ಕಾವ್ಯವಾಗಿ ಮೆಚ್ಚಬಹುದಾದ ಈ ಕೃತಿ, ನಾಟಕವಾಗಿ ಅಮುಖ್ಯ : ಕಮಲಾಕರ್‌ ಭಟ್


“ಕಾವ್ಯವಾಗಿ ಮೆಚ್ಚಬಹುದಾದ ಈ ಕೃತಿ, ನಾಟಕವಾಗಿ ಅಮುಖ್ಯ ಅಂತ ನನ್ನ ಭಾವನೆ. ಕನ್ನಡ ರಂಗಭೂಮಿಗೆ ವಿಶೇಷ ಕೊಡುಗೆ ಕೊಡುವ ಶಕ್ತಿ ಭವಭೂತಿಯ ಈ ಕೃತಿಗಿಲ್ಲ ಎಂದೇ ನನಗನಿಸುತ್ತದೆ” ಎಂದು ಲೇಖಕ ಕಮಲಾಕರ್‌ ಭಟ್‌ ಅವರು ಕೆ. ವಿ. ಅಕ್ಷರ ಅವರು ರಚಿಸಿರುವ "ಕಡುಗಲಿಯ ನಿಡುಗಾಥೆ" ಕೃತಿಯನ್ನು ವಿಮರ್ಶಿಸಿದ್ದಾರೆ. ನಿಮ್ಮ ಓದಿಗಾಗಿ…

ಕೃತಿ : ಕಡುಗಲಿಯ ನಿಡುಗಾಥೆ

ಲೇಖಕರು : ಕೆ. ವಿ. ಅಕ್ಷರ

ಪ್ರಕಟಣೆಯ ವರ್ಷ: 2020

ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು

ಕನ್ನಡದ ಅನುವಾದಕರಲ್ಲಿ ನಾನು ಅತ್ಯಂತ ಹೆಚ್ಚು ಮೆಚ್ಚುವುದು ಕೆ. ವಿ. ಅಕ್ಷರ ಅವರನ್ನು. ಅವರ ಅನುವಾದದಲ್ಲಿ ನಾನು ಶೆಲ್ಡನ್ ಪೊಲಾಕ್ ಅವರ ಕೃತಿಯನ್ನು ಮೊದಲು ಓದಿದಾಗ ಅವಾಕ್ಕಾಗಿ ಬಿಟ್ಟೆ. ಯಾಕೆಂದರೆ ತುಂಬಾ ಅಕೆಡೆಮಿಕ್ ಆದ ಶೈಲಿ ಹಾಗೂ ಭಾಷೆಯಲ್ಲಿರುವ ಪೊಲಾಕ್ ಅವರ ಕಾಸ್ಮೋಪಾಲಿಟನ್ ವರ್ನಾಕ್ಯುಲರ್ ಎಂಬ ಕೃತಿಯ ಕನ್ನಡ ಅನುವಾದ ಅಷ್ಟು ಸುಸ್ಪಷ್ಟ ರೀತಿಯಲ್ಲಿ ಮಾಡಬಹುದು ಅನ್ನುವುದೇ ನನಗೆ ಅಚ್ಚರಿಯ ಸಂಗತಿ. ಅವರ ಬರಹಗಳ ಹಾಗೆಯೇ ಅನುವಾದಗಳೂ ಕೂಡ ಕನ್ನಡಕ್ಕೆ ಹೊಸ ಶಬ್ದ - ನುಡಿಗಟ್ಟುಗಳನ್ನು ಕೊಟ್ಟಿದೆ. ಇತ್ತೀಚೆಗೆ ಅವರು ಅನುವಾದಿಸಿರುವ ಸಂಸ್ಕೃತ ನಾಟಕಕಾರ ಭವಭೂತಿಯ "ಮಹಾವೀರಚರಿತ" ಕೃತಿಯ ಅನುವಾದವಾದ "ಕಡುಗಲಿಯ ನಿಡುಗಾಥೆ" ಓದಿದಾಗ ನನ್ನ ಅನಿಸಿಕೆ ಮತ್ತಷ್ಟು ಧೃಡವಾಯಿತು.

ಕೆ ವಿ ಅಕ್ಷರ ಅವರ ಈ ಅನುವಾದಿತ ನಾಟಕವು ಶಿಷ್ಟ ಕನ್ನಡದಲ್ಲಿ ಸಂಸ್ಕೃತ ನಾಟಕದ ಸಮರ್ಥ ಪ್ರಸ್ತುತಿ. ಉದ್ದಕ್ಕೂ ಗದ್ಯ -ಪದ್ಯಗಳ ಮಿಶ್ರಣ ಶೈಲಿಯಲ್ಲಿ, ವಿಷಯಕ್ಕೆ ಒಗ್ಗುವ ಭಾಷೆಯಲ್ಲಿ, ಸುಲಭ ಮತ್ತು ಅತ್ಯಂತ ಸಹಜ ಓದಿಗೆ ದಕ್ಕುವ ಹಾಗೆ ಮಾಡಿರುವ ಅನುವಾದ. ಪದಪ್ರಯೋಗಗಳು, ಕನ್ನಡ ಕಾವ್ಯದ ಬಗೆಬಗೆಯ ಲಯಗಳ ಬಳಕೆ, ರಂಗಪ್ರಯೋಗಕ್ಕೆ ಸೂಕ್ತವಾದ ಅಭಿವ್ಯಕ್ತಿ ವಿಧಾನಗಳು ಅನುವಾದಕರ ಅಪರೂಪದ ಶಕ್ತಿ. ಅನುವಾದದ ಮೂಲಕ ಕನ್ನಡವನ್ನು ಶ್ರೀಮಂತವಾಗಿಸುವ ಕೃತಿ.

ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿರುವ ಸಂಸ್ಕೃತ ಪದಗಳ ಬಳಕೆ ಇದ್ದರೂ, ಅನಗತ್ಯ ಸಂಸ್ಕೃತ ಪ್ರಯೋಗ ಮಾಡಿಲ್ಲ. ಕಾವ್ಯವಾಗಿ ಮೆಚ್ಚಬಹುದಾದ ಈ ಕೃತಿ, ನಾಟಕವಾಗಿ ಅಮುಖ್ಯ ಅಂತ ನನ್ನ ಭಾವನೆ. ಕನ್ನಡ ರಂಗಭೂಮಿಗೆ ವಿಶೇಷ ಕೊಡುಗೆ ಕೊಡುವ ಶಕ್ತಿ ಭವಭೂತಿಯ ಈ ಕೃತಿಗಿಲ್ಲ ಎಂದೇ ನನಗನಿಸುತ್ತದೆ. ಇದೇನಾದರೂ ಸಂಸ್ಕೃತ ನಾಟಕ ಅಲ್ಲದಾಗಿದ್ದರೆ, ಭವಭೂತಿ ಎಂಬ ಮಹಾನ್ ನಾಟಕಕಾರನದ್ದಾಗಿಲ್ಲದಿದ್ದರೆ ಈ ಕೃತಿಯ ಕುರಿತು ಆಸಕ್ತಿ ಇರುತ್ತಿತ್ತಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಸಂಸ್ಕೃತ ಕೃತಿಯೊಂದನ್ನು ಕನ್ನಡದಲ್ಲಿ ಸಹಜ ಓದಿಗೆ ದಕ್ಕುವಂತೆ ಮಾಡುವ ಅಕ್ಷರ ಅವರ ಭಾಷಾಂತರದ ಶಕ್ತಿ ಮೆಚ್ಚತಕ್ಕದ್ದು. ಕನ್ನಡದಲ್ಲಿ ಸ್ವತಂತ್ರ ಕೃತಿಯಾಗಿ ಓದುವಂತಿದೆ.

- ಕಮಲಾಕರ್‌ ಭಟ್

 

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...