ಮಲೆನಾಡಿನ ಸೊಗಡನ್ನು ನೆನಪಿಸುವ 'ಮೂಚಿಮ್ಮ'


ಲೇಖಕಿ, ಅಂಕಣಕಾರ್ತಿ ಶ್ರೀದೇವಿ ಕೆರೆಮನೆ ಅವರು ‘ಸಿರಿ ಕಡಲು’ ಸರಣಿ ಬರೆಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದೊಂದಿಗಿನ ತಮ್ಮ ಸಹಯಾನವನ್ನು ನಿಮ್ಮ ಮುಂದಿಡಲಿದ್ದಾರೆ. ಈ ಬಾರಿಯ ಸರಣಿಯಲ್ಲಿ ಲೇಖಕ ಡಾ.ಅಜಿತ್ ಹರೀಶಿ ಅವರ ಮೂಚಿಮ್ಮ ಕೃತಿಯ ಓದಿನೊಂದಿಗೆ ತೆರೆದುಕೊಂಡ ತಮ್ಮ ಬಾಲ್ಯಕಾಲದ ಮಲೆನಾಡಿನ ಸೊಗಡನ್ನು ದಾಖಲಿಸಿದ್ದಾರೆ. 

ಪುಸ್ತಕದ ಹೆಸರು- ಮೂಚಿಮ್ಮ
ಲೇಖಕರು- ಡಾ.ಅಜಿತ್ ಹರೀಶಿ
ಪ್ರಕಾಶಕರು-  ಮೈಲಾಂಗ್ ಬುಕ್ಸ್
ಬೆಲೆ-170 

ಶಿರಸಿ, ಸಿದ್ದಾಪುರ ಕಡೆಯ ಮಲೆನಾಡ ಹಳ್ಳಿಗಳೆಂದರೆ ಕಥೆಗಳಿಗೆ ಹೇಳಿ ಮಾಡಿಸಿದ ಜಾಗ. ಒಂದಲ್ಲಾ ಒಂದು ಕಥೆ ಎಲ್ಲೆಲ್ಲಿಂದಲೋ ಉತ್ಪತ್ತಿಯಾಗಿ ಊರೆಲ್ಲ ಹರಿದಾಡುತ್ತಿರುತ್ತದೆ. ಇಂತಹುದ್ದೇ ಶಿರಸಿಯ ಬೆಟ್ಟದ ನಡುವಿನ ಹಳ್ಳಿಯಲ್ಲಿ ಬೆಳೆದ ನನಗೆ ಅಡಕೆ ತೋಟದ ಬಣ್ಣಗಳ (ಅಡಕೆ ಮರಗಳ ಸಾಲು) ನಡುವೆ ಹರಿಯುವ ಸಣ್ಣ ಝರಿಯಂತೆ ಇಂತಹ ಕಥೆಗಳು ಝುಳುಗುಡುತ್ತಿದ್ದುದನ್ನು ಕೇಳುತ್ತಿದ್ದೆ. ಅದೆಲ್ಲೋ ಯಾರದ್ದೋ ಮನೆಯ ಆಕಳು ಕರು ಹಾಕಿದ್ದರಿಂದ ಹಿಡಿದು, ಪಕ್ಕದ ಮನೆಯ (ಇಲ್ಲಿ ಪಕ್ಕದ ಮನೆ ಎಂದರೆ ಕೂಗಳೆತೆಗೂ ದೂರ ಇರುವ ಮನೆ) ಹರೆಯದ ಹುಡುಗಿ ತಿಂಗಳು ತಿಂಗಳು ಹೊರಗೆ ಕುಳಿತುಕೊಳ್ಳುವ ಕಥೆಯವರೆಗೆ ಎಲ್ಲವೂ ಇರುತ್ತಿತ್ತು. ಅಪ್ಪಟ ಹವ್ಯಕ ಭಾಷೆಯ ಈ ಕಥೆಗಳು ಅದೆಷ್ಟು ರೂಢಿಯಾಗಿದ್ದವೆಂದರೆ ನಾನು ಇಲ್ಲಿ ಬೇರೆ ಎಂದು ಅನ್ನಿಸುತ್ತಲೇ ಇರಲಿಲ್ಲ. ಇಂತಹ ಕಥಾಲಾಪದಿಂದಲೇ ನಾನು ಹವ್ಯಕ ಭಾಷೆಯನ್ನು ಸರಾಗವಾಗಿ ಆಡಲು ಕಲಿತದ್ದು. ಹೀಗಾಗಿ ಡಾ.ಅಜಿತ್ ಹರೀಶಿಯವರ ಮೂಚಿಮ್ಮ ಕಥಾ ಸಂಕಲನ ನನ್ನ ಬಾಲ್ಯವನ್ನೆಲ್ಲ ಒಮ್ಮೆಲೆ ಕಣ್ಣೆದುರಿಗೆ ತಂದು ನಿಲ್ಲಿಸಿತು.

ನಾನು ಶಿರಸಿಯಲ್ಲಿರುವಾಗ ಅಲ್ಲಿಯ ಕೆಲವು  ಬ್ರಾಹ್ಮಣರ ಮನೆಗಳಲ್ಲಿ ಊಟ ಮಾಡುವುದಕ್ಕೆ ತಿಂಡಿ ತಿನ್ನುವುದಕ್ಕೆ ಉಳಿದ ಜಾತಿಯವರು ಭಯಪಡುತ್ತಿದ್ದರು. ಅದರಲ್ಲೂ ಕೆಲವು ಮನೆಗಳಿಗೆ ಅದೊಂದು ಶಾಪವಾಗಿ ಯಾರೂ ಆ ಮನೆಯ ನೀರನ್ನೂ ಕುಡಿಯದ್ದನ್ನು ನೋಡಿದ್ದೇನೆ. ಉಗುರಿನ ಎಡೆಯಲ್ಲಿ ವಿಷವನ್ನಿಟ್ಟುಕೊಂಡು ಊಟ ಮಾಡಲು ಬಂದವರಿಗೆ ಹಾಕುತ್ತಾರೆ ಎನ್ನುವ ವದಂತಿ ಇತ್ತು. ಅದರಲ್ಲೂ ವಿಧವೆಯರಾಗಿ, ಕೂದಲು ತೆಗೆಸಿಕೊಂಡ ಕೆಂಪು ಸೀರೆಯನ್ನುಟ್ಟುಕೊಂಡವರು ಹೀಗೆ ಮಾಡುತ್ತಾರೆ ಎನ್ನುತ್ತಿದ್ದರು. ಅದೆಷ್ಟೋ ಜನ ‘ಅವರ ಮನೆಲಿ ಊಟ ಮಾಡಿದ್ದೆ, ವಿಷ ಬಿದ್ದೋಜು’ ಎನ್ನುವುದು ಸಾಮಾನ್ಯ ಮಾತಾದಂತಾಗಿತ್ತು. ವಿಷ ತಿಂದವರು ಒಮ್ಮೆಲೆ ಸಾಯದೆ ನಿಧಾನವಾಗಿ ಹಂತಹಂತವಾಗಿ ಸಾಯುತ್ತಾರೆ ಎನ್ನುವುದೂ, ಕುಮಟಾದ ಮುರೂರಿನ ಬಳಿ ಅಂತಹ ವಿಷವನ್ನು ತೆಗೆಯುತ್ತಾರೆ ಎಂದು ಅಲ್ಲಿಗೆ ಹೋಗಿ ತೆಗೆಸಿಕೊಂಡು ಬರುವುದೂ, ಹಾಗೆ ತೆಗೆಸಿಕೊಂಡು ಬಂದವರು ‘ಅಯ್ಯೋ ಆ ವಿಷದ ಮೇಲೆ ಕೂದಲೂ ಬೆಳೆದಿತ್ತು. ಇನ್ನು ಸ್ವಲ್ಪ ದಿನ ಆದರೆ ಅಷ್ಟೇ ಕಥೆ...’ ಎಂದು ಭಯ ಮಿಶ್ರಿತ ದಿಗ್ಭ್ರಮೆಯಲ್ಲಿ ಹೇಳುವುದು ಎಲ್ಲವನ್ನೂ ನಾವು ಒಂದು ಪತ್ತೆದಾರಿ ಕಥೆ ಕೇಳಿದಂತೆಯೇ ಕೇಳುತ್ತಿದ್ದೆವು. ಹಲ್ಲಿಯನ್ನು ಕೊಂದು, ಒಲೆಯ ಮೇಲೆ ತಲೆಕೆಳಗಾಗಿ ನೇತು ಹಾಕಿ, ಕೆಳಗೊಂದು ಮಡಕೆ ಇಟ್ಟು, ಆ ಹಲ್ಲಿಯಿಂದ ಬರುವ ವಿಷವನ್ನು ಸಂಗ್ರಹಿಸುತ್ತಿದ್ದರು ಎಂಬ ಮಾತಿನ ಜೊತೆಗೇ ಅದೊಂದು ಒಬ್ಬರಿಂದ ಒಬ್ಬರಿಗೆ ದಾಟಿಸುವ, ಅನುವಂಶೀಯ ವಿದ್ಯೆ ಎಂಬತಾಗಿ  ಆ ಮನೆಯಿಂದ ಮದುವೆಯಾಗಿ ಹೋದ ಹೆಣ್ಣುಮಕ್ಕಳೂ ಹೀಗೆ ವಿಷಹಾಕುವುದನ್ನು ಮುಂದುವರೆಸುತ್ತಾರೆ ಎಂಬ ಗುಸುಗುಸು ಕಥೆಗಳು ಚೌತಿಯ ಕಂಬ್ಳದಲ್ಲಿ ಚಕ್ಕುಲಿಯ ಜೊತೆಜೊತೆಗೇ ಸುತ್ತಿಕೊಳ್ಳುತ್ತ ಮಥಮೇಲೆ ಮುಳ್ಳೆಬ್ಬಿಸುತ್ತಿತ್ತು. ಸಂಕಲನದ ಹೆಸರಿರುವ ಮೂಚಿಮ್ಮ ಕಥೆಯನ್ನು ಓದುವಾಗ ಇದೆಲ್ಲ ವಿಷಯಗಳು ಒಮ್ಮೆ ಕಣ್ಣೆದುರು ಹಾದು ಹೋಯಿತು. ಯಾಕೆಂದರೆ ನಮ್ಮ ಹಳ್ಳಿಗಳ ಕಡೆ ನಾಟಿ ವೈದ್ಯವನ್ನು ಕೊನೆ ಯುಸಿರು ಇರುವವರೆಗೂ ಯಾರಿಗೂ ಹೇಳಿಕೊಳ್ಳುವುದಿಲ್ಲ. ಎಷ್ಟೋ ಕಡೆ ಹೀಗೆ ಗಿಡಮೂಲಿಕೆಯ ಔಷಧ ಕೊಡುವವರು ಕೊನೆಗೂ ಈ ಔಷಧದ ಗುಟ್ಟು ಹೇಳದೇ  ಪಾರಂಪರಿಕ ಔಷಧಿಯ ಪರಂಪರೆ ಅಲ್ಲಿಗೇ ಮುಗಿದು ಹೋಗಿದ್ದಿದೆ. ನನ್ನ ಅಜ್ಜಿ ಮನೆಯ ಬಳಿ ಸರ್ಪಸುತ್ತಿಗೆ ಔಷಧ ಕೊಡುತ್ತಿದ್ದ ಒಬ್ಬ ಅಜ್ಜಿ ಔಷಧಿಯ ಗುಟ್ಟು ಬಿಟ್ಟುಕೊಟ್ಟರೆ ಆಯಸ್ಸು ಮುಗಿದಂತೆ ಎನ್ನುವ ನಂಬಿಕೆಯಲ್ಲಿ ಯಾರಿಗೂ ಗಿಡಮೂಲಿಕೆಯ ಬಗ್ಗೆ ಹೇಳದೇ ಸತ್ತು ಹೋಗಿದ್ದಳು. ಆದರೆ ಈ ಸಂಕಲನದ ಮೂಚಿಮ್ಮ ತನ್ನ ಬೇರು, ನಾರಿನೊಂದಿಗೆ ನೀಡುವ ನಾಟಿ ಔಷಧಿಯ ಗುಟ್ಟನ್ನು ತನ್ನ ಅಕ್ಕನ ಮಗನಿಗೆ ಹೇಳಿಕೊಟ್ಟ ಮೂಕಾಂಬಿಕ ಚಿಕ್ಕಮ್ಮನ ಗುಟ್ಟು ಬೇರೆಯದ್ದೇ. ಅದನ್ನು ಕಥೆಯೊಂದಿಗೇ ಓದಿ ಆಸ್ವಾದಿಸಬೇಕು.

ಹಾಗೆ ನೋಡಿದರೆ ಮೊದಲ ಕಥೆ ಆವಿಯೊಂದಿಗೆ ಮೊದಲುಗೊಂಡು ಹತ್ತನೆ ಕಥೆ ಪರಿವರ್ತನೆಯವರೆಗೆ ಎಲ್ಲವೂ ಕಥೆಯೊಳಗೊಂದು ಕಥೆ, ಅದರೊಳಗೊಂದು ಗುಟ್ಟನ್ನು ಬಚ್ಚಿಟ್ಟುಕೊಂಡಿರುವಂಥವೇ. ಓದಗರು ಕಥೆ ಓದಿ ಮುಗಿಸಿದರೂ ಅದರೊಳಗಿನ ಗುಂಗು ಮರೆಯಾಗದಂತೆ ಈ ಕಥೆಗಳು ಕಾಡುತ್ತವೆ. ಕೆಲವೊಂದು ಕಥೆಗಳಂತೂ ಕಥೇ ಮುಗಿಸಿದರೂ ಹೀಗಾಗಬಹುದಿತ್ತು, ಹೀಗೆ ಇರಬಹುದೇ? ಎಂದೆಲ್ಲ ನಮ್ಮೊಳಗೇ ನಾವು ದಿನಗಟ್ಟಲೆ ಚರ್ಚಿಸುವಂತೆ ಮಾಡುವುದರಲ್ಲಿ ಯಶಸ್ವಿಯಾಗಿವೆ.

ಎರಡನೆ ಕಥೆ ನಟ ತನ್ನ ವಿಶಿಷ್ಟ ನಿರೂಪಣೆಯೊಂದಿಗೇ ಗಮನ ಸೆಳೆಯುತ್ತದೆ. ನಟರಾಜ ಎನ್ನುವ ನಟ ಭಯಂಕರ ಹಾಗೂ ನಟನೆಯೇ ಜೀವಾಳವಾಗಿದ್ದ ಯುವಂತಿಕಾ ಎಂಬ ಸಿನೆಮಾ ನಟಿಯ ಪಾತ್ರಗಳು ಅದಲುಬದಲಾದಂತೆ ಕಾಣುತ್ತದೆ. ಅವಕಾಶಕ್ಕಾಗಿ ಅಡ್ಜಸ್ಟ್ ಮಾಡಿಕೊಳ್ಳುವ ನಟಿ ಯುವಂತಿಕಾ ಮತ್ತು ಟವಳನ್ನು ಪಡೆಯಲು ಅದ್ಭುತ ನಟನೆ ಮಾಡುವ ನಟರಾಜರ ಪಾತ್ರಪೋಷಣೆ ಬೆಳೆಯುವುದನ್ನು ಇಲ್ಲಿ ಗಮನಿಸಬೇಕು. ಅದರ ನಡುವೆ ಬರುವ ಪಂಚಮಿ ಎನ್ನುವ ಜಿಂಕೆ ಮರಿ, ಶಿವಾನಂದ ಕಳವೆಯವರ ಕಾನ್ ಗೌರಿಯನ್ನು ಜ್ಞಾಪಿಸಿದರೆ ಏನೂ ಮಾಡುವಂತಿಲ್ಲ. ಆದರೆ ಕೊನೆಯಲ್ಲಿ ಪಂಚಮಿಯನ್ನು ಕಾಡಿಗೆ ಕಳಿಸುವ ನಟರಾಜ ಆ ಜಿಂಕೆಯೊಳಗಿನ ಕಾಮದ ವಾಂಛೆಯನ್ನು ಅರಿತನೋ, ತಾನು ಬಂಧಿಸಿಟ್ಟಿದ್ದು ಅನ್ಯಾಯ ಎಂದು ತಿಳಿದನೋ, ಅದೇಕೆ ಹಾಗೆ ಮಾಡಿದ ಎಂದು ಮತ್ತೆ ಮತ್ತೆ ನಮ್ಮೊಳಗೆ ನಾವು ಕೇಳಿಕೊಳ್ಳುವಂತಾಗುತ್ತದೆ. ದಹನ ಕಥೆಯೂ ಇದೇ ತರಹದಲ್ಲಿ ನಮ್ಮನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಪೂರ್ವಾಶ್ರಮದಲ್ಲಿ ಗಂಗಾಧರನಾಗಿದ್ದ ಸ್ವಾಮಿಯೊಬ್ಬರು ಕನಸಿನಲ್ಲಿ ಕಂಡಿದ್ದೆಲ್ಲ ನಿಜ ಎನ್ನುತ್ತ ತನ್ನ ಸಾವನ್ನು ತಾನೆ ಕನಸಲ್ಲಿ ಕಂಡದ್ದಲ್ಲದೆ  ಸತ್ತೂ ಹೋದ ಸ್ವಾಮಿಯ ಸಾವೂ ಕೂಡ ಹೇಗಾಯ್ತು ಎಂದು ಹಲವಾರು ಸಲ ಯೋಚಿಸುತ್ತ ಕಥೆಯಲ್ಲಿ ಬರುವ ಪಾತ್ರಗಳ ಮೇಲೆ ಸಂಶಯ ಪಡುವಂತಾಗುತ್ತದೆ.

ನಮ್ಮೂರಿನ ಒಂದು ಹಳೆಯ ಹುಲ್ಲಿನ ಮನೆಯನ್ನು ತೆಗೆದು ಹೊಸ ಮನೆ ಕಟ್ಟಬೇಕೆಂದುಕೊಂಡು ಆ ಮನೆಯ ಮಗ ಮನೆಯನ್ನು ಕೆಡವಿದಾಗ ಅದರ ಮಾಡಿಗೆ ಹಾಕಿದ್ದ ಬಿದಿರಿನ ಗಳದ ತೂತಿನಿಂದ ತಾಮ್ರದ ನಾಣ್ಯಗಳು, ಬೆಳ್ಳಿ ಪಾವಲಿಗಳು, ಚಿನ್ನದ ಪವನುಗಳು ಉರುಳುರುಳಿ ಬಿದ್ದಿದ್ದವಂತೆ. ಬಹುಶಃ ಆ ಮನೆಯ ಮಕ್ಕಳು ರಾತ್ರಿ ಇಡೀ ಕುಳಿತು ಎಲ್ಲ ಬಿದಿರಿನ ಗಳವನ್ನು ಮುರಿದು ಮುರಿದು ಪರಿಶೀಲಿಸಿದ್ದಿರಬಹುದು ಎಂಬ ಕಥೆಯೊಂದು ಬಹಳ ದಿನಗಳವರೆಗೆ ಜನರ ನಾಲಿಗೆಯಲ್ಲಿ ಹರಿದಾಡುತ್ತ ನಗುವಿನ ವಸ್ತುವಾಗಿತ್ತು. ಆದರೆ ಅದರ ನಂತರ ಬಹಳಷ್ಟು ಹುಲ್ಲಿನ ಮಾಡು ಇರುವ ಮನೆಯವರು ಅದನ್ನು ತೆಗೆಸಿ ಬಿದಿರಿನ ಗಳವನ್ನೆಲ್ಲ ಖಾಲಿ ಮಾಡಿದ್ದರು ಎನ್ನುವುದು ಅಕಸ್ಮಾತ್ ಆಗಿ ಉದ್ದೇಶಪೂರ್ವಕವಲ್ಲದ ಕೆಲಸ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಅಂತಹ ಘಟನೆಯನ್ನು  ಸಂಕಲನದಲ್ಲೂ ಕಥೆಗಾರ ಹೇಳಿದ್ದಾರೆ. ತಾನೊಂದು ಬಗೆದರೆ ಕಥೆಯಲ್ಲಿ  ಬಂಗಾರಿ ಅತಿವೃಷ್ಟಿಗೆ ಸಿಕ್ಕು ಹೊಳೆಯ ನೀರು ಮೇಲೇರಿ ಮನೆ ಮುಳುಗುವಾಗಲೂ ಬಿದಿರಿನ ಅಂಡೆಯನ್ನು ಕೊಡವಿ ಚಿನ್ನದ ನಾಣ್ಯ ಆರಿಸಿ ಗಂಟು ಕಟ್ಟಿಕೊಳ್ಳುವ ದೃಶ್ಯವಿದೆ. ಹಿಂದೆಲ್ಲ ಗಂಡ ತೀರಿಹೋಗಿ ಹೆಂಡತಿ ತವರು ಮನೆಯ ಪಾಲಾಗುವುದಿದ್ದರೆ  ಹೀಗೆ  ಮನೆಯ ಮಾಡಿಗೆ ಅಡಗಿಸಿಟ್ಟ ಚಿನ್ನ ತರುತ್ತಿದ್ದರಂತೆ.

ವಿಲಪ್ತ ಕಥೆ ನಿಮಗೆ ನಿಮಗೆ ಗೊತ್ತಿರುವ ಹೆಸರಾಂತ ಮಠದ ರಾಮತೀರ್ಥವನ್ನು ಹಂಚಿ, ಕನಸಿನಲ್ಲಿ ಬಂದ ರಾಮ ಶಿಷ್ಯೆಯೊಬ್ಬಳನ್ನು ಉದ್ಧರಿಸಲು ಸೂಚಿಸಿದ್ದಾನೆ ಎಂದು ‘ಹಠಸಂಭೋಗ’ದ ಹೆಸರಿನಲ್ಲಿ ಅತ್ಯಾಚಾರ ಮಾಡಿದ ಸ್ವಾಮಿಯೊಬ್ಬರನ್ನು ನೆನಪಿಸಬಹುದು, ಪತನ ಕಥೆಯಂತೂ ಹಲವಾರು ವಿಶ್ವವಿದ್ಯಾಲಯಗಳ, ಪಿ.ಎಚ್.ಡಿ ಗೆ ಗೈಡ್ ಆಗಿರುವ ಪ್ರೊಫೆಸರಗಳನ್ನು ಕಣ್ಣೆದುರಿಗೆ ತರಬಹುದು.  ಸಂಕಲನ ಓದಿ ಮುಗಿಸಿದಾಗ ಒಂದೊಂದು ಕಥೆ ಒಂದೊಂದು ಸಿದ್ಧಾಂತಕ್ಕೆ ಸೇರಿದೆಯೆನ್ನಿಸುತ್ತದೆಯಾದರೂ ಇಸಂಗಳ ಗೊಡವೆ ಇರದಂತೆ ಕಂಡಿದ್ದನ್ನು, ಕೇಳಿದ್ದನ್ನು ಕಥೆಯಾಗಿಸಿದ್ದಾರೆ ಎಂದೇ ಹೇಳಬಹುದು.

ಒಂದು ಕಥಾ ಸಂಕಲನದ ಎಲ್ಲಾ ಕಥೆಗಳೂ ಉತ್ಕೃಷ್ಟ ಕಥೆಗಳೇ ಆಗಿರಬೇಕಿಲ್ಲ.  ಇಡೀ ಸಂಕಲನದಲ್ಲಿ ನೆನಪಿಟ್ಟುಕೊಳ್ಳುವಂತಹ ಎರಡು ಮೂರು ಕಥೆಗಳಿದ್ದರೂ ಸಾಕು. ಸಂಕಲನ ಗೆದ್ದಂತೆಯೇ ಸರಿ. ಆ ದೃಷ್ಟಿಯಿಂದ ಜೊಳ್ಳಿಗಿಂತ ಗಟ್ಟಿ ಕಾಳೇ ಹೆಚ್ಚಿರುವ ಈ ಸಂಕಲನ ಗೆದ್ದಿದೆ.

ಮೂಚಿಮ್ಮ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಸರಣಿಯ ಹಿಂದಿನ ಬರೆಹಗಳು: 
‘ಚೆಕ್ ಪೋಸ್ಟ್’ ಟ್ರಕ್ ನೊಂದಿಗೆ ಸಾಗುವ ಬಾಲ್ಯದ ನೆನಪು

 

MORE FEATURES

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

20-04-2024 ಬೆಂಗಳೂರು

“ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗು...

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು

20-04-2024 ಬೆಂಗಳೂರು

'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದ...

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...