ಕಾಲಕೋಶ ಸೇರಿದ ಪುಸ್ತಕ ಜಂಗಮ


ಸಾಹಿತ್ಯ ಪ್ರಿಯರ ಪಾಲಿನ ಪುಸ್ತಕ ಜಂಗಮ ಪುವ್ಯಾಶ್ರೀ ನಿಧನರಾಗಿದ್ದಾರೆ. ಓದುಗರ ಮನೆ ಬಾಗಿಲಿಗೆ ಪುಸ್ತಕ ತಲುಪಿಸುತ್ತಿದ್ದ ಶ್ರೀನಿವಾಸರು, ತಮ್ಮನ್ನು ಪುಸ್ತಕ ವ್ಯಾಪಾರಿ ಶ್ರೀನಿವಾಸ ಎಂದು ಗುರುತಿಸಿಕೊಳ್ಳುತ್ತಿದ್ದರು. ಒಡನಾಡಿಗಳಿಂದ ‘ಪುವ್ಯಾಶ್ರೀ’ ಎಂದೇ ಕರೆಸಿಕೊಳ್ಳುತ್ತಿದ್ದ ಅವರ ಪುಸ್ತಕ ಸೇವೆ ಮತ್ತು ಒಡನಾಟದ ಕುರಿತು ಹಿರಿಯ ಲೇಖಕ ಜಿ.ಎನ್. ರಂಗನಾಥರಾವ್ ಅವರು ಬರೆದ ಆಪ್ತ ಬರೆಹ ನಿಮ್ಮ ಓದಿಗೆ.

ಪುವ್ಯಾಶ್ರೀ ನಿಧನದ ಸುದ್ದಿ ಓದಿದಾಗ ಮನದ ಸಾಹಿತ್ಯ ಕೋಣೆಯೊಂದು ಖಾಲಿಯಾದಂತಾಗಿ ಶೂನ್ಯ ಆವರಿಸಿತು. ಶ್ರೀನಿವಾಸ ಅವರ ನಿಜನಾಮಧೇಯ. ಆದರೆ ಅವರು ಪುಸ್ತಕ ವ್ಯಾಪಾರಿಯಾದ್ದರಿಂದ ‘ಪುವ್ಯಾಶ್ರೀ’ ಎಂದೇ ಖ್ಯಾತರಾಗಿದ್ದರು.ಅರವತ್ತರ ದಶಕದಿಂದ ನನ್ನ ಆಪ್ತ ಪುಸ್ತಕಮಿತ್ರ, ಸಾಹಿತ್ಯ ಸಂಗಾತಿ ಆಗಿದ್ದ ಪುವ್ಯಾಶ್ರೀ, ಪುಸ್ತಕ ಜಂಗಮವೇ ಆಗಿದ್ದರು. ಮಲ್ಲೇಶ್ವರದಲ್ಲಿ ಅವರದೊಂದು ನೇಷನ್ ಬಿಲ್ಡರ್ಸ್ ಎಂಬ ಪುಸ್ತಕದ ಮನೆ ಇತ್ತಾದರೂ, ಪುವ್ಯಾಶ್ರೀ ಅವರಿಗೆ ಸಾಹಿತ್ಯ ಪ್ರಿಯರ ಮನೆ ಬಾಗಿಲಿಗೆ ಹೋಗಿ ಸಾಹಿತ್ಯ ಪರಿಚಾರಿಕೆ ನಡೆಸುವುದು ಪ್ರಿಯವಾಗಿತ್ತು. ಅಪ್ಪಟ ಖಾದಿಧಾರಿ. ಕಾಲಲ್ಲಿ ಹವಾಯಿ ಚಪ್ಪಲಿ. ಎರಡು ಕೈಗಳಲ್ಲೂ ಪುಸ್ತಕಗಳು ಗರ್ಭೀಕರಿಸಿದ ಎರಡು ದೊಡ್ಡ ಬ್ಯಾಗುಗಳು. ಬೆಳಿಗ್ಗೆ ಹತ್ತರ ಸುಮಾರಿಗೆ ಅವರ ದಿನದ ಕೆಲಸ ಶುರುವಾಗುತ್ತಿತ್ತು. ಮತ್ತೆ ಮನೆ ಸೇರುತ್ತಿದ್ದುದು ರಾತ್ರಿಗೇ. ಈ ಮಧ್ಯೆ ಬೆಂಗಳೂರಿನ ಎಲ್ಲ ಮೂಲೆಗಳಲ್ಲಿನ ಪುಸ್ತಕ ಪ್ರಿಯರ ಮನೆ ಬಾಗಿಲಿಗೆ ಹೋಗಿ ಅವರು ಕೇಳಿದ ಪುಸ್ತಕಗಳನ್ನು ಪೂರೈಸುವುದು ಪುವ್ಯಾಶ್ರೀ ಅವರ ನಿತ್ಯ ಕರ್ಮವಾಗಿತ್ತು. ಮಹಾತ್ಮ ಗಾಂಧಿ ರಸ್ತೆಯ ಯಾವುದೇ ಪುಸ್ತಕದ ಅಂಗಡಿಯಲ್ಲೂ ಸಿಗದ ಪುಸ್ತಕವನ್ನು, ಅವರಿಗೆ ಹೇಳಿದರೆ ಒಂದೆರಡು ದಿನಗಳಲ್ಲಿ ನಮ್ಮ ಮನೆ ಬಾಗಿಲಿಗೆ ತಂದು ಕೊಡುತ್ತಿದ್ದರು.

‘ಪುವ್ಯಾಶ್ರೀ ’ ವಾರದಲ್ಲಿ ಒಂದು ದಿನವಾದರೂ ಪ್ರಜಾವಾಣಿಗೆ ಬರುತ್ತಿದ್ದರು. ಸಾಪ್ತಾಹಿಕ ಪುರವಣಿ ವಿಭಾಗದಲ್ಲಿ ಕುಳಿತು ಉಭಯ ಕುಶಲೋಪರಿ ಆದ ನಂತರ ಬ್ಯಾಗಿನಿಂದ ಹೊಸ ಪುಸ್ತಕಗಳನ್ನು ತೆರೆಯುತ್ತಿದ್ದರು. ತೆರೆದು ವೈಕುಂಠರಾಜುವಿನ ದೊಡ್ಡ ಮೇಜಿನ ಮೇಲಿಡುತ್ತಿದ್ದರು. ಅದೊಂದು ಪುಟ್ಟ ಪುಸ್ತಕ ಪ್ರದರ್ಶನವೇ ಆಗಿರುತ್ತಿತ್ತು. ‘ಪುವ್ಯಾಶ್ರೀ’ ಎಡಪಂಥೀಯ ಚಿಂತಕರಾಗಿದ್ದರು. ಹೀಗಾಗಿ ಸೋವಿಯತ್ ರಷ್ಯಾದ ‘ರಾದುಗ' ಪ್ರಕಾಶನದ ಕೃತಿಗಳು ಮತ್ತು ಇತರ ರಷ್ಯನ್ ಸಾಹಿತ್ಯ ಕೃತಿಗಳು, ತೃತೀಯ ವಿಶ್ವದ ಸಾಹಿತ್ಯ ಕೃತಿಗಳನ್ನು(ಫಿಕ್ಷನ್ ಅಂಡ್ ನಾನ್ ಫಿಕ್ಷನ್) ಹೆಚ್ಚಾಗಿ ತರುತ್ತಿದ್ದರು. ಅದಲ್ಲದೆ, ಹೋಮರ್, ಗಯಟೆ, ಶೇಕ್ಸ್ ಪಿಯರ್ ಹೀಗೆ ನಾವು ಕೇಳಿದ ಕ್ಲಾಸಿಕಲ್ ಕೃತಿಗಳನ್ನೂ ತಂದು ಕೊಡುತ್ತಿದ್ದರು.

ನಾನು ಯ್ಕೊವಸ್ಕಿ, ಡಾಸ್ಟೊವಸ್ಕಿ, ಚೆಕಾಫ್, ಗಾರ್ಕಿ, ಟರ್ಗನೊವ್, ಟಾಲ್‍ಸ್ಟಾಯ್ ಮೊದಲಾದ ರಷ್ಯನ್ ಮಹಾನ್ ಸಾಹಿತಿಗಳ ಪುಸ್ತಕಗಳನ್ನು ನನ್ನೆದೆಗೆ ಇಳಿಸಿಕೊಂಡದ್ದು ಪುವ್ಯಾಶ್ರೀ ಮುಖಾಂತರವೇ. ಪುವ್ಯಾಶ್ರೀ ಅವರ ಮತ್ತೊಂದು ಆಕರ್ಷಣೆ ಎಂದರೆ ಅವರು ಉದ್ದರಿ ಕೊಡುತ್ತಿದ್ದುದು. ಪುಸ್ತಕಗಳನ್ನು ಕೊಟ್ಟು ಹಣವನ್ನು ಕಂತಿನಮೇಲೆ ಪಡೆದುಕೊಳ್ಳುತ್ತಿದ್ದರು. ಪುಸ್ತಕಗಳನ್ನು ಕೊಳ್ಳುವ ತಾಕತ್ತಿಲ್ಲದ ಆ ದಿನಗಳಲ್ಲಿ ನಮಗೆ ಪುವ್ಯಾಶ್ರೀ ಪುಸ್ತಕನಿಧಿಯೇ ಆಗಿದ್ದರು. ಅವರು ಪ್ರಜಾವಾಣಿಯಲ್ಲಿ ಅರ್ಧದಿನ ಕಳೆದು, ಬ್ರಿಗೆಡ್ ರಸ್ತೆಯ ಸಂಗಂ ಹೋಟೆಲಿನಲ್ಲಿ ನಮಗೆ ವಡೆ ಸಾಂಬಾರ್, ಕಾಫಿ ಸಮಾರಾಧನೆ (ಅವರು ತಿನ್ನುತ್ತಿದ್ದು ಒಂದೇ ವಡೆ ಸಾಂಬಾರ್, ನಮಗೂ ಅದೇ ಪ್ರಾಪ್ತಿ) ಮಾಡಿ `ಸುಧಾ'ದಲ್ಲಿ ಇನ್ನರ್ಧ ದಿನ ಕಳೆಯುತ್ತಿದ್ದರು. ಕಲಾವಿದ ಚಂದ್ರನಾಥ್ ಮೊದಲಾದವರಿಗೆ ಅವರನ್ನು ಕಂಡರೆ ಬಲು ಪ್ರೀತಿ. ಏಕೆಂದರೆ, ಪುವ್ಯಾಶ್ರೀ ರಿಯಲಿಸಂ, ಸರ್ರಿಯಲಿಸಂ ಮೊದಲಾಗಿ ಆಧುನಿಕ ಕಲೆಯ ಎಲ್ಲ ಪಂಥಗಳ ಸಾಹಿತ್ಯ ಮತ್ತು ಸರ್ರಿಯಲಿಸಂನ ದೈತ್ಯ ಪ್ರತಿಭೆ ಸಲ್ವಡಾರ್ ಡಾಲಿ ಮೊದಲಾದವರ ಪೈಂಟಿಂಗಗಳು ಅವರ ಜೋಳಿಗೆಯಲ್ಲಿರುತ್ತಿದ್ದವು.

ನಾನು ಅವರಿಂದಲೇ ಬ್ರೆಕ್ಟನ ಸಾಹಿತ್ಯವನ್ನು ಕೊಂಡು ಓದಿದ್ದು. ಕಕೇಶಿಯನ್ ಚಾಕ್ ಸರ್ಕಲ್ ಅನುವಾದಿಸಿದ್ದನ್ನು ಕೇಳಿ ಸಂತೋಷಪಟ್ಟಿದ್ದರು. ಅದರ ಪ್ರಕಟಣೆಗೆ ಪ್ರಕಾಶಕರು ಸಿಗದೇ ನಾನೇ ಪ್ರಕಟಣೆಯ ಸಾಹಸಕ್ಕೆ ಇಳಿದಾಗ, ತಮ್ಮ ಪ್ರಭಾವ ಬಳಸಿ ಆಗಿನ ಪೂರ್ವ ಜರ್ಮನಿಯ ರಾಯಭಾರ ಕಛೇರಿಯಿಂದ ಒಂದು ಪುಟ ಜಾಹೀರಾತು ಕೊಡಿಸಿ ನೆರವಾಗಿದ್ದರು."ಲೋಟಸ್"ಎಂಬುದು ಆ ಕಾಲದ ಒಂದು ಪ್ರಗತಿಶೀಲ ಸಾಹಿತ್ಯ ಪತ್ರಿಕೆ. ಈಜಿಪ್ಟಿನಿಂದ ಲೇಖಕರ ಬಳಗ ಪ್ರಕಟಿಸುತ್ತಿದ್ದ ಈ ಪತ್ರಿಕೆ ಆಫ್ರೋಏಷ್ಯನ್ ಸಾಹಿತ್ಯ ಮತ್ತು ಸೃಜನಶೀಲ ಕಲೆಗಳ ಮುಖವಾಣಿಯಂತಿತ್ತು. ಪುವ್ಯಾಶ್ರೀ ಈ ಪತ್ರಿಕೆಯ ಸಂಚಿಕೆಗಳನ್ನು ನನಗೆ ಉಚಿತವಾಗಿ ಕೊಡುತ್ತಿದ್ದರು."ಲೋಟಸ್"ನ ಕೆಲವು ಸಂಚಿಕೆಗಳು ಈಗಲೂ ನನ್ನಲ್ಲಿವೆ.

ಮೃದುಭಾಷಿಯಾಗಿದ್ದ ಪುವ್ಯಾಶ್ರೀ, ಕಟ್ಟಾ ದೇಶಭಕ್ತರಾಗಿದ್ದರು. ಕ್ರಿಕೆಟ್ ನಿಂದ ದೇಶ ಹಾಳಾಗುತ್ತಿದೆ ಎಂದು ಅವರು ಗಾಢವಾಗಿ ನಂಬಿದ್ದರು. ಅವರೊಂದು ರಬ್ಬರ್ ಸ್ಟಾಂಪ್ ಮಾಡಿಸಿಕೊಂಡಿದ್ದರು:"ಕ್ರಿಕೆಟ್ ಆಟ ದೇಶಕ್ಕೆ ಕಾಟ". ಅವರು ಹೊಸ ಪುಸ್ತಕಗಳು ಬಂದಾಗ ನಮ್ಮಂಥವರಿಗೆ ಪೋಸ್ಟ ಕಾರ್ಡ್ ಬರೆಯುತ್ತಿದ್ದರು. ಆ ಪೋಸ್ಟ್ ಕಾರ್ಡಿನ ಮೇಲೆ ಢಾಳವಾಗಿ ಕಾಣುವಂತೆ "ಕ್ರಿಕೆಟ್ ಆಟ ದೇಶಕ್ಕೆ ಕಾಟ" ಮುದ್ರೆ ಒತ್ತುತ್ತಿದ್ದರು. ಅವರು ಕೆಲವೊಮ್ಮೆ ನನ್ನಂಥ ಸಾಹಿತ್ಯಾಸಕ್ತರಿಗೆ ಕಾಂಪ್ಲಿಮೆಂಟರಿ ಪುಸ್ತಕಗಳನ್ನು ಕೊಡುತ್ತಿದ್ದರು -ಹೆಚ್ಚಾಗಿ, ಅವರಿಗೆ ಪ್ರಚಾರಕ್ಕಾಗಿ ಬರುತ್ತಿದ್ದ `ರಾದುಗಾ' ಪ್ರಕಟಣೆಗಳು-ಈ ಕಾಂಪ್ಲಿಮೆಂಟರಿ ಪ್ರತಿಗಳ ಮೇಲೂ "ಕ್ರಿಕೆಟ್ ಆಟ ದೇಶಕ್ಕೆ ಕಾಟ' ಮುದ್ರೆ ರಾರಾಜಿಸುತ್ತಿತ್ತು.

ಪುವ್ಯಾಶ್ರೀ ಅವಿವಾಹಿತರಾಗಿದ್ದರು. ಪುಸ್ತಕಗಳೇ ಅವರ ಸಂಗಾತಿಯಾಗಿದ್ದವು. ನಿವೃತ್ತನಾದಮೇಲೆ, ಭೇಟಿಯಾಗಲೆಂದು ಒಮ್ಮೆ ಮಲ್ಲೇಶ್ವರದಲ್ಲಿನ ಅವರ ಮನೆಗೆ ಹೋಗಿದ್ದೆ. ಆಗ ಅವರು ಅಲ್ಲಿ ಇಲ್ಲವೆಂದು ತಿಳಿಯಿತು. ಅವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಗಲೇ ಇಲ್ಲ. ಈ ಪುಸ್ತಕ ಮಿತ್ರನಿಗೆ ಹನಿ ಕಂಬನಿ ಎನ್ನಲೇ, ಇಲ್ಲ, ಬೊಗಸೆ ಭರ್ತಿ ಕೃತಜ್ಞತೆ, ಜ್ಞಾನಪ್ರಜ್ಞಾ ಲೋಕದ ಕೀಲಿ ಕೈಗಳನ್ನು ಕೊಟ್ಟಿದ್ದಕ್ಕಾಗಿ. ಈ ಕ್ಷಣದಲ್ಲಿ ನೆನಪಿಗೆ ಬರುತ್ತಿರುವ ಇನ್ನೊಬ್ಬ ಪುಸ್ತಕ ಮಿತ್ರ ಶಾನುಭಾಗರು. ಅವರು ಪುವ್ಯಾಶ್ರೀಯವರಂತೆ ಪುಸ್ತಕ ಜಂಗಮರಾಗಿರಲಿಲ್ಲ. ಮಹಾತ್ಮಗಾಂಧಿ ರಸ್ತೆಯಲ್ಲಿದ್ದ ಅವರ ಶಾನುಭಾಗ ಪುಸ್ತಕದ ಅಂಗಡಿ ಸರಸ್ವತಿಯ ಸ್ಥಾವರವಾಗಿತ್ತು.

 

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...