ಪುಸ್ತಕಗಳಿಗಾಗಿ ತೇದುಕೊಂಡ ಜೀವ ಬಿ.ಆರ್ ತುಬಾಕಿ


ಉತ್ತರ ಕರ್ನಾಟಕದಲ್ಲಿ ಪುಸ್ತಕ ಸಂಸ್ಕೃತಿ ಹರಡುವಲ್ಲಿ ತಮ್ಮದೇ ಕೊಡುಗೆ ನೀಡಿದವರು ಆರ್‌.ಬಿ. ತುಬಾಕಿ ಅವರು. ಅವರ ನಿಧನದೊಂದಿಗೆ ಪುಸ್ತಕ ಸಂಸ್ಕೃತಿಯ ಕೊಂಡಿಯೊಂದು ಕಳಚಿದಂತಾಗಿದೆ. ತೆರೆಯ ಮರೆಯಲ್ಲಿದ್ದ ಅನನ್ಯ ವ್ಯಕ್ತಿತ್ವದ ತುಬಾಕಿ ಅವರ ಪರಿಚಯಾತ್ಮಕ ಟಿಪ್ಪಣಿಯ ನುಡಿನಮನವನ್ನು ಸಂಶೋಧಕ-ಲೇಖಕ ಡಾ. ಅರುಣ್‌ ಜೋಳದಕೂಡ್ಲಗಿ ಅವರು  ನೀಡಿದ್ದಾರೆ.

ಈ ಯುವಕನ ಪುಸ್ತಕ ಓದಿನ ಅಪಾರ ಹಸಿವಿನಿಂದ ಓದಲೆಂದು ಸಂಗ್ರಹಿಸಿದ ಪುಸ್ತಕಗಳ ಸಂಖ್ಯೆ ಮನೆಯಲ್ಲಿ ಹೆಚ್ಚಾತ್ತಾ ಹೋದವು. ಈ ಸಂದರ್ಭದಲ್ಲಿ ನವಕರ್ನಾಟಕದ ರಾಜಾರಾಂ ಅವರು, `ಅಲ್ಲಯ್ಯ ನೀನು ಓದಿದ ಪುಸ್ತಕಗಳನ್ನು ಏನು ಮಾಡುತ್ತಿ? ನೀಟಾಗಿ ಓದಿ ಅದೇ ಪುಸ್ತಕಗಳನ್ನು ಮಾರಾಟ ಮಾಡು, ಬೇಕಾದರೆ ನಮ್ಮ ನವಕರ್ನಾಟಕದ ಪುಸ್ತಕಗಳನ್ನು ಕೊಡುತ್ತೇವೆ’  ಎಂದು ಯುವಕನನ್ನು ಪ್ರೇರೇಪಿಸಿದರು. ಇದರಿಂದಾಗಿ ಈ ಯುವ ಮೇಷ್ಟ್ರು ಪುಸ್ತಕ ಓದುತ್ತಲೇ, ಪುಸ್ತಕ ಪ್ರಸಾರಕರಾಗಿ ಬದಲಾಗುತ್ತಾರೆ. ಆಗ ರಾಜಾರಾಮರು ಸಾಹಿತ್ಯ ಸಮ್ಮೇಳನಗಳಿಗೆ ಮಳಿಗೆ ಬುಕ್ ಮಾಡುವಾಗ ಇವರಿಗೊಂದು ಮಳಿಗೆ ಕಾಯ್ದಿರಿಸುತ್ತಿದ್ದರು. ಆ ಹೊತ್ತಿಗಾಗಲೇ  ಬಹುತೇಕ ಪುಸ್ತಕ ಮುದ್ರಕರು, ಪ್ರಕಾಶಕರು ಇವರಿಗೆ ಪರಿಚಿತರಾಗಿದ್ದ ಕಾರಣ ಬರಿಗೈಲಿ ಸಮ್ಮೇಳನಕ್ಕೆ ಹೋಗಿ, ಎಲ್ಲ ಪ್ರಕಾಶಕರಿಂದ ಪುಸ್ತಕಗಳನ್ನು ಪಡೆದು ಸಮ್ಮೇಳನದಲ್ಲಿ ಮಾರಿ, ಪುಸ್ತಕದ ಮೊತ್ತವನ್ನು ಆಯಾ ಮುದ್ರಕರಿಗೆ ತಲುಪಿಸಿ ತಮ್ಮ ಪಾಲಿನ ಹಣವಿಟ್ಟುಕೊಂಡು ಮರಳುತ್ತಿದ್ದರು. ಪರಿಣಾಮವಾಗಿ 1998 ರ ಹೊತ್ತಿಗೆ ಕೊಪ್ಪಳದಲ್ಲಿ `ಕನ್ನಡ ಪುಸ್ತಕಾಲಯ’ವನ್ನು ತೆರೆದು ಈ ಭಾಗದ ಜನರಿಗೆ ಸದಭಿರುಚಿಯ ಪುಸ್ತಕಗಳನ್ನು ಓದಿಸಲು ಶುರು ಮಾಡಿದರು, ಅವರು ಮತ್ತ್ಯಾರು ಅಲ್ಲ ಇಂದು ನಮ್ಮನ್ನು ಅಗಲಿದ ಆರ್.ಬಿ. ತುಬಾಕಿಯವರು. 

ಕುಳ್ಳಗಿದ್ದ ಚೂರು ದಪ್ಪಗಿನ ವ್ಯಕ್ತಿ. ತಣ್ಣನೆಯ ಮಾತು, ಸಣ್ಣನೆಯ ದನಿ. ಮೆದುವಾಗಿ ಪುಸ್ತಕಗಳ ಮಹತ್ವ ಹೇಳುತ್ತಲೆ ಪುಸ್ತಕ ಓದುವ ಅಭಿರುಚಿ ಮೂಡಿಸುತ್ತಿದ್ದರು. ಶಾಲಾ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ನಂತರ ತುಬಾಕಿಯವರು ಪೂರ್ಣ ಪ್ರಮಾಣದ ಪುಸ್ತಕ ಸಂಗಾತಿಯಾಗಿ ಬದಲಾಗಿದ್ದರು. ಈ ತುಬಾಕಿಯವರ ಓದಿನ ಗೀಳಿಗೆ ಬಿದ್ದ ಹಿನ್ನೆಲೆ ಕುತೂಹಲಕಾರಿಯಾಗಿದೆ. ಬಾಲಪ್ಪ ರಾಮಪ್ಪ ತುಬಾಕಿ ಅವರು ನಿಲೋಗಲ್ ಪಾಳೆಪಟ್ಟದಲ್ಲಿ ಇವರ ವಂಶಜರು ಸೈನಿಕರಾಗಿದ್ದು, ವಂಶದ ಹಿರಿಯ ಯುದ್ಧವೊಂದರಲ್ಲಿ ಮಡಿದ ಕಾರಣ ಒಂದಷ್ಟು ಹೊಲ ಸಿಕ್ಕು ಬದುಕು ಕಟ್ಟಿಕೊಂಡದ್ದಾಗಿಯೂ, ಈ ಹಿನ್ನೆಲೆಯಲ್ಲಿ ತಮ್ಮ ವಂಶಕ್ಕೆ ತುಬಾಕಿ ಎಂಬ ಹೆಸರು ಬಂದದ್ದಾಗಿಯೂ ಹೇಳುತ್ತಿದ್ದರು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಪುಟ್ಟ ಹಳ್ಳಿ ನಿಲೋಗಲ್‍ನಲ್ಲಿ ಇವರು ಓದಿಗೆಂದು  1975 ರಲ್ಲಿ ರೋಣ ತಾಲೂಕಿನ ಹೊಳೆ ಆಲೂರಿನ ಖಾಸಗಿ ಪ್ರೌಢಶಾಲೆ ಸೇರುತ್ತಾರೆ. ಇಲ್ಲಿನ ಹಾಸ್ಟೆಲ್ ನಲ್ಲಿ ದಿನಕ್ಕೊಂದು ಪುಸ್ತಕ ಕೊಟ್ಟು ಆ ಪುಸ್ತಕದ ಬಗೆಗೆ ಒಂದು ಪುಟ ಬರೆಸುತ್ತಿದ್ದರು. ಈ ಬಗೆಯ ನಿರಂತರ ಚಟುವಟಿಕೆಯೇ ಪುಸ್ತಕದ ಓದು, ಗ್ರಹಿಕೆಗೆ ಬುನಾದಿಯಾಗುತ್ತದೆ.

ಮುಂದೆ ಕಲ್ಮೇಶ್ವರ ಕಾಲೇಜಿನ ಲೈಬ್ರರಿಯಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ. ಆನಂತರ ನಿಧಾನಕ್ಕೆ ಎಲ್.ಆರ್ ಅನಂತರಾಮಯ್ಯ ಅವರು ತರುತ್ತಿದ್ದ `ಗ್ರಂಥಲೋಕ’ ಸಾಹಿತ್ಯ ಪತ್ರಿಕೆ ಓದುತ್ತಾ, ಇದರಲ್ಲಿ ಹಾ.ಮಾ.ನಾಯಕರು ಪರಿಚಯಿಸುತ್ತಿದ್ದ ಪುಸ್ತಕಗಳನ್ನು ಹುಡುಕಿ ಓದತೊಡಗುತ್ತಾರೆ. ಈ ಓದಿನ ಗೀಳಿಗೆ ಅಂಟಿಕೊಂಡಂತೆ ಪ್ರಕಾಶಕರು, ಮುದ್ರಕರು, ಪುಸ್ತಕ ಮಾರಾಟಗಾರರು, ಮುಖ್ಯವಾಗಿ ಆಯಾ ಪುಸ್ತಕದ ಲೇಖಕರ ಪರಿಚಯದ ಒಡನಾಟ ತುಬಾಕಿಯವರಿಗೆ ಸಿಗತೊಡಗಿತು. ಕಾರಣ ತಾನು ಓದಿದ ಪುಸ್ತಕದ ಬಗ್ಗೆ ಆಯಾ ಪುಸ್ತಕದ ಲೇಖಕ/ಲೇಖಕಿಯರಿಗೆ ತನ್ನ ಅಭಿಪ್ರಾಯದ ಪತ್ರ ಬರೆಯುತ್ತಿದ್ದರು. ಹೀಗೆ ತುಬಾಕಿಯವರಲ್ಲಿ ಸಾಹಿತಿಗಳ ಪತ್ರ ಒಡನಾಟದ ಒಂದು ಭಂಡಾರವೆ ಇದೆ. ಇದೇ ಹೊತ್ತಿಗೆ ಲಂಕೇಶ್ ಪತ್ರಿಕೆ ಓದು ಶುರುವಾಯಿತು. ಇದು ತುಬಾಕಿಯವರ ಓದಿನ ಹಸಿವಿಗೆ ಮತ್ತೊಂದು ರೆಕ್ಕೆ ಮೂಡಿಸಿತು. ತೊಂಬತ್ತರ ದಶಕದಲ್ಲಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಾರಂಭವಾದಾಗ ಚಂದ್ರಶೇಖರ ಕಂಬಾರ ಒಳಗೊಂಡಂತೆ ಹತ್ತಾರು ವಿದ್ವಾಂಸರು ಸಂಪರ್ಕಕ್ಕೆ ಬಂದರು. ಈ ಹೊತ್ತಿಗಾಗಲೆ ಸರಿಸುಮಾರು ಐವತ್ತು ಸಾವಿರದಷ್ಟು ದೊಡ್ಡ ಗ್ರಂಥ ಭಂಡಾರವನ್ನೆ ಸಂಗ್ರಹಿಸಿದ್ದರು. 1992 ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪುಸ್ತಕಗಳು ತುಂಗಾಭದ್ರ ನದಿಯಲ್ಲಿ ಹರಿದು ಹೋದವು. ಆ ಸಂದರ್ಭದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ನೀಡಿದ್ದಾಗಿ ತುಬಾಕಿ ಹೇಳುತ್ತಿದ್ದರು.

ಪುಸ್ತಕದ ಹಸಿವು ತುಬಾಕಿಯವರನ್ನು ನಾಡಿನ ಗಡಿ ದಾಟಿಸಿತು. ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಪಾ.ಶ.ಶ್ರೀನಿವಾಸ (ತಿರುಕ್ಕುರಳ್), ದೆಹಲಿ ವಿವಿಯ ವಿನೋದ ಬಾಯಿ, ಎನ್.ಬಿ.ಟಿ. ಅಧ್ಯಕ್ಷರಾಗಿದ್ದ ಹಾ.ಮಾ.ನಾಯಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಶಾ.ಬಾಲುರಾವ್, ಕೇರಳದ ಆರ್.ರಾಮ್, ಮಧುರೈ ವಿವಿಯ ಪಿ.ಎಸ್.ಶ್ರೀನಿವಾಸ ಈ ಎಲ್ಲರ ಪರಿಚಯ ಬೇರೆ ಬೇರೆ ಭಾಷೆಯ ಅನುವಾದ ಕೃತಿಗಳ ಓದಿನ ರುಚಿ ಹತ್ತಿಸಿತು. ಹಾಗಾಗಿ, ತುಬಾಕಿಯವರು ಕನ್ನಡ ಸಾಹಿತ್ಯದ ಗಡಿ ದಾಟಿ ಭಾರತೀಯ ಸಾಹಿತ್ಯ ಮತ್ತು ಲೇಖಕರ ವ್ಯಾಪ್ತಿಗೆ ತಮ್ಮನ್ನು ಹಿಗ್ಗಿಸಿಕೊಂಡರು. ಹೀಗಾಗಿ, ಈ ಎಲ್ಲರ ಜತೆಗಿನ ಸ್ನೇಹ ಪುಸ್ತಕ ಓದು ಖರೀದಿಯನ್ನು ಮತ್ತಷ್ಟು ವಿಸ್ತರಿಸಿತು. 

ಓದಿನ ಹಸಿವಿದ್ದ ಯಾರೇ ಆದರೂ, ಕನ್ನಡದ ಯಾವುದೇ ಪುಸ್ತಕವಾದರೂ ಅವರಿಗೆ ಒದಗಿಸುತ್ತಿದ್ದರು. ಪುಸ್ತಕ ಓದಿನ ಮೂಲಕ ರೂಪಗೊಂಡ ಸಾಹಿತಿ ಸಂಶೋಧಕರ ನಂಟು ತುಬಾಕಿಯವರನ್ನು ಸಂಶೋಧನ ಸಹಾಯಕರನ್ನಾಗಿಯೂ ಬದಲಿಸಿತ್ತು. ಹುಲ್ಲೂರು ಶ್ರೀನಿವಾಸ ಜೋಯಿಸರು, ವರದರಾಜ ರಾಯರು ಕೊಪ್ಪಳ ಭಾಗದ ಶಾಸನಾಧ್ಯಯನಕ್ಕೆ ಬಂದರೆ ಅವರಿಗೆ ತುಬಾಕಿ ಜೊತೆಗಾರರಾಗಿರುತ್ತಿದ್ದರು. ಶಾಸನದ ಅಚ್ಚು ತೆಗೆಯುವುದನ್ನು ಕಲಿತ ತುಬಾಕಿಯವರು, ಈ ಭಾಗದ ಶಾಸನ ಅಧ್ಯಯನಕ್ಕೆ ತಮ್ಮದೇ ಆದ ಮಹತ್ವದ ನೆರವನ್ನು ವಿದ್ವಾಂಸರಿಗೆ ನೀಡಿದ್ದರು. ಹೀಗಾಗಿ ಎಂ.ಎಂ,ಕಲ್ಬುರ್ಗಿ, ದೇವರಕೊಂಡಾರೆಡ್ಡಿ, ಲಕ್ಷ್ಮಣ ತೆಲಗಾವಿ, ಕೃಷ್ಣಮೂರ್ತಿ, ಸೀತಾರಾಮ ಜಹಗೀರದಾರ, ಎಂ.ಜಿ.ಮಂಜುನಾಥ ಮೊದಲಾದವರು ತುಬಾಕಿಯವರ ನೆರವನ್ನು ಅವರ ಪುಸ್ತಕಗಳಲ್ಲಿ ನೆನೆದಿದ್ದಾರೆ.

ತುಬಾಕಿಯವರು ಕೇವಲ ಪುಸ್ತಕ ವ್ಯಾಪಾರಿಯಾಗಿರಲಿಲ್ಲ. ಕನ್ನಡದ ಬಹುಮುಖ್ಯ ಪಠ್ಯಗಳನ್ನು ಓದುತ್ತಾ, ಆ ಪಠ್ಯಗಳನ್ನು ಓದುಗರಿಗೆ ಪರಿಚಯಿಸಿ, ಅವರನ್ನು ಓದಿಗೆ ಆಹ್ವಾನಿಸಿ, ಓದಿನ ಅಭಿರುಚಿ ಮೂಡಿಸುತ್ತ ಕೊಪ್ಪಳದಂತಹ ಪ್ರದೇಶದಲ್ಲಿ ಕನ್ನಡದ ವೈಚಾರಿಕೆ ನೆಲೆಯನ್ನು ವಿಸ್ತರಿಸುತ್ತಿದ್ದರು. ಹೀಗಾಗಿ ತುಬಾಕಿಯವರ ಪುಸ್ತಕ ಪ್ರಸರಣದ ಕಾರ್ಯ ಕನ್ನಡದ ವಿವೇಕದ ಪ್ರಸರಣವೂ ಆಗಿತ್ತು. ತನ್ನ ಮಿತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿಯೋ, ನಗದು ಇಲ್ಲದೆಯೋ ಪುಸ್ತಕಗಳನ್ನು ಕೊಟ್ಟು ಓದಿಸುತ್ತಿದ್ದರು. ಅಂತೆಯೇ ಸದಭಿರುಚಿಯ ಪುಸ್ತಕಗಳ ಸಂಗಾತಿಯಾಗಿ ಪುಸ್ತಕ ಪ್ರಸರಣದಲ್ಲಿ ದಣಿವಿಲ್ಲದೆ ದುಡಿದಿದ್ದರು. ಸಾವಿನ ಸುದ್ದಿ ತಿಳಿದ ಪ್ರೊ. ಕೆ.ವಿ.ನಾರಾಯಣ ಸರ್ ಅವರು `ಪುಸ್ತಕಗಳಿಗಾಗಿ ತೇದುಕೊಂಡ ಜೀವ ತುಬಾಕಿ, ಅವರ ಮನೆಯವರಿಗೆ ಸಂತಾಪ ತಿಳಿಸಿ’ ಎಂದು ಸಂದೇಶ ಕಳಿಸಿದ್ದರು. ಇದೀಗ ಪುಸ್ತಕ ಓದು, ಪ್ರಸರಣ ನಿಲ್ಲಿಸಿ ಚಿರನಿದ್ರೆಗೆ ಜಾರಿದ್ದಾರೆ.

*

MORE FEATURES

ಕೋಮುವಾದಿ ಚಕ್ರವ್ಯೂಹ ಭೇದಿಸುವವರ ಕೈಪಿಡಿ ‘ನಡು ಬಗ್ಗಿಸದ ಎದೆಯ ದನಿ’

29-03-2024 ಬೆಂಗಳೂರು

'ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧ...

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...