ಪೂರ್ವಗ್ರಹ ನಿವಾರಣೆ ಕಳಕಳಿಯ ಕೃತಿ ‘ಔರಂಗಜೇಬ’


ಭಾರತದ ಇತಿಹಾಸದಲ್ಲೇ ಹೆಚ್ಚು ವಿಸ್ತಾರದ ಸಾಮ್ರಾಜ್ದ ಸ್ಥಾಪನೆ ಖ್ಯಾತಿಯ ಸಾಮ್ರಾಟ ಔರಂಗಜೇಬನ ನೈಜ ಇತಿಹಾಸವು ಪೂರ್ವಗ್ರಹಗಳಿಂದ ಮುಚ್ಚಿಹೋಗಿದೆ. ‘ಚಕ್ರವರ್ತಿಯನ್ನು ಚಕ್ರವರ್ತಿ’ ಎಂದೇ ಸಂಶೋಧನೆ ನಡೆಸುವ ದಿಟ್ಟತನ ಅಗತ್ಯವಿದೆ ಎಂದು ಪ್ರತಿಪಾದಿಸುವ ಡಾ. ಓಂ. ಪ್ರಕಾಶ ಪ್ರಸಾದ್ ಅವರ ‘AURANGZEB-A NEW REVIEW’ ಎಂಬ ಕೃತಿಯನ್ನು ಲೇಖಕಿ ಪ್ರೊ. ಷಾಕಿರಾ ಖಾನಂ (ಸಾಬಿ) ಅವರು ಕನ್ನಡಕ್ಕೆ ಅನುವಾದಿಸಿದ್ದು, ಕೃತಿಯ ಕುರಿತು ಪತ್ರಕರ್ತ ವೆಂಕಟೇಶ ಮಾನು ಅವರ ವಿಶ್ಲೇಷಣಾತ್ಮಕ ಬರಹವಿದು.

‘ಅಪೂರ್ಣ ಇತಿಹಾಸ ಇತಿಹಾಸವೇ ಅಲ್ಲ; ಒಂದು ವೇಳೆ ಇದ್ದರೆ ಅದು ಸುಳ್ಳು ಇತಿಹಾಸಕ್ಕಿಂತಲೂ ಅಪಾಯಕಾರಿ’

‘ಔರಂಗಜೇಬ: ಒಂದು ಹೊಸ ವಿಮರ್ಶೆ’’ ಕೃತಿಯ ಕೊನೆಯ ಪುಟದ ಕೊನೆಯ ಸಾಲುಗಳಿವು. ‘ಅಪೂರ್ಣ’ ಪರಿಕಲ್ಪನೆಯು ‘ಕೋಮು ಭಾವ ಪ್ರಚೋದಿತ ಪೂರ್ವಗ್ರಹಗಳಿಂದ ತುಂಬಿರುವ’ ಎಂಬ ಅರ್ಥವನ್ನು ಒಳಗೊಂಡಿದೆ. ಭಾರತದ ಇತಿಹಾಸ ವಿಶೇಷವಾಗಿ, ಮೊಘಲ್ ಸಾಮ್ರಾಜ್ಯ ಕುರಿತು ಬಹುತೇಕ ಇತಿಹಾಸ ತಜ್ಞರು ಪೂರ್ವಗ್ರಹಪೀಡಿತರಾಗಿ ಬರೆದ ಬಗ್ಗೆ ಅಸಮಾಧಾನವಿದೆ. ಹೀಗೆ ಬರೆದ ಇತಿಹಾಸವು ಅತ್ಯಂತ ಅಪಾಯಕಾರಿ ಎಂಬ ನಿಲುವಿಗೆ ಬಂದಿದ್ದು, ಈ ಕೃತಿಯುದ್ದಕ್ಕೂ ಧ್ವನಿಸುತ್ತದೆ. ಪೂರ್ವಗ್ರಹಗಳನ್ನು ನಿವಾರಿಸುವ ಉದ್ದೇಶವೇ ಲೇಖಕರ ಕೃತಿ ರಚನೆಯ ಧೃಡ ನಿಲುವು ಹಾಗೂ ಪ್ರೇರಣೆಯೂ ಆಗಿದೆ.

ಡಾ. ಓಂ. ಪ್ರಕಾಶ್ ಪ್ರಸಾದ್ ಅವರ ಹಿಂದಿ ಕೃತಿಯನ್ನು ‘ಔರಂಗಜೇಬ: ಒಂದು ಹೊಸ ವಿಮರ್ಶೆ’ ಶೀರ್ಷಿಕೆಯಡಿ ಚಿಂತಕಿ ಪ್ರೊ. ಷಾಕೀರಾ ಖಾನಂ (ಸಾಬಿ) ಅವರು ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿಯು, ಇತಿಹಾಸವನ್ನು ಇತಿಹಾಸವಾಗಿಯೇ ನೋಡುವ ಪ್ರಾಂಜಲ ಮನಸ್ಸಿನ ಸ್ವರೂಪವನ್ನು ದರ್ಶಿಸುತ್ತದೆ. ಮಾತ್ರವಲ್ಲ; ಇತಿಹಾಸದ ಸಂಗತಿ-ಘಟನೆಗಳನ್ನು ಕೆಲ ಇತಿಹಾಸ ತಜ್ಞರು ತಮ್ಮ ಕೋಮು ಬಣ್ಣದ ಕನ್ನಡಕದಿಂದ ನೋಡುವ ಮೂಲಕ ಇತಿಹಾಸಕ್ಕೂ ಅಪಚಾರ ಮಾಡಿದ್ದಾರೆ. ಆದ್ದರಿಂದ, ಮೊಘಲ್ ಸಾಮ್ರಾಜ್ಯ ಇತಿಹಾಸ ಬರಹಗಳ ಪುನರ್ ಪರಿಶೀಲನೆಗೂ ಆಗ್ರಹಿಸುತ್ತದೆ. ಮಾತ್ರವಲ್ಲ; ವ್ಯಕ್ತಿಯಾಗಿ ಔರಂಗಜೇಬ ಹಾಗೂ ಆತನ ವ್ಯಕ್ತಿತ್ವ, ಆಡಳಿತ ವೈಖರಿ, ಧಾರ್ಮಿಕ ನಂಬಿಕೆಗಳು ಇತ್ಯಾದಿ ಪ್ರತಿಯೊಂದಕ್ಕೂ ‘ಕೋಮು ಕಿಟಕಿ’ಯ ಮೂಲಕವೇ ವ್ಯಾಖ್ಯಾನಿಸಿ, ‘ಇದು ಔರಂಗಜೇಬ’ ಎಂಬ ಬಲವಂತದ ಹೇರಿಕೆಯಾಗಿ ಮುಂದುವರಿದಿರುವ ನಡೆಯನ್ನು ಪ್ರತಿಭಟಿಸುವುದು ಈ ಕೃತಿಯ ಮೂಲ ಮನೋಧರ್ಮ. ಇತಿಹಾಸವು ಪುರಾಣದಂತೆ ಕಥೆಯಲ್ಲ; ಕಲ್ಪನೆ ಇಲ್ಲವೇ ಊಹೆಯಿಂದ ಹುಟ್ಟದು. ಸಾಕ್ಷ್ಯಾಧಾರಗಳು ಬೇಕು; ಇವುಗಳ ಕೊರತೆ ಇದೆ ಎಂಬ ಕಾರಣಕ್ಕೆ ‘ಪೂರ್ವಗ್ರಹ’ ಸ್ವರೂಪದ ಬಣ್ಣ-ಬಣ್ಣದ ಊಹೆಗಳನ್ನು ತುಂಬಿ ವ್ಯಕ್ತಿ-ಘಟನೆಗಳನ್ನು ಬಲೂನಿನಂತೆ ಉಬ್ಬಿಸುವುದು ಇತಿಹಾಸವಲ್ಲ ಎಂಬುದು ಈ ಕೃತಿಯ ಎಚ್ಚರಿಕೆ ಹಾಗೂ ಸಾಹಿತ್ಯಕ ಗಟ್ಟಿತನವೂ ಆಗಿದೆ.

ಸಮತೂಕದ ದೃಷ್ಟಿಕೋನ: ಇತಿಹಾಸವು ಏಕಪಕ್ಷೀಯವಲ್ಲ; ಅದು ಬಹುಮುಖಿಯ ಆಯಾಮಗಳಲ್ಲಿ ಅಡಗಿರುತ್ತದೆ. ಅದರ ಸಮಗ್ರ ಶೋಧನೆಯ ಪ್ರಾಮಾಣಿಕತೆಯು ‘ಇತಿಹಾಸದ ನೈಜತೆ’ಗೆ ಕನ್ನಡಿ ಹಿಡಿಯುತ್ತದೆ. ಹೀಗಾಗಿ, ಇತಿಹಾಸ ದಾಖಲೀಕರಣಕ್ಕೆ ಸಮತೂಕದ ದೃಷ್ಟಿಕೋನ ಅಗತ್ಯ. ಈ ಮನೋಧರ್ಮವನ್ನು ಜೀವಾಳವಾಗಿರಿಸಿಕೊಂಡಿರುವ ‘ಔರಂಗಜೇಬ’ ಕೃತಿಯು, ಔರಂಗಜೇಬನ ವಿರುದ್ಧ ಹೇರಲಾದ ಎಲ್ಲ ಆರೋಪಗಳ ಪಟ್ಟಿ ಮಾಡುತ್ತಲೇ, ಒಂದೊಂದಾಗಿ ಅವುಗಳ ದುರ್ಬಲ ಮೂಲಗಳನ್ನು ಹಾಗೂ ಪೂರ್ವಗ್ರಹಗಳ ಸ್ವರೂಪವನ್ನು ಬಯಲು ಮಾಡುತ್ತದೆ.

ಔರಂಗಜೇಬನ ವಿರುದ್ಧದ ಆರೋಪಗಳು ಹಾಗೂ ಅವು ಸುಳ್ಳು ಎಂದು ಪ್ರತಿಪಾದಿಸುವ ಅಂಶಗಳು: ಹೀಗೆ ವರ್ಗೀಕರಿಸುವ ಮೂಲಕ ವಿಷಯವನ್ನು ಸರಳೀಕರಿಸಬಹುದು.

ಆರೋಪಗಳು: ಔರಂಗಜೇಬ ದುಷ್ಟ, ಕ್ರೂರಿ. ಹಿಂದೂದ್ವೇಷಿ. ತಂದೆ ಶಹಾಜಹಾನ್ ನನ್ನೇ ಜೈಲಿಗಟ್ಟಿದ, ಸಹೋದರ ದಾರಾಶಿಕೋವ್ ನನ್ನು ಕೊಲೆ ಮಾಡಿಸಿದ. ಈತನ ಆಡಳಿತದ ಅವಧಿಯಲ್ಲಿ ಹತ್ಯೆಗೀಡಾದವರ ಪೈಕಿ ಹಿಂದೂಗಳೇ ಹೆಚ್ಚು. ಜಿಜಿಯಾ (ತೆರಿಗೆ) ನೀಡದ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ. ಮುಸ್ಲಿಂ ಹೊರತುಪಡಿಸಿ ಉನ್ನತ ಹುದ್ದೆಗಳಿಂದ ಹಿಂದುಗಳನ್ನು ದೂರವಿರಿಸಿದ್ದ. ದೇವಾಲಯಗಳನ್ನು ಕೆಡವಿ ಅವುಗಳ ಮೇಲೆ ಮಸೀದಿ ನಿರ್ಮಿಸಿದ. ಇವನ ದುರಾಡಳಿತದಿಂದಲೇ ಮೊಘಲ್ ಸಾಮ್ರಾಜ್ಯ ಪತನಗೊಂಡಿತು…..ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ಆರೋಪಗಳು ಇತಿಹಾಸ ತಜ್ಞರ ಸಂಶೋಧನಾ ಬರಹಗಳೇ ಆಗಿವೆ. ಆದರೆ, ‘ಯಾವುದೇ ರಾಜನ ಅಥವಾ ಕಾಲದ ಅರ್ಧಂಬರ್ಧ ಅಧ್ಯಯನವು ಪಕ್ಷಪಾತದ ಅಧ್ಯಯನಕ್ಕಿಂತ ಹೆಚ್ಚು ಮಾರಕ. ಇತಿಹಾಸವನ್ನು ಪಕ್ಷಪಾತವಿಲ್ಲದೇ ಸ್ವತಂತ್ರವಾಗಿ ಅಧ್ಯಯನ ಮಾಡಬೇಕು. ತುಲನಾತ್ಮಕ ದೃಷ್ಟಿ ಅಗತ್ಯ’ ಎಂದು ಕೃತಿಕಾರರು ಉಲ್ಲೇಖಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅದರ ಸಮರ್ಥನೆಗಳು ಹೀಗಿವೆ;

ಪ್ರತ್ಯಾರೋಪಗಳು: ಔರಂಗಜೇಬನು ತಂದೆ ಇಲ್ಲವೇ ಸಹೋದರ ವಿರೋಧಿಯಾಗಿರಲಿಲ್ಲ. ಆತ ಸಿಂಹಾಸನ ಪ್ರೇಮಿ ಮಾತ್ರ, ಶಿಕ್ಷೆ ನೀಡುವಲ್ಲಿ ನ್ಯಾಯ ಪಕ್ಷಪಾತಿ. ಹಿಂದೂ-ಮುಸ್ಲಿಂ ; ಇಬ್ಬರಿಗೂ ಉಗ್ರವಾಗಿ ದಂಡಿಸಿದ. ಸಾಮ್ರಾಜ್ಯ ವಿಸ್ತರಣೆಯೇ ಆತನ ಗುರಿ. ಹಿಂದೂ ದೇವಾಲಯ ಮಾತ್ರವಲ್ಲ; ಮುಸ್ಲಿಂ ಆಡಳಿತಗಾರರಿದ್ದ ಗೋಲ್ಕುಂಡ, ಅಫಘನ್ ಹಾಗೂ ಬಿಜಾಪುರದ ಮೇಲೂ ದಾಳಿ ಮಾಡಿದ. ಈತ ಕ್ರೂರಿ, ದುಷ್ಟನು,ಹಿಂದೂ ವಿರೋಧಿಯೇ ಆಗಿದ್ದರೆ 50 ವರ್ಷದಷ್ಟು ಸುದೀರ್ಘ ಕಾಲ ಆಡಳಿತ ನಡೆಸುವುದು ಸಾಧ್ಯವಿರಲಿಲ್ಲ. .ಹೀಗೆ ಇಲ್ಲಿಯೂ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಹೇಳುವವರೂ ಸಹ ಪ್ರಸಿದ್ಧ ಇತಿಹಾಸ ತಜ್ಞರೇ!

ಈ ಮಧ್ಯೆ ವಾದ-ಪ್ರತಿವಾದಗಳ ಅಬ್ಬರವೂ ಐತಿಹಾಸಿಕ ಸಾಕ್ಷಾಧ್ಯಾರಗಳಿಂದ ಮುಕ್ತವಾಗಿಲ್ಲ. ತೌಲನಿಕ ಅಧ್ಯಯನವೂ ಈ ಅಬ್ಬರಗಳಿಗೆ ಕುಮ್ಮಕ್ಕು ನೀಡುತ್ತದೆ. ಈ ಅಂಶಗಳೂ ಸಹ ಇತಿಹಾಸ ತಜ್ಞರೇ ದಾಖಲಿಸಿದವು. ಆ ಪೈಕಿ ಕೆಲವು ಹೀಗಿವೆ;

ತೌಲನಿಕ ಅಧ್ಯಯನ: ಸಾಮ್ರಾಟ ಅಶೋಕನು ತನ್ನ ತಂದೆ ಮಾತ್ರವಲ್ಲ; ನೂರು ಜನ ಸಹೋದರರನ್ನು ಕೊಂದು ಮಗಧ ರಾಜ್ಯದ ಅರಸು ಪಟ್ಟವೇರಿದ. ಕಳಿಂಗ ಯುದ್ಧದಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣನಾದ. ಬೌದ್ಧವಿಹಾರಗಳಲ್ಲಿದ್ದ ಎಲ್ಲ ನಿರ್ಗಂಧರು ಧರ್ಮ ಭ್ರಷ್ಟರು ಎಂದು ಕೊಲೆಗೆ ಆದೇಶಿಸಿದ್ದ. ಆತನನ್ನು ಕುರೂಪಿ ಎಂದು ಮೂದಲಿಸಿದ ಒಬ್ಬಳ ಮೇಲೆ ಸೇಡು ತೀರಿಸಿಕೊಳ್ಳಲು 500 ಹೆಣ್ಣು ಮಕ್ಕಳನ್ನು ಜೀವಂತವಾಗಿ ಸುಟ್ಟ. ಒಬ್ಬ ಶ್ರಮಣನ ಮಾತು ಕೇಳಿ 500 ಜನ ಬ್ರಾಹ್ಮಣರನ್ನು ಕೊಂದ. ಹೀಗಿದ್ದೂ, ಸಾಮ್ರಾಜ್ಯ ವಿಸ್ತರಿಸಿದ ಮಾತ್ರಕ್ಕೆ ಅಶೋಕನಿಗೆ ಗೌರವ ನೀಡುವುದಾದರೆ ಆತನಿಗಿಂತಲೂ ಹೆಚ್ಚು ವಿಸ್ತಾರವಾದ ಮತ್ತು ಭಾರತದ ಇತಿಹಾಸದಲ್ಲೇ ಅತೀ ಹೆಚ್ಚು ವಿಸ್ತಾರದ ಸಾಮ್ರಾಜ್ಯ ಸ್ಥಾಪಕ ಔರಂಗಜೇಬನನ್ನು ಏಕೆ ಕಡೆಗಣಿಸಲಾಗಿದೆ?. ಅಶೋಕನಂತೆ ಈತ ರಾಜ್ಯದ ಬೊಕ್ಕಸನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡಿಲ್ಲ. ಕುಟುಂಬದ ಸದಸ್ಯರನ್ನೂ ಸಹ ಔರಂಗಜೇಬ ನಂಬಲಿಲ್ಲ ಎನ್ನುವುದಾದರೆ ಅವರು ಹಿಂದುಗಳಾಗಿದ್ದರೆ? ತಂದೆ ಶಹಜಹಾನ್ ನ ಪಕ್ಷಪಾತ ಧೋರಣೆ, ಅದನ್ನು ದುರುಪಯೋಗಪಡಿಸಿಕೊಳ್ಳುವ ಸಹೋದರ ದಾರಾಶಿಕೋವ್ ನ ಪ್ರವೃತ್ತಿ ಇತ್ಯಾದಿ ಸುಗಮ ಆಡಳಿತಕ್ಕೆ ಅಡ್ಡಿಯಾಗುವ ಎಲ್ಲ ಅಡೆ-ತಡೆಗಳನ್ನು ಮುಲಾಜಿಲ್ಲದೇ ನಿವಾರಿಸಿಕೊಳ್ಳುವ ಔರಂಗಜೇಬನ ಹಾದಿಯಲ್ಲಿ ತಂದೆ, ಸಹೋದರ, ಹಿಂದೂ-ಮುಸ್ಲಿಂ ಯಾರಿದ್ದರೇನು? ಇಂತಹ ಪ್ರವೃತ್ತಿಯು ಅಶೋಕನಲ್ಲಿ ಕಾಣುವುದಿಲ್ಲವೆ? ಅಶೋಕನು ರಾಷ್ಟ್ರೀಯ ಚಕ್ರವರ್ತಿ ಎನ್ನುವುದಾದರೆ, ಎಲ್ಲ ಆಯಾಮಗಳಿಂದಲೂ ಹೆಚ್ಚುಗಾರಿಕೆಯನ್ನೇ ಮೆರೆದ ಔರಂಗಜೇಬ ಯಾವುದರಲ್ಲಿ ಕಡಿಮೆ? ಎಂಬ ಕೃತಿಕಾರರ ಪ್ರಶ್ನೆಯೂ, ಇತಿಹಾಸದ ಮರುಪರಿಶೀಲನೆಯ ಅಗತ್ಯವನ್ನು ಪ್ರತಿಪಾದಿಸುತ್ತದೆ. ಒಬ್ಬ ಚಕ್ರವರ್ತಿಯನ್ನು ಚಕ್ರವರ್ತಿಯಾಗಿ ನೋಡದಿದ್ದರೆ ಇತಿಹಾಸ ದಾಖಲೆಯಲ್ಲಿ ಪೂರ್ವಗ್ರಹಗಳು ನುಸುಳುತ್ತವೆ. ಈ ಮನಃಸ್ಥಿತಿಯ ಇತಿಹಾಸ ತಜ್ಞರು ಔರಂಗಜೇಬನ ವ್ಯಕ್ತಿತ್ವ, ಆಡಳಿತ -ಸಾಮ್ರಾಜ್ಯ ವಿಸ್ತರಣೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಹೊರತು ಅದು ಇತಿಹಾಸದ ನೈಜ ಸಂಶೋಧನೆಯಾಗಿಲ್ಲ ಎಂದು ‘ಔರಂಗಜೇಬ’ ಕೃತಿಕಾರರು, ಸಾಕ್ಷ್ಯಾಧಾರಗಳನ್ನು ನೀಡುತ್ತಾರೆ.

ಇತಿಹಾಸಕ್ಕೆ ಅಪಚಾರ: ದೇಶದಲ್ಲಿ ಸಾಮಾನ್ಯವಾಗುತ್ತಿರುವ ಕೋಮು-ಗಲಭೆಗಳಿಗೆ ಇತಿಹಾಸದಲ್ಲಿ ಚಿತ್ರಿತವಾದ ಅಪಚಾರದ ಸಂಗತಿಗಳೆ ಕಾರಣ ಎಂದು ಅಭಿಪ್ರಾಯಪಡುವ ಲೇಖಕರು, ಇತಿಹಾಸ ಎಂಬ ಹಣೆಪಟ್ಟಿಯಡಿ ಔರಂಗಜೇಬ ಕುರಿತು ದಾಖಲಾದ ಅಂಶಗಳು ‘ವಿಷಕಾರಿ’ ಎಂದು ಗಮನ ಸೆಳೆದಿದ್ದಾರೆ. ‘ಹಿಂದೂ ಮತ್ತು ಮುಸಲ್ಮಾನ ಮಧ್ಯೆ ಒಡಕಿತ್ತು ಎಂಬ ಮಾತು ರಾಜಕೀಯ ಲಾಭದ ದೃಷ್ಟಿಯಿಂದ ಸರಿ. ಆದರೆ, ಐತಿಹಾಸಿಕ ದೃಷ್ಟಿಯಿಂದ ಅಲ್ಲ. ವೈಯಕ್ತಿಕ ಸ್ವಭಾವ ಹಾಗೂ ಲಾಭಕ್ಕಾಗಿ ಹಿಂದೂಗಳ ವಿರುದ್ಧ ಹಿಂದೂಗಳು ಹಾಗೂ ಮುಸಲ್ಮಾನರ ವಿರುದ್ಧ ಮುಸಲ್ಮಾನರು ಸಹಾಯ ಮಾಡಿರುವ ಮತ್ತು ಅವಶ್ಯ ಬಿದ್ದಾಗ ಮುಸಲ್ಮಾನರ ವಿರುದ್ಧ ಹಿಂದೂಗಳಿಗೆ ಸಹಾಯ ಮಾಡಿರುವ ಸಾಕಷ್ಟು ಪುರಾವೆಗಳಿವೆ’ ಎಂದೂ ಆಧಾರಗಳನ್ನು ನೀಡುತ್ತಾರೆ. ಮಾತ್ರವಲ್ಲ; ‘ಔರಂಗಜೇಬನ ಆಳ್ವಿಕೆಯಲ್ಲಿ ಮರಾಠರ, ಸಿಖ್ಖರ, ಜಾಟರ ವಿದ್ರೋಹಗಳಾಯಿತೇ ಹೊರತು ಕೋಮು ದಂಗೆಗಳಲ್ಲ’ ಮತ್ತಯು ಈ ವಿದ್ರೋಹಗಳೇ ಔರಂಗಜೇಬನನ್ನು ಕ್ರೂರಿ ಎಂದು ಬಣ್ಣಿಸುವುದು ಇತಿಹಾಸಕ್ಕೆ ಬಗೆದ ಅಪಚಾರ ವಲ್ಲವೆ? ಎಂದೂ ಲೇಖಕರು ಪ್ರಶ್ನಿಸುತ್ತಾರೆ.

ಹಿಂದೂ ಅರಸರು ಹಿಂದೂಗಳನ್ನೇ ಶೋಷಿಸುತ್ತಿದ್ದರು. ವಿಶಾಲ ಸಾಮ್ರಾಜ್ಯ ಸ್ಥಾಪನೆಯೇ ಒಬ್ಬ ಅರಸನ ಗುರಿಯಾಗಿರುವಾಗ, ಚಿಕ್ಕ-ಪುಟ್ಟ ಸಂಸ್ಥಾನಗಳ ನಾಶವು ಧರ್ಮದ್ರೋಹ ಹೇಗಾದೀತು? 12ನೇ ಶತಮಾನದಲ್ಲಿ ಕಾಶ್ಮೀರದ ಅರಸ ಹರ್ಷನಂತೆ ದೇವಾಲಯಗಳನ್ನು ಲೂಟಿ ಮಾಡಲು ಒಂದು ಪ್ರತ್ಯೇಕ ವಿಭಾಗ ಸ್ಥಾಪಿಸಿದ್ದ. ಮುಸಲ್ಮಾನರಿಗಿಂತ ಮರಾಠಿಗರು ಹೆಚ್ಚು ದೇವಾಲಯಗಳನ್ನು ಲೂಟಿ ಮಾಡಿದರು ಎನ್ನುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಆದರೆ, ದೇವಾಲಯಗಳನ್ನು ಲೂಟಿ ಮಾಡಲು ಔರಂಗಜೇಬನೂ ಸಹ ಇಂತಹ ವಿಭಾಗ ಹೊಂದಿದ್ದ ಎನ್ನುವುದಕ್ಕೆ ಆಧಾರವೇನಿದೆ? ಮೊಘಲ್ ಸಾಮ್ರಾಜ್ಯ ಪತನಕ್ಕೆ ಔರಂಗಜೇಬನೇ ಕಾರಣ ಎನ್ನುವುದಕ್ಕೆ ಆಧಾರಗಳಿಲ್ಲ. ಒಂದು ಸಾಮ್ರಾಜ್ಯ ಪತನ ಇಲ್ಲವೇ ಉತ್ಥಾನ ಇವು ಹತ್ತು ಹಲವು ಅಂಶಗಳನ್ನು ಒಳಗೊಂಡಿರುತ್ತವೆ ಎಂಬ ಕೃತಿಕಾರರ ಅಂಶಗಳು ಓದುಗರು ಹೊಸ ದಿಕ್ಕಿನತ್ತ ಯೋಚಿಸುವಂತೆ ಮಾಡುತ್ತವೆ. ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಣವನ್ನೂ ನೀಡಿದ್ದ. ಜಯಸಿಂಹ ಎಂಬಾತ ಇವನ ಆಪ್ತರಲ್ಲಿ ಒಬ್ಬನಿದ್ದ. ಔರಂಗಜೇಬನು ಹಿಂದೂ ದ್ವೇಷಿ ಹೇಗಾಗುತ್ತಾನೆ? ಆಡಳಿತ ವಿರೋಧಿ ಚಟುವಟಿಕೆಗಳಿದ್ದರೆ ಹಿಂದೂ-ಮುಸ್ಲಿಂ ಎನ್ನದೇ ಸದೆಬಡಿಯುತ್ತಿದ್ದ ಎನ್ನುವುದು ಸೂಕ್ತ. ಚಕ್ರವರ್ತಿಯನ್ನು ಆ ಸ್ಥಾನದಲ್ಲಿಟ್ಟು ನೋಡಬೇಕೆ ವಿನಃ ಆತನನ್ನು ಕೋಮು ಚೌಕಟ್ಟಿನಡಿ ನೋಡಿದ್ದೇ ಇತಿಹಾಸದ ದುರಂತ ಮಾತ್ರವಲ್ಲ ಇತಿಹಾಸ ತಜ್ಞರು ಇತಿಹಾಸಕ್ಕೆ ಬಗೆದ ಅಪಚಾರ. ಇಂತಹ ದಿಟ್ಟ ನಿಲುವುಗಳ ಸಾಕ್ಷ್ಯಾಧಾರಗಳು, ಸಮತೂಕದ ಮನಸ್ಥಿತಿ, ಅಧ್ಯಯನದ ಆಳ-ವಿಸ್ತಾರಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

ಔರಂಗಜೇಬ ಇತಿಹಾಸದ ಸಂಗತಿಗಳನ್ನು ದಾಖಲಿಸುವಲ್ಲಿ ನುಸುಳಿರುವ ಪೂರ್ವಗ್ರಹಗಳನ್ನು ಮೂಲ ಲೇಖಕರು ಗುರುತಿಸಿದ್ದಾರೆ. ತಪ್ಪು ಮಾಹಿತಿಗಳ ನಿವಾರಣೆಗಾಗಿ ಅವರ ಶ್ರಮದ ಕಳಕಳಿಯು ಈ ಕೃತಿಯ ತೂಕ ಹಾಗೂ ಮೌಲ್ಯ ಹೆಚ್ಚಿಸಿದೆ ಮಾತ್ರವಲ್ಲ; ಇತಿಹಾಸದ ಪಕ್ಷಪಾತಿ ಅಧ್ಯಯನ ವಿರುದ್ಧ ಸವಾಲು ಎಸೆಯುತ್ತದೆ. ಉತ್ಕೃಷ್ಟ ಭಾಷೆ, ಪ್ರಬುದ್ಧ ಶೈಲಿ ಹಾಗೂ ಒಳನೋಟದ ತೀಕ್ಷ್ಣತೆಯೊಂದಿಗೆ ಅನುವಾದವು ಗಮನ ಸೆಳೆಯುತ್ತದೆ.

(ಪುಟ: 104, ಬೆಲೆ: 110 ರೂ, ನವಕರ್ನಾಟಕ ಪ್ರಕಾಶನ-2020)

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...