ಪ್ರಕೃತಿ ಮತ್ತು ಮಾನವನ ಮುಖಾಮುಖಿ ಕಥೆ 'ಅಬ್ಬೆ' : ಶಿವರಾಜ್‍ ಬ್ಯಾಡರಹಳ್ಳಿ


"ಈಗಾಗಲೇ ಕಾಡಿನ ಪರಿಸರವನ್ನು ಅದರ ಒಳ ವಿವರವನ್ನು ಹೊಕ್ಕಿ ಬರೆಯುತ್ತಿರುವ ಹಾಲಾಡಿಯವರು ನಿಸರ್ಗದ ವಿಸ್ಮಯವನ್ನು ನೋಡುವುದಷ್ಟೇ ಅಲ್ಲದೇ ಅದರ ಬಗ್ಗೆ ಅಧ್ಯಯನ ಮತ್ತು ಸಂಶೋಧನಾಗ್ರಹಿತ್ವವಿರುವುದರಿಂದ ಓದುಗರಿಗೆ ಕುತೂಹಲವನ್ನು ಮೂಡಿಸುವಲ್ಲಿ ಈ ಕಾದಂಬರಿ ಹಿಂದೆ ಬೀಳುವುದಿಲ್ಲ. ಈಗಾಗಲೇ ಕನ್ನಡದ ಓದುಗರ ಎದೆಯೊಳಗೆ ಶಾಶ್ವತವಾಗಿ ಉಳಿದಿರುವ ತೇಜಸ್ವಿ ಯವರ ಕಥಾ ಜಗತ್ತು ಯಾವುದೇ ಲೇಖಕರ ಕಾಡಿನ ಕಥಾನಕವನ್ನು ಓದುತ್ತಿದ್ದರೆ, ಧುತ್ತನೆ ಕಣ್ಣು ಮುಂದೆ ಬರುತ್ತವೆ" ಎಂದು ಶಶಿಧರ ಹಾಲಾಡಿಯವರ 'ಅಬ್ಬೆ' ಕಾದಂಬರಿಯನ್ನು ವಿಮರ್ಶಿಸಿದ್ದಾರೆ ಶಿವರಾಜ್‌ ಬ್ಯಾಡರಹಳ್ಳಿ . ನಿಮ್ಮ ಓದಿಗಾಗಿ...

ಶಶಿಧರ ಹಾಲಾಡಿ ಯವರ 'ಅಬ್ಬೆ' ಕಾದಂಬರಿ ವಿಭಿನ್ನ ವಸ್ತುವುಳ್ಳ ವಿಶಿಷ್ಟ ಕಥಾನಕವನ್ನು ಒಳಗೊಂಡ ಕಥೆ. ಹಲವು ವರ್ಷಗಳ ಕಾಲ ಬ್ಯಾಂಕ್ ನಲ್ಲಿ ವೃತ್ತಿ ಮಾಡಿದ ಪ್ರಭಾವವಿರುವುದರಿಂದಲೋ ಏನೋ ಹಾಲಾಡಿಯವರ ಮೊದಲ ಕಾದಂಬರಿ 'ಕಾಲಕೋಶ' ದಲ್ಲಿ ಯೂ ಬ್ಯಾಂಕ್ ವಿವರಗಳು ದಟ್ಟವಾಗಿ ಬರುತ್ತವೆ.ಇದು ಹಾಲಾಡಿಯವರ ಎರಡನೇ ಕಾದಂಬರಿ. ಮೊದಲ ಕಾದಂಬರಿ ಗಿಂತ ಮತ್ತಷ್ಟು ಗಂಭೀರವಾಗಿಯೂ,ತಂತ್ರ,ಕೌಶಲ್ಯ,ಕತೆ ಹೆಣೆಯುವ ಶೈಲಿಯಿಂದಾಗಿಯೇ ಈ ಕಾದಂಬರಿಯ ವಸ್ತು ವಿಶೇಷವಾಗಿ ಓದುವಂತೆ ಆಕರ್ಷಿಸುತ್ತದೆ.ಕಾರಣ ಜೀವ ಪರಿಸರದಲ್ಲಿ ಮಾನವರಿಗಿಂತ ಭಿನ್ನವಾಗಿರುವ ಲೋಕವನ್ನು ಅರಿಯಲು ಕಾದಂಬರಿ ಏನಾದರೂ ಹೊಸ ಸುಳಿವು ಕೊಡುತ್ತದೆಯಾ ?ಎಂಬ ತವಕದಿಂದ ಓದುಗ ನೋಡುತ್ತಿರುತ್ತಾನೆ.ಹಾಗಾಗಿ ಈ ಕಥನದಲ್ಲಿ ಬರುವ ಹಲವು ಸೂಕ್ಷ್ಮ ವಾದ ವಿವರಗಳನ್ನು ದಟ್ಟವಾಗಿ ಕಟ್ಟಿರುವುದು ಕೂಡ ಪ್ರಾಕೃತಿಕ ನೋಟದ ಮತ್ತೊಂದು ಮುಖ ಅನಾವರಣವಾಗುತ್ತದೆ.ಈಗಾಗಲೇ ಕಾಡಿನ ಪರಿಸರವನ್ನು ಅದರ ಒಳ ವಿವರವನ್ನು ಹೊಕ್ಕಿ ಬರೆಯುತ್ತಿರುವ ಹಾಲಾಡಿಯವರು ನಿಸರ್ಗದ ವಿಸ್ಮಯ ವನ್ನು ನೋಡುವುದಷ್ಟೇ ಅಲ್ಲದೇ ಅದರ ಬಗ್ಗೆ ಅಧ್ಯಯನ ಮತ್ತು ಸಂಶೋಧನಾ ಗ್ರಹಿತ್ವ ವಿರುವುದರಿಂದ ಓದುಗರಿಗೆ ಕುತೂಹಲ ವನ್ನು ಮೂಡಿಸುವಲ್ಲಿ ಈ ಕಾದಂಬರಿ ಹಿಂದೆ ಬೀಳುವುದಿಲ್ಲ. ಈಗಾಗಲೇ ಕನ್ನಡದ ಓದುಗರ ಎದೆಯೊಳಗೆ ಶಾಶ್ವತವಾಗಿ ಉಳಿದಿರುವ ತೇಜಸ್ವಿ ಯವರ ಕಥಾ ಜಗತ್ತುಯಾವುದೇ ಲೇಖಕರ ಕಾಡಿನ ಕಥಾನಕ ವನ್ನು ಓದುತ್ತಿದ್ದರೆ ಥಟ್ಟನೆ ತೇಜಸ್ವಿಯವರ ಕಥೆಗಳು ಧುತ್ತನೆ ಕಣ್ಣು ಮುಂದೆ ಬರುತ್ತವೆ.

ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿ ಪ್ರವೇಶ ಪಡೆಯುವ ಶಿವರಾಂ ಅರಸಿಕೆರೆಯ ಅರೆಮಲೆ ನಾಡು ಕಲ್ಕೆರೆಗೆ ಬ್ಯಾಂಕ್ ಉದ್ಯೋಗಿಯಾಗಿ ಬರುತ್ತಾನೆ. ಬಂದ ಶಿವರಾಮನ ಬಗ್ಗೆ ಮ್ಯಾನೇಜರ್ ಆದಿಯಾಗಿ ಹೊಸಬ ಎನ್ನುವ ತಿರಸ್ಕಾರ ಒಂದಾದರೆ ಅಲ್ಲಿರುವ ಸೀನಿಯರ್ ಗಳು ಇನ್ನೊಂದು ತರಹದ ಪ್ರತಿಷ್ಠೆಯನ್ನು ತೋರುತ್ತಾ ಹೊಸ ಜಾಗಕ್ಕೆ ಹೋದ ಅನುಭವ ಎಲ್ಲರಿಗೂ ಆಗುವಂತೆ ಆದರೂ ಅಲ್ಲಿನ ಸಿಬ್ಬಂದಿಯವರು ಯಾರು ಯಾರಿಗೂ ವಿಶ್ವಾಸವಿರುವುದಿಲ್ಲ.ಮ್ಯಾನೇಜರ್ ಅಂತೂ ಇವನ ಕಾರ್ಯ ವೈಖರಿಯನ್ನು ಸದಾ ಅನುಮಾನಿಸುವ,ಅವಮಾನಿಸುವ ಕಿರುಕುಳ ಜೀವಿಯಂತೆ ಕೊನೆಯವರೆಗೂ ಕಾಟ ಕೊಡುವ ಜೀವಿಯಾಗುತ್ತಾನೆ.ಇದು ಬ್ಯಾಂಕ್ ಗಳ ಲೆಕ್ಕಾಚಾರದ ಬದುಕಿನೊಳಗೆ ಲೆಕ್ಕ ಇಟ್ಟು ವ್ಯವಹಾರ ಮಾಡುವ ಉದ್ಯೋಗಿಗಳ ಮನಸ್ಸಿನ ಭಾವನೇಯೋ ಅರ್ಥವಾಗುವುದಿಲ್ಲ.ಕರಾವಳಿಯ ಕಡೆಯಿಂದ ಬರುವ ಶಿವರಾಮನೂ ಸೌಮ್ಯ ಸ್ವಭಾವದ ಪ್ರತಿಕವೆಂಬಂತೆ ಕಾಣುತ್ತಾನೆ. ಹೊಸದರಲ್ಲಿ ಬಂದಾಗ ಕೆಲವೇ ದಿನಗಳಲ್ಲಿ ಅಲ್ಲಿಯ ಜನರ ಜೊತೆ ಬಹು ಬೇಗ ಹೊಂದಿಕೊಳ್ಳುವ ನಿರೂಪಕ ಸಹೋದ್ಯೋಗಿಗಳ ಮನಸ್ಸನ್ನು ಗೆಲ್ಲುವಲ್ಲಿ ಸಫಲನಾಗುತ್ತಾನೆ ಇದರಿಂದ ಮೆನೇಜರ್ ಎಷ್ಟೇ ಇವನಿಗೆ ಕಿರುಕುಳ,ರೇಗಾಟ ಮಾಡಿದರೂ ಅವನ ವಿರುದ್ಧವಾಗಿ ನಿಲ್ಲುವ ವಿರೋಧಿ ಪಡೆ ಹುಟ್ಟಿಕೊಂಡದ್ದರಿಂದಾಗಿ ಕೊಂಚ ಸಮಾಧಾನವಾಗುತ್ತದೆ.ಇದು ಸರ್ಕಾರು ಕಚೇರಿಗಳಲ್ಲಿ ನಡೆಯುವ ಸಾಂಕೇತಿಕವೂ ಇರಬಹುದು. ಒಂದು ರೀತಿಯಲ್ಲಿ ಶಿವರಾಂ ನ ಮೇಲೆ ಮಾನಸಿಕ ಭೇಟೆಯಾಡುತ್ತಾ ಹಿಂಸೆಯನ್ನು ನೀಡುವ ಮ್ಯಾನೇಜರ್ ನ ನಿತ್ಯ ಕಾಟವನ್ನು ಸಹಿಸದೆ ಅನ್ಯ ಮಾರ್ಗವಿರದೆ ಬಿಸಿ ತುಪ್ಪದಂತೆ ಸಹಿಸಿಕೊಳ್ಳುತ್ತಾ ಶಿವರಾಂ 'ಪ್ರೊಬೆಷನರಿ'ಎಂಬ ಅಡಕತ್ತರಿಯಲ್ಲಿ ಸಿಕ್ಕಿಕೊಂಡು ಕಾಲ ನೂಕುತ್ತಾನೆ.ಇಷ್ಟಾಗಿಯೂ ತುಂಬಾ ಅಚ್ಚರಿಯ ಸಂಗತಿ ಎಂದರೆ ಕಾಡಿನ ನಿಗೂಢ ಜಗತ್ತು.ಮತ್ತು ನಿತ್ಯ ಹಳ್ಳಿಯ ಜೀವನ ಹೊಸ ಅನುಭವ ಲೋಕವನ್ನೇ ತೆರೆದಿಡುತ್ತದೆ.ಕಾಡಿನ ಜೀವ ವೈವಿಧ್ಯತೆಯನ್ನು ಓದುಗರು ಓದುತ್ತಲೇ ಪಡೆದುಕೊಳ್ಳಬಹುದಾದ ಪ್ರಾಕೃತಿಕ ನೋಟಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.ಈ ಕಾದಂಬರಿ ಓದುತ್ತಿರಬೇಕಾದರೆ ತೇಜಸ್ವಿಯವರ ನಿಗೂಢ ಮನುಷ್ಯ ರು ಕಾದಂಬರಿ ನೆನಪಾಗುತ್ತದೆ.ಅಲ್ಲಿಯ ಬೆಟ್ಟ ಕುಸಿಯುವ ಭೀತಿಯಂತೆ ಗರುಡನಗಿರಿಯ ಅರಣ್ಯ ವಲಯವೂ ಕಾಣುತ್ತದೆ.

ಕಾಡಿನಲ್ಲಿ ಕಾಣಸಿಗುವ 'ಅಬ್ಬೆ' ಹೆಸರಿನ ಜೇಡವೂ ಈ ಕತೆಯೊಳಗೆ ರೂಪಕವಾಗಿ ಬಂದಿರುವುದು ಕತೆಗೆ ಮತ್ತೊಂದು ಕಥಾನಕ ಜೋಡಿಯಾಗುತ್ತದೆ.ಲೇಖಕರ ಕಾಳಜಿಯೋ ಎನ್ನುವಂತೆ ಕಾಡು ನಾಶವಾಗುವುತ್ತಿರುವಾಗ,ಮನುಷ್ಯನ ದುರಾಶೆಗೆ ಜೀವ ವೈವಿದ್ಯವು ಮಾರಾಟದ ವಸ್ತುವಾಗಿ ಬದಲಾಗುತ್ತಿರುವುದರ ಬಗ್ಗೆ ವಿಷಾಧತೆ ಮತ್ತು ವಿಷಣ್ಣತೆ ಇದೆ.ಯಾವುದೇ ಕಾಡುಗಳು ದೂರದಲ್ಲಿ ಕಾಣುವ ನೋಟಕ್ಕಿಂತ ಹತ್ತಿರ ಹೋದಂತೆಲ್ಲ ಅದರೊಳಗೆ ಅಡಗಿರುವ ಮಾಯಾಜಗತ್ತನ್ನು ಇನ್ನಾರೋ ಲಾಭ ಮಾಡಿಕೊಳ್ಳಲು ಹೊಂಚು ಹಾಕುತ್ತಿರುತ್ತಾರೆ.ಕಾಡನ್ನು ಬಲ್ಲ ಬುಡಕಟ್ಟು,ಅಲೆಮಾರಿ,ಮತ್ತುಸ್ಥಳೀಯರ ನೆರವಿನಿಂದ ವನ್ಯಜೀವಿ ಗಳನ್ನು ಭೇಟಿಯಾಡುವ ಒಂದು ಜಾಲ ಇರುವುದನ್ನು ಚಿತ್ರಿಸಿರುವುದು ಕಾಡಿನ ಇಂದಿನ ಕಥೆಯ ಸಂಕೇತದಂತೆ ಇದೆ. ಸಣ್ಣ ಆಸೆ ತೋರಿಸಿ ಕಾಡು ಪ್ರಾಣಿ ಗಳನ್ನು ಭೇಟೆ ಮಾಡಿಸಿ ಹಣ ಮಾಡಿಕೊಳ್ಳುವ ದೊಡ್ಡ ಕುಳಗಳು ಯಾವಾಗಲೂ ನಿಗೂಢ ವಾಗಿಯೇ ಕಾಣುತ್ತಾರೆ.ಇದು ಯಾವುದೇ ಕಾಡಿಗೆ ಹೋದರೂ ಅರಣ್ಯ ರಕ್ಷಣೆ ಮಾಡುವ ರಕ್ಷಕರು ಮತ್ತು ಭಕ್ಷಕರು ಬೇರೆ ಬೇರೆಯಾಗಿಯೇ ಕಾಣುತ್ತಾರೆ.ಅಳಿವಿನಂಚಿನಲ್ಲಿರುವ ವ ನ್ಯ ಜೀವಿಗಳಿಗೆ ಅಪಾರ ಬೇಡಿಕೆ ಇದ್ದು ಅದನ್ನು ಮಾರಾಟ ಮಾಡುವ ವ್ಯವಸ್ಥಿತ ಜಾಲವು ಅಬ್ಬೆ ಜೇಡ ದಷ್ಟೇ ನಿಗೂಢತೆ ಯಂತೆ ಇರುತ್ತದೆ.ಕಾಡಿನ ಸಂಪನ್ಮೂಲ ವನ್ನು ದೋಚುತ್ತಿರುವ ಐನಾತಿ ಆಸಾಮಿಗಳು ಎಲ್ಲೋ ಕೂತು ವ್ಯವಹಾರ ಮಾಡುತ್ತಿರುತ್ತಾರೆ.ಹಾಗಾಗಿ ಚಿಪ್ಪು ಹಂದಿಯನ್ನು ಹೊತ್ತು ತರುವ ಕೆಂಚಪ್ಪ ಇಂತಹ ಕೃತ್ಯದ ವ್ಯಾಪಾರದಲ್ಲಿ ಪ್ರತಿನಿಧಿಯಂತೆ ಕಾಣುತ್ತಾನೆ. ಚಿಪ್ಪು ಹಂದಿಯನ್ನು ಮಾರಾಟ ಮಾಡಿ ಆ ಹಣವನ್ನು ಬ್ಯಾಂಕ್ ನಲ್ಲಿ ಇಡುವ ಸಂದರ್ಭ ಬಂದಾಗ ಶಿವರಾಮ ನಂತಹ ಪರಿಸರ ಕಾಳಜಿಯ ವ್ಯಕ್ತಿಗಳು ಏನೂ ಹೇಳದ ಸ್ಥಿತಿಯಲ್ಲಿ ಅಸಹಾಯಕ ರಾಗುತ್ತ ಎಷ್ಟು ವರ್ಷದಿಂದ ಈ ತರಹದ ವ್ಯಾಪಾರಗಳು ನಡೆಯುತ್ತಿರಬಹುದು ಎನ್ನುವ ಊಹೆಗೆ ಮತ್ತಷ್ಟು ಕೈ ಕಾಲು ಬರುತ್ತವೆ. ಬರೆದಷ್ಟು ಬದುಕುವುದಾಗಲಿ,ಕಾಳಜಿ ಇದ್ದಷ್ಟು ಜಾರಿಗೆ ತರುವುದಾಗಲಿ ಅಷ್ಟು ಸುಲಭವಲ್ಲ ಎಂಬುದು ಖಾತರಿಯಾಗುತ್ತದೆ.ಸಾಮಾಜಿಕ ಶ್ರೇಣೀಕೃತ ವ್ಯವಸ್ತೆ ಯಲ್ಲಿ ಕಾಡನ್ನೇ ನಂಬಿ ಬದುಕುವವರನ್ನು ಬಹು ಬೇಗ ಅರ್ಥ ಮಾಡಿ ಕೊಂಡು ನಿರ್ಧಾರ ಮಾಡುವಲ್ಲಿ ಸಾಮಾಜಿಕ ವಿಜ್ಞಾನಿಯ ಮನಸ್ಸು ಬೇಕಾಗುತ್ತದೆ.

ಕತೆಯ ನಿರೂಪಕನಿಗೆ ಬ್ಯಾಂಕ್ ನಿತ್ಯ ಬೇಸರ ತರಿಸಿದರೆ ಹೊರಗೆ ಬಂದರೆ ಹಳ್ಳಿಯವರ ಜೊತೆ ಬೆರೆಯುತ್ತಾ ಯುವಕರ ನಡುವೆ ಆಟ ಆಡುತ್ತಾ ಒಳಗಿನ ಮಾನಸಿಕ ವೇದನೆಯನ್ನು ಕಳೆದು ಕೊಳ್ಳುತ್ತಾ ಇರುತ್ತಾನೆ.ಹಿರೇಕಲ್ ಗುಡ್ಡವೂ ಇವನ ಮತ್ತು ಗೆಳೆಯರ ಮನರಂಜನಾ ತಾಣವಾಗಿ ಮತ್ತು ರೂಪಕವಾಗಿ ಕಾಣುತ್ತದೆ.ಇಷ್ಟೆಲ್ಲ ಆದರೂ ಆಗಾಗ್ಗೆ ಬ್ಯಾಂಕ್ ಗೆ ಭೇಟಿಕೊಡುವ ಕಲ್ಲೂರಾಯರು ಕೆಲವು ಸಾರಿ ಬೆಟ್ಟ ಹತ್ತಿಸಿ ತನ್ನ ವಿಶೇಷ ಅನುಭವವನ್ನು ಹಂಚುಕೊಳ್ಳುತ್ತಾ ನಿರೂಪಕನಲ್ಲಿ ಹೊಸ ಕುತೂಹಲ ವನ್ನೇ ಉಂಟು ಮಾಡುತ್ತಾರೆ.ಕಾಡಿನ ವಿಸ್ಮಯ ಲೋಕವನ್ನು ಮತ್ತಷ್ಟು ಅರಿಯುವಂತೆ ಪರೋಕ್ಷವಾಗಿ ಕಲ್ಲುರಾಯರು ಪ್ರೇರೇಪಣೆ ನೀಡುತ್ತಾರೆ.ಇದರಿಂದ ಕೊಂಚ ಕಿರುಕುಳದಿಂದ ಬಿಡುಗಡೆ ಪಡೆಯುತ್ತಾ ಉಲ್ಲಸಿತನಾಗುವ ನಿರೂಪಕನಿಗೆ ಹಲವು ಸಂಗತಿಗಳು ಗೋಚರ ವಾಗುತ್ತವೆ.ಹಾಗಾಗಿ ಎಲ್ಲವನ್ನು ನೋಡಬೇಕು ಎನ್ನುವತ್ತ ಕಾಡಿನ ಕಡೆ ದಾಪುಗಾಲಿಡಲು ಸದಾ ಹಂಬಲಿಸುತ್ತಿರುತ್ತಾನೆ.ಆ ಹಂಬಲ ಒಂದು ಹಂತದವರೆಗೆ ಮಾತ್ರ ಇರುತ್ತದೆ.ಆದರೆ ಕಾಡನ್ನುಲೂಟಿ ಮಾಡುವ ಲೂಟಿಕೋರರು ಕಣ್ಣೆದುರೇ ನಿಂತರೂ ಏನೂ ಮಾಡಲಾಗದ ಅಸಹಾಯಕ ನಂತೆ ಆಗಿಬಿಡುವ ಸನ್ನಿವೇಶಗಳು ಎದುರಾದಾಗ ಮಾನಸಿಕವಾಗಿ ನೊಂದುಕೊಳ್ಳುವ ಪರಿ ಮಾತ್ರ ವಿಚಿತ್ರವೆನಿಸುತ್ತದೆ.ಕಾಡಿನ ಲ್ಲಿರುವ 'ಅಬ್ಬೆ'ಜೇಡವೂ ಕಣ್ಣಿಗೆ ಕಾಣುವಷ್ಟು ಅಪಾಯ ವಲ್ಲದಿದ್ದರೂ ಅದರ ಜೊತೆ ಕತೆ ಕಟ್ಟುವ ಸುದ್ದಿ ಸಂಗಾತಿಗಳು,ಕಥಾ ನಿರೂಪಕರು, ಜೀವ ವಿಜ್ಞಾನಿಗಳು ಹೇಳುವಂತೆ ಹೇಳುತ್ತಾರೆ.

ಗರುಡನಗಿರಿ ಮೀಸಲು ಅರಣ್ಯವು ಉಳಿಯುವಂತೆ ಆಗಾಗ ಪತ್ರಿಕೆಯಲ್ಲಿ ಬರುವ ಲೇಖನಗಳು ಪರಿಸರವು ಉಳಿಯುವ ಜರೂರುರನ್ನು ಜಾಗೃತಿಮೂಲಕ ಉಳಿಸು ಉದ್ದೇಶವೂ ಇರುತ್ತದೆ.ಈ ಕಥಾಹಂದರಕ್ಕೆ ಅಲ್ಲಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸುವ 'ಅಬ್ಬೆ' ಯು ಓದುಗರಿಗೆ ಅದರ ಬಗ್ಗೆ ಜನರಿಗೆ ಇರುವ ನಂಬಿಕೆ ಮತ್ತು ವಾಸ್ತವಗಳ ಬಗ್ಗೆ ಆಗಾಗ ಎಚ್ಚರಿಸುವುದು ಮುಖ್ಯವಾಗಿರುತ್ತದೆ.ಅದರ ಮೂಲಕ ಒಂದು ಪ್ರದೇಶವಾರು ತಮ್ಮ ಅನುಭವದ ಮಾತು ನೆನಪಾಗಿ ಉಳಿಯುತ್ತಾ ಬಂದು ರವಾನೆಯಾಗುವುದು ಕೂಡ ಜೀವ ಜಾಲದೊಳಗೆ ವೈವಿಧ್ಯತೆಯನ್ನು ಅರ್ಥೈಸುವುದೇ ಆಗಿದೆ.ಜೀವ ಜಂತುಗಳಲ್ಲಿ ವಿಷ ಜಂತುಗಳಿದ್ದರೂ ಅವುಗಳ ರಕ್ಷಣೆಗೆ ಮಾತ್ರ ಮತ್ತೊಂದರ ಮೇಲೆ ಆಕ್ರಮಣ ಮಾಡುವ ಜೀವಿಗಳಿಗೆ ಕೊಲ್ಲುವ ಇರಾದೆ ಇದೆ ಎಂದು ಹೇಳುವುದು ಕಷ್ಟವಾಗುತ್ತದೆ. ಹಾಗೆ ಇದ್ದರೂ ಪ್ರಕೃತಿ ಜನ್ಯವಾದ ನಿಸರ್ಗ ನಿಯಮ.ಇದರ ಬಗ್ಗೆ ಬೇರೆ ಬೇರೆಯಾದ ಚರ್ಚೆಗಳು ನಡೆದರೂ ಅದಕ್ಕೆ ಕಾರಣ ಸಮೇತ ಸ್ಪಷ್ಟತೆ ದಕ್ಕುವುದಿಲ್ಲ. ಕಾಡು ಜಗತ್ತಿನ ಆಚೆ ಇರುವ ಎರಡು ಕಾಲಿನ ಪ್ರಾಣಿಗಿಂತ ಅಪಾಯಕಾರಿ ಯಾಗಿರುವುದು ಮತ್ತೆಲ್ಲಿಯೂ ಕಾಣದು ಎನ್ನುವ ಮಾತು ಸತ್ಯವಾದುದೇ ಅಲ್ಲವೇ?.ಈ ಚರ್ಚೆಯನ್ನುಶಿವರಾಮನ ಸಹಪಾಠಿಗಳು ತಮಾಷೆಯಾಗಿ ಹೇಳಿದರೂ ಆ ಮಾತು ಧ್ವನಿ ಪೂರ್ಣವಾಗಿಯೇ ಕಾಣುತ್ತದೆ.

ಹೊಸದಾಗಿ ಕೆಲಸಕ್ಕೆ ಬಂದ ಶಿವರಾಮನಿಗೆ ವಿಪರೀತ ಎನ್ನುವಷ್ಟು ಕಿರುಕುಳ ಕೊಡುವ ಮ್ಯಾನೇಜರ್ ಅಲ್ಲಿಯ ಸಿಬ್ಬಂದಿಯ ಪಾಲಿಗೆ ವಿಷ ಜಂತುವಾಗಿಯೇ ಕಾಡುತ್ತಾನೆ.ಅದಕ್ಕೆ ಪ್ರತಿಯಾಗಿ ಮ್ಯಾನೇಜರ್ ವಿರುದ್ಧ ಸಹಪಾಠಿಗಳು ಸಂಗ್ರಹಿಸುವ ದಾಖಲೆಗಳನ್ನು ಮೇಲಧಿಕಾರಿಗೆ ಕಳುಹಿಸಿ ಕೊಂಚ ಅಧೀರನನ್ನಾಗಿ ಮಾಡುವಲ್ಲಿ ಸಿಬ್ಬಂದಿ ನೆರವಾದಾಗ ಶಿವರಾಮ್ ಗೆ ಒಳಗೊಳಗೇ ಸಮಾಧಾನ ಆದರೂ ಸಂಕಟ ಮಾತ್ರ ಕೊನೆಯಾಗುವುದಿಲ್ಲ. ಈ ಭಾಗವನ್ನು ಓದುವಾಗ ಸರ್ಕಾರಿ ಕಚೇರಿ ಗಳಲ್ಲಿ ಎಲ್ಲಾ ಕಾಲದಲ್ಲಿಯೂ ನಡೆಯುವ ಸೇಡಿಗೆ ಪ್ರತಿ ಸೇಡು ತೀರಿಸಿಕೊಳ್ಳುವ ವರಸೆಗಳು ನೆನಪಾಗುತ್ತವೆ.ಆಗ ಸಿಬ್ಬಂದಿಗಳು ಮಾತ್ರ ಸಂಶೋಧನೆಯ ಶಿಖಾರಿಗೆ ಇಳಿದು ಅದು ವೈಯಕ್ತಿಕ ಧಾಳಿಯಾಗಿಯೂ ಬದಲಾಗುವುದು ನೋಡುತ್ತಿದ್ದೇವೆ. ಈ ವಿವರವು ಕಾದಂಬರಿ ಯಲ್ಲಿ ಸಾಂಕೇತಿಕವಾಗಿ ಬಂದರೂ ವಾಸ್ತವವನ್ನೇ ಬಿಂಬಿಸುತ್ತದೆ.ಇನ್ನು ಅಬ್ಬೆ ಮಾತ್ರ ಕೊನೆಯವರೆಗೂ ಓದುಗರಿಗೆ ಒಗಟಾಗಿಯೇ ಉಳಿಯುತ್ತದೆ. ನಿಗೂಢವಾಗಿ ಸಾಯುವವರ ಬಗ್ಗೆ ಕತೆ ಕಟ್ಟಿ ಇನ್ನಾರನ್ನೋ ರಕ್ಷಿಸುವ ಹುನ್ನಾರವು ಅಡಗಿರುತ್ತದೆ.ಸಸ್ಯಶಾಸ್ತ್ರ ತಜ್ಞ ಕಲ್ಲುರಾಯರು ಆಗಾಗ್ಗೆ ಬ್ಯಾಂಕ್ ಗೆ ಬಂದರೂ ಅಬ್ಬೆ ಬಗ್ಗೆ ಖಚಿತವಾಗಿ ಹೇಳುವಲ್ಲಿ ಆಡಕ್ತಿ ತೋರುವುದಿಲ್ಲ.ಅದರಿಂದ ಕಾದಂಬರಿಯ ಮುಖ್ಯ ಎಳೆ (ಅಬ್ಬೆ) ಬಗ್ಗೆ ಇರಬೇಕಾದ ಪೂರ್ಣತೆ ಹೇಳುವುದು ಕಾಣುವುದಿಲ್ಲ.

ಸಾಲ ಮೇಳ ಮಾಡಿ ಮಾಜಿ ಸಚಿವರೊಬ್ಬರೂ ಜನರಿಗೆ ಹತ್ತಿರಾದ ಒಂದು ಕಾಲವನ್ನು ನೆನಪಿಸುವಂತೆ ಬ್ಯಾಂಕ್ ಸಾಲ ಕೊಡುವ ಒಂದು ದಶಕದ ಹಿಂದಿನ ಕತೆ ನೆನಪಾಗುತ್ತದೆ.ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆ,ಉತ್ತರ ಕನ್ನಡ ಜಿಲ್ಲೆಆ ಭಾಗದಲ್ಲಿ ಯೂರೋಪಿಯನ್ ಮೂಲದ ಆರ್ಭೂತ ನಾಥ ಹಣಕಾಸು ಸಂಸ್ಥೆ ಆರಂಭವಾಗಿ ಗ್ರಾಹಕರಿಗೆ ಮೋಸ ಮಾಡಿ ಅದರಿಂದ ಬೇಸತ್ತ ಅಲ್ಲಿಯ ವ್ಯಾಪಾರಸ್ಥರು,ಜಮೀನ್ದಾರರು,ಕಾಳುಮೆಣಸು ಬೆಳೆಯುತ್ತಿದ್ದವರು,ಕಾಫಿ ಬೆಳೆಗಾರರು ಸೇರಿ ಹೊಸ ಬ್ಯಾಂಕ್ ಗಳನ್ನು ಸ್ಥಾಪಿಸಿದ್ದುದು ಗೊತ್ತೇ ಇದೆ.ಹಾಗಾಗಿ ಕರಾವಳಿಗೆ ಬ್ಯಾಂಕ್ ಹಿನ್ನೆಲೆಯ ಯ ಮಹತ್ವ ಚಾರಿತ್ರಿಕವಾದುದು.ಹೀಗಿರುವಾಗ ಆ ಭಾಗದ ನಾಯಕರು ಮಂತ್ರಿ ಯಾಗಿ ಸಾಲಮೇಳ ಮಾಡಿ ಗ್ರಾಹರಿಗೆ ಬ್ಯಾಂಕ್ ನ್ನು ಸ್ನೇಹ ಮಯವಾಗಿಸಿ ಮಾಡಿ ಆಪತ್ ಭಾಂದವನಂತೆ ಮಾಡಿದ ಕೀರ್ತಿಯು ಆ ಭಾಗಕ್ಕೆ ಸಲ್ಲುತ್ತದೆ. ಇದರ ಸಣ್ಣ ಎಳೆ ಯೊಂದನ್ನು ಕಥೆಗೆ ಜೋಡಿಸಿರುವ ಲೇಖಕರು ಇಂದು ಸಾಲ ಕೊಡಿಸುವ ಏಜೆಂಟ್ರು , ರೂಪದಲ್ಲಿ ಬ್ರೋಕರ್ ಬಾಬಣ್ಣ ನವರಂತವರು ಎಲ್ಲಾ ಬ್ಯಾಂಕ್ಗಳಲ್ಲಿ ಸಿಗುತ್ತಿದ್ದರು.ಚಿಪ್ಪು ಹಂದಿ ಬೇಟೆಯಾಡಿ ತರುವ ಕೆಂಚಪ್ಪ ನೂ ಕೂಡ ಸಾಲದ ಫಲಾನುಭವಿಯಾಗಿ ಬ್ಯಾಂಕ್ ಗೆ ಬರುವಾಗ ಶಿವರಾಮನು ಅವನನ್ನು ನೋಡಿ ವ್ಯಥೆ ಪಡುತ್ತಾನೆ. ಮ್ಯಾನೇಜರ್ ಇವೆಲ್ಲವನ್ನು ಹೇಗೋ ನಿಭಾಯಿಸುತ್ತಾ ತನ್ನ ಆಸಲಿತನವನ್ನ ಮರೆ ಮಾಚಲು ತನ್ನ ಖಡಕ್ ಮಾತು,ದರ್ಪ,ವನ್ನು ತೋರಿಸುತ್ತಾ ಶಿವರಾಮನ ಮೇಲೆ ಪ್ರೊಬೆಷನರಿ ಎನ್ನುತ್ತಲೇ ತನ್ನ ಕತ್ತಿಯನ್ನು ಝಳಪಿಸುತ್ತಿರುತ್ತಾನೆ.ಆ ಮೂಲಕ ತನ್ನ ಬದಲಾಗದ ಹೊಟ್ಟೆಯ ಕಿಚ್ಚನ್ನು ಕಾರಿಕೊಳ್ಳುವ ಹಿಂಸೆ ಯ ಜೀವಿಯಾಗಿ ನಿಲ್ಲುತ್ತಾನೆ.

ಬ್ಯಾಂಕ್ ನ ಸಿಬ್ಬಂದಿಯೂ ಕೂಡ ಈ ಕತೆಯಲ್ಲಿ ಪಾತ್ರ ವಾಗಿ ಬಂದು ಅಲ್ಲಲ್ಲಿ ಕತೆ ಮುಂದುವರೆಯಲು ಮತ್ತು ಮನರಂಜನೆ ಗೋಷ್ಟಿಗೂ ಅವರ ಮಾತುಕತೆಗಳು ಸ್ವಾರಸ್ಯವಾಗಿ ಇವೆ. ಅಲ್ಲದೇ ಹಳ್ಳಿಯ ಸಹಜ ಜೀವನದ ಕತೆ ವ್ಯಥೆ,ಕೂಡಿ ಸಣ್ಣ ಸಣ್ಣ ವಿವರಗಳೂ ಸೂಕ್ಷ್ಮ ದ ನೆಲೆಯಲ್ಲಿ ಅನಾವರಣ ಗೊಳ್ಳುತ್ತವೆ.ಹಾಗಾಗಿ ಹಳ್ಳಿಯ ಒಡಲಲ್ಲಿರುವ ಮುಗ್ದತೆ ಮತ್ತು ಮಾಯಕತೆ ಒಂದಾಗಿ ಹಳ್ಳಿಯ ಚಿತ್ರಣವೂ ಕತೆಗೆ ಸಹಾಯ ಮಾಡುತ್ತದೆ.ಮೊದಲಾಗಿ ಕಾಡಿನ ಪ್ರಾಣಿ ಪಕ್ಷಿಗಳು

ಜಾಗ ಪಡೆದಿರುವುದರಿಂದ ಈ ಕಾದಂಬರಿಗೆ ಒಂದು ಪ್ರಾಕೃತಿಕ ಚೌಕಟ್ಟು ಆವರಿಸಿ ಜೀವ ಜಾಲದ ಸಂಕುಲವನ್ನೇ ಕಾಣಿಸುತ್ತಾರೆ.ಇದರಿಂದಾಗಿ ಕಾದಂಬರಿಯ ಆಶಯ ಎಲ್ಲೂ ಹಳಿ ತಪ್ಪದಂತೆ ಎರಡೂ ನೆಲೆಯಲ್ಲಿ ಸಾಗುತ್ತದೆ.ಲೇಖಕರಾದ ಶಶಿಧರ ಹಾಲಾಡಿ ಯವರು ಚಾರಣ ಬರಹ,ಪರಿಸರ ಕುರಿತ ಬರಹಗಳನ್ನು ಬರೆದಿರುವುದರಿಂದ ಸಹಜವಾಗಿಯೇ ಅವರ ವಾಂಛೆ ಎಂತಹದ್ದು ಎನ್ನುವುದು ಇಲ್ಲಿ ಮುಂದುವರೆದಿದೆ.ಪ್ರಕೃತಿಯ ಮೇಲಿರುವ ಮೋಹವು ಮತ್ತು ಬಹುಕಾಲ ಅವರನ್ನು ಆವರಿಸಿದ ಮನಸ್ಸಿನ ಕತೆಗಳು ಈ ಮೂಲಕ ಅನಾವರಣ ವಾಗಿಸಿ ಕಾದಂಬರಿಯು ಹಲವು ಕಾಡಿನ ಕತೆಯನ್ನು ನೆನಪಿಸುತ್ತದೆ. ಹಾಗಾಗಿ ಓದುಗನಿಗೆ ತೇಜಸ್ವಿಯವರ ಒಂದು ಶೈಲಿಯೂ ಇಲ್ಲಿ ಬಳಕೆಯಾಗಿರಬಹುದು ಎಂದು ಅನ್ನಿಸಿದರೆ ಅದೇ ತಪ್ಪಿಲ್ಲ.ಹಿರಿಯ ಲೇಖಕರಿಂದ ಕಿರಿಯ ಲೇಖಕರಿಗೆ ಪ್ರಭಾವ ಪ್ರೇರೇಪಣೆ ದಕ್ಕಿದರೆ ಅದನ್ನು ಅಲ್ಲಗಳೆಯಲಾಗದು.ಆದ್ದರಿಂದ ಇಲ್ಲಿಯೂ ತೇಜಸ್ವಿಯವರು ನೆನಪಾಗಿ ಕಾಡುತ್ತಾರೆ.ಅವರ ಕಥೆಗಳು ನೆನಪಲ್ಲಿ ಬಂದು ಹೋಗಬಹುದು. ಓದುಗನ ಮನಸ್ಸಲ್ಲಿ ಈಗಾಗಲೇ ಓದಿರುವ ಕಥಾ ಚಿತ್ರಗಳು ಬಹುಕಾಲ ಉಳಿದಿರುತ್ತವೆ ಎಂದರೆ ಅದು ಲೇಖಕರ ಪ್ರಭಾವವೂ ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಕಾದಂಬರಿ ಯ ಕೊನೆಯಲ್ಲಿ ಶಿವರಾಮ ನಿಗೆ ವರ್ಗಾವಣೆ ಆಗುತ್ತದೆ ಎನ್ನುವ ಗುಲ್ಲು ಕಚೇರಿಯಲ್ಲಿ ಕೊನೆಗೂ ನಿಜವಾಗುತ್ತದೆ.ಇದು ಏಕರೀತಿಯ ಶಿಕ್ಷೆಯ ರೂಪದಂತೆ ಭಾವಿಸುವ ಸಿಬ್ಬಂದಿ ಮತ್ತು ಅವನ ಸ್ನೇಹಿತರು ನೊಂದುಕೊಂಡರೂ ಕೆಲವೇ ದಿನಗಳಲ್ಲಿ ಮ್ಯಾನೇಜರ್ ಗೂ ಕೂಡ ವರ್ಗಾವಣೆ ಆಗುವ ಮೂಲಕ ಅವನ ವಿರೋಧಿಗಳು ನಿರಾಳರಾಗುತ್ತಾರೆ.ಹಿರೇಕಲ್ ಗುಡ್ಡ,ರಾಜೇಶನ ಮಾತುಗಳು, ಭಾಸ್ಕರ್ ನ ಮಾತುಗಳು ಗರುಡನ ಗಿರಿಯ ದಟ್ಟ ಅರಣ್ಯದ ವಿವರಗಳು ಸಮಯೋಚಿತವಾಗಿರುವುದರಿಂದ ಕಾದಂಬರಿ ನೂತನ ಅನುಭವವನ್ನು ಕೊಡುತ್ತದೆ. ಕಾರಣ ಭಿನ್ನವಾದ ಆಸಕ್ತಿ ಆಯಾಮದಲ್ಲಿ ಕತೆ ಕೊನೆಗೊಳ್ಳುತ್ತದೆ.ಓದು ಮುಗಿದ ಮೇಲೂ ಕಾಡಿನ ವಿಸ್ಮಯ ರೂಪಗಳು ಕಾಡುತ್ತವೆ.

- ಶಿವರಾಜ್‍ ಬ್ಯಾಡರಹಳ್ಳಿ

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...