ಕನ್ನಡ ಸಂಸ್ಕೃತಿ ಚಿಂತನೆಯಲ್ಲಿ ನನ್ನದು ಸಣ್ಣ ಕೊಡುಗೆ: ಎಸ್.ನಟರಾಜ ಬೂದಾಳು


ಪ್ರೊ. ಎಸ್. ನಟರಾಜ ಬೂದಾಳು ಅವರ ಅನುವಾದಿತ ಸರಹಪಾದಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಬುಕ್ ಬ್ರಹ್ಮ ಸಂಸ್ಥೆಯ ರಂಜಿತಾ ಸಿದ್ಧಕಟ್ಟೆ ಅವರು ಸಂದರ್ಶನ ಮಾಡಿದ್ದು, ಅದರ ಸಂಕ್ಷಿಪ್ತ ವಿವರ ಇಲ್ಲಿದೆ;

ಬುಕ್ ಬ್ರಹ್ಮ: ತಮ್ಮ ಅನುವಾದಿತ ‘ಸರಹಪಾದ’ ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಬಂದಿದ್ದು, ಈ ಕುರಿತು ಹೇಗೆ ಪ್ರತಿಕ್ರಿಯಿಸುತ್ತೀರಿ?

ನಟರಾಜ ಬೂದಾಳು: ಭಾರತದಲ್ಲಿ ಅತ್ಯಂತ ಆಳ ಹಾಗೂ ಜೀವಂತವಾದ ತತ್ವಪದ ಎಂದರೆ ಸಿದ್ಧಪದ. ಕರ್ನಾಟಕದಲ್ಲಿ ಸಿದ್ಧ ಎಂಬ ಹೆಸರು ಒಳಗೊಂಡಿದ್ದು, ಸಿದ್ಧ ಪರಂಪರೆಯ ಮಹಾಗುರುವೇ ಸರಹ. ಆತ ಮಹಾಗುರುವೂ ಆಗಿದ್ದ. ನಲಂದ ವಿ.ವಿ. ಮಹಾಗುರುವಾಗಿದ್ದ. ಅಪಭ್ರಂಶ ಭಾಷೆಯಲ್ಲಿ ದೋಹೆಗಳನ್ನು ಬರೆದಿದ್ದ. ಅಪಭ್ರಂಶ ಭಾಷೆಯು ಕನ್ನಡಕ್ಕೆ ಅತ್ಯಂತ ಸಮೀಪ. ಈ ಪ್ರಶಸ್ತಿಯು ಸರಹ ಎಂಬ ಗುರುವಿನ ಪಾದಕ್ಕೆ ಸಲ್ಲಬೇಕಿದೆ.

ಬುಕ್ ಬ್ರಹ್ಮ: ಕನ್ನಡದ ಸಂಸ್ಕೃತಿ ಚಿಂತಕ -ಸಂಶೋಧಕರಲ್ಲಿ ತಮ್ಮನ್ನು ಸಹ ಪ್ರಮುಖರೆಂದು ಗುರುತಿಸಲಾಗಿದ್ದು, ಈ ಬಗ್ಗೆ ತಮ್ಮ ಪ್ರತಿಕ್ರಿಯೆ?

ನಟರಾಜ ಬೂದಾಳು: ಸಮೂಹದ ಬದುಕಿಗೆ ಸಂಶೋಧನೆಗೆ ಹೇಗೆ ಸ್ಪಂದಿಸುತ್ತದೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಕನ್ನಡ ಸಾಹಿತ್ಯದಲ್ಲಿ ಸುದೀರ್ಘವಾದ ಇತಿಹಾಸವೇ ಇದೆ. ನಮ್ಮದು ಒಂದು ಸಣ್ಣ ಕೊಡುಗೆಯಷ್ಟೆ. ಕಡವ ಶಂಭು ಶರ್ಮ, ಡಾ. ಶಂಬಾ ಜೋಶಿ, ಡಾ. ಎಂ.ಎಂ. ಕಲಬುರ್ಗಿ ಅಂತಹ ಸಂಸ್ಕೃತಿ ಚಿಂತಕರು ಸಾಂಸ್ಕೃತಿಕ ಆವರಣವನ್ನು ಗುರುತಿಸಿಕೊಟ್ಟಿದ್ದಾರೆ. ಕನ್ನಡಕ್ಕೆ ವಿಶಿಷ್ಟತೆಯನ್ನು ದಕ್ಕಿಸಿಕೊಳ್ಳುವ ಹಾಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಬಲ್ಲ ಆರೋಗ್ಯಕರ ನಿಲುವು ಅಗತ್ಯ. ಆ ತಾತ್ವಿಕ ಆಕರಗಳನ್ನು ಶೋಧಿಸುವಲ್ಲಿ ನಾನೂ ಒಬ್ಬ ಎಂದು ಮಾತ್ರ ಹೇಳಬಲ್ಲೆ.

ಬುಕ್ ಬ್ರಹ್ಮ: ಪ್ರಸ್ತುತ ಸನ್ನಿವೇಶದಲ್ಲಿ ಬುದ್ಧನ ಚಿಂತನೆಗಳು ಯಾವ ಸ್ವರೂಪಗಳನ್ನು ಪಡೆಯುತ್ತಿವೆ?

ನಟರಾಜ ಬೂದಾಳು: ಬುದ್ಧ ಚಿಂತನೆಗಳು ಎಲ್ಲೂ ಹೋಗಿಲ್ಲ. ಬುದ್ಧನ ಹೆಸರಿನಲ್ಲಿ ಇಲ್ಲದಿರಬಹುದು. ಆದರೆ, ಬುದ್ಧ ಧರ್ಮದಲ್ಲಿ ಒಂದು ವಿಶೇಷತೆ ಇದೆ. ಇಂತಹ ಗುಣ ಬೇರೆ ಯಾವ ಧರ್ಮದಲ್ಲೂ ಕಾಣಲಾರೆವು. ಅದು ವಿಜ್ಞಾನದ ರೀತಿ ಹಾಗೂ ತಾತ್ವಿಕತೆಯನ್ನು ದಾಟಿದೆ. ವಿಜ್ಞಾನವು ಹೇಗೆ ಎಲ್ಲ ಧರ್ಮದ ಎಲ್ಲ ಜನರಿಗೆ ಅನ್ವಯವಾಗುತ್ತೋ ಹಾಗೇ ಬೌದ್ಧ ಧರ್ಮವು ಕೂಡ ಎಲ್ಲ ಲೋಕ ಸಮಸ್ತರಿಗೆ ಅನ್ವಯವಾಗುತ್ತದೆ. ಬುದ್ಧನಿಗೆ ನಿಮ್ಮ ನಿಲುವೇನು ಎಂದು ಕೇಳಿದರೆ ಆತ ಯಾವುದು ಸರಿಯೋ ಅದೇ ಬೌದ್ಧ ಧರ್ಮ ಎಂದ. ಅಂದರೆ, ಕಾಲಧರ್ಮಕ್ಕೆ ಅನುಗುಣವಾಗಿ ಸರಿಯಾಗಿರುವುದೋ ಅದೇ ಬೌದ್ಧ ಧರ್ಮ. ತನ್ನೊಳಗಿರುವ ಬೆಳಕನ್ನು ವಿಸ್ತರಿಸಿಕೊಂಡು ಹೋಗುವ ವಿಶೇಷ ಧರ್ಮ, ವಿಧಿವಿಧಾನಗಳ ಸಾಂಪ್ರದಾಯಕ ಗುಣವನ್ನು ಹೊಂದಿಲ್ಲ. ಧಾರ್ಮಿಕ ವಿಧಿಗಳನ್ನು ಹೊಂದಿಲ್ಲ. ಕೇವಲ ಅರಿವಿನ ತಿಳಿವಳಿಕೆಯ ಧರ್ಮವೇ ಬೌದ್ಧ ಧರ್ಮ; ಅದು ವಿಜ್ಞಾನದಂತೆ; ಬದುಕಲು ಸಮರ್ಪಕವಾಗಿರುವ ವಿಜ್ಞಾನದಂತೆ ಬೌದ್ಧಧರ್ಮವಾಗಿದೆ. ಇಂತಹ ಬೌದ್ಧ ಧರ್ಮ ಬೇರೆ ದೇಶಕ್ಕೆ ಹೋಗಿದೆ ಎಂಬುದು ಸರಿಯಲ್ಲ. ಅದು ನಮ್ಮಲ್ಲೂ ಎಂದಿಗೂ ಇರುವಂತದ್ಧು.

ಬುಕ್ ಬ್ರಹ್ಮ: ಭಾರತದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ಹೇಗೆ ನೆರವಾಗುತ್ತವೆ?

ನಟರಾಜ ಬೂದಾಳು: ಶ್ರಮಣ ಧಾರೆಗಳು ಇತರೆ ತತ್ವಪದಗಳು ಸೇರಿದಂತೆ ಬೇರೆ ಬೇರೆ ವಿಚಾರಧಾರೆಗಳು ಜನರ ಬದುಕನ್ನು ನಿಯಂತ್ರಿಸಿವೆ. ಅವುಗಳು ಸಂಸ್ಕೃತಿಯ ಮೇಲೂ ಪ್ರಭಾವ ಬೀರುತ್ತವೆ. ಭಾರತೀಯ ಬೃಹತ್ ಸಮೂಹವು ಇದೇ ಆವರಣದಲ್ಲಿ ಬದುಕುತ್ತಿದೆ. ಬಹುತ್ವವು ಭಾರತೀಯ ಧರ್ಮದ ಪ್ರಮುಖ ಲಕ್ಷಣ. ಶ್ರಮಣ ಧಾರೆಯ ಪೈಕಿ ವೈದಿಕತೆಯೂ ಒಂದು. ಆದರೆ, ವೈದಿಕತೆಯೇ ಹೆಚ್ಚು ಪ್ರಚಾರದಲ್ಲಿದೆ.

ಬುಕ್ ಬ್ರಹ್ಮ: ತತ್ವಪದ ಸಾಹಿತ್ಯ ಯೋಜನೆಯ ಸಾಧನೆಗಳನ್ನು ವಿವರಿಸಿ?
ನಟರಾಜ ಬೂದಾಳು: ತತ್ವಪದಗಳು, ಭಾರತೀಯ ಎಲ್ಲ ಭಾಷೆಗಳಲ್ಲೂ ಇದೆ. ಮಹಾರಾಷ್ಟ್ರ, ತಮಿಳುನಾಡಿನಲ್ಲಿ, ಆಂಧ್ರಪ್ರದೇಶದಲ್ಲಿ ಹೀಗೆ ಎಲ್ಲೆಡೆ ಇವೆ. ಕೆಲವೆಡೆ ಹೆಚ್ಚು ಕೆಲವೆಡೆ ಕಡಿಮೆ ಇರಬಹುದು. ಆದರೆ, ಕರ್ನಾಟಕದಲ್ಲಿ ತತ್ವಪದಕಾರರ ದೊಡ್ಡ ಸಮೂಹವೇ ಇದೆ. ಮಾತ್ರವಲ್ಲ; ಸಜೀವ ಎನ್ನಬಹುದಾದಷ್ಟು ಪ್ರಭಾವವನ್ನು ಕರ್ನಾಟಕದಲ್ಲಿ ಕಾಣಬಹುದು. ತತ್ವಪದಕಾರರ ಸಾಹಿತ್ಯ ಸಂಗ್ರಹಣಾ ಕಾರ್ಯದ ಪ್ರಧಾನ ಸಂಪಾದಕರಾಗಿ ನಾನು ಕೆಲಸ ಮಾಡಿದ್ದು, 32 ಸಂಪುಟಗಳು ಬಿಡುಗಡೆಯಾಗಿವೆ. ಇನ್ನೂ 18 ಸಂಪುಟಗಳ ಬಿಡುಗಡೆಯ ಅಗತ್ಯವಿದೆ. ಸುಮಾರು 50 ಸಂಪುಟಗಳಿಗೂ ಮೀರುವಷ್ಟು ಕರ್ನಾಟಕ ಹೊರತುಪಡಿಸಿದರೆ ತತ್ವಪದ ಸಾಹಿತ್ಯ ಬೇರೇ ಯಾವ ಭಾಷೆಯಲ್ಲೂ ಇರಲಿಕ್ಕಿಲ್ಲ.

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...