“ಮುರಿದು ಕಟ್ಟಿದರೆ ಕಟ್ಟಬೇಕು ಡೇವಿಡ್ ಹಾಕ್ನಿಯಂತೆ”

Date: 13-10-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಬ್ರಿಟನ್‌ ಕಲಾವಿದ ಡೇವಿಡ್ ಹಾಕ್ನಿ ಅವರ ಬಗ್ಗೆ ಬರೆದಿದ್ದಾರೆ.

ಕಲಾವಿದ: ಡೇವಿಡ್ ಹಾಕ್ನಿ (David Hockney)

ಜನನ: 09 ಜುಲೈ, 1937

ಶಿಕ್ಷಣ: ಬ್ರಾಡ್ ಫರ್ಡ್ ಸ್ಕೂಲ್ ಆಫ್ ಆರ್ಟ್, ರಾಯಲ್ ಕಾಲೇಜ್ ಆಫ್ ಆರ್ಟ್

ವಾಸ: ಲಂಡನ್ (ಇಂಗ್ಲಂಡ್), ಕ್ಯಾಲಿಫೋರ್ನಿಯಾ (ಅಮೆರಿಕ)

ಕವಲು: ಪಾಪ್ ಆರ್ಟ್

ವ್ಯವಸಾಯ: ಪೇಂಟಿಂಗ್, ಕೊಲ್ಯಾಜ್, ಡಿಜಿಟಲ್ ಪೇಂಟಿಂಗ್

ಡೇವಿಡ್ ಹಾಕ್ನಿ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ

ಡೇವಿಡ್ ಹಾಕ್ನಿ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿತ್ರಿಸುವಾಗ ದೂರ – ಆಳಗಳ ಕಲ್ಪನೆ ಸವಾಲಾಗಿರುವ ಈಜುಕೊಳಗಳು, ಬಹುಮಹಡಿ ಕಟ್ಟಡ, ಗ್ರಾಂಡ್ ಕೆನ್ಯನ್… ಹೀಗೆ ಸಂಕೀರ್ಣ ಸಂಗತಿಗಳನ್ನು ಅಬ್ಬರದ ಬಣ್ಣಗಳ ಮೂಲಕ ಸಪಾಟಾಗಿ ಚಿತ್ರಿಸುತ್ತಾ ಒಮ್ಮೆ ನೋಡಿದರೆ ಮೆದುಳಿನಲ್ಲಿ ಅಚ್ಚಳಿಯದೆ ಉಳಿಯುವಂತಹ ಹಲವು ಚಿತ್ರಗಳನ್ನು ಕೊಟ್ಟಿರುವ ಡೇವಿಡ್ ಹಾಕ್ನಿ, ಸದ್ಯಕ್ಕೆ ಬ್ರಿಟನ್ ನ ಕಲಾವಿದರಲ್ಲಿ ನಂಬರ್ ಒಂದು ಸ್ಥಾನದಲ್ಲಿ ನಿಲ್ಲುತ್ತಾರೆ. ಸುಲಭದಲ್ಲೇ ಇಲಸ್ಟ್ರೇಟಿವ್ ಆಗಿ ಬಿಡಬಹುದಾಗಿದ್ದ ಚಿತ್ರಗಳನ್ನು ಒಂದು ಹೆಜ್ಜೆ ಮುಂದೊಯ್ದು ಅವಕ್ಕೆ ಕಲಾತ್ಮಕ ಆಯಾಮಗಳನ್ನು ತೆರೆದದ್ದು ಹಾಕ್ನಿ ಅವರ ಹೆಗ್ಗಳಿಕೆ.

ಮೂರ್ತಿಭಂಜಕತೆಗೆ ಖ್ಯಾತರಾಗಿರುವ ಹಾಕ್ನಿ ರಾಯಲ್ ಕಾಲೇಜಿನಲ್ಲಿ ಕಲಿಯುವಾಗ ಮಹಿಳಾ ಮಾಡೆಲ್ ಒಬ್ಬರ ಲೈಫ್ ಡ್ರಾಯಿಂಗ್ ಮಾಡಬೇಕೆಂದರೆ ಅದನ್ನು ಪ್ರತಿಭಟಿಸಿ “Life Painting for a Diploma “ ಎಂಬ ಚಿತ್ರ ರಚಿಸಿದ್ದಲ್ಲದೇ ತನಗೆ ತನ್ನ ಚಿತ್ರಗಳ ಆಧಾರದಲ್ಲೇ ಡಿಗ್ರಿ ಕೊಡಿ ಎಂದು ಹೇಳಿ, ಪ್ರಬಂಧ ಬರೆಯಲು ನಿರಾಕರಿಸಿದ್ದರು. ಕಡೆಗೂ ಸ್ವತಃ ರಾಯಲ್ ಕಾಲೇಜು ತನ್ನ ನಿಯಮಗಳನ್ನು ಬದಲಾಯಿಸಬೇಕಾಯಿತು. ಮುಂದೆ, ಅಮೆರಿಕ ಮತ್ತು ಬ್ರಿಟನ್ ಗಳೆರಡರಲ್ಲೂ ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿದ್ದ ಕಾಲದಲ್ಲೇ ತಾನು ಸಲಿಂಗ ಸಂಬಂಧಗಳಲ್ಲಿ ಆಸಕ್ತ “ಗೇ” ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಮಾದಕದ್ರವ್ಯಗಳ ಬಗೆಗೂ ಸಾಮಾಜಿಕವಾದ ನಿಲುವಿಗೆ ತದ್ವಿರುದ್ಧವಾದ ನಿಲುವು ಅವರದಾಗಿತ್ತು. ಹಳೆಯ ಪ್ರಮುಖ ಕಲಾವಿದರು ಚಿತ್ರಗಳ ಬಿಂಬವನ್ನು ಕ್ಯಾನ್ವಾಸ್ ಮೇಲೆ ಹಾಯಿಸಿ, ಅದರ ಅಚ್ಚಿನ ಮೇಲೆ ಮಹತ್ವದ ಕಲಾಕೃತಿಗಳನ್ನು ರಚಿಸಿದ್ದರು ಎಂಬ ಅವರ ವಾದ (ಹಾಕ್ನಿ- ಫಾಲ್ಕೊ ಥಿಸೀಸ್) ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. ತನ್ನ ಸಲಿಂಗ ಸಂಬಂಧಗಳ ಕಾರಣದಿಂದಾಗಿ, ಅವರ ಮನೆಯಲ್ಲಿ ಸಂಭವಿಸಿದ ಸಾವೊಂದರ ಕಾರಣಕ್ಕೆ ಅವರು ನ್ಯಾಯಾಲಯದ ಮೆಟ್ಟಿಲೂ ಏರಬೇಕಾಯಿತು. ಬ್ರಿಟಿಷ್ ರಾಣಿಯ ಭಾವಚಿತ್ರ ಬಿಡಿಸುವ ಆಫರ್ ಬಂದಾಗ ಪುರುಸೊತ್ತಿಲ್ಲ ಎಂದು ನಿರಾಕರಿಸಿದವರು ಅವರು.

ಈ ಎಲ್ಲ ಸಂಗತಿಗಳ ಹೊರತಾಗಿ ಕೂಡ ಹಾಕ್ನಿ ತನ್ನ 83ನೇ ವಯಸ್ಸಿನಲ್ಲಿ ಇಂದಿಗೂ ಅಪ್ ಡೇಟೆಡ್ ಕಲಾವಿದರು. ಸಾಂಪ್ರದಾಯಿಕ ಕಲಾಕೃತಿಗಳ ಜೊತೆಗೆ ಫೋಟೊ ಕೊಲ್ಯಾಜ್‌ಗಳು, ಗ್ರಾಫಿಕ್ ಆರ್ಟ್, ರಂಗ ವಿನ್ಯಾಸ, ಹೀಗೆ ಸನ್ನಿವೇಶಗಳು ಬದಲಾಗುತ್ತಾ ಬಂದಂತೆ ಅದಕ್ಕೆ ಹೊಂದಿಕೊಳ್ಳುತ್ತಾ ಬಂದ ಹಾಕ್ನಿ ಈವತ್ತು ಐ ಪ್ಯಾಡ್‌ನಲ್ಲಿ ಪೇಂಟಿಂಗ್ ಸಾಫ್ಟ್ವೇರ್ಗಳನ್ನು ಬಳಸಿಕೊಂಡು ಈ ಪ್ರಾಯದಲ್ಲೂ ಅದ್ಭುತ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ.

ಚಿತ್ರಗಳು ಕಲಾವಿದ ತನ್ನ ಸುತ್ತ ತಾನು ಕಂಡದ್ದನ್ನು ಆಧರಿಸಿರಬೇಕು ಎಂಬ ದೃಢ ನಂಬಿಕೆ ಹೊಂದಿರುವ ಹಾಕ್ನಿ ಹೆಚ್ಚಿನ ಕಲಾಕೃತಿಗಳು ಅವರು ಇದ್ದ ಕ್ಯಾಲಿಫೋರ್ನಿಯಾ ನಗರದ, ಅವರ ಗೆಳೆಯರ ಬಳಗದ ಭಾವಚಿತ್ರಗಳನ್ನು ಒಳಗೊಂಡಿವೆ. 1963ರಲ್ಲಿ ಜಾನ್ ಕಾಸ್ಮಿನ್ ಗ್ಯಾಲರಿಯಲ್ಲಿ ನಡೆದ ಕಲಾ ಪ್ರದರ್ಶನದ ಮೂಲಕ ಬೆಳಕಿಗೆ ಬಂದ ಹಾಕ್ನಿ, ಬಳಿಕ ಅಮೆರಿಕ ಲಾಸ್ ಏಂಜಲಿಸ್ಗೆ ಪ್ರಯಾಣಿಸಿ ಅಲ್ಲಿ ನೆಲೆಸುತ್ತಾರೆ. ತನ್ನ ಮಾಡೆಲ್ ಪೀಟರ್ ಸ್ಲೆಷಿಂಜರ್ ಜೊತೆ ಮೊದಲ ಸಂಬಂಧ ಹೊಂದಿದ್ದ ಹಾಕ್ನಿ, ಬಳಿಕ ಮಾಜೀ ಷೆಫ್ ಆದ ಜಾನ್ ಫಿಝರ್ಬರ್ಟ್ ಜೊತೆ ಸಂಬಂಧ ಬೆಳಸುತ್ತಾರೆ. 1990ರ ದಶಕದ ಬಳಿಕ ಜಗತ್ತಿನಾದ್ಯಂತ ಪ್ರದರ್ಶನಗಳನ್ನು ನೀಡಿದ ಹಾಕ್ನಿ 2012ರಲ್ಲಿ ಒಮ್ಮೆ ಲಕ್ವಾ ಆಘಾತಕ್ಕೆ ಈಡಾಗಿ ಅಲ್ಪಕಾಲ ತನ್ನ ಮಾತು ಕಳೆದುಕೊಂಡದ್ದಿದೆ.

ಫಿಗರೇಟಿವ್ ಚಿತ್ರಗಳ ಪುನರಾಗಮನದಲ್ಲಿ ಮಹತ್ವದ ಭೂಮಿಕೆ ಹೊಂದಿರುವ ಹಾಕ್ನಿಯನ್ನು ಹೊಸ ತಲೆಮಾರು ಅತ್ಯಂತ ಪ್ರಭಾವೀ ಕಲಾವಿದ ಎಂದು ಪರಿಗಣಿಸುತ್ತದೆ. ಅವರ ಮಹತ್ವದ ಕಲಾಕೃತಿಗಳಲ್ಲಿ We two boys together clinging (1961), A bigger splash (1967), American Collecters (Fred and Marcia Weisman) (1968), A visit to Santa Monica Canyon (1984), A bigger Grand Canyon (1998), Winter Timber (2009), A Bigger Message (2010) ಇತ್ಯಾದಿ ಸೇರಿವೆ.
ಜಗತ್ತಿನ ಅತಿಹೆಚ್ಚು ಬೆಲೆಯಲ್ಲಿ ಹರಾಜಾದ ಚಿತ್ರ ಎಂಬ ಹೆಚ್ಚುಗಾರಿಕೆ 2019ರ ತನಕವೂ ಅವರ Portrait of an Artist (1972) ಕಲಾಕೃತಿಗೆ ಇತ್ತು. ಅದು 2018ರಲ್ಲಿ ಸೂತ್ ಬಿ ಹರಾಜುಕಟ್ಟೆಯಲ್ಲಿ 585 ಕೋಟಿ ರೂ. ಗಳಿಗೆ ಹರಾಜಾಗಿತ್ತು. ಈಗ ಅದು ಜೆಫ್ ಕೂನ್ಸ್ ಹೆಸರಲ್ಲಿದೆ.

ಸದ್ಯ ಇಂಗ್ಲಂಡಿನ ವೆಸ್ಟ್ ಯಾರ್ಕ್ ಷೈರ್ ಸಾಲ್ಟ್ಸ್ ಮಿಲ್ ಗ್ಯಾಲರಿಯಲ್ಲಿ ಅವರ ಕಲಾಕೃತಿಗಳ ಪ್ರದರ್ಶನ David Hockney: The arrival of Spring ನಡೆಯುತ್ತಿದೆ.

ಹಳೆಯ ಕಲಾವಿದರ ಚಿತ್ರ ರಚನಾತಂತ್ರದ ಬಗ್ಗೆ ಹಾಕ್ನಿ ಬರೆದ ವಿವಾದಾತ್ಮಕ ಪುಸ್ತಕದ ಬಗ್ಗೆ ಅವರೊಂದಿಗೆ ಸಂದರ್ಶನ:

ಹಾಕ್ನಿ ಅವರ ಎರಡು ಪ್ರದರ್ಶನಗಳ ಬಗ್ಗೆ ಒಂದು ವೀಡಿಯೊ ನೋಡಲು ಇಲ್ಲಿ ಕ್ಲಿಕ್‌ ಮಾಡಿ: “Exhibition on Screen”

ಡೇವಿಡ್ ಹಾಕ್ನಿ ಅವರ A bigger Grand Canyon (1998)


ಡೇವಿಡ್ ಹಾಕ್ನಿ ಅವರ American Collectors (Fred and Marcia Weisman) (1968)

ಡೇವಿಡ್ ಹಾಕ್ನಿ ಅವರ Portrait of an Artist (Pool with two figures) (1972)


ಡೇವಿಡ್ ಹಾಕ್ನಿ ಅವರ We two boys together clinging (1961)

ಡೇವಿಡ್ ಹಾಕ್ನಿ ಅವರ Winter Timber (2009)

 

 

ಡೇವಿಡ್ ಹಾಕ್ನಿ ಅವರ A bigger splash (1967)

ಡೇವಿಡ್ ಹಾಕ್ನಿ ಅವರ A Bigger Message (2010)

ಇದನ್ನು ಓದಿ:

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊ ವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...