ಮುಂತಾದ ಕವಿತೆಗಳು ನಮ್ಮವೇ ಅನ್ನಿಸದೇ ಇರಲಾರವು. ಸಾಮಾನ್ಯ ಸಂಗತಿಗಳಿಗೆ ಬಾಯಿ ಕೊಡುವುದೇ ಸೃಜನಶೀಲತೆಯ ನಿಗೂಢ ಗುಣ. ಕಂಡರೂ ಕಾಣದಂತಿರುವ ನಿತ್ಯ ದೈನಿಕಗಳನ್ನು ಕವಯತ್ರಿ ವಿಭಾ ತಮ್ಮ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈಗೀಗ ನಮ್ಮ ಜೀವನ ವಿಧಾನದ ಪರಿಭಾಷೆ ಬದಲಾಗಿದೆ ಎಂಬ ಅರಿವು ಕೂಡ ಕವಯತ್ರಿಗಿದೆ.
ಈಗ ಎಲಕ್ಕೂ ಆಯುಷ್ಯ ಕಡಿಮೆ./ ಹತಾಶೆಗೂ, ನಿರಾಶೆಗೂ, ಗಾಯಕ್ಕೂ / ಮೊದಲಿನಂತೆ ಜನ್ಮವಿಡಿ ಕೊರಗಬೇಕಿಲ್ಲ / ಮರುಜನ್ಮಕ್ಕಾಗಿ ಯಾರೂ ಕಾಯುವುದಿಲ್ಲ - ಸದ್ಯದ ಕಾಲದೋಟವನ್ನು ದಾಖಲಿಸುತ್ತ . . . .

ಪರಿಭಾಷೆ ಬದಲಾಗಿದೆ
ಪ್ರೀತಿ ಪರಿಶುದ್ಧ ಸಿಗುವುದು
ಭಾರಿ ಅಪರೂಪ ಅರ್ಥ ವ್ಯವಸ್ಥೆಯ
ಸುತ್ತ ಆಡುವ ಬುಗುರಿಗಳು . . . .

ಹಣವೇ ಕೇಂದ್ರಕ್ಕೆ ಬಂದು ನಿಂತಿರುವ ಈ ಕಾಲದಲ್ಲಿ ಕಟು ಸತ್ಯವನ್ನು ಪರಿಭಾಷೆ ಬದಲಾಗಿದೆ ಎಂಬ ಕವಿತೆಯಲ್ಲಿ ಹಿಡಿದಿಟ್ಟಿದ್ದಾರೆ.

 

 

 

 

 

 

 

 

 

 

 

 

 

 

 

 

`ನೀಲಿ ಬೆಂಕಿ’ ಎಂಬ ಕವಿತೆ ಸಂಕಲನದ ಅತ್ಯತ್ತಮ ಕವಿತೆಗಳಲ್ಲೊಂದು. ಗಂಡು ಹೆಣ್ಣು ಹಾಗೂ ರಿಯಾಲಿಟಿ ಸೂಕ್ಷ್ಮಗಳನ್ನು ಬೀಜಗಣಿತದಂತೆ ಹಿಡಿದಿದ್ದಾರೆ. ದೇಹ ಮತ್ತು ಮನಸ್ಸು ಸಂಬಂಧಗಳ ಕೆದಕುತ್ತ ಸಮುದ್ರದೊಡಲೇ ಪರದೆಯಂತೆ ರಾಚಿದೆ / ಆಕಾಶದಲ್ಲೂ ನೀಲಿ ಮಳೆ ಕಂಡಿದೆ. ರೂಪಕಗಳ ಮೂಲಕ ಕಡದಿಟ್ಟ ಕವಿತೆ . . .

ಒಳಗಿದ್ದ ಬೆಂಕಿ ಬರ್ಫ ಬೇಡುತಿದೆ
ಇದ್ದಿಲಾದ ಮೇಲೂ ಕೆಂಡವಾಗಿ
ಕಾವಾಗಬೇಕೆಂಬ ನಿರೀಕ್ಷೆ
ಬೂದಿಯಾಗುವ ತನಕ

ಸೂಚ್ಯತೆಯೇ ಕವಿತೆಯ ನಾಡಿ ಬಡಿತವಾಗಿದೆ. ನೀಲಿ ಇಲ್ಲಿ ಅನೇಕ ಅರ್ಥ ಆಕೃತಿ ಪಡೆದಿದೆ. ನಮ್ಮ ಕಾಲದ ಕೋವಿಡ್‌ನ್ನು ಬೇರೆ ರೀತಿಯಲ್ಲಿ ನೋಡಿ, ಜೀವ ಜಗತ್ತನ್ನು ವಿಭಿನ್ನವಾಗಿ ಸ್ವೀಕರಿಸಿದ ನಾಲ್ಕಾರು ಕವಿತೆಗಳಿಲ್ಲಿವೆ.

ಒಣ ಬಿಸಿಲಿನಲಿ
ಬಟಾ ಬಯಲಿನ ನಿಶ್ಯಬ್ದಕೂಪದಲಿ
ಹಪಹಪಸಿ ಬಂದ ಹಕ್ಕಿಗಳು
ಆಪ್ತವಾದವು, ನಂಟು ಬೆಸೆದವು.

ಪಕ್ಷಿ ಜಗತ್ತಿನ ಮೂಲಕ ಮನುಷ್ಯ ಜಗತ್ತಿಗೆ ಅರಿವು ಹೊತ್ತಿಸುವ ಈ ಕವಿತೆ ಅಕ್ಕನ ನೀವು ಕಂಡಿರಾ ಎಂಬ ವಚನ ಭಾವದಂತಿದೆ.

ವಸ್ತು ಸಾಂದ್ರತೆಯನ್ನು ಗಮನಿಸಿದಾಗ, ತಮ್ಮದೇಯಾದ ಜೀವದರ್ಶನ ಕೊಡುವ ಇನ್ನೊಂದು ಬಗೆಯ ಕವಿತೆಗಳು ನಮ್ಮ ಗಮನ ಸೆಳೆಯುತ್ತವೆ. ಬಯಲು ಬಡವಿ ಬುದ್ಧ, ಬಯಲ ದರ್ಶನ, ಓ ಮನಸೇ, ಯಾತ್ರಿಕ, ಎರಡರ ನಡುವೆ, ಹಳೆಮನೆ ಮತ್ತು ಗೋಡೆ ಗಡಿಯಾರ, ಜ್ಞಾನ ಗೋವು, ಗಡಿ ನೆಲ, ಅವನು ನಿಮ್ಮ ಬುದ್ಧ ಹಾಗೂ ಕೈಗೊಂಬೆ ಮುಂತಾದ ಕವಿತೆಗಳು ಜೀವ ಭಾವಗಳನ್ನು ವಿಸ್ತರಿಸುವ ಕವಿತೆಗಳು.

ಜಗವನಾಳುವ ಹರೆಯು
ಜಗವನಾಳುವ ಹಣವು
ಬಡವಿಯನ್ನಾಡಿಸಿತ್ತು
ಅವನ ಮಾತ್ರ ಆಡಿಸಲಿಲ್ಲ
ಹಾ ಹೆಣ್ಣು ಬಯಲಿಗೆ ಬಿದ್ದಾಗ
ವಿಷಯಾಂತರ
ದೈವದ ಹೆಸರಿನಲ್ಲಿ
ದೆವ್ವ ಕೂಡ ಹೇಸುವ ಕೃತ್ಯ.

ತುಂಬ ಸಶಕ್ತ ಸಾಲುಗಳು ಬಯಲು, ಬಡವಿ ಮತ್ತು ಬುದ್ಧ ಕವಿತೆಯಲ್ಲಿವೆ. ಕಾಲದ ವೈರುಧ್ಯಗಳ ಬಯಲಿಗೆ ತಂದು ನಿಲ್ಲಿಸುತ್ತ, ಯಾವ ಬಡವಿಗೂ ಬೆಳಕಿಲ್ಲವಂತೆ / ತುಕ್ಕ ಹಿಡಿದ ಬೆಳದಿಂಗಳೇಕೆ / ಅವಳ ಉಡಿ ತುಂಬ - ಎಂದು ಪ್ರಶ್ನಿಸುತ್ತ ಹೆಣ್ಣಿನ ಪರವಾಗಿ ದನಿ ಎತ್ತುವ ಕವಯತ್ರಿ, ಕದಳಿ ಕಂಬಕ್ಕೆ ಮೌಢ್ಯದ ಮದುವೆ ಎಂದು ಹಲವು ಅರ್ಥಗಳಿಗೆ ಕವಿತೆ ಚಾಚಿಕೊಳ್ಳುತ್ತದೆ.

ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ / ಬತ್ತಲಾರದ ಜ್ವಾಲೆ. / ಹಾದಿ ಮುಗಿಯುವುದಿಲ್ಲ / ಮುಗಿದರದು ಹಾದಿಯಲ್ಲ ( ಯಾತ್ರಿಕ )

ನೂರು ದೇವರ ಹರಕೆ ಹೊತ್ತರೂ / ಹಾಲುಣಿಸಿದೆದೆ ಬಿಕ್ಕುತ್ತದೆ ಈ ನೆಲದಲ್ಲಿ (ಗಡಿನೆಲ)
ಸೂರ್ಯ ಚಂದ್ರನಾದ / ಬೆಳಕು ಬೆಳದಿಂಗಳಾದ / ಏನೆಲ್ಲ ಅವನಾದರೇನು ? / ಕಿರು ಹಣತೆಯು ಎನಗಾಗಲಿಲ್ಲ ( ಅವನು ನಿಮ್ಮ ಬುದ್ಧ ).

ಮೂರು ಪದ್ಯಗಳ ಮೇಲಿನ ಈ ಸಾಲುಗಳು ಯಾವ ಆಕ್ರೋಶವಿಲ್ಲದೆ ಆಳ ತಿಳಿವಳಿಕೆಯಿಂದ ಹೆಣ್ಪರ ದನಿ ಎತ್ತುವುದು ಕವಯತ್ರಿಯ ನಿಲುವಾಗಿದೆ. ಕವಿ ಸದಾ ಅಂತರ್ಮುಖಿ. ಅಂತರಾಳದಿಂದ ಹುಟ್ಟಿದ ಭಾವಲಯ ಕೋಶಗಳು ಸಹಜವಾಗಿ ಮನಸ್ಸನ್ನು ತಟ್ಟುತ್ತವೆ. ಇಂತಹ ಆಪ್ತ ಪದ್ಯಗಳೂ ಇಲ್ಲಿವೆ.

ನಾನು ನೀನು ಆಗಿದ್ದ
ಕಾಲವೊಂದಿತ್ತು
ನಾವು ನೀವಾಗಿ ಅಂತರ
ಅಂತರಿಸಿ ಬಂತು ( ಅಂತರ )

ಯಾವ ಹೂವಿನ ಮುಡಿಪು
ಯಾವ ಪ್ರೀತಿಯ ಒನಪು
ಯಾವ ನೆನಪಿನ ಬಿಸುಪು
ಬಿರಿದು ಬೆಳದಿಂಗಳಾತ ( ಬೆಳದಿಂಗಳಾತ )

ಇಂತಹ ಸಾಲುಗಳು ಎದೆ ಕದ ತೆರೆಯುತ್ತವೆ. ಶ್ರೀಮತಿ ವಿಭಾ ಪುರೋಹಿತ ಆಳವಾಗಿ ಕರಗಿ ಬರೆಯುತ್ತಾರೆ. ಇವೆಲ್ಲ ಒಂದು ರೀತಿಯಲ್ಲಿ ಅಂತರಂಗದ ಅನಾವರಣವೇ ಆಗಿವೆ.

ಕಾವ್ಯ, ಸೃಜನ ಸೂಕ್ಷ್ಮ ಕಲೆಗಾರಿಕೆ. ಕವಿ ಕೈಯಲ್ಲಿ ಅನೇಕ ಬಾರಿ ಗೊತ್ತಿಲ್ಲದೆ ಪದಗಳು ಹೊಸ ಅರ್ಥ ಹೊಳಪುಗಳನ್ನು ಪಡೆಯುತ್ತವೆ. ತುಂಬ ಸಲೀಸಾಗಿ ಹುಟ್ಟಿದ ಹಲವು ಪದಗಳು ಬಾಲ್ಕನಿ ಕಂಡ ಕವಿತೆಗಳಲ್ಲಿ ಓದಲು ಸಿಗುತ್ತವೆ. ಉದಾ : ಮೂಕ ಮಾಯೆ, ಸರಂಗುಡುತ, ಗಾಳಿಯೊಳಗೆ ಗಾಳ, ಒಳಕರ್ಣ, ಮೌನ ಪಲ್ವಲ, ಪಾಂಗು, ಗಾಳಿಗಾಡಿ, ಮಿಡಿಗಾವ್ಯ ಇಂತಹ ಅಪರೂಪದ ಶಬ್ದಗಳು ಕವಿತೆಗೆ ರೂಪಕ ಶಕ್ತಿ ನೀಡಿವೆ.

ರಾಜಕೀಯ ವಿಡಂಬನೆ ಕೋರೋನಾ ಕಾಲದ ನೆರಳು ಆವರಿಸಿಕೊಂಡು ಬರೆದ ’ಬಾಲ್ಕನಿ ಕಂಡ ಕವಿತೆಗಳು’ ಸಂಕಲನದಲ್ಲಿ ವೈವಿಧ್ಯತೆ ಇದೆ. ವಿಭಾ ಅವರು ಕಾವ್ಯ ರಚನೆಯ ಮೇಲೆ ಹದ ಹಿಡಿತ ಹೊಂದಿದ್ದಾರೆ. ಕಾರ್ಪೊರೇಟ್ ಜಗತ್ತಿನ ಪರಿಭಾಷೆ ಮತ್ತು ಸಾಮಾಜಿಕ ಜಾಲತಾಣಗಳ ಮೊನಚು ನಮ್ಮ ಕಾವ್ಯದಲ್ಲಿ ನುಸುಳಿ ಮೈರೂಪ ಪಡೆಯುವಾಗ, ಸಂಕೀರ್ಣತೆಯೇ ಕಾವ್ಯದ ಲಕ್ಷಣ ಎಂಬ ವಾತಾವರಣವಿದೆ. ಆದರೆ ಸಹಜತೆಯೇ ಶ್ರೀಮತಿ ವಿಭಾ ಪುರೋಹಿತರ ಕಾವ್ಯ ಶೈಲಿಯಾಗಿದೆ.

ಇನ್ನಿಷ್ಟು ಬರೆದು, ಇನ್ನಿಷ್ಟು ಓದಿ, ಇನ್ನಿಲ್ಲದಂತೆ ಹೊಸ ಹೊಸ ಆವಿಷ್ಕಾರಗಳು ಕವಯತ್ರಿಗೆ ದಕ್ಕಲಿ ಎಂದು ಹಾರೈಸುವೆ.

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...