ನಮ್ಮ ಭಾವವನ್ನೂ ಸಂಘರ್ಷಕ್ಕೆಳೆಯುವ ‘ಮಿಂಚದ ಮಿಂಚು’  


ಗಾಂಧಾರಿಯ ಅಂತರಂಗದ ತೊಳಲಾಟ, ನೂರು ಮಕ್ಕಳನ್ನು ಹೊಂದಿಯೂ ಒಬ್ಬರನ್ನೂ ಉಳಿಸಿಕೊಳ್ಳಲಾಗದ ಆ ಹತಾಶೆ, ನೋವು, ತುಮುಲ...ಎಲ್ಲವನ್ನೂ ಮಹಿಳೆಯೋರ್ವಳೇ ಹೆಚ್ಚಾಗಿ ಅರ್ಥೈಸಿಕೊಳ್ಳಬಲ್ಲಳು- ಆ ಹಿನ್ನೆಲೆಯಲ್ಲಿ ‘ಮಿಂಚದ ಮಿಂಚು’ ಒಂದು ವಿನೂತನ ಮತ್ತು ಅಗತ್ಯವಾಗಿದ್ದ ಪ್ರಯತ್ನ! ಎನ್ನುತ್ತಾರೆ ಅರೆಹೊಳೆ ಸದಾಶಿವ ರಾವ್. ಲೇಖಕಿ ದಿವ್ಯಾ ಶ್ರೀಧರ ರಾವ್ ಅವರ ‘ಮಿಂಚದ ಮಿಂಚು’ ಕೃತಿಯ ಕುರಿತು ಅವರು ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಮಹಾಭಾರತ-ಅಗೆದಷ್ಟೂ ಆಳ ವಿಸ್ತಾರಗಳನ್ನು ಅಡಗಿಸಿಕೊಂಡಿರುವ ಒಂದು ಕೌತುಕ! 
ಇಲ್ಲಿನ ಪ್ರತೀ ಪಾತ್ರಗಳದ್ದೂ ಅಂತ್ಯವಿಲ್ಲದ ರೋಚಕತೆ-ಅಂತೆಯೇ ಗಾಂಧಾರಿಯದೂ! 

ಅದೆಷ್ಟೋ ಪಾತ್ರಗಳು ಇಲ್ಲಿ ಸಾಕಷ್ಟು ಚರ್ಚೆಗೆ, ವಿಶ್ಲೇಷಣೆಗೆ ಒಳಗಾಗಿವೆ. ಮಹಿಳೆಯರಿಗಿಂತಲೂ ಎಷ್ಟೋ ಪುರುಷ ವಿದ್ವಾಂಸರು ಅದೆಷ್ಟೋ  ಪಾತ್ರಗಳ ಒಳ ಹೊಕ್ಕಿದ್ದಾರೆ. ತಾವೇ ಪಾತ್ರವಾಗಿ ವಿಶ್ಲೇಷಿಸಿದ್ದಾರೆ-ಪುರುಷ-ಮಹಿಳೆಯರ ಪಾತ್ರಗಳನ್ನೂ! 

ಆದರೆ, ಗಾಂಧಾರಿಯನ್ನು ವಿಶ್ಲೇಷಿಸುವ ಗೋಜಿಗೆ ಹೋದವರು ಕಡಿಮೆ ಇರಬಹುದೇನೋ!. ಆಕೆಯ ಅಂತರಂಗದ ತೊಳಲಾಟ, ನೂರು ಮಕ್ಕಳನ್ನು ಹೊಂದಿಯೂ ಒಬ್ಬರನ್ನೂ ಉಳಿಸಿಕೊಳ್ಳಲಾಗದ ಆ ಹತಾಶೆ, ನೋವು, ತುಮುಲ...ಎಲ್ಲವನ್ನೂ ಮಹಿಳೆಯೋರ್ವಳೇ ಹೆಚ್ಚಾಗಿ ಅರ್ಥೈಸಿಕೊಳ್ಳಬಲ್ಲಳು- ಆ ಹಿನ್ನೆಲೆಯಲ್ಲಿ ‘ಮಿಂಚದ ಮಿಂಚು’ ಒಂದು ವಿನೂತನ ಮತ್ತು ಅಗತ್ಯವಾಗಿದ್ದ ಪ್ರಯತ್ನ! 

ಗಾಂಧಾರಿಯನ್ನು ಗಾಂಧಾರದ ಮಿಂಚು, ಸೂರ್ಯನೆದುರೂ ಹೊಳೆಯುವ ಚಂದ್ರಕಾಂತಿಯಂತವಳು ಎಂದೆಲ್ಲಾ ಕರೆಯುತ್ತಾರೆ. ಗಾಂಧಾರಕ್ಕೇ  ಬೆಳಕಾದವಳು ಎಂದೂ, ಬೆಳಕಿನಲ್ಲೇ ಬೆಳೆದವಳು ಎಂದೂ ಕೊಂಡಾಡುತ್ತಾರೆ... 
ಅತ್ಯಂತ ಸುಂದರಿಯನ್ನು ಕೋಲ್ಮಿಂಚಿಗೂ ಹೋಲಿಸುತ್ತಾರೆ-ಗಾಂಧಾರದ ಮಟ್ಟಿಗೆ ಅಂತಹ ಮಿಂಚಾದವಳು ಗಾಂಧಾರಿ!. ಈಕೆಗೇನೂ ಕೊರತೆ ಇರಲಿಲ್ಲ. ಜೀವದಷ್ಟೇ ಪ್ರೀತಿಸುವ ಅಣ್ಣ ಶಕುನಿ ಇದ್ದ. ಒಲವ ಧಾರೆಯನ್ನೇ ಹರಿಸುವ ತಂದೆ ತಾಯಂದಿರು. ಸದಾ ಬೆಳಕನ್ನೇ ಕಾದುಕೊಳ್ಳುವ ತನ್ನದೇ ಆಪ್ತ ವರ್ಗ. ಮತ್ತೆ ಕತ್ತಲೆಗೆಲ್ಲಿಯ ಜಾಗ! 

ನಿಜ, ಇದೆಲ್ಲವೂ ದಿವ್ಯಾ ಶ್ರೀಧರ್ ಅವರ ಲೇಖನಿ ಹರಿಸಿದ ವಿಚಾರಧಾರೆ. ದಿವ್ಯಾರ ಬರಹಗಳಲ್ಲಿ ಈ ‘ಮಿಂಚದ ಮಿಂಚು’ ನಿಜಾರ್ಥದ ಸಾಹಿತ್ಯ  ಲೋಕದ ಮಿಂಚಾಗುವುದು ನಿಸ್ಸಂಶಯ. ಮುನ್ನುಡಿ, ಬೆನ್ನುಡಿಗಳನ್ನು ಹೊರತು ಪಡಿಸಿದರೆ ಕೇವಲ 62 ಪುಟಗಳಲ್ಲಿ ಹರಡಿಕೊಂಡಿರುವ ಪುಟ್ಟ  ಗ್ರಂಥ ಇದು!. ಅಚ್ಚರಿಯಾದೀತು ನಿಮಗೆ ಇದನ್ನು ಗ್ರಂಥವೆಂದದ್ದಕ್ಕೆ. ನಿಜ, ಗಾಂಧಾರಿಯ ಸ್ವಗತವನ್ನು ಆಕೆಯ ದೃಷ್ಟಿಕೋನದಲ್ಲಿ ತೆರೆದಿಡುತ್ತಾ  ಸಾಗಿದ ಕಾದಂಬರಿ, ಈ ಶಕುನಿ ಸಹೋದರಿಯ ಕಥೆ ಹೇಳುತ್ತಾ ಅನೇಕ ಮಗ್ಗುಲುಗಳನ್ನು ತೆರೆದಿಡುತ್ತದೆ-ಇದು ಗ್ರಂಥವೇ! 

ನೂರು ಮಕ್ಕಳೂ ಸತ್ತಿದ್ದಾರೆ. ಕುಂತೀ ಪುತ್ರರ ರಾಜ್ಯಭಾರದ ಅರಮನೆಯಲ್ಲಿ ಧ್ರತರಾಷ್ಟ್ರ-ಗಾಂಧಾರಿಯರಿದ್ದಾರೆ. ಕುಂತಿ ಈಗ ರಾಜಮಾತೆಯಾಗಿ ಅಲ್ಲೇ ಇದ್ದಾಳೆ. ಹೀಗಿರುವಾಗೊಮ್ಮೆ ಗಾಂಧಾರಿ ಕುಂತಿ ಎದುರ ತೆರೆದುಕೊಳ್ಳುತ್ತಾ ಸಾಗುತ್ತಾಳೆ-ಅದುವೇ ‘ಮಿಂಚದ ಮಿಂಚು’ವಿನ ಪಯಣ..

ಕುಂತಿಯ ಸಂತಾನವತಿಯಾಗುತ್ತಾಳೆ. ಗಾಂಧಾರಿ ತನ್ನ ಗರ್ಭವನ್ನು ತಿಕ್ಕಿಕೊಂಡು ನಿಡು ಸುಯ್ಯುತ್ತಾಳೆ. ಇದೊಂದೇ ಪ್ರಸಂಗವನ್ನು  ವಿಶ್ಲೇಷಿಸಿದರೆ....... 
ಗಾಂಧಾರಿಯನ್ನು ಮೊದಲಿನಿಂದಲೂ ಹೊಟ್ಟೆಕಿಚ್ಚಿನವಳು ಎಂಬಂತೇ ಬಿಂಬಿಸಲಾಗಿದೆ. ಆದರೆ ಇಲ್ಲಿ ಆಕೆ ಕುಂತಿ ಎದುರು ಮಾತಾಗುತ್ತಾಳೆ. ಹದಿನೈದು ತಿಂಗಳಾದರೂ ತನ್ನುದರದಿಂದ ಭುವಿಯ ಬೆಳಕು ಕಾಣದ ಗರ್ಭದ ಬಗ್ಗೆ ತನಗೆ ನೋವಿತ್ತು, ಅದೇ ನೋವಿನಿಂದ ತನ್ನ ಹೊಟ್ಟೆಯನ್ನು ಕಿವುಚಿಕೊಂಡದ್ದು, ಪರಿಣಾಮವೇ ಗರ್ಭ ಮಾಂಸದ ಮುದ್ದೆಯಾಗಿ ಹೊರ ಬಂದದ್ದು, ಮತ್ತೆ ವೇದವ್ಯಾಸರು ಆ ನೂರೂ ಮುದ್ದೆಗಳಿಗೆ ಜೀವ  ಕೊಟ್ಟದ್ದು..ಆದರೆ ತನ್ನದು ಅದು ನೋವು, ಹತಾಶೆಯನ್ನು ಹೊರ ಹಾಕಿದ ಸಹಜತೆ ಎಂದು ಜಗತ್ತು ಅರ್ಥ ಮಾಡಿಕೊಳ್ಳಲೇ ಇಲ್ಲ, ಬದಲಾಗಿ  ಗಾಂಧಾರಿ ಹೊಟ್ಟೆ ಕಿಚ್ಚಿನವಳು ಎಂದೇ ಎಲ್ಲರೂ ಆಡಿಕೊಂಡರು ಎಂದು ಮರುಗುತ್ತಾಳೆ! 
ಗಾಂಧಾರಿಯ ಸ್ವಗತ ಹೀಗೆಯೇ ಮುಂದುವರಿಯುತ್ತದೆ. ಆಕೆಯ ಮತ್ತೊಂದೇ ಮುಖ ಪ್ರಕಟಿಸುವ ಲೇಖಕಿ, ಅನೇಕ ಪಾತ್ರಗಳನ್ನು ವಿಶ್ಲೇಷಿಸುತ್ತಾ, ನಮ್ಮನ್ನೂ ಚಿಂತನೆಗೆ ದೂಡುತ್ತಾರೆ. ಹಾಗೆ ನೋಡಿದರೆ ದಿವ್ಯ ತಮ್ಮ ಪ್ರತೀ ಕೃತಿಗಳಲ್ಲೂ ಇದನ್ನೇ ಮಾಡುತ್ತಾರೆ ಮತ್ತು ನಾನು ಇದನ್ನು ಅವರ ಅಕ್ಷರ ತಾಕತ್ತು ಎಂದೇ ಗ್ರಹಿಸಿದ್ದೇನೆ. 

ಇಲ್ಲಿ, ಕೃಷ್ಣ ನನ್ನು ಶಪಿಸಿದ ಗಾಂಧಾರಿ ಅದಕ್ಕಾಗಿಯೂ ಪರಿತಪಿಸುತ್ತಾಳೆ. ಒಬ್ಬ ಮಗನನ್ನಾದರೂ ಉಳಿಸಬಹುದಿತ್ತಲ್ಲ ಎಂದು ಮಾತ್ರ ಸಹಜ  ಆತಂಕದಿಂದ ಕೇಳುತ್ತಾಳೆ. ಹತ್ತು ಮಕ್ಕಳಿದ್ದರೂ ಸತ್ತ ಮಕ್ಕಳು ನೆನಪು ಹೇಗೆ ಹೋದೀತು!!?? ಇಲ್ಲಿ ಸತ್ತದ್ದೇ ನೂರು ಮಕ್ಕಳು, ಒಬ್ಬ ಮಗನ  ಮುಖ ನೋಡಿ ಉಳಿದ ಮಕ್ಕಳ ಅಗಲಿಕೆಯ ನೋವು ನಿವಾರಣೆಯಾಗುತ್ತಿತ್ತೇ ಎಂಬ ಪ್ರಶ್ನೆ ಉದ್ಭವಿಸಿದರೆ, ಕೃಷ್ಣನೇ ಬಳಿ ಬಂದು ಗಾಂಧಾರಿಯನ್ನು ಅಪ್ಪಿ ಸಂತೈಸುತ್ತಾನೆ. ಆಗ ಆಕೆಯ ಸ್ವಗತ ನೋಡಿ- ಈ ಪ್ರೀತಿಯ ಅಪ್ಪುಗೆಯ ನೆನಪಲ್ಲೇ ಇನ್ನುಳಿದ ಬದುಕನ್ನು ನಡೆಸಬಲ್ಲೆ ಕೃಷ್ಣಾ ಎನ್ನುತ್ತಾಳಲ್ಲ-ಅದು ಬಹುಶ ಲೇಖಕಿಯೂ ತನ್ನೊಳಗೆ ಗಾಂಧಾರಿಯನ್ನು ಅದೆಷ್ಟು ಗಾಢವಾಗಿ ಪ್ರವಹಿಸಿಕೊಂಡಿದ್ದಳೆನ್ನುವುದಕ್ಕೆ ಸಾಕ್ಷಿ ಅಚ್ಛರಿ.  

ಇನ್ನು ಭೀಷ್ಮ. ಆತ ತನ್ನ ಅಹಮಿಕೆಯ ಪೌರುಷವನ್ನು, ತಾನೇ ಹಸ್ತಿನಾವತಿಯ ಸಾಮ್ರಾಜ್ಯದ ಸಾರ್ವಕಾಲಿಕ ರಕ್ಷಕನೆಂಬಂತೆ, ತಾನು ನಡೆದದ್ದೇ  ದಾರಿ ಎಂಬಂತೆ ನಡೆದ ಎಂಬ ಭಾವವನ್ನು ‘ಮಿಂಚದ ಮಿಂಚು’ ಪ್ರಕಟಿಸುತ್ತದೆಯೇ!. ಮೊದಲು ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಗೆದ್ದು ತಂದದ್ದೂ ಅದೇ ಕಾರಣದಿಂದ. ಇಲ್ಲಿ ಗಾಂಧಾರದ ಬೆಳಕೂ ತನ್ನ ಬದುಕನ್ನು ಕತ್ತಲು ಮಾಡಿಕೊಳ್ಳ ಹೊರಡಬೇಕಾದ ಅನಿವಾರ್ಯತೆ ತಂದುದೂ  ಅದೇ ಕಾರಣದಿಂದ!. ಹಸ್ತಿನಾವತಿಯ ದೊರೆಗೆ ತಾನು ಪಟ್ಟದರಸಿ ಎಂದು ಭೀಷ್ಮ ಪ್ರಸ್ತಾವಿತ ಸಂಬಂಧಕ್ಕೆ ಸಂಭ್ರಮಿಸುವ ವೇಳೆಗೆ ಅಣ್ಣ ಶಕುನಿ  ಧ್ರತರಾಷ್ಟ್ರನ ಕುರುಡುತನದ ಬಗ್ಗೆ ಹೇಳಿದಾಗ ಆಕೆ ಅದೆಷ್ಟು ಯಾತನೆ ಅನುಭವಿಸಿದ್ದಳು ಎಂಬುದಕ್ಕೆ ಈ ಕಾದಂಬರಿ ಓದುವಾಗ, ತುಸುವಾದ  ಹೆಣ್ಣು ಹೃದಯ ಇರುವವರ ಕಣ್ಣಂಚು ಜಿನುಗದೇ ಇದ್ದೀತೆ!. ಇದು ಬರಹದ ಶಕ್ತಿ. ಸರಿ, ಗಾಂಧಾರಿ ಬದುಕಿನುದ್ದಕ್ಕೂ ತಾನೇ ತನ್ನ  ಧ್ರತರಾಷ್ಟ್ರನಿಗಾಗಿ ಕತ್ತಲ ಕೂಪಕ್ಕೆ ತಳ್ಳಿಕೊಳ್ಳುತ್ತಾಳೆ- ಹಾಗೆ ಆಕೆ ಕೇವಲ ಕಣ್ಣಿಗೆ ಬಟ್ಟೆಕಟ್ಟಿಕೊಂಡಳೇ..!!?? ಇಲ್ಲ... ತನ್ನ ಭಾವನೆಗಳಿಗೂ, ತನ್ನ ಗಂಡನ ಓಲೈಕೆಯ ಪಾತಿವೃತ್ಯ ಪಟ್ಟಕ್ಕಾಗಿ ತನ್ನೆಲ್ಲಾ ಜವಾಬ್ದಾರಿಗಳಿಗೂ, ತನ್ನದೇ ನೂರು ಮಕ್ಕಳು ಅತ್ಯಂತ ದುಷ್ಟರಾದಾರು ಎಂಬ  ಮುನ್ನೆಚ್ಚರಿಕೆಯ ನುಡಿಗಳನ್ನೂ ನಿರ್ಲಕ್ಷಿಸಿ ಗಂಡನ ಪುತ್ರ ವ್ಯಾಮೋಹಕ್ಕೆ ಮೌನವಾಗಿ ಸಮ್ಮತಿಸೂಚಕವಾಗಿಯೂ.....ಹೀಗೆ ಗಾಂಧಾರಿಯ ಬದುಕು  ಅದೆಷ್ಟು ಕತ್ತಲಾಗುತ್ತಾ ಹೋಯ್ತು!!!!.. ನಿಜಕ್ಕೂ ಕಾದಂಬರಿ ರೋಮಾಂಚನಕ್ಕೆ ಕಾರಣವಾಗುತ್ತದೆ.  

ಹೀಗೆ ಗಾಂಧಾರಿ ಇಲ್ಲಿ ಆಡಿಕೊಳ್ಳುತ್ತಾ ಸಾಗುತ್ತಾಳೆ. ಕುಂತಿ ಕಿವಿಯಾಗುತ್ತಾಳೆ. ಮಕ್ಕಳ ವಿಷಯದಲ್ಲಿ ಎರಡೂ ವಿಭಿನ್ನ ವ್ಯಕ್ತಿತ್ವಗಳು.  ಕಾರಣಗಳೇನೇ ಇದ್ದರೂ ಇಬ್ಬರೂ ಮಕ್ಕಳನ್ನು ಬೆಳೆಸಿದ ರೀತಿಯಲ್ಲಿ ಅಜ ಗಜಾಂತರ. ತನ್ನ ಆರು ಮಕ್ಕಳಲ್ಲಿ ದುಷ್ಟತನಕ್ಕೆ ಶರಣಾದ ಕರ್ಣಾವಸಾನದ ನೋವನ್ನೂ ಅರಗಿಸಕೊಳ್ಳಲಾಗದ ಕುಂತಿ, ನೂರು ಮಕ್ಕಳನ್ನೂ ಕಳೆದುಕೊಂಡು ಸ್ವಗತವಾಗುತ್ತಿರುವ ಗಾಂಧಾರಿ- ನನಗಿಲ್ಲಿ ಅತ್ಯಂತ ಹೆಚ್ಚು ಅಚ್ಚರಿ ಎನಿಸಿದ್ದು, ಈ ಕೃತಿಯನ್ನು ಓದುತ್ತಾ ಹೋಗುವಾಗ ಲೇಖಕಿ ಎಲ್ಲಿಯೂ ಬಾಯ್ಬಿಟ್ಟು ಹೇಳದೆಯೂ ಅದೆಷ್ಟೋ ವಿಚಾರಗಳನ್ನು ಓದುಗನೊಳಗೆ ಹುಟ್ಟುವಂತೆ ನೋಡಿಕೊಂಡದ್ದು. ಇದು ಅಷ್ಟು ಸುಲಭವಲ್ಲ.  

ಗಾಂಧಾರಿಯ ಬದುಕಿನಲ್ಲಿ ಧೃತರಾಷ್ಟçನೆಂಬವನನ್ನು ಕೈ ಹಿಡಿಯದಿರಲು ಶತಾಯ ಗತಾಯ ಪ್ರಯತ್ನಿಸಿದವ ಶಕುನಿ. ಆದರೆ ಆತನೇ ಮುಂದೆ ಆ  ಗಾಂಧಾರದ ಮಿಂಚು ಎಲ್ಲೂ ಮಿಂಚದಂತೆ ನೋಡಿಕೊಂಡನೇ? ಭೀಷ್ಮ ವಿದುರರು ಸರಿದಾರಿಯಲ್ಲಿ ಸಾಗುವ ಪ್ರಯತ್ನ ಕೈಗೊಂಡಾಗೆಲ್ಲಾ  ಧೃತರಾಷ್ಟ್ರ, ಮತ್ತೆ ಮುಂದೆ ಧುರ್ಯೋಧನನ್ನು ತಪ್ಪು ದಾರಿಗೆ ಎಳೆದೊಯ್ಯುವ ಮೂಲಕ, ಗಾಂಧಾರಿಯ ಬದುಕಿಗೇ ಕೊಳ್ಳಿ ಇಟ್ಟನೇ! ಅಷ್ಟು  ಒಳ್ಳೆಯ ಅಣ್ಣ ಹೀಗೇಕಾದ... ಕೊರಗುತ್ತಾಳೆ ಗಾಂಧಾರಿ... 

ಮಿಂಚದ ಮಿಂಚು ಇಡೀ ಕಾದಂಬರಿಯಲ್ಲೂ ಇಂತಹ ಅನೇಕ ದ್ವಂದ್ವಗಳನ್ನು ಪ್ರಶ್ನಿಸುತ್ತಲೇ ಸಾಗುತ್ತದೆ. ಕೇವಲ ತನ್ನ ಪಾಡಿಗೆ ಸಾಗುವ ಒಂದು  ಕಥೆಯಾಗದೇ, ಓದುಗರೊಳಗೂ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತಲೇ ಸಾಗುತ್ತದೆ. ಗಾಂಧಾರಿಯ ಸ್ವಗತದ ಕೊನೆಯಲ್ಲಿ ಹೇಳುತ್ತಾಳೆ-ಕುಂತೀ,  ನಿನ್ನ ಐವರು ಮಕ್ಕಳಲ್ಲೇ ನಾನು ನನ್ನ ಅಳಿದು ಹೋದ ನೂರು ಮಕ್ಕಳನ್ನು ನೋಡುತ್ತೇನೆ. ಶಿವ ಇಷ್ಟಾದರೂ ಕರುಣ ಸಿದನಲ್ಲ ಅನ್ನುತ್ತಾಳೆ. ಆಗ  ಚಕ್ಕೆಂದು ಕಾದಂಬರಿಯ ಆರಂಭದಲ್ಲಿ ಕುಂತಿಗೆ ಪಾಂಡು ಪುತ್ರ ಜನಿಸಿದಾಗ ಹೊಟ್ಟೆ ತಿಕ್ಕಿಕೊಂಡ ಗಾಂಧಾರಿ ನೆನಪಾಗುತ್ತಾಳೆ. ಅವಳದ್ದು ಹೊಟ್ಟೆ  ಕಿಚ್ಚೇ.. ನೋವೇ... ನೂರು ಮಕ್ಕಳನ್ನೂ ಕಳೆದುಕೊಂಡು ಈಗ ಆಕೆ ಕುಂತೀ ಪುತ್ರರನ್ನೇ ತನ್ನ ಮಕ್ಕಳೆಂದು ಕೊಳ್ಳುವಾಗ ಆ ವಾತ್ಸಲ್ಯಕ್ಕೆಣೆಯುಂಟೇ!! 

ಹೀಗೊಂದು ಪ್ರಶ್ನೆಯೊಂದಿಗೆ ದಿವ್ಯಾ ಕಾದಂಬರಿಯನ್ನು ಮುಗಿಸುತ್ತಾರೆ. ಆದರೆ ಆ ಲೇಖಕಿ ಕಾದಂಬರಿಯನ್ನೇನೋ ಮುಗಿಸುತ್ತಾರೆ. ಓದುಗನೊಳಗೆ ಇನ್ನಷ್ಟು ತಳಮಳವನ್ನೇ ಸೃಷ್ಟಿಸುತ್ತಾರೆ- ಆ ಮೂಲಕ ಗೆಲ್ಲುತ್ತಾರೆ! 
ಚಿಂತಕ ಡಾ.ಜಗದೀಶ್ ಶೆಟ್ಟಿಯವರ ಮುನ್ನುಡಿ ಇದೆ. ಅದು ಮುನ್ನುಡಿ ಅಲ್ಲ, ಇಡೀ ಕಾದಂಬರಿಯ ಹೂರಣವನ್ನು ಹದವಾಗಿ ಕಲಸಿಟ್ಟು  ಓದುಗನಿಗೆ ಸ್ವಾದಿಷ್ಟ ಭೋಜನಕ್ಕಣ ಯಾಗಿಸುವ ಭರ್ಜರಿ ಪ್ರವೇಶಿಕೆ. ಇಟಗಿ ಮಹಾಬಲೇಶ್ವರ ಭಟ್ ಅವರ ಬೆನ್ನುಡಿ ಇದೆ- ಭೂರಿ  ಭೋಜನದ ನಂತರದ ರಸಗವಳದ ಸುಖಕ್ಕೆ ಇದೂ ಕಾರಣ!. ಅಂಬಾತನಯ ಮುದ್ರಾಡಿಯವರಂತ ವಿದ್ವಾಂಸರೇ ಮೆಚ್ಚಿ ಹರಸಿದ್ದಾರೆ, ಎಂ ಕೆ  ರಮೇಶ್ ಆಚಾರ್ಯರೂ ಹೇಳಿದಂತೆ ಬರೆದಷ್ಟೂ ಬರೆಸಿಕೊಳ್ಳುವ ತಾಕತ್ತು ಈ ಕೃತಿಗಿದೆ. ಹಾದಿಗಲ್ಲು ಲಕ್ಷ್ಮೀ ನಾರಾಯಣ ಹಾಗೂ ಅಜಿತ್ ಕಾರಂತ್ ರ ಶುಭದೊಸಗೆಯೂ ಕೃತಿಯ ಒಟ್ಟಂದಕ್ಕೆ ವಿಶೇಷ ಮೆರುಗು ನೀಡಿವೆ. ರಾಘವೇಂದ್ರ ಚಾತ್ರಮಕ್ಕಿಯವರ ಮುಖ ಪುಟವನ್ನು ಕಾದಂಬರಿ ಓದಿಯಾದ ನಂತರ ಒಮ್ಮೆ ತಿರುಗಿಸಿ ನೋಡಿ-ನಿಮ್ಮ ಕಣ್ಣಂಚಿನಲ್ಲಿ ಜಾರುವ ಆ ಎರಡು ಕಣ್ಣ ಹನಿಗಳೇ-ಮಿಂಚದ ಮಿಂಚುಗೆ ನೀವು ನೀಡುವ  ಪಾರಿತೋಷ. ದಿವ್ಯಾ-ಅಭಿನಂದನೆಗಳು. 

- ಅರೆಹೊಳೆ ಸದಾಶಿವ ರಾವ್

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...