ಪರಕೀಯತೆಯ ನಡುವೆಯೇ ಬದುಕು ಕಟ್ಟಿಕೊಂಡ ಕಲಾವಿದೆ


ಕಲಾವಿದೆ ಮಂಜಮ್ಮ ಜೋಗತಿ ಅವರ ಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಕೃತಿಗೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಮುನ್ನುಡಿ ಇಲ್ಲಿದೆ. ಅರುಣ ಜೋಳದಕೂಡ್ಲಿಗಿ ಅವರು ನಿರೂಪಿಸಿರುವ ಕೃತಿಯಲ್ಲಿ ಮಂಜಮ್ಮ ಜೋಗತಿಯವರ ಬದುಕಿನ ವಿಸ್ತಾರನೋಟಗಳಿವೆ.

ಪರಕೀಯ ಭಾವದ ಬಾವಿಗೆ ಬಿದ್ದರೂ
ಎದ್ದು ಬಂದು ಸಾಧಿಸಿದ ಮಂಜಮ್ಮ ಜೋಗತಿ

ಯುವ ಮಿತ್ರ ಅರುಣ್ ಜೋಳದಕೂಡ್ಲಿಗಿಯವರು ಹೊಸ ಪೀಳಿಗೆಯ ಒಬ್ಬ ಪ್ರತಿಭಾಶಾಲಿ ಲೇಖಕರು. ಇವರ ಬರಹಗಳ ವ್ಯಾಪ್ತಿ ದೊಡ್ಡದು. ಕವಿತೆಯಿಂದ ಆರಂಭಿಸಿ, ವಿಮರ್ಶೆ, ವಿಚಾರಾವಲೋಕನ, ಅಜ್ಞಾತ ವಲಯಗಳ ಅನಾವರಣ- ಹೀಗೆ ವಿವಿಧ ನೆಲೆಗಳಿಗೆ ಜಿಗಿತ ಸಾಧಿಸುತ್ತಾ ಅಲ್ಲೆಲ್ಲಾ ತಮ್ಮ ಚಾಪು ಮೂಡಿಸುವ ವಿಶಿಷ್ಟತೆಯಿಂದ ಅರುಣ್ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಗಮನೀಯರಾಗಿದ್ದಾರೆ. ಬರವಣಿಗೆಯನ್ನು ಬೀಳುಬಿಡದ ಭೂಮಿಯಂತೆ ಕಾಯ್ದುಕೊಂಡು ಬಂದಿದ್ದಾರೆ. ಬರೆಯುತ್ತಲೇ ಇದ್ದಾರೆ. ವಿಶೇಷವಾಗಿ ಸಮಕಾಲೀನ ಸಂದರ್ಭದ ಸಮಸ್ಯೆ ಮತ್ತು ಸವಾಲುಗಳನ್ನು ಕಾಳಜಿಯಿಂದ ಕೆದಕುತ್ತಾ ಕುಲುಮೆಯಲ್ಲಿ ಅದ್ದಿ ತೆಗೆದು ಅಕ್ಷರವಾಗಿಸುವ ಇವರ ತೀವ್ರತೆ ಜನಪದ ರೂಪಕವಾಗುತ್ತಿದೆ.

ನಾನು ಹೇಳಿದೆ ಅಜ್ಞಾತ ವಲಯಗಳ ಅನಾವರಣವು ಇವರ ಆಸಕ್ತಿಗಳಲ್ಲಿ ಒಂದು ಎಂದು. ಇಂತಹ ಆಸಕ್ತಿಯ ಫಲವಾಗಿ ನಾಡಿನ ಅನೇಕ ಸಾಮಾನ್ಯರ ಅಸಮಾನ್ಯ ಸಾಧನೆಗಳು ಬೆಳಕಿಗೆ ಬಂದಿವೆ. ಈ ಮೂಲಕ ಸಿದ್ಧಿ, ಪ್ರಸಿದ್ಧಿಗಳ ಪರಿಭಾಷೆಗೆ ಹೊಸ ಆಯಾಮ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಅರುಣ್ ಮಾಡುತ್ತಾ ಬಂದಿದ್ದಾರೆ. ಇದೇ ಸಾಲಿಗೆ ಸೇರುವ ಕೃತಿ `ನಡುವೆ ಸುಳಿವ ಹೆಣ್ಣು’ ಇದು ಮಂಜಮ್ಮ ಜೋಗತಿಯವರ ಆತ್ಮಕಥನದ ನಿರೂಪಣೆ. ಮಂಜಮ್ಮ ಜೋಗತಿ ಈಗ ಅಜ್ಞಾತರಲ್ಲ. ಸಿದ್ದಿ ಪ್ರಸಿದ್ದಿಯ ವ್ಯಾಪ್ತಿಯಲ್ಲೇ ಇದ್ದಾರೆ. ಆದರೆ ಅವರು ಪ್ರತಿನಿಧಿಸಿರುವ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯವು ನಾಡಿನ ಬಹುಪಾಲು ಜನರಿಗೆ, ವಿಶೇಷವಾಗಿ ಓದುಗರಿಗೆ ಅಜ್ಞಾತವೇ ಆಗಿದೆ.

ನಮ್ಮ ಸಾಹಿತ್ಯಿಕ ಸಾಂಸ್ಕೃತಿಕ ಲೋಕವು ಸಂಶೋಧನ ಕೃತಿಗಳಿಂದ ಒಂದಷ್ಟು ಅರಿವು ಪಡೆದಿದ್ದರೂ ವಯಕ್ತಿಕ ಮತ್ತು ಸಾರ್ವತ್ರಿಕಗಳೊಂದಾದ ಜೀವನ ವಿಧಾನವನ್ನು ಈ ಕೃತಿಯಲ್ಲಿರುವಂತೆ ಗ್ರಹಿಸಿರುವುದು ಕಡಿಮೆಯಾಗಿದ್ದರೆ, ಅದಕ್ಕೆ ಸಾಹಿತ್ಯಿಕ- ಸಾಂಸ್ಕೃತಿಕ ಲೋಕಕಾರಣವಲ್ಲ. ವಯಕ್ತಿಕ ಅನುಭವಗಳ ಮೂಲಕವೇ ಒಂದು ಸಮುದಾಯಿಕ ಬದುಕನ್ನು ಕಟ್ಟಿಕೊಡುವ `ಜೋಗತಿ ಕೃತಿ’ಗಳ ಕೊರತೆ ಕಾರಣ. ಸಂಶೋಧನಾ ಕೃತಿಗಳು ಜೋಗತಿ ಸಂಪ್ರದಾಯದ ಆಳ ಅಗಲವನ್ನು ಅಧ್ಯಯನಿಸಿ ಕೊಡುಗೆ ನೀಡುತ್ತವೆ. ಈ ಕೃತಿಯು ಜೋಗತಿಯೊಬ್ಬರ ಇಲ್ಲಿಯವರೆಗಿನ ಜೀವನಾನುಭವದ ಮೂಲಕ ಕಥನ ಕುತೂಹಲವನ್ನು ಕಟ್ಟಿಕೊಡುತ್ತದೆ. ಈ ಕಥನವು ಕೇವಲ ವಯಕ್ತಿಕವಾಗದೆ ಸಮುದಾಯಿಕ ಪ್ರತೀಕವೂ ಆಗಿರುವುದರಿಂದ ಒಂದು ಸಾಮಾಜಿಕ ಸಂಕಥನವೂ ಆಗುತ್ತದೆ.

ಮಂಜಮ್ಮ ಜೋಗತಿಯವರು ತಮ್ಮ ಬದುಕಿನ ಪ್ರತಿ ವಿವರಗಳನ್ನೂ ಹೇಳುತ್ತಾ ಹೋಗಿದ್ದಾರೆ. ಅರುಣ್ ಅವರು ಈ ವಿವರಗಳನ್ನು ಅಕ್ಷರದ ರೂಪದಲ್ಲಿ ನಿರೂಪಿಸಿದ್ದಾರೆ. ಇದು ಮೊದಲ ಸ್ತರದ ಮಾತು. ಅವರು ಹೇಳಿದ್ದನ್ನು ಇವರು ಬರೆದರು ಎಂಬಲ್ಲಿಗೆ ನಿರೂಪಣೆಯ ಕೆಲಸ ನಿಲ್ಲುವುದಿಲ್ಲ. ನಿರೂಪಣೆ ಮಾಡುವವರು ಕಥನಕಾರರ ಭಾವ ಬುದ್ಧಿಗಳ ಮಿಡಿತದ ಮೇಲೆ ಹಿಡಿತ ಸಾಧಿಸಿದಾಗ ಕೃತಿಯೊಂದು ಸಾರ್ಥಕ ಆಕೃತಿ ತಾಳುತ್ತದೆ. ಹೀಗೆ ಭಾವ ಬುದ್ಧಿಗಳ ಕೃತಿ ಮೂಲಕ್ಕೆ ಅಕ್ಷರಾಕೃತಿ ಕೊಡುವ ಕ್ರಿಯೆಯನ್ನು ಅರುಣ್ ಅವರು ಸಾರ್ಥಕವಾಗಿ ನಿರ್ವಹಿಸಿದ್ದಾರೆ. ಕೃತಿಯೊಂದರ ಯಶಸ್ಸಿಗೆ ಮೂಲ ಅನುಭವ ಕಥನಕ್ಕೆ ಅಕ್ಷರ ಶಕ್ತಿಯ ಆಯಾಮ ಎಷ್ಟು ಮುಖ್ಯ ಎಂಬುದಕ್ಕೆ ಈ ಕೃತಿ ಉದಾಹರಣೆಯಾಗಿದೆ. ಮಂಜಮ್ಮ ಜೋಗತಿಯವರ ಜೀವನಾನುಭವಗಳನ್ನು ಅವರು ಹೇಳಿದ ರೀತಿಯಲ್ಲೆ ಆಡುನುಡಿಯಲ್ಲಿ ನಿರೂಪಿಸುವ ಮೂಲಕ ಅರುಣ್ ಭಾಷಾ ಸೋಪಜ್ಞತೆಯನ್ನು ಸಾರ್ಥಕಗೊಳಿಸಿದ್ದಾರೆ. ಕೃತಿಯನ್ನು ಓದುತ್ತಾ ಹೋದಂತೆ ಮಂಜಮ್ಮನವರ ಮಾತೇ ಮನಸ್ಸಾಗುವಂತೆ ನಿರೂಪಿಸಿದ್ದಾರೆ. ವಿಷಯಾಧಾರಿತವಾಗಿ ಅಧ್ಯಾಯಗಳನ್ನು ವಿಂಗಡಿಸುವ ಮೂಲಕ ಕಲಸುಮೇಲೋಗರ ವಾಗದಂತೆ ನೋಡಿಕೊಂಡಿದ್ದಾರೆ. ಇದು ಎಷ್ಟಾದರೂ ನೆನಪುಗಳ ನಿರೂಪಣೆಯಾದ್ದರಿಂದ ಕೆಲವೊಮ್ಮೆ ಕ್ರಮ ವಿಪರ್ಯಾಯವಾಗುತ್ತದೆಯಾದರೂ ಅದು ನಿರೂಪಣೆಯ ದೊಡ್ಡ ದೋಷವಲ್ಲ. ಇದು ಅನುಭವ ಕಥನಕಾರರ ನುಡಿಪಯಣಕ್ಕೆ ತೋರಿದ ಕಡು ನಿಷ್ಠೆಯಂತೆ ಕಾಣುತ್ತದೆ.

ಮಂಜಮ್ಮ ಜೋಗತಿಯವರ ವಯಕ್ತಿಕ ಬದುಕು ಸಮುದಾಯಿಕವಾದದ್ದೂ ಆಗುತ್ತದೆ ಎಂದು ನಾನು ಹೇಳಿದೆ. ಆ ಸಮುದಾಯಿಕವೆಂಬ ಪರಿಕಲ್ಪನೆಯಲ್ಲಿ ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಅಂಶಗಳ ಜೊತೆಗೆ ಮಾನವ ಶಾಸ್ತ್ರೀಯ (Antropogical) ಅಧ್ಯಯನಕ್ಕೂ ಆಕರವಾಗುವ ಅಂಶಗಳಿರುವುದು ವಿಶೇಷವಾಗಿದೆ. ಜೋಗತಿಯಾಗಿ ರೂಪಾಂತರಗೊಂಡ ವ್ಯಕ್ತಿತ್ವದ ವೇದನೆಯನ್ನು ಮಂಜಮ್ಮನವರು ವಿವರಿಸುವ ವಿಧಾನದಲ್ಲಿ ಮಾನಸಿಕ ಪರಕೀಯತೆಯ ಅನುಭವವನ್ನು ಕಾಣಬಹುದಾಗಿದೆ. ಒಂದು ಘಟ್ಟದಲ್ಲಿ ಬದುಕೆ ಬೇಡವೆನ್ನಿಸಿ ವಿಷ ಕುಡಿದುಬಿಡುತ್ತಾರೆ. ಆ ನಂತರ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿ ಜೀವ ಉಳಿಯುತ್ತದೆ. ಬದುಕುವುದೇ ಬೇಡವೆಂಬ ಪರಕೀಯತೆ ಎಷ್ಟು ಸಂಕಟಮಯವಾದುದೆಂದು ನಮ್ಮ ಅನುಭವಕ್ಕೂ ವೇದ್ಯವಾಗುತ್ತದೆ (ಪುಟ:35-39). ಇನ್ನೊಮ್ಮೆ ತಮ್ಮ ಸ್ವಂತ ಮನೆಯಲ್ಲೆ ಅನಾಥೆಯ ಅನುಭವವಾಗುತ್ತದೆ. `ಮೊದಲ ಸಲ ತಂದೆ ತಾಯಿ ಇರೋ ಮನೆಯಾಗೆ ಯಾರೂ ಇಲ್ಲದ ಅನಾಥೆ ಅಂತ ಅನ್ನಿಸಿತು’ (ಪುಟ-41). ಮಂಜಮ್ಮನವರು ಜೋಗತಿಯಾಗಿ ಪರ ಊರಿನಲ್ಲಿ ಇದ್ದಾಗ ಅಣ್ಣನ ಮದುವೆ ನಿಶ್ಚಯವಾಗುತ್ತದೆ. ಇವರನ್ನು ಕರೆಯಲೋ ಬೇಡವೋ ಎಂಬಂತೆ ಕರೆಯಲಾಗುತ್ತದೆ. ಮದುವೆಗೆ ಬಂದಾಗ ನೆಂಟರಿಷ್ಟರ ಎದುರು ಕಷ್ಟವಾದೀತೆಂಬ ಸೂಚನೆಯೂ ಸಿಗುತ್ತದೆ. ಹೆಣ್ಣು ಕೊಟ್ಟವರು ಹಿಂದೆ ಸರಿದರೆ ಎಂಬ ಆತಂಕವನ್ನು ಹಂಚಿಕೊಂಡೆ ಆಹ್ವಾನಿಸಲಾಗುತ್ತದೆ. ಆಗ ಅಣ್ಣನ ಮದುವೆಗೆ ಹೋಗಲಾಗದೆ ಅನುಭವಿಸಿದ ಪರಕೀಯ ಭಾವ ತೀವ್ರತೆಯನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ ಮತ್ತು ಅದು ಅಷ್ಟೇ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಈ ಪ್ರಸಂಗಗಳು ಮಂಜಮ್ಮನವರ ಮಾನಸಿಕ ಫಲಿತದ ಸಂಕಟಗಳಾಗಿದ್ದರೂ ಅವುಗಳಿಗೆ ಪ್ರತಿಕಾತ್ಮಕ ನೆಲೆಯೊಂದು ಒದಗುತ್ತದೆ. ಈ ಮಾನಸಿಕ ಪರಕೀಯತೆಯು ಮಂಜಮ್ಮ ಎಂಬ `ವ್ಯಕ್ತಿ’ ಮಾತ್ರಕ್ಕೆ ಕಾಡಿಸಿದ್ದಲ್ಲ; ಮಂಜಮ್ಮ ಎನ್ನುವ `ಜೋಗತಿ’ಗೆ ಕಾಡಿಸಿದ್ದು. ಹೀಗಾಗಿ ಎಲ್ಲಾ ಮಾನಸಿಕವೂ ಸಾಮಾಜಿಕವೂ ಆಗುತ್ತದೆ.

ಮಂಜಮ್ಮನವರು ತಮ್ಮ ಅನುಭವಗಳನ್ನು ಹೇಳುವಾಗ ಕೆಲವು ಮುಖ್ಯ ಆಚರಣೆಗಳನ್ನು ವಿವರಿಸುತ್ತಾರೆ. ಜೋಗತಿ ಆದದ್ದಂತೂ ಅವರದೇ ಸ್ವಂತ ಅನುಭವಾಚರಣೆ. ಜೋಗಪ್ಪ ಆಗುವ ಆಚರಣೆಯ ವಿವರಣೆ (ಪುಟ:105), ಮದುವೆ ನಂತರ ಜೋಗತಿ ಆದವರ ಪ್ರಸ್ತಾಪ (ಪು:108), ವಿಶೇಷವಾಗಿ ವಿಧವೆ ಆಚರಣೆ (ಪು:116) ಇವೇ ಮುಂತಾದ ವಿವರಗಳು ಮಾನವ ಶಾಸ್ತ್ರೀಯ ಆಯಾಮವನ್ನು ಪಡೆದಿವೆ.

ಕೃತಿಯ ಉದ್ದಕ್ಕೂ ಗಮನಿಸಬೇಕಾದ ಮುಖ್ಯ ಭೂಮಿಕೆಯೆಂದರೆ, ಮಂಜಮ್ಮ ಜೋಗತಿಯವರ ಆತ್ಮ ವಿಶ್ವಾಸದ ವಿಕಾಸ ಮತ್ತು ಸಾಧನೆ. ಆರಂಭಿಕ ಹಂತದಲ್ಲಿ `ಜೋಗತಿ’ ಯರನ್ನು ಕಲಾವಿದರೆಂದೆ ಪರಿಗಣಿಸಿರಲಿಲ್ಲ. ಅವರು ವಿಚಿತ್ರ ವ್ಯಕ್ತಿತ್ವದ ರೂಪಿಕೆಯೆಂದು ಹೊರಗಿಟ್ಟು ನೋಡಿದ್ದೇ ಹೆಚ್ಚು. ಇದನ್ನೂ ವಿವರಿಸುವ ಮಂಜಮ್ಮ ಜೋಗತಿಯವರು ಕಲೆಯೆ ಅಲ್ಲವೆಂದು ದೂರ ಇಟ್ಟಿದ್ದ ಜೋಗತಿ ಸಂಪ್ರದಾಯವು ಕಲೆಯೆಂದು ಪರಿಗಣಿತವಾಗಿ ಸರ್ಕಾರಿ ಸಂಸ್ಕೃತಿ ಇಲಾಖೆಯೂ ವೇದಿಕೆ ಒದಗಿಸಿದ `ಇತಿಹಾಸ’ವನ್ನು ವಿವರಿಸಿದ್ದಾರೆ. ಕಲೆಯಲ್ಲ ಎಂದದ್ದು ಕಲೆಯಾದದ್ದು, ಕಾಲವಿದರಲ್ಲ ಎಂದವರು ಕಲಾವಿದರಾಗಿ ವೇದಿಕೆ ಹತ್ತಿದ್ದು, ಕೊನೆಗೆ ಅಂತಹ ಕಲಾವಿದರನ್ನು ಗುರುತಿಸುವ `ಜಾನಪದ ಅಕಾಡೆಮಿಯ ಅಧ್ಯಕ್ಷೆಯಾದದ್ದು’ ಒಂದು ದೊಡ್ಡ ಸ್ಥಿತ್ಯಂತರ.

ಜೋಗತಿ ಸಂಪ್ರದಾಯವನ್ನಷ್ಟೇ ಅಲ್ಲ ಸಿನೆಮಾವನ್ನು ಕೂಡ ಮೊದಲಿಗೆ ಕಲೆ ಎಂದು ಗೌರವಿಸಿರಲಿಲ್ಲ. ಅದೊಂದು ಯಂತ್ರಗಳ ಉತ್ಪನ್ನ ಎಂದು ಕಡೆಗಣಿಸಲಾಗಿತ್ತು. ಸುಮಾರು 1940 ರ ವೇಳೆಗೆ ಸಿನೆಮಾಕ್ಕೆ ಕಲೆಯ ಗೌರವ ಸಿಕ್ಕಿತೆಂದು ಒಬ್ಬ ನಿರ್ದೇಶಕ ನಿಟ್ಟುಸಿರು ಬಿಟ್ಟಿದ್ದನ್ನು ಓದಿದ್ದೇನೆ. ಸಿನೆಮಾ ಮತ್ತು ಜೋಗತಿ ವಿಭಿನ್ನವಾಗಿದ್ದರೂ ನೆನಪಾಗಿ ಇಲ್ಲಿ ಹೇಳಿದೆ ಅಷ್ಟೆ. ಅದೇನೆ ಇರಲಿ, ಜೋಗತಿ ಸಂಪ್ರದಾಯದ ಸಾಮಾಜಿಕ ಸಂಕಟಗಳನ್ನು ಅನುಭವಿಸುತ್ತಲೇ ದೊಡ್ಡ ಮಟ್ಟದ ಮನ್ನಣೆಗೆ ಪಾತ್ರರಾಗುವಂತೆ ಬೆಳೆದ ಮಂಜಮ್ಮ ಜೋಗತಿಯವರ ಸಾಧನೆ ಅಸಾಧಾರಣವಾದುದು. ಬೇರೆ ಯಾವುದೇ ಕಲಾಪ್ರಕಾರದವರಿಗೆ ಇಲ್ಲದ ಸವಾಲುಗಳು ಜೋಗತಿಯರಿಗೆ ಇರುತ್ತವೆ. ಇಂಥ ಸವಾಲುಗಳ ಮಧ್ಯೆ ಬೆಳೆಯುತ್ತಾ ಮುಖ್ಯವಾಹಿನಿಯ ನಾಟಕಗಳನ್ನೂ ಅಭಿನಯಿಸುವಂತಾದದ್ದೂ ಸಾಮಾನ್ಯ ಬೆಳವಣಿಗೆಯಲ್ಲ. ಈ ಬೆಳವಣಿಗೆಯನ್ನು ಸ್ವೀಕರಿಸಿದ ಮನಸ್ಸುಗಳನ್ನೂ ಇಲ್ಲಿ ನೆನೆಯಬೇಕು. ಸ್ವೀಕರಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಿದವರೂ ಇಲ್ಲಿ ಮುಖ್ಯ. ಮಂಜಮ್ಮ ಜೋಗತಿಯವರ ಅರೆ ಅಲೆಮಾರಿ ಅನುಭವಗಳು ಈ ಎಲ್ಲಾ ವಲಯಗಳ ಹೊಳ-ಹೊರಗನ್ನು ತೆರೆದಿಡುವ ಸಾಮಾಜಿಕ ದಾಖಲೆಯಾಗುತ್ತದೆ.

ಮಂಜಮ್ಮ ಜೋಗತಿಯವರು ವಯಕ್ತಿಕವಾಗಿ ದಿಟ್ಟ ವ್ಯಕ್ತಿತ್ವದವರೆಂದು ಕೆಲವು ಪ್ರಸಂಗಗಳ ಮೂಲಕ ತಿಳಿದು ಬರುತ್ತದೆ. ಅನ್ಯಾಯ ಅಸಮಾನತೆಗಳನ್ನು ಕಂಡರೆ ಸಹಿಸದ ಅವರ ಮನೋಧರ್ಮವೂ ಗಟ್ಟಿಧನಿಯಾಗಿ ಸಾರ್ವಜನಿಕಗೊಂಡಿರುವುದುಂಟು. ಮಿಮಿಕ್ರಿ ಮಾಡಿ ಜೋಗತಿಯರನ್ನು ಅಣಕಿಸಿ ಜನರನ್ನು ನಗಿಸಿದ ಅದೇ ವೇದಿಕೆಯಲ್ಲಿ ಮಂಜಮ್ಮನವರು ಖಂಡಿಸಿದ್ದು ಅವರ ನೇರ ಮನೋಧರ್ಮ ಮತ್ತು ದಿಟ್ಟತೆಯ ಒಂದು ಉದಾಹರಣೆ (ಪು:122). ಅಂತೆಯೇ `ಜಾನಪದ ಜಾತ್ರೆ’ ಕಾರ್ಯಕ್ರಮದಲ್ಲಿ ತಮ್ಮಂತಹ ಕಲಾವಿದರ ವಸತಿ, ಊಟ ಮುಂತಾದ ವಿಷಯಗಳಲ್ಲಿ ತಾರತಮ್ಯ ಮಾಡಿದ `ಅಸಮಾನತೆ’ಯನ್ನು ಈ ಕೃತಿಯಲ್ಲಿ ಖಂಡಿಸಿದ್ದಾರೆ (ಪುಟ:120) ಮುಚ್ಚುಮರೆಯಿಲ್ಲದ ಮಂಜಮ್ಮ ಅವರ ಮಾತುಗಳನ್ನು ಮೂಲಕ್ಕೆ ಸ್ವಲ್ಪವೂ ದಕ್ಕೆ ಬಾರದಂತೆ ಅರುಣ್ ಅವರು ಹಿಡಿದಿಟ್ಟಿದ್ದಾರೆ. ಹೀಗಾಗಿ ಮಂಜಮ್ಮನವರೇ ನಮ್ಮ ಮುಂದೆ ಮಾತನಾಡಿದಂತೆ ಅನುಭವವಾಗುತ್ತದೆ.

ಅರುಣ್ ಅವರು ಮಂಜಮ್ಮನವರ ನಿರಾಕಾರ ಅಕ್ಷರಗಳಿಗೆ ಆಕಾರ ಕೊಟ್ಟು ಲಿಖಿತವಾಗಿಸುವಲ್ಲಿ ಮೂಲ ಮಾತುಗಾರಿಕೆಗೆ ಕಿಂಚಿತ್ತೂ ಕಡಿಮೆಯಾಗದಂತೆ ಸ್ಥಳೀಯ ಭಾಷಾ ಸೊಗಡನ್ನು ಸಾದರಪಡಿಸಿರುವುದರಿಂದ ಭಾಷಾಶಾಸ್ತ್ರದ ನೆಲೆಯಲ್ಲೂ ಈ ಕೃತಿಯ ಕೆಲವು ಅಂಶಗಳನ್ನು ಗಮನಿಸಬಹುದು. ಜನಪದ ಶೈಲಿಯ ದೃಷ್ಠಿಯಿಂದಲೂ ನೋಡಬಹುದು. ಈ ಕೃತಿಯಲ್ಲಿ ಬರುವ ಗಾದೆ ಅಥವಾ ಗಾದೆಯಂಥಹ ಮಾತುಗಳನ್ನು ಗಮನಿಸಿ:

`ದುಡಿಯೋನಲ್ಲ ದುಕ್ ಬಡಿಯೋನಲ್ಲ, ಸೋಮಾರಿ ಸಿದ್ಧ’ (ಪುಟ:77)

`ಒಳ್ಳೇರ್ ಜೊತೆಗೋದ್ರೆ ಒಳ್ಳೇ ಬುದ್ಧಿ, ಕೆಟ್ಟೋರ್ ಜೊತೆಗೋದ್ರೆ ಕೆಟ್ ಬುದ್ಧಿ’ (ಪುಟ:78)

`ಎಂದೂ ಕಾಣದವಳಿಗೆ ಮಂದನ್ನ ಮಜ್ಜಿಗೆ’ (ಪುಟ:164)

`ಹೊಟ್ಯಾಗಿನ ಕೂಸು ಬಟ್ಯಾಗ ಬೀಳತನಕ ಕಾಯಂ ಇರಂಗಿಲ್ಲ’ (ಪುಟ:166)

`ಆಕಳದಾಗ ಹೊಡದ್ರ ಆಕಳದಾಗ ಇರ್ತೀವಿ, ಎಮ್ಯಾಗ ಹೊಡದ್ರ ಎಮ್ಯಾಗ ಇರ್ತೀವಿ’ (ಪುಟ:173)

ಹೀಗೆ ಉದಾಹರಿಸುತ್ತಾ ಹೋಗಬಹುದು. ಮಂಜಮ್ಮನವರ ಲಹರಿಯಲ್ಲಿ ಆಡುನುಡಿಯ ಸೊಗಡು ಹೊರ ಹೊಮ್ಮಿರುವುದನ್ನು ಕಾಣಬಹುದು. ಆರಂಭಿಕ ಅರ್ಧದವರೆಗೆ ಲಹರಿಯ ಹರಿವು ಸ್ವಲ್ಪ ಹೆಚ್ಚಾಗಿ ಆಚೀಚೆ ಅಡ್ಡಾಡುವ ಅನುಭವ ಕಥನದ ಓಘಕ್ಕೆ ಕೊಂಚ ಕಡಿವಾಣ ಬೀಳುವುದೂ ಉಂಟು. ಏಕತಾನವೆನ್ನಿಸುವುದು ಉಂಟು. ಮಂಜಮ್ಮನವರ ಮಾತುಗಾರಿಕೆಯಲ್ಲಿ ಏನನ್ನೂ ಬಿಡಬಾರದೆಂಬ ಅರುಣ್ ಅವರ `ಹಟ’ ಪ್ರಮಾಣದಿಂದಲೂ ಸ್ವಲ್ಪ ದೀರ್ಘವಾಗಿರಬಹುದು. ಆದರೆ ಉಳಿದಂತೆ ಇದೊಂದು ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಓದಿಸಿಕೊಳ್ಳುವ ಗುಣದ ಯಶಸ್ಸು ನಿರೂಪಕರಿಗೆ ಸಲ್ಲಬೇಕು. ಪರಕೀಯ ಭಾವದ ಬಾವಿಗೆ ಬಿದ್ದರೂ ಎದ್ದು ಬಂದು ಸಾಧಿಸಿದ ಕೀರ್ತಿ ಮಂಜಮ್ಮ ಜೋಗತಿಯವರಿಗೆ ಸಲ್ಲಬೇಕು. ಇಬ್ಬರೂ ಸೇರಿ ಕನ್ನಡಕ್ಕೊಂದು ವಿಶಿಷ್ಠ ಕೃತಿಯ ಕೊಡುಗೆ ನೀಡಿದ್ದಾರೆ. ಮಂಜಮ್ಮ ಜೋಗತಿಯವರ ಬದುಕು, ಅರುಣ್ ಜೋಳದಕೂಡ್ಲಿಗಿಯವರ ಬರಹ; ಇದು ಬದುಕಿನ ಭಾವಕೋಶಕ್ಕೆ ಬದ್ಧವಾದ ಬರಹ, ಅಭಿನಂದನೆಗಳು.

 

MORE FEATURES

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...