ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

Date: 20-08-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ಜಗದೀಶ ಕೊಪ್ಪ ಅವರು 'ಗಾನಲೋಕದ ಗಂಧರ್ವರು' ಸರಣಿಯಲ್ಲಿ ಕಿರಾಣಾ ಘರಾಣೆಯ ಮೂಲ ಪುರುಷ ಅಬ್ದುಲ್‌ ಕರೀಮ್‌ಖಾನ್‌ ಸಾಹೇಬರ ಬಗ್ಗೆ ಬರೆದಿದ್ದಾರೆ. ಕುಂದಗೋಳದ ಸವಾಯಿ ಗಂಧರ್ವರು ಕರೀಮ್‌ಖಾನ್‌ರ ಶಿಷ್ಯರಾಗಿದ್ದರು. ಭಾರತೀಯ ಸಂಗೀತದಲ್ಲಿ ಮೇರುಸಾಧನೆ ಮಾಡಿದ ಗಂಗೂಬಾಯಿ ಹಾನಗಲ್‌, ಪಂಡಿತ್‌ ಭೀಮಸೇನ ಜೋಷಿ ಈ ಸಂಗೀತ ಪರಂಪರೆಗೆ ಸೇರಿದವರು.

ಇಪ್ಪತ್ತನೆಯ ಶತಮಾನದ ಭಾರತದ ಆರಂಭಿಕ ಕಾಲಘಟ್ಟದಲ್ಲಿ ಜರುಗಿದ ಅನೇಕ ಘಟನಾವಳಿಗಳು ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಹಲವು ಬಗೆಯ ಸ್ಥಿತ್ಯಂತರಗಳಿಗೆ ಕಾರಣವಾದವು. ರೈಲ್ವೆ ಸಾರಿಗೆ ವ್ಯವಸ್ಥೆ ಬಂದ ನಂತರ ದ್ವೀಪಗಳಂತೆ ಇದ್ದ ದೇಶದ ಸಂಸ್ಥಾನಗಳು ಪರಸ್ಪರ ಸಂಪರ್ಕಕ್ಕೆ ಬಂದವು. ಜೊತೆಗೆ ಅಂಚೆ ಮತ್ತು ತಂತಿ ವ್ಯವಸ್ಥೆ ಹಾಗೂ ಶಿಕ್ಷಣ ಪರಿಣಾಮದಿಂದಾಗಿ ಜನತೆಯಲ್ಲಿ ವೈಚಾರಿಕತೆಯ ಪ್ರವೃತ್ತಿ ಬೆಳೆಯುವುದರ ಜೊತೆಗೆ ಸಾಹಿತ್ಯ ಮತ್ತು ಸಂಗೀತ ಕುರಿತಂತೆ ಅಭಿರುಚಿಗಳು ಮತ್ತು ಕೊಡು, ಕೊಳ್ಳುವಿಕೆಯ ಪ್ರವೃತ್ತಿಗಳು ಬೆಳೆಯ ತೊಡಗಿದವು. ಇದರ ಪರಿಣಾಮವೆಂಬಂತೆ ಕೇವಲ ಸಂಸ್ಥಾನಗಳು ಮತ್ತು ದೊರೆಗಳ ಕೃಪಾಕಟಾಕ್ಷದಲ್ಲಿ ಬದುಕಬೇಕಾಗಿದ್ದ ಸಂಗೀತ ಕಲಾವಿದರಿಗೆ ಹೊಸ ಹೊಸ ಅವಕಾಶಗಳು ದೊರೆಯತೊಡಗಿದವು. ಇದಕ್ಕೆ ಪೂರಕವಾಗಿ ಕೊಲ್ಕತ್ತ ನಗರದಲ್ಲಿ ಪಾರ್ಸಿರಂಗಭೂಮಿ ಹಾಗೂ ಮಹಾರಾಷ್ಟ್ರದ ಪುಣೆ ಮತ್ತು ಮುಂಬಯಿ ನಗರಗಳಲ್ಲಿ ಮರಾಠಿ ರಂಗಭೂಮಿಗಳು ನಾಟಕ ಪ್ರಿಯರನ್ನು ಹಿಂದೂಸ್ತಾನಿ ಸಂಗೀತ ರಸಿಕನ್ನಾಗಿ ಪರಿವರ್ತಿಸಿದವು. ಇಂತಹ ಅವಕಾಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಂಡವರಲ್ಲಿ ಕಿರಾನ ಘರಾಣೆಯ ಸಂಗೀತದ ಉಸ್ತಾದ್ ಅಬ್ದುಲ್ ಕರೀಂ ಖಾನ್ ಪ್ರಮುಖರು.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ತಮ್ಮ ಅದ್ಭುತವಾದ ಕಂಠಸಿರಿ ಹಾಗೂ ಮೋಡಿ ಮಾಡುವ ಗಾಯನದ ಮೂಲಕ ಜನಸಾಮಾನ್ಯರಲ್ಲಿ ಸಂಗೀತ ಅಭಿರುಚಿ ಸೃಷ್ಟಿ ಮಾಡಿದ ಕರೀಖಾನರು, ತಾವು ಬೆಳೆದು ಬಂದ ಕಿರಾನಾ ಘರಾಣೆಯ ಶೈಲಿಯ ಹಿಂದೂಸ್ತಾನಿ ಸಂಗೀತಕ್ಕೆ ಭದ್ರಬುನಾದಿ ಹಾಕಿದರು. ಜೊತೆಗೆ ತಮ್ಮ ಗಾಯನದ ವೃತ್ತಿಯ ಜೊತೆಗೆ ಯಾವುದೇ ಫಲಾಫೇಕ್ಷೆಯಿಲ್ಲದೆ ಶಿಷ್ಯರನ್ನು ಹುಟ್ಟು ಹಾಕಿದ ಕೀರ್ತಿ ಇವರದು. ಇವರ ಕಿರಾನ ಘರಾಣ ಶೈಲಿಯ ಸಂಗೀತದಲ್ಲಿ ನೇರ ಶಿಷ್ಯರಾಗಿ ಸವಾಯ್ ಗಂಧರ್ವರು, ಗಣಪತ್ ರಾವ್ ಗುರುವ, ರೋಷನಾರಾ ಬೇಗಂ, ಪುತ್ರ ಸುರೆಶ್‌ಬಾಬು, ವಿಶ್ವನಾಥ ಬುವಾ ಇದ್ದರೆ ತಮ್ಮ ಸಹೋದರ ಮತ್ತು ಶಿಷ್ಯರ ಮೂಲಕ ಪುತ್ರಿಯಾದ ಹೀರಾಬಾಯಿ ಬರೋಡ್‌ಕರ್, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಮುಂತಾದ ದಿಗ್ಗಜರನ್ನು ಪರೋಕ್ಷವಾಗಿ ಮತ್ತು ಪ್ರತ್ಯೇಕ್ಷವಾಗಿ ಹುಟ್ಟು ಹಾಕಿದ ಕೀರ್ತಿ ಉಸ್ತಾದ್ ಅಬ್ದುಲ್ ಕರೀಂ ಖಾನರದು.
ಉತ್ತರ ಭಾರತದ ಹರ್‍ಯಾಣದ ಬಳಿ ಇರುವ ಕುರುಕ್ಷೇತ್ರಕ್ಕೆ ಸನೀಹದ ಕಿರಾನಾ ಎಂಬ ಗ್ರಾಮದಲ್ಲಿ 1872ರಲ್ಲಿ ಜನಿಸಿದ ಅಬ್ದುಲ್ ಕರೀಂ ಖಾನ್, ಬಾಲ್ಯದಿಂದಲೇ ಸಂಗೀತದ ವಾತಾವರಣದಲ್ಲಿ ಬೆಳೆದವರು. ಕಿರಾನ ಗ್ರಾಮದ ಗುಲಾಂ ಆಲಿ ನತ್ತು ಗುಲಾಂ ಮೌಲಾ ಎಂಬ ಇಬ್ಬರು ಸಹೋದರು ಖ್ಯಾತ ಹಿಂದೂಸ್ತಾನಿ ಗಾಯಕರಾಗಿದ್ದರು. ಇವರಲ್ಲಿ ಗುಲಾಂ ಆಲಿಯವರ ಮೊಮ್ಮಗ ಕಾಲೇಖಾನ್ ( ಕರೀಂ ಖಾನ್ ರವರ ತಂದೆ) ಕೂಡ ಅದೇ ಪರಂಪರೆಯಲ್ಲಿ ಬಂದವರು. ಹಾಗಾಗಿ ಇಡೀ ಕುಟುಂಬದಲ್ಲಿ ಅವರ ತಂದೆ, ಚಿಕ್ಕಪ್ಪ ಹಾಗೂ ಸಹೋದರರೆಲ್ಲಾ ಪ್ರಸಿದ್ಧ ಸಂಗೀತಗಾರರಾಗಿ ಬದುಕು ಕಟ್ಟಿಕೊಂಡಿದ್ದರು. ಗಾಯನ, ತಬಲ ಮತ್ತು ಸಾರಂಗಿ ನುಡಿಸಾಣಿಕೆ ಹೀಗೆ ಮೂರು ಪ್ರಕಾರಗಳಲ್ಲಿ ಸಿದ್ಧಹಸ್ತರಾಗಿದ್ದ ಕರೀಂ ಖಾನ್ ಕುಟುಂಬದವರು ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಅನುಸರಿಸುತ್ತಿದ್ದರು. ಇದರಿಂದಾಗಿ ಈ ಕುಟುಂಬದ ಗಾಯನದ ಶೈಲಿಯು ಮುಂದಿನ ದಿನಗಳಲ್ಲಿ ತಮ್ಮ ಕಿರಾನ ಊರಿನಿಂದಾಗಿ " ಕಿರಾನಾ ಘರಾಣ" ಎಂಬ ಪ್ರತ್ಯೇಕ ಶಾಲೆ ಅಥವಾ ಗಾಯನ ಶೈಲಿ ಎಂದು ಪ್ರಚಲಿತಕ್ಕೆ ಬಂದಿತು.
ಬಾಲ್ಯದಲ್ಲಿ ತನ್ನ ತಂದೆಯವರಾದ ಕಾಲೇಖಾನ್ ಬಳಿ ಸಂಗೀತ ಅಭ್ಯಾಸ ಮಾಡಿದ ಕರೀಂಖಾನರು ನಂತರ ಚಿಕ್ಕಪ್ಪ ಅಬ್ದುಲ್ಲಾ ಖಾನರ ಬಳಿ ಗಾಯನ ಕುರಿತಂತೆ ಅಭ್ಯಾಸ ಮಾಡುವುದರ ಜೊತೆಗೆ ಸಾರಂಗಿ, ಸೀತಾರ್ ಮತ್ತು ತಬಲಾ ವಾದನದಲ್ಲಿ ಪರಿಣತಿ ಸಾಧಿಸಿದ್ದರು. ಆರಂಭದಲ್ಲಿ ಸಾರಂಗಿ ವಾದಕರಾಗಿ ಮುಂದುವರೆಯುವ ಹಂಬಲ ಕರೀಂಖಾನ್ ರವರಿಗೆ ಇತ್ತು. ಆ ಕಾಲದಲ್ಲಿ ಪಕ್ಕವಾದ್ಯ ಕಲಾವಿದರಿಗೆ ಯಾವುದೇ ಮಾನ್ಯತೆ ಇಲ್ಲದ ಕಾರಣ ಅವರ ಕುಟುಂಬವರು ಕರೀಖಾನರನ್ನು ಪ್ರೋತ್ಸಾಹಿಸಲಿಲ್ಲ. ಅವರಿಗೆ ಹಾಡುಗಾರಿಕೆಗೆ ಬೇಕಾದ ಕೋಮಲ ಕಂಠ ಇದ್ದುದರಿಂದ ತಮ್ಮ ಚಿಕ್ಕಪ್ಪನವರ ಸಲಹೆಯಂತೆ ಗಾಯನಕ್ಷೇತ್ರದಲ್ಲಿ ಮುಂದುವರೆದರು. ಕೇವಲ ತಮ್ಮ ಹನ್ನೊಂದನೇ ವಯಸ್ಸಿಗೆ ಅವರು ಪೂರ್ಣಪ್ರಮಾಣದ ಗಾಯಕನಾಗಿ ಹೊರಹೊಮ್ಮಿದ್ದರು. ಅವರ ಕುಟುಂಬದಲ್ಲಿ ಸಂಗೀತ ಅಭ್ಯಾಸ ಕುರಿತಂತೆ ಜಾರಿಯಲ್ಲಿದ್ದ ಹದಿನಾರು ಗಂಟೆಗಳ ಕಠಿಣ ಶಿಸ್ತು ಮತ್ತು ತಾಲೀಮು ಅವರಿಗೆ ನೆರವಾಗಿದ್ದವು. ಇವರ ಮತ್ತೊಬ್ಬ ಚಿಕ್ಕಪ್ಪ ಕಾಥೇಖಾನ್‌ರವರಿಂದಲೂ ಸಹ ಸಂಗೀತ ಶಿಕ್ಷಣ ಪಡೆದಿದ್ದರು. ಇದರ ಜೊತೆಗೆ ಕರೀಂಖಾನರು ಗ್ವಾಲಿಯರ್ ಘರಾಣದ ಖ್ಯಾತ ಗಾಯಕ ಉಸ್ತಾದ್ ರಹಮತ್ ಖಾನ್ ರಿಂದ ಪ್ರಭಾವಿತರಾಗಿದ್ದರು.
ಆರಂಭದ ದಿನಗಳಲ್ಲಿ ತನ್ನ ಸಹೋದರ ಅಬ್ದುಲ್‌ಹಕ್ ಜೊತೆಗೂಡಿ ಹಾಡುತ್ತಿದ್ದ ಕರೀಂಖಾನ್‌ರು ತಮ್ಮ ವಿಶಿಷ್ಟ ಹಾಡುಗಾರಿಕೆಯಿಂದ ಗಮನ ಸೆಳೆದರು. ಒಮ್ಮೆ ಬರೋಡ ಸಂಸ್ಥಾನದ ದೊರೆ ಈ ಸಹೋದರರನ್ನು ತನ್ನ ಅರಮನೆಗೆ ಆಹ್ವಾನಿಸಿದರು. ಈ ಸಹೋದರರ ಗಾಯನಕ್ಕೆ ಮನಸೋತ ಮಹಾರಾಜರು ಈ ಯುವಜೋಡಿಯನ್ನು ಆಸ್ಥಾನ ಕಲಾವಿದರಾಗಿ ನೇಮಕ ಮಾಡಿಕೊಂಡರು. ಈ ವೇಳೆಗಾಗಲೇ ತನ್ನ ಚಿಕ್ಕಪ್ಪ ಉಸ್ತಾದ್ ಅಬ್ದುಲ್ ವಹೀದ್‌ಖಾನ್ ಅವರ ಪುತ್ರಿ ಗಫೂರನ್ ಎಂಬಾಕೆಯನ್ನು ವಿವಾಹವಾಗಿದ್ದ ಅಬ್ದುಲ್ ಕರೀಂಖಾನರ ವೈಯಕ್ತಿಕ ಬದುಕು ಬರೋಡ ನಗರದಲ್ಲಿ ಮತ್ತೊಂದು ರೀತಿಯಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಬರೋಡ ಮಹಾರಾಜರ ಸಂಬಂಧಿಯಾಗಿದ್ದ ಸರ್ದಾರ್ ಮಾರುತಿರಾವ್ ಮಾನೆ ಎಂಬುವರ ಪುತ್ರಿ ತಾರಾಬಾಯಿ ಮಾನೆ ಎಂಬಾಕೆ ಕರೀಂಖಾನರ ಗಾಯನಕ್ಕೆ ಮನಸೋತು ಅವರನ್ನು ಪ್ರೀತಿಸತೊಡಗಿದಳು. ಆ ಕಾಲಘಟ್ಟದಲ್ಲಿ ಹಿಂದೂ ಮುಸ್ಲಿಂ ವಿವಾಹ ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಜೊತೆಗೆ ರಾಜಮನೆತನದ ಹೆಣ್ಣು ಮಗಳನ್ನು ಪ್ರೇಮಿಸುವುದು ಅಪರಾಧ ಎಂಬ ಅಲಿಖಿತ ಕಾನೂನು ಜಾರಿಯಲ್ಲಿದ್ದ ಕಾರಣ ಕರೀಂಖಾನ್ ಮತ್ತು ತಾರಾಬಾಯಿ ಇಬ್ಬರೂ ರಾತ್ರೋರಾತ್ರಿ ಬರೋಡ ನಗರ ಮತ್ತು ಸಂಸ್ಥಾನದಿಂದ ಪಲಾಯನ ಮಾಡಿ ಬ್ರಿಟಿಷ್ ಸರ್ಕಾರದ ಆಳ್ವಿಕೆಯಲ್ಲಿದ್ದ ಬಾಂಬೆ ನಗರಕ್ಕೆ ಬಂದು ದಾಂಪತ್ಯ ಜೀವನ ಆರಂಭಿಸಿದರು.
ಸುಮಾರು ಹದಿನೈದು ವರ್ಷಗಳ ಕಾಲ ದಾಂಪತ್ಯ ಜೀವನದಲ್ಲಿ ಅವರಿಗೆ ಐದು ಮಕ್ಕಳು ಜನಿಸಿದರು. ಜನಿಸಿದ ಮಕ್ಕಳಿಗೆ ತಾರಾಬಾಯಿ ತನ್ನ ಬರೋಡ ಮತ್ತು ಮನೆತನದ ಮಾನೆ ಹೆಸರನ್ನು ನಾಮಕರಣ ಮಾಡಿರುವುದು ವಿಶೇಷ. ಹೀರೆಬಾಯಿ ಬರೋಡ್‌ಕರ್, ಸರಸ್ವತಿಬಾಯಿ ಬರೋಡ್‌ಕರ್, ಸುರೇಶ್ ಬಾಬು ಮಾನೆ, ಕೃಷ್ಣರಾವ್ ಮಾನೆ, ಕಮಲಾಬಾಯಿ ಬರೋಡ್‌ಕರ್ ಎಂದು ಹೆಸರಿಟ್ಟರು. ಇವರಲ್ಲಿ ಹೀರಾಬಾಯಿ ಮತ್ತು ಸುರೇಶ್ ಬಾಬು ಖ್ಯಾತ ಕಿರಾನ ಘರಾಣ ಸಂಗೀತ ಕಲಾವಿದರಾಗಿ ಹೊರಹೊಮ್ಮಿದರು. ಕರೀಂ ಖಾನ್ ಮತ್ತು ತಾರಾಬಾಯಿ ಯವರ ದಾಂಪತ್ಯ ಜೀವನ 1922ರಲ್ಲಿ ಕಲಹದ ಮೂಲಕ ಅಂತ್ಯಗೊಡಿತು. ತಾರಾಬಾಯಿ ತನ್ನ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ದು, ಕರೀಂಖಾನರ ಸಹೋದರನ ಮೂಲಕ ಸಂಗೀತ ಶಿಕ್ಷಣ ಕೊಡಿಸಿದರು. ದಾಂಪತ್ಯ ಜೀವನದ ದುರಂತ ಅಬ್ದುಲ್ ಕರೀಂ ಖಾನರ ಮೇಲೆ ಅಗಾಧ ಪ್ರಭಾವವನ್ನು ಬೀರಿತು. 1915ರಲ್ಲಿ ಅವರು ಪುಣೆಯಲ್ಲಿ ಆರ್ಯ ಸಂಗೀತ ವಿದ್ಯಾಲಯವನ್ನು ಆರಂಭಿಸಿದ್ದರು. ಜೊತೆಗೆ ಬಾಂಬೆ ನಗರದಲಲ್ಲಿ ಶಾಖೆಯನ್ನು ಸಹ ತೆರೆದಿದ್ದರು. ಈ ಘಟನೆಯ ನಂತರ ಸಂಸ್ಥೆಗಳನ್ನು ಮುಚ್ಚಿಹಾಕಿ ಕೊಲ್ಲಾಪುರ ಸಂಸ್ಥಾನಕ್ಕೆ ಸೇರಿದ್ದ ಮೀರಜ್ ಪಟ್ಟಣಕ್ಕೆ ಬಂದು ನೆಲೆಸಿದರು. ಸಂಗೀತವನ್ನು ಧ್ಯಾನಿಸುವ ವ್ರತ ಕೈಗೊಂಡವರಂತೆ ಬದುಕತೊಡಗಿದರು.
ಪುನಃ ವಿವಾಹವಾಗುವ ಎಲ್ಲಾ ಅವಕಾಶಗಳನ್ನು ತಿರಸ್ಕರಿಸಿ, ಸಂಗೀತಕ್ಕೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಇದರ ಪರಿಣಾಮವೆಂಬಂತೆ ಅವರ ಸಂಗೀತವು ಮತ್ತೊಂದು ಮಜಲು ಮುಟ್ಟಿತು. ಅವರ ಇಂಪಾದ ಗಾಯನಕ್ಕೆ ಅನುಭಾವ ಸ್ಪರ್ಶ ದಕ್ಕಿತು. ನಿರಂತರ ಅಭ್ಯಾಸ ಮತ್ತು ಗಾಯನ ಮೂಲಕ ತಮ್ಮ ಅಂತರಂಗದ ನೋವುಗಳಿಗೆ ಮದ್ದು ಕಂಡುಕೊಂಡ ಅಬ್ದುಲ್ ಕರೀಂಖಾನರು ಹಿಂದೂಸ್ತಾನಿ ಸಂಗೀತದಲ್ಲಿ ಶಾಸ್ತ್ರೀಯವಾದ ರಾಗಗಳು ಮತ್ತು ಬಂದೀಷ್‌ಗಳಿಗೆ ಆದ್ಯತೆ ನೀಡುವುದರ ಬದಲಾಗಿ ಅರೆಶಾಸ್ತ್ರೀಯ ಪ್ರಕಾರಗಳಾದ ಖ್ಯಾಲ್ ( ಚೋಟಾ ಮತ್ತು ಬಡಾ ಖ್ಯಾಲ್) ಮತ್ತು ಠುಮ್ರಿ ಗಾಯನಕ್ಕೆ ಒತ್ತು ನೀಡಿದರು. ಅವುಗಳಿಗೆ ಭಾವುಕತೆಯ ಸ್ಪರ್ಶ ನೀಡಿ ಕೇಳುಗರಿಗೆ ಪುಳುಕವನ್ನುಂಟು ಮಾಡಿದರು. ಇಷ್ಟು ಮಾತ್ರವಲ್ಲದೆ, ಮರಾಠಿ ನಾಟ್ಯಗೀತೆಗಳು, ಮರಾಠಿ ಪದ ಮತ್ತು ತರಾನಗಳನ್ನು ತಮ್ಮ ಗಾಯನದ ಮೂಲಕ ಜನಸಾಮಾನ್ಯರನ್ನು ಮುಟ್ಟುವುದರ ಮೂಲಕ ಹೊಸ ಶ್ರೋತೃವರ್ಗವನ್ನು ಹುಟ್ಟುಹಾಕಿದರು.
ಮೀರಜ್‌ಗೆ ಬಂದ ನಂತರ ಅವರ ಗಾಯನದ ಪ್ರಸಿದ್ದಿ ಎಲ್ಲೆಡೆ ಹರಡಿತು. ವಿಶೇವಾಗಿ ದಕ್ಷಿಣ ಭಾರತದಲ್ಲಿ ಅವರ ಹೆಸರು ಕೇಳಿಬರತೊಡಗಿತು. ಮೈಸೂರು ಸಂಸ್ಥಾನದ ದೊರೆಗಳಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಮಂತ್ರಣದ ಫಲವಾಗಿ ಮೈಸೂರು ಅರಮನೆಯಲ್ಲಿ ತಮ್ಮ ಸಂಗೀತದ ರಸದೌತಣವನ್ನು ಉಣಬಡಿಸುವುದರ ಮೂಲಕ ಕರೀಂಖಾನರು ಮಹಾರಾಜರಿಂದ ಸಂಗೀತ ರತ್ನ ಎಂಬ ಬಿರುದನ್ನು ಪಡೆದು ಆಸ್ಥಾನ ಕಲಾವಿದರಾಗಿ ನೇಮಕಗೊಂಡರು. ಇದರ ಫಲವಾಗಿ ಅವರು ಮೀರಜ್‌ನಿಂದ ಮೈಸೂರಿಗೆ ಹೋಗುವಾಗ ಮತ್ತು ಬರುವಾಗ ಮಾರ್ಗ ಮಧ್ಯೆ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿ ಒಂದೆರೆಡು ದಿನಗಳ ಕಾಲ ವಾಸ್ತವ್ಯ ಹೂಡುತ್ತಿದ್ದರು. ಇಂತಹ ವೇಳೆಯಲ್ಲಿ ಸಂಗೀತಾಸಕ್ತರಿಗೆ ತಮ್ಮ ಗಾಯನದ ಗುಂಗು ಹಿಡಿಸುವುದರ ಮೂಲಕ ಅವಳಿ ನಗರಗಳಿಗೆ ಹಿಂದೂಸ್ತಾನಿ ಸಂಗೀತದ ಘಮಲನ್ನು ಅಂಟಿಸಿದರು.
ಉಸ್ತಾದ್ ಅಬ್ದುಲ್ ಕರೀಂ ಖಾನರ ಮತ್ತೊಂದು ಮಹತ್ತರ ಸಾಧನೆ ಎಂದರೆ, ಭಾರತೀಯ ಸಂಗೀತದಲ್ಲಿ ಉತ್ತರ-ದಕ್ಷಿಣ ಎಂದು ಕವಲಾಗಿದ್ದ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತಗಳಿಗೆ ಬೆಸುಗೆ ಹಾಕುವುದರ ಮೂಲಕ ಸಂಗೀತ ಲೋಕದ ಘನತೆ ಹೆಚ್ಚಿಸಿದ್ದು. ಅವರು ಮೈಸೂರು ಅರಮನೆಗೆ ಆಸ್ಥಾನ ಕಲಾವಿದರಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಮೈಸೂರಿನ ಖ್ಯಾತ ಕರ್ನಾಟಕ ಸಂಗೀತದ ಕಲಾವಿದರಾಗಿದ್ದ ವೀಣೆ ಶೇಷಣ್ಣ, ಟೈಗರ್ ವರದಾಚಾರ್ಯರು, ಮೈಸೂರು ವಾಸುದೇವಾಚಾರ್ಯರ ಜೊತೆ ನಿರಂತರ ಅನುಸಂಧಾನ ನಡೆಸುವುದರ ಮೂಲಕ ಕನಾಟಕ ಸಂಗೀತದ ರಾಗಲಕ್ಷಣಗಳನ್ನು ಅರಿತುಕೊಂಡರು. ಜೊತೆಗೆ ಮದ್ರಾಸ್ ನಗರದ ಖ್ಯಾತ ಸಂಗೀತ ಕಲಾವಿದೆ ವೀಣಾ ಧನಮ್ಮಾಳ್ ಮತ್ತು ಮುತ್ತಯ್ಯ ಭಾಗವತರ್ ಇಂತಹವರ ಮೂಲಕ ಕರ್ನಾಟಕ ಸಂಗೀತದ ರಾಗಗಳು ಮತ್ತು ಸಾಹಿತ್ಯ ಕೃತಿಗಳ ಭಾವವನ್ನು ಅರ್ಥ ಮಾಡಿಕೊಂಡರು. ಈ ರೀತಿಯ ಅನುಸಂಧಾನ ನಡೆಸಿದ ಪ್ರಥಮ ಹಿಂದೂಸ್ತಾನಿ ಸಂಗೀತದ ಕಲಾವಿದ ಎಂಬ ಕೀರ್ತಿಗೆ ಪಾತ್ರರಾದ ಕರೀಂಖಾನರು ಈ ಉದಾತ್ತ ಧ್ಯೇಯವನ್ನು ಮುಂದಿನ ದಿನಗಳಲ್ಲಿ ಬಡೇ ಗುಲಾಂ ಆಲಿಖಾನ್, ಪಂಡಿತ್ ‌ರವಿಶಂಕರ್, ಬಿಸ್ಮಿಲ್ಲಾಖಾನ್ ಮತ್ತು ಅಮ್ಜದ್ ಅಲಿಖಾನ್ ಮುಂತಾದವರಿಗೆ ಪ್ರೇರಣೆಯಾದರು. ಕರ್ನಾಟಕ ಸಂಗೀತದ ಖರಹರಪ್ರಿಯ, ಅಭೋಗಿ, ಸಾವೇರಿ ಮತ್ತು ಹಂಸಧ್ವನಿ ರಾಗಗಳ ಸ್ವರಗಳನ್ನು ಹಿಂದೂಸ್ತಾನಿ ಸಂಗೀತದಲ್ಲಿ ಸರ್ಗಂ ಎಂದು ಕರೆಯಲಾಗುವ ಸ್ವರಗಳಿಗೆ ಜೋಡಣೆ ಮಾಡಿ ಹಾಡುವುದರ ಮೂಲಕ ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಮೆರುಗನ್ನು ನೀಡಿದರು. ಜೊತೆಗೆ ಕರ್ನಾಟಕ ಸಂಗೀತದ ಭೈರವಿ ಮತ್ತು ತೋಡಿ ರಾಗಗಳನ್ನು ಹಾಡುತ್ತಿದ್ದರು. ತ್ಯಾಗರಾಜರ ಶ್ರೀ ರಾಮನ ಕುರಿತಾದ ಕೀರ್ತನೆಗಳ ಕುರಿತಂತೆ ಕರೀಂ ಖಾನರಿಗೆ ಅಪಾರವಾದ ವಿಶ್ವಾಸವಿತ್ತು.
ಈ ಕಾರಣದಿಂದ ಅಬ್ದುಲ್ ಕರೀಂಖಾನರು ಇಡೀ ದಕ್ಷಿಣ ಭಾರತದಲ್ಲಿ ಜನಪ್ರಿಯರಾಗಿದ್ದರು. ಅವರ ಸಂಗೀತ ಕಾರ್ಯಕ್ರಮಗಳಿಗೆ ಸಂಗೀತಪ್ರೇಮಿಗಳು ಮುಗಿ ಬೀಳುತ್ತಿದ್ದರು. ಮದ್ರಾಸ್ ನಗರಕ್ಕೆ ಹೋದ ಸಂದರ್ಭಗಳಲ್ಲಿ ಅವರನ್ನು ರೈಲ್ವೆ ನಿಲ್ದಾಣದಿಂದ ಗಾಯನ ಸಭಾ ಭವನಗಳಿಗೆ ಕುದುರೆ ಸಾರೋಟಿನಲ್ಲಿ ಭವ್ಯ ಮೆರವಣಿಯಲ್ಲಿ ಅಲ್ಲಿನ ಜನತೆ ಕರೆದೊಯ್ಯುತ್ತಿದ್ದರು. ಒಮ್ಮೆ ಅವರ ಗಾಯನವನ್ನು ಕೇಳಿ ಭಾವುಕರಾದ ಅತ್ಯಂತ ಹಿರಿಯ ಕಲಾವಿದೆ ಹಾಗೂ ಎಂದೂ ಸಾರ್ವಜನಿಕವಾಗಿ ಕಾರ್ಯಕ್ರಮ ನೀಡದೆ, ವೀಣೆ ನುಡಿಸುವಿಕೆಯನ್ನು ತಮ್ಮ ಜೀವದ ಉಸಿರಂತೆ ಕಾಪಾಡಿಕೊಂಡು ಬಂದಿದ್ದ, ವೀಣಾ ಧನಮ್ಮಾಳ್ ತಮ್ಮ ಹಿರಿತನ ಹಾಗೂ ವಯಸ್ಸು ಇವುಗಳನ್ನ ಮರೆತು ವೇದಿಕೆಗೆ ಹೋಗಿ ತಮ್ಮ ಕೈ ಚೀಲದಿಂದ ಹತ್ತು ರೂಪಾಯಿ ನೋಟು ತೆಗೆದು ಕರೀಂ ಖಾನರ ಪಾದದ ಬಳಿ ಇಟ್ಟು " ಅಯ್ಯಾ ದಯಮಾಡಿ ನನ್ನನ್ನು ಹರಸು. ನಿನ್ನ ಗಾಯನದಲ್ಲಿರುವ ದೈವತ್ವಕ್ಕೇರುವ ಮಾರ್ಗವನ್ನು ನನಗೂ ತೋರಿಸು" ಎಂದು ಹೇಳುತ್ತಾ ಕಾಲುಮುಟ್ಟಿ ನಮಸ್ಕರಿಸಿದ್ದರು.
ಅಬ್ದುಲ್ ಕರೀಂ ಖಾನರ ಗಾಯನದ ವಿಶೇಷವೆಂದರೆ, ಅವರ ಗಡಸುತನವಿಲ್ಲದ ಕೋಮಲವಾದ ಕಂಠ ಧೃತ್ (ವೇಗ)ಗತಿಯ ಸಂಗೀತಕ್ಕೆ ಮತ್ತು ಎತ್ತರದ ಸ್ಥಾಯಿಯ ಧ್ವನಿಯಲ್ಲಿ ಹಾಡುವುದಕ್ಕೆ ಹೇಳಿ ಮಾಡಿಸಿದಂತಿತ್ತು. ಅವರು ಮಂದ್ರ ಸ್ಥಾಯಿ ಅಥವಾ ವಿಳಂಬಿತ ಗತಿಯಲ್ಲಿ ಹಾಡುವುದು ಅಪರೂಪವಾಗಿತ್ತು. ಅವರ " ಝನಕ್ ಝನಕ್ ವಾ ಮೋರೆ ಬಜವಾ" ಮತ್ತು " ಮೋಂದರ್ ಬಾಜಾ" ಎನ್ನು ಖ್ಯಾಲ್ ಅನ್ನು " ಥಾ ದಿನ್ ದಿನ್ ಥಾ" ಎನ್ನುವ ಧೃತ್ ಗತಿಯಲ್ಲಿ ಕೇಳುವುದೇ ಚಂದ. ಆದರೆ, ಇದೇ ಗಾಯನವನ್ನು ಅವರದೇ ಕಿರಾನ ಘರಾನ ಸಂಪ್ರದಾಯದಲ್ಲಿ ಬೆಳೆದ ಪುತ್ರಿ ಹೀರಾಬಾಯಿ ಮತ್ತು ಪಂಡಿತ್ ಭೀಮಸೇನ ಜೋಷಿಯವರು ವಿಲಂಬಿತ ಗತಿಯಲ್ಲಿ ಹಾಡಿ ಜನಪ್ರಿಯಗೊಳಿಸುವುದರ ಮೂಲಕ ಕಿರಾನ ಘರಾಣಾ ಶೈಲಿಯ ಸಂಗೀತಕ್ಕೆ ಮೆರಗನ್ನು ತಂದುಕೊಟ್ಟರು. ಕರೀಂ ಖಾನರ ಧ್ವನಿಯನ್ನು ವೀಣೆಯ ತಂತಿಗಳನ್ನು ಸ್ಪರ್ಶಿಸಿದಾಗ ಉಂಟಾಗುವ ಕಂಪನ ಮತ್ತು ಹೊರ ಹೊಮ್ಮುವ ನಾದಕ್ಕೆ ಹೋಲಿಸಲಾಗಿತ್ತು.
ಮೀರಜ್ ಪಟ್ಟಣದಲ್ಲಿ ಸಂತನಂತೆ ಬದುಕುತ್ತಾ, ತನ್ನ ಶಿಷ್ಯರಿಗೆ ಉಚಿತ ಊಟ, ವಸ್ತ್ರ, ವಸತಿ ವ್ಯವಸ್ಥೆ ಕಲ್ಪಿಸಿದ್ದ ಕರೀಂ ಖಾನರು ತಮ್ಮ ಸಂಗೀತ ಕಚೇರಿಗಳಿಂದ ಬರುತ್ತಿದ್ದ ಆದಾಯವನ್ನು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಸ್ಥಳಿಯ ದರ್ಗಾವೊಂದರಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಮುಸ್ಲಿಂ ಸಂತನ ಉರುಸ್ ಕಾರ್ಯಕ್ರಮಕ್ಕೆ ವಿನಿಯೋಗಿಸುತ್ತಿದ್ದರು. 1937ರ ಅಕ್ಟೋಬರ್ ತಿಂಗಳಿನಲ್ಲಿ ಮದ್ರಾಸ್ ಮತ್ತು ಪಾಂಡಿಚೇರಿ ಪ್ರವಾಸ ಮುಗಿಸಿ, ವಾಪಸ್ ಆಗಲು ಸಿದ್ಧತೆ ನಡೆಸಿರುವಾಗ ಸಂಜೆ ಪ್ರಾರ್ಥನೆ ಸಲ್ಲಿಸುವಾಗ ಕುಸಿದು ಬಿದ್ದ ಕರೀಂ ಖಾನರು ಮತ್ತೇ ಮೇಲೇಳಲಿಲ್ಲ. ರಾತ್ರಿ ಹನ್ನೊಂದರ ಸುಮಾರಿಗೆ ದರ್ಬಾರಿ ಕಾನಡ ರಾಗವನ್ನು ಗುನುಗುತ್ತಾ ಕೊನೆಯುಸಿರೆಳದರು. ಅವರ ಪಾರ್ಥಿವ ಶರೀರವನ್ನು ಕಾರಿನ ಮೂಲಕ ಮೀರಜ್ ಪಟ್ಟನಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಅವರ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಸಂಗೀತೋತ್ಸವವನ್ನು ನಡೆಸಲಾಗುತ್ತಿದೆ.

*

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...