ಪ್ರತಿ ಕತೆಯ ನಿರೂಪಣೆಯಲ್ಲಿ ವಿಜಯಶ್ರೀ ಹೊಸತನ ಮೆರೆದಿದ್ದಾರೆ


"ಪ್ರತಿ ಕತೆಯ ನಿರೂಪಣೆಯಲ್ಲಿ ವಿಜಯಶ್ರೀ ಹೊಸತನ ಮೆರೆದಿದ್ದಾರೆ. ಕುಂದಾಪ್ರ ಭಾಷೆಯನ್ನೂ ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಕೆಲವೊಮ್ಮೆ ಬೇರೆ ಸೀಮೆಯ ನಮಗೆ ಅದು ತೊಡಕಾಗಿಯೂ ಬಿಡುತ್ತದೆ. ಆದರೆ ವಿಜಯಶ್ರೀ ಕನ್ನಡದ ಸಶಕ್ತ ಕತೆಗಾರ್ತಿ ಎನ್ನುವುದರಲ್ಲಿ ಸಂದೇಹವೇ ಇಲ್ಲ," ಎನ್ನುತ್ತಾರೆ ಎಂ.ಆರ್.‌ ಕಮಲ. ಅವರು ವಿಜಯಶ್ರೀ ಹಾಲಾಡಿ ಅವರ ʻಉಮ್ಮಲ್ತಿ ಗುಡಿಯ ಸಾಕ್ಷಿʼ ಕೃತಿ ಕುರಿತು ಬರೆದ ಅನಿಸಿಕೆ.

ವಿಜಯಶ್ರೀ ಹಾಲಾಡಿ ತಮ್ಮ ಮೊದಲ ಕಥಾ ಸಂಕಲನ `ಉಮ್ಮಲ್ತಿ ಗುಡಿಯ ಸಾಕ್ಷಿ ' ಕಳಿಸಿ ಬಹಳ ದಿನಗಳಾದವು. ಇಲ್ಲಿರುವ ಹದಿಮೂರು ಕತೆಗಳನ್ನು ಒಟ್ಟಾಗಿ ನನಗೆ ಓದಲು ಸಾಧ್ಯವಾಗಲೇ ಇಲ್ಲ. ಒಂದು ಕತೆಯನ್ನು ಓದಿದ ಮೇಲೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಬಹಳಷ್ಟು ಸಮಯ ಹಿಡಿಯುತ್ತಿತ್ತು. ಕೆಲವು ಕತೆಗಳು ನನ್ನ ಎದೆ ನಡುಗಿಸಿದ್ದು ಉಂಟು. (ಉದಾ: ಪಾರ್ತಿ ಚಿಕ್ಕಿ) ಅಂತಃಕರಣದ ಸ್ತ್ರೀ ಲೋಕವನ್ನು ಮತ್ತದನ್ನು ಹೊಸಕಿ ಹಾಕಲು ಸದಾ ಉತ್ಸುಕವಾಗಿರುವ ಪುರುಷ ಪ್ರಾಧಾನ್ಯ ಸಮಾಜದ ಕ್ರೌರ್ಯವನ್ನು ಒಟ್ಟೊಟ್ಟಿಗೆ ಇಲ್ಲಿನ ಕತೆಗಳು ಅನಾವರಣ ಮಾಡುತ್ತವೆ. ಮಾತು ಮತ್ತು ಮಾತಿಲ್ಲದೆ ನಡೆಯುವ ಎಲ್ಲ ಬಗೆಯ ದಬ್ಬಾಳಿಕೆಗಳನ್ನು ತಣ್ಣಗೆ ಹೇಳುತ್ತವೆ. ಅದು ಅತ್ಯಾಚಾರ, ಕೊಲೆ, ಅವಮಾನ, ಮಾನಸಿಕ ಹಿಂಸೆ ಮತ್ತಾವುದೋ ಆಗಿರಬಹುದು ಅಥವಾ ಹೊರಗಣ್ಣಿಗೆ ಕಾಣದ ಎಷ್ಟೋ ಗಾಯಗಳು ಇರಬಹುದು.

ಈ ಸಂಕಲನದ ಕತೆಗಳಲ್ಲಿ ಬರುವ ಹೆಚ್ಚಿನ ಹೆಣ್ಣುಮಕ್ಕಳು ಒಂದಲ್ಲ ಒಂದು ಬಗೆಯ ದೌರ್ಜನ್ಯಕ್ಕೆ ಒಳಗಾದವರೇ. ಈ ಹೊಡೆತವನ್ನು ತಾಳಲಾರದೆ ತಮ್ಮ ಬದುಕಿನ ಮೇಲೆ ಈ ಹೆಂಗಸರು ತಾವೇ ಎಡವಿದ್ದಾರೆ. ಕೆಲವರಿಗಷ್ಟೇ ಎದ್ದು ನಿಲ್ಲುವ ಗಟ್ಟಿತನ. ಹೆಚ್ಚಿನವರು ದೈಹಿಕ ಮತ್ತು ಮಾನಸಿಕ ನಿಂದನೆಗೆ ಒಳಗಾಗಿ ಚೇತನವನ್ನು ವಿಕಲಗೊಳಿಸಿಕೊಂಡವರು. ಮಂಕಾಗಿ ಹೋದವರು, ಗೊಂದಲಕ್ಕೀಡಾದವರು. ಅಲೀಸ್ ವಾಕರ್ ಹೇಳುವಂತೆ `ಈ ಹುಚ್ಚು, ತಲೆಕೆಟ್ಟ, ಕರುಣಾಜನಕ ಸ್ಥಿತಿಯ ಹೆಂಗಸರು ನಮ್ಮ ತಾಯಂದಿರು, ಅಜ್ಜಿಯರು, ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ ಎನ್ನುವುದರಲ್ಲಿ ಸಂದೇಹವಿಲ್ಲ'. ಇವರೆಲ್ಲರ ಕತೆಯನ್ನು ನಿರೂಪಿಸುವಾಗ ಆ ಸಂಕಟಗಳಲ್ಲಿ ಅದ್ದಿ ಹೋಗುತ್ತೇವೆ.

ಪ್ರತಿ ಕತೆಯ ನಿರೂಪಣೆಯಲ್ಲಿ ವಿಜಯಶ್ರೀ ಹೊಸತನ ಮೆರೆದಿದ್ದಾರೆ. ಕುಂದಾಪ್ರ ಭಾಷೆಯನ್ನೂ ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಕೆಲವೊಮ್ಮೆ ಬೇರೆ ಸೀಮೆಯ ನಮಗೆ ಅದು ತೊಡಕಾಗಿಯೂ ಬಿಡುತ್ತದೆ. ಆದರೆ ವಿಜಯಶ್ರೀ ಕನ್ನಡದ ಸಶಕ್ತ ಕತೆಗಾರ್ತಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಮೊದಲ ಸಂಕಲನವೇ ವಿಜಯಶ್ರೀ ಬಗ್ಗೆ ಅಪಾರ ಭರವಸೆಯನ್ನು ಮೂಡಿಸಿದೆ.

`ಹೆಂಗಸರ ಮೇಲೆ ಅಪರಾಧ ಎಸಗುವುದು ನಾಗರಿಕತೆಯಷ್ಟೇ ಹಳೆಯದು ಮತ್ತು ಸಾರ್ವತ್ರಿಕ. ಮಾನವ ಹಕ್ಕುಗಳ ಬಗ್ಗೆ ಮಾತನಾಡುವಾಗ ಗಂಡಸರ ಹಕ್ಕಿನ ಬಗ್ಗೆ ಮಾತನಾಡುತ್ತಿರುತ್ತೇವೆ. ಯಾವನಾದರೂ ಗಂಡಸಿಗೆ ಹೊಡೆತ ಬಿದ್ದು, ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದರೆ ಚಿತ್ರಹಿಂಸೆ ಎಂದು ಬಿಡುತ್ತೇವೆ. ಅದನ್ನೇ ಹೆಂಗಸು ಅನುಭವಿಸಿದಾಗ ಕೌಟುಂಬಿಕ ಹಿಂಸೆಯೆಂದು ಭಾವಿಸಿ, ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಅದು ಖಾಸಗಿ ಸಂಗಾತಿಯಾಗಿ ಮಾತ್ರ ಉಳಿಯುತ್ತದೆ' ಎಂದು ಇಸಬೆಲ್ ಹೇಳುತ್ತಾರೆ. ಎಲ್ಲ ಹೆಣ್ಣುಮಕ್ಕಳ ನೋವಿನ ಕತೆಯನ್ನು ಖಾಸಗಿ ಸಂಗತಿ ಅನ್ನುವಷ್ಟಕ್ಕೆ ಮಾತ್ರ ಉಳಿಸದೆ ನಿಜದ ಅರ್ಥದಲ್ಲಿ ಸಮಾಜವನ್ನು ಯೋಚಿಸುವುದಕ್ಕೆ ಹಚ್ಚುವುದೇ ಈ ಕತೆಗಳ ಶಕ್ತಿ ಮತ್ತು ವಿಶೇಷತೆ. ವಿಜಯಶ್ರೀಗೆ ಶುಭಾಶಯಗಳು.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...