ಕವಿಪತ್ನಿ ಪ್ರಶಸ್ತಿ ಪುರಸ್ಕೃತ ಸತ್ಯಭಾಮಾ ಕಂಬಾರರು ಹಾಗೂ ‘ನಿನ್ನೊಲುಮೆಯಿಂದಲೇ’..


ವೆಂಕಮ್ಮ ಕೆ.ಎಸ್.ನ ಅವರ ನೆನಪಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಕೊಡಮಾಡುವ ಕವಿಪತ್ನಿ ಪ್ರಶಸ್ತಿಗೆ ಸಾಹಿತಿ ಚಂದ್ರಶೇಖರ ಕಂಬಾರ ಅವರ ಪತ್ನಿ ಸತ್ಯಭಾಮ ಕಂಬಾರ ಅವರು ಭಾಜನರಾದ ಸಂದರ್ಭದಲ್ಲಿ ಅವರ ಕುರಿತಾಗಿ ಲೇಖಕಿ ರಜನಿ ನರಹಳ್ಳಿಯವರು ಬರೆದ ಕೃತಿ 'ನಿನ್ನೊಲುಮೆಯಿಂದಲೇ'. ಸತ್ಯಭಾಮ ಅವರ ಕುರಿತು ಹೊರ ಜಗತ್ತಿಗೆ ಕಾಣದ ಅನೇಕ ಸಂಗತಿಗಳನ್ನು `ನಿನ್ನೊಲುಮೆಯಿಂದಲೇ’ ಕೃತಿಯಲ್ಲಿ ದಾಖಲಿಸಿದ್ದು, ಸತ್ಯಭಾಮ ಕಂಬಾರ ಅವರ ನೆನಪಿಗಾಗಿ ಕೃತಿ ಆಯ್ದ ಭಾಗ...

'ಪ್ರತಿಯೊಬ್ಬ ಯಶಸ್ವೀ ಗಂಡಸಿನ ಹಿಂದೆ ಮಹಿಳೆಯೊಬ್ಬಳಿರುತ್ತಾಳೆ' ಎಂಬುದು ಎಲ್ಲರಿಗೂ ಗೊತ್ತಿರುವ ಪ್ರಸಿದ್ಧವಾದ ನಾಣ್ನುಡಿ, 'ಆ ಮಹಿಳೆ ಹೆಂಡತಿಯೇ ಆಗಿರಬೇಕಿಲ್ಲ' ಎಂದು ಇತ್ತೀಚೆಗೆ ಕೆಲವರು ತಮಾಷೆಯ ಧಾಟಿಯಲ್ಲಿ- ಆದರೆ ಗಂಭೀರ ದನಿಯಲ್ಲಿ ಹೇಳಿದರೂ, ಪ್ರಸಿದ್ಧರಾದ ಬಹುತೇಕ ಪುರುಷರು ತಮ್ಮ ಯಶಸ್ಸಿನ ಹಿಂದೆ ತಮ್ಮ ಮಡದಿಯ ಪಾಲಿದೆ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಹೇಳುವುದುಂಟು. ಆದರೂ ಅವರ ಈ ಮಾತು ಜಾಗಟೆಯ ಅಬ್ಬರದ ಸದ್ದಿನ ನಡುವೆ ಆಡಿಸುವ ಕೈಬಳೆಯ ಶಬ್ದದಂತೆ ಯಾರ ಕಿವಿಗೂ ಬೀಳದಿರುವ ಸಾಧ್ಯತೆಯೇ ಹೆಚ್ಚು.

ಮತ್ತೆ ಕೆಲವೊಮ್ಮೆ ನಾನು ಕಂಡ ಅನೇಕ ಪುರುಷ ಮಹಾಶಯರು ತಮ್ಮ ಬದುಕಿನಲ್ಲಿ ಜೊತೆ ಜೊತೆಯಾಗಿ ನಡೆದ ಹೆಂಡತಿಯನ್ನು ಖಾಸಗಿಯಾಗಿ ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರೂ, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಆಕೆಯ ಹೆಸರನ್ನು ಹೇಳಬಹುದಾದ ಸಂದರ್ಭದಲ್ಲೂ ಹೇಳದಿರುವ ಜಾಣತನದ ಮರೆವನ್ನು ಪ್ರದರ್ಶಿಸುತ್ತಾರೆ.

ಇಂತಹ ಹೊತ್ತಿನಲ್ಲೇ ನನ್ನ ಮನದಲ್ಲಿ ಮೂಡುವುದು ಒಲುಮೆಯ, ಕವಿ ಎಂದೇ ಹೆಸರಾದ ಕೆ. ಎಸ್. ನರಸಿಂಹಸ್ವಾಮಿಯವರು ತಮ್ಮ 'ಮೈಸೂರು ಮಲ್ಲಿಗೆ'ಯ ಕವನಗಳಲ್ಲಿ ಕಟ್ಟಿಕೊಡುವ ಮಧುರ ದಾಂಪತ್ಯದ ಚಿತ್ರ. ಕೆ. ಎಸ್. ನರಸಿಂಹಸ್ವಾಮಿ ಮತ್ತು ಅವರ ಧರ್ಮಪತ್ನಿ ವೆಂಕಮ್ಮನವರದು ಅರವತ್ತೇಳು ವರುಷಗಳ ದಾಂಪತ್ಯದ ಬದುಕು. ಅವರ ಕವಿತೆಗಳಲ್ಲಿಯಂತೆ ನಿಜ ಬದುಕಿನಲ್ಲೂ ಅವರ ದಾಂಪತ್ಯದ ಬದುಕು ತಾರೆಗಳ ಒಲುಮೆಯೊಳಗೊಂದಾದಂಥದು. ಅವರ ಕವಿತೆಗಳನ್ನು ಓದುತ್ತಿದ್ದ ಯಾರಿಗಾದರೂ 'ಅರೇ, ಹೌದಲ್ಲಾ, ನಮ್ಮ ಬದುಕಿನಲ್ಲೂ ಇದೇ ತರಹದ ಸನ್ನಿವೇಶಗಳನ್ನು ಎದುರುಗೊಂಡಿದ್ದೇವಲ್ಲಾ' ಅಂತೆನಿಸುವುದು ಬಹಳ ಸಹಜ.

ಕವಿ ಕಾಲವಾದರೂ, ಆತನ ಕವಿತೆಗೆ ಸಾವಿಲ್ಲಾ' ಎಂಬಂತೆ ಈಗ ಕೆ.ಎಸ್.ನ. ಮತ್ತು ವೆಂಕಮ್ಮ ದಂಪತಿ ವಿಧಿವಶರಾದರೂ, ಅವರ ದಾಂಪತ್ಯ ಗೀತೆಗಳು ಜನಮಾನಸದಲ್ಲಿ ಅಚ್ಚಳಿಯದೆ ಜೀವಂತವಾಗಿದೆ. ಈಗ ಕೆ. ಎಸ್. ನರಸಿಂಹಸ್ವಾಮಿ ಟ್ರಸ್ಟ್‌ನವರು ಕವಿಯ ಒಲುಮೆಯ ಮಡದಿ ವೆಂಕಮ್ಮನವರ ಹೆಸರಿನಲ್ಲಿ ನಿನ್ನೊಲುಮೆಯಿಂದಲೇ...' ಎಂಬ ಗೌರವವನ್ನು ಕವಿಪತ್ನಿಯೊಬ್ಬರಿಗೆ ಸಲ್ಲಿಸುವುದರ ಮೂಲಕ ಒಲುಮೆಯ ಕನಿಯ ಮಡದಿಯನ್ನು ನೆನಪಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸುತ್ತಿರುವುದು ಕನ್ನಡ ಪರಂಪರೆಯಲ್ಲಿಯೇ ಒಂದು ವಿಶಿಷ್ಟ ನಡೆ. ಈ ಗೌರವ ಮೊಟ್ಟ ಮೊದಲಗೆ ಶ್ರೀಮತಿ ಸತ್ಯಭಾಮ ಚಂದ್ರಶೇಖರ ಕಂಬಾರ ಅವರಿಗೆ ಸಲ್ಲುತ್ತಿರುವುದು ಅರ್ಥಪೂರ್ಣವಾಗಿದೆ. ಅವರಿಗೆ ನಾನು ಮೊದಲಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸತ್ಯಭಾಮ ಕಂಬಾರರು ಎಷ್ಟೊಂದು ಸ್ನೇಹಜೀವಿ, ಮುಗ್ಧ ಮನಸ್ಸಿನವರು ಎಂಬುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ನಮ್ಮ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಮೊದಲುಗೊಂಡು ಪದ್ಮಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ .... ಅಂತೆಲ್ಲಾ ಲೆಕ್ಕವಿಲ್ಲದಷ್ಟು ಪ್ರಶಸ್ತಿ ವಿಜೇತರಾದ, ನಾಡಿನ ಸುಪ್ರಸಿದ್ಧ ಕವಿ, ನಾಟಕಕಾರ, ಕಾದಂಬರಿಕಾರ... ಅಂತೆಲ್ಲಾ ಹೆಸರುವಾಸಿಯಾದ ಸಾಹಿತಿ ಚಂದ್ರಶೇಖರ ಕಂಬಾರರ ಪತ್ನಿಯಾಗಿದ್ದರೂ ಕೂಡಾ ಯಾವ ಹಮ್ಮು-ಬಿಮ್ಮು ಇಲ್ಲದೆ, ಬಿಂಕ-ಬಿಗುಮಾನವಿಲ್ಲದೆ ಎಲ್ಲರೊಡನೆ ಮುಕ್ತವಾಗಿ ಬೆರೆಯಬಲ್ಲರು. ವಯಸ್ಸಿನಿಂದ ಹಿಡಿದು, ಎಲ್ಲ ಮಟ್ಟದಲ್ಲೂ ನನಗಿಂತ ಮೇಲಾಗಿದ್ದರೂ ಸಹ ಹಿರಿಯ ಸ್ನೇಹಿತೆಯಂತೆ, ಹಿರಿಯಕ್ಕನಂತೆ ಬಹಳ ಆಪ್ತವಾಗಿ ಮಾತನಾಡಿಸುತ್ತಾರೆ, ಗಂಟೆಗಟ್ಟಲೇ ಹರಟುತ್ತಾರೆ. ನನ್ನ ಮಕ್ಕಳ, ಮೊಮ್ಮಕ್ಕಳ ಹೆಸರನ್ನು ಕೂಡಾ ಜ್ಞಾಪಕದಲ್ಲಿಟ್ಟುಕೊಂಡು ಕಳಕಳಿಯಿಂದ ಯೋಗಕ್ಷೇಮ ವಿಚಾರಿಸುತ್ತಾರೆ...ಅವರ ಮನೆಗೆ ಹೋದರೆ ಎಂದೂ ರುಚಿ, ರುಚಿಯಾದ ಊಟ-ತಿಂಡಿ ತಿನ್ನದೆ, ಬಿಸಿಬಿಸಿ ಚಹಾ ಕುಡಿಯದೇ ಬಂದಿಲ್ಲಾ. ಜೊತೆಗೆ ಅವರ ಮನೆಮಂದಿಯಲ್ಲಾ ಆಂಟಿ, ಆಂಟಿ ಎಂದು ಬೆಚ್ಚನೆಯ ಪ್ರೀತಿಯನ್ನು ತೋರುತ್ತ, ಅವರ ಮನೆಯ ಸದಸ್ಯರಲ್ಲಿ ಒಬ್ಬಳೇನೋ ಎನ್ನುವಂತೆ ನನ್ನನ್ನು ಕಾಣುತ್ತಾರಲ್ಲಾ ಇವೆಲ್ಲಾ ನನಗೆ ತವರುಮನೆಯನ್ನು ನೆನಪಿಗೆ ತರುತ್ತದೆ. ನಾನು ಸಹ ಅವರನ್ನು 'ಸತ್ಯಭಾಮ ಆಂಟಿ' ಎಂದೇ ಕರೆಯುವುದು, ಓದುವ ಗೀಳಿರುವ ಅವರು ನನ್ನ ನೋಡಿದ ಕೂಡಲೇ ಕೇಳುವ ಪ್ರಶ್ನೆ 'ಏನು ಬರೆಯುತ್ತಿದ್ದೀರಿ?” ಎಂದು, ಅದಕ್ಕೆ ನಾನು 'ಏನಿಲ್ಲಾ ಆಂಟಿ, ಮಕ್ಕಳು, ಮೊಮ್ಮಕ್ಕಳು ಅಂತ ಖುಷಿಪಡುತ್ತಾ ಆರಾಮಾವಾಗಿ ಇದ್ದು ಬಿಟ್ಟಿದ್ದೇನೆ' ಎಂದು ಉತ್ತರಿಸಿದರೆ- ಕಳಕಳಿಯಿಂದ ಏಕಪ್ಪಾ ರಜನಿಯವರೇ, ಏನೂ ಬರೆಯುತ್ತಿಲ್ಲಾ? ಯಾವುದೇ ಕಾರಣಕ್ಕೂ ಬರೆಯುವುದನ್ನು ನಿಲ್ಲಿಸಬ್ಯಾಡ್ತೀ, ನನಗಂತೂ ಬರೆಯಲಾಗಲಿಲ್ಲ, ನೀವಾದ ಬರವಣಿಗೆ ಮುಂದುವರಿಸಿ. ಮೊಮ್ಮಕ್ಕಳು ತೊದಲು ಮಾತನಾಡುತ್ತಾರಲ್ಲಾ ಅದರ ಬಗ್ಗೆ ಬರೀರಿ, ಊರೂರು ಸುತ್ತಾಡಿಕೊಂಡು ಬಂದೀರಲ್ಲಾ ಅದರ ಬಗ್ಗೆ ಬರೀರಿ, ಬರೆದು ಪುಸ್ತಕ ಕೊಡಿ, ಓದಿ ಸಂತೋಷ ಪಡುತ್ತೇನೆ' ಎಂದು ಹೇಳುವಾಗ, ಅವರ ಕಾಳಜಿಯನ್ನು ಕಂಡು ಮನಸ್ಸು ತುಂಬಿ ಬರುತ್ತದೆ. ಅವರದೆಂದೂ ಬರೀ ಗಂಟಲಿನ ಮೇಲಿಂದ ಹೊರಡುವ ಬೂಟಾಟಿಕೆಯ ಬೆಣ ಬಾಯಿಮಾತಲ್ಲಾ, ಹೃದಯದಿಂದ ಬರುವ ಬೆಚ್ಚನೆಯ ಮಾತು. ಈ ಅನಿಸಿಕ ನನ್ನದು ಮಾತ್ರವಲ್ಲಾ. ಅವರ ಸಂಪರ್ಕಕ್ಕೆ ಬಂದ ಹಲವಾರು ಸ್ನೇಹಿತೆಯರು ಇದೇ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸತ್ಯಭಾಮಾ ಅವರ ಬಾಲ್ಯ, ವಿವಾಹ :- ಮೇ 22, 1945ರಂದು ಜನಿಸಿದ ಸತ್ಯಭಾಮ ಆಂಟಿಯ ತವರೂರು ಅಕ್ಕತಂಗೇರಹಾಳ್ ಎಂಬ ಹಳ್ಳಿ, ಇದು ಬೆಳಗಾಂ ಜಿಲ್ಲೆಯಲ್ಲಿದೆ. ತಂದೆ ಕಾಶಪ್ಪ ಬಡಿಗೇರ್‌, ತಾಯಿ ಯಮುನಪ್ಪ, ತಾಯಿ ಬೇಗ ತೀರಿಕೊಂಡದ್ದರಿಂದ ಇವರ ತಂದೆ ಮರುಮದುವೆಯಾದರು. ಒಟ್ಟು ಏಳು ಜನ ಮಕ್ಕಳು, ಮೂರು ಜನ ಗಂಡುಮಕ್ಕಳು, ನಾಲ್ಕು ಜನ ಹುಡುಗಿಯರು, ಸತ್ಯಭಾಮ ಆಂಟಿಯೇ ಇವರೆಲ್ಲರಿಗೂ ಹಿರಿಯರು ಹುಡುಗಿ ಸತ್ಯಭಾಮ ಅಸಾಮಾನ್ಯ ಚೆಲುವೆ. ಈಗಲೂ ಅವರ ಚೆಲುವು ಮಾಸಿಲ್ಲಾ. ರಾತ್ರಿ ಈಕೆ ಬಂದರೆ, ಬೆಳುದಿಂಗಳು ಬಂದ ಹಾಗೆ, ದೀಪವೇ ಬೇಡ ಎಂದು ಜನ ಮಾತನಾಡಿಕೊಳ್ಳುತ್ತಿದ್ದರಂತೆ. ಹೀಗಾಗಿ ಅಜ್ಜಿ ಮೊಮ್ಮಗಳನ್ನು ಮನೆಯ ಹೊಸಿಲು ದಾಟಲು ಬಿಡುತ್ತಿರಲಿಲ್ಲ. ನೆಂಟರಿ೦ದ ಮೊದಲುಗೊಂಡು ಬೇರೆ ಯಾವ ಗಂಡಸರಿಗೂ ಚೆಲುವೆ ಹುಡುಗಿ ಸತ್ಯಭಾಮೆ ಇರುತ್ತಿದ್ದಒಳಮನೆಗೆ ಪ್ರವೇಶ ನಿಷಿದ್ಧವಾಗಿತ್ತು. ಇದರಿಂದಾಗಿ ಸತ್ಯಭಾಮ ಅವರು ಕೆಲವರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿತು. ಇವರಿಗಿಂತ 8 ವರ್ಷ ದೊಡ್ಡವರಾದ ಕಂಬಾರ ಸರ್ ಅವರು, ಸತ್ಯಭಾಮ ಅವರ ತಂದೆಯ ಹತ್ತಿರದ ನೆಂಟರು. ಆಗ ಹಳ್ಳಿಯಲ್ಲಿ ವಿದ್ಯಾವಂತರೇ ಕಡಿಮೆ. ಹುಡುಗ ಕಂಬಾರ ಅವರು ಶಾಲೆಯಲ್ಲಿ ಬಹಳ ಚುರುಕಾಗಿದ್ದರು. ಡಿಗ್ರಿ ಮಾಡುವ ಹಂಬಲ ಇಟ್ಟುಕೊಂಡಿದ್ದರು. ನೋಡಲು ಸುರದ್ರೂಪಿ, ಮತ್ತಿನ್ನೇನು, ಚೆಲುವ ಹುಡುಗಿಗೂ ವಿದ್ಯಾವಂತ ಹುಡುಗನಿಗೂ ಈಡು-ಜೋಡಿ ಸರಿಯಾಗುತ್ತದೆ ಎಂದು ಎರಡೂ ಕಡೆಯವರು ನಿರ್ಧರಿಸಿಬಿಟ್ಟರು. ಹಾಗಾಗಿ ಬಾಲ್ಯದಲ್ಲೇ ಇವರಿಬ್ಬರ ಮದುವೆಯನ್ನು ಎರಡೂ ಕಡೆಯ ಹಿರಿಯರು ನಿಶ್ಚಯಿಸಿಬಿಟ್ಟಿದ್ದರು. ಸತ್ಯಭಾಮ ಅವರ ಅಜ್ಜಿಯ ಮನೆ ಎದುರುಗಡೆನೇ ಕಂಬಾರ ಸರ್ ಅವರ ಅಕ್ಕನ ಮನೆಯಿದ್ದರು. ಅಕ್ಕನನ್ನು ನೋಡಲು ಆಗಾಗ್ಗೆ ಬರುತ್ತಿದ್ದ ಕಂಬಾರ ಸರ್‌ಗೂ ಸಹ ಅವರ ಹುಡುಗಿಯನ್ನು ಮಾತನಾಡಿಸುವುದಿರಲಿ, ನೋಡಲು ಕೂಡಾ ಅವಕಾಶವಿರುತ್ತಿರಲಿಲ್ಲ. ಹಳೆಯ ಮಂದಿ ಅಷ್ಟೊಂದು ಕಟ್ಟುನಿಟ್ಟಿನ ಸಂಪ್ರದಾಯಕ್ಕೆ ಸಿದ್ಧರಾಗಿದ್ದರು. ಮಾತನಾಡಲಿಕ್ಕಾಗಿ ಬಹಳಷ್ಟು ಗುಡುಗ-ಹುಡುಗಿ ಕಾಯಬೇಕಾಗಿ ಬಂದಿತಂತೆ.

1958ನೆಯ ಇಸವಿಯಲ್ಲಿ ಸರ್ ಬಿಎ ಓದುತ್ತಿದ್ದಾಗ ಮತ್ತು ಸತ್ಯಭಾಮ ಅವರಿಗೆ 13 ವರ್ಷವಾದಾಗ ಶಾಸ್ತೋಕ್ತವಾಗಿ ಅವರಿಬ್ಬರ ಮದುವೆಯ ಒಪ್ಪಿಗೆ ಅಂದರೆ ವಿವಾಹ ನಿಶ್ಚಿತಾರ್ಥ ನೆರವೇರಿದರೂ, ಸತ್ಯಭಾಮ್ ಅವರು ಶ್ರೀಮತಿ ಚಂದ್ರಶೇಖರ ಕಂಬಾರ ಎಂದೆನಿಕೊಳ್ಳಲು ಮತ್ತೆ ಆರು ವರ್ಷದಷ್ಟು ಸುದೀರ್ಘ ಕಾಲ ಕಾಯಬೇಕಾಗಿ ಬಂದಿತು. ಸರ್ ಅವರೇನೋ ಉನ್ನತ ವಿದ್ಯಾಭ್ಯಾಸದಲ್ಲಿ ತಲ್ಲೀನರಾಗಿಬಿಟ್ಟಿದ್ದರು. ಆದರೆ ದೊಡ್ಡಾಕಿ ಆದಳೆಂದು ಶಾಲೆ ಬಿಡಿಸಿದ್ದರಿಂದ ಸತ್ಯಭಾಮ ಅವರು ಮನೆಯಲ್ಲೇ ಇರಬೇಕಾಗಿ ಬಂತು. ಆದರೆ ಚಟುವಟಿಕೆಯ ಹುಡುಗಿ ಸುಮ್ಮನೆ ಕೂರಲಿಲ್ಲ ಮನೆಗೆಲಸದಲ್ಲಿ ಪರಿಣತರಾದರು. ಅಡುಗೆ, ರಂಗೋಲಿ, ಕಸೂತಿ, ಹಿಂದುಸ್ತಾನಿ ಸಂಗೀತ, ಬಟ್ಟೆ ಹೊಲಿಯುವುದು ಹೀಗೆ ವಿದ್ಯೆಗಳನ್ನೆಲ್ಲಾ ಆದರ್ಶ ಗೃಹಿಣಿ ಆಗಲು ಆಗಿನ ಹೆಣ್ಣುಮಗಳು ಕಲಿತಿರಬೇಕಾದ ಕಲಿತರು. ಹೀಗೆ ಅವರು ಇಷ್ಟಪಟ್ಟು ಕಲಿತ ವಿದ್ಯೆ ಮುಂದೆ ಮದುವೆಯಾದ ಮೇಲೆ ಬಹಳ ಉಪಯೋಗಕ್ಕೆ ಬಂದಿತು. ಜೊತೆಗೆ ಹಿಂದಿಯಲ್ಲಿ ಮಾಧ್ಯಮಿಕ ಪರೀಕ್ಷೆಯನ್ನು ಕಟ್ಟಿ ಪಾಸಾದರು. ಅ೦ತು-ಇಂತು ಹಲವು ತೊಡರುಗಳನ್ನು ಎದುರಿಸಿದರೂ1964ನೆಯ ಇಸವಿ ಜೂನ್5ರಂದು ಕಂಬಾರ ಸರ್ ಅವರ ಕೈ ಹಿಡಿದು, ಎಲ್ಲಾ ರೀತಿಯಿಂದಲೂ ಅವರ ಮನೆ ಬೆಳಗಿದರು. ಕಂಬಾರ ಸರ್ ಅವರ ವಿದ್ಯಾಗುರುಗಳಾದ ಪ್ರೊ. ಭೂಸನೂರುಮಠ ಅವರು ತಮ್ಮ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಸತ್ಯಭಾಮ ಆಂಟಿ ಇಂದಿಗೂ ಅಂದರೆ ಮದುವೆಯಾಗಿ 53 ವರ್ಷಗಳು ಕಳೆದರೂ ಸಹ ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ: ಮದುವೆಗೆ ಎದುರಾದ ಅಡಚಣೆಗಳನ್ನು ನಿವಾರಿಸಿ, ತಾನು ಇಷ್ಟಪಟ್ಟ ಹುಡುಗನೊಡನೆಯೇ ಮದುವೆ ಮಾಡಿಸಿದ್ದಕ್ಕಾಗಿ ತಮ್ಮ ಕುಲದೇವತೆ ದುರ್ಗಾಮಾತೆಗೆ, ಸಿರಸಂಗಿ ಕಾಳಿಕಾಮಾತೆಗೆ ಕೃತಜ್ಞರಾಗಿದ್ದಾರೆ. ವರ್ಷಕ್ಕೊಮ್ಮೆಯಾದರೂ ಎಷ್ಟೇ ಕಷ್ಟವಾದರೂ ಸರಿಯೇ-ಈ ದೇವಿಯರ ದರುಶನಕ್ಕೆ ಹೋಗುವುದನ್ನು ತಪ್ಪಿಸುವುದಿಲ್ಲಾ. ಮನೆಯಲ್ಲಿಯೂ ಅಷ್ಟೇ ನಿತ್ಯಪೂಜೆ, ನಿತ್ಯ ಶ್ಲೋಕ, ಅವರ ದೇವರಮನೆಯನ್ನು ನೋಡಿದರೆ ಸಾಕು ಅವರ ಭಕ್ತಿ ಎಷ್ಟು ಅಪಾರ ಎಂದು ತಿಳಿದುಬರುತ್ತದೆ.

ಪುಸ್ತಕಾಸಕ್ತಿಯ ಜೊತೆಗೆ ಕೃಷಿ, ಅಡುಗೆ ಯ ಅಭಿರುಚಿ :- ಪುಸ್ತಕ ಓದುವುದೆಂದರೆ ನನಗೆ ಹೋಳಿಗೆ ಮತ್ತು ಹುಗ್ಗಿ ತಿಂದ ಹಾಗೆ ಎಂದು ಸಿಹಿಸಿಹಿ ತಿಂಡಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುವ ಆಂಟಿ, ಬರೀ ಕನ್ನಡ ಬರಹಗಾರರ ಪುಸ್ತಕವಲ್ಲದೇ, ಕನ್ನಡದಲ್ಲಿ ಅನುವಾದಗೊಂಡ ಇಂಗ್ಲಿಷ್‌ನ ಕ್ಲಾಸಿಕ್ ಪುಸ್ತಕವನ್ನೆಲ್ಲಾ ಓದಿ ಮುಗಿಸಿದ್ದಾರೆ. ಅದರ ಬಗ್ಗೆ ಸೊಸೆ ರೇಖಾ ಕಂಬಾರರೊಡನೆ ಹಂಚಿಕೊಳ್ಳುತ್ತಾರೆ. ದಿನಪತ್ರಿಕೆಯಲ್ಲಿ ಬರುವ ಎಲ್ಲಾ ಲೇಖನಗಳನ್ನು ಚಾಚೂ ತಪ್ಪದೆ ಓದುವ ಅವರಿಗೆ ರಾಜಕೀಯದಲ್ಲೂ ಆಸಕ್ತಿ, ದೇಶದ ಆಗು ಹೋಗುಗಳನ್ನು ಓದಿ ಮಕ್ಕಳೊಡನೆ ಚರ್ಚಿಸುತ್ತಾರೆ. ಈಗಲೂ ಮನೆಗೆ ಬರುವ ಎಲ್ಲ ಪುಸ್ತಕಗಳನ್ನೂ ಓದಿ ಕಂಬಾರ ಸರ್ ಅವರೊಂದಿಗೆ ಚರ್ಚಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆ. (ಅನೇಕ ವೇಳೆ ಹೆಂಡತಿಯ ಅಭಿಪ್ರಾಯಗಳನ್ನು ಗೌರವದಿಂದ ಸ್ವೀಕರಿಸುವುದಾಗಿ ಅಲ್ಲಿಯೇ ಇದ್ದ ಕಂಬಾರ ಸರ್ ಹೇಳಿದರು) ಸರ್ ಜೊತೆಯಲ್ಲಿ ದೇಶ ವಿದೇಶಗಳನ್ನು ಸುತ್ತಿರುವ ಸತ್ಯಭಾಮ ಅಂಟಿಯು ತಮ್ಮ ವಿಸ್ತಾರ ಜೀವನಾನುಭವದಿಂದ ಸಾಹಿತ್ಯದ ಬಗ್ಗೆ ತಮ್ಮದೇ ಆದ ನಿಲವುಗಳನ್ನು ಹೊಂದಿದ್ದಾರೆ. ಇವರ ಬರವಣಿಗೆ ತುಂಬ ಚೆಂದ ಇದ್ದುದರಿಂದ ಕಂಬಾರ ಸರ್ ಹೇಳಿದ್ದನ್ನು ಇವರು ಬರೆದುಕೊಳ್ಳುತ್ತಿದ್ದರಂತೆ. ಹೀಗೆ ಅನೇಕ ಕೃತಿಗಳ ಹಸ್ತಪ್ರತಿಗಳನ್ನು ನಾನೇ, ಸಿದ್ಧಪಡಿಸಿದ್ದೇನೆ' ಅಂತ ಹೆಮ್ಮೆಯಿಂದ ಹೇಳುತ್ತಾರೆ. ಮದುವೆಯಾದಾಗಲಿನಿಂದಲೂ ಮಂಗಳವಾರ, ಶುಕ್ರವಾರ ಮತ್ತು ಅಮಾವಾಸ್ಯೆ ಹುಣ್ಣಿಮೆಯಂದು ದೇವಿಯ ದಿವಸವೆಂದು, ಆ ದಿನಗಳಲ್ಲಿ ಮನೆಯ ಯಾವ ಕೆಲಸವನ್ನು ಮಾಡದೇ ಬರೀ ಓದಿಗಾಗಿ ಮೀಸಲಾಗಿಡುತ್ತಾರಂತೆ. ಅವರ ಪುಸ್ತಕಜ್ಞಾನ ಎಷ್ಟಿದೆಯೆಂದರೆ ಮನೆಯಲ್ಲಿರುವ ಸಾವಿರಾರು ಪುಸ್ತಕಗಳಲ್ಲಿ ನಿಮಗೆ ಬೇಕಾದ ಪುಸ್ತಕವನ್ನು ಕ್ಷಣಾರ್ಧದಲ್ಲಿ ಹುಡುಕಿಕೊಡಬಲ್ಲರು. ಸರ್‌ಗೆ ಅವರೆಷ್ಟು ಪುಸ್ತಕ ಬರೆದಿದ್ದಾರೆಂದು ನೆನಪಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಆಂಟಿ ಮಾತ್ರ ಇದುವರೆಗೆ 12 ಕವನ ಸಂಕಲನ, 5 ಕಾದಂಬರಿ, 29 ನಾಟಕಗಳು, 20ರ ಹತ್ತಿರದಷ್ಟು ಸಂಶೋಧನೆ ಬಗ್ಗೆ ಸರ್ ಬರೆದಿದ್ದಾರೆ ಎಂದು ಹೇಳಿ 'ಮೊದಲೆಲ್ಲಾ ಪುಸ್ತಕದ ಹೆಸರನ್ನು ನೆನಪಿಟ್ಟುಕೊಳ್ಳುತ್ತಿದ್ದೆ. ಇತ್ತೀಚೆಗೆ ವಯಸ್ಸಿನ ಕಾರಣದಿಂದ ಸಾಧ್ಯವಾಗುತ್ತಿಲ್ಲಾ' ಎಂದು ಬೇಸರಪಟ್ಟುಕೊಳ್ಳುತ್ತಾರೆ. ಮತ್ತೆ ಮೊದಲು ಚಿಕ್ಕ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸವಿರುವಾಗ, ಕೆಳಗಿಡಲು ಜಾಗವಿಲ್ಲದೆ, ಸಜ್ಜಾದ ಮೇಲೆ ಇಡುತ್ತಿದ್ದ ಪುಸ್ತಕಗಳನ್ನು ಏಣಿಯ ಸಹಾಯವಿಲ್ಲದೆ, ಬಾಗಿಲ ಮೇಲೆ ಹತ್ತಿ ತೆಗೆದುಕೊಡುತ್ತಿದ್ದೆ ಎಂದು ನಗುತ್ತಾ ತಮ್ಮ ನೋವಿರುವ ಕಾಲಿನ ಮಂಡಿಯನ್ನು ನೀವಿಕೊಳ್ಳುತ್ತಾ ನೆನಪಿಸಿಕೊಳ್ಳುತ್ತಾರೆ.

ಈ ಮೊದಲು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಅಂತ ಮೂರು ಭಾಷೆಯನ್ನು ಅರಿತಿದ್ದ ಸತ್ಯಭಾಮ ಆಂಟಿ ಬೆಂಗಳೂರಿನಲ್ಲಿ ವಾಸಮಾಡಲುತೊಡಗಿದ ಮೇಲೆ ಅಕ್ಕಪಕ್ಕದ ಮನೆಯವರ ಜೊತೆ ಮಾತನಾಡುತ್ತಾ ತಮಿಳು ಹಾಗೂ ತೆಲುಗು ಭಾಷೆಗಳನ್ನೂ ಅರ್ಥ ಮಾಡಿಕೊಳ್ಳುವಷ್ಟು ಕಲಿತು ಪಂಚಭಾಷಾ ಪ್ರವೀಣೆಯಾಗಿದ್ದಾರೆ.

ತೋಟಗಾರಿಕೆ ಇವರ ಪ್ರಿಯ ಹವ್ಯಾಸ. ಮನೆಯ ಹಿಂದಿನ ವಿಸ್ತಾರವಾದ ಜಾಗವನ್ನು ಹಾಳುಗೆಡಹದೆ ಅಲ್ಲಿ ಮನೆಗೆ ಬೇಕಾದ ತರಕಾರಿಗಳನ್ನು ಇವರೇ ಪ್ರೀತಿಯಿಂದ ಬೆಳೆಯುತ್ತಿದ್ದರು. ಗೆಣಸು, ಹೀರೆಕಾಯಿ, ಮೂಲಂಗಿ, ಬದನೇಕಾಯಿ, ಬೆಂಡೆಕಾಯಿ, ಎಲೆಕೋಸು, ಶೇಂಗ್ಲಾ, ಮುಸುಕಿನ ಜೋಳ, ಗುರೆಳ್ಳು, ತುಪ್ಪದ ಹೀರೆಕಾಯಿ, ಪಪಾಯಿ... ಇತ್ಯಾದಿ ಇತ್ಯಾದಿ ಅಂತ ಒಂದು ಉದ್ದದ ಪಟ್ಟಿಯನ್ನೇ ಮುಂದಿಟ್ಟರು. ಮತ್ತೆ ಗುಲಾಬಿ, ಕನಕಾಂಬರ, ಗೊರಟೆ, ಬಿಂದಿಗೆ ಹೂ, ಮಲ್ಲಿಗೆ ಎಂದು ಹೂವುಗಳ ಪಟ್ಟಿಯೂ ಅದಕ್ಕೆ ಸೇರ್ಪಡೆಯಾಯಿತು. ಇವೆಲ್ಲಾ ಸಂಸಾರ ನಿರ್ವಹಣೆಗೂ ಸಹಕಾರಿಯಾಗುತ್ತಿತ್ತು. ಅಡುಗೆ ಮಾಡುವುದೆಂದರೆ ಆಂಟಿಗೆ ತುಂಬ ಇಷ್ಟ. ಬಗೆಬಗೆಯ ಅಡುಗೆ ಮಾಡುವುದು ಇವರ ಇನ್ನೊಂದು ಹವ್ಯಾಸ. ಸಿಹಿ ಎಂದರೆ ಪಂಚಪ್ರಾಣ. ಅದಕ್ಕಾಗಿ ಮಕ್ಕಳ ನೆಪ ಮಾಡಿಕೊಂಡು–ಬಾದುಶಾ, ಕುಂದಾ, ರಸಗುಲ್ಲ, ಜಿಲೇಬಿ, ಜಹಂಗೀರ್ ಹೀಗೆ ತರಹೇವಾರಿ ತಿಂಡಿಗಳನ್ನು ವಾರ ಪತ್ರಿಕೆಯಲ್ಲಿ ಓದಿ ಮನೆಯಲ್ಲಿಯೇ ಮಾಡುತ್ತಿದ್ದರು. ಇವರ ಅಡುಗೆ ಹುಚ್ಚನ್ನು ಅರಿತಿದ್ದ ಕಂಬಾರ ಸರ್ ಅವರು ಚಿಕಾಗೋದಿಂದ ಬರುವಾಗ ಅಡುಗೆ ಪುಸ್ತಕವನ್ನು ತಂದುಕೊಟ್ಟಿದ್ದರಂತೆ. ಅದನ್ನು ಈಗಲೂ ಭದ್ರವಾಗಿ ಇಟ್ಟಿದ್ದೇನೆ' ಎಂದು ತಂದು ತೋರಿಸಿದಾಗ ಅವರ ಮುಖದಲ್ಲಿ ನಸುನಗು ಕಂಡೂಕಾಣದಂತೆ ಸುಳಿದಾಡಿತ್ತು- ಆ ನಗುವಿನಲ್ಲಿ ಯಾವ ಗುಟ್ಟು ಅಡಗಿತ್ತೋ ಎಂದು ಕೇಳಲು ಹಿಂದೇಟು ಹಾಕಿ, ಕಾಣದಂತೆ ಸುಮ್ಮನಾದೆ. ಅಪ್ಪಟ ಸಸ್ಯಾಹಾರಿಯಾದ ಆಂಟಿ ಮಕ್ಕಳ ಹುಟ್ಟು ಹಬ್ಬದಂದು ಮೊಟ್ಟೆ ಇಲ್ಲದೇ ಕೇಕ್ ಮಾಡುತ್ತಿದ್ದರಂತೆ.

ಅವರಿಗೆ ಹೊಟೇಲ್ ಎಂದರೆ ಆಗಲೂ ಇಷ್ಟವಿರಲಿಲ್ಲ. ಈಗಲೂ ಇಷ್ಟವಿಲ್ಲ. ಹಾಗಾಗಿ ಕಂಬಾರ ಸರ್‌ಗೆ ಪ್ರಶಸ್ತಿ ಬಂದಾಗಲೆಲ್ಲಾ ಮನೆಯಲ್ಲೇ ಹುಗ್ಗಿ, ಹೋಳಿಗೆ ಮಾಡಿಕೊಂಡು, ಮನೆಮಂದಿಯಲ್ಲಾ ಕೂಡಿಕೊಂಡು ಸಂಭ್ರಮದಿಂದ ಹರಟುತ್ತಾ ಒಟ್ಟಿಗೆ ಊಟ ಮಾಡಿ ಆಚರಿಸುತ್ತಾರೆ.

ಮಕ್ಕಳಿಗೆ ಮನೆಯಲ್ಲಿ ಪಾಠ ಹೇಳಿಕೊಡುವುದೂ ಇವರ ಕೆಲಸವೇ. ಇಂಗ್ಲಿಷ್ ಮತ್ತು ಗಣಿತವನ್ನು ಚೆನ್ನಾಗಿ ಕಲಿಸುತ್ತಿದ್ದರಂತೆ, ಅವರ ಮಾತುಗಳನ್ನು ಕೇಳುತ್ತಿದ್ದರೆ ಸತ್ಯಭಾಮ ಆಂಟಿ ಒಳ್ಳೆ ಗೃಹಣಿ ಮಾತ್ರವಲ್ಲ, ಕಂಬಾರ ಸರ್ ಅವರ ಸಾಹಿತ್ಯ ಕೃಷಿಗೆ ಇವರ ನೆರವು ಯಾವ ಯಾವ ರೂಪದಲ್ಲಿತ್ತು ಎಂದು ತಿಳಿಯುತ್ತದೆ.

ರಜನಿ ನರಹಳ್ಳಿ ಅವರ ಲೇಖಕ ಪರಿಚಯ ನಿಮ್ಮ ಓದಿಗಾಗಿ...
ನಿನ್ನೊಲುಮೆಯಿಂದಲೇ ಕೃತಿ ಪರಿಚಯ...

MORE FEATURES

ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕು: ಮಮತಾ ಜಿ. ಸಾಗರ್

16-04-2024 ಬೆಂಗಳೂರು

‘ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ’ ಎನ್ನುತ್ತ...

ಎಲ್ಲ ಕಾಲಕ್ಕೂ ಸಲ್ಲುವ ಮಕ್ಕಳ ಕವನ ಸಂಕಲನ ‘ಏನು ಚಂದವೋ…’‌

15-04-2024 ಬೆಂಗಳೂರು

"ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ&h...

ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ

16-04-2024 ಬೆಂಗಳೂರು

"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒ...