ರೋಚಕ ಕಾದಂಬರಿ ಓದಿದ ಅನುಭವ ನೀಡುವ ‘ಬಿಜೆಪಿ 25+1’


ಅಧ್ಯಯನದ ದೃಷ್ಟಿಯಿಂದ ರಾಜಕೀಯ ವಿಷಯಗಳ ಬಗ್ಗೆ ಹಾಗೂ ಚುನಾವಣೆಯ ಬಗ್ಗೆ ತಿಳಿಯಲು ಇದೊಂದು ಸೂಕ್ತ ಪುಸ್ತಕ. ನಾವು ಒಪ್ಪಿದರೂ, ಒಪ್ಪದಿದ್ದರೂ ರಾಜಕೀಯ ಎಂಬ ವಿಷಯ ಪ್ರಬಲವಾಗಿರುವಂಥದ್ದು. ಹೀಗಿದ್ದಾಗ ಅದರ ಬಗ್ಗೆ ಸ್ವಲ್ಪ ಮಾಹಿತಿಗಳನ್ನು ತಿಳಿದುಕೊಂಡಿದ್ದರೆ ಅನುಕೂಲವೇ ಆಗುತ್ತದೆ ಎನ್ನುತ್ತಾರೆ ಲೇಖಕ ಪ್ರಮೋದ ಮೋಹನ ಹೆಗಡೆ. ಅವರು ಲೇಖಕ ರಮೇಶ ದೊಡ್ಡಪುರ ಅವರ ಬಿಜೆಪಿ 25+1 ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ...

ಪುಸ್ತಕ: ಬಿಜೆಪಿ 25+1
ಲೇಖಕ: ರಮೇಶ ದೊಡ್ಡಪುರ
ಬೆಲೆ: 199
ಪುಟ: 208
ಮುದ್ರಣ:  2020
ಪ್ರಕಾಶನ: ಅಯೋಧ್ಯಾ ಪ್ರಕಾಶನ

ರಾಜಕೀಯದ ವಿಷಯಗಳ ಬಗ್ಗೆ ನನಗೆ ಆಸಕ್ತಿ ಮೂಡುವಂತೆ ಮಾಡಿದ್ದು ರಮೇಶ ದೊಡ್ಡಪುರ ಸರ್. ನನಗೆ ರಾಜಕೀಯದ ವಿಷಯಗಳಲ್ಲಿ ಆಸಕ್ತಿ ಅಷ್ಟಕ್ಕಷ್ಟೇಯಾಗಿತ್ತು. ಯಾವ ಪಕ್ಷದವರಾದರೇನು, ಎಲ್ಲರೂ ಒಂದೇ ದೋಣಿ ಕಳ್ಳರು ಎಂಬ ಭಾವನೆ. ಎಲ್ಲರೂ ಅಧಿಕಾರಕ್ಕಾಗಿ ಕಾದಾಟ ನಡೆಸುವವರೇ. ಇನ್ನೊಬ್ಬರ ಮಾತಿಗೆ ಟೀಕಿಸುತ್ತ, ಕೋಳಿ ಜಗಳ ಮಾಡುತ್ತ ಕಾಲಾಹರಣ ಮಾಡುತ್ತಾರೆ ಎಂಬ ಅಭಿಪ್ರಾಯ. ಹೀಗಾಗಿ ನನಗೆ ರಾಜಕೀಯದ ವಿಷಯಗಳಲ್ಲಿ ಆಸಕ್ತಿ ಕಡಿಮೆಯಿತ್ತು. ಕಾಲೇಜು ದಿನಗಳಲ್ಲಿ ನನ್ನ ಗೆಳೆಯ ನನ್ನ ಬಳಿ ರಾಜಕೀಯದ ವಿಷಯವನ್ನಿಟ್ಟುಕೊಂಡು ಮಾತನಾಡಲು ಬಂದಿದ್ದಾಗ ಬೈದು ಕಳುಹಿಸಿದ್ದು ಇದೆ. ಆದರೆ, ಪಾಲಿಟಿಕ್ಸ್ ಎಂಬ ವಿಷಯವನ್ನು ಒಂದು ರೋಚಕ ಕಥೆಯಂತೆ ನೋಡಲು ಕಲಿಸಿದ್ದು ರಮೇಶ ದೊಡ್ಡಪುರ ಸರ್. 

ಇದು ಅವರು ಬರೆದ ಪುಸ್ತಕ. ಬಿಜೆಪಿ 25+1, ಕರ್ನಾಟಕದಲ್ಲಿ ಕಮಲ ಅರಳಿದ ಕತೆ. 2018ರಲ್ಲಿ ನಡೆದ ವಿಧಾನಸಭೆ ಹಾಗೂ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯ ಕುರಿತು ಬರೆದಂತಹ ಸುಂದರ ಪುಸ್ತಕ. ಈ ಪುಸ್ತಕವನ್ನು ರಮೇಶ್ ಸರ್ ಬರೆದಿದ್ದು ಎಂಬ ಕಾರಣಕ್ಕೆ ಓದಲು ಶುರು ಮಾಡಿದೆ. ಆದರೆ, ನಂತರ ಪುಸ್ತಕವೇ ಓದಿಸಿಕೊಂಡು ಹೋಯಿತು. ಮುನ್ನುಡಿಯಲ್ಲಿ ಡಾ. ಜಿ.ಬಿ ಹರೀಶ್ ಹೇಳಿದ ಹಾಗೆ ಈ ಪುಸ್ತಕ ಸಮಕಾಲೀನ ರಾಜಕೀಯ ಇತಿಹಾಸ. ಆ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಒಂದೆಡೆ ದಾಖಲಿಸಿ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆದ ಪುಸ್ತಕ ಇದು.

ಈ ಪುಸ್ತಕದಲ್ಲಿ ಬರೆದ ವಿಷಯಗಳನ್ನು ಓದುತ್ತಾ ರಾಜಕೀಯ ತಂತ್ರಗಳನ್ನು ತಿಳಿಯುವ ಬಗ್ಗೆ ಮತ್ತಷ್ಟು ಆಸಕ್ತಿ ಮೂಡುವದಂತು ನಿಜ. ರಾಜಕಾರಣಿ ಎಂಥವರೇ ಇರಬಹುದು ಆದರೆ, ಒಂದು ಕ್ಷೇತ್ರವನ್ನು ಗೆಲ್ಲುವುದಕ್ಕಾಗಿ ಅವರು ಮಾಡುವ ತಂತ್ರಗಳು ಗಮನಾರ್ಹ ವಿಷಯಗಳಾಗುತ್ತವೆ. ಚುನಾವಣೆಯ ಸಂದರ್ಭದಲ್ಲಿ ಕೈಗೊಂಡ ಒಂದು ನಡೆ ಮುಂದೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ತಿಳಿಯುವುದೇ ಕುತೂಹಲ ಸಂಗತಿ. ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಆದರೆ, ಹಿಂದಿನ ಮಧ್ಯರಾತ್ರಿವರೆಗೂ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಹೆಸರು ಬಹಿರಂಗವಾಗುವುದಿಲ್ಲ. ಮಧ್ಯರಾತ್ರಿ 1 ಗಂಟೆಗೆ ಹೆಸರು ಪ್ರಕಟವಾದಾಗ ಎಲ್ಲರಿಗೂ ಶಾಕ್! ದಿನಪತ್ರಿಕೆಯ ಪ್ರಿಂಟ್ ನಿಲ್ಲಿಸಿ, ಸುದ್ದಿ ಬದಲಾಯಿಸಬೇಕಾದ ಸಂದರ್ಭ ಎದುರಾಗುತ್ತದೆ. ಇಂತಹ ಕೆಲವು ಘಟನೆಗಳು ಊಹೆಗೂ ಮೀರಿದ್ದು. ಅದೇ ರಾಜಕೀಯ! ಇನ್ನೊಂದೆಡೆ ಒಂದು ಪಕ್ಷದ ತಂತ್ರಗಳಿಗೆ ಎದುರಾಳಿ ಪಕ್ಷ ತಿರುಗೇಟು ನೀಡಲು ಸಿದ್ಧವಾಗಿರಬೇಕು. ತನ್ನ ಬತ್ತಳಿಕೆಯಲ್ಲಿ ಮರುತಂತ್ರಗಳ ಬಾಣಗಳನ್ನು ತಯಾರಿಟ್ಟುಕೊಳ್ಳಬೇಕು. ಹಾಗೆ ಎಲ್ಲ ಪಕ್ಷಗಳು ಯಾವೆಲ್ಲಾ ಬಾಣಗಳನ್ನು ಪ್ರಯೋಗಿಸಿದವು, ಏನೆಲ್ಲ ಘಟಿಸಿದವು ಎನ್ನುವುದನ್ನು ಈ ಪುಸ್ತಕದಲ್ಲಿ ಸಶಕ್ತವಾಗಿ ದಾಖಲಿಸಲಾಗಿದೆ.

ಇವೆಲ್ಲವನ್ನೂ ಒದುತ್ತಿದ್ದರೆ ಒಂದು ರೋಚಕ ಕಾದಂಬರಿ ಓದಿದ ಅನುಭವಾಗುತ್ತದೆ. ಇದು ಕೇವಲ ಯಾವುದೋ ಒಂದು ಪಕ್ಷವನ್ನು ಹಾಡಿ ಹೊಗಳಿದ ಪುಸ್ತಕವಲ್ಲ. ಚುನಾವಣೆಯ ಸಂದರ್ಭದ ವಿಶ್ಲೇಶಣೆ. ರಾಜ್ಯಾದ್ಯಂತ ನಡೆದ ರ‍್ಯಾಲಿಗಳು, ಭಾಷಣಗಳು ಹಾಗೂ ರಾಜಕಾರಣಿಗಳು ನೀಡಿದ ಹೇಳಿಕೆಗಳಿಂದ ಏನೆಲ್ಲ ಪರಿಣಾಮವಾಯಿತು ಎಂಬ ಒಂದು ಗಟ್ಟಿಯಾದ ಅನಾಲಿಸಿಸ್. ತಮ್ಮ ಮಾತುಗಳು ತಮಗೇ ಮರಳಿದಾಗ ಅದರಿಂದ ಏನೆಲ್ಲ ಅಪಾಯ ಆಗಬಹುದು ಎಂಬುದರ ಬಗ್ಗೆಯೂ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ಅಧ್ಯಯನದ ದೃಷ್ಟಿಯಿಂದ ರಾಜಕೀಯ ವಿಷಯಗಳ ಬಗ್ಗೆ ಹಾಗೂ ಚುನಾವಣೆಯ ಬಗ್ಗೆ ತಿಳಿಯಲು ಇದೊಂದು ಸೂಕ್ತ ಪುಸ್ತಕ. ನಾವು ಒಪ್ಪಿದರೂ, ಒಪ್ಪದಿದ್ದರೂ ರಾಜಕೀಯ ಎಂಬ ವಿಷಯ ಪ್ರಬಲವಾಗಿರುವಂಥದ್ದು. ಹೀಗಿದ್ದಾಗ ಅದರ ಬಗ್ಗೆ ಸ್ವಲ್ಪ ಮಾಹಿತಿಗಳನ್ನು ತಿಳಿದುಕೊಂಡಿದ್ದರೆ ಅನುಕೂಲವೇ ಆಗುತ್ತದೆ. ನಮ್ಮ ವೈಯಕ್ತಿಕ ವಿಚಾರಗಳು, ನಾವು ಬೆಂಬಲಿಸುವ ಪಕ್ಷಗಳು ಯಾವುದೇ ಇರಬಹುದು ಆದರೆ, ಇದನ್ನು ಒಂದು ಅನಾಲಿಟಿಕಲ್ ದೃಷ್ಟಿಕೋನದಿಂದ ಓದಿದರೆ ಚುನಾವಣೆ ಸಂದರ್ಭದ ಒಂದು ಸಂಪೂರ್ಣ ಚಿತ್ರಣ ಕಣ್ಣೆದುರು ಬರುತ್ತದೆ. ಒಂದು ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಸಣ್ಣ ಸಣ್ಣ ಅಂಶಗಳು ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಬಹುದು.

ನನಗೆ ಬಹಳ ಇಷ್ಟವಾದದ್ದು ಈ ಪುಸ್ತಕದ ನಿರೂಪಣೆ. ರಾಜಕೀಯ ವಿಷಯದ ಬಗ್ಗೆ ಆಸಕ್ತಿ ಇಲ್ಲದ ನನ್ನಂಥವನಿಗೂ ಓದಬೇಕು ಎಂಬ ಕುತೂಹಲ ಮೂಡಿಸಿತು. ಆಗಲೇ ಹೇಳಿದಂತೆ ಇದು ಒಂದು ರೋಚಕ ಕಾದಂಬರಿ ಓದಿದ ಅನುಭವ ನೀಡಿತು.

- ಪ್ರಮೋದ ಮೋಹನ ಹೆಗಡೆ
ಪ್ರಮೋದ ಮೋಹನ ಹೆಗಡೆ ಅವರ ಲೇಖಕ ಪರಿಚಯ...

MORE FEATURES

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

20-04-2024 ಬೆಂಗಳೂರು

“ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗು...

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು

20-04-2024 ಬೆಂಗಳೂರು

'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದ...

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...