ಲಕ್ಷಾಂತರ ಪುಸ್ತಕಗಳ ಬೆರಗಿನ ಲೋಕ `ಅಂಕೇಗೌಡರ ಪುಸ್ತಕ ಮನೆ'


ಕಳೆದ 50 ವರುಷಗಳಿಂದ ಪುಸ್ತಕ ಸಂಗ್ರಹವನ್ನೇ ತಮ್ಮ ಮುಖ್ಯ ಕಾಯಕವಾಗಿರಿಸಿಕೊಂಡ ಗೌಡರು ಎಷ್ಟೇ ಕಷ್ಟಗಳಿದ್ದರೂ ತಮ್ಮ ಪುಸ್ತಕ ಪ್ರೀತಿಯನ್ನೆಂದೂ ಬಿಟ್ಟುಕೊಡಲಿಲ್ಲ. ಇವರ ಪುಸ್ತಕ ಮನೆಯಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಪುಸ್ತಕಗಳಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದ ಹರಳಹಳ್ಳಿ ಬಳಿ ಇದೆ ಈ ಪುಸ್ತಕಾಲಯ. ಇಲ್ಲಿ ಜಗತ್ತಿನ ಎಲ್ಲಾ ಭಾಷೆಗಳ ಎಲ್ಲಾ ತರಹದ ಪುಸ್ತಕಗಳಿವೆ ಎನ್ನುವುದು ಬರಹಗಾರ ಶಿಶಿರ್ ರೈ ಕೂವೆಂಜ ಮಾತು. ಅವರು ಅಂಕೇಗೌಡರ ಪುಸ್ತಕ ಮನೆಯ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ...

ಎಲ್ಲರ ನೆನಪಿನಲ್ಲಿ ಉಳಿಯಬೇಕಾದರೆ ಅತ್ಯುತ್ತಮ ಕೃತಿಯೊಂದನ್ನು ಬರೆ, ಇಲ್ಲವೇ ಬರೆದಂತಹ ಪುಸ್ತಕವೊಂದನ್ನು ಸಂಗ್ರಹಿಸು ಎಂದಿದ್ದ ಲೇಖಕ ಬೆಂಜಮಿನ್‌ ಪ್ರಾಂಕ್ಲಿನ್‌ ಹೇಳಿಕೆಯಿಂದ ವಿದ್ಯಾರ್ಥಿ ದೆಸೆಯಲ್ಲೇ ಪ್ರಭಾವಿತರಾದವರು ಮಂಡ್ಯದ ಈ ಪುಸ್ತಕ ಪ್ರೇಮಿ. ಹತ್ತು ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳ ಬೃಹತ್ ಸಂಗ್ರಹ, ನಾಣ್ಯ ಸಂಗ್ರಹ, ಅಂಚೆ ಚೀಟಿಗಳ ಸಂಗ್ರಹ, ಇನ್ನೂ ವಿಶೇಷವಾಗಿ ಲಗ್ನ ಪತ್ರಿಕೆಗಳ ಸಂಗ್ರಹವನ್ನು ತನ್ನ ಸಂಪತ್ತನ್ನಾಗಿಸಿಕೊಂಡಿದ್ದಾರೆ ಮಂಡ್ಯದ ಪಾಂಡವಪುರ ತಾಲೂಕಿನ ಹರಳಹಳ್ಳಿಯ ಸಾಹಿತ್ಯ ಪರಿಚಾರಕ ಅಂಕೇಗೌಡರು.

ಸಾರಿಗೆ ಸಂಸ್ಥೆ ಮೈಸೂರು ವಿಭಾಗದಲ್ಲಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿದ ಅಂಕೇಗೌಡರು ಸಂಜೆ ಕಾಲೇಜಿನಲ್ಲಿ ತಮ್ಮ ಬಿ. ಎ ಪದವಿ ಪಡೆದರು. ಮುಂದೆ ಕರೆಸ್ಪಾಂಡೆನ್ಸ್ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪೂರೈಸಿದರು. ಪುಸ್ತಕಗಳ ಮೇಲೆ ವಿಶೇಷ ಅಭಿಮಾನ ಹೊಂದಿದ್ದ ಗೌಡರು ಸಕ್ಕರೆ ಕಾರ್ಖಾನೆಯಲ್ಲಿ ವೇಳಾಧಿಕಾರಿಯಾಗಿ ತಮ್ಮ ವೃತ್ತಿ ಆರಂಭಿಸಿದರು. ತಮ್ಮ ಸಂಬಳದ ಸುಮಾರು ಶೇ.70ರಷ್ಟನ್ನು ಪುಸ್ತಕ ಕೊಳ್ಳಲು ಬಳಸುತ್ತಿದ್ದರು. ಇವೆಲ್ಲದರ ಜೊತೆಗೆ ಪುಸ್ತಕ ಸಂಗ್ರಹಕ್ಕಾಗಿಯೇ ತಮ್ಮ ನಿವೇಶನವನ್ನು ಮಾರಿದ ಅಂಕೆಗೌಡರ ಅಕ್ಷರ ಪ್ರೀತಿಗೆ ಸಾಟಿಯಿಲ್ಲ. ಈ ಎಲ್ಲಾ ಪರಿಶ್ರಮದ ಪ್ರತಿಫಲವಾಗಿ ಇವರ ಪುಸ್ತಕ ಮನೆ ಪ್ರತಿಷ್ಟಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದಿದೆ. ಇವೆಲ್ಲವನ್ನು ಅರಿತ ಉದ್ಯಮಿ ಹರಿ ಖೋಡೆ ಅಂಕೆಗೌಡರ ಪುಸ್ತಕ ಭಂಡಾರವನ್ನು ಜೋಪಾನವಾಗಿಸುವ ನಿಟ್ಟಿನಲ್ಲಿ ಪಾಂಡವಪುರದ ವಿಶ್ವೇಶ್ವರನಗರ ಬಡಾವಣೆಯಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ.

ಕಳೆದ 50 ವರುಷಗಳಿಂದ ಪುಸ್ತಕ ಸಂಗ್ರಹವನ್ನೇ ತಮ್ಮ ಮುಖ್ಯ ಕಾಯಕವಾಗಿರಿಸಿಕೊಂಡ ಗೌಡರು ಎಷ್ಟೇ ಕಷ್ಟಗಳಿದ್ದರೂ ತಮ್ಮ ಪುಸ್ತಕ ಪ್ರೀತಿಯನ್ನೆಂದೂ ಬಿಟ್ಟುಕೊಡಲಿಲ್ಲ. ಇವರ ಪುಸ್ತಕ ಮನೆಯಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಪುಸ್ತಕಗಳಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದ ಹರಳಹಳ್ಳಿ ಬಳಿ ಇದೆ ಈ ಪುಸ್ತಕಾಲಯ. ಇಲ್ಲಿ ಜಗತ್ತಿನ ಎಲ್ಲಾ ಭಾಷೆಗಳ ಎಲ್ಲಾ ತರಹದ ಪುಸ್ತಕಗಳಿವೆ. ಒಂದು ಕಾಲದಲ್ಲಿ ಕತ್ತಲಕೋಣೆಯಲ್ಲಿ ಬಿದ್ದಿದ್ದ ಈ ಪುಸ್ತಕ ಭಂಡಾರವನ್ನು ಲೋಕಾರ್ಪಣೆಗೊಳಿಸಿದವರು ಉದ್ಯಮಿ ಹರಿಖೋಡೆಯವರು. ಇದೀಗ ಈ ಸಾಹಿತ್ಯ ಲೋಕವು ಜ್ಞಾನಾಕಾಂಕ್ಷಿಗಳಿಗೆ ಜ್ಞಾನಭಂಡಾರವೇ ಆಗಿದೆ.

1 ರುಪಾಯಿಯ ಪುಸ್ತಕದಿಂದ ಹಿಡಿದು 10ಲಕ್ಷಕ್ಕೂ ಅಧಿಕ ಬೆಲೆಬಾಳುವ ಪ್ರಥಮ ಪ್ರಪಂಚ ಮಾಹಾಯುದ್ಧದ ಅಪೂರ್ವ ಛಾಯಾಚಿತ್ರಗಳನ್ನೊಳಗೊಂಡ ಕೃತಿಯವರೆಗೆ ಈ ಸಂಗ್ರಹದ ಹರಹು ಇದೆ. ಕತೆ, ಕಾದಂಬರಿ, ಕಾವ್ಯ, ಮಹಾಕಾವ್ಯ, ಜೀವನಚರಿತ್ರೆ, ನಿಘಂಟು, ಪ್ರವಾಸಿ ಪುಸ್ತಕ, ಮಹಾನ್‌ ವ್ಯಕ್ತಿಗಳ ಆತ್ಮಚರಿತ್ರೆ, ಜ್ಞಾನಪೀಠ, ಕೇಂದ್ರಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಹೊತ್ತಿಗೆಗಳ ಅಪರೂಪದ ಸಂಗ್ರಹಗಳು ಇಲ್ಲಿವೆ.

ಇನ್ನು ಸ್ಪರ್ಧಾತ್ಮಕ ಪರೀಕ್ಷೆಯ ಉಪಯುಕ್ತ ಕೃತಿಗಳು, ಗೆಜೆಟಿಯರ್‌ಗಳು, ಎನ್‌ಸೈಕ್ಲೋಪೀಡಿಯಾ, ಭಾರತದ ಮಹಾಕಾವ್ಯ ರಾಮಾಯಣ, ಮಹಾಭಾರತಗಳಂಥ ಹತ್ತು ಸಾವಿರಕ್ಕೂ ಅಧಿಕ ಕೃತಿಗಳು, ಕುರಾನ್‌, ಬೈಬಲ್‌ ಜೊತೆಗೆ ದಾಸಸಾಹಿತ್ಯ, ಭಕ್ತಿಪಂಥಕ್ಕೆ ಸೇರಿದ ಸಾವಿರಾರು ಕೃತಿಗಳ ಬೃಹತ್‌ ಸಂಗ್ರಹವನ್ನು ಅಂಕೇಗೌಡರು ಜೋಪಾನವಾಗಿ ಕಾಪಿಟ್ಟುಕೊಂಡು ಬಂದಿದ್ದಾರೆ. ಇವೆಲ್ಲದರ ಜೊತೆಗೆ ರಾಜಾ ರವಿವರ್ಮ, ಲಿಯೋನಾರ್ಡೋ ಡಾವಿನ್ಸಿ, ಮೈಕಲ್‌ ಏಂಜಲೋ ಮುಂತಾದ ಜಗತ್‌ ಪ್ರಸಿದ್ಧ ಚಿತ್ರಕಾರರ ಕಲಾ ಕೃತಿಗಳು ಮತ್ತು ವಿವಿಧ ರಾಷ್ಟ್ರಗಳ ಭೂಪಟಗಳು, ಕರೆನ್ಸಿಗಳು ಇಲ್ಲಿ ಕಾಣಸಿಗುತ್ತವೆ. ಈ ಎಲ್ಲಾ ಕಾರಣಕ್ಕಾಗಿಯೇ ಒಂದು ದಿನದಲ್ಲಿ ಸುತ್ತಲು ಸಾಧ್ಯವಾಗಲಾರದಷ್ಟು ಈ ಪುಸ್ತಕಮನೆಯ ವಿಸ್ತಾರವಿದೆ.

ಮೈಸೂರಿನಲ್ಲಿ ಲಕ್ಷಾಂತರ ಬೆಲೆಬಾಳುವ ತಮ್ಮ ನಿವೇಶನವನ್ನು ಮಾರಿ ಪುಸ್ತಕ ಸಂಗ್ರಹಿಸುವುದರ ಜೊತೆಗೆ ಪುಸ್ತಕ ಮಾರಾಟಗಾರರು ತಮ್ಮ ಬಳಿಗೆ ಬರುವ ಹಳೆಯ ಪುಸ್ತಕಗಳನ್ನು ಅಂಕೇಗೌಡರಿಗೆ ಮಾರುತ್ತಾರೆ. ಹೀಗಾಗಿ ಇವರ ಪುಸ್ತಕದ ಖಜಾನೆಯಲ್ಲಿ ಕೃತಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಮಹತ್‌ಕಾರ್ಯಕ್ಕೆ ಪತ್ನಿ ವಿಜಯಲಕ್ಷ್ಮೀ ಮತ್ತು ಮಗ ಜೊತೆ ಜೊತೆಯಾಗಿ ಹೆಜ್ಜೆ ಇಡುತ್ತಿರುವುದರಿಂದ ಅಂಕೇಗೌಡರ ಪುಸ್ತಕ ಸಂಗ್ರಹ ಬೆಳೆಯುತ್ತಲೇ ಇದೆ.

ಏಕವ್ಯಕ್ತಿಯ ಈ ಸಾಧನೆಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. 2014ರ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಸಾಹಿತ್ಯ ಪರಿಚಾರಕ ಪ್ರಶಸ್ತಿ ಮುಂತಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳ ಜೊತೆಗೆ 2014ರಲ್ಲಿ ನಡೆದ ಪಾಂಡವಪುರ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು ಈ ಪುಸ್ತಕ ಪ್ರೇಮಿ.

MORE FEATURES

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...