ಮುದ ನೀಡುವ ಕತೆ ಹೇಳುವ-ಕಟ್ಟುವ ಗೀತಾ ಬಿ.ಯು.


ಕತೆ ಎಂದರೆ ಹೇಗಿರಬೇಕು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಸಿಗಬಹುದು. ನಮ್ಮ ನಮ್ಮ ಇಷ್ಟ, ಆಯ್ಕೆಗಳ ಮೇಲೆ ಈ ಪ್ರಶ್ನೆಗೆ ಉತ್ತರ ಕೊಡಬಲ್ಲೆವು. ಸಾಮಾನ್ಯವಾಗಿ ಕತೆ ಇಷ್ಟವಾಗಬೇಕಾದರೆ ಅದರಲ್ಲಿ ನಮಗೇನೋ ’ನಮ್ಮತನ’ ಕಂಡು ಬರಬೇಕು. ಕತೆಯ ಹಂದರವೋ, ಅಲ್ಲಿನ ಪಾತ್ರಗಳೋ, ಕತೆ ಮೂಡಿದ ಪರಿಸರವೋ, ಇನ್ಯಾವ ಅಂಶವೋ ನಮ್ಮನ್ನು ಕತೆ ಇಷ್ಟ ಪಡುವಂತೆ, ಅದಕ್ಕೆ ನಮ್ಮನ್ನು ನಾವೇ ಗುರುತಿಸಿಕೊಳ್ಳುವಂತೆ ಮಾಡುತ್ತದೆ." ಅಯ್ಯೊ, ಈ ಪಾತ್ರದ ಹಟಮಾರಿ ಹೆಣ್ಣು ನನ್ನ ತಂಗಿ ತರಹನೇ ವರ್ತಿಸುತ್ತಾಳೆ, ಆ ಕತೆಯಲ್ಲಿ ಬರುವ ಮಾವನವರು, ನಮ್ಮ ಮನೆ ಹಿಂದೆ ಬಾಡಿಗೆಗೆ ಇದ್ದರಲ್ಲ ಥೇಟ್ ಅವರಂತೆಯೇ, ಆ ಕಾದಂಬರಿಯ ಹೀರೋಯಿನ್  ಬಗ್ಗೆ ಓದುತ್ತಾ ಇದ್ದರೆ ನನ್ನ ಗೆಳತಿ ಸುಷ್ಮಾ ನೆನೆಪಿಗೆ ಬರ್ತಾಳೆ, ಇತ್ಯಾದಿ ಅನಿಸಿದಾಗ ನಮಗೆ ಕತೆ ಅಥವಾ ಕಾದಂಬರಿ ಆತ್ಮೀಯವೆನಿಸುತ್ತದೆ. 

ಬೀ ಯು ಗೀತಾ ಅವರು ಕಥಾ, ಕಾದಂಬರಿ ಲೋಕದಲ್ಲಿ, ತಮ್ಮ ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಸರಾಂತ ವ್ಯಕ್ತಿಯಾಗಿ ಚಿರಪರಿಚಿತರು. ಕಿರುತೆರೆಯಲ್ಲಿ ಹಲವಾರು ಕನ್ನಡ ಜನಪ್ರಿಯ ಧಾರಾವಾಹಿಗಳಿಗೆ ಸಂವಾದಗಳನ್ನು ಬರೆದಿದ್ದಾರೆ ಮತ್ತು ಅಭಿನಯಿಸಿದ್ದಾರೆ ಕೂಡ.   

ಬೆಂಗಳೂರಿನಲ್ಲಿ ಜನಿಸಿದ ಗೀತಾರವರ ತಂದೆ  ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರಾಗಿದ್ದ ಎಚ್.ಎಸ್.ಉಪೇಂದ್ರರಾವ್ ಹಾಗೂ ತಾಯಿ ಶಾಂತಾ. ಗೀತಾ ತಮ್ಮ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ಆರಂಭಿಸಿದರು, ತಂದೆಯವರು ವರ್ಗವಾದ ಊರುಗಳಲ್ಲಿ ಚಿಂತಾಮಣಿ ಹಾಗೂ ಚೆನ್ನರಾಯಪಟ್ಟಣದಲ್ಲಿ ಪ್ರೌಢಶಾಲಾ ಶಿಕ್ಷಿಣ ಮುಂದುವರೆಸಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ.ಪದವಿ,  ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂವಹನದಲ್ಲಿ ಬಿ.ಎಸ್.ಪದವಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡರತ್ನ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಾಲ್ಯದಿಂದಲೂ ಕಥೆ ಕೇಳುವುದು, ಹೇಳುವುದರಲ್ಲಿ ತುಂಬಾ ಆಸಕ್ತಿ  ಇರುವ ಗೀತಾಗೆ ಸಣ್ಣ ಕತೆಗಳು ಹಾಗು ಕಾದಂಬರಿ ಅವರಿಗೆ ಮುದಕೊಟ್ಟ ಪ್ರಕಾರಗಳು.

ಪ್ರಮುಖವಾಗಿ ಮೂರು ಕಥಾ ಸಂಕಲಗಳನ್ನು ಪ್ರಕಟಿಸಿರುವ ಇವರ ಅನೇಕ ಕತೆಗಳು ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸೋಲು ಗೆಲುವಿನ ಹಾದಿಯಲ್ಲಿ (ಪ್ರಜಾಮತ),ಮರೀಚಿಕೆ (ಉಷಾಪತ್ರಿಕೆ),ಹೊಂಗೆ ನೆರಳು (ಮಲ್ಲಿಗೆ),ತಮಸೋಮ ಜ್ಯೋತಿರ್ಗಮಯ (ತರಂಗ), ಸಂಕೋಲೆ (ಕರ್ಮವೀರ),ಅವರನ್ನ ಬಿಟ್ಟು ಇವರನ್ನು ಬಿಟ್ಟು ಇವರ್ಯಾರು (ಸುಧಾ),ವಾರಸುದಾರ (ತರಂಗ) ಇವರ  ಧಾರಾವಾಹಿಗಳು. ಗೀತಾರವರ ಬರವಣಿಗೆಗಳು ಓದುಗರ ಹೃದಯಕ್ಕೆ ಹತ್ತಿರವಾದ ಘಟನೆಗಳ ಪಟ್ಕಥೆಗಳಿಂದ, ಭಾವಪರವಶತೆಯನ್ನು ಹುಟ್ಟಿಹಾಕುತ್ತವೆ. ಕೆಲವು ಕತೆ, ಕಾದಂಬರಿಗಳು ನನಗೆ ವೈಯಕ್ತಿಕ ಬಲು ಇಷ್ಟ, ಪಾತ್ರಗಳ ಮಾತು, ವರ್ತನೆ ನಮ್ಮ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಘಟನೆಗಳು ಎನಿಸಿಬಿಡುತ್ತವೆ. ಒಂದು ಕತೆಯಲ್ಲಿ, " ಮಗ ಬರೆದ ಕಾಗದದಲ್ಲಿ ಅವನ ಕೈಬರಹ ನೋಡಿ ಅವನೇ ಬಂದು ನಿಂತನೇನೊ" ,  ಎಂಬ ವಾಕ್ಯ ಬರುತ್ತದೆ. ಎಷ್ಟು ಸರಳವಾಗಿ ತಾಯಿಯ ಹೃದಯದ ಮಾತು ಹೇಳಿದಾರೆ! ಅದೇ ಕತೆಯಲ್ಲಿ, ವಿದೇಶದಲ್ಲಿ ನೆಲೆಸಿದ ಮಗ ತಂದೆ ತಾಯಿಯ ಆಸೆಗೆ ಬೆಲೆ ಕೊಟ್ಟು ಭಾರತಕ್ಕೆ ಮರಳಿ ಬರುತ್ತಾನೆ. ಅವನ ಹೆಂಡತಿಗೆ ಇಷ್ಟವಿರದಿದ್ದರೂ ಮಕ್ಕಳೊಡನೆ ಬಂದ ಅವನು, ಇಲ್ಲಿ ಪಡುವ ಕಷ್ಟಗಳು, ಮಾನಸಿಕ ಹಿಂಸೆ, ದುಗುಡ ಇವೆಲ್ಲವನ್ನೂ ಬಹಳ ಸೊಗಸಾಗಿ, ನೈಜವಾಗಿ ಚಿತ್ರಿಸಿದ್ದಾರೆ. ಈ ಕತೆಯನ್ನು, ವಿದೇಶದಲ್ಲಿ ನೆಲೆಸಿರುವ ಮಕ್ಕಳ ತಾಯಂದರಿಗೆ ಅದೆಷ್ಟು ಬಾರಿ ಹೇಳಿದೀನೋ, ನೆನಪಿಲ್ಲ. ಹೀಗೆ ವಾಸ್ತವಕ್ಕೆ ಹತ್ತಿರವಾದ ಇವರ ಕೃತಿಗಳು ಜನರ ಮನಸ್ಸನ್ನು, ಲಕ್ಷ್ಯವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.

19ನೇ ವಯಸ್ಸಿನಲ್ಲಿ ಬರೆಯಲು ಶುರುಮಾಡಿದ ಗೀತಾ ಅವರು’ ಬದುಕು’ ಎಂಬ ಲೇಖನ ಮಾಲೆಯನ್ನು "ಕರ್ಮವೀರ ಮಾಸ ಪತ್ರಿಕೆಯಲ್ಲಿ ಹಾಗು " ಚೌಕಟ್ಟಿನಾಚೆಗೆ" ಎಂಬ 50ಕ್ಕೂ ಹೆಚ್ಚಿನ ಲೇಖನಗೊಳಗೊಂಡ ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ಬರೆದಿದ್ದಾರೆ. ಧಾರಾವಾಹಿಗಳು ಹಾಗು ಅದರ ಪಾತ್ರಧಾರಿಗಳ ಬಗ್ಗೆ ಬರೆದು, ಇವರೇ ಪ್ರಸ್ತುತ ಪಡಿಸಿದ ಕಾರ್ಯಕ್ರಮಗಳೂ ಭಾರಿ ಯಶಸ್ಸು ಪಡೆದಿವೆ. ಉದ್ಯಮಿ ಪತಿ, ಮಕ್ಕಳು, ಮೊಮ್ಮಕ್ಕಳ ಜತೆ ಬೆಂಗಳೂರಿನಲ್ಲಿ ನೆಲೆಸಿರುವ ಗೀತಾ ಅವರು ಸುಮಾರು 16 ಕೃತಿ ರಚಿಸಿದ್ದಾರೆ. ಗೀತಾ ಬೀ ಯು ಕನ್ನಡದ ಹೆಮ್ಮೆಯ ಲೇಖಕಿಯರಲ್ಲಿ ಒಬ್ಬರು.


ಡಾ. ಸಹನಾ ಪ್ರಸಾದ್

 ಗಣಿತದಲ್ಲಿ ಡಾಕ್ಟರೇಟ್ ಪಡೆದಿರುವ ಡಾ. ಸಹನಾ ಪ್ರಸಾದ್ ಅವರು ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಲೇಖನ, ನಗೆಬರಹ, ಕತೆಗಳು ಕನ್ನಡ, ಇಂಗ್ಲೀಷ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅದಲ್ಲದೇ ಶೈಕ್ಷಣಿಕ ನಿಯತಕಾಲಿಕಗಳಲ್ಲಿ ಸಂಶೋಧನಾತ್ಮಕ ಲೇಖನ ಪ್ರಕಟಿಸಿದ್ದಾರೆ. ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಅವರ ಪತಿ ಎಲ್. ವಿ. ಪ್ರಸಾದ್ ಇಸ್ರೋ ಬಾಹ್ಯಾಕಾಶ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದಾರೆ.


 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...