ಮರವೊಂದರ ಮಹಾಪ್ರಸ್ಥಾನದ ಕಥಾನಕ : ಮಹಾವೃಕ್ಷ


ಫ್ರೈ ಓವರ್ ನಿರ್ಮಾಣಕ್ಕಾಗಿ ಬೃಹತ್ ಅರಳೆಮರವನ್ನು ಕಡಿಯುವ ದೃಶ್ಯದಿಂದ ತೆರೆದುಕೊಳ್ಳುವ ಕತೆ, ತನ್ನನ್ನು ಕಡಿಯುತ್ತಾರಲ್ಲವೆಂದು ತಿಳಿದ ಮರ ತಾನು ಸ್ಥಾವರವಾಗುವದರ ಬದಲು ಜಂಗಮವಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲ ಎಂದು ಆಲೋಚಿಸುವುದು ಹಾಗೂ ಕಡಿಯುವದರಿಂದ ತಪ್ಪಸಿಕೊಳ್ಳಲಾಗದ ಮರದ ನಿಸ್ಸಹಾಯಕತೆಯನ್ನು ಬಿಂಬಿಸುವುದು ನಿಜಕ್ಕೂ ಓದುಗಗನ್ನು ಆಯಸ್ಕಾಂತೀಯ ಗುಣದಂತೆ ಹಿಡಿದಿಡುತ್ತದೆ. ಬಲವಿದ್ದವನು ಮಾತ್ರ ಬದುಕುಳಿಯುತ್ತಾನೆ ಎಂಬ ಅರಣ್ಯ ಶಾಸನ ಮತ್ತೇ ಜಾರಿಗೆ ಬಂದಿರಬೇಕು, ಹಾಗಾದರೆ ಬಲವಿಲ್ಲದವನ ಕತೆ ಏನು, ಅಂಥವನಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸುವರಾರು..? ಎನ್ನುತ್ತಾರೆ ಬರಹಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ. ಲೇಖಕ ಕಂನಾಡಿಗಾ ನಾರಾಯಣ ಅವರ ಮಹಾವೃಕ್ಷ ಕಾದಂಬರಿಯ ಬಗ್ಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ...

ಕೃತಿ: ಮಹಾವೃಕ್ಷ (ಕಾದಂಬರಿ)
ಲೇಖಕ: ಕಂನಾಡಿಗಾ ನಾರಾಯಣ
ಪ್ರಕಾಶನ: ನವಕರ್ನಾಟಕ ಪ್ರಕಾಶನ,ಬೆಂಗಳೂರು
ಪುಟ:144
ಬೆಲೆ:ರೂ 160
ಮುದ್ರಣ: 2021

ತಮ್ಮ ವಿಶಿಷ್ಟ ವಿಷಯ ವಸ್ತುಗಳ ಕಾದಂಬರಿಗಳಾದ ಕಾಂಡ, ದ್ವಾಪರ, ಆಕಾಶ ಹಾಗೂ ಭೂಮಿಯಂತಹ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಅಸ್ಮಿತೆಯ ಹೆಜ್ಜೆ ಮೂಡಿಸಿರುವ ಕಂನಾಡಿಗಾ ನಾರಾಯಣರವರ ಮತ್ತೊಂದು ನೂತನ ಕಾದಂಬರಿಯೇ ಮಹಾವೃಕ್ಷ. ಕಳೆದ ವರ್ಷ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಓದುಗರ ಅಪಾರ ಮೆಚ್ಚುಗೆ ಪಡೆದುಕೊಂಡAತಹ ಧಾರಾವಾಹಿ ಈಗ ಕಾದಂಬರಿ ರೂಪದಲ್ಲಿ ಪ್ರಕಟಗೊಂಡಿದೆ.

ಆರಂಭದಿಂದಲೇ ವಿಶೇಷ ಎನ್ನಬಹುದಾದ ವಿಷಯ ವಸ್ತುಗಳನ್ನು ಆಯ್ದುಕೊಂಡು ಅದಕ್ಕೆ ತಮ್ಮದೆ ಶೈಲಿಯ ವೈಶಿಷ್ಟತೆಯಿಂದ ಓದುಗರನ್ನು ಸೆಳೆಯುವ ರೀತಿಯಲ್ಲಿ ಬರೆಯಬಲ್ಲ ಕೆಲವೇ ಕೆಲವು ಕಾದಂಬರಿಕಾರರಲ್ಲಿ ಇವರು ಒಬ್ಬರು. ಅದೂ ಮಹಾವೃಕ್ಷದ ಕಾದಂಬರಿಗೂ ಮುಂದುವರೆದಿರುವದು ವಾಚಕರಿಗೆ ದೃಗ್ಗೋಚರವಾಗುವ ಸಂಗತಿ. ಏಕೆಂದರೆ, ಒಂದು ಜೀವಿತ ಮರದ ವಿವಿಧ ಕಾಲಘಟ್ಟದಲ್ಲಿ ನಡೆಯುವ ಘಟನೆಗಳು ಹಾಗೂ ಜೀವನಾಂತ್ಯದ ಕಥಾನಕವನ್ನು ಮರದ ಆತ್ಮ ವೃತ್ತಾಂತದ ರೂಪದಲ್ಲಿ ಹೇಳಿ ಕಥಾನಕವು ಓದುಗನ ಭಾವಭಿತ್ತಿಯಲ್ಲಿ ಸುರುಳಿ ಸುರುಳಿಯಾಗಿ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕೃತಿ ಹಾಗೂ ಸಂಪೂರ್ಣ ವೃಕ್ಷದ ಹಿನ್ನೆಲೆಯ ಕಾದಂಬರಿಗೆ ಪರಿಸರ ತಜ್ಞ ನಾಗೇಶ ಹೆಗಡೆಯವರ ಜೀವಪ್ರಜ್ಞೆಯ ನಿವೇದನೆಯ ಮುನ್ನುಡಿಯು ಮಹಾವೃಕ್ಷಕ್ಕೆ ಇನ್ನಷ್ಟು ಹಸಿರನ್ನು ಮೂಡಿಸಿದೆ. ಹೆಗಡೆಯವರು ಮುನ್ನುಡಿಯಲ್ಲಿ ಹೇಳುತ್ತಾ ಮಹಾವೃಕ್ಷ ಒಂದು ಅಶ್ವತ್ಥ ಮರದ ಕಥಾನಕವೂ ಹೌದು, ಇಡೀ ಭೂಮಿಯ ಜೀವಜಾಲವನ್ನು ಪೊರೆಯುವ ಪಂಚಭೂತಗಳ ಕಥನವೂ ಹೌದು ಎಂಬ ಮಾತಿನಲ್ಲಿಯೇ ಮಹಾವೃಕ್ಷದ ಮಹತ್ತತೆ ಕಂಡುಬರುವದಲ್ಲದೆ, ಕಾದಂಬರಿಕಾರರು ಮೂರು ಸಾವಿರ ವರ್ಷಗಳವರೆಗೂ ಬದುಕಿರಬಲ್ಲ ಅರಳಿಮರದ ಮೂಲಕವೇ ಮನುಕುಲದ ಕತೆಯನ್ನು ಹೇಳಲು ಹೊರಟಿರುವುದು ಸಹಜ ಎಂದು ಕಾದಂಬರಿಕಾರರ ಕಥಾನಕದ ನಿಲುವನ್ನು ಹೇಳುತ್ತಾ ಪ್ರಕೃತಿ, ಜೀವಜಾಲದ ಬಗ್ಗೆ ವಿಸ್ತೃತವಾಗಿ ಮುನ್ನುಡಿಯಲ್ಲಿ ಹೇಳಿ ಕಾದಂಬರಿಗೊಂದು ಮೆರುಗನ್ನು ನೀಡಿದ್ದಾರೆ.

ಕಂನಾಡಿಗಾ ನಾರಾಯಣ ಅವರು ಕಾದಂಬರಿಯಲ್ಲಿ ಸುಮಾರು ಐದುನೂರಾ ಇಪ್ಪತ್ತು ವರ್ಷಗಳ ಚರಿತ್ರೆಯನ್ನು ತನ್ನ ಒಡಲಲಿಟ್ಟುಕೊಂಡು ಅಂದಾಜು ಐವತ್ತು ದಶಕಗಳ ಕಾಲ ನಿರಂತರವಾಗಿ ಅಶ್ವತ್ಥ ವೃಕ್ಷವೊಂದು ತನ್ನ ಸುತ್ತಮುತ್ತಲೂ ಜರುಗಿದಂತಹ ಘಟನೆಗಳನ್ನು ತನ್ನ ಆತ್ಮ ವೃತ್ತಾಂತ ರೂಪದಲ್ಲಿ ಹೇಳುತ್ತಾ ಸಾಗುವ ಪರಿಯೆ ಅನನ್ಯವಾದುದು ಹಾಗೂ ತಾಜಾತನದಿಂದ ಕೂಡಿದುದು.

ಫ್ರೈ ಓವರ್ ನಿರ್ಮಾಣಕ್ಕಾಗಿ ಬೃಹತ್ ಅರಳೆಮರವನ್ನು ಕಡಿಯುವ ದೃಶ್ಯದಿಂದ ತೆರೆದುಕೊಳ್ಳುವ ಕತೆ, ತನ್ನನ್ನು ಕಡಿಯುತ್ತಾರಲ್ಲವೆಂದು ತಿಳಿದ ಮರ ತಾನು ಸ್ಥಾವರವಾಗುವದರ ಬದಲು ಜಂಗಮವಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲ ಎಂದು ಆಲೋಚಿಸುವುದು ಹಾಗೂ ಕಡಿಯುವದರಿಂದ ತಪ್ಪಸಿಕೊಳ್ಳಲಾಗದ ಮರದ ನಿಸ್ಸಹಾಯಕತೆಯನ್ನು ಬಿಂಬಿಸುವುದು ನಿಜಕ್ಕೂ ಓದುಗಗನ್ನು ಆಯಸ್ಕಾಂತೀಯ ಗುಣದಂತೆ ಹಿಡಿದಿಡುತ್ತದೆ. ಬಲವಿದ್ದವನು ಮಾತ್ರ ಬದುಕುಳಿಯುತ್ತಾನೆ ಎಂಬ ಅರಣ್ಯ ಶಾಸನ ಮತ್ತೇ ಜಾರಿಗೆ ಬಂದಿರಬೇಕು, ಹಾಗಾದರೆ ಬಲವಿಲ್ಲದವನ ಕತೆ ಏನು, ಅಂಥವನಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸುವರಾರು..?

ಕಾದಂಬರಿಯಲ್ಲಿ ಕನ್ನಡ ನಾಡಲ್ಲಿ ಸುವರ್ಣಯುಗ ಬರೆದಂತಹ ವಿಜಯನಗರ ದೊರೆ ಶ್ರೀ ಕೃಷ್ಣದೇವರಾಯನ ಕಾಲದ ವೈಭವ ಹಾಗೂ ಸಿರಿವಂತಿಕೆಯ ಬಣ್ಣನೆ ಮರವು ಮಾತಿನಲ್ಲಿ ಕೇಳುವುದೆ ಆಹ್ಲಾದಕರ ಹಾಗೂ ವಿನೂತನವೆನಿಸುತ್ತದೆ. ಅಲ್ಲದೆ ಕನ್ನಡ ನಾಡಿನಲ್ಲಿ ಮನೆ ಮಾತಾದ ಕತೆ ಧರಣ ಮಂಡಲ ಮಧ್ಯದೊಳಗೆ ಹಾಡಿನ “ಪುಣ್ಯಕೋಟಿ” ಕತೆಯನ್ನು ಕಾಳಿಂಗ ಮತ್ತು ತುಂಗೆಯರ ಕತೆಯಾಗಿ ಬಂದಿರುವುದು ಕಾದಂಬರಿಯ ಓಘ ಹೆಚ್ಚುವಂತೆ ಮಾಡುವಲ್ಲಿ ಹಾಗೂ ಮೂಲ ಕತೆಗೆ ಬೇರೆ ತೆರನಾದ ಕಥಾಸ್ಪರ್ಶ ನೀಡಿರುವುದು ಕಾದಂಬರಿಕಾರರ ಬರವಣ ಗೆಯ ಕಸುಬುದಾರಿಕೆಯನ್ನು ತೋರುತ್ತದೆ. ಇದರ ಜೊತೆಗೆ ಮಹಾವೃಕ್ಷದೊಂದಿಗೆ ಬೇವಿನ ಮರವನ್ನು ಗಂಟು ಹಾಕಿ ಅನೇಕ ಸ್ವಾರಸ್ಯಕರ ಘಟನೆಗೆ ಕಾರಣವಾಗುವುದು ಕೂಡಾ ಕತೆಯ ಒಟ್ಟಂದಕ್ಕೆ ಮೆರಗನ್ನು ತರುತ್ತದೆಯಲ್ಲದೆ ಕತೆಯ ಓಘವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುವ ಕೈ ಚಳಕ ಕಾಣುತ್ತದೆ.

ಇವಲ್ಲದೆ ಗಾಂಧಿ ದಂಪತಿಗಳ ಆಗಮನ, ಅವರನ್ನು ಭೇಟಿ ಮಾಡುವ ಅಭಿನವ ಗಾಂಧಿ ಮುದ್ದು ವೀರಪ್ಪನ ಪ್ರಸಂಗ, ಕೆಳದಿಯ “ಶಿಸ್ತು”ವಿನ ಶಿವಪ್ಪ ನಾಯಕನ ಪ್ರಸ್ತಾಪ, ಮಠದ ವರ್ಣನೆ, ಕಾಳಿಂಗನ ವಂಶದ ಸಿನಿಮಾ ನಟ ಅಮೋಘ ವರ್ಷ, ವೃಕ್ಷ ಅಕಾಡೆಮಿಯ ಪ್ರಶಾಂತ ನಾಯಕ, ನಾಟಿ ವೈದ್ಯ ಗುರುಪಾದಪ್ಪ ಹೀಗೆ ವೈವಿಧ್ಯಮಯ ಪಾತ್ರಗಳ ಉಪಕತೆಗಳ ಮೂಲಕ ಕಟ್ಟಿ ಕೊಟ್ಟಿರುವುದು ನಿಜಕ್ಕೂ ಕತೆಯನ್ನು ಲೀಲಾಜಾಲವಾಗಿ ಓದಿಸಿಕೊಂಡು ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಐನೂರು ಚಿಲ್ಲರೆ ವರ್ಷಗಳ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆಯೆ ವಿನಾ ಒಂದೇ ಒಂದು ಅಪರಾಧವಾಗಲಿ, ಕೊಲೆಯಾಗಲಿ ನನ್ನ ಬಳಿ ಸುಳಿಯದಂತೆ ನೋಡಿಕೊಂಡಿದ್ದೇನೆ ಎನ್ನುವ ಮರದ ಮಾತಿನ ಮೂಲಕ ಮಾನವನ ಪಾಪ ಕೃತ್ಯಗಳ ಬಗ್ಗೆ ಅನುಸಂಧಾನಕ್ಕಿಳಿದು ಜಿಜ್ಞಾಸೆಗೆ ತೊಡಗುವಂತೆ ಮಾಡುತ್ತಾರೆ.

ಏನೇ ಆಗಲಿ ಇನ್ನಷ್ಟು ದಿನ ಬದುಕಬೇಕೆನ್ನುವ ಮನುಷ್ಯನಿಗೆ ಮರವು ತನ್ನ ಉಳುವಿಗಾಗಿ ಹೋರಾಡುವ ಬದಲು ತಟಸ್ಥನಾಗಿ ಉಳಿಯಲು ನಿರ್ಧರಿಸಿ ಸಾಕಷ್ಟು ವಯಸ್ಸು ಆಗಿರುವದರಿಂದ ಇನ್ನೂ ಬದುಕಬೇಕೆನ್ನುವುದು ಸ್ವಾರ್ಥದ ಪರಮಾವಧಿ ಆಗುವದಿಲ್ಲವೇ ಎಂದು ಕಲ ಜೀವಿಗಳಿಗೂ ಜೀವವಾಯು ನೀಡುವ ಮರವೇ ಹೇಳುವಾಗ ಜೀವನಪೂರ್ತಿ ಕೋಪ, ಜಗಳ,ಕದನ ಹೊಡೆದಾಟದಲ್ಲಿಯೇ ಕಾಲ ಕಳೆಯುವ ಮನುಷ್ಯ ಇನ್ನೂ ಎಷ್ಟು ಸಾಧ್ಯವೋ ಅಷ್ಟು ದಿನ ಬದುಕಬೇಕೆನ್ನುವ ಇರಾದೆ ಇಟ್ಟುಕೊಂಡ ಮನುಷ್ಯನ ಸ್ವಾರ್ಥದ ಪರಮಾವಧಿಯನ್ನು ಧಿಕ್ಕರಿಸುವದಲ್ಲದೆ ಬೇರೆನಲ್ಲವೆಂದೆನಿಸುತ್ತದೆ.

ಈ ಕಾಡಿನಲ್ಲಿ ಹುಟ್ಟಿದಾಗಿನಿಂದ ಹಿಡಿದು ಈವರೆಗಿನ ಸುಮಾರು ಐನೂರು ವರ್ಷಗಳವರೆಗಿನ ಅನುಭವದಲ್ಲಿ ನಾನು ಕಂಡ ಅತ್ಯಂತ ಅಪಾಯಕಾರಿ ಪ್ರಾಣ ಅಂತ ಯಾವದಾದರೂ ಭೂಮಿಯ ಮೇಲೆ ಇದ್ದರೆ ಅದು ಮನುಷ್ಯನೇ ಎನ್ನುವ ಮರದ ಮಾತು ಮನುಷ್ಯನ ಕ್ರೂರತೆ ಹಾಗೂ ಆತನ ವ್ಯಗ್ರತೆ ತೋರಿಸುತ್ತದೆ.

ಮನುಷ್ಯನ ಮನಸನ್ನು, ಅವನ ಮೆದುಳನ್ನೂ ಅಭ್ಯಾಸ ಮಾಡುತ್ತಾ ಬಂದಿದ್ದೇನೆ. ಆತ ಆ ಕಾಡುಪ್ರಾಣಿಗಿಂತಲೂ ಕೀಳು ಎನ್ನುವ ಮಾತು ಮನುಷ್ಯನ ಹೇಯ ಹಾಗೂ ತುಚ್ಚ ಗುಣವನ್ನು ಅನಾವರಣಗೊಳಿಸುತ್ತದೆ.

ಬೃಹದಾಕಾರದ ಅಶ್ವತ್ಥ ಮರವನ್ನು ರಸ್ತೆ ಹಾಗೂ ಫ್ರೈ ಓವರ್ ನಿರ್ಮಾಣಕ್ಕಾಗಿ ಅದನ್ನು ಕಡಿಯಲು ಮುಂದಾದಾಗ ಪರಿಸರವಾದಿಗಳ ವಿರೋಧ, ಅರಣ್ಯ ಪ್ರೇಮಿಗಳ ವಿರೋಧ ಎದುರಿಸಬೇಕಾದಂತಹ ಪರಿಸ್ಥಿತಿ ಬಂದಾಗ ಅವರಿಗೆ ಅವಕಾಶವಾಗಿ ಬರುವುದು ಕರೋನಾ ಕಾಲಘಟ್ಟದ ಲಾಕ್ ಡೌನ್. ಅಂತಹ ವೇಳೆಯಲ್ಲಿ ಯಾರೂ ಮರ ಕಡಿಯಲು ವಿರೋಧಿಸುವ ಚಳುವಳಿಯಾಗಲಿ ಅಥವಾ ಮುಷ್ಕರವನ್ನಾಗಲಿ ಮಾಡಿ ವಿರೋಧಿಸಲು ಅವಕಾಶ ಇಲ್ಲದಿದ್ದಾಗ ಅದೇ ವೇಳೆಯಲ್ಲಿಯೆ ಮಹಾವೃಕ್ಷಕ್ಕೆ ಆಧುನಿಕ ತಾಂತ್ರಿಕತೆ ಬಳಸಿ ಅದನ್ನು ಬುಡಮೇಲು ಮಾಡುವ ದುಷ್ಟಕೂಟದ ಕುತ್ರಂತ್ರದ ಕುಕ್ರೃತ್ಯದ ಮೃಗೀಯತೆಗೆ ಓದುಗನ ಮನ ಕಲಕದೆ ಇರದು. ಇತಿಹಾಸದ ಪುಟಗಳನ್ನು ತೆರೆದು, ಪ್ರಸ್ತುತ ಕಾಲಘಟ್ಟಕೂ ಸಮನ್ವಯಗೊಳಿಸಿ ಬರೆದ ಕಾದಂಬರಿ ಮನಕ್ಕೆ ತಟ್ಟುತ್ತದೆ. ಯಾಕೆಂದರೆ, ಇಲ್ಲಿ ಕೇವಲ ಒಂದು ಮರದ ಅಂತ್ಯ ಇರದೆ ಒಂದು ಸಂಸ್ಕೃತಿಯ, ಜನಾಂಗದ, ಪರಿಸರದ ನೋವಿನ ಕೂಗಿದೆ.

ಐದು ನೂರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾದ ಮರದ ಅವಸಾನದಲ್ಲಿ ರಾಜಕೀಯ ಸೂಕ್ಷ್ಮ, ಸಂಸ್ಕೃತಿಯ ತಲ್ಲಣ ಹಾಗೂ ಪರಿಸರದ ಸಂವೇದನೆಯು ಕಾದಂಬರಿಗೆ ಹೆಚ್ಚಿನ ತೂಕವನ್ನು ನೀಡುವ ಪೂರಕ ಸಾಮಗ್ರಿಗಳಾಗಿವೆ.

ಇಲ್ಲಿ ವಾಸ್ತವವಾಗಿ ಮರವೊಂದರ ಅಂತ್ಯವಿದ್ದರೂ ಅದರ ಜೊತೆಗೂಡೆಯೆ ಪ್ರಕೃತಿಯ ಮೇಲೆ ಅನೂಚಾನವಾಗಿ ನಡೆದು ಬರುತ್ತಿರುವ ಮಾನವನ ದೌರ್ಜನ್ಯವಿದೆ, ಅಟ್ಟಹಾಸದ ಪರಿಣಾಮವಾಗಿ ಪ್ರಕೃತಿಯ ಆಕ್ರಂದನದ ನೋನಿನ ಚಿತ್ರಣವಿದೆ. ಪರಂಪರಾಗತವಾಗಿ ನಿಸರ್ಗವು ಮನುಕುಲಕ್ಕೆ ತನ್ನದೇ ಆದಂತಹ ಅಗಾಧ ಕೊಡುಗೆ ನೀಡುತಲಿದ್ದರೂ, ಜೊತೆಗೆ ಮಾನವನ ಬದುಕಿಗೆ ನಿಸರ್ಗ ಅನಿವಾರ್ಯ ಎಂದು ಗೊತ್ತಿದ್ದು ನಿಸರ್ಗದ ಮೇಲಿನ ಕ್ರೂರತನ ಇತಿಹಾಸದಲ್ಲಿ ನಿರಂತರವಾಗಿ ದಾಖಲಾಗುತ್ತಿದೆ ಎನ್ನುವದನ್ನು ಕಾದಂಬರಿಯು ವಿಸ್ತೃತವಾಗಿ ಮಾನವನ ಕ್ರೌರ್ಯದ ಅವಕುಂಠನ ತೆರೆದು ಓದುಗರ ಮುಂದೆ ಅನಾವರಣಗೊಳಿಸಿದೆ.

ಮಹಾವೃಕ್ಷವು ಮಹಾಪ್ರಸ್ಥಾನ ವೇಳೆ, ಒಂದು ವೇಳೆ ಬೇರುಗಳು ಮೊಳೆತಲ್ಲಿ, ಕೊರಡು ಕೊನರಿ ಮರುಜೀವ ಬಂದಲ್ಲಿ ಹೊಸ ಹುರುಪಿನೊಂದಿಗೆ, ಹೊಸ ಕಥನದೊಂದಿಗೆ ನಿಮ್ಮ ಮುಂದೆ ಮತ್ತೇ ಬರುತ್ತೇನೆ..ಬಂದು ಮತ್ತೊಂದು ಹೊಸ ಕತೆ ಹೇಳುತ್ತೇನೆ ಎನ್ನುವ ಮರದ ಆಶಾವಾದಿತನ ನಿಜಕ್ಕೂ ಕತೆಯ ಅಂತ್ಯಕ್ಕೆ ಧನಾತ್ಮಕ ಮೌಲ್ಯವನ್ನು ನೀಡುವುದರ ಜೊತೆಗೆ ಚಿಕ್ಕ ಚಿಕ್ಕ ಘಟನೆಗಳಿಗೂ ಪಲಾಯನ ವಾದ ಮಾಡುವ ಮನುಷ್ಯನಿಗೆ ಧೈರ್ಯದ ನಡೆ ಹಾಗೂ ತಿಳುವಳಿಕೆಯ ಪಾಠದ ಬೋಧನೆಯನ್ನು ಮಾಡುತ್ತಿದೆಯೇನೋ ಎಂದೆನೆಸುತ್ತದೆ.

ಈ ಕಾರಣದಿಂದಲೇ ಕಾದಂಬರಿಯಲ್ಲಿ ಚಿತ್ರಿಸಿದ ಹಲವಾರು ಘಟನೆಗಳು ಪ್ರತಿಯೊಬ್ಬ ಓದುಗನ ಜೀವನದ ಘಟನೆಗಳಿಗೆ ಹತ್ತಿರವಾಗಿ ಆಪ್ಯಾಯಮಾನವೆನಿಸಿ, ಮಹಾವೃಕ್ಷ ಹೃದಯಕ್ಕೆ ಹತ್ತಿರವಾಗುವ ಕಾದಂಬರಿಯೆನಿಸುತ್ತದೆ.

**

ಮಲ್ಲಿಕಾರ್ಜುನ ಶೆಲ್ಲಿಕೇರಿ ಪರಿಚಯ:

ಮಲ್ಲಿಕಾರ್ಜುನ ಶೆಲ್ಲಿಕೇರಿ, ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಯಂಡಿಗೇರಿ ಗ್ರಾಮದವನಾಗಿದ್ದು, ಮೂಲತಃ 1998 ರ ಕೆ.ಎ.ಎಸ್. ಬ್ಯಾಚಿನ ಹಿರಿಯ ಅಧಿಕಾರಿಯಾಗಿದ್ದು, ಪ್ರಸ್ತುತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆಯಲ್ಲಿ ಸಿ.ಎ.ಓ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ.ಹಲವಾರು ಕಥೆ, ಕವನ, ನಗೆಬರಹ,ಲೇಖನಗಳು ಮಯೂರ, ಕರ್ಮವೀರ, ತುಷಾರ, ಚಿಂತನಶೀಲ ಸಮಾಜಮುಖಿ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ.

ಕಂನಾಡಿಗಾ ನಾರಾಯಣ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಮಹಾವೃಕ್ಷ (ಕಾದಂಬರಿ) ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...