ಪತ್ರಿಕೋದ್ಯಮದ ಚಹರೆಗಳನ್ನು ಪರಿಚಯಿಸುವ ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’


‘ಸ್ವಗತ’ದ ಮೂಲಕ ತಮ್ಮ ವಿಚಾರ-ಭಾವ-ವರ್ತನೆಗಳಿಗೆ ಅಂಕಣದ ಚೌಕಟ್ಟಿನಲ್ಲಿ ಅನುಭವ ಕಥನದ ಕಸುವು ತುಂಬಿರುವ ಚಿಂತಕ ನಾಗೇಶ ಹೆಗಡೆ ಅವರ ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಕೃತಿಯು, ಬದಲಾದ ಸನ್ನಿವೇಶಗಳಲ್ಲಿ ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಸ್ಥಿತಿಗತಿಗಳನ್ನು ಪರಿಚಯಿಸಿದ್ದು, ಸೂಕ್ಷ್ಮ ಒಳನೋಟದ ಉತ್ತಮ ಮಾರ್ಗದರ್ಶಕ ಕೃತಿಯಾಗಿದೆ ಎಂದು ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ ಬರಹವಿದು.

ವಿಶೇಷ, ವಿಸ್ಮಯ, ಕೌತುಕ, ಅಚ್ಚರಿ, ವಿದ್ಯಮಾನ….ಸಂಗತಿಗಳ ಮೂಲಕ ತಮ್ಮ ಅಂಕಣ ಇಲ್ಲವೇ ಬರಹವನ್ನು ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿಸುವ ಖ್ಯಾತಿಯ ನಾಗೇಶ ಹೆಗಡೆ ಅವರ ಇತ್ತೀಚಿನ ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಕೃತಿಯು, ಹತ್ತು ಹಲವು ಅಂಶಗಳ ಹಿನ್ನೆಲೆಯಲ್ಲಿ, ಈವರೆಗಿನ ಎಲ್ಲ ಬರಹಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ ಮಾತ್ರವಲ್ಲ; ವೃತ್ತಿ ಹಾಗೂ ವ್ಯಕ್ತಿತ್ವ ವಿಶೇಷತೆಯಾಗಿಯೂ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಪೂರೈಸುತ್ತದೆ.

ಕೃತಿಯನ್ನು ಕೇಂದ್ರೀಕರಿಸುವ ಮುನ್ನ ವಿಷಯದ ಸರಳೀಕರಣಕ್ಕಾಗಿ ಪರಿಧಿಯಂಚಿನ ಕೆಲ ಸಂಗತಿಗಳನ್ನು ಹೀಗೆ ಪಟ್ಟಿ ಮಾಡಬಹುದು;

  1. ಚಿಂತಕ, ಲೇಖಕ, ಪರಿಸರವಾದಿ ಇತ್ಯಾದಿಗಿಂತ ಪತ್ರಕರ್ತನ ಕಾಣ್ಕೆ: ಯಾವುದೇ ಘಟನೆ, ಸಂಗತಿಯನ್ನು ಏಕೆ, ಏನು, ಯಾರು, ಎಲ್ಲಿ, ಯಾವಾಗ, ಹೇಗೆ …ಹೀಗೆ ಪ್ರಶ್ನಿಸುತ್ತಲೇ ಸಾಮಗ್ರಿ ಸಂಗ್ರಹಿಸುವ ಪತ್ರಕರ್ತ, ತನ್ನದೇ ವೃತ್ತಿ ಅನುಭವವನ್ನು ಮತ್ತೊಂದು ‘ವರದಿ’ಯಾಗಿಸದೇ, ‘ಕಥನ’ವಾಗಿಸುವ ಪರಿ, ಉಳಿದೆಲ್ಲ ಬರಹಗಾರರಿಗಿಂತ ಭಿನ್ನ.

  2. ಪತ್ರಕರ್ತರು ಸಾಮಾನ್ಯವಾಗಿ ಬಹಿರ್ಮುಖಿ ವ್ಯಕ್ತಿತ್ವದವರು ಎಂಬುದು ಮನೋವಿಜ್ಞಾನದ ಅಧ್ಯಯನ. ಆದರೆ, ಕೆಲವೇ ಕೆಲವರು ಮಾತ್ರ, ಅಂತರ್ಮುಖಿ ವ್ಯಕ್ತಿತ್ವದವರು. ವಿದ್ಯಮಾನಗಳ ಹಿಂದಿನ ಅರ್ಥ, ಪ್ರೇರಣೆ ಇತ್ಯಾದಿ ಸರಿಯಾದ-ಸೂಕ್ಷ್ಮವಾದ ಗ್ರಹಿಕೆ ಇವರಿಗೆ ಸಾಧ್ಯವಾಗುತ್ತದೆ. ಆದರೆ, ಲೇಖಕ ನಾಗೇಶ ಹೆಗಡೆ ಅವರು ಈ ಎರಡೂ ವ್ಯಕ್ತಿತ್ವವನ್ನು ವೃತ್ತಿಯ ಭಾಗವಾಗಿ ರೂಪಿಸಿಕೊಂಡವರು ಎಂಬುದನ್ನು ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಕೃತಿಯ ಬರಹಗಳು ಕನ್ನಡಿ ಹಿಡಿಯುತ್ತವೆ.

  3. ಪತ್ರಕರ್ತ ವೃತ್ತಿಯಲ್ಲಿ ‘ಸ್ವಗತ’ ಎಂಬುದು ಅಂತರ್ಮುಖಿಯ ಅಪರೂಪದ ವರ್ತನೆ. ಎಲ್ಲ ಪತ್ರಕರ್ತರು ತಮ್ಮ ವಿಚಾರ-ಭಾವ-ವರ್ತನೆಗಳನ್ನು ‘ಸ್ವಗತ’ ಎಂಬ ನಿಗೂಢ ಕುಲುಮೆಯಲ್ಲಿ ‘ಪುಟ’ಕ್ಕಿಟ್ಟು ಅವಲೋಕಿಸಲಾರರು. ಏಕೆಂದರೆ, ಲೇಖಕರೇ ಹೇಳುವಂತೆ ‘ಪತ್ರಕರ್ತನಾಗುವುದೆಂದರೆ -ಅದು ಕೇವಲ ನೌಕರಿಯಲ್ಲ; ವೃತ್ತಿಯಲ್ಲ; ಅದೊಂದು ದೀಕ್ಷೆ. ಜೀವನವನ್ನು ಮುಡುಪಾಗಿಡಬೇಕಾದ ಒಂದು ಧರ್ಮ’. ಆದರೆ, ಈ ಬದ್ಧತೆ ಇಟ್ಟುಕೊಳ್ಳುವುದೆಂದರೆ, ಅದು ವೃತ್ತಿ ಮರೀಚಿಕೆಯ ಬೆನ್ನು ಹತ್ತಿದಂತೆ. ಹೀಗಾಗಿ, ವೃತ್ತಿಯ ಪ್ರತಿಯೊಂದನ್ನು ‘ಸ್ವಗತ’ದಲ್ಲಿ ಅವಲೋಕಿಸುವ ಮನೋಧರ್ಮ ಕಡಿಮೆಯಾಗುತ್ತಿದೆ. ಇದ್ದರೆ, ವೃತ್ತಿ ಬದ್ಧತೆ ಪಾಲನೆಯ ವ್ಯಕ್ತಿತ್ವದ ಪತ್ರಕರ್ತರಲ್ಲಿ ಮಾತ್ರ.

  4. ಪತ್ರಕರ್ತರಾದವರಿಗೆ ಈ ‘ಸ್ವಗತ’ ಎಂಬ ಅಂತರ್ಮುಖಿ ವರ್ತನೆ ಅಗತ್ಯ. ಈ ವೃತ್ತಿಯಲ್ಲಿ, ವಿರೋಧಾಭಾಸಗಳೇ ಹೆಚ್ಚು. ರಾಜ್ಯಶಾಸ್ತ್ರಕ್ಕಿಂತ ರಾಜಕಾರಣವೇ ‘ ಬದುಕಿನ ಮೌಲ್ಯ’ ಎಂಬಂತೆ ಬಿಂಬಿತವಾಗುತ್ತಿದೆ. ಅದರಂತೆ, ವೃತ್ತಿ ನಿರ್ವಹಣೆಯೇ ಮೌಲ್ಯ. ಸಂವೇದನೆ ಕಾಯ್ದುಕೊಳ್ಳುವುದು ಕಷ್ಟವಾಗುತ್ತಿದೆ. ಈ ‘ಸ್ವಗತ’ ವರ್ತನೆಗೆ ಲೇಖಕರು ಹೇಳುವಂತೆ, ನಡುರಾತ್ರಿಯ ಸಮಯವನ್ನು ನಿಗದಿಪಡಿಸಿದ್ದಾರೆ. ಹಗಲು-ರಾತ್ರಿ ಎನ್ನುವುದಕ್ಕಿಂತ ‘ಸ್ವಗತ’ಕ್ಕೆ ಸಮಯ ನೀಡಿದ್ದು, ಸದಾ ಒಂದಿಲ್ಲೊಂದು ಒತ್ತಡದ ಮಧ್ಯೆ ಇರಬೇಕಾದ ಪತ್ರಕರ್ತನೊಬ್ಬನ ವೃತ್ತಿ ಬದ್ಧತೆಯ ಪೈಕಿ ಅತೀ ಮಹತ್ವದ್ದು. ಈ ಕಾರಣಕ್ಕಾಗಿ, ಉಳಿದ ಬರಹಗಾರರ ಪೈಕಿ, ಪತ್ರಕರ್ತನ ಸಂವೇದನಾಶೀಲ ಬರಹಗಳು ವಿಭಿನ್ನತೆಯನ್ನು ಕಾಯ್ದುಕೊಳ್ಳುತ್ತವೆ ಎಂಬುದಕ್ಕೆ, ವ್ಯಕ್ತಿಯಾಗಿ ನಾಗೇಶ ಹೆಗಡೆ ಹಾಗೂ ಅವರ ಕೃತಿ ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಕೃತಿ, ಮನೋವೈಜ್ಞಾನಿಕ ಅಧ್ಯಯನಕ್ಕೆ ಹಲವು ಹೊಳವುಗಳನ್ನು ನೀಡುತ್ತದೆ.

  5. ಪತ್ರಿಕಾ ಬರಹಗಳು ಅವಸರದ ಸಾಹಿತ್ಯ ಎನ್ನಲಾಗುತ್ತದೆ. ಆದರೆ, ಬರಹಗಳು ಸಾಹಿತ್ಯದ ಸ್ಪರ್ಶ ಪಡೆಯದೇ ಹೋದರೆ ಅವು ವರದಿಗಳೇ. ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಕೃತಿಯು ಇದಕ್ಕೊಂದು ಅಪವಾದ. ‘ಸ್ವಗತ’ದ ಕುಲುಮೆಯಲ್ಲಿ ಚೊಕ್ಕವಾದ ಸಾಹಿತ್ಯ ಕೃತಿ. ‘ಸ್ವಗತ’ವು ಮನೋದೌರ್ಬಲ್ಯವಲ್ಲ; ಅಂತರ್ ಅವಲೋಕಿಸುವ ದೃಢತೆ. ಆರೋಗ್ಯಕಾರಿ ಮನೋಧರ್ಮ. ನಿವೃತ್ತಿಯಾಗಿ ಒಂದೂವರೆ ದಶಕ ಕಳೆದರೂ ಪತ್ರಕರ್ತನ ನೈಜ ಮನೋಧರ್ಮದ ಸಂಕೇತವಾಗಿ ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಎಂಬ ಶೀರ್ಷಿಕೆಯನ್ನೂ ಪರಿಗಣಿಸಬಹುದು.

‘ಸ್ವಗತ’ದ ಸೌಂದರ್ಯ: ‘ಪತ್ರಕರ್ತರಾಗಿ ನಮಗೆ ತೋಚಿದ ಸತ್ಯವನ್ನು ನಿರ್ಭಿಡೆಯಿಂದ ಹೇಳುವುದು, ನಮ್ಮ ಒಳದನಿಗೆ ನಾವೇ ಬದ್ಧರಾಗುವುದು ಸುಲಭದ ಮಾತಲ್ಲ’ ಎನ್ನುವ ಲೇಖಕರ ಮಾತು, ಪತ್ರಿಕಾ ವೃತ್ತಿ ಹಾಗೂ ಪತ್ರಕರ್ತರ ಗಂಭೀರ ಸ್ಥಿತಿಯನ್ನು ಸಾಂಕೇತಿಸುತ್ತದೆ.ಮಾತ್ರವಲ್ಲ; ಅಂತಹ ಸ್ಥಿತಿಯನ್ನು ಒಪ್ಪುವ, ಎದುರಿಸುವ ಅಗತ್ಯ ಹಾಗೂ ಅನಿವಾರ್ಯತೆಗಳನ್ನು, ತಮ್ಮದೇ ಅನುಭವದ ಗಟ್ಟಿತನ, ಅಧ್ಯಯನದ ಆಳ, ಪರಿಣಾಮಗಳ ತೀವ್ರತೆಯನ್ನು ಬರಹದಲ್ಲಿ ಕಾಣಿಸುತ್ತಾರೆ. ಕೃತಿಯಲ್ಲಿ ಒಟ್ಟು 26 ಅಧ್ಯಾಯಗಳಿದ್ದು, ಪ್ರತಿ ಅಧ್ಯಾಯವು, ಒಂದು ಜ್ವಲಂತ ಸಮಸ್ಯೆಯನ್ನು ಕೇಂದ್ರೀಕರಿಸಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ವಲಯದ ಎಲ್ಲ ವಿದ್ಯಮಾನಗಳನ್ನು ಬರಹ ಪರಿಧಿಗೆ ಒಳಪಡಿಸಿ, ಮೂಲ ಜ್ವಲಂತ ಸಮಸ್ಯೆಯ ಅಗಾಧತೆಯನ್ನು ಅನುಭವಕ್ಕೆ ತಂದುಕೊಡುವುದು ನಾಗೇಶ ಹೆಗಡೆ ಅವರ ಇಲ್ಲಿಯ ಬರಹ ಸೌಂದರ್ಯ.

ದಾಃ ‘ನಾಳಿನ ಕರ್ನಾಟಕದ ಗಿರ್ಮಿಟ್ ಕನ್ನಡ’ ಶೀರ್ಷಿಕೆಯ ಬರಹ. ಸಂದರ್ಭ: ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂಕೀರ್ಣ ಗೋಷ್ಠಿಯ ಅಧ್ಯಕ್ಷತೆ. ಪ್ರೇಕ್ಷಾಗೃಹದಲ್ಲಿ ಅಗ್ನಿ ನಿರೋಧಕ ಸಾಧನದ ಪಕ್ಷದಲ್ಲಿ ಅದರ ನಿಯಮಗಳಿರುವ ಇಂಗ್ಲಿಷ್ ಫಲಕ. ಮಾಹಿತಿ ಯುಗದಲ್ಲಿದ್ದೇವೆ. ರೈಲ್ವೆಗೆ 200 ವರ್ಷ, ಟಿವಿಗೆ 50 ವರ್ಷ, ಕಂಪ್ಯೂಟರ್ ಗೆ 20 ವರ್ಷ, ಮೊಬೈಲ್ ಗೆ 5 ವರ್ಷ, ವಾಟ್ಸ್ಯಾಪ್ ಗೆ 2 ವರ್ಷ ಹೀಗೆ ಅತ್ಯಾಧುನಿಕ ತಂತ್ರಜ್ಞಾನ ಭಾರತ ತಲುಪಲು ಹಿಡಿದ ಸಮಯ. ಹಕ್ಕಿ ಜ್ವರ, ಹಂದಿ ಜ್ವರ, ಜಾಗತಿಕ ತಾಪಮಾನ, ಸರ್ಕಾರ ಹೊಣೆಗೇಡಿತನ, ಖಾಸಗಿಯವರ ಅಟ್ಟಹಾಸ, ಬಿಸಿ ಪ್ರಳಯ, ನಾಪತ್ತೆಯಾದ ಮೂಲ ಸೌಲಭ್ಯಗಳು, ಹೊಸತನವನ್ನು ರೂಢಿಸಿಕೊಳ್ಳದ ವಾರ್ತಾ ಇಲಾಖೆ, ಪಠ್ಯಕ್ರಮಗಳು ಹೀಗೆ ಓದುಗರನ್ನು ಸಮಸ್ಯೆಯ ಗಂಭೀರತೆಯ ದರ್ಶನ ಮಾಡಿಸಿ, ಭಾಷಾ ಅಭಿಮಾನವಿರದಿದ್ದರೆ 100ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಂಗ್ಲಿಷಿನಲ್ಲೇ ಮಾಡಬೇಕಾಗುತ್ತದೆ. ಕನ್ನಡ ಹಾಗೆ ಪೂರ್ತಿ ನಾಮಾವಶೇಷ ಆಗುವ ಮುಂಚೆ ಕಡೇ ಪಕ್ಷ ಈ ಅಗ್ನಿಶಾಮಕ ಡಬ್ಬಗಳ ಮೇಲೆ ಕನ್ನಡದ ಮಾಹಿತಿ ಬರುತ್ತದೆಯೆ, ನೋಡಬೇಕು’ ಎಂದು ಬರಹ ಮುಗಿಸುತ್ತಾರೆ

ಒಂದು ವಿಷಯವನ್ನು ಎಷ್ಟು ಸಾಧ್ಯವೋ ಅಷ್ಟು ದಟ್ಟವಾಗಿ ಓದುಗರ ಅನುಭವಕ್ಕೆ ತಂದು ಕೊಡುವ ಇಲ್ಲಿಯ ಪ್ರತಿ ಅಧ್ಯಾಯವು, ವಿಷಯ ವಸ್ತುವಿನ ದೃಷ್ಟಿಯಿಂದ ಸಮೃದ್ಧವಾಗಿವೆ. ಬರಹ ಶೈಲಿಯು ಓದುಗರ ಕೈ ಹಿಡಿದೇ ನಡೆಸುತ್ತದೆ. ಅಂಕಿ-ಅಂಶಗಳು ಸಮೇತ ಹೊಸ ಹೊಸ ವಿಷಯ- ವಿದ್ಯಮಾನಗಳ-ಅಚ್ಚರಿಯ ಸಂಗತಿಗಳ ಸೇರ್ಪಡೆಯು ಕುತೂಹಲ ಕೆರಳಿಸುತ್ತವೆ. ಅಡ್ಡಗೋಡೆಯ ಮೇಲೆ ದೀಪ ಇಡುವ ಹಾಗೆ ಬರಹವಿರಬಾರದು. (100ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಂಗ್ಲಿಷಿನಲ್ಲೇ ಮಾಡಬೇಕಾಗುತ್ತದೆ) ಅದು ನಿರ್ಣಯದ, ಎಚ್ಚರಿಕೆಯ ಧ್ವನಿಯಲ್ಲಿ ಬರಹ ಮುಗಿಯುವುದು ‘ಸ್ವಗತ’ದ ತೀಕ್ಷ್ಣತೆಯ ಫಲ.

‘ಸ್ವಗತ’ ಕನ್ನಡಿಯಲ್ಲಿ ಪತ್ರಕರ್ತ: ‘ಈ ದಿನಗಳಲ್ಲಿ ನೀವು ಅದೆಷ್ಟೇ ಯುತ್ನಿಸಿದರೂ ಮುಖ್ಯವಾಹಿನಿಯಲ್ಲಿ ಧೀಮಂತ ಪತ್ರಕರ್ತನಾಗುವುದು ಸಾಧ್ಯವಿಲ್ಲ. ಅಲ್ಲಿ, ನಿಮ್ಮ ಸತ್ಯಕ್ಕೆ ಸ್ಥಾನವೇ ಇಲ್ಲ (ಅಧ್ಯಾಯ: ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ) ’ ಎನ್ನುವ ಲೇಖಕರು, ಇಂತಹ ಸಂದಿಗ್ಧತೆಯಲ್ಲೂ ಪರಿಹಾರ ಸೂಚಿಸುತ್ತಾರೆ; ಗೆರಿಲ್ಲಾ ಪತ್ರಕರ್ತರಾಗಬೇಕು’ ಎಂದು. ಮೌಲ್ಯರಹಿತ ಪತ್ರಿಕೋದ್ಯಮದಲ್ಲಿ ಪತ್ರಕರ್ತ ತನ್ನ ವೃತ್ತಿ ಘನತೆಯ ಬಗ್ಗೆ ಭ್ರಮೆಗಳಿಟ್ಟುಕೊಳ್ಳಬಾರದು ಎಂಬ ಲೇಖಕರ ಕಳಕಳಿಯು ಪತ್ರಿಕೋದ್ಯಮ ಪ್ರವೇಶಿಸುವ ಹೊಸಬರಿಗೆ ಈ ಲೇಖನ ಸೂಕ್ತ ಮಾರ್ಗದರ್ಶನ ನೀಡುತ್ತದೆ.

ಎಂತಹ ಪ್ರತಿಕೂಲ ಸ್ಥಿತಿಯ ಮಧ್ಯೆಯೂ ಲೇಖಕರು ತಾವು ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ, ರಾಜಕಾರಣಿಗಳಿಂದ, ಸಂಘಟನೆಗಳ ಪ್ರತಿನಿಧಿಗಳಿಂದ, ಸರ್ಕಾರದ ಹೊಣೆಗೇಡಿ ಚಿಂತನೆಗಳಿಂದ, ಜನರ ನಿರ್ಲಿಪ್ತ ಭಾವದಿಂದ ಕಲಿತ ಅನುಭವಗಳನ್ನು ಪ್ರತಿ ಅಧ್ಯಾಯವೂ ಬಿಂಬಿಸುತ್ತದೆ. ಲೇಖಕರು ಮಾಡಿದ ತನಿಖಾ ವರದಿಗಳು, ಸಾಮಾಜಿಕ ಹೊಣೆಗಾರಿಕೆ ಎಚ್ಚರಿಸುವ, ಹೋರಾಟದ ಅಗತ್ಯವನ್ನು ಮನವರಿಕೆ ಮಾಡುವ, ಅಗತ್ಯ ಬಿದ್ದಲ್ಲಿ, ಸ್ವತಃ ಲೇಖಕರು ಹೋರಾಟಗಾರರಾಗಿ ಚಳವಳಿಯಲ್ಲಿ ಪಾಲ್ಗೊಂಡು, ಶೋಷಕರ ವಿರುದ್ಧ ಧ್ವನಿ ಎತ್ತಿದ್ದು, ಅಭಿವೃದ್ಧಿ ನೆಪದಲ್ಲಿ ಶ್ರಮಿಕರ ಎತ್ತಗಂಡಿ, ಹೋರಾಟಗಳನ್ನು ಮೂಲೆಗುಂಪಾಗಿಸುವ ರಾಜಕಾರಣ, ಯೋಜನೆ ಹೆಸರಲ್ಲಿ ಸಾರ್ವಜನಿಕ ಹಣದ ಲೂಟಿ.. ಹೀಗೆ…ಪ್ರತಿ ಅಧ್ಯಾಯವು ನೈಜ ಪತ್ರಕರ್ತನೊಬ್ಬ ಎದುರಿಸುವ ಸಾಧ್ಯತೆಗಳ ಪಕ್ಷಿನೋಟ ನೀಡುತ್ತದೆ.

‘ನಡು ರಾತ್ರಿಯಲ್ಲಿ ಇಂಕ್- ಬ್ರಷ್ ಹಿಡಿದು ಸಂಗಡಿಗರ ಜೊತೆಗೆ ರೇಸ್ ಕೋರ್ಸ್ ರಸ್ತೆಗೆ ಹೋಗುತ್ತಿದ್ದೆ.ಖಾಲಿ ಗೋಡೆಗಳ ಮೇಲೆ ನಾವು ಬಿರ್ಲಾ ವಿರುದ್ಧ, ಗಣಿದೊರೆಗಳ ವಿರುದ್ಧ ಬರೆಯುತ್ತಿದ್ದೇವು. ಗಸ್ತು ಪೊಲೀಸರು ಕೇಳಿದರೆ, ‘ಪತ್ರಕರ್ತರು’ ಯಾರದ್ದೋ ಐಡಿ ಕಾರ್ಡ್ ತೋರಿಸಿ ಅವರನ್ನು ಸಾಗ ಹಾಕುತಿದ್ದೇವು’ (‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ) ಇಂತಹ ಬರಹದ ಹಿಂದಿನ ಚಿಂತನೆಯು ಪತ್ರಕರ್ತನಿಗಿರಬೇಕಾದ ಸಾಮಾಜಿಕ ಹೊಣೆಗಾರಿಕೆಯನ್ನು ತೋರುತ್ತದೆ. ಪತ್ರಿಕೋದ್ಯಮ-ಪತ್ರಕರ್ತ ಕುರಿತು ಯಾವುದೇ ಭ್ರಮೆ-ಭ್ರಾಂತಿಗಳನ್ನು ಇಟ್ಟುಕೊಳ್ಳದೇ, ಹೇಗೆ ನೈಜ ಪತ್ರಕರ್ತರಾಗಬಹುದು ಎಂಬುದಕ್ಕೆ ಲೇಖಕ ನಾಗೇಶ ಹೆಗಡೆ ಅವರು ತಮ್ಮ ಅನುಭವಗಳನ್ನು ‘ಸ್ವಗತ’ ಪ್ರಯೋಗಶಾಲೆಯಲ್ಲಿ ತೀಕ್ಷ್ಣ ಒಳನೋಟದಿಂದ ಕಂಡಿದ್ದು, ‘ಇದು ಸಿದ್ಧಾಂತ’ ಎಂಬಂತೆ ಪತ್ರಿಕೋದ್ಯಮದ ಸ್ವರೂಪವನ್ನು ದರ್ಶಿಸಿದ್ದಾರೆ. ಪ್ರತಿ ಲೇಖನವು ತನ್ನ ಆಂತರ್ಯದಲ್ಲಿ ಎಚ್ಚರ, ಅರಿವು, ಹೊಣೆಗಾರಿಕೆಯ ಪಂಜನ್ನು ಉರಿಸುತ್ತಿದೆ. ಆ ಬೆಳಕಿನಲ್ಲಿ ಪತ್ರಕರ್ತರು ಮಾತ್ರವಲ್ಲ; ಆಸಕ್ತರು ಸಹ ಇಡೀ ಪತ್ರಿಕೋದ್ಯಮದ ಒಟ್ಟು ಸುಕೃತ-ವಿಕೃತ-ವಿರಾಟ ರೂಪವನ್ನುಕಂಡುಕೊಳ್ಳಬಹುದು. ಹೀಗಾಗಿ, ಪತ್ರಕರ್ತರ ವಿರಾಟ ದರ್ಶವನ್ನು ಲೇಖಕರು ತಮ್ಮ ‘ಸ್ವಗತ’ ಕನ್ನಡಿಯಲ್ಲಿ ಕಾಣಿಸಿದ್ದಾರೆ.

ಶೀರ್ಷಿಕೆಗಳ ತೀಕ್ಷ್ಣತೆ, ಚೆಲುವು: ಪ್ರತಿ ಅಧ್ಯಾಯದ ವಸ್ತುವಿನ ಆಯ್ಕೆಯು ಕುತೂಹಲ ಕೆರಳಿಸುವಂತಿದ್ದರೆ, ಅದರ ಪ್ರವೇಶಕ್ಕೆ ಹಾತೊರೆಯುವಂತೆ ಮಾಡುವ ಶೀರ್ಷಿಕೆಯ ಚೆಲುವು ಮತ್ತೊಂದು ಬಗೆಯದು. ಅದರ ತೀಕ್ಷ್ಣತೆಯು ಓದುಗರನ್ನು ಸೆಳೆಯುತ್ತದೆ. ನಾಟೀ ಭಾಷೆಗಳ ನಿಟ್ಟುಸಿರು, ಕೊನೆಯುಸಿರು, ನಗರ ಸಂಸ್ಕೃತಿಯಲ್ಲಿ ನವಣೆ ಉಪ್ಪಿಟ್ಟು, ಮರುಭೂಮಿಗಳ ನಿರ್ಮಾಣಕ್ಕೆ ಮಾಧ್ಯಮಗಳ ಕೊಡುಗೆ, ಹುಚ್ಚುಮಳೆಯಲ್ಲಿ ಮತ್ತೆ ಕಂಡ ಗಾಂಧಿಮಾರ್ಗ, ಗುಡ್ಡದ ದೇವರಿಗೆ ಬಂಗಾರ, ತಗ್ಗಿನ ಕೆರೆಗಳಿಗೆ ಅಂಗಾರ, ಒಂದು ಪವಿತ್ರ ಸ್ವಾರ್ಥದ ಹಾದಿ, ಸರ್ವಭಕ್ಷಣೆ ಧೋರಣೆ; ನಿಸರ್ಗ ರಕ್ಷಣೆ ಯಾರ ಹೊಣೆ?, ಬಿಸಿ ಬಿಸಿ ಊಟ ಮತ್ತು ಬಿಸಿ ಭೂಮಿ, ಗೋವಿನ ಮರಣೋತ್ತರ ಇಕಾನಮಿ ಹೀಗೆ ಒಟ್ಟು 26 ಅಧ್ಯಾಯಗಳ ಶೀರ್ಷಿಕೆಗಳು ಮಾತ್ರವಲ್ಲ; ಉಪಶೀರ್ಷಿಕೆಗಳೂ ಸಹ ಆಕರ್ಷಕ ಹಾಗೂ ಪರಿಣಾಮಕಾರಿ. ದಿನಬಳಕೆ ವಸ್ತುಗಳಲ್ಲಿ ಕಲಬೆರಕೆ, ಗೋರೋಚನ ಎಂಬ ಢೋಂಗಿಮಣಿ, ಸಮುದ್ರಕ್ಕೆ ಸಿಹಿ ನೀರು ವ್ಯರ್ಥ ಎಂಬ ವ್ಯರ್ಥಾಲಾಪ.. ಹೀಗೆ …ಪ್ರತಿ ಈ ಶೀರ್ಷಿಕೆಗಳು ಓದುಗರ ಚಿಂತನೆ, ಪ್ರಜ್ಞೆಯನ್ನು ವಿಸ್ತರಿಸುತ್ತವೆ. ಮಾತ್ರವಲ್ಲ; ಸರ್ಕಾರದ ನಡೆಯನ್ನು ಖಂಡಿಸುವ ಆಕ್ರೋಶ ಇವರ ಬರಹ ಶೈಲಿಯಲ್ಲ. ಅದು ನಿರ್ಭಯವಾಗಿ ವಿವರಿಸುತ್ತದೆ ಎಂಬುದು ಮುಖ್ಯ. ಮತ್ತು, ಈ ಅಂಶವೇ, ಓದುಗರಿಗೆ ಆಪ್ತವಾಗುತ್ತದೆ. ‘ರಾಜಕಾರಣಿಗಳ ಅಧಿಕಾರಿಗಳ ಧೋರಣೆಗಳ ಬಗ್ಗೆ ನಮಗೆ ಭಯ-ಶಂಕೆ ಇರಬೇಕು’ (ಅಧ್ಯಾಯ: ಸುಸ್ಥಿರ ಭವಿಷ್ಯಕ್ಕಾಗಿ ಭೂತದ ಬಾಯಲ್ಲಿ ಭಗವದ್ಗೀತೆ) ಎಂಬ ಮಾತು ಇಡೀ ವ್ಯವಸ್ಥೆಯ ಕ್ರೌರ್ಯದ ಚಿತ್ರಣ ನೀಡುತ್ತದೆ, ಜೊತೆಗೆ, ಜನರನ್ನು ಎಚ್ಚರಿಸುತ್ತದೆ. ಗಮನಾರ್ಹ ಮತ್ತು ಪ್ರಮುಖ ಅಂಶವೆಂದರೆ, ಬರಹ ಆರಂಭಕ್ಕೂ ಮುನ್ನ, ಕೆಳಗೆ ಗೆರೆ ಹಾಕಿದ ದಪ್ಪ ಅಕ್ಷರಗಳಲ್ಲಿ ಮುದ್ರಿತ ಒಂದು ‘ಪ್ಯಾರಾ’ ದಷ್ಟಿರುವ ಸಾಲುಗಳು ಇಡೀ ಅಧ್ಯಾಯದ ಪ್ರಮುಖ ವಿಚಾರ-ವಿಷಯವಾಗಿದ್ದು, ಗಮನ ಸೆಳೆಯುತ್ತದೆ. ಪ್ರತಿ ಬರಹವು ಮೌಢ್ಯವನ್ನು ವಿರೋಧಿಸುತ್ತದೆ. ವೈಜ್ಞಾನಿಕತೆಯ ಅರಿವನ್ನು ಹೆಚ್ಚಿಸುತ್ತದೆ. ಪ್ರಾಚೀನ ಸಾಹಿತ್ಯ -ಇತಿಹಾಸವನ್ನು ಗೌರವಿಸುತ್ತದೆ; ವರ್ತಮಾನದ ಅಗತ್ಯವನ್ನು ಪ್ರತಿಪಾದಿಸುತ್ತದೆ. ಭೂತದ ಬೆಳಕಿನಲ್ಲಿ ಭವಿಷ್ಯತ್ತು ರೂಪಿಸಿಕೊಳ್ಳುವ ಅನಿವಾರ್ಯತೆಯನ್ನು ಸಮರ್ಥಿಸಿಕೊಳ್ಳುತ್ತದೆ. ವಿಶ್ವದ ಜನರಿಂದ ಕಲಿಯಲು ಪ್ರೇರೇಪಣೆ ನೀಡುತ್ತದೆ. ಸ್ವಾರ್ಥದ ಮೂಲ ‘ಅಸೂಯೆ’ಯ ನಮ್ಮ ನಡೆಯನ್ನು ವಿಡಂಬಿಸುತ್ತದೆ. ಅಂಕಿ-ಸಂಖ್ಯೆ-ಆಧಾರಗಳಿಂದ ತುಂಬಿ ತುಳುಕುವ ಇಲ್ಲಿಯ ಬರಹಗಳಲ್ಲಿ ಕಲ್ಪನೆಗಳಿಲ್ಲ. ಹೀಗಾಗಿ, ‘ಮನಸ್ಸಿನ ಸಕಾರಾತ್ಮಕ ಪರಿವರ್ತನೆಯ ಬರಹಗಳಿವು. ಏಕೆಂದರೆ, ನೈಜ ಪತ್ರಕರ್ತನೊಬ್ಬ ‘ಸ್ವಗತ’ದ ಮೂಲಕ ಬರೆದ ಬರಹಗಳು ಸಾಮಗ್ರಿಯಿಂದ ಸಮೃದ್ಧ. ಪ್ರಜಾವಾಣಿ ಸೇರಿದಂತೆ ವಿವಿಧ ಪತ್ರಿಕೆ, ಸಭೆ-ಸಮ್ಮೇಳನಗಳಿಗಾಗಿ ಬರೆದ ಲೇಖನಗಳಾದರೂ ಸಾಮಾಜಿಕ ಹೊಣೆಗಾರಿಕೆ, ಬರಹ ಸೂಕ್ಷ್ಮತೆ, ಮಾನವೀಯ ಸಂವೇದನೆಗೆ ಮಿಡಿಯುವ ಪತ್ರಕರ್ತನೊಬ್ಬನನ್ನು ವ್ಯಕ್ತಿಯಾಗಿ, ಆತನ ವ್ಯಕ್ತಿತ್ವದ ಹಿನ್ನೆಲೆಯಲ್ಲಿ, ಹಲವು ಮನೋವೈಜ್ಞಾನಿಕ ಅಧ್ಯಯನಗಳಿಗೆ ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ಕೃತಿಯು ವಿಫುಲ ಸಾಮಗ್ರಿ ಪೂರೈಸುತ್ತದೆ. ಲೇಖಕರು ‘ಸ್ವಗತ’ದ ಮೂಲಕ ಅನುಭವಗಳನ್ನು ಹಂಚಿಕೊಂಡಿರುವ ಪ್ರಯುಕ್ತ, ಈ ಬರಹಗಳು ಅಂಕಣ ರೂಪದ ಅನುಭವ ಕಥನದಷ್ಟು ಪರಿಣಾಮಕಾರಿಯಾಗಿವೆ.

(ಪುಟ: 268, ಬೆಲೆ: 240 ರೂ, ಭೂಮಿ ಬುಕ್ಸ್ ಪ್ರಕಾಶನ, -2021)

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...