‘ಪ್ರೀತಿ-ವಿಶ್ವಾಸ ಮತ್ತು ಅಕ್ಕರೆ ತುಂಬಿಕೊಂಡಿದ್ದ ಹಿರಿಯ ಜೀವ ಪ್ರೊ.ಜಿ. ವೆಂಕಟಸುಬ್ಬಯ್ಯ’


ಪ್ರಜಾವಾಣಿ ದಿನಪತ್ರಿಕೆಯ ಭಾನುವಾರದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗುತ್ತಿದ್ದ ‘ಇಗೋ ಕನ್ನಡ’ ಅಂಕಣದ ಮೂಲಕ ಜನಪ್ರಿಯರಾಗಿದ್ದವರು ಗಂಜಾಂ ವೆಂಕಟಸುಬ್ಬಯ್ಯ. ‘ಜಿ.ವಿ’ ಎಂದೇ ಖ್ಯಾತರಾಗಿದ್ದ ಅವರು ನೂರಾಎಂಟು ವರ್ಷಗಳ ತುಂಬು ಜೀವನ ನಡೆಸಿದ ಜೀವ. ಅಗಲಿದ ಆ ಹಿರಿಯರೊಂದಿಗಿನ ಒಡನಾಟದ ನೆನಪುಗಳನ್ನು ಪತ್ರಕರ್ತ ದೇವು ಪತ್ತಾರ ಈ ಬರೆಹದಲ್ಲಿ ದಾಖಲಿಸಿದ್ದಾರೆ. ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ, ಛಾಯಾಗ್ರಾಹಕ ಮಂಜುನಾಥ ಕಲ್ಲೇದೇವರ್‌ ಕ್ಲಿಕ್ಕಿಸಿದ ವಿಶೇಷ ಚಿತ್ರಗಳು ಇಲ್ಲಿವೆ.

ಜಿ.ವಿ. ಅವರಿಗೆ ನೂರು ತುಂಬಿದ ಸಂದರ್ಭ. ನೂರನೇ ಜನ್ಮದಿನದ ಒಂದು ದಿನ ಮುನ್ನ ಬೆಳಿಗ್ಗೆ. ಸೂರ್ಯ ಉದಯವಾಗುವ ವೇಳೆಗಾಗಲೇ ಜಯನಗರದ ವೆಂಕಟಸುಬ್ಬಯ್ಯ ಅವರ ಮನೆ ಮುಂದೆ ಹಾಜರು. ಜಿ.ವಿ. ಬೆಳಗಿನ ವಾಯುವಿಹಾರಕ್ಕೆ (ವಾಕಿಂಗ್‌) ಸಿದ್ಧರಾಗಿದ್ದರು. ನೂರು ತುಂಬಿದ ಯುವಕನನ್ನು ನೋಡುವುದೇ ಒಂದು ಸೊಗಸಾಗಿತ್ತು. ಅವರೊಂದಿಗೆ ನಡೆದದ್ದು ಜೊತೆಗೆ ಮಾತನಾಡಿದ್ದು ಒಂದು ವಿಶಿಷ್ಟ ಅನುಭವ. ಅದು ಮಾತುಕತೆ. ಮನೆಗೆ ಮರಳಿದ ನಂತರ ’ಸಂದರ್ಶನ’ ಪ್ರಜಾವಾಣಿ ದೈನಿಕದ ಮೊದಲ ಪುಟದಲ್ಲಿ ಪ್ರಕಟವಾಗಿತ್ತು.

ಹಾಗೆ ನೋಡಿದರೆ, ಜಿ.ವಿ. ಅವರ ಜೊತೆಗಿನ ಮಾತು-ಒಡನಾಟ ಅದಕ್ಕಿಂತ ಹತ್ತು ವರ್ಷ ಮುಂಚೆ ಆರಂಭವಾಗಿತ್ತು. ಜಿ.ವಿ. ಎಂಬ ವಿದ್ವಾಂಸರನ್ನು ಮೊದಲ ಬಾರಿಗೆ ನೋಡಿದ್ದು, ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಓದುತ್ತಿದ್ದ ಸಂದರ್ಭದಲ್ಲಿ. ವಿಶೇಷ ಉಪನ್ಯಾಸ ನೀಡುವುದಕ್ಕಾಗಿ ಬಂದಿದ್ದರು. ನಿಘಂಟು ವಿಜ್ಞಾನದ ಬಗ್ಗೆ ಮಾತನಾಡಿದ್ದರು. ‘ಹುಡುಗತನ’ದಲ್ಲಿ ಕೇಳಿದ್ದು ಸರಿಯಾಗಿ ನೆನಪಿಲ್ಲ. ಆದರೂ ನೋಡಿದ ನೆನಪು ಹಾಗೂ ಕೆಲ ಮಾತುಗಳು ಈಗಲೂ ಮೆಲುಕು ಹಾಕುವಂತಿದ್ದವು. ಅವರ ಉಪನ್ಯಾಸದ ನಂತರ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜಿ.ವಿ. ಜೊತೆಗೆ ಕನ್ನಡದ ಕೆಲವು ಪದಗಳಿಗೆ ಸಂಬಂಧಿಸಿದಂತೆ ವಿಚಾರ-ವಿನಿಮಯ ಮಾಡಿಕೊಳ್ಳುವಾಗ ಕೂಡ ಅಲ್ಲಿದ್ದೆ.

ಧಾರವಾಡದಿಂದ ಬೆಂಗಳೂರಿಗೆ ’ಪ್ರಜಾವಾಣಿ’ಗೆ ಸೇರಿದ ನಾಲ್ಕಾರು ವರ್ಷಗಳ ನಂತರ ಡೆಸ್ಕ್‌- ವರದಿಗಾರಿಕೆಯ ನಂತರ ‘ಸಾಪ್ತಾಹಿಕ ಪುರವಣಿ’ಗೆ ವರ್ಗವಾದ ಮೊದಲ ವಾರವೇ ಜಿ.ವಿ. ಜೊತೆಗೆ ಮಾತನಾಡುವ ಅವಕಾಶ ದೊರಕಿತು. ವೆಂಕಟಸುಬ್ಬಯ್ಯ ಅವರು ಕೈಯಲ್ಲಿ ಬರೆದು ಕಳಿಸಿದ ‘ಇಗೋ ಕನ್ನಡ’ದ ಬರೆಹವನ್ನು ಟೈಪ್ ಮಾಡಿಸಲಾಗುತ್ತಿತ್ತು. ಜಿ.ವಿ. ಅಕ್ಷರಗಳನ್ನು ಓದುವುದು ಮತ್ತು ತಪ್ಪಿಲ್ಲದಂತೆ ಟೈಪಿಸುವುದು ಎಂತಹವರಿಗಾದರೂ ಕಷ್ಟದ ಸಂಗತಿಯಾಗಿತ್ತು. ಆಗ ಜಿ.ವಿ. ವಯಸ್ಸು 90 ದಾಟಿದ್ದರೂ , ಬರೆಯುವ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ. ಟೈಪಿಸಿದಂತೆ ಪ್ರಕಟಿಸುವುದು ಸಾಧ್ಯವಿರಲಿಲ್ಲ. ‘ಇಗೋ ಕನ್ನಡ’ದಲ್ಲಿಯೇ ತಪ್ಪಾದರೆ ಹೇಗೆ? ಆಗ ನಾನೊಂದು ಹೊಸ ದಾರಿ ಕಂಡುಕೊಂಡೆ. ಜಿ.ವಿ. ಬರೆಹವನ್ನು ನಾನೇ ಟೈಪಿಸಿ, ಆನಂತರ ಅದನ್ನು ದೂರವಾಣಿ ಮೂಲಕ ಓದಿ ಹೇಳುವುದು. ಕೇಳುವಾಗ ಇಬ್ಬರಲ್ಲಿ ಯಾರಿಗೆ ಅನುಮಾನ ಬಂದರೂ ಸರಿ ಮಾಡುತ್ತಿದ್ದೆ. ಓದಿನ ಮಧ್ಯೆ ಭಾಷೆ- ಶಬ್ದಕ್ಕೆ ಸಂಬಂಧಿಸಿದ ಸಂಗತಿ- ಮಾತು-ಹರಟೆಗಳೂ ಸಹಜವಾಗಿಯೇ ಸೇರಿಕೊಳ್ಳುತ್ತಿದ್ದವು. ಪ್ರತಿವಾರ ಕನಿಷ್ಠ ಅರ್ಧದಿಂದ ಮುಕ್ಕಾಲು ಗಂಟೆ ದೂರವಾಣಿಯ ಮೂಲಕ ‘ಇಗೋ ಕನ್ನಡ’ದ ವಾಚನ. ಮಾತಿನ ಮಧ್ಯೆ ನಾನು ಆಗಾಗ ಅಧಿಕಪ್ರಸಂಗತನ ಮಾಡಿ ಕೆಲ ಪದಗಳನ್ನು ವಿವರಿಸಿದ್ದೂ ಉಂಟು. ಅದನ್ನವರು ಕೇಳಿಸಿಕೊಳ್ಳುತ್ತಿದ್ದರು. ಉತ್ತರ ಕರ್ನಾಟಕದ ಕೆಲವು ಪದಗಳ ಬಗ್ಗೆ ಅವರು ತೋರುತ್ತಿದ್ದ ಆಸಕ್ತಿ-ತಿಳಿದುಕೊಳ್ಳುವ ಕುತೂಹಲ ನನಗೆ ಅಚ್ಚರಿ ಮೂಡಿಸುವ ಹಾಗಿತ್ತು. ಅದರಿಂದ ನನಗಾದ ‘ಲಾಭ’ ಪದಗಳಿಗೆ ನಿಲುಕದ್ದು.

ಇಂತಹದ್ದೇ ಒಂದು ದೂರವಾಣಿ ಕರೆಯ ಸಂದರ್ಭದಲ್ಲಿ ನನ್ನ ಮಗುವಿನ ಹೆಸರು ನಿರ್ಧರಿಸಬೇಕಿತ್ತು. ‘ಸಮಂತ’ ಎಂಬ ಹೆಸರು ಹೇಳಿದಾಗ. ನನ್ನ ತಲೆಯಲ್ಲಿ ಇದ್ದದ್ದು ‘ಸಮಂತಭದ್ರ’ದ ಪೂರ್‍ವಾರ್ಧ. ಅದಕ್ಕೆ ‘ಸರ್ವಾಂತರ್ಯಾಮಿ’ ಎನ್ನುವ ಅರ್ಥವೂ ಇದೆ. ನಾಲ್ಕು ದಿಕ್ಕಿನಲ್ಲಿ-ಎಲ್ಲೆಡೆ ಹರಡುವ ಒಳ್ಳೆಯತನ ಎಂಬ ಅರ್ಥಗಳೂ ಇವೆ ಎಂದು ವಿವರಿಸಿದ್ದರು. ಅದಾದ ಮೇಲೆ ನಾನು ಬೀದರಿಗೆ ಹೋಗಬೇಕಾಗಿ ಬಂತು. ಆ ವಿಷಯವನ್ನು ಜಿ.ವಿ. ಅವರ ಬಳಿ ಪ್ರಸ್ತಾಪಿಸಿದಾಗ, ಅಲ್ಲಿ ಪಾರಸಿ, ಅರಬ್ಬಿ ಪದಗಳು ಕನ್ನಡದಲ್ಲಿ ಬೆರತುಹೋಗಿವೆ. ಗಮನಿಸಿ’ ಎಂದು ಹೇಳಿ ಕಳುಹಿಸಿದ್ದರು.

ಬೀದರ ಜಿಲ್ಲಾ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಜಿ.ವೆಂಕಟಸುಬ್ಬಯ್ಯ. ಎಂಬ ಸಂಗತಿ ತಿಳಿದಾಗ ನನಗೆ ಅಚ್ಚರಿ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಗಂಜಾಂನವರಾದ ವೆಂಕಟಸುಬ್ಬಯ್ಯ ಅವರು, ಸರಿಸುಮಾರು ಅಲ್ಲಿಂದ 850ಕಿ.ಮೀ. ದೂರದ ಉತ್ತರದ ತುತ್ತತುದಿಯಲ್ಲಿನ ಬೀದರ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದದ್ದು ಸೋಜಿಗದ ಸಂಗತಿ. ಆ ಸಮ್ಮೇಳನದಲ್ಲಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು, ತ.ರಾ.ಸುಬ್ಬರಾವ್, ಆರ್‌.ಸಿ.ಹಿರೇಮಠ, ಜಿ.ಬಿ. ವಿಸಾಜಿ, ಪಂಚಾಕ್ಷರಿ ಪುಣ್ಯಶೆಟ್ಟಿ ಭಾಗವಹಿಸಿದ್ದರು. ಆ ಸಮ್ಮೇಳನದ ಚಿತ್ರಗಳನ್ನು ಗುಲಾಂ ಮುಂತಕಾ ಕ್ಲಿಕ್ಕಿಸಿದ್ದರು. ಆ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೆ.

ಜಿ.ವಿ. ಅವರಿಗೆ ನೂರು ತುಂಬಿದ ಸಂದರ್ಭದಲ್ಲಿ ಬೀದರಿನಿಂದ ಬೆಂಗಳೂರಿಗೆ ಮರಳಿ ‘ಮಯೂರ’ ಮಾಸಪತ್ರಿಕೆಯಲ್ಲಿದ್ದೆ. ಆಗ ‘ಮಯೂರ’ದಲ್ಲಿಯೂ ವೆಂಕಟಸುಬ್ಬಯ್ಯ ಅವರ ಬಗ್ಗೆ ಬರೆದಿದ್ದೆ. ‘ಪ್ರಜಾವಾಣಿ’ಗಾಗಿ ಸಂದರ್ಶನ ಮಾಡಿದ ಸಂದರ್ಭದಲ್ಲಿ ಬೀದರ ಸಮ್ಮೇಳನದ ನೆನಪುಗಳನ್ನು ವಿವರಿಸಿದ್ದರು. ನಾನು ಅವರಿಗೆ ಆ ಫೋಟೊಗಳನ್ನು ಕೊಟ್ಟಾಗ ನೋಡಿ ಖುಷಿ ಪಟ್ಟು ಸಂಭ್ರಮಿಸಿದ್ದರು. ನೂರು ವರ್ಷ ತುಂಬಿದ ಮರುದಿನ ಗೆಳೆಯ ಕಲಾವಿದ- ಛಾಯಾಗ್ರಾಹಕ ಮಂಜುನಾಥ ಕಲ್ಲೇದೇವರ್‌ ನಾನು ಮಾಡಿದ ಸಂದರ್ಶನ ನೋಡಿ, ಜಿ.ವಿ. ಅವರ ಫೋಟೊ ಶೂಟ್‌ ಮಾಡುವ ಬಯಕೆ ವ್ಯಕ್ತಪಡಿಸಿದ. ವೆಂಕಟಸುಬ್ಬಯ್ಯ ಅವರ ಮಗ ರವಿ ಅವರಿಗೆ ಫೋನ್‌ ಮಾಡಿ, ಒಪ್ಪಿಸಿ ಮನೆಗೆ ಹೋದೆವು.

ಹಿಂದಿನ ದಿನ ಆಯಾಸ, ಜನರ ಅಭಿನಂದನೆಗಳ ಅಬ್ಬರದಲ್ಲಿ ನಲುಗಿದ್ದ ಜಿ.ವಿ. ಬಹಳ ದಿನಗಳ ನಂತರ ಬೆಳಗಿನ ವಾಯುವಿಹಾರ ತಪ್ಪಿಸಿದ್ದರು. ದಣಿದಿದ್ದರೂ ಮನೆಯ ಒಳಗಡೆಯೇ ಫೋಟೊ ತೆಗೆಯಲು ಅನುಮತಿ ನೀಡಿದರು. ಫೋಟೊಗೆ ಬೇಕಾದ ರೀತಿಯ ಬೆಳಕು ಲಭ್ಯವಿರಲಿಲ್ಲ. ಆದರೆ, ಅವರಿಗೆ ಹೆಚ್ಚು ತೊಂದರೆ ಕೊಡುವ ಹಾಗೂ ಇರಲಿಲ್ಲ. ಅವರು ಇದ್ದ ಹಾಗೆಯೇ -ಕುಳಿತ ರೀತಿಯಲ್ಲಿಯೇ ಸುಮಾರು ಎರಡು ರೀಲ್‌ಗಳಷ್ಟು ಚಿತ್ರಗಳನ್ನು ಮಂಜು ಕ್ಲಿಕ್ಕಿಸಿದ. ಆ ಚಿತ್ರಗಳ ಬಗ್ಗೆ ಮಂಜುಗೆ ಸಮಾಧಾನ ಇರಲಿಲ್ಲ. ಆದರೆ, ‘ಸಿಕ್ಕಾಗ-ಸಿಕ್ಕಷ್ಟೇ ಲಾಭ’ ಎಂದು ಸಮಾಧಾನ ಹೇಳಿ. ಇನ್ನೊಮ್ಮೆ ಕ್ಲಿಕ್ಕಿಸುವಿಯಂತೆ ಎಂದು ಹೇಳಿದೆ. ಆದರೆ, ಮತ್ತೊಮ್ಮೆ ಜಿ.ವಿ. ಅವರನ್ನು ಕ್ಯಾಮರಾದೊಂದಿಗೆ ಎದುರಾಗಲು ಸಾಧ್ಯವಾಗಲಿಲ್ಲ. ಪುತ್ರನ ಅಗಲಿಕೆಯ ನಂತರ ಜಿ.ವಿ. ಅವರನ್ನು ಸಂಪರ್ಕ ಮಾಡುವುದು ಕಷ್ಟವಿತ್ತು. ವಯಸ್ಸಿನ ಕಾರಣವೂ ಸೇರಿದ್ದರಿಂದ ಕಳೆದ ಕೆಲ ವರುಷಗಳ ಅವಧಿಯಲ್ಲಿ ಅವರನ್ನು ಭೇಟಿ ಮಾಡುವುದು ಸಾಧ್ಯವಾಗಿರಲಿಲ್ಲ. ಪ್ರೀತಿ-ವಿಶ್ವಾಸ ಮತ್ತು ಅಕ್ಕರತೆ ತುಂಬಿಕೊಂಡಿದ್ದ ಹಿರಿಯ ಜೀವ ಇನ್ನು ನಮ್ಮೊಂದಿಗಿಲ್ಲ ಎಂಬುದು ವಿಷಾದದ ಸಂಗತಿ. ದೈಹಿಕವಾಗಿ ಇಲ್ಲದಿದ್ದರೂ ಪದಸಂಪತ್ತಿನ ಶ್ರೀಮಂತಿಕೆ ಕೊಟ್ಟ ಅವರು ನಮ್ಮೊಂದಿಗೆ ಸದಾ ಇರುತ್ತಾರೆ.

ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಛಾಯಾಗ್ರಾಹಕ ಮಂಜುನಾಥ ಕಲ್ಲೇದೇವರ್‌ ಅವರು ಸೆರೆ ಹಿಡಿದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಫೋಟೋಗಳು:

 

 

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...