ಮೌನವೇ ವಿಸ್ತಾರವಾಗಿ ಹರಡಿಕೊಂಡಿರುವ ‘ಹಿರೋಶಿಮಾದ ಹೂವುಗಳು’


ಕಾದಂಬರಿ ಸೀಮಿತ ಕೌಟುಂಬಿಕ ಚೌಕಟ್ಟಿನ ನೆಲೆಯಿಂದ ಆರಂಭಗೊಂಡು ಜನಸಮುದಾಯದ ದನಿಯಾಗಿ ವಿಸ್ತಾರತೆಯನ್ನು ಪಡೆದು ನಿಂತುಬಿಡುತ್ತದೆ. ಕಾದಂಬರಿಯಲ್ಲಿ ಸೃಷ್ಟಿಮಾಡಿಕೊಂಡಿರುವ ಈ ತಂತ್ರದಿಂದ ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಗಳು ಮನುಜಕುಲದ ಮೂಲ ಆಶಯಗಳಾದ ಶಾಂತಿ, ಅಹಿಂಸೆಗಳ ಆವಿರ್ಭಾವಕ್ಕೆ ಸಶಕ್ತವಾದ ಹಾದಿಯನ್ನು ಮಾಡಿಕೊಟ್ಟಿದೆ ಎನ್ನುತ್ತಾರೆ ಲೇಖಕ ಆರ್. ದಿಲೀಪ್ ಕುಮಾರ್. ಲೇಖಕ, ಅನುವಾದಕ ವಿಜಯ್ ನಾಗ್‌ ಜಿ ಅವರ ಹಿರೋಶಿಮಾದ ಹೂವುಗಳು ಕೃತಿಗೆ ಅವರು ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಹಿರೋಶಿಮಾದ ಹೂವುಗಳು : ಕೆಲವು ಮಾತುಗಳು
ಈ ಮೌನಕ್ಕೊಂದು ಅರ್ಥವಿದೆ. ಕೆಲವೊಮ್ಮೆ ಅರ್ಥದ ಜೊತೆಗೆ ಅಪಾರ್ಥವೂ, ಅತೀ ಅರ್ಥವೂ ಮೌನಕ್ಕೆ ಹುಟ್ಟಿಕೊಂಡು ಬಿಡುತ್ತವೆ. ಈ ಕಾದಂಬರಿಯ ಪೂರ್ಣ ಮೌನವೇ ವಿಸ್ತಾರವಾಗಿ ಹರಡಿದೆ ಅಥವಾ ಇರುವ ಅಲ್ಪಸ್ವಲ್ಪ ಮಾತುಗಳೇ ಮೌನಕ್ಕೆ ಹಾದಿಮಾಡಿಕೊಡುತ್ತಿವೆ. ಮಾತು-ಮೌನಗಳ ಘರ್ಷಣೆಯ ಆಂತರ್ಯದಲ್ಲಿ ಮೌನದ ಹಿಂದಿನ ಅರ್ಥ ಛಾಯೆಗಳು ಬಿಡಿಸಿಕೊಳ್ಳುತ್ತಾ ಸಂವಾದಕ್ಕೊಂದು ಆಹ್ವಾನದ ಹಾದಿಯನ್ನು ’ಹಿರೋಶಿಮಾದ ಹೂವುಗಳು’ ಕಾದಂಬರಿ ಮಾಡಿಕೊಡುತ್ತಿದೆ. ವ್ಯವಸ್ಥಿತವಾಗಿ ನಡೆದ ಆಘಾತಗಳು ಉಂಟುಮಾಡಿರುವ ನೋವು, ಹಿಂಸೆ, ಮೌನ, ಪ್ರತಿಭಟನೆಗಳಂಥ ತೀವ್ರ ತೆರನಾದ ಭಾವಗಳು ಇಲ್ಲಿ ಬಯಲಾಗಿವೆ. ಹೀಗೆ ಬೇರೆ ರೀತಿಯ ಭಾವಗಳು ಮೌನದಲ್ಲಿ ಉದ್ಭವಿಸುತ್ತವೆ, ಘಟಿಸುತ್ತವೆ. ಈ ಆಳದ ತುಮುಲಗಳ ಮೌನಕ್ಕೊಂದು ಮಾತಿನ ಭಾರದ ಅಗತ್ಯವಿದೆಯೇ ?

ಮನುಕುಲದ ಕ್ರೌರ್ಯಕ್ಕೆ ಸಾಕ್ಷಿಯಾದ ಅಣು ಸ್ಫೋಟದಿಂದ ಉಂಟಾಗಿರುವ ಮಾಯದ ಗಾಯಗಳ ನೆನಪುಗಳು ಕಲಾತ್ಮಕ ಹೊದಿಕೆಯನ್ನು ಹೊದ್ದು ಈ ಕಾದಂಬರಿಯ ಪೂರ್ಣ ಆವರಿಸಿವೆ. ಭವದ ಘೋರ ಅನುಭವಗಳು ಭಾವ ಜಗತ್ತಿನ ಸ್ಪರ್ಶಕ್ಕೆ ಸಿಕ್ಕು ಕಲೆಯ ಹೊದಿಕೆಯಲ್ಲಿ ಹೊರಬಂದೊಡನೆ, ಆಸ್ವಾದಿಸುವಂತೆ ಮಾಡುವ ಭಾವ ಜಗತ್ತು, ವಾಸ್ತವವದಲ್ಲಿ ಕಾಣುವಾಗ ಕೇವಲ ಭಾವ ಒಂದೇ ಅಗಿರುವುದಿಲ್ಲ ಭವದ ಘೋರತೆ ಕಾಡಿಬಿಟ್ಟಿರುತ್ತದೆ. ಈ ವಾಸ್ತವ ಮತ್ತು ಭಾವ ಜಗತ್ತುಗಳ ಸಶಕ್ತ ಸಂಯೋಜನೆ ಈ ಕಾದಂಬರಿಯ ಮಹತ್ತನ್ನು ಸಾರುತ್ತಿದೆ. ಇದು ಒಳ ಹೊರಗು ಏಕತ್ರಗೊಳ್ಳುವ ಸ್ಥಿತಿ. ಈ ಏಕತ್ರದಲ್ಲಿ ಅಭಿವ್ಯಕ್ತಿಗೊಂಡ ಈ ಕಾದಂಬರಿಯ ಆಳದಲ್ಲಿ ದುರಂತದ ನೆನಪುಗಳ ಸುರಳಿ ಬಿಚ್ಚುತ್ತಲೇ, ಆ ಅಪಾಯಗಳು ಮತ್ತೊಮ್ಮೆ ಮರುಕಳಿಸದಂತೆ ಕಲಾತ್ಮಕ ಹೊದಿಕೆ ಹೊದ್ದು ಬಂದಿರುವ ಈ ಕಾದಂಬರಿ ಎಚ್ಚರಿಸುವ ಕಾರ್ಯ ಮಾಡುತ್ತಿದೆ. ಮತ್ತೆಂದೂ ಅಂತಹ ಅನಾಹುತಗಳಿಗೆ ಮನುಕುಲ ಹಾದಿ ಮಾಡಿಕೊಡದಂತೆ ಓದುಗನೊಳಗೆ ಎಚ್ಚರ’ ಉಂಟುಮಾಡುವುದೇ ‘ಹಿರೋಷಿಮಾದ ಹೂವುಗಳು’ ಕಾದಂಬರಿಯ ಮೂಲ ಆಶಯವಾಗಿದೆ. ಇದೊಂದು ರೀತಿಯಲ್ಲಿ ನೇತ್ಯಾತ್ಮಕ ಅನುಸಂಧಾನದ ಮಾದರಿ. ಯಾವುದನ್ನು ಮಾಡಬಾರದೋ ಅಂತಹದ್ದರಿಂದ ಘಟಿಸಿರುವ ಸಮಸ್ಯೆಯನ್ನು ಪದರಪದರಗಳಾಗಿ ಬಿಡಿಸುತ್ತಲೇ, ಏಕಕಾಲದಲ್ಲಿ ಭಯವನ್ನು ಉಂಟುಮಾಡಿ ಆ ಅಕಾರ್ಯದಿಂದ ದೂರ ಉಳಿಯುವಂತೆ ಮಾಡುತ್ತದೆ. ಕಾದಂಬರಿಕಾರ್ತಿ ಈ ಸಾಮಾನ್ಯ ಹಾದಿಯಲ್ಲಿ ಕ್ರಮಿಸಿ ಅಸಾಮಾನ್ಯ ಭಾವಗಳನ್ನು ಓದುಗನ ಒಳಗೆ ಉಂಟುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಮತಿ ಎದಿತಾ ಮೋರಿಸ್ ಜಗತ್ತಿನ ಬಹುಮುಖ್ಯ ಕಾದಂಬರಿಕಾರ್ತಿಯರಲ್ಲಿ ಒಬ್ಬರೆಂದು ಪ್ರಖ್ಯಾತರಾಗಿದ್ದಾರೆ. ಅದೂ ಪ್ರಖ್ಯಾತವಾದ ‘ಫ್ಲವರ್ಸ್ ಆಫ್ ಹಿರೋಶಿಮಾ’ ಕಾದಂಬರಿಯ ಮೂಲಕ. ಜಗತ್ತಿನ ೩೯ ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿಯು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ.ವಿಜಯ್ ನಾಗ್ ಅವರಿಂದ ಬರುತ್ತಿರುವುದು ಬಹಳ ಸಂತೋಷದ ವಿಷಯ. ಅನುವಾದಿತ ಕಾದಂಬರಿಯಲ್ಲಿ ಭಾಷೆಯನ್ನು ನವಿರುತನದಿಂದ ದುಡಿಸಿಕೊಂಡಿರುವ ಕಾರಣದಿಂದ ಡಾ. ವಿಜಯ್ ನಾಗ್‌ರಿಗೆ. ಮೊದಲ ಧನ್ಯವಾದಗಳು. ಭಾವ ಮತ್ತು ವಾಸ್ತವಗಳ ಮುಖಾಮುಖಿಯಲ್ಲಿ ಭಾಷೆಯನ್ನು ದುಡಿಸಿಕೊಳ್ಳುವಾಗ ಅನುವಾದಕನೊಬ್ಬ ಬಳಸುವ ಭಾಷೆ, ಬಂಧಗಳು ಸಡಿಲಗೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಆ ಅಪಾಯದಿಂದ ಭಾಷಾಂತರಕಾರರು ಹೊರಗಡೆ ಇದ್ದಾರೆ, ಮೂಲ ಕೃತಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎನ್ನುವ ಕಾರಣದಿಂದ ಮೊದಲು ಸಂತಸ ಪಡಬೇಕು. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಕಲಾಕೃತಿಯೊಂದು ಬರುವಾಗ, ಮೂಲ ಕಲಾಕೃತಿಯಲ್ಲಿ ಕಲಾತ್ಮಕ ವಿವರಣೆಗಳೇ ಹೆಚ್ಚಾಗಿದ್ದಾಗ, ಭಾಷಾಂತರಕಾರನಿಗೆ ದೊಡ್ಡ ತೊಡಕಾಗುತ್ತದೆ. ಓದಿಸಿಕೊಳ್ಳುವ ಗುಣವನ್ನು ಕಳೆದುಕೊಂಡು ಕೇವಲ ’ರಿಟರಿಕ್’ ಆಗಿಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಅಪಾಯದಿಂದ ಡಾ. ವಿಜಯ ನಾಗ್ ದೂರವಾಗಿ ಕಾದಂಬರಿಯನ್ನು ಯಶಸ್ವಿಯಾಗಿ ನನ್ನ ಭಾಷೆಯಲ್ಲಿ ಓದಿಸಿಕೊಂಡು ಹೋಗುವಂತೆ ಸಹ್ಯ ಮಾಡಿದ್ದಾರೆ.

ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ ನೋವು, ಹತಾಶೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಾದಂಬರಿಗಳ ಪಟ್ಟಿ ಹೇಗೆ ದೊಡ್ಡದಿದೆಯೋ, ಹಾಗೆಯೇ ಮನುಷ್ಯ ಪ್ರಕೃತಿಯ ಮೇಲೆ, ಕೊನೆಗೆ ತನ್ನೊಡನೆ ಇರುವ ಮನುಷ್ಯನ ಮೇಲೆಯೇ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಹವಣಿಸಿ ಮಾಡಿಕೊಂಡ ಅಪಾಯಗಳ ಕುರಿತು ರಚನೆಯಾದ ಕಾದಂಬರಿಗಳ ಪಟ್ಟಿಯೂ ಅಷ್ಟೇ ಇದೆ. ’ಹಿರೋಶಿಮಾದ ಹೂವುಗಳು’ ಈ ಪಟ್ಟಿಗೆ ಬರುವ ಕಾದಂಬರಿ, ಮನುಜಕುಲ ಎದುರಿಸಿದ, ಇಂದೂ ಭಯದಲ್ಲೇ ಇರುವ ಬಹುದೊಡ್ಡ ಅಪಾಯಗಳು ಅಣುಬಾಂಬ್ ಮತ್ತು ಜೈವಿಕ ಅಸ್ತ್ರಗಳು, ಲಿಟಲ್ ಬಾಯ್ ಮತ್ತು ಫ್ಯಾಟ್ ಬಾಯ್ ಎಂಬೆರಡರಿಂದ ನಾಶವಾದ ಹಿರೋಶಿಮಾ ಮತ್ತು ನಾಗಾಸಾಕಿಗಳೆಂಬ ಅವಳಿ ಪಟ್ಟಣಗಳಲ್ಲಿ ಒಂದಾದ, ಹಿರೋಶಿಮಾ ನಗರದಲ್ಲಿನ ಒಂದು ಕುಟುಂಬಕ್ಕೆ ಒದಗಿದ ದುಃಸ್ಥಿತಿಯನ್ನು ಕೇಂದ್ರವಾಗುಳ್ಳ ಕಾದಂಬರಿಯಿದು. ಒಂದಿಡೀ ಭೂಭಾಗದ ಜನರ ವ್ಯಥೆಯನ್ನು ಕಾದಂಬರಿಯಲ್ಲಿ ಕಾಣಿಸದೆ, ಹಾಗೆ ಕಾಣಿಸಿ ಕಾದಂಬರಿಯ ಗಾತ್ರವನ್ನು ಹೆಚ್ಚು ಮಾಡದೇ, ಒಂದು ಕುಟುಂಬ ’ರೇಡಿಯೇಟ್’ಗೆ ಸಿಕ್ಕು ನರಳಿದ ಕಥೆ ಈ ಕಾದಂಬರಿಯ ವಸ್ತುವಾಗಿದೆ. ಗಾತ್ರದಲ್ಲಿ ಕಿರಿದಾದರೂ ಅದರ ಕಲಾತ್ಮಕತೆ, ಸಾರುತ್ತಿರುವ ಆಶಯಗಳಲ್ಲಿ ಹಿರಿದಾಗಿದೆ. ಕಾದಂಬರಿಯ ರಚನೆಗೆ ಮಾಡಿಕೊಂಡಿರುವ ವಸ್ತುವಿನ ಆಯ್ಕೆಯೇ ಶಕ್ತಿಯುತವಾಗಿದೆ ಹಾಗೆಯೇ ಮತ್ತೂ ಅಂತಹ ಅಪಾಯಗಳಿಂದ ದೂರವುಳಿಯುವಂತೆ ಓದುಗರನ್ನು ಆಲೋಚಿಸುವಂತೆ ಮಾಡುತ್ತಿದೆ.

ಕಾದಂಬರಿ ಸೀಮಿತ ಕೌಟುಂಬಿಕ ಚೌಕಟ್ಟಿನ ನೆಲೆಯಿಂದ ಆರಂಭಗೊಂಡು ಜನಸಮುದಾಯದ ದನಿಯಾಗಿ ವಿಸ್ತಾರತೆಯನ್ನು ಪಡೆದು ನಿಂತುಬಿಡುತ್ತದೆ. ಕಾದಂಬರಿಯಲ್ಲಿ ಸೃಷ್ಟಿಮಾಡಿಕೊಂಡಿರುವ ಈ ತಂತ್ರದಿಂದ ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಗಳು ಮನುಜಕುಲದ ಮೂಲ ಆಶಯಗಳಾದ ಶಾಂತಿ, ಅಹಿಂಸೆಗಳ ಆವಿರ್ಭಾವಕ್ಕೆ ಸಶಕ್ತವಾದ ಹಾದಿಯನ್ನು ಮಾಡಿಕೊಟ್ಟಿದೆ. ಕಾದಂಬರಿಯಲ್ಲಿನ ಪ್ರತಿಯೊಂದು ಭಾಗವೂ ಓದುಗನೊಳಗಿರುವ ಸುಪ್ತಭಾವಗಳನ್ನು ಕೆಣಕಿಬಿಡುವಷ್ಟು ಶಕ್ತಿಶಾಲಿಯಾಗಿವೆ. ಆರಂಭ, ಮಧ್ಯ, ಘರ್ಷಣೆ ಮತ್ತು ಅಂತ್ಯಗಳೆಂಬ ಸಾಮಾನ್ಯ ಕಾದಂಬರೀ ಸಂವಿಧಾನದಿಂದ ಮೊದಲ್ಗೊಂಡಂತೆ ಕಂಡರೂ, ವಸ್ತುವಿನ ಮೂಲಕ ಹೊರಸೂಸುವ ಕ್ರೌರ್ಯವನ್ನು ಕಾಣಿಸುವುದು, ನೋವನ್ನು ಮೆಲು ದನಿಯಲ್ಲಿ ಹೇಳುವುದು ಮತ್ತು ಮನುಕುಲ ಅದರಿಂದ ದೂರ ಉಳಿವಂತೆ ಮಾಡುವ ವಿನ್ಯಾಸದಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಈ ಕಾದಂಬರಿಯ ಮುಖ್ಯಪಾತ್ರದಲ್ಲಿ ಬಾಹ್ಯಘರ್ಷಣೆಯಿಂದ ಉಂಟಾದ ಕ್ರೌರ್ಯದ ಕಾರಣ ಪರಿಣಾಮಗಳನ್ನು ಮೌನ, ಸ್ವಗತಗಳ ರೂಪದಲ್ಲಿ ಹೆಣೆದಿರುವ ಕಾರಣದಿಂದ ಓದುಗರೊಡನೆ ಸಂವಾದಕ್ಕೆ ನಿಲ್ಲುತ್ತವೆ. ಕಾದಂಬರಿಯ ಪ್ರತಿಯೊಂದು ಭಾಗವೂ ಹದಿನಾಲ್ಕು ವರ್ಷಗಳ ಹಿಂದೆ ಉಂಟಾದ ಘರ್ಷಣೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಓದುಗನಿಗೆ ನೆನಪಿಸುತ್ತ, ಭೂತವನ್ನು ವರ್ತಮಾನದ ಮೇಲೆ ನಿಲ್ಲಿಸಿ ಜನಸಮುದಾಯದ ಮೇಲೆ ನಡೆದ ಕ್ರೌರ್ಯವನ್ನು ಕಾಣಿಸಲು ಮುಂದಾಗುತ್ತದೆ. ಕಾದಂಬರಿಯಲ್ಲಿ ಬರುವ ಮುಖ್ಯಪಾತ್ರವೊಂದರ ಜೊತೆಗೆ ನಿಲ್ಲುವ ಎರಡು ಪುರುಷ ಪಾತ್ರಗಳು (ಗಂಡ ಮತ್ತು ಸ್ನೇಹಿತ) ಈ ಅಪಾಯವನ್ನು ನೆನಪಿಸಿ ಕಥೆಯನ್ನು ಮುನ್ನಡೆಸುತ್ತಾರೆ. ‘ರೇಡಿಯೇಟ್’ಗೆ ಒಳಗಾದ ತಂಗಿ, ಸಾವು ಬದುಕುಗಳ ಕೊನೆಯ ಹಂತದಲ್ಲಿರುವ ಗಂಡ, ಅರ್ಧ ಬೆಂದು ಬದುಕಿರುವ ಸ್ನೇಹಿತ, ಇವರೆಲ್ಲರನ್ನೂ ಏಕಕಾಲದಲ್ಲಿ ಪೊರೆವ ’ಯುಕಾ ಸಾನ್’ ನ ಮೌನ, ತಲ್ಲಣ, ಸ್ವಗತಗಳು ಓದುಗನನ್ನು ಒಮ್ಮೆಲೇ ಬೆಚ್ಚಿ ಬೀಳಿಸುತ್ತವೆ.

ಈ ಕಾದಂಬರಿಯಲ್ಲಿನ ಕಥೆ ಮತ್ತು ವಿನ್ಯಾಸಗೊಂಡಿರುವ ಕ್ರಮವೇ ಬಹುದೊಡ್ಡ ಸತ್ಯವನ್ನು ಕಾಣಿಸಲು ಯಶಸ್ವಿಯಾಗಿದೆ. ಅಣುಸ್ಫೋಟವಾಗಿ ಹದಿನಾಲ್ಕು ವರ್ಷಗಳು ಕಳೆದ ಅನಂತರದ ಒಂದು ಪುಟ್ಟ ಸಂಸಾರವೊಂದು ಎದುರಿಸುವ ದೈಹಿಕ, ಮಾನಸಿಕ, ಸಾಮಾಜಿಕ ತುಮುಲಗಳ ಕಥೆಯಿದು. ದೇಶದ ಒಳಗಿನ ಜನಸಮುದಾಯವೊಂದು ‘ರೇಡಿಯೇಟ್’ಗೆ ಒಳಗಾದವರನ್ನು ಸಮಾಜದಿಂದ ಅಂಚಿಗೆ ತಳ್ಳಿದ ಮನಕಲುಕುವ ಘಟನೆಗಳ ನಿರೂಪಣೆ ಇದರಲ್ಲಿವೆ. ಆರ್ಥಿಕವಾಗಿ ಸಬಲವಲ್ಲದ ಕುಟುಂಬವೊಂದರಲ್ಲಿನ ಯಜಮಾನ ಅಣುಸ್ಫೋಟಕ್ಕೆ ಸಿಕ್ಕು ನರಳುವಾಗ ಆ ಕುಟುಂಬ ನಿರ್ವಹಣೆಯ ಯಜಮಾನಿಕೆ ಹೊತ್ತವಳು ಯುಕಾ ಸಾನ್. ಅವಳಿಗೆ ಇಬ್ಬರು ಪುಟ್ಟ ಮಕ್ಕಳು, ಒಬ್ಬಳು ಸುಂದರವಾದ ತಂಗಿ ಓಹಾತ್ತು. ಅಕ್ಕ ಪಕ್ಕದ ಮನೆಯವರು, ಸ್ನೇಹಿತರು, ಅಶಕ್ತರು, ಅಸಹಾಯಕರನ್ನು ಅಪಾರವಾಗಿ ಪ್ರೀತಿಸುವ ಯುಕಾ ಸಾನ್‌ಗೆ ಗಂಡನ ಸಾವು ಬದುಕಿನ ಹೋರಾಟದ ಬಗೆಗೆ ಅಪಾರ ದಿಗಿಲು. ಕುಟುಂಬ ನಿರ್ವಹಣೆಗೆ ಮನೆಯ ಕೋಣೆಯನ್ನು ಅಮೇರಿಕಾದ ಸ್ಯಾಮ್ ಎಂಬ ವ್ಯಕ್ತಿಗೆ ಬಾಡಿಗೆ ಕೊಡುತ್ತಾಳೆ. ವ್ಯವಹಾರಿಕ ಉದ್ದೇಶದಿಂದ ಬಂದವನು, ಕೊನೆಗೆ ಮನೆಯವನಂತೆಯೇ ಇವರೊಡನೆ ಇರಲು ಆರಂಭಿಸುತ್ತಾನೆ. ಇದು ಅಪಾಯವನ್ನು ಮಾಡಿದ ದೇಶದಿಂದ ಬಂದವನೂ, ಅಪಾಯಕ್ಕೊಳಗಾದವರ ಸ್ಥಿತಿಯನ್ನು ಕಂಡು ಮರುಗುವುದು ಕಾದಂಬರಿಗಾರ್ತಿ ಕಟ್ಟಿಕೊಟ್ಟಿರುವ ಕಾಣೆ, ಸ್ಯಾಮ್‌ನಿಗೆ ಯುಕಾಳ ತಂಗಿ ’ಓಹಾತ್ಸು’ ಮೇಲೆ ಪ್ರೀತಿ ಇರುವುದನ್ನು ಗಮನಿಸಿ, ಅವಳನ್ನು ವಿವಾಹವಾಗಿ ಈ ಕಷ್ಟ ಪರಿಸರದಿಂದ ಅವಳಾದರೂ ಆಚೆ ನಡೆಯಲಿ ಎಂಬ ಮಹತ್ತರವಾದ ಆಸೆ ಅಕ್ಕನದು. ಆದರೆ ತಂಗಿ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದು ಕೊನೆಗೆ ‘ರೇಡಿಯೇಟ್’ಗೆ ಒಳಗಾಗಿರುವವಳು ಮತ್ತು ಅಂತಹ ಕುಟುಂಬದವಳೆಂದು ತಿಳಿದು ವಿವಾಹದಿಂದಷ್ಟೇ ಅಲ್ಲದೇ ಸಮಾಜದಿಂದಲೇ ಕಾಣದಂತೆ ಮರೆಯಾಗುತ್ತಾಳೆ. ಯುಕಾಳ ಗಂಡನೂ ಕೊನೆಯುಸಿರೆಳೆಯುತ್ತಾನೆ. ಇದು ಒಟ್ಟಾರೆ ಈ ಕಾದಂಬರಿಯ ಕಥಾವಿವರ. ಪಾತ್ರ ಸಮಾಜದಿಂದ ಹೊರನಡೆಯುವುದನ್ನು, ಮತ್ತೊಂದು ಕೊನೆಯುಸಿರೆಳೆಯುವುದರೊಂದಿಗೆ ಕಾದಂಬರಿ ಕೊನೆಯಾಗುತ್ತದೆ. ಆದರೆ ನಿಜದಲ್ಲಿ ಕಾದಂಬರಿಯ ಆರಂಭ ಆ ಪಾತ್ರಗಳ ಹಿನ್ನೆಲೆಯಲ್ಲಿ ನಡೆಯುತ್ತದೆನ್ನುವುದು ಮುಖ್ಯ ಅಂಶವಾಗಿದೆ. ನರಳುತ್ತಾ ಇಲ್ಲೆ ಉಳಿವ ಯುಕಾ, ಸಾಯುವ ಅವಳ ಗಂಡನಿಗಿಂತ, ಸಮಾಜದಿಂದ ಬಹಿಷ್ಕೃತಳಾದ ಓಹಾತ್ತು ಓದುಗರನ್ನು ಕಾಡದೆ ಇರಳು. ಕಾದಂಬರಿಯ ಕೇಂದ್ರವೇ ಆಗಿಬಿಡುವಷ್ಟು ಓವಾತ್ಸು ಓದುಗರ ಭಾವಕೋಶಗಳನ್ನು ಕಾಡಿಬಿಡುತ್ತಾಳೆ.

ಈ ಕಾದಂಬರಿ ಆರಂಭವಾಗುವುದು, ಮುನ್ನಡೆಯುವುದು, ಕೊನೆಯಾಗುವುದು ಒಂದು ಬಹುದೊಡ್ಡ ರೂಪಕವಾದ ಪಂಜರದ ಒಳಗೆ ಬಂಧಿಯಾಗಿರುವ ಬುಲ್ ಬುಲ್ ಹಕ್ಕಿಯಿಂದ, ಇದು ಯುಕಾಳ ಕುಟುಂಬವನ್ನಷ್ಟೇ ಅಲ್ಲದೆ, ಆ ರೇಡಿಯೇಟ್‌ಗೆ ಒಳಗಾಗಿರುವ ಕುಟುಂಬಗಳ ಸಾಮಾಜಿಕ ಬದುಕನ್ನು ಶಕ್ತಿಪೂರ್ಣವಾಗಿ ಧ್ವನಿಸುತ್ತಿದೆ. ಈ ರೂಪಕದ ಮೂಲಕ ಹೊರಹೊಮ್ಮಿಸುವ ಧ್ವನಿಶಕ್ತಿ ಮತ್ತು ಓದುಗನೊಳಗೆ ಉಂಟುಮಾಡುವ ಮೌನ-ಸಂವಾದಗಳೇ ಕಾದಂಬರಿಯನ್ನು ಪೂರ್ಣವಾಗಿ ಓದುವಂತೆ ಪ್ರಚೋದಿಸುತ್ತದೆ. ಒಂಟಿಯಾಗಿ ನಿಲ್ಲುವ ಹೆಣ್ಣೊಬ್ಬಳ ಅಸಹಾಯಕತೆಯನ್ನು ಕಾದಂಬರಿ ಚಿತ್ರಿಸುತ್ತಿದೆ ಎನಿಸಿದರೂ, ಅವಳೊಳಗಿನ ಆಸ್ಮಸ್ಥೆರ್ಯ ಓದುಗರನ್ನು ಒಂದಷ್ಟು ಕ್ಷಣ ಬೆಚ್ಚಿ ಬೀಳಿಸುತ್ತದೆ. ಮೇಲ್ನೋಟಕ್ಕೆ ಇದೊಂದು ಭೂ ಭಾಗದ, ಒಂದು ಕುಟುಂಬದಲ್ಲಾದ ಬದುಕಿನ ಘಟನೆಗಳು ಎನಿಸಿದರೂ ಒಟ್ಟಾರೆ ಹಿರೋಶಿಮಾದ ಪ್ರತಿನಿಧಿಯಾಗಿ ಯುಕಾ ಸಾನ್ ನಿಂತುಬಿಡುತ್ತಾಳೆ. ಯಾವ ದೇಶದವರು ಅಣುಬಾಂಬನ್ನು ಪ್ರಯೋಗ ಮಾಡಿದರೋ, ಆ ದೇಶದಿಂದ ಸ್ಯಾಮ್ ಬಂದವನೆಂದು ತಿಳಿದರೂ, ಆರ್ಥಿಕ ಅಸಹಾಯಕತೆಗಷ್ಟೇ ಅವನೊಡನೆ ವ್ಯವಹರಿಸದೆ, ಮಾನವ ಸಂಬಂಧದಲ್ಲಿಯೂ ಯುಕಾಳ ಮಾತು ವರ್ತನೆಗಳು ಬಹು ಎತ್ತರವಾದದ್ದು, ನಾಗರಿಕವಾದದ್ದು ಮತ್ತು ಮಹತ್ತರವಾದದ್ದು. ಈ ಕಾದಂಬರಿಯ ಮುಖ್ಯ ಅಂಶ ಭಾಷೆ. ನವಿರಾದ ಮತ್ತು ನಿಧಾನಗತಿಯಿಂದ ಭಾಷೆ ಬಳಕೆಯಾದರೂ, ತೆರೆದು ತೋರುವ ಸತ್ಯ ಪ್ರಜ್ವಲಿಸುವ ಕೆಂಡದ ಅನುಭವವನ್ನು ಓದುಗನಿಗೆ ಕೊಡುತ್ತದೆ. ‘ಸತ್ಯ ಮೆಲುದನಿಯಲ್ಲಿರುತ್ತದೆ, ಕೂಗಾಟದಲ್ಲಿ ಅಲ್ಲ’ ಎಂಬುದಕ್ಕೆ ಈ ಕಾದಂಬರಿಯೇ ಸಾಕ್ಷಿ. ನಿರ್ವಿವಾದವಾಗಿ ಉಳಿದ ಎರಡೂ ಈ ಕಾದಂಬರಿಯ ತುಂಬಾ ವಿಸ್ತಾರವಾಗಿ ಪಸರಿಸಿರುವ ಮೌನಕ್ಕೂ ಒಂದು ಚಲನ ಶಕ್ತಿಯಿದೆ. ಸಾಮುದಾಯಿಕ ಪ್ರಜ್ಞೆಯಾಗಿ ಮೌನ ಅಸಹಾಯಕತೆಯನ್ನು ಬಿಟ್ಟುಕೊಡುತ್ತಿದೆ, ಅದರ ಆಂತರ್ಯದಲ್ಲೊಂದು ಸಿಟ್ಟಿದೆ. ಜಪಾನ್ ಅಣುಸ್ಫೋಟದಿಂದ ಇಂದಿಗೆ ಹೊರಬಂದಿರಬಹುದು, ಆದರೆ ಆ ದುರ್ಘಟನೆಯ ನೆನಪಿನ ಎಳೆಗಳು ಅಲ್ಲಿ ಎಂದೂ ಅಳಿಯುವುದಿಲ್ಲ. ಜಪಾನಿನ ಸೃಷ್ಟಿಶೀಲರ ಪ್ರಜ್ಞೆಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಈ ನೆನಪುಗಳು ಹೊರಬರುತ್ತಲೇ ಕ್ರೌರ್ಯವನ್ನು ಮಾರ್ದನಿಸುತ್ತಲಿರುತ್ತದೆ. ಈ ಕಾದಂಬರಿಯ ವಸ್ತು, ವಿನ್ಯಾಸ, ಭಾಷೆಗಳ ಮೂಲಕ ಭವಿಷ್ಯದಲ್ಲಿ ಅಣುಸ್ಫೋಟ ನಡೆದರೆ ಎಂತಹ ವಿನಾಶಕಾರಿ ಮಟ್ಟವನ್ನು ಮನುಜಕುಲವು ಮುಟ್ಟಬಹುದು ಮತ್ತು ಎದುರಿಸಬೇಕಾದೀತು ಎಂಬುದಕ್ಕೆ ಎಚ್ಚರಿಕೆಯನ್ನು ಸಾಕ್ಷಿಯಾಗಿ ಕಾಣಿಸಿಕೊಟ್ಟು, ಪಾತ್ರಗಳ ಮೂಲಕ ಕಟೆದು ನಿಲ್ಲಿಸಿ ಶಾಶ್ವತ ಎಚ್ಚರವಾಗಿರುವಂತೆ ಓದುಗರನ್ನು ನಿಲ್ಲಿಸುವ ಕಾದಂಬರಿ ಇದಾಗಿದೆ. ವ್ಯಕ್ತಿ, ಕುಟುಂಬ ಮತ್ತು ಸಮುದಾಯಗಳೆಂಬಲ್ಲಿ ಆಯ್ಕೆಯ ವಿಷಯ ಬಂದೊಡನೆ, ನಾಯಕಿಯ ಆಯ್ಕೆಯಲ್ಲಿ ವ್ಯಕ್ತಿ ಮೊದಲಾಗಿ, ಅಂಶಗಳನ್ನು ತನ್ನೊಡಲಿನಲ್ಲಿ ಹೊತ್ತು ಪೂರ್ಣಗೊಳಿಸುತ್ತಾಳೆ.

ಕೊನೆಯದಾಗಿ ಈ ಕಾದಂಬರಿ ಸದ್ಯದಲ್ಲಿ ಕನ್ನಡಕ್ಕೆ ಅಗತ್ಯವಿತ್ತೇ? ಎಂಬ ಪ್ರಶ್ನೆ ಕೇಳಿಕೊಳ್ಳಲೇಬೇಕಾದುದು. ಅದಕ್ಕೆ ಉತ್ತರ ಹೌದು, ಅತ್ಯಗತ್ಯವಾದದ್ದು ಎಂಬುದೇ ಆಗಿದೆ. ಒಂದು ಸಮಾಜದಲ್ಲಿ ಬದುಕುವ ವ್ಯಕ್ತಿಯೊಬ್ಬನಲ್ಲಿ ’ಪ್ರತಿಭಟನೆ’ ಎನ್ನುವುದು ಎರಡು ಕಾರಣಗಳಿಂದ ಉದ್ಭವವಾಗುತ್ತದೆ. ಒಂದು ಅತಿಯಾಗಿ ದೈಹಿಕ ಹಿಂಸೆ ಅನುಭವಿಸಿದಾಗ ಮತ್ತೊಂದು ಅತಿಯಾದ ದೈಹಿಕ, ಮಾನಸಿಕ ಹಿಂಸೆಯ ಅನುಭವಗಳನ್ನೇ ಪರಿಕರವಾಗಿ ಬಳಸಿಕೊಂಡು ಕಟ್ಟಿಕೊಳ್ಳುವ ತತ್ವ, ಕಾಣ್ಕೆ, ದರ್ಶನಗಳ ಕಾರಣದಿಂದ, ಹಿಂಸೆಯನ್ನು ವಿರೋಧಿಸುವ ತುರ್ತು ಆರಂಭವಾಗಿಬಿಡುತ್ತವೆ. ಅದಕ್ಕೆ ಪೂರಕವಾದ ಪ್ರತಿಭಟನೆಯ ಹಾದಿಗಳು ಬೇರೆ ಬೇರೆ ಆಯಾಮಗಳಲ್ಲಿ ತೆರೆದುಕೊಳ್ಳುತ್ತವೆ. ಈ ಹಾದಿಗಳಲ್ಲಿ ಶಕ್ತಿಸಂಚಯ ಮಾಡಿಕೊಂಡು ವ್ಯಕ್ತಿ ಪ್ರತಿಭಟನೆಗೆ ನಿಲ್ಲುತ್ತಾನೆ. ದೈಹಿಕ ಹಿಂಸೆ ಮತ್ತು ಅದಕ್ಕೆ ಕಾರಣಗಳನ್ನು ಶೋಧಿಸಿಕೊಂಡು, ತತ್ವಗಳಾಗಿ, ಕಾಣೆಯಾಗಿ, ದರ್ಶನವಾಗಿ ಕಟ್ಟಿಕೊಳ್ಳುವುದರಿಂದ ಪ್ರತಿಭಟನೆ ಕೇವಲ ವ್ಯಕ್ತಿಯ ಮಟ್ಟದಲ್ಲಿ ನಿಲ್ಲದೆ ಕ್ರಿಯಾಶೀಲತೆ ಪಡೆದು ವಿಸ್ತಾರವಾಗುತ್ತದೆ. ಈ ಎರಡು ಹಾದಿಗಳು ಮನುಷ್ಯನೊಳಗಿನ ರೂಕ್ಷತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಬುಡ ಸಮೇತ ನಾಶಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನುಷ್ಯನಲ್ಲಿನ ದುರಾಸೆ, ಮಹತ್ವಾಕಾಂಕ್ಷೆಗಳು ಬೆಳೆಯುತ್ತಾ ಹೋದಂತೆ ತನ್ನವರು ಇತರರು ಎಂದು ಯಾವ ಭೇದವನ್ನೂ ಮಾಡದೆ ಏಕಪ್ರಕಾರದಲ್ಲಿ ಎಲ್ಲರ ಮೇಲೆಯೂ ಮಾಡುವ ವ್ಯವಸ್ಥಿತ ಮಾನಸಿಕ, ದೈಹಿಕ ದಾಳಿಗಳು, ಇತರರನ್ನು ಸಹಜವಾಗಿ ಪರಿಗಣಿಸದೆ ಪ್ರಭುತ್ವ ಸಾಧಿಸಲು ಹೊರಟವನೂ ದುರಂತ ಕಾಣುವುದರ ಜೊತೆಗೆ, ಇತರರನ್ನೂ ದುರಂತದ ಕೂಪಕ್ಕೆ ತಳ್ಳಿದ ಕಾವ್ಯಗಳ ಪಟ್ಟಿಯೇ ಕನ್ನಡದಲ್ಲಿ ಬಹಳ ದೊಡ್ಡದಿವೆ. ಸದ್ಯದಲ್ಲಿ ನಡೆಯುತ್ತಿರುವ ರಾಷ್ಟ್ರದ ಒಳಗಿನ ಪ್ರಭುತ್ವ ಬದುಕಿನ ಮೇಲೆ ಮಾಡುತ್ತಿರುವ ವ್ಯವಸ್ಥಿತ ದಾಳಿಗಳು, ಶ್ರೀಸಾಮಾನ್ಯರ ಅಸಹಾಯಕತೆ, ಅವುಗಳ ತಳದಿಂದ ಹುಟ್ಟುವ ಪ್ರತಿರೋಧ, ನಿಟ್ಟುಸಿರುಗಳನ್ನೇ ಇಲ್ಲಿಯೂ ಬೇರೆ ಆಯಾಮಗಳಲ್ಲಿ ಕಾಣಬಹುದಾಗಿದೆ. ಆದರೆ ಕೇವಲ ಹೇಳಿಕೆಗಳಾಗದೆ ಕಲಾತ್ಮಕತೆಯ ಹೊದಿಕೆ ಹೊದ್ದು ಬಂದಿದೆ ಎಂಬುದನ್ನಿಲ್ಲಿ ಮರೆಯುವ ಹಾಗಿಲ್ಲ.

ಅನುವಾದ ಕಾರ್ಯದಲ್ಲಿ ಸಕ್ರಿಯರಾಗಿರುವ ಡಾ. ವಿಜಯ್ ನಾಗ್‌ರವರು ಮತ್ತಷ್ಟು ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವಂತಾಗಲಿ. ಇಲ್ಲಿನ ನೆಲದಲ್ಲಿ ಅಲ್ಲಿನ ಹೂವುಗಳು ಅರಳಲಿ, ನಮ್ಮದೇ ನೆಲದ ಹೂವುಗಳಿವು ಎಂಬ ಭಾವ ಮೂಡುವಂತೆ ಮಾಡಲಿ. ಆ ಹಾದಿಯಲ್ಲಿ ಅವರ ಬಿತ್ತನೆ ಕೆಲಸ ಭರದಿಂದ ಸಾಗಲಿ, ಪ್ರಕೃತ ’ಹಿರೋಶಿಮಾದ ಹೂವುಗಳು’ ಕಾದಂಬರಿ ಅಣುಬಾಂಬ್, ರೇಡಿಯೇಟ್, ಒಂದು ಕುಟುಂಬ ಇಷ್ಟಕ್ಕೇ ನಿಲ್ಲುವುದಿಲ್ಲವೆಂಬ ಎಚ್ಚರ, ಮನುಷ್ಯನ ಆಳದಲ್ಲಿನ ಕ್ರೌರ್ಯದ ಪರಮಾವಧಿ ಇದು ಎಂಬ ವಿಜಯನಾಗರಲ್ಲಿನ ಅರಿವಿನಿಂದಲೇ ಕನ್ನಡಕ್ಕೆ ಈ ಕಾದಂಬರಿ ಬಂದಿದೆ. ಜೆನ್ ಪಥದಲ್ಲಿನ ಕೃತಿಗಳ ಅನುವಾದದಿಂದ ಅವರಿಗೆ ಈ ‘ಕೆಥಾರ್ಸಿಸ್’ ಕ್ರಮ ಬಹಳ ಮುಖ್ಯವೆನಿಸಿದೆ ಎಂದು ಭಾವಿಸಿದ್ದೇನೆ. ಪ್ರತಿಭಾವಂತ, ಸಜ್ಜನ ಮಿತ್ರರಾದ ಡಾ. ವಿಜಯ್ ನಾಗ್‌ರಿಗೆ ಶುಭವಾಗಲಿ. ಮುನ್ನುಡಿ ಬೆನ್ನುಡಿಗಳಾಚೆ ಕಾದಂಬರಿ ಗೆಲ್ಲಲಿ.

-ಆರ್. ದಿಲೀಪ್ ಕುಮಾರ್
ಚಾಮರಾಜನಗರ

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...