ಕಿರುತೆರೆಗೆ ರೆಕ್ಕೆ ಬೇಕಾಗಿದೆ!

Date: 29-10-2020

Location: ಬೆಂಗಳೂರು


ಸದಾ ಕ್ಯಾಮರಾ ಹಿಂದೆ ನಿಂತು ಕಾರ್ಯ ನಿರ್ವಹಿಸುವ ಸತ್ಯಬೋಧ ಜೋಶಿ ಅವರು ಸಿನಿಮಾ, ಕಿರುತೆರೆ ಛಾಯಾಗ್ರಹಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಾಹಿತ್ಯದ ಸಂವೇದನೆ- ಆಸಕ್ತಿ ಕಾಳಜಿ ಹೊಂದಿರುವ ಅವರು ಈ ಬಾರಿಯ ’ಬಯಲ ಪರದೆ’ ಅಂಕಣದಲ್ಲಿ ಸುದ್ದಿ, ಮನೋರಂಜನೆಗೆ ಸೀಮಿತವಾಗಿರುವ ಮಾಧ್ಯಮಗಳು, ಸಾಹಿತ್ಯ-ಸಾಂಸ್ಕೃತಿಕ ಲೋಕವನ್ನುತೆರೆದಿಡಬೇಕಾದ ಅಗತ್ಯ ಕುರಿತು ವಿವರಿಸಿದ್ದಾರೆ.

"ಏ ಹುಡುಗ ಯಾವಾಗ ಬಂದಿಯೋ ಬಾಯಿ ತಗದ್ರ ಬರೆ ಗಾಳಿ ಬರ್ತದ. ಈ ವಯಸ್ಸಿನಾಗ interview ಅಂದ್ರ..!!" ಅಂತ ಎದುರುಗಡೆ ನಿಂತ ಹಿರಿಯರು ಮುಗುಳ್ನಕ್ಕು ಕೇಳತಾ ಇದ್ರು, "ನೀವು ಸಿಗೋದೇ ದೊಡ್ಡದು, ಬೆಂಗಳೂರಿನಿಂದ ಕ್ಯಾಮರಾ ತಂದೀನಿ ಏನಾದ್ರು ಹೇಳಲಿಕ್ಕೇ ಬೇಕು" ಅಂತ ನಾನು ಶರಣಾಗಿ ನಿಂತಿದ್ದೆ. "ಆತು ಬಾ" ಅಂತ ಒಳಗೆ ಕರೆದು ಕುರ್ಚಿ ಮೇಲೆ ಕುಳಿತ ಪ್ರೊ.ಕೀರ್ತಿನಾಥ್ ಕುರ್ತಕೋಟಿಯವರು "ಆತು ಕೇಳು" ಅಂತ ನನಗೆ ಅಂದ್ರು, ಆಗಷ್ಟೇ ಚಿಗುರೊಡೆದ ಗರಿಕೆ ಆಕಾಶದ ಕೆಳಗೆ ನಿಂತಂತಹ ಬೆರಗು.

"ಬೇಂದ್ರೆಯವರ ಸಾಹಿತ್ಯ. ರೀ" ಅಂತ ಕೇಳಿದೆ.

ಸ್ವಲ್ಪ ಮೌನವಾಗಿದ್ದ ಅವರು "ಅವರ ಹೇಳಿಲ್ಲನೋ ಇದು ಬರೀ ಬೆಳಗಲ್ಲೋ ಅಣ್ಣಾ ಅಂತ, ಅದೇನೊ ಬ್ಯಾರೆ" ಅಂತ ಅಂದ್ರು.

ಹಾಗೆ ಕೇಳ್ತಾ ಕೇಳ್ತಾ...

"ಪುನರ್ಜನ್ಮಗಳ ಮೇಲೆ ನಂಬಿಕೀರಿ" ಅಂತ ತೊದಲುತ್ತಾನೆ ಕೇಳಿದೆ, ಕೂಡಲೇ ಕುರ್ತಕೋಟಿಯವರು ನಗತಾ" ಪುನರ್ಜನ್ಮ ಬ್ಯಾಡಾ ಅನ್ನೋರು ವೇದಾಂತಿಗಳು, ನಾನು ರಸಿಕ ಮತ್ತೆ ಮತ್ತೆ ಹುಟ್ಟಿಬರಬೇಕು ಅಂತೀನಿ.." ಅಂತ ಅಂದ್ರು..

ಇದಾಗಿ ಸುಮಾರು ಒಂದು ವರ್ಷಕ್ಕೆ ಕುರ್ತಕೋಟಿ ಅವರ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ತೀರಿಕೊಂಡ್ರು ಆದ್ರೆ ಹಾಗಂತ ಕೀರ್ತಿನಾಥರಿಗೆ ಹೇಳಬೇಕು ಅಂತ ಮನೆ ಮಂದಿ ಮಲಗಿದ್ದ ಅವರನ್ನ ಎಬ್ಬಿಸಲಿಕ್ಕೆ ಹೋದರೆ, ಅವರು ಮಲಗಿದ್ದಲ್ಲೇ ತೀರಿಕೊಂಡಿದ್ದರಂತೆ.

ಇದನ್ನು ಓದಿ: ಬೆವರಿಗಂಟಿದ ಜನರ ಕವಲು ಹಾದಿಯ ದೈವ

"ನಾನು ಮತ್ತ ಮತ್ತ ಹುಟ್ಟಿಬರಬೇಕು ಅಂತೀನಿ.. ನಾನು ರಸಿಕ.. ರಸಿಕ..' ಅನ್ನೋ ಆ ಮಾತು ಅವರು ತೀರಿಕೊಂಡ ಸುದ್ದಿ ಕೇಳಿದ ದಿನ ಪದೇ ಪದೆ ನನ್ನ ಭಿತ್ತಿಯಲ್ಲಿ ಓಡ್ತಾಯಿತ್ತು, ಆದ್ರೆ ನಾನು ಚಿತ್ರೀಕರಿಸಿದ ಆ ವಿಡಿಯೋ ಚಾನೆಲ್ಲುಗಳ ತಾಂತ್ರಿಕ ಚೌಕಟ್ಟು ಮತ್ತು ನನ್ನ ವೃತ್ತಿಯ ಎಳಸು ಸ್ಥಾನದ ಕಾರಣ ಕಿರುತೆರೆಯ ಮೇಲೆ ಬರಲೇ ಇಲ್ಲ.

ಆದರೆ "ಇದ್ಯಾವಾಗ ಬಂದಿಯೋ" ಅನ್ನುವ ಆ ಮಾತು ಮಾತ್ರ ಈ 20 ವರುಷಗಳ ನನ್ನ ದೃಶ್ಯ ಮಾಧ್ಯಮದ ಅನುಭವದ ನಂತರವೂ ಇನ್ನು ನನ್ನನ್ನ ಕಾಡುತ್ತಲೇ ಇದೆ. ಹೌದು ವಿಡಿಯೋ ತಂತ್ರಜ್ಞಾನ ನಮ್ಮ ಕೈಗೆಟುಕುವ ಹೊತ್ತಿಗೆ ಆ ಹೆಚ್ಚಿನ ಚಿಂತಕರು ವಯೋವೃದ್ಧರಾಗಿದ್ದರು ಅನ್ನುವುದು ಎಷ್ಟು ಸತ್ಯವೋ ಅದಕ್ಕಿಂತ, ಅವರನ್ನ ಇನ್ನೂ ತುಂಬು ಮನಸ್ಸಿನಿಂದ, ಭವಿಷ್ಯವನ್ನು, ಮುಂದಿನ ಪೀಳಿಗೆಯನ್ನು ನೆನಪಿಟ್ಟುಕೊಂಡು ನಾವು ಚಿತ್ರೀಕರಿಸಲೇ ಇಲ್ಲ ಅನ್ನೋದು ಹೆಚ್ಚು ಸತ್ಯವೆನಿಸುತ್ತದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು, ಪತ್ರಿಕೆಗಳು, ಆಕಾಶವಾಣಿ, ಅತಿ ಶಿಸ್ತಿನ ಚೌಕಟ್ಟಿನಲ್ಲದರೂ ದೂರದರ್ಶನ ಮತ್ತು ವಾರ್ತಾ ಇಲಾಖೆ ಮಾಡಿದ್ದು ತುಂಬಾ ಅಭಿನಂದನಾರ್ಹ. Well, ಇತ್ತೀಚೆಗೆ ಇದೆಲ್ಲ ಒಮ್ಮೆಲೆ ನೆನಪಾಗಲಿಕ್ಕೆ ಕಾರಣವಾದದ್ದು, ಅಂದು ಕರ್ವಾಲೊ ಅವರಿಗೆ ಸಿಗದಂತೆ ಹಾರಿ ಮಾಯವಾಗಿದ್ದ ಹಾರುವ ಓತಿ ಅಥವಾ ಡ್ರೆಕೊ ಲಿಜರ್ಡ್, wild Karnataka ಅನ್ನುವ ಸಾಕ್ಷ್ಯಚಿತ್ರದಲ್ಲಿ ಪ್ರತ್ಯಕ್ಷವಾದಾಗ, ಅಂತಾರಾಷ್ಟ್ರೀಯ ಖ್ಯಾತಿಯ naturalist ಸರ್ ಡೇವಿಡ್ ಅಟನ್ ಬರೋ ಅವರ ಧ್ವನಿ ನಿರೂಪಣೆಯಲ್ಲಿ ಮೂಡಿಬಂದ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ, ಕನ್ನಡನಾಡಿನ ವನ್ಯಜೀವಿ ವೈವಿಧ್ಯವನ್ನ ಕಟ್ಟಿಕೊಡುವ ರೀತಿ ಅನನ್ಯವಾದದ್ದು , ಅದರಲ್ಲೂ ಆ ಸಾಕ್ಷ್ಯಚಿತ್ರದ ಪ್ರೊಮೋ ಒಂದರಲ್ಲಿ ಅಟನ್ ಬರೋ ಅವರು "ನಮಸ್ತೆ ಕರ್ನಾಟಕ" ಅಂತ ಅಂದಾಗ ಆಗುವ ಆ ರೋಮಾಂಚನವನ್ನ ಕನ್ನಡಿಗರಿಗೆ ತಂದು ಕೊಟ್ಟ ಅಮೋಘವರ್ಷ ಮತ್ತವರ ತಂಡವನ್ನು ಎಷ್ಟು ಶ್ಲಾಘಿಸಿದರೂ ಕಡಿಮೆ. ಆದರೆ, ಆ ಪುಳಕವನ್ನ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ತೋಟದ ಹಿಂಬದಿಯಲ್ಲಿ ಹುಂಡುಕೋಳಿಗಳನ್ನ ಹುಡುಕುತ್ತ ಹೇಳುವ ಪರಿಸರದ ಕಥೆಯ ಮೂಲಕವೂ ನಮಗೆ ಸಿಕ್ಕಿದ್ದರೆ!!

 

 

ಹಾಗೆಯೇ ನಮ್ಮ ಚಿಂತಕರು, ಪ್ರಾಧ್ಯಾಪಕರು, ಬುಡಕಟ್ಟು, ಜನಪದ, ವಿಜ್ಞಾನದ ಕುರಿತ ರೋಚಕ ಕಥೆಗಳನ್ನು,ಸಂಶೋಧನೆಗಳನ್ನು, ಅವರೇ ರಸವತ್ತಾಗಿ ದೃಶ್ಯ ಮಾಧ್ಯಮದಲ್ಲಿ ನೀಡಲು ಸಾಧ್ಯವಾಗಿದ್ದರೆ! ಮದುವೆ, ದಿಬ್ಬಣದ ಸುತ್ತ ಓಡಾಡುವ ಡ್ರೋನನ್ನ ಶ್ರವಣ ಬೆಳಗೊಳದ ಗೊಮ್ಮಟನ ಸುತ್ತಣ ಚಿತ್ರೀಕರಣಕ್ಕೆ ಬಳಸಿ, ಪ್ರೊ.ಶೆಟ್ಟರ್ ಅವರು, ತಮ್ಮ "inviting death" ಮತ್ತು "Persuing death" ಗ್ರಂಥಗಳ ಸಾರವನ್ನ, ಅವರೇ ಎಳೆ ಎಳೆಯಾಗಿ ತಮ್ಮ ಜೀವಿತಾವಧಿಯಲ್ಲಿ ವಿವರಿಸಬಹುದಾಗಿತ್ತು ಅಂತ ಕನ್ನಡಿಗರಿಗೆ ಎಂದೂ ಅನ್ನಿಸಲೇ ಇಲ್ಲವೇ? ಅಥವಾ ಅವರು ಯಾರು ಅಂತ ಗೊತ್ತೇ ಇಲ್ಲವೇ! ಇದನ್ನೇ ನಾನು ಹೇಳಬೇಕು ಅನ್ನುತ್ತಿರೋದು, ಕನ್ನಡ ಸಾರಸ್ವತಲೋಕವನ್ನ ತಮ್ಮ ಸಂಶೋಧನೆಗಳಿಂದ ಶ್ರೀಮಂತಗೊಳಿಸಿದ ಎಂ.ಎಂ.ಕಲಬುರ್ಗಿ ಅವರು ಹೆಚ್ಚಿನ ಕನ್ನಡಿಗರಿಗೆ ಗೊತ್ತಾಗಿದ್ದು ಅವರು ತೀರಿಕೊಂಡ ದಿನವೇ! ಒಂದು ವೇಳೆ ಅವರೇ ಕೂಡಲ ಸಂಗಮದ ಐಕ್ಯ ಸ್ಥಳದ ಮುಂದೆ ,ಶೀಶೈಲದ ಕದಳಿವನದಲ್ಲಿ "ಸರ್ ಕ್ಯಾಮೆರಾ ಅನ್ಕೋಬ್ಯಾಡರಿ ನಿಮ್ಮ ವಿದ್ಯಾರ್ಥಿ ಅಂದುಕೊಳ್ಳರೀ" ಅಂತ ಹೇಳಿ, ಅವರ ನಿರೂಪಣೆಯಲ್ಲೇ ಅವರ ಸಂಶೋಧನೆಗಳ ಕುರಿತ ಸಾಕ್ಷ್ಯ ಚಿತ್ರ ನಿರ್ಮಿಸಿ, ಪ್ರಸಾರ ಮಾಡಿದ್ದರೆ, ಇಂದು ಕಲಬುರ್ಗಿಯವರು ಅಂದರೆ ಅಂದು ಬಿಳಿಬಟ್ಟೆಯ ಕೆಳಗೆ ತಣ್ಣಗೆ ಸ್ಟ್ರೇಚರಿನ ಮೇಲೆ ಮಲಗಿದ ದೇಹವಾಗಿ ಅಷ್ಟೇ ನೆನಪಿಸಿಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ.

ಇದನ್ನು ಓದಿ: ಇಸ್ಲಾಂನಲ್ಲಿ ಶಿವ ಪಾರ್ವತಿ!!

(ಅವರ ವಿದ್ವತ್ಪೂರ್ಣ ಸಂಶೋಧನೆಗಳು, ಗ್ರಂಥ, ಅಕ್ಷರ ರೂಪದಲ್ಲಿ ಜೀವಂತವಾಗಿರುವಷ್ಟೇ ಜವಾಬ್ದಾರಿಯಿಂದ, ಜತನದಿಂದ ದೃಶ್ಯ ಮಾಧ್ಯಮದಲ್ಲೂ ಉಳಿಸಿಕೊಳ್ಳಬಹುದಾಗಿತ್ತು. ಇನ್ನು ಆ ರೀತಿ ಎಲ್ಲವನ್ನೂ ನಿರೂಪಕರಂತೆ ಈ ಎಲ್ಲ ವಿದ್ವಾಂಸರು ವಿವರಿಸಲಿಕ್ಕೆ ಆಗಲ್ಲ ಅನ್ನಬಹುದಾದರರೂ ಅದೆಷ್ಟೊ ಪ್ರಖರ ಚಿಂತನೆಯ ಪ್ರಾಧ್ಯಾಪಕರು, ಶಿಕ್ಷಕರು ತಮ್ಮ ನಿತ್ಯ ಕಲಿಸುವಿಕೆಯ ಓಘದಲ್ಲಿ ಸುಪ್ರಸಿದ್ಧ ನಿರೂಪಕರಿಗಿಂತಲೂ ರಸವತ್ತಾಗಿ ಹೇಳಬಲ್ಲರು ಅಂತ ನಾನು ನನ್ನ 20 ವರುಷದ ಅನುಭವದಿಂದ ಕಂಡುಕೊಂಡಿದ್ದೇನೆ)

ಈ ನಿಟ್ಟಿನಲ್ಲಿ ದೂರದರ್ಶನದ ರಂಗವಿಹಂಗಮ, ಸಿರಿಗಂಧ, ಖಾಸಗಿವಾಹಿನಿಯಲ್ಲಿ ಶೈಲಜಾ ಸಂತೋಷ್ ಅವರು ನಡೆಸಿಕೊಡುತ್ತಿದ್ದ 'ಪರಿಚಯ'ದ ಕೆಲವು ಕಂತು, ಜಯಂತ ಕಾಯ್ಕಿಣಿಯವರ 'ನಮಸ್ಕಾರ' ಸರಣಿ, ಜಿ.ಎನ್.ಮೋಹನ್ರವರ ಹಲವು ಸಂದರ್ಶನಗಳು, ಮತ್ತು ಕೆಲವು ವಾಹಿನಿಯ ಕೆಲವೇ ಕಾರ್ಯಕ್ರಮಗಳನ್ನ ಬಿಟ್ಟರೆ, ಸಾಹಿತ್ಯ ಸಂಶೋಧನೆಯನ್ನೇ ಮೂಲ ದ್ರವ್ಯವನ್ನಾಗಿಸಿಕೊಂಡು ಉಳಿದುಕೊಳ್ಳಲು ಶ್ರಮಿಸುತ್ತಿರುವ ಕೆಲವು ಒಳ್ಳೆ ಜಾಲತಾಣಗಳು ಮತ್ತು‘ಬುಕ್ ಬ್ರಹ್ಮ’ ದಂತಹ ವೇದಿಕೆಗಳಲ್ಲಷ್ಟೇ.

ನಮ್ಮ ಕರುನಾಡನ್ನ ಶ್ರೀಮಂತಗೊಳಿಸಿದ ಹಿರಿಯರ ಉಲ್ಲೇಖ ಬರತ್ತೆ ವಿನಃ ಉಳಿದಂತೆ ಸಾಧಕರು ಮರಣೋತ್ತರವಾಗಿಯೇ ಜನಪ್ರಿಯರಾಗುತ್ತಿದ್ದಾರೆ! ಹಾಗಿದ್ದರೆ ಈ ಧೀಮಂತರನ್ನ ದೃಶ್ಯ ಮಾಧ್ಯಮಕ್ಕೆ ಅಳವಡಿಸಿ, ಅವರನ್ನ ಅದ್ಭುತವಾಗಿ ಕಟ್ಟಿಕೊಡಬಲ್ಲ ಸೃಜನಶೀಲರ ಕೊರತೆ ಕನ್ನಡದಲ್ಲಿ ಇದೆಯಾ? ಅಥವಾ ಅಂತಹ ತಂತ್ರಜ್ಞರ/ತಂತ್ರಜ್ಞಾನದ ಕೊರತೆ ಇದೆಯಾ? ಅಥವಾ ಮನಮುಟ್ಟುವಂತೆ, ಕಣ್ಣಿಗೆ ಕಟ್ಟಿಕೊಡುವಂತಹ, ವಾಹಿನಿಗಳ ಕೊರತೆ ಇದೆಯಾ?

(ಡಿಜಿಟಲ್ ಪ್ಲಾಟ್ಫಾರ್ಮ್ ಈಗ ವಿಶ್ವವ್ಯಾಪಿ ಆಗಿರಬಹುದು. ಆದರೆ ಒಂದು ವಾಹಿನಿಯ ವ್ಯಾಪ್ತಿ ಮತ್ತು ಹರಹು ತುಂಬಾ ದೊಡ್ಡದು.) ಡಿಸ್ಕವರಿ ಚಾನೆಲ್ನಲ್ಲಿ ಬರುವ man vs wildನ ಬೇರ್ ಗ್ರಿಲ್ಸ್ ಅದ್ವಿತೀಯ ಸಾಹಸಿಯೇ ಸರಿ ಆದರೆ ಅವನ ಜೊತೆ ರಜನೀಕಾಂತ್ ಬಂದಾಗವಷ್ಟೇ ಬಂಡೀಪುರವೆನ್ನುವ ಹುಲಿ ಸಂರಕ್ಷಿತ ಅರಣ್ಯವಿದೆ ಅಂತ ಗೊತ್ತಾಗುವ ನಮಗೆ, ಕಾಳ್ಗಿಚ್ಚು ಮತ್ತು ರಾತ್ರಿ ಸಂಚಾರ ತಡೆಯಿಂದ ಮಾತ್ರವೇ ಈ ಬಂಡೀಪುರ, ನಾಗರಹೊಳೆಯ ನೆನಪಾಗತ್ತೆ ವಿನಃ ಅದರ ವನ್ಯಜೀವಿ ಸಸ್ಯ ವೈವಿಧ್ಯಗಳಿಂದ ಅಲ್ಲ, ಹಾಗಾಗಿ ಅಲ್ಲಿ ಶ್ರಮಪಡುವ ವನಪಾಲಕನಿಂದ ಹಿಡಿದು ಸಂರಕ್ಷಣಾಧಿಕಾರಿಯವರೆಗೂ, ಅರಣ್ಯ ಇಲಾಖೆಯಿಂದ ಹಿಡಿದು ವನ್ಯಜೀವಿ ವಿಜ್ಞಾನಿಗಳ, ಪರಿಸರ ತಜ್ಞರುಗಳ ಕೊಡುಗೆ ನಮ್ಮ ಅರಿವಿಗೆ ಬರುವುದೇ ಇಲ್ಲ,

(ಆ ನಿಟ್ಟಿನಲ್ಲಿ ಇತ್ತೀಚೆಗೆ ಅಮೋಘವರ್ಷ ಅವರ 'ಕಾಳಿ', 'ಭೀಮಗಡ', ಪ್ರಶಾಂತ ನಾಯಕ ರವರ 'ಭದ್ರಾ-ಆನ್ ಸಂಗ್', ಲ್ಯಾನ್ಡ್ ಸ್ಕೇಪ್ ವಿಜರ್ಡ್ಸ್ನ 'ಅಘನಾಶಿನಿ' ಅನ್ನುವ ಸಾಕ್ಷಚಿತ್ರಗಳು ಮತ್ತು ವಿನೋದಕುಮಾರ್ ನಾಯ್ಕ್ರವರ ವನ್ಯಜೀವಿ ಸಂರಕ್ಷಣಾ ಅಭಿಯಾನ ಅನುಕರಣೀಯ)

ಹಾಗಾಗಿ ಕೃಪಾಕರ-ಸೇನಾನಿಯವರ 'the pack’ ಅನ್ನುವ ಕೆನ್ನಾಯಿಗಳ ಕುರಿತ ಸಾಕ್ಷ್ಯಚಿತ್ರ ಎಷ್ಟೋ ಮುಂಚೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನ ಪಡೆದರೂ ಕೂಡ ಹೆಚ್ಚಿನ ಕನ್ನಡಿಗರಿಗೆ ಗೊತ್ತಾಗುವುದೇ ಇಲ್ಲ..!

ಹಾಗಾಗಿ ಕೃಪಾಕರ-ಸೇನಾನಿ ಯಾರು? ಡಾ. ಯಲ್ಲಪ್ಪ ರೆಡ್ಡಿ ಅಂದರೆ ಯಾರು? ಉಲ್ಲಾಸ್ ಕಾರಂತ್, ಸಂಜಯ ಗುಬ್ಬಿ ಅಂದ್ರೆ ಯಾರು? ಅಂತ ಆ ವಲಯದ ತಜ್ಞರು, ಆಸಕ್ತರು, ಅಭಿಮಾನಿಗಳನ್ನ ಬಿಟ್ಟರೆ, ಅವರು ಎದುರಿಗೆ ಬಂದರೆ ನಾವು ಗುರುತು ಹಿಡಿಯುವಷ್ಟೂ ಅವರು ನಮಗೆ ಪರಿಚಿತರಾಗಿಲ್ಲ!

'ಎ ನೀವು ತೋರಿಸೋದೇಯಿಲ್ಲಾ ಟಿವಿಯಲ್ಲಿ, ಅದಕ್ಕೆ ಗೊತ್ತಿಲ್ಲ ಅಂತ ನೀವೆನ್ನಬಹುದು' ಅದರೆ ನೀವು ಅವರನ್ನ ನೋಡ ಬಯಸುತ್ತಿರೋದು ಈಗ ಕನ್ನಡದಲ್ಲಿರುವ ಎರಡೇ ವಿಭಾಗದಲ್ಲಿ ವಿಂಗಡಿಸಲ್ಪಟ್ಟ ದೃಶ್ಯ ಮಾಧ್ಯಮಗಳಲ್ಲಿ. ಅಂದ್ರೆ ಮನೋರಂಜನಾ ವಾಹಿನಿಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ವಿನಃ ಪರಿಸರ, ಜನಪದ, ಇತಿಹಾಸ, ಖಾದ್ಯ ಮತ್ತು ಚಾರಣ, ಕೃಷಿ ಅಂತ ವಿಶೇಷವಾಗಿ ಮತ್ತೆ ವಿಂಗಡಿಸಲ್ಪಟ್ಟ ವಾಹಿನಿಗಳಲ್ಲಿ ಅಲ್ಲ. ಅದು ಮೀರಿ ಪರಿಸರ, ಸಾಹಿತ್ಯ ಅಂತ ಅತಿ ಸರಳವಾಗಿ ಸುದ್ದಿ ಮಾಧ್ಯಮಗಳಲ್ಲಿ ತೋರಿಸಿದರೆ, ತಾವು ನೋಡಲ್ಲ ಅನ್ನೋದನ್ನ ವರುಷಗಳ ಅನುಭವ ಹೇಳತ್ತೆ ಮತ್ತು ತಾಂತ್ರಿಕ ಮಾನದಂಡಗಳು ನಿರೂಪಿಸುತ್ತವೆ. ಅದಕ್ಕೆ ನಾವು ಮಾಧ್ಯಮವನ್ನು ದೂರಬೇಕಾಗಿಲ್ಲ, ಅರ್ಥ ಮಾಡಿಕೊಳ್ಳಬೇಕಾಗಿದೆ ಅಷ್ಟೇ, ಈ ಸುದ್ದಿ ಮಾಧ್ಯಮಗಳು ಘಟನೆಯ ಬೆಳವಣಿಗೆಯ ಅನುಸಾರ ಬಿತ್ತರಿಸಬೇಕೆನ್ನುವ/ಬಿತ್ತರಿಸಲೇಬೇಕಾದ ವಿಷಯಗಳನ್ನು, ಕಾಳಜಿಯ ಅಭಿಯಾನಗಳನ್ನು ತೋರಿಸುವುದರ ಜೊತೆಗೆ, ನೀವು ಮನೋರಂಜನಾ ವಾಹಿನಿಗೆ ನೀಡುವ ಸಮಯಕ್ಕಿಂತ ಬಹಳ ಕಡಿಮೆ ಸಮಯವನ್ನ ಸುದ್ದಿ ಮಾಧ್ಯಮಗಳಿಗೆ ನೀಡುವುದರಿಂದ, ನೀವು ಬಯಸುವ ಎಲ್ಲವನ್ನು ಅಲ್ಲದಿದ್ದರೂ ಅವರು ಕಷ್ಟಪಟ್ಟು ಪೇರಿಸಿಟ್ಟ ವಸ್ತುಗಳಲ್ಲಿ ಹೆಚ್ಚು ಬಿಕರಿಯಾಗುವ ವಸ್ತುವನ್ನು ತೆರೆಯ ಮೇಲಿಡಲು ಬಯಸೋದು ಮತ್ತು ಆ ಕಡಿಮೆ ಸಮಯದಲ್ಲಿ ಹೆಚ್ಚು ಗಮನವನ್ನ ಸೆಳೆಯಬೇಕು ಅಂತ.

ತೋರಿಸಿದ್ದನ್ನೇ ಮತ್ತೆ ಮತ್ತೆ ತೋರಿಸುತ್ತ, ನಿಮ್ಮ ಸ್ಕ್ರೀನ್ ಟೈಮ್ಗಾಗಿ ಹಪಹಪಿಸೋದು, (ಅದು ಎಷ್ಟು exclusive ವೀಡಿಯೊ ಅನ್ನುವುದರ ಮೇಲೆಯೂ ಅವಲಂಬಿತ) ಹಾಗಾಗಿಯೇ ರೋಚಕ, ರೋಮಾಂಚನ, ಭಯ, ಬೆರಗು ಮೂಡಿಸುವ ವಸ್ತುವನ್ನು, ನಿರಂತರ ಸುದ್ದಿ ಪ್ರಸರಣದ ತಮ್ಮ ಕರ್ತವ್ಯಗಳ ಜೊತೆ ಮುಂದಿಡೋದು, (ಹಾಗಂತ ಒಬ್ಬ ವರದಿಗಾರ, ಛಾಯಾಗ್ರಾಹಕ ನೋಡಿದ ತುಂಡಾದ ದೇಹಗಳು, ಸುಟ್ಟ ಕರಕಲಾದ ಭೀಭತ್ಸ, ಭಯ ಹುಟ್ಟಿಸುವ ಕಳೆಬರಗಳನ್ನ ಅವರು ಬರಿಗಣ್ಣಿನಿಂದೆಲೇ ನೋಡಿದರು, ಇದ್ದಂತೆಯೇ ಚಿತ್ರೀಕರಿಸಿದ್ದರೂ ಎಂದೂ ಅದು ಇದ್ದಂತೆಯೇ ತೆರೆಯ ಮೇಲೆ ತೋರಿಸಲ್ಲ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು ಮತ್ತು ಬ್ಲರ್ ಮಾಡಿದ ಕಳೆಬರಗಳಿಗಿಂತ ಸುಂದರ ಮುಖದ ಧಾರಾವಾಹಿಯ ಸಂಚುಕೋರ ಷೋಡಶಿಯರು ಹೆಚ್ಚು ಪರಿಣಾಮ ಬೀರಬಲ್ಲರು ಅಂತ ಜನಪ್ರಿಯತೆಯನ್ನ ಅಳೆಯುವ ತಾಂತ್ರಿಕ ಮಾನದಂಡಗಳು ಹೇಳುತ್ತವೆ) ಕಾರಣ ಆ ಸಂಸ್ಥೆ ಕೂಡಾ ನಡೆಯಬೇಕಲ್ಲ ಯಾಕಂದ್ರೆ ಸುದ್ದಿ ಮಾಧ್ಯಮ ಅನ್ನೊದು ಕೂಡಾ ಒಂದು ವೃತ್ತಿ, ಮತ್ತು ನೂರಾರು ಜನರಿಗೆ ಉದ್ಯೋಗ ಕೊಡುವ ಸಂಸ್ಥೆ. ಹಾಗಾಗಿ ತಮ್ಮ ವೃತ್ತಿಧರ್ಮದ ಜೊತೆ ತಾವು ಜೀವಂತ ಉಳಿಯಲು ಪ್ರಯತ್ನ ಮಾಡಲೇ ಬೇಕಾಗತ್ತೆ; ನೀವು ಬಯಸುವ ರೀತಿಯಲ್ಲಿ,

ಇನ್ನು ಮನೋರಂಜನಾ ವಾಹಿನಿಯ ವ್ಯಾಪ್ತಿ ಹೆಚ್ಚಾಗಿ ಹಾಡು, ಸಿನೆಮಾ, ಹಾಸ್ಯಗಳಲ್ಲೇ ಸುತ್ತುವರೆದು, ಹಾಕಿದ ಬಂಡವಾಳವನ್ನ ನೆನಪಿನಲ್ಲಿಟ್ಟುಕೊಂಡು ಹೆಚ್ಚು ಜನಪ್ರಿಯ ಹಾದಿಯನ್ನೇ ಅವರು ಹುಡುಕ ಬೇಕಾಗುತ್ತೇ, ಹಾಗಾಗಿ ಧಾರಾವಾಹಿ, ಹಾಡು, ಚಲನಚಿತ್ರಗಳು ಎನ್ನುವ ಸಿದ್ಧ ಮಾದರಿಯಿಂದ ಅವುಗಳಿಗೆ ಹೊರಗೆ ಬರಲಿಕ್ಕೆ ಆಗುವುದೇ ಇಲ್ಲ. ( ವಿವಿಧ ಮನೋರಂಜನಾ ವಾಹಿನಿಗಳು ವೈವಿಧ್ಯಮಯ ಆಕರ್ಷಕ ಕಾರ್ಯಕ್ರಮಗಳನ್ನ, ಶೋಗಳನ್ನ ಮಾಡಿ ರಂಜನೆಯ ಮಟ್ಟವನ್ನ ಹೆಚ್ಚಿಸಿದ್ದಾವೆ. ಜೊತೆಗೆ ವ್ಯಾವಹಾರಿಕವಾಗಿ ಕನ್ನಡದ ಮಾರುಕಟ್ಟೆಯನ್ನೂ ಬೆಳೆಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಆ ಧೈರ್ಯವನ್ನ ಹೊಸ ವೈವಿಧ್ಯಗಳನ್ನ ಸೃಷ್ಟಿಸೋದರಲ್ಲೂ ತೋರಿಸಬೇಕಾಗಿದೆ. ಉದಾ.. foxlife, tlc, animal planet, Living food, Epic TV, ಇನ್ನೂ ಹಲವು ರೀತಿಯಲ್ಲಿ) ಹಾಗಾದರೆ ಬದುಕಿನ ಹತ್ತು ಹಲವು ಕವಲುಗಳನ್ನ ಎರಡೇ ವಿಭಾಗಗಳಲ್ಲಿ ವಿಂಗಡನೆಯಾದ, ಮನರಂಜನೆ ಮತ್ತು ಸುದ್ದಿ ಮಾಧ್ಯಮಗಳ ತುಣುಕು ಸಮಯಗಳಷ್ಟೇ ನೋಡಬೇಕೆ! ಹಾಗಿದ್ದರೆ ಈ ಚಾನೆಲ್ಲುಗಳ, ಮಾಧ್ಯಮಗಳ ಆಶಯವನ್ನ, ಆಯ್ಕೆಯನ್ನ ಯಾರೂ ಬದಲಿಸಲಿಕ್ಕೆ, ಬೆಳಸಲಿಕ್ಕೆ ಸಾಧ್ಯವೇ ಇಲ್ಲವೇ? ಖಂಡಿತವಾಗಿಯೂ ಸಾಧ್ಯವಿದೆ.

ಆದರೆ ಯಾರಿಂದ ಅಂದರೆ ಅಂತಹ ಇತರ ಸಧಭಿರುಚಿಯ ವಲಯಗಳಾದ ಜನಪದ, ಕ್ರೀಡೆ, ಕೃಷಿ, ಆಹಾರ, ಜೀವನಶೈಲಿ, ಆರ್ಥಿಕ ಜಗತ್ತು, ಪರಿಸರ, ವಿಜ್ಞಾನದಂತಹ ವಿವಿಧ ವಿಷಯಗಳ ವಾಹಿನಿಗಳನ್ನ ಬೆಳೆಸಲು, ಬಂಡವಾಳ ಹಾಕಬಲ್ಲ ಮಾಲೀಕರಿಂದ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ರೊಟ್ಟಿ ಪಲ್ಯಕ್ಕಿಂತ ಅಲ್ಲಿ ಮಂಡಿಸಿದ ವಿಷಯಗಳೇನು ಅನ್ನುವುದರಲ್ಲಿ ಆಸಕ್ತಿ ತೋರಬೇಕಾದ ವೀಕ್ಷಕರಿಂದ! ಬಾಕಿ ಅದ್ವಿತೀಯವಾದದ್ದನ್ನ ಕಟ್ಟಿಕೊಡಬಲ್ಲ ಸೃಜನಶೀಲ ವ್ಯಕ್ತಿ, ತಂಡಗಳ ದೊಡ್ಡ ಕಣಜವೇ ಕರ್ನಾಟಕದಲ್ಲಿದೆ. ಹಾಗಿದ್ದರೆ ಇದು ಸಾಧ್ಯವಾಗಬೇಕಿದ್ದು ಯಾವಾಗ? ಅಂತಾರಾಷ್ಟ್ರೀಯ ಸಂಸ್ಥೆಗಳಾದ ಡಿಸ್ಕವರಿ ಮತ್ತು ನ್ಯಾಷನಲ್ ಜೆಯೊಗ್ರಾಫಿಕ್, ಹಿಸ್ಟರಿ ಚಾನೆಲ್ಲುಗಳು ಕನ್ನಡಕ್ಕೆ ಬಂದು ಈ ಹಿಂದೆ ಮತಾಂತರಕ್ಕಾಗಿಯೇ ಆಗಲಿ ಮೊದಲ ಹಂತದಲ್ಲಿ ಜನಪದವನ್ನ ಅಭ್ಯಸಿಸಿದ, ಸಂಗ್ರಹಿಸಿದ ಬ್ರಿಟಿಷರಂತೆ, ಅವರೇ ಬಂದು "ಅಯೋಗ್ಯರಾ ನಿಮ್ಮದೇ ಸಂಸ್ಕೃತಿ ಇದು! ಅದನ್ನ ಅದೆಷ್ಟೊ ಪ್ರಾಧ್ಯಾಪಕರು, ಕಲಾವಿದರು ಕೂಡಿಟ್ಟರೂ ಕಟ್ಟಿಕೊಡಲಾಗಿಲ್ಲವೇ" ಅಂತ ಕನ್ನಡಿಗರ ಸಾಮರ್ಥ್ಯವನ್ನ ಜಾಲಾಡಿದ ಮೇಲೆಯೇ! ಯಾಕೆಂದರೆ ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಪಯೋಗಿಸುವ ಒಳ್ಳೆ ತಂತ್ರಜ್ಞಾನವನ್ನೇ ನಾವು ಕನ್ನಡದಲ್ಲಿ ಬಳಸುತ್ತಿದ್ದರೂ ಕೂಡ ನಮ್ಮ ಆಯ್ಕೆಯ ವ್ಯಾಪ್ತಿ ಚಿಕ್ಕದಾಗಿರುವದರಿಂದ ಎಲ್ಲ ಅದ್ವಿತೀಯ ತಂತ್ರಜ್ಞಾನದ ಬಳಕೆ ಮನರಂಜನೆ ಮತ್ತು ಸುದ್ದಿ ಎನ್ನುವ ಎರಡೇ ವಿಭಾಗಗಳಲ್ಲಿ ಬಳಕೆ ಆಗ್ತಾಯಿದೆ ವಿನಃ ಅದು ಆಗಬಹುದಾದ ಎಲ್ಲ ಸಾದ್ಯತೆಗಳಲ್ಲಿ ಅಲ್ಲವೇ ಅಲ್ಲ.., ಹಾಗಾದರೆ, ವೈವಿಧ್ಯಮಯ ವಿಷಯಗಳ ವಾಹಿನಿಗಳನ್ನ ಪ್ರಾರಂಭಿಸಲು ಕನ್ನಡನಾಡಿನಲ್ಲಿ ಏನಾದ್ರು ಕೊರತೆಯಿದೆಯಾ! ಅಂತ ನೋಡಿದರೆ ಅದಕ್ಕೆ ಕಾರಣ ತಂತ್ರಜ್ಞಾನವು ಅಲ್ಲ, ವಿಷಯವಸ್ತುಗಳ ಕೊರತೆಯೂ ಅಲ್ಲ ಅದಕ್ಕೆ ಬಂಡವಾಳ ಹಾಕುವ ಧೈರ್ಯದ ಕೊರತೆ ಇದೆ ಅಷ್ಟೇ! ಒಂದು ವೇಳೆ ಹಣ ಹಾಕಿ ಕಳೆದುಕೊಂಡರೆ ಅನ್ನುವ ಅಳುಕು! ಸಹಜವೇ, ಕಾರಣ ಆ ವೈವಿಧ್ಯ ಗಳಲ್ಲಿ ಹಣ ಹಾಕಿ ಗೆದ್ದವರನ್ನ ಇನ್ನೂ ಇಲ್ಲಿ ಯಾರು ನೋಡಿಲ್ಲ!!

ಈ ಮುಂಚೆ 20/25 ವರುಷಗಳ ಹಿಂದೆ ಮನೋರಂಜನಾ ವಾಹಿನಿಗೆ ಬಂಡವಾಳ ಹಾಕಿ ಒಂದೆರೆಡು ವಾಹಿನಿಗಳು ಅರ್ಧಕ್ಕೆ ನಿಂತರೂ ಕೂಡ , ಇಲ್ಲಿಯ ಎರಡು ವಾಹಿನಿಗಳು (ಪಕ್ಕದ ರಾಜ್ಯಗಳಲ್ಲಿ ಯಶಸ್ವಿಯಾದ ವಾಹಿನಿಗಳು) ಗಟ್ಟಿಯಾಗಿ ನಿಂತ ಮೇಲೆಯೇ ಈಗಿರುವ ಉಳಿದ ಜನರಲ್ ಎಂಟರ್ಟೈನ್ಮೆಂಟ್ ಚಾನೆಲ್ ಗಳು (GEC) ಬಂದಿದ್ದು, ಹಾಗೆಯೇ ಒಂದು ಮಾಧ್ಯಮ ಇಡೀ ವಾಹಿನಿಯನ್ನ ಸುದ್ದಿಗಾಗಿಯೇ ಮೀಸಲಾಗಿ ಇಡಬಹುದು ಅಂತ ಯಶಸ್ವಿಯಾಗಿ ತೋರಿಸಿಕೊಟ್ಟ ಮೇಲೆಯೇ ಹತ್ತಾರು ಸುದ್ದಿ ವಾಹಿನಿಗಳು ಬಂದಿದ್ದು ,ಇನ್ನೂ ಬರುತ್ತಲೇ ಇರೋದು, ಆದರೆ ಕಡು ಬಿಸಿಲಿನಲ್ಲಿ , ಭೋರ್ಗರೆವ ಮಳೆಯಲ್ಲಿ , ನಿತ್ಯ ಸುದ್ದಿ ಸಂಗ್ರಹದ ವೇಗದಲ್ಲಿ ಹಣ್ಣಾಗುವ ಈ ಛಾಯಾಗ್ರಾಹಕರನ್ನ , ಪತ್ರಕರ್ತರನ್ನ ಮತ್ತು ನೇರಪ್ರಸಾರದ ತಂತ್ರಜ್ಞರನ್ನ ನೋಡಿದಾಗ ,ಬರೀ ಧಾವಂತಕ್ಕಾಗಿಯೇ ಈ ಪ್ರತಿಭಾವಂತರ ಬಳಕೆ ಆಗುತ್ತಿದೆಯಾ ಅಂತ ಅನ್ನಿಸೋದು ಸಹಜ! ಆದರೆ ಅದು ಸುದ್ದಿವಾಹಿನಿಗೆನೋ ಸರಿ, ಕಾರಣ ಧಾವಂತದಲ್ಲೇ ಸುದ್ದಿ ಸಂಗ್ರಹಿಸಿ ಪ್ರಸಾರ ಮಾಡಬೇಕಾಗೋದು ಸುದ್ದಿ ಮಾಧ್ಯಮದ ಅನಿವಾರ್ಯತೆ ಮತ್ತು ಗುಣಧರ್ಮ, ಆದರೆ ಪ್ರತಿ ಕರ್ನಾಟಕದ ಛಾಯಾಗ್ರಾಹಕ,ಧ್ವನಿಗ್ರಾಹಕ, ಬರಹಗಾರ, t.v ಪತ್ರಕರ್ತ, ಸಂಕಲನಕಾರ( freelancers ರನ್ನ ಹೊರತುಪಡಿಸಿ ಚಾನೆಲ್ಲುಗಳು ಹೆಚ್ಚು ಉದ್ಯೋಗಾವಕಾಶವನ್ನ ಒಟ್ಟಿಗೆ ನೀಡಬಲ್ಲ ಉದ್ಯಮವಾಗಿ) ಬರೀ ಸುದ್ದಿ ವಾಹಿನಿಗಷ್ಟೇ ಸೀಮಿತವಾಗಬೇಕೆ ? ಈಗಿನ ಪರಿಸ್ಥಿತಿಯಲ್ಲಂತೂ ಹಾಗೆಯೇ ಇದೆ. ( ಆದರೆ ಹಣಕಾಸು ನಿರ್ವಹಣೆ , ಆಡಿಯೋ ಬುಕ್, ತಂತ್ರಜ್ಞಾನ ಕುರಿತ ಒಂದೆರೆಡು ಜಾಲತಾಣಗಳು ಕನ್ನಡದಲ್ಲಿ ಹೊಸಭರವಸೆವನ್ನು ಮೂಡಿಸಿ ಯಶಸ್ವಿಯಾಗಿ ಬೆಳೆಯುತ್ತಿದ್ದಾವೆ.. ಅದರಲ್ಲೂ ಒಂದು ಹಣಕಾಸು ನಿರ್ವಹಣಾ ಜಾಲತಾಣ ನೂರಾರು ಜನರಿಗೆ ಆಶ್ರಯವನ್ನು ನೀಡಿ ಅನುಕರಣೀಯವಾಗಿದೆ)

ಹಾಗಾಗಿಯೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವು ವೈವಿಧ್ಯಗಳ ಕಾರ್ಯಕ್ರಮಗಳನ್ನು ನಾವು ನಮ್ಮ ಭಾಷೆಯಲ್ಲೇ ನಿರ್ಮಿಸಿ, ನೋಡಲಾಗುತ್ತಿಲ್ಲ ,ಉದಾಹರಣೆಗೆ ಇತ್ತೀಚೆಗಷ್ಟೇ ನಾಗರಹೊಳೆಯ ಕಪ್ಪುಚಿರತೆಯ ಫೋಟೋಗ್ರಫಿ ಮೂಲಕ ಜಗತ್ತಿನಾದ್ಯಂತ ಚರ್ಚಿತರಾದ ಶಾಜ್ ಜಂಗ್ ಅವರ ವಿಷಯವನ್ನೇ ತೆಗೆದುಕೊಂಡರೆ (ಅವರ ಕೌಶಲ್ಯಕ್ಕೆ ತಲೆಬಾಗಿ, ಕ್ಷಮೆ ಕೋರಿ) ಅವರಿಗಿಂತ ಅದೆಷ್ಟೊ ಬಾರಿ ನಾಗರಹೊಳೆಯ ಒಬ್ಬ ವನಪಾಲಕ ಆ ಕಪ್ಪು ಚಿರತೆಯನ್ನು ಎದುರುಗೊಂಡಿದ್ದರೂ ಶಾಜ್ ರಂತೆ ಕ್ಯಾಮೆರಾ ಕೊಂಡುಕೊಳ್ಳಲಿಕ್ಕೆ ಆಗದ ಕಾರಣ ಅವರು ಜಗತ್ತಿನ ಬೆಳಕಿಗೆ ಬರುವುದೇ ಇಲ್ಲ ( ಅದು ವಾಹಿನಿಯ ಸುರಕ್ಷತೆಯ ಚೌಕಟ್ಟಿನಲ್ಲಿ ಕೆಲಸ ಮಾಡುವ ನನಗೂ, ಒಳ್ಳೆ ಕ್ಯಾಮೆರಾ, ಲೆನ್ಸ್ ಗಳನ್ನ ಖರೀದಿಸಬಲ್ಲ ತಜ್ಞರಿಗೂ,ಫೋಟೋಗ್ರಫಿಯನ್ನ ಪೃವೃತ್ತಿ ಯನ್ನಾಗಿ ಮಾಡಿಕೊಂಡ ಎಲ್ಲ ಆಸಕ್ತರು,ಸಿರಿವಂತರಿಗೂ ಅನ್ವಯ, ಆ ಮೂಲಕ ನಮ್ಮೆಲ್ಲರ ಸೇವೆಯ ಅಗತ್ಯವಿದ್ದರೂ ಕೂಡಾ ನಮ್ಮಿಂದ ಸಾಧ್ಯವಾಗುತ್ತಿರೋದು ನಮ್ಮ ಜ್ಞಾನದಿಂದ ಅಷ್ಟೇ ಅಲ್ಲ , ನಮಗಿರುವ ಅನುಕೂಲತೆಯಿಂದ ಅನ್ನುವುದು ಅಷ್ಟೇ ಮುಖ್ಯ )

ಅದಷ್ಟೇ ಅಲ್ಲ, ಆ ಛಾಯಾಗ್ರಹಣ ಪ್ರಕ್ರಿಯೆಗೆ ಲಕ್ಷಾಂತರ ರೂಪಾಯಿಯ ಫೋಟೋಗ್ರಫಿ ಉಪಕರಣಗಳು ಮತ್ತು ವಾಸ್ತವ್ಯಕ್ಕೆ ಬೇಕಾದ ಅನುಕೂಲತೆಯ ಜೊತೆಗೆ,ಎಷ್ಟೊ ಸುರಕ್ಷತೆಯ ಮಧ್ಯದಲ್ಲಿ ಇಂತಹ ಫೋಟೋಗ್ರಫಿ ಸಾಧ್ಯವಾಗಬಹುದಾದರೆ, ದಿನ ತನ್ನ ಜೀವವನ್ನೇ ಪಣಕ್ಕಿಟ್ಟು ಕಾಲುನಡಿಗೆಯಲ್ಲೆ ಕಾಡನ್ನು ಸುತ್ತುವ ಅರಣ್ಯ ಸಿಬ್ಬಂದಿಗೆ ಅಂತಹ ನೂರಾರು ವನ್ಯಜೀವಿ ಗಳ ಅದ್ವಿತೀಯ ದೃಶ್ಯಗಳನ್ನ ನೋಡಲಿಕ್ಕೆ ಸಾಧ್ಯವಿಲ್ಲವೇ? ಆದರೆ ಆತ ತನ್ನ ಶ್ರಮಕ್ಕೆ ತಕ್ಕದಾದ ತಿಂಗಳ ಪಗಾರಕ್ಕೇ ಪರದಾಡುತ್ತಿರುವಾಗ ಆ ಪ್ರಸಿದ್ದಿಯ ಹಿಂದೆ ಹೇಗೆ ತಾನೇ ಬೀಳಲಿಕ್ಕೆ ಸಾಧ್ಯ ಹೇಳಿ!! ಆದರೆ ಅಂತಹ ಕಾಡಿನ ಚಿಕ್ಕಪುಟ್ಟ ಚಲನವಲನವನ್ನೂ ಅರಿಯಬಲ್ಲ ವ್ಯಕ್ತಿಗೇ ತಾನು ಕಂಡದ್ದನ್ನ ಚಿತ್ರೀಕರಿಸಲಿಕ್ಕೆ ಸಾಧ್ಯವಾದರೆ ಅಥವಾ ಚಿತ್ರೀಕರಿಸಿದ್ದನ್ನ ಪ್ರಸಾರ ಮಾಡಲಿಕ್ಕೆ ಸಾಧ್ಯವಾದರೆ ಹೇಗಿರತ್ತೆ!! ಹೌದು, ಆ ಅರಣ್ಯ ಸಿಬ್ಬಂದಿ ತನ್ನ ಕೆಲಸದ ನಡುವೆ ಜವಾಬ್ದಾರಿ ಮರೆತು ಅದನ್ನ ಮಾಡಲಿಕ್ಕೆ ಆಗದಿದ್ದರೂ ಆ ಅರಣ್ಯದ ಮಿಡಿತವನ್ನು ಅರಿತ ಸೋಲಿಗ,ಕಾಡು ಕುರುಬನೇ ಆ ದೃಶ್ಯಗಳನ್ನ ಸೆರೆ ಹಿಡಿಯಲು ಸಾಧ್ಯವಾಗುವುದಾದರೆ! , ಅವನೇ ಆ ಕುರಿತು ನಿರೂಪಿಸಲಿಕ್ಕೆ ಸಾಧ್ಯವಾದರೆ! , ಆ ವೃತ್ತಿಗೆ ಈ ಹೊತ್ತಿಗೆ ನಮ್ಮ ನಾಡಿನಲ್ಲಿ ಯಾವ ವೇದಿಕೆ ಸಿದ್ಧವಾಗಿದೆ? ಯಾವ ವಾಹಿನಿ ನಮ್ಮ ಬಳಿಯಲ್ಲಿದೆ? ಅಲ್ಲದೆ, ಆ ರೀತಿಯ ವೇದಿಕೆ ಸಿದ್ಧವಾದ ಮೇಲೂ ಹಲವು ವರುಷಗಳ ನಿರಂತರ ರೂಢಿಯಿಂದ ಮಾತ್ರ ಆ ಕೌಶಲ್ಯ ಸಾಧ್ಯವಾಗುವುದಾದರೆ, ಈ ಹೊತ್ತಿಗೂ ಕೂಡ ನಮ್ಮ ಬಳಿಯಲ್ಲಿ ಆ ಕುರಿತ ವೇದಿಕೆಯ ಪುಟ್ಟ ಕುರುಹು ಕೂಡ ಇಲ್ಲ!.

ಅಂತಾರಾಷ್ಟ್ರೀಯ ವಾಹಿನಿಗಳನ್ನ ನೋಡಿ ರೆಡ್ ಇಂಡಿಯನ್ಸ್, ಆಸ್ಟ್ರೇಲಿಯನ್ನ ಅಬೋರಿಗಿನಲ್ಸ್ ಬಗ್ಗೆ, ಮಾತನಾಡುವ ನಾವು ನಮ್ಮ ನಾಡಿನ ಸಿದ್ಧಿ, ಕಣಬಿ, ಹಾಲಕ್ಕಿ, ಮುಕ್ರಿ, ಜೇನುಕುರುಬರು, ಸೋಲಿಗರ ಬಗ್ಗೆಯೇ ಹೆಚ್ಚು ತಿಳಿದುಕೊಂಡಿಲ್ಲ! ಅಥವಾ ಅವರ ಕುರಿತ ವಿಷಯಗಳನ್ನ ನಮ್ಮ ಚಾನೆಲ್ಲುಗಳಲ್ಲಿ ನೋಡಲಿಕ್ಕೆ ಆಗುವುದೇ ಇಲ್ಲ,

ಕೆಲವು ವಾರ್ತಾ ಇಲಾಖೆಯ ಸಾಕ್ಷ್ಯಚಿತ್ರಗಳು, ಖಾಸಗಿ ವಾಹಿನಿಯ 'ಲೋಕಯಾತ್ರೆ' ಅನ್ನುವ ಕಾರ್ಯಕ್ರಮವನ್ನ ಹೊರತುಪಡಿಸಿದರೆ ನಮ್ಮ ಪ್ರಾಧ್ಯಾಪಕ ವರ್ಗ ಅಭ್ಯಸಿಸಿದ ಬಿಡಿಗಾಸಿನಷ್ಟೂ ನಾವು ಜನರ ಮುಂದೆ ತೋರಿಸಿಲ್ಲ ಅಥವಾ ತಂದಿಲ್ಲ, ಉದಾಹರಣೆಗೆ ಪ್ರೊ.ಹಿ.ಚಿ. ಬೋರಲಿಂಗಯ್ಯನವರ " ಗಿರಿಜನರ ನಾಡಿಗೆ ಪಯಣ" . ರಹಮತ್ ತರೀಕೆರೆ ಅವರ "ನಾಥಪಂಥ", ಎಂ.ಬಿ. ನೇಗಿನಹಾಳರ 'ಖಂಡೋಬ’, ಶ್ರೀರಾಮ ಇಟ್ಟಣ್ಣವರ್ ಅವರ 'ಕೃಷ್ಣ ಪಾರಿಜಾತ', ಅಮೃತ ಸೋಮೇಶ್ವರ, ಬಿ.ವಿ. ವಿವೇಕ ರೈ ಅವರ, ನಾವಡರ ತುಳುನಾಡ ಕುರಿತ ಖೆಡ್ಡಸ,ಕೋಲ, ಪಾಡ್ದನಗಳ ಕುರಿತ ಕಾರ್ಯಕ್ರಮಗಳನ್ನು ಜುಂಜಪ್ಪ, ಮಲೇ ಮಹದೇಶ್ವರ, ಬೀರಪ್ಪ, ಸಂತ ಸೇ ವಾಲಾಲ್, ಗಾದ್ರಿ ಪಾಲನಾಯಕರಂತಹ ಸಾಂಸ್ಕೃತಿಕ ವೀರರ, ಪರಂಪರೆಯ ಕಥನಗಳನ್ನು, ಯಲ್ಲಮ್ಮ, ಹುಲಿಗೆಮ್ಮ, ಗ್ರಾಮದೇವತೆಗಳ ಕುರಿತ ಪ್ರಬಂಧಗಳನ್ನು ಕೃತಿಕಾರರ/ಸಂಬಂಧಿಸಿದವರ ಒಪ್ಪಿಗೆ ಪಡೆದು ಚಿತ್ರೀಕರಿಸಲು ಸಿದ್ದರಾದರೆ ಸಾಕು. ದಶಕಗಳೇ ಕಳೆದಾವು, ಅಂತಹ ದೊಡ್ಡ ಕಣಜವೇ ಕನ್ನಡದಲ್ಲಿದೆ. ಇನ್ನು ಆ ವಿಷಯಗಳನ್ನ ಆಯಾ ಸಂಶೋಧಕರ ನಿರೂಪಣೆಯಲ್ಲೆ ಅಥವಾ ಉಪಸ್ಥಿತಿಯಲ್ಲೇ ಅಚ್ಚು ಕಟ್ಟಾಗಿ ಚಿತ್ರೀಕರಿಸಿದರೆ ಅನನ್ಯವಾದ ಸಾರಸ್ವತ ಲೋಕವನ್ನ ದೃಶ್ಯ ಮಾಧ್ಯಮಕ್ಕೆ ರೂಪಾಂತರಿಸಿದ ಸಾರ್ಥಕ್ಯ ನಮ್ಮದಾಗುತ್ತದೆ. ಅದು ನಾವು ಮಾಡುವ ಉಪಕಾರವಲ್ಲ, ಆದ್ಯ ಕರ್ತವ್ಯ.

 

ಹಾಗಾಗಿಯೇ ಕನ್ನಡದಲ್ಲಿ ಕರ್ನಾಟಕದ ಇತಿಹಾಸ, ಸಾಹಿತ್ಯ, ಪರಿಸರ ,ವಿಜ್ಞಾನದ ಕುರಿತಂತೆ ನಿರಂತರ ಕಾರ್ಯಕ್ರಮಗಳನ್ನ ಬಿತ್ತರಿಸುವ ವಾಹಿನಿಗಳ ಅವಶ್ಯಕತೆ ಇದೆ ಮತ್ತು ಆ ಕುರಿತ ಪ್ರಯತ್ನ ಈಗಿನ ತುರ್ತಾಗಿದೆ. ಅಲ್ಲದೆ ಅದು ಇನ್ನೂ ಹೆಚ್ಚು ಮುಟ್ಟದ ಕಾರ್ಯ ಕ್ಷೇತ್ರವಾಗಿರುವುದರಿಂದ ಉಳಿದವರು ಬಂದು ಆಕ್ರಮಿಸುವ ಮುನ್ನವೇ, ನಿರ್ಮಾಪಕರು ಈ ಕ್ಷೇತ್ರದಲ್ಲಿ ಬೆಳೆದು ನಿಲ್ಲಬಲ್ಲ ಸದಾವಕಾಶವೂ ಆಗಿದೆ. ಹಾಗಾಗಿ, ಬಂಡವಾಳ ಹೂಡಬೇಕೆನ್ನುವವರು, ಸ್ಟಾರ್ಟ್ ಅಪ್ ಗಳು 3 ರಿಂದ 5 ವರುಷಕ್ಕೆ ಬಂಡವಾಳ ಹೂಡಿ ಬರುವ ಬಡ್ಡಿ ಹಣದಲ್ಲಷ್ಟೇ 5 ರಿಂದ 6 ಜನರ ಪುಟ್ಟ ತಂಡಗಳ ಮೂಲಕ ಕೆಲಸ (ವಿಷಯ ಸಂಗ್ರಹ, ಧ್ವನಿಗ್ರಹಣ, ಚಿತ್ರೀಕರಣ, ಪ್ರದರ್ಶನ, ಅಭಿಯಾನ, ಪರ್ಯಾಯ ಜಾಲತಾಣಗಳು, ಮಾರುಕಟ್ಟೆ ವಿಸ್ತರಣೆ ಕುರಿತ ಪ್ರಯತ್ನ) ಶುರುಮಾಡಿದರೆ ಬರೀ ರಾಜಕೀಯ ಗುದ್ದಾಟಗಳ ಬಗ್ಗೆ ಅಷ್ಟೇ ಹೆಚ್ಚು ತಿಳಿದುಕೊಳ್ಳುತ್ತಿರುವ ನಮಗೆ ಈ ಬದುಕಿನ ಇನ್ನೂ ಎಷ್ಟೊ ಮುಖಗಳಾದ ಸಾಹಿತ್ಯ, ವಿಜ್ಞಾನ, ಸಂಗೀತ/ನಾಟಕ, ಜನಪದ, ಕೃಷಿ, ಅನ್ನುವ ವಿವಿಧ ಕವಲುಗಳನ್ನು ಮುಂದೆ ವಾಹಿನಿಯ ಮಟ್ಟದಲ್ಲಿ ಬೆಳೆಸಿ ನಿಲ್ಲಿಸಬಹುದು. ಆ ನಿಟ್ಟಿನಲ್ಲಿ ಬಂಡವಾಳ ಹೂಡಬೇಕೆನ್ನುವವರು ಈಗಲಾದರೂ ಚಿಂತಿಸಬೇಕಿದೆ. (ಶುರುವಾಗಿವೆ ಸತ್ಯ, ಆದರೆ ವೇಗವನ್ನ ಪಡೆದುಕೊಳ್ಳಬೇಕಿದೆ, ಹೆಚ್ಚು ಇನ್ವೆಸ್ಟರ್ಸ್‌‌ಗಳ ಮನ ಒಲಿಸಬೇಕಿದೆ) ಬೆಳಗಾದರೆ ಮತ್ತೆ ಮತ್ತೆ ಹೊಸ ಸುದ್ದಿ ವಾಹಿನಿಗಳನ್ನೆ ತೆಗೆದು ವರುಷಗಳಲ್ಲಿ ಮತ್ತೆ ನಿಲ್ಲಿಸುವುದಕ್ಕಿಂತ, ಮುಂಬರುವ ಭವಿಷ್ಯವನ್ನ ಕಟ್ಟಿ ಕೊಡುವ ಧೀಮಂತ ದೂರಗಾಮಿ ಮಾಲೀಕರು ಕನ್ನಡ ಕಿರುತೆರೆಗೆ ಬೇಕಾಗಿದೆ; ಆ ಮೂಲಕ ಕನ್ನಡ ಕಿರುತೆರೆಯ ಸಾಧ್ಯತೆಗೆ ರೆಕ್ಕೆ ಮೂಡಬೇಕಾಗಿದೆ.

ಈ ಕೆಳಗೆ ಲಗತ್ತಿಸಿದ ಇಂತಹ ಸಾಕ್ಷ್ಯಚಿತ್ರಗಳನ್ನ, ಕಾರ್ಯಕ್ರಮಗಳನ್ನ ನಾವು ಈ ನಾಡಿನ ಪ್ರಾದೇಶಿಕ ಸಂದರ್ಭಗಳಿಗೆ ಅಳವಡಿಸಿಕೊಂಡು ಮಾಡಬಹುದಾಗಿದೆ. Romantics ಅನ್ನುವ BBCಯ ಒಂದು ಡಾಕ್ಯುಮೆಂಟರಿ ಇಂಗ್ಲಿಷ್ ರಮ್ಯ ಕವಿಗಳಾದ ವಿಲಿಯಮ್‌ ಬ್ಲೇಕ್, ವರ್ಡ್ಸ್ ವರ್ಥ್, ಕಾಲೇರಿಡ್ಜ್ ಮತ್ತೂ ಇನ್ನಿತರರ ಕುರಿತ ಅದ್ಭುತ ಜಗತ್ತನ್ನು ತೆರೆದಿಡುತ್ತದೆ. ನಾವು ನಮ್ಮ ಕನ್ನಡದ ಸಂದರ್ಭದಲ್ಲಿ, ಬಿ.ಎಂ. ಶ್ರೀ. ಅವರಿಂದ ಹಿಡಿದು ಕುವೆಂಪು, ಬೇಂದ್ರೆ, ಪು.ತಿ.ನ. ಅಂತ ನವೋದಯದಿಂದ ನವ್ಯದ ಅಡಿಗರು ಮತ್ತು ಇನ್ನಿತರ ಅಗ್ರಗಣ್ಯರ ಕುರಿತ ಸಾಕ್ಷ್ಯಚಿತ್ರಗಳನ್ನ ನಿರ್ಮಿಸಬಹುದಾಗಿದೆ.

 

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...