ಕಿರಂ : ಮರುಸೃಶ್ಟಿಸುವ ಸೃಜನಶೀಲ ಪ್ರತಿಭೆ


ಓದುವ ರೀತಿ, ಅರ್ಥ ಮಾಡಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಆಸಕ್ತರಲ್ಲಿ -ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುತ್ತಿದ್ದ ಕಿ.ರಂ. ಮೇಷ್ಟ್ರು ಅರಿವಿನ ಕ್ಷಿತಿಜ ವಿಸ್ತರಿಸಲು ಕಾರಣರಾಗುತ್ತಿದ್ದರು. ವಿಮರ್ಶಕ-ಲೇಖಕ ಡಾ. ರಂಗನಾಥ ಕಂಟನಕುಂಟೆ ಅವರು ಕಿ.ರಂ. ಕುರಿತು ಬರೆದ ಈ ಬರಹ ಆಪ್ತವಾಗಿದೆ ಹಾಗೂ ಕಿ.ರಂ.ರನ್ನು ವಿಭಿನ್ನ ರೀತಿಯಲ್ಲಿ ಗ್ರಹಿಸಿ-ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

 

ಕಿ.ರಂ. ಕನ್ನಡ ಸಾಹಿತ್ಯದ ಓದು, ವಿಮರ್ಶೆ, ವ್ಯಾಖ್ಯಾನಗಳ ಪ್ರಕ್ರಿಯೆಯ ಸೂಕ್ಷ್ಮಧ್ವನಿಯಾಗಿದ್ದುದು ನಮಗೆಲ್ಲ ತಿಳಿದಿರುವ ವಿಚಾರ. ಸಾಹಿತ್ಯದ ವಿಶಿಶ್ಟ ಓದಿನ, ಆಲೋಚನೆಯ ಪರಿಣಾಮವಾಗಿ ಕನ್ನಡದ ಎಲ್ಲ ಸಾಹಿತ್ಯಾಸಕ್ತರಿಗೂ ಪ್ರಿಯರಾಗಿದ್ದವರು. ಸಾಹಿತ್ಯ ಕುರಿತ ಅವರ ಮಾತುಗಳನ್ನು ಕೇಳಲು ನಮ್ಮಲ್ಲಿ ಎಶ್ಟೋ ಜನ ಕಾತರರಾಗಿರುತ್ತಿದ್ದುದು ಇತ್ತು. ಅವರ ಜತೆಗೆ ಸಾಹಿತ್ಯದ ಸಮಾಜ ಸಂಸ್ಕೃತಿಗಳ ಚರ್ಚೆಗಳನ್ನು ಮಾಡುತ್ತ ಸಮಯವನ್ನು ಕಳೆಯಲು ಅಪೇಕ್ಷೆಪಡುತ್ತಿದ್ದುದು ಇತ್ತು. ಯಾವುದೇ ಸಾಹಿತ್ಯ ಕೃತಿಯನ್ನು ಕುರಿತಾದ ಅವರ ಮಾತುಗಳಲ್ಲಿ ಭಿನ್ನವಾದ ಒಳನೋಟಗಳು ವ್ಯಕ್ತವಾಗಿ ಕೃತಿಯ ಬಗೆಗೆ ಭಿನ್ನವಾದ ಆಯಾಮಗಳನ್ನು ನೀಡುತ್ತಿರುತ್ತಿದ್ದವು. ಆ ಮಾತುಗಳು ಕೇಳುಗರ ಸಾಹಿತ್ಯದ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಿದ್ದವು. ಈ ಕಾರಣಕ್ಕಾಗಿಯೇ ಅವರು ವೃತ್ತಿಪರ ಬರೆಹಗಾರರಾಗಿ (ಪ್ರಾಸಂಗಿಕವಾಗಿ ಬರೆದಿರುವ ಮತ್ತು ಅವರ ಮಾತುಗಳನ್ನು ದಾಖಲಿಸಿ ಕೃತಿ ರೂಪಕ್ಕೆ ಪರಿವರ್ತಿಸಿರುವುದನ್ನು ಹೊರತುಪಡಿಸಿ) ಅಲ್ಲದೆ ಓರ್ವ ನಿಜದ ಓದುಗ ಮತ್ತು ಸಾಹಿತ್ಯ ಚಿಂತಕರಾಗಿ ಕನ್ನಡದ ಸಾಂಸ್ಕøತಿಕ ಜಗತ್ತಿನ ಮುಖ್ಯಶಕ್ತಿಯಾಗಿದ್ದರು.
ಅವರ ಸಾಹಿತ್ಯದ ಸೂಕ್ಷ್ಮ ಓದಿನ, ಚಿಂತನೆಯ ಕ್ರಮ ಕನ್ನಡ ಸಾಹಿತ್ಯದ ಓದಿನ ಹಾದಿಯಲ್ಲಿಯೇ ಅವರನ್ನು ಭಿನ್ನವಾಗಿಸಿತ್ತು. ಬರೆಹದ ಮೂಲಕ ಎಶ್ಟೋ ಜನರು ತಮ್ಮ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಾರೆ. ಇಂತಹ ಹೆಣಗಾಟವಿಲ್ಲದೆಯೇ ಭಿನ್ನ ರೀತಿಯ ಓದು, ಆಲೋಚನೆ ಮತ್ತು ಚರ್ಚೆಗಳ ಮೂಲಕವೇ ಸಾಹಿತ್ಯಕ ವಲಯದಲ್ಲಿ ತಮ್ಮ ವಿಶಿಶ್ಟ ಅಸ್ಮಿತೆಯನ್ನು ಕಂಡುಕೊಂಡಿದ್ದರು. ಮೇಲೆ ಹೇಳಿದಂತೆ ಇದು ಅವರ ಭಿನ್ನ ಓದಿನ ಮತ್ತು ಆಲೋಚನೆಯ ಪರಿಣಾಮವಾಗಿಯೇ ಎಂಬುದು ಮುಖ್ಯ ವಿಚಾರ. ಈ ನಿಟ್ಟಿನಲ್ಲಿ ಅವರ ವಿಚಾರಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಿದೆ. ಇಲ್ಲಿ ‘ನೆನಪು’ ಎನ್ನುವುದು ಮುಖ್ಯಸಂಗತಿ. ಯಾಕೆಂದರೆ ನಮಗೆ ತಿಳಿದಿರುವಂತೆ ಅವರು ಬರೆಹದ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಓದು, ಚಿಂತನೆ ಹಾಗೂ ತಮ್ಮ ವಿಚಾರಗಳನ್ನು ಸಹೃದಯರ ಎದುರು ಹಂಚಿಕೊಂಡಿರುವುದೇ ಹೆಚ್ಚು. ಅವರ ಎಶ್ಟೋ ವಿಶೇಶ ಒಳನೋಟಗಳು ದಾಖಲಾಗದೇ ಮೌಖಿಕ ಪರಂಪರೆಯಲ್ಲಿ ಲೀನವಾಗಿರುವುದೇ ಹೆಚ್ಚು. ಇದು ಅಸಂಖ್ಯ ಕೇಳುಗರ, ಸಾಹಿತ್ಯಾಸಕ್ತರ ಮನಸಿನಲ್ಲಿ ನೆಲೆಸಿರುವುದನ್ನು ಕಾಣಬಹುದಾಗಿದೆ. ಹಾಗಾಗಿ ಅವರ ಆಲೋಚನೆಗಳಿಗೆ ನಾವು ಕೃತಿಗಳನ್ನು ತಡಕಾಡದೆ ಅವರ ಸಮೀಪವರ್ತಿಗಳ, ಅವರ ಮಾತುಗಳನ್ನು ಕೇಳಿಸಿಕೊಂಡಿರುವ ಸಹೃದಯರ ವಿಚಾರದಲ್ಲಿ ಹುಡುಕಬೇಕಿದೆ.
ಈ ಹಿನ್ನೆಲೆಯಲ್ಲಿ ಅವರ ಓದಿನ, ಅಧ್ಯಯನದ ಕ್ರಮಗಳು ನಮಗೆ ಮುಖ್ಯವಾಗಬೇಕಿದೆ. ಅವುಗಳನ್ನು ಅರಿಯಲು ಮತ್ತು ಆ ವಿಚಾರಗಳ ಶೋಧದ ವಿವಿಧ ನೆಲೆಗಳನ್ನು ಕಂಡುಕೊಳ್ಳಲು ನಾವು ಭಿನ್ನವಾದ ಪ್ರಯತ್ನವನ್ನು ಮಾಡಬೇಕಿರುತ್ತದೆ. ಯಾವುದೇ ಸಿದ್ದ ಮಾದರಿಗಳಿಂದ ಅವರ ವಿಚಾರಗಳನ್ನು “ಇದಮಿತ್ಥಂ” ಎಂದು ಹೇಳಲುಬಾರದು. ಅವರ ಆಲೋಚನೆಯ ಕ್ರಮವೇ ಹಾಗೆ. ಅದು ಸದಾ ಬದಲಾಗುತ್ತಿರುತ್ತದೆ. ಈ ಮಧ್ಯೆ ಅವರ ಆಲೋಚನೆಯ ಕ್ರಮದಲ್ಲಿ ಅವರ ಜೀವನ ಕ್ರಮವೂ ಬೆಸೆದುಕೊಂಡಿದೆ ಎಂಬುದು ಗಮನಾರ್ಹ. ಇದನ್ನು ಅರಿತಾಗ ಮಾತ್ರ ಅವರ ಸಾಹಿತ್ಯದ ವಿಚಾರಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯ. ಇದನ್ನು ಇನ್ನಷ್ಟು ನಿರ್ದಿಶ್ಟವಾಗಿ ಹೇಳುವುದಾದರೆ ಅವರು ಸಾಹಿತ್ಯವನ್ನು ಅಥವಾ ಯಾವುದೇ ಲೇಖಕನ ಕೃತಿಯನ್ನು ಓದುವ ಕ್ರಮಗಳು, ಆ ಕುರಿತ ಚಿಂತನೆಗಳಲ್ಲಿ ಕಾಲಕಾಲಕ್ಕೆ ಬದಲಾವಣೆಗೊಳ್ಳುತ್ತಿರುತ್ತವೆ. ಇಂತಹ ಬದಲಾವಣೆಗಳು ಸಾಂದರ್ಭಿಕ ಅನಿವಾರ್ಯತೆಗಳಿಂದ ಕೂಡಿದವುಗಳಲ್ಲ. ಬದಲಿಗೆ ಕೃತಿಯೊಂದು ಬದಲಾದ ಕಾಲಕ್ಕೆ ಹೇಗೆ ಹೊಸ ಅರ್ಥವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಅವರ ಮನಸ್ಸು ಶೋಧಿಸುತ್ತಿರುತ್ತದೆ. ಹಾಗಾಗಿ ಬದಲಾದ ಕಾಲಕ್ಕೆ ತಕ್ಕಂತೆ ಕೃತಿಯ ಶೋಧನೆಯ ಕ್ರಮವೂ ಬದಲಾಗುತ್ತದೆ. ಅಂತಹ ಬದಲಾವಣೆಯು ಉದ್ದೇಶಪೂರಕವಾಗಿಯೇ ಸಂಭವಿಸುವಂತಹದು. ಮತ್ತೆ ಇಂತಹ ಬದಲಾವಣೆಯು ಕಾಲವನ್ನೇ ಆಧರಿಸಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದು ಒಂದೇ ಕಾಲದಲ್ಲಿಯೂ ಬದಲಾಗಬಹುದು. ಹಲವು ಚಿಂತನೆಗಳ ಪ್ರಭಾವವೂ ಬದಲಾವಣೆಯ ಹಿಂದೆ ಕೆಲಸಮಾಡಿರಬಹುದು. ಆದರೆ ಚಿಂತನೆಗಳು ಪ್ರಭಾವಿಸಿರುವುದನ್ನು ನಾವು ಅರಿಯಲು ಸಾಧ್ಯವಾಗದಶ್ಟು ಅವು ಗೌಣವಾಗಿಯೇ ಇರುತ್ತವೆ. ತಮ್ಮ ಚಿಂತನೆಗಳು ಜಡಗೊಳ್ಳುವ ಅಪಾಯದಿಂದ ಪಾರುಮಾಡಲು ಇಂತಹ ಬದಲಾವಣೆಗಳನ್ನು ನಡೆಸುತ್ತಿರಬಹುದು. ಇದನ್ನು ಖಚಿತವಾಗಿ ಹೇಳಲು ಕಶ್ಟವೆನಿಸುತ್ತದೆ.
ಅವರ ಓದು ಮತ್ತು ಚಿಂತನೆಗಳು ಜಡಸ್ವರೂಪಿಯಾದವುಗಳಲ್ಲ. ಸದಾ ಬದಲಾಗುತ್ತ ಹೋಗುವ ಅವರ ಓದಿನ ಕ್ರಮಗಳು ಅವರ ಚಿಂತನೆಗಳನ್ನು ಜಡಸ್ವರೂಪದಿಂದ ಪಾರುಮಾಡುತ್ತವೆ. ಜಡಮಾದರಿಗಳಿಂದ ಪಾರಾಗುವ ಪ್ರಯತ್ನದಲ್ಲಿ ಏಕಮುಖವಾದ ಓದಿಗೆ ಗಂಟು ಬೀಳದೆ ಯಾವುದೇ ಕೃತಿಯನ್ನು ವಿವಿಧ ದಿಕ್ಕುಗಳಿಂದ ಮುಖಾಮುಖಿಯಾಗುತ್ತಾರೆ. ಆ ಮೂಲಕ ಒಂದು ಕೃತಿ ಹೊಮ್ಮಿಸಬಹುದಾದ ಅರ್ಥಗಳ ಸಾಧ್ಯತೆಗಳನ್ನು ಅನ್ವೇಶಿಸುತ್ತ ಹೋಗುತ್ತಾರೆ. ಆ ಮೂಲಕ ಕೃತಿಯ ಸಮಕಾಲೀನತೆಯೊಂದು ಸ್ಥಾಪನೆಗೊಳ್ಳುತ್ತಿರುತ್ತದೆ. ಅದರ ಸಾತತ್ಯವು ಪ್ರತಿಪಾದನೆಗೊಳ್ಳುತ್ತಿರುತ್ತದೆ. ಅವರ ಇಂತಹ ಓದಿನಿಂದ ಅವರಲ್ಲಿರುವ ಒಬ್ಬ ಸೃಜನಶೀಲ ಬರೆಹಗಾರ ಅಲ್ಲಿ ಮತ್ತೆ ಮತ್ತೆ ರೂಪುಗೊಳ್ಳುತ್ತಿರುತ್ತಾನೆ. ಅಭಿವ್ಯಕ್ತಗೊಳ್ಳುತ್ತಿರುತ್ತಾನೆ. ಅನುಭವದ ಲೋಕದಲ್ಲಿ ಮುಳುಗಿರುತ್ತಾನೆ. ಅನುಭವಿಸುತ್ತಿರುತ್ತಾನೆ. ಇಂತಹ ಪ್ರಕ್ರಿಯೆಯ ನಡುವೆ ಓದು ಕೂಡ ಮರುಸೃಶ್ಟಿಯ ಕ್ರಿಯೆಯಾಗಿ ರೂಪಾಂತರಗೊಳ್ಳುತ್ತಿರುತ್ತದೆ. ಬಹುಶಹ ಓದುವುದರ ಮೂಲಕವೇ ಸೃಜನಶೀಲ ಲೋಕ ಒಂದನ್ನು ಕಟ್ಟಿಕೊಳ್ಳುವ ವಿಶಿಶ್ಟ ಕ್ರಮವು ಅವರಲ್ಲಿದೆ. ಓದಿನ ಮೂಲಕವೇ ಮರುಸೃಶ್ಟಿ ಮಾಡುವ ಅವರ ಪ್ರತಿಭಾತ್ಮಕ ಶಕ್ತಿ ಅವರ ವಿಶಿಶ್ಟ ಪ್ರತಿಭೆಯಾಗಿದೆ.
ಮೇಲೆ ಹೇಳಿದಂತೆ ಅವರ ಓದಿನ ಮತ್ತು ಚಿಂತನೆಯ ಕ್ರಮದಲ್ಲಿ ಜೀವನ ಕ್ರಮವೂ ಅಡಗಿದೆ. ಒಮ್ಮೆ ಅವರೇ ಹೇಳಿದಂತೆ ನಮ್ಮ ಸಮಾಜದ ಜತೆಗೆ ನಾವು ಸಂವಾದಿಸಲಾಗದ ಸ್ಥಿತಿಯಲ್ಲಿದ್ದೇವೆ. ಯಾವ ಹಂತದಲ್ಲಿಯೂ ಇಂದಿನ ಸಮಾಜದಲ್ಲಿ ಮುಕ್ತವಾಗಿ ಬೆರೆಯಲಾರದ ಒಂದು ಪರಕೀಯ ಸ್ಥಿತಿ ನಿರ್ಮಾಣವಾಗಿದೆ. ಅಂತಹ ಸಂದರ್ಭದಲ್ಲಿ ನಮ್ಮನ್ನು ಜೀವಂತವಾಗಿಸಲು ಮಹತ್ವದ ಸಾಹಿತ್ಯದ ಕೃತಿಯೊಂದು ನೆರವಾಗುತ್ತದೆ. ಅದು ಸಂಗಾತಿಯಾಗುತ್ತದೆ ಎಂದು ಭಾವಿಸುತ್ತಾರೆ. ಈ ದೃಶ್ಟಿಯಿಂದಲೇ ಅವರು ತಮ್ಮೆಲ್ಲ ಶಕ್ತಿಯನ್ನು ಓದಿನಲ್ಲಿ ತೊಡಗಿಸುತ್ತ ಆ ಮೂಲಕ ತಮ್ಮ ಕ್ರಿಯಾಶೀಲತೆಯನ್ನು ಕಾಪಾಡಿಕೊಳ್ಳುತ್ತ, ಭಾವನೆಯ ಲೋಕವನ್ನು ಪ್ರವೇಶಿಸುವ, ಅನುಭವಿಸುವ ಪ್ರಯತ್ನವನ್ನು ಮಾಡುತ್ತಾರೆ ಎನ್ನಬಹುದು. ಆ ಮೂಲಕ ಸಮಾಜದ ಜತೆಗೆ ಮುಖಾಮುಖಿಯಾಗುವ ಪ್ರಯತ್ನ ಸಂಭವಿಸುತ್ತಿರುತ್ತದೆ. ಆದ್ದರಿಂದ ಅವರ ಸಾಹಿತ್ಯದ ಓದು ಕೃತಿ ಮೌಲ್ಯಮಾಪನವಾಗದೇ ಒಂದು ಅನುಭವಲೋಕವನ್ನು ಶೋಧಿಸುವ, ಅದನ್ನು ತನ್ನದಾಗಿಸುವ ಅಥವಾ ಮರುಸೃಶ್ಟಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾರೆ. ಒಟ್ಟು ಅವರ ಸಾಹಿತ್ಯದ ಓದು ವಿಮರ್ಶಕನ ಮೌಲ್ಯಮಾಪನದ ಪಾತ್ರದಿಂದ ತಪ್ಪಿಸಿಕೊಂಡು ಸೃಜನಶೀಲ ವಲಯಕ್ಕೆ ಜಿಗಿಯುತ್ತದೆ.
ಹಾಗಾಗಿ ಅವರು ಕೃತಿಯನ್ನು ಪ್ರವೇಶಿಸುವುದು ಮತ್ತು ಬದಲಾದ ಸಂದರ್ಭದಲ್ಲಿ ಅದನ್ನು ಮರುಚಿಂತನೆಗೆ ಒಳಪಡಿಸುವ ಕ್ರಮ ಹೊಸಹೊಸ ಒಳನೋಟಗಳನ್ನು ನೀಡುತ್ತಾ, ಹೊಸ ಅನುಭವಲೋಕವನ್ನು ತೆರೆಯಲು ಮುಂದಾಗುತ್ತದೆ. ಈ ಹಂತದಲ್ಲಿಯೇ ವಿಮರ್ಶೆಯು ಕೂಡ ವಿಚಾರಪ್ರಧಾನತೆಯ ಭಾರವನ್ನು ಇಳಿಸಿಕೊಂಡು ಕೇಳುಗನ ಮನಸ್ಸಿನಲ್ಲಿ ಅನುಭವದ ದಟ್ಟ ಭಾವವು ಪ್ರವೇಶಗೊಳ್ಳುವ ಮೂಲಕ ಮನಸ್ಸು ಹಗುರಗೊಳ್ಳುತ್ತದೆ. ಸಾಹಿತ್ಯದ ಚರ್ಚೆ ಅಥವಾ ವಿಮರ್ಶೆಯು ಹೆಚ್ಚು ಆಪ್ತವಾಗುತ್ತದೆ. ಇಂತಹ ಕ್ರಮಗಳಿಂದ ಕೃತಿ ಕಾಲನಿರ್ಬಂಧಿತ ಓದುಗಳಿಂದಲೂ ಪಾರಾಗುತ್ತದೆ. ಆ ಮೂಲಕ ಕೃತಿ ಯಾವತ್ತೂ ಸಮಕಾಲೀನಗೊಳ್ಳುತ್ತಲೂ ಸಾಗುತ್ತಿರುತ್ತದೆ. ನಿನ್ನೆಯ ಮನುಶ್ಯ ಇಂದಿನವನಾಗುತ್ತಾನೆ. ಇಂದಿನ ಮನುಶ್ಯ ಪ್ರಾಚೀನನೂ ಆಗುತ್ತಿರುತ್ತಾನೆ. ಅದರಲ್ಲಿಯೂ ಪ್ರಾಚೀನ ಕನ್ನಡ ಕೃತಿಗಳಂತೂ ಈ ವಿಚಾರದಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ. ಅವರ ಇಂತಹ ವಿಶಿಶ್ಟ ಓದುಗಳಿಂದ ಪಂಪ ನಮ್ಮಿಂದ ಬಹಳ ದೂರದಲ್ಲಿದ್ದವನು ಎಂದು ಅನ್ನಿಸುವುದೇ ಇಲ್ಲ. ಅವು ಓದುವ ಕ್ರಿಯೆಯಿಂದ ಮತ್ತಶ್ಟು ವರ್ತಮಾನಗೊಳ್ಳುತ್ತವೆ. ಅಂತಿಮವಾಗಿ ಹಾಗೆ ಸಮಕಾಲೀನಗೊಳ್ಳದಿದ್ದರೆ ಅಂತಹ ಕೃತಿಯ (ಓದಿನ) ಅಗತ್ಯವಾದರೂ ಏನು? ಎಂಬ ಪ್ರಶ್ನೆ ಅವರಲ್ಲಿರುತ್ತಿತ್ತು. ಕೃತಿಯನ್ನು ಒಂದು ಶುಶ್ಕ ಪಟ್ಯವಾಗಿ ಭಾವಿಸುವುದು ಅವರಿಗೆ ಸಾಧ್ಯವಿಲ್ಲ. ಎಲ್ಲ ಅಭಿಜಾತ ಕೃತಿಗಳನ್ನು ಅವರು ವಾಸ್ತವದ ನೆಲೆಯಲ್ಲಿಯೇ ಗ್ರಹಿಸಲು ಪ್ರಯತ್ನಿಸುತ್ತಾರೆ. ಅದು ವರ್ತಮಾನಕ್ಕೆ ಸಲ್ಲದೇ ಹೋದರೆ ಅಂತಹ ಕೃತಿಯ ಓದನ್ನು ಮುಂದುವರೆಸುವುದರಲ್ಲಿ ಅವರಿಗೆ ಆಸಕ್ತಿ ಮೂಡುವುದಿಲ್ಲ.
ಇತರರ ಸಾಹಿತ್ಯದ ಓದುಗಳಲ್ಲಿ ಕೃತಿಯನ್ನು ಸಮಾಜಕ್ಕೆ ಎದುರಾಗಿಸಿಯೋ, ಇನ್ನಾವುದೋ ತತ್ವವನ್ನು ಮುಖಾಮುಖಿಯಾಗಿಸಿಯೋ ಓದುಗೊಳ್ಳಲಾಗುತ್ತಿರುತ್ತದೆ. ಅಲ್ಲಿ ಸೂಕ್ಶ್ಮವಾದ ಆಲೋಚನೆ ಇರುವುದಿಲ್ಲ ಎಂಬುದು ಇಲ್ಲಿನ ಅರ್ಥವಲ್ಲ. ಅಲ್ಲಿ ಸೂಕ್ಷ್ಮವಾದ ಆಲೋಚನೆಗಳು ವ್ಯಾಖ್ಯಾನಗೊಳ್ಳುತ್ತಿರುತ್ತವೆ. ಆದರೆ ಹಾಗೆ ಪೂರ್ಣ ವಿಚಾರ ಪ್ರಧಾನವಾದ ಮತ್ತು ರಾಜಕೀಯವಾಗಿ (ಪೊಲಿಟಿಕಲಿ ಕರೆಕ್ಟ್) ಸರಿಯಾಗಿಯೇ ಇರಬೇಕು ಎಂಬ ಕ್ರಮಗಳ ಬಗೆಗೆ ಅವರಿಗೆ ಅಂತಹ ಒಲವು ಇಲ್ಲವೆಂದೇ ಹೇಳಬೇಕು. ಮತ್ತೆ ಸಿದ್ಧಾಂತಗಳ ಕಣ್ಣಿನಿಂದ ಕೃತಿ ಪ್ರವೇಶ ಮಾಡುವುದನ್ನು ಅವರು ವಿರೋಧಿಸುವುದಿಲ್ಲ. ತಾತ್ವಿಕವಾಗಿ ಅವರಿಗೆ ವಿವಿಧ ಚಿಂತನೆಯ ಕ್ರಮಗಳು ಅವರಿಗೆ ಒಪ್ಪಿಗೆಯಾಗುವುದಿಲ್ಲ ಎಂದಲ್ಲ. ಮಾಕ್ರ್ಸ್, ಮಾವೋ, ರೇಮಂಡ್ ವಿಲಿಯಮ್ಸ್ ತರಹದ ಎಡಪಂಥೀಯ ಚಿಂತಕರನ್ನು ಗಂಭೀರವಾಗಿಯೇ ಅಭ್ಯಾಸ ಮಾಡುತ್ತಿದ್ದವರು. ಅಲ್ಲದೆ ಒಂದು ಕೃತಿಯನ್ನು ವಿವಿಧ ಚಿಂತನೆಗಳ, ಸಿದ್ಧಾಂತಗಳ ಕಣ್ಣಿನಿಂದ ಕೃತಿಯನ್ನು ನೋಡಬೇಕಾದ ಅಗತ್ಯದ ಬಗೆಗೂ ಅವರು ಒಲವು ಉಳ್ಳವರಾಗಿದ್ದರು. ಆದರೆ ಸಾಹಿತ್ಯಕವಾಗಿ, ಕೃತಿಯನ್ನು ನೋಡುವಾಗ ಸಾಹಿತ್ಯದ ವಿದ್ಯಾರ್ಥಿಯಾಗಿಯೇ, ಆ ನೆಲೆಯಿಂದಲೇ ಪ್ರವೇಶಿಸುತ್ತಿದ್ದರು. ಶುದ್ಧ ರಾಜಕೀಯವಾಗಿ ಯಾವುದೇ ಕೃತಿಯನ್ನು ನೋಡುವುದು ಅವರಿಗೆ ಇಶ್ಟವಾಗದ ಸಂಗತಿಯಾಗಿತ್ತು. ಹಾಗೆಯೇ ಅನೇಕ ಸಮಕಾಲೀನ ಸಂಗತಿಗಳು ಕೂಡ ತಾತ್ವಿಕವಾಗಿ ನೋಡುವುದಕ್ಕಿಂತ ಹೆಚ್ಚು ವ್ಯಾವಹಾರಿಕ ನೆಲೆಗಳಿಂದ ನೋಡುವುದು ಅವರಿಗೆ ಮುಖ್ಯವಾಗಿರುತ್ತದೆ. ಪ್ರಾಗ್ಮ್ಯಾಟಿಕ್ಸ್ ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳೆರಡರಲ್ಲಿಯೂ ಅವರಿಗೆ ಮುಖ್ಯವಾದ ಸಂಗತಿಯಾಗಿದೆ.
ಆದರೆ ಈಗಾಗಲೇ ನಾವು ಗಮನಿಸಿರುವಂತೆ ಅವರ ಓದು ಮತ್ತು ಅದನ್ನು ಅನುಭವಿಸುವ ಕ್ರಮದಲ್ಲಿ ಲೋಕ ಒಂದರ ಮರುಸೃಶ್ಟಿ ಪ್ರಮುಖವಾಗಿರುತ್ತದೆ. ಅವರಲ್ಲಿನ ಓದಿನ ಕ್ರಿಯೆಯು ಕೃತಿಯ ಮೌಲ್ಯಮಾಪನ ಮಾಡುವ ಜವಾಬ್ದಾರಿಗೆ, ಚೌಕಟ್ಟಿಗೆ ಮಾತ್ರ ಬದ್ಧವಾಗಿರುವುದಿಲ್ಲ. ಅವರ ಇಂತಹ ಮರುಸೃಶ್ಟ್ಟಿಯ ಪ್ರಯತ್ನಕ್ಕೆ ಸಿದ್ಧಾಂತಗಳ ನೆರವು ಅಗತ್ಯವಿಲ್ಲದಿರಬಹುದು. ಅಲ್ಲಿ ಲೇಖಕನ ಲೋಕ ಓದುಗನ ಲೋಕವಾಗಿ, ಆ ಲೋಕ ಕೃತಿಕಾರನ ಲೋಕಕ್ಕಿಂತ ವಿಶೇಶವಾಗಿ ಚಲನಶೀಲವಾಗಿ ರೂಪಾಂತರಗೊಳ್ಳುತ್ತಿರುತ್ತದೆ. ಅಲ್ಲಿ ಕೃತಿಕಾರ ಏನನ್ನು ಹೇಳುತ್ತಿದ್ದಾನೆ ಎಂಬುದಕ್ಕಿಂತ ಓದುಗನ ಎದುರಿನಲ್ಲಿರುವ ಕೃತಿ ಓದುಗನಲ್ಲಿ ಯಾವ ರೂಪದ ಆಕಾರವನ್ನು ತಳೆಯುತ್ತದೆ ಎಂಬುದು ಮುಖ್ಯ. ಅಂತಹ ಮರುಸೃಶ್ಟಿಯ ಓದು, ಆಲೋಚನೆ ಮತ್ತು ಅಭಿವ್ಯಕ್ತಿಯ ಕ್ರಮ ಅವರದು. ಬಹುಶಹ ಅವರ ಇಂತಹ ಓದಿನ ವಿಶಿಶ್ಟ ಕ್ರಮವೇ ನಂತರದಲ್ಲಿ ಬರೆಹ ರೂಪ ಪಡೆಯುವುದಕ್ಕಿಂತ ಹೆಚ್ಚು ಮೌಖಿಕ ರೂಪದಲ್ಲಿ, ಅನುಭವದ ರೂಪದಲ್ಲಿ ಉಳಿದಿರಲಿಕ್ಕೂ ಕಾರಣವಿರಬಹುದು. ಯಾಕೆಂದರೆ ಅನುಭವಲೋಕದ ಬಹುಮುಖಿ ನೆಲೆಗಳು, ಅದರ ಸಂಕೀರ್ಣತೆಗಳು ಬರೆಹಕ್ಕೆ ದಕ್ಕದೇ ಹೋಗುವ ಸಾಧ್ಯತೆಗಳೂ ಇಲ್ಲದಿಲ್ಲ.
ಈ ಮಾತಿಗೆ ಪೂರಕವಾಗಿ ಕಾವ್ಯದ ಬಗೆಗಿನ ಅವರ ಕೆಲವು ವಿಚಾರಗಳನ್ನು ಇಲ್ಲಿ ಚರ್ಚಿಸಬಹುದು. ಒಮ್ಮೆ ಕಾವ್ಯದ ಬಗೆಗೆ ಮಾತನಾಡುತ್ತ “ಕಾವ್ಯಕ್ಕೆ ಅರ್ಥವಿಲ್ಲ. ಅದಕ್ಕೆ ಅರ್ಥವನ್ನು ಓದುಗ ಕಟ್ಟಬೇಕಿದೆ”ಎಂದರು. ಇಂತಹ ವಿಚಾರದ ಕಾರಣವಾಗಿಯೇ ಅವರಲ್ಲಿ ಓದಿನ ಮೂಲಕ ಕೃತಿ ಮತ್ತು ಓದುವ ಕ್ರಿಯೆಗಳೆರಡು ಕಟ್ಟಿಕೊಳ್ಳುವ, ಆ ಮೂಲಕ ಮರುಸೃಶ್ಟಿಯನ್ನು ಪಡೆಯುವ ಕ್ರಿಯೆಯಾಗಿರುತ್ತವೆ ಎಂದು ಹೇಳಿದ್ದು. ಬಹುಶಹ ನಾನು ಅದನ್ನು ಗ್ರಹಿಸಿರುವುದು ಸರಿಯಾಗಿದ್ದರೆ ಅವರ ಮಾತಿನ ಅರ್ಥವು ಹೀಗಿರಬಹುದು. ಕಾವ್ಯಕ್ಕೆ ಅರ್ಥ ಎಂಬುದಿಲ್ಲ ಎನ್ನುವಲ್ಲಿ ಅರ್ಥವು ಇಲ್ಲವೇ ಇಲ್ಲ ಎಂಬುದಕ್ಕಿಂತ ಮಿಗಿಲಾಗಿ ಕೃತಿಯ ರಾಚನಿಕ ವಿನ್ಯಾಸಗಳನ್ನು ಆಧರಿಸಿ ಅದಕ್ಕೆ ನಾವು/ಓದುಗರು ಅರ್ಥವನ್ನು ಕಟ್ಟಿಕೊಡಬೇಕು ಎಂಬುದು ಅವರ ವಿಚಾರವಿರಬಹುದು. ಇಲ್ಲಿ ಕೃತಿಯ ಓದಿನ/ಓದುಗರ ಜವಾಬ್ದಾರಿ ಹೆಚ್ಚಾಗುತ್ತದೆ. ಅಂತಹ ಜವಾಬ್ದಾರಿ ಕೃತಿಯ ಮೌಲ್ಯಮಾಪನವನ್ನು ಮೀರಿದ ನಿಜವಾದ ಸೃಜಶೀಲ ಕ್ರಿಯೆಯಾಗಿರುತ್ತದೆ. ಅಂದರೆ ಓದನ್ನೇ ಒಂದು ಸೃಜನಶೀಲ ಕ್ರಿಯೆಯಾಗಿಸುತ್ತದೆ.
ಹಾಗಾಗಿ ಕೃತಿಕಾರ ಏನನ್ನು ಸೃಶ್ಟಿಸಿದ್ದಾನೆ; ಹೇಳುತ್ತಿದ್ದಾನೆ ಎನ್ನುವುದಕ್ಕಿಂತ ಓದುಗ ತನ್ನಲ್ಲಿ ಅದನ್ನು ಹೇಗೆ ಕಟ್ಟಿಕೊಳ್ಳುತ್ತಾನೆ ಎಂಬುದು ಅವರಿಗೆ ಮುಖ್ಯವಾಗಿರುತ್ತದೆ. ಮತ್ತೆ ಅಂತಹ ಓದಿನಲ್ಲಿ ಒಂದು ಕೃತಿಯನ್ನು ತನ್ನಲ್ಲಿ ಕಟ್ಟಿಕೊಳ್ಳುವ ಪ್ರತಿಭಾತ್ಮಕ ಶಕ್ತಿ ಓದುಗನಿಗೆ ಮತ್ತು ಕಟ್ಟಿಸಿಕೊಳ್ಳುವ ಶಕ್ತಿ ಕೃತಿಗೆ ಇರಬೇಕಾದುದು ಪ್ರಧಾನವಾಗಿರುತ್ತದೆ. ಯಾವುದೇ ಕೃತಿ ಓದುಗನಿಗೆ ಒಂದು ದರ್ಶನವನ್ನು, ಅರಿವನ್ನು, ಅನುಭವವನ್ನು ನೀಡುವಂತಿರಬೇಕು. ಅವನ ಅನುಭವವನ್ನು ವಿಸ್ತರಿಸುವಂತಿರಬೇಕು. ಅದು ಎಂತಹ ಗಾಢವಾದ ಅನುಭವವನ್ನು ನೀಡುತ್ತದೆ ಎಂಬುದೇ ಕೃತಿಯನ್ನು ಮರುಓದಿಗೆ ಎತ್ತಿಕೊಳ್ಳಲು ಇರುವ ಮಾನದಂಡ. ಪ್ರಾಸಂಗಿಕ ಮತ್ತು ಸಾಮಾಜಿಕ ಕಾರಣಗಳಿಗಾಗಿ ಸಿದ್ಧಲಿಂಗಯ್ಯ ಮುಂತಾದವರ ಕಾವ್ಯವನ್ನು ಒಪ್ಪಿದರೂ ಆವರಿಗೆ ಆಪ್ತವಾದ ಕಾವ್ಯ ಮಾದರಿಗಳು ಬೇರೆಯವೇ ಇವೆ. ಅವರಿಗೆ ಒಪ್ಪಿತವಾಗದ ಕೃತಿಯನ್ನು ಧ್ವನಿ ಎತ್ತರಿಸಿ ನಿರಾಕರಣೆಗೆ ತೊಡಗುವ ಹಟಕ್ಕೆ ಬೀಳುವುದಿಲ್ಲ. ಅದರ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಅದರ ಬಗೆಗೆ ತೋರುವ ನಿರಾಸಕ್ತಿಯೇ ಅದಕ್ಕೆ ತೋರುವ ಪ್ರತಿಭಟನೆಯಾಗಿರುತ್ತದೆ. ಆದ್ದರಿಂದ ಕೃತಿ ಓದುಗನ ಭಾವನೆಗಳ ಜತೆಗೆ ಪಿಸುಗುಟ್ಟುತ್ತಿರಬೇಕು. ಅದು ಆ ದಿಕ್ಕಿನಲ್ಲಿ ಪ್ರಯತ್ನಿಸಬೇಕು ಅಶ್ಟೇ.
ಇಂತಹ ಸಂದರ್ಭದಲ್ಲಿ (ಕಾವ್ಯದ) ಕೃತಿಯ ರಾಚನಿಕ ಸಂಗತಿ ಪ್ರಧಾನವಾಗಿ ಅವರಿಗೆ ಮುಖ್ಯವಾಗುತ್ತದೆ. ಅಲ್ಲಿ ಬಳಕೆಯಾಗಿರುವ ಭಾಶಿಕ ವಿನ್ಯಾಸ, ರೂಪಕಗಳ ವಿಶಿಶ್ಟತೆ, ರಚನೆಯ ಹೊಸತನ ಮತ್ತು ಕೃತಿಯೊಳಗಿನ ತಾತ್ವಿಕತೆಗಳು ಮಹತ್ವದ ಸಂಗತಿಗಳಾಗಿರುತ್ತವೆ. ಪಂಪ, ಅಲ್ಲಮ, ಹರಿಹರ, ಜನಪದ ಕಾವ್ಯದ ಯಾವುದೇ ಕೃತಿಯಾದರೂ ಸರಿ. ಪ್ರತಿಮಾತ್ಮಕ ಭಾಶೆ ಬಗೆಗೆ ಅವರಲ್ಲಿ ವಿಶೇಶ ಒಲವು ಇರುತ್ತಿತ್ತು. ಆಧುನಿಕ ಕನ್ನಡ ಕಾವ್ಯದಲ್ಲಿ ಅಡಿಗರು, ಬೇಂದ್ರೆ, ಕುವೆಂಪು ಬೇರೆ ಬೇರೆ ಕಾರಣಗಳಿಂದ ಅವರಿಗೆ ಮುಖ್ಯರಾಗುತ್ತಾರೆ. ಇಂತಹ ಪ್ರಮುಖ ಲೇಖಕರ ಕೃತಿಗಳ ಅಥವಾ ಯಾವುದೇ ಕೃತಿಯ ಆಂತರಿಕ ನೆಲೆಗಳಿಂದಲೇ ಕೃತಿಯನ್ನು ಅರಿಯುವ ಕ್ರಮವನ್ನು ಅವರಲ್ಲಿ ಕಾಣಬಹುದು. ಕೃತಿಯೊಳಗಿನ ಚಲನಶೀಲ ಮೌಲ್ಯಗಳ ಬಗೆಗೆ ಅವರಿಗೆ ಹೆಚ್ಚು ಆಸಕ್ತಿ. ಕೃತಿಯ ಒಳಗಿನಿಂದಲೇ ಒಂದು ತಾತ್ವಿಕತೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಅದನ್ನು ಕೃತಿಯಿಂದ ನಿರೀಕ್ಷಿಸುತ್ತಾರೆ ಕೂಡ. ಹೊರಗಿನ ತತ್ವಗಳನ್ನು ಹೇರುವ ಮೂಲಕ ಕೃತಿಯನ್ನು ಅರಿಯುವ ಪ್ರಯತ್ನಕ್ಕಿಂತ ಇದು ಭಿನ್ನವಾದುದು. ಕೃತಿಯ ಮಹತ್ತಿನ ಪ್ರತಿಪಾದನೆಯಲ್ಲಿಯ ಈ ಪ್ರಯತ್ನ ಮುಖ್ಯವಾಗಿರುತ್ತದೆ. ಒಳಗೇ ರೂಪುಗೊಂಡ ತತ್ವ ಹೊರಗಿನ ತತ್ವಗಳಿಗೆ ತಾಳೆಗೊಳ್ಳುವಂತಿದ್ದರೆ ಅದನ್ನು ನಿರಾಕರಿಸುವುದಿಲ್ಲ. ಅದೇ ವೇಳೆ ತತ್ವಗಳ ಕಣ್ಣಿನಿಂದ ಕೃತಿಯನ್ನು ಅರಿಯಲು ತೊಡಗುವುದಿಲ್ಲ. ಓದುಗನ ಅನುಭವದ ನೆಲೆಯಿಂದ ಕೃತಿಯನ್ನು ಪ್ರವೇಶಿಸುತ್ತಾರೆ. ಅದು ಒಂದು ಅನುಭವ ಲೋಕವನ್ನು ಕಟ್ಟಿಕೊಡುವಂತಿದ್ದರೆ ಅದೇ ಕೃತಿಯ ಯಶಸ್ಸು ಎಂಬುದನ್ನು ಒಪ್ಪುತ್ತಾರೆ.
ಇಂತಹ ಅನುಭವವನ್ನು ಹೆಕ್ಕಿ ತೆಗೆಯುವಲ್ಲಿ, ಕವಿತೆಯನ್ನು ಅರಿಯುವ, ಪ್ರವೇಶಿಸುವ ಪ್ರಕ್ರಿಯೆಯಲ್ಲಿ ಕವಿತೆಯ ಯಾವುದೇ ಒಂದು ರೂಪಕದ, ಪದದ, ಸಾಲಿನ ಎಳೆಯನ್ನು ಹಿಡಿದು ಆ ಮೂಲಕ ಇಡೀ ಪದ್ಯವನ್ನು ಪ್ರವೇಶಿಸುವ ಪ್ರಯತ್ನ ಮಾಡುತ್ತಿದ್ದರು. ಅಂದರೆ ಕೃತಿಯ ಪ್ರವೇಶಕ್ಕೆ ಒಂದು ಸಿದ್ದ ಮಾದರಿ ಇರಲಿಲ್ಲ. ಪದ್ಯವನ್ನು ಅಥವಾ ಯಾವುದೇ ಕೃತಿಯನ್ನು ಅದರ ಯಾವುದೇ ದಾರಿಗಳ ಮೂಲಕ ಪ್ರವೇಶಿಸಬಹುದು ಎಂಬ ಧೋರಣೆ ಅವರಲ್ಲಿತ್ತು. ಕವಿತೆಯಲ್ಲಿ ರೂಪಕಗಳು ಒಂದು ನಿರ್ದಿಷ್ಟ ರೂಪದಲ್ಲಿ ಜೋಡಣೆಯಾಗದಿದ್ದರೂ ಅದು ವಿವಿಧ ಬಗೆಗಳಲ್ಲಿ ಹೆಣಿಗೆಗೊಂಡಿರುವ ರೂಪಕಗಳ ಮೂಲಕವೇ ಕವಿತೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂಬುದು ಅವರ ಗ್ರಹಿಕೆ. ಇಂತಹ ಓದನ್ನು ರೂಪಕದ ಭಾಶೆಯ ಮೂಲಕ ಹೇಳುವುದಾದರೆ ಚಕಮಕಿ ಕಲ್ಲಿನ ತಿಕ್ಕಾಟದಿಂದ ಹೊತ್ತಿಕೊಳ್ಳುವ ಕಿಡಿಗಳಂತೆ ಅವರ ಸಾಹಿತ್ಯ ಚಿಂತನೆಗಳು ಬೆಳಕು-ಮಿಂಚುಗಳಾಗಿ ಪ್ರಕಾಶಿಸುತ್ತವೆ. ಇವು ಆಯಾ ಸಂದರ್ಭದಲ್ಲಿ ಆಪ್ತವಾಗಿ ಹೊಸ ಒಳನೋಟಗಳನ್ನು ಸಾಹಿತ್ಯ ಲೋಕಕ್ಕೆ ನೀಡಬಲ್ಲ ಸಾಮಥ್ರ್ಯ ಉಳ್ಳಂತಹವು. ಹಾಗೆ ಕೃತಿಯಲ್ಲಿ ಬೆಳಕು-ಮಿಂಚುಗಳಂತೆ ವ್ಯಕ್ತವಾದ ಭಾವಗಳು, ಅರ್ಥ, ರಸಾನುಭೂತಿಗಳು ಅದೇ ಕೃತಿಯನ್ನು ಮತ್ತೊಮ್ಮೆ ಓದಿದಾಗಲೂ ಆಗಬೇಕೆಂಬ ನಿರೀಕ್ಷೆಗಳಿರುವುದಿಲ್ಲ. ಮರುಓದು ಹೊಸ ‘ಬೆಳಕುಮಿಂಚು’ಗಳ ನಿರೀಕ್ಷೆಗಳನ್ನೇ ಇಟ್ಟುಕೊಂಡಿರುತ್ತದೆ. ಮತ್ತೆ ಮತ್ತೆ ಕವಿತೆಗಳನ್ನು ಓದುತ್ತ ಅದರ ರಾಚನಿಕ ನೆಲೆಗಳ ಮೂಲಕವೇ ಕವಿತೆಯು ಹೊಸ ಅರ್ಥವನ್ನು ಹೊಮ್ಮಿಸುವಂತಹ ರೀತಿಯಲ್ಲಿ ಅದಕ್ಕೆ ಹೊಸ ಆಯಾಮವನ್ನು ನೀಡುವ ಪ್ರಯತ್ನವನ್ನು ಅವರಲ್ಲಿ ಕಾಣಬಹುದು.
ಬದುಕನ್ನು, ವಾಸ್ತವವನ್ನು ಹೇಗೆ ಒಬ್ಬ ಲೇಖಕ ತನ್ನ ಕೃತಿಯಲ್ಲಿ ಮರುಸೃಶ್ಟಿಸುತ್ತಾನೆ. ಆ ಬದುಕು ಎಶ್ಟು ಚಲನಶೀಲವಾಗಿರುತ್ತದೆ ಎಂಬುದು ಅವರಿಗೆ ಮುಖ್ಯವಾಗುತ್ತದೆ. ಅಂತಹ ಒಂದು ಅದ್ಭುತಲೋಕವನ್ನು ಒಳಗೊಳ್ಳದ ಕೃತಿ ಅವರಿಗೆ ದುರ್ಬಲವಾಗಿ ಕಾಣುತ್ತದೆ. ಮತ್ತೆ ಅಂತಹ ಲೋಕ ಫ್ಯಾಂಟಸಿಗಳಿಂದ ಕೂಡಿರದೆ ಅದು ವಾಸ್ತವ ಬದುಕಿನ ಸಂಕೀರ್ಣ ನೆಲೆಗಳನ್ನು ಕಟ್ಟುವ ರೀತಿ. ಆ ಮೂಲಕ ಬದುಕನ್ನು ಮುಖಾಮುಖಿ ಮಾಡುವ ಅಭಿಜಾತ ಪ್ರಕ್ರಿಯೆ ಅವರನ್ನು ಆಕರ್ಶಿಸುತ್ತದೆ. ಅಂದರೆ ಅಂತಹ ಲೋಕ ಅವರ ಓದಿನ ಲೋಕವಾಗಿರುತ್ತದೆ. ಹಾಗಾಗಿ ಯಾವುದೇ ಸಿದ್ದ ತತ್ವಗಳಿಂದ ಅವರ ಸಾಹಿತ್ಯ ಚಿಂತನೆಗಳಿಗೆ ಚೌಕಟ್ಟು ರೂಪಿಸಲು ಬರುವುದಿಲ್ಲ. ಹಾಗೆ ಮಾಡುವ ಕ್ರಮ ಸ್ವವಿರೋಧಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಕ್ರಮದಂತೆ ಕಾಣುತ್ತದೆ. ಆದರೆ ಅದು ಸ್ವವಿರೋಧದ ನೆಲೆಯಲ್ಲ. ಇತ್ತೀಚೆಗಿನ ಚಿಂತನೆಯಲ್ಲಿ ಬದಲಾವಣೆಯೊಂದು ಕಂಡಿತ್ತು. ಅದೆಂದರೆ, ಕೃತಿಯಲ್ಲಿನ ಲೋಪಗಳನ್ನು ಪ್ರಧಾನ ಮಾಡುವುದಕ್ಕಿಂತ ಅದರಲ್ಲಿ ನಮಗೆ ದಕ್ಕುವ ಸಂಗತಿಗಳನ್ನು ಸ್ವೀಕರಿಸುತ್ತ ಆಪ್ತವಾಗದ ಸಂಗತಿಗಳನ್ನು ನಗಣ್ಯಗೊಳಿಸುವ ಕ್ರಮ ಒಂದು ಸೂಚಿತವಾಗುತ್ತಿತ್ತು. ಅದರಲ್ಲಿಯೂ ದೃಶ್ಯಮಾಧ್ಯಮವಾಗಿ ನಾಟಕವನ್ನು, ಟಿ.ವಿ ಸಿನೆಮಾ ಇತ್ಯಾದಿಗಳ ಮುಖಾಮುಖಿ ಸಂದರ್ಭದಲ್ಲಿ ನಾಟಕವನ್ನು ಹೆಚ್ಚು ಮಾತೃಭಾವದಿಂದ ನೋಡುವ ಎಳೆಯೊಂದು ಅವರರಲ್ಲಿ ಮೂಡಿದಂತೆ ಕಾಣುತ್ತಿದೆ. ಒಟ್ಟು ಈ ಚರ್ಚೆಯಿಂದ ನಾವು ಅವರ ಸಾಹಿತ್ಯದ ಚಿಂತನೆಗಳನ್ನು ಕುರಿತು ಹೇಳಬಹುದಾದ ಕಡೆಯ ಮಾತೆಂದರೆ ಓದಿನ ಮೂಲಕ ಕೃತಿಯೊಂದನ್ನು ಮರುಸೃಶ್ಟಿಸುವ ಸೃಜನಶೀಲ ಪ್ರತಿಭೆಯುಳ್ಳವರು ಎನ್ನಬಹುದು.

 

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...