"ಕನ್ನಡದ ಅತ್ಯುತ್ತಮ ಕತೆಗಾರ್ತಿಯಾದ ಸುಮಂಗಲಾ ಅವರ ಈ ಕತೆಗಳು ಇವುಗಳನ್ನು ನಾನು ಉದ್ದಕ್ಕೂ ನಿರೂಪಣೆಗಳೆಂದೇ ಕರೆದಿದ್ದೇನೆ. ಇವು ಸಮಕಾಲೀನ ಸಂದರ್ಭದ ಗಮನಾರ್ಹ ನಿರೂಪಣೆಗಳಾಗಿವೆ. ತೋರಿಕೆಯದಲ್ಲದ, ಕೇವಲ ಬುದ್ದಿಗತವೂ ಅಲ್ಲದ, ಭಾವುಕತೆಯನ್ನು ಮಾತ್ರ ಆಧರಿಸಿದವು ಎಂದೂ ಅನ್ನಿಸದ ಅಪ್ಪಟ ಮಾನವೀಯ ನಿರೂಪಣೆಗಳಾಗಿವೆ," ಎನ್ನುತ್ತಾರೆ ಲೇಖಕಿ ಆಶಾದೇವಿ. ಅವರು ಲೇಖಕಿ ಸುಮಂಗಲಾ. ಅವರ ʻಎನ್ನಾತ್ಮ ಕಂಪಮಿದುʼ ಕಾದಂಬರಿಗೆ ಬರೆದ ಮುನ್ನುಡಿ.
ಇದು ಬಾಳು ನೋಡು...
ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ ಬೆಂಗಾಡು ನೋಡು
ಇದ ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ತಿಳಿದನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯ
ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿ...'
ಸುಮಂಗಲಾ ಅವರ 'ಎನ್ನಾತ್ಮ ಕಂಪಮಿದು' ಓದುತ್ತಿರುವಾಗ ಉದ್ದಕ್ಕೂ ಅಡಿಗರ ಈ ಸಾಲುಗಳು ಹಿಮ್ಮೇಳದಂತೆ ಕೇಳಿಸುತ್ತಲೇ ಇದ್ದವು.
ಒಂದೇ ಹೂವಿನ ಹಲವು ಪಕಳೆಗಳಂತೆ ಇರುವ ಈ ನಿರೂಪಣೆಗಳು ಒಂದು ಹೂವಾಗಿಯೂ, ದಳಗಳಾಗಿಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೂವು ಮತ್ತು ದಳಗಳಂತೆಯೇ 'ಎನ್ನಾತ್ಮ ಕಂಪಮಿದು' ಎನ್ನುವಂತೆ ಕಂಡೂ
ಕಾಣದಂತೆ ಕಂಪಿಸುತ್ತವೆ!
2019-25ರ ಅವಧಿಯಲ್ಲಿ ರಚಿತವಾದ ಈ ಕಥಾ ನಿರೂಪಣೆಗಳನ್ನು ಇಡಿ ಯಾಗಿಯೂ ನೋಡಬಹುದು, ಬಿಡಿಯಾಗಿಯೂ ನೋಡಬಹುದು. ಈ ಅಂಶವು ಈ ಕೃತಿಯ ವಿಶಿಷ್ಟ ಗುಣವಾಗಿಯೂ ನಮ್ಮ ಗಮನ ಸೆಳೆಯುತ್ತದೆ.
ಇದನ್ನು ಕಥಾ ಸಂಕಲನವಾಗಿ ಪ್ರಕಟಿಸಬೇಕೇ ಅಥವಾ ಕಾದಂಬರಿಯಾಗಿಯೇ ಎನ್ನುವ ಪ್ರಶ್ನೆಯೂ ಸುಮಂಗಲಾ ಅವರನ್ನು ಕಾಡಿದ್ದಿದೆ. ಆದರೆ ಇವುಗಳಿಗಿರುವ ಅಂಟಿಕೊಳ್ಳುವ ಮತ್ತು ಪದ್ಮ ಪತ್ರ ಜಲಬಿಂದುವಿನಂತಹ ಗುಣಗಳು ಅಂತಿಮವಾಗಿ ಕಲೆಯ ಸೃಜನಶೀಲ ಶಕ್ತಿಯನ್ನೇ ಎತ್ತಿ ಹಿಡಿಯುತ್ತಿವೆ. ಈ ಪ್ರಯತ್ನವನ್ನು ಪ್ರಯೋಗಶೀಲ, ಕ್ರಿಯಾಶೀಲ ನೆಲೆಯಲ್ಲಿ ನೋಡಬಹುದು ಎನ್ನುವುದೇನೋ ನಿಜವೇ ಮತ್ತು ಇಂಥ ಪ್ರಯತ್ನಗಳನ್ನು ಇದೇ ಮೊದಲು ಎಂದೂ ನೋಡಬೇಕಾಗಿಲ್ಲ. ಸವಿತಾ ನಾಗಭೂಷಣ ಅವರ 'ಸ್ತ್ರೀಲೋಕ' ಕಾದಂಬರಿಯ ಸ್ವರೂಪವೂ ಹೆಚ್ಚು ಕಡಿಮೆ ಹೀಗೇ ಇದೆ. ಎನ್ನಬಹುದು. ಅದರಲ್ಲೂ ಬಿಡಿ ಬಿಡಿ ಚಿತ್ರಗಳು ಒಟ್ಟಾರೆಯಾಗಿಯೂ ಹೊಸ ಚಿತ್ರ ವೊಂದನ್ನು ಕಟ್ಟಿಕೊಡುತ್ತವೆ. ಸುಮಂಗಲಾ ಇದರ ಮತ್ತೊಂದು ಆವೃತ್ತಿಯನ್ನು ಬಲು ಚೆಂದವಾಗಿ, ಆದ್ರ್ರವಾಗಿ ಸೃಷ್ಟಿಸಿದ್ದಾರೆ.
ಬದುಕನ್ನು ಎದುರಿಗೆ ನಿಲ್ಲಿಸಿಕೊಂಡು, ಬದುಕೇ ನಿನ್ನ ನಿಜ ಯಾವುದು, ನಾನು ಉಣಬಯಸಿದ್ದೇನು? ನೀನು ಬಡಿಸುತ್ತಿರುವುದೇನು? ಬದುಕುವುದೆಂದರೆ ನೀನು ಕೊಟ್ಟದ್ದನ್ನು ಮಾತ್ರ ಚಕಾರವೆತ್ತದೆ ಉಣ್ಣುವುದು ಮಾತ್ರವೆ? ನನಗೆ ಬೇಕಾದ್ದನ್ನೂ ನೀನು ಕೊಡಬೇಕಲ್ಲವೆ? ಹೋಗಲಿ ಬಿಡು ಇಷ್ಟನ್ನಾದರೂ ಕೊಟ್ಟೆಯಲ್ಲ, ಹಸಿದು ಸಾಯುವುದಕ್ಕಿಂತ ಅರೆಹೊಟ್ಟೆಯಾದರೂ ವಾಸಿ. ಇಷ್ಟಕ್ಕೂ ಇದೂ ರುಚಿಯಾಗಿಯೇ ಇರುವಂತಿದೆ, ನಾನು ಎಣಿಸಿದಷ್ಟು ಇದು ಅರುಚಿಯದಲ್ಲ, ಅಥವಾ ರುಚಿ ಎನ್ನುವುದು ನನ್ನ ಮನಸ್ಸಿಗೆ ಸಂಬಂಧಿಸಿದ್ದೆ? ರುಚಿ ರುಚಿ ಎಂದುಕೊಳ್ಳುತ್ತಾ ಹೋದರೆ ಇದೂ ರಸಗವಳವೂ ಆದೀತೋ ಏನೋ, ಎಂಥದೋ ಹೋಗಲಿ ಬಿಡು, 'ಇದ್ದಷ್ಟು ದಿನವಾರೆ ಇರುವಷ್ಟು ಪ್ರೀತಿಯ ಹಂಚಿ ಹೋಗುವುದೇ' ಅಂದುಕೊಳ್ಳೋದೇ ನಿನ್ನನ್ನ ವಶ ಮಾಡಿಕೊಳ್ಳೋಕೆ ಇರೋ ದಾರಿಯೇನೋ ಅಲ್ಲವಾ, ಹೇಳು ಮತ್ತೆ... ಹೀಗೆ ಇಲ್ಲಿನ ಪಾತ್ರಗಳು ಬದುಕಿನ ಜೊತೆ ಕೊನೆಯೇ ಇಲ್ಲದ ಮಾತುಕತೆಯನ್ನು ಒಳಗಿನಿಂದಲೂ ಹೊರಗಿನಿಂದಲೂ ಕೇಳಿಕೊಳ್ಳುತ್ತಿರುವಂತೆ ಈ ನಿರೂಪಣೆಗಳು ಕಾಣಿಸುತ್ತವೆ.
ಒಂದು ಮೂಲಭೂತ ಪ್ರಶ್ನೆ ಇಲ್ಲಿನ ನಿರೂಪಣೆಗಳನ್ನು ನಿರ್ದೇಶಿಸಿದ ಹಾಗೆ ಕಾಣುತ್ತದೆ. ನಡೆದಂತೆ ದಾರಿಯನು ಬಿಚ್ಚಿ ಬೆಳಸುವುದು, ಇದೇ ಬದುಕು ಎನ್ನುವುದು ಸತ್ಯವೆ ಅಥವಾ ನನಗೆ ಬೇಕಾದ ದಾರಿಯನ್ನು ನಾನೇ ಕಂಡುಕೊಳ್ಳಬೇಕು ಎನ್ನುವುದು ಸತ್ಯವೆ?
ಈ ನಿರೂಪಣೆಗಳಲ್ಲಿ ನಾಯಕ ನಾಯಕಿಯರಿಲ್ಲ. ಇಲ್ಲಿ ಯಾರೂ ಮುಖ್ಯರೂ ಅಲ್ಲ, ಅಮುಖ್ಯರೂ ಅಲ್ಲ. ಇದೇ ಈ ನಿರೂಪಣೆಗಳನ್ನು ಭಿನ್ನ ಜಾಗದಲ್ಲಿ ಮತ್ತು ಸ್ವರೂಪದಲ್ಲಿ ನಿಲ್ಲಿಸುತ್ತದೆ.
ನಾಯಕಿ ಎಂದು ಭಾಸವಾಗುವ ವಿನುತಾಳೇ ತನ್ನನ್ನು ನಾಯಕಿಯಾಗಿಸಿಕೊಳ್ಳಲು ಉದ್ದಕ್ಕೂ ನಿರಾಕರಿಸುತ್ತಾ ಹೋಗುತ್ತಾಳೆ. ಬದುಕಿನಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ, ಇನ್ನೂ ಹಲವರೊಂದಿಗೆ ಅದು ಹೇಗೆ ಬೆಸೆದುಕೊಂಡಿರುತ್ತೇವೆ ಎಂದರೆ, ಅವರಿಲ್ಲದೆ ನಮ್ಮ ಬದುಕಿನ ಬಂಡಿಯೇ ಚಲಿಸುವುದಿಲ್ಲ ಎಂದಾದ ಮೇಲೆ ಯಾರೋ ಒಬ್ಬರ ಸುತ್ತ ಬದುಕು ಸುತ್ತುತ್ತದೆ ಎನ್ನುವುದೇ ಮಿಥ್ಯ ಎನ್ನುವ ಸತ್ಯವನ್ನು ಇಲ್ಲಿನ ಪಾತ್ರಗಳು ಗಾಢವಾಗಿ ನಂಬಿವೆ.
ಉದಾಹರಣೆಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಸಿದ್ದಾರ್ಥ ಕೂಡ ಇಲ್ಲಿ ಒಂದು ಪ್ರಧಾನ ಪಾತ್ರವೇ. ಎಂದೂ ನೋಡಿಯೇ ಇರದ ಆತನ ಆತ್ಮಹತ್ಯೆ ಮೇಗಲೆ ಯನ್ನು ಅದೆಷ್ಟು ಘಾಸಿಗೊಳಿಸುತ್ತದೆ ಎಂದರೆ, ಎನುತಾಳನ್ನು ಭೇಟಿಯಾಗಲೇಬೇಕೆಂದು ಹಾತೊರೆದು ಅವಳ ಜೊತೆ ಇಡೀ ಸಂಜೆ ಈ ಸಾವಿನ ಬಗೆಗೆ ಮಾತನಾಡುತ್ತಾಳೆ. ಬದುಕು ಬೇಡವೆನ್ನುವ ಆತನ ತೀರ್ಮಾನದ ಕಾರಣಗಳನ್ನು ಇವರಿಬ್ಬರೂ ಹುಡುಕಿದ್ದೇ ಹುಡುಕಿದ್ದು. ಆತ ಪ್ರಭಾವಿ ಉದ್ಯಮಿ. ಆತನ ಸಾವು ಒಂದು ಸಾರ್ವಜನಿಕ ಸಂಗತಿ ಎನ್ನುವುದು ಇಲ್ಲಿ ಮುಖ್ಯವಾಗುವುದೇ ಇಲ್ಲ. ಆತ್ಮಹತ್ಯೆಯ ಸಾಧ್ಯತೆ ಎನ್ನುವುದು ಎಲ್ಲರ ಮನಸ್ಸಿನೊಳಗೂ ಇದ್ದೇ ಇರುತ್ತದೆ. ಅದನ್ನು ಜಾರಿಗೊಳಿಸಿದವರನ್ನು ಅರ್ಥ ಮಾಡಿಕೊಳ್ಳಲು ನಡೆಸುವ ಪ್ರಯತ್ನವೆಂದರೆ, ನಾವು ಅದರಿಂದ ಯಾಕೆ ದೂರ ಉಳಿದಿದ್ದೇವೆ, ಅಥವಾ ಅವನಂತೆ ಅದು ನಮ್ಮ ಮೊದಲ ಆದ್ಯತೆ ಯಾಕಾಗಲಿಲ್ಲ ಎನ್ನುವುದರ ಹಿಂದಿನ ಕಾರಣವನ್ನು ಹುಡುಕುವುದೇ ಆಗಿದೆ ಎನ್ನುವಷ್ಟು ಆಳವಾಗಿಯೂ ಮೇಗಲೆಯ ಮಾತುಗಳು ಕಾಣಿಸುತ್ತಾ ಹೋಗುತ್ತವೆ. ಮತ್ತೆ ಮತ್ತೆ ಸಿದ್ದಾರ್ಥನ ಪಾತ್ರ ಈ ನಿರೂಪಣೆಗಳಲ್ಲಿ ಬರುತ್ತದೆ. 'ಏಜ್ ಲೆಸ್ ಗರ್ಲ್ಸ್' ಎಂದು ತಮ್ಮನ್ನು ತಾವು ಒಂದು ಗುಂಪು ಮಾಡಿಕೊಂಡ ರಾಜೋ, ವಿನುತಾ ಮತ್ತು ಮೇಗಲೆಯರಿಗೆ ಸಾವಿನ ಮನೆಯನ್ನು ಆರಿಸಿಕೊಂಡ ಸಿದ್ದಾರ್ಥ ಯಾಕಾಗಿ ಕಾಡುತ್ತಾನೆ? ಏಜ್ ಲೆಸ್ ಆಗುವ ಉತ್ಕಟ ಜೀವನ ಪ್ರೀತಿಯೆಲ್ಲಿ? ಕೈಯಾರೆ ಬದುಕನ್ನು ಅರ್ಧಕ್ಕೇ ನಿಲ್ಲಿಸಿಕೊಂಡ ಸಿದ್ದಾರ್ಥನೆಲ್ಲಿ? ಈ ಎರಡರ ಸಂಧಿ ಬಿಂದುವಿನಲ್ಲಿ ಬದುಕನ್ನು ಇಲ್ಲಿನ ಪಾತ್ರಗಳು ಹುಡುಕುತ್ತವೆ. ವಾಸ್ತವಕ್ಕೆ ಬೆನ್ನು ತಿರುಗಿಸದೇ, ಕನಸನ್ನೂ ಕಳೆದುಕೊಳ್ಳದೆ ಈ ಎರಡರ ನಡುವೆ ಜೀಕುತ್ತಾ ಹೋಗುವ ಇಲ್ಲಿನ ಪಾತ್ರಗಳು ತಮ್ಮ ತಲ್ಲಣಗಳನ್ನು ಓದುಗರ ತಲ್ಲಣಗಳಾಗಿಸುತ್ತಾ ಹೋಗುತ್ತಾರೆ.
ಈ ನಿರೂಪಣೆಗಳಲ್ಲಿ ನಾವು ಗಮನಿಸಲೇಬೇಕಾದ ಮಹತ್ವದ ಸಂಗತಿಯೊಂದಿದೆ. ಅದು ವೈಯಕ್ತಿಕ ಮತ್ತು ಸಾಮಾಜಿಕತೆಯ ನಡುವಿನ ಸಂಘರ್ಷವನ್ನು ಹೆಣ್ಣು ನಿಭಾಯಿಸು ತ್ತಿರುವ ಹೊಸಬಗೆಯದು. ಇದು ಹೆಣ್ಣು ತನಗೆ ತಾನೇ ಕಾಣುತ್ತಿರುವ ಅರಿವಾಗಿರು ವಂತೆಯೇ ಸಾಮಾಜಿಕ ಅರಿವಾಗಿಯೂ ಅದು ಬೆಳೆಯುವ, ಬೆಳೆಯಬೇಕಾದ ಅನಿವಾರ್ಯತೆಯನ್ನೂ ಮನದಟ್ಟು ಮಾಡಿಸುತ್ತದೆ. ಅದರ ಪರಿಣಾಮಗಳು, ಸಾಧ್ಯತೆಗಳು ಏನೇ ಇರಲಿ, ಈ ಘಳಿಗೆಗಂತೂ ಅದು ಅನಿವಾರ್ಯವಾಗಿದೆ ಎನ್ನುವ ಸತ್ಯವನ್ನು ಕಾಣಿಸುವಲ್ಲಿ ಈ ನಿರೂಪಣೆಗಳು ಗೆದ್ದಿವೆ ಎನ್ನುವುದು ಮುಖ್ಯವಾಗಿದೆ. ಮತ್ತು ಈ ಪಲ್ಲಟಗಳು ಹೆಣ್ಣಿನ ಆಯ್ಕೆ ಎನ್ನುವುದೂ ಅಷ್ಟೇ ಮುಖ್ಯವಾದ ಸಂಗತಿಯಾಗಿದೆ. ವೈಬ್ರೇಟರ್ ಅನ್ನು ಮೇಗಲಾ ಬಳಸಲು ಬಯಸುವುದು, ಅದಕ್ಕೆ ರಾಜೋ ಬೆಂಬಲಿಸು ವುದು, ಅದರ ಬಗೆಗೆ ಸ್ಪಷ್ಟತೆ ಇರದ ವಿನುತಾಳ ಕೈಗೆ ಅದನ್ನು ತಿಂಗಳ ಕಾಲ ಕಾಪಾಡುವ ಹೊಣೆ ಬೀಳುವುದು ಇವೆಲ್ಲವೂ ಈ ಪ್ರಕ್ರಿಯೆಯಲ್ಲಿ ಹೆಣ್ಣು ತೊಡಗಿಸಿ ಕೊಂಡಿರುವ ಚಕ್ರಗತಿಯನ್ನು ಹೇಳುತ್ತವೆ. ಈ ಸೆಕ್ಸ್ ಟಾಯ್‌ನ ಬಗೆಗೆ ವಿನುತಾ ಎತ್ತುವ ಪ್ರಶ್ನೆಗಳಾಗಲೀ, ಅವಳಲ್ಲಿರುವ ದ್ವಂದ್ವಗಳಾಗಲಿ ಪ್ರಾತಿನಿಧಿಕವಾದವು. ಸಾವಿರಾರು ಹೆಣ್ಣುಮಕ್ಕಳಲ್ಲಿ ಸಹಜವಾಗಿ ಹುಟ್ಟುವ ಹಿಂಜರಿಕೆ ಮತ್ತು ಆತಂಕದವು. ರಾಜೋ ಕೊಡುವ ಉತ್ತರಗಳು ಉಡಾಫೆಯಂತೆ ಕಂಡರೂ ಸತ್ಯವನ್ನು ಮುಖಕ್ಕೆ ರಾಚುವಷ್ಟು ಪ್ರಖರವಾಗಿವೆ. ಇಂಥ ಸ್ವ ಅನುಮಾನ ಮತ್ತು ಹಿಂಜರಿಕೆಗಳನ್ನು ದಾಟದೆ ಹೆಣ್ಣಿಗೆ ಬಿಡುಗಡೆಯಿಲ್ಲ ಎನ್ನುವ ವಾಸ್ತವವನ್ನು ಯಾರೇ ಆಗಲಿ ಇವುಗಳ ಬಳಕೆಯನ್ನು ಒಪ್ಪದೆಯೂ ಅರ್ಥಮಾಡಿಕೊಳ್ಳುವಷ್ಟು ರಾಜೋಳ ಪ್ರತಿಕ್ರಿಯೆಗಳು ತೀವ್ರವಾಗಿವೆ. ಇದಕ್ಕೆ ಗಂಡಾಳಿಕೆಯ ಪ್ರತಿಕ್ರಿಯೆ ಏನು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎನ್ನುವ ಸೂಚನೆ ನಿರ್ಣಾಯಕವಾದುದು. ಲೋಕದ ಬಿಸಾತಿನಿಂದ ಹೆಜ್ಜೆಹೆಜ್ಜೆಯಾಗಿ ಹೆಣ್ಣು ಬಿಡಿಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅಗತ್ಯವನ್ನು ಇದು ಪರಿಣಾಮಕಾರಿ ಯಾಗಿ ಹೇಳುತ್ತದೆ. ಇದನ್ನೊಂದು ಆಶಯವಾಗಿ, ಬಂಡಾಯವಾಗಿ, ಪ್ರಯೋಗವಾಗಿ ಈ ನಿರೂಪಣೆ ಹೇಳುತ್ತಿಲ್ಲ, ಇದರ ಸಹಜತೆಯೊಂದಿಗೇ ಅದು ಮುನ್ನೆಲೆಗೆ ಬರುತ್ತಿದೆ. ಇದೇ ಈ ನಿರೂಪಣೆಯ ಹೆಗ್ಗಳಿಕೆ.
ಮಗಳು ವಿಭಾಳ ಲಿವಿಂಗ್ ಇನ್ ರಿಲೇಷನ್‌ಶಿಪ್‌ನ ಸಂಗತಿಯನ್ನೂ ಇಷ್ಟೇ ಗಂಭೀರವಾಗಿ, ಆಳವಾಗಿ ಸುಮಂಗಲಾರ ನಿರೂಪಣೆ ಗಮನಿಸುತ್ತದೆ. ಮನೆಗೆ ಬರುವುದಕ್ಕೆ ಹತ್ತು ನಿಮಿಷ ತಡವಾಗುವುದಾದರೂ ಪರಸ್ಪರ ಮೆಸೇಜ್‌ಗಳಲ್ಲಿ
ಅದನ್ನು ಹೇಳುವಷ್ಟು ಆಪ್ತವಾದ, ಅನ್ನೋನ್ಯವಾದ ಕುಟುಂಬ, ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ಕೊಂಡಾಗಲೇ ಪುಣೆಗೆ ಕೆಲಸದ ಮೇಲೆ ಹೋದ ಮಗಳು ಒಂದು ವರ್ಷದ ತನಕ ತನ್ನ ಲಿವ್ ಇನ್ ಸಂಬಂಧವನ್ನು ಅಪ್ಪ ಅಮ್ಮನೊಂದಿಗೆ ಹೇಳುವ ಅವಶ್ಯಕತೆಯನ್ನೇ ಕಾಣುವುದಿಲ್ಲ ಎನ್ನುವುದು ಅಸಹಜವಾಗಿ ಕಾಣುತ್ತದೋ, ಕಾಲ ಪಲ್ಲಟದ ಕಡೆಗೆ ಧಾವಿಸುತ್ತಿರುವುದನ್ನು ಹೇಳುತ್ತದೋ ಎನ್ನುವ ಪ್ರಶ್ನೆ ನಮ್ಮನ್ನು ಕ್ಷಣ ಕಾಲ ಕಾಡಿದರೂ ಓದಿ ಮುಗಿಸುವ ಹೊತ್ತಿಗೆ ಇದು ಸಾಧ್ಯ ಎನ್ನುವ ಆಲೋಚನೆಯ ಕಡೆಗೆ ನಮ್ಮನ್ನು ಹೊರಳಿಸುತ್ತದೆ.
ವಿನುತಾಳ ಆಘಾತವನ್ನು ರಮೇಶ ನಿಭಾಯಿಸುವ ಬಗೆಯೇ ಇದನ್ನು ಸಾಧಿಸುತ್ತದೆ. ಹಿಂದೆಂದೋ ಮದುವೆಯ ಪ್ರಸ್ತಾಪದ ಸಂದರ್ಭದಲ್ಲಿ ಮಗಳು ವಿಭಾ ತನ್ನ ದೇಹ ಮತ್ತು ಬದುಕಿನ ಬಗೆಗೆ ತನ್ನ ತೀರ್ಮಾನವೇ ಅಂತಿಮ ಎಂದು ಹೇಳಿದ್ದನ್ನು ನೆನಪಿಸಿ ದವನು ರಂಗಶಂಕರದಲ್ಲಿ ನಾಟಕಕ್ಕೆ ಟಿಕೆಟ್ ತೆಗೆದುಕೊಂಡದ್ದನ್ನು ನೆನಪಿಸಿಕೊಂಡು ಹೊರಟೇ ಹೋಗುತ್ತಾನೆ. ಯಾವುದು ಬದುಕಿನ ಅತಿ ದೊಡ್ಡ ಆಘಾತ ಎಂದು ವಿನುತಾ ತಿಳಿದಿದ್ದಾಳೋ ಅದರ ತೀವ್ರತೆಯನ್ನು ಕಡಿಮೆ ಮಾಡಲೆಂದೋ, ಅದರ ಸಹಜತೆಯನ್ನು ಹೇಳುವವ ನಂತೋ, ತನಗೂ ಆಗಿರುವ ಆಘಾತವನ್ನು ವಿನುತಾಳ ಎದುರಿಗೆ ತೋರಿಸಿಕೊಳ್ಳಬಾರ ದೆಂದೋ, ಇದಕ್ಕೆ ಕಾಲವೇ ಉತ್ತರ ಹೇಳಬೇಕು, ತಾಳ್ಮೆಯಿಲ್ಲದೆ ಬೇರೆ ದಾರಿ ಇಲ್ಲ ಎನ್ನುವುದನ್ನು ಸೂಚಿಸುವವನಂತೆಯೋ ಅವನ ವರ್ತನೆ ಇದೆ. ಅಥವಾ ಇದೆಲ್ಲವನ್ನೂ ಮೀರಿ, ಬೇಕೋ ಬೇಡವೋ ಇದನ್ನು ಒಪ್ಪದೆ ಬೇರೆ ದಾರಿಯೇ ನಮಗಿಲ್ಲ, ಮಾತ್ರವಲ್ಲ ನಮ್ಮ ಸಮ್ಮತಿ ಅಥವಾ ಅಸಮ್ಮತಿಯ ಅಗತ್ಯವೇ ವಿಭಾಳಿಗೆ ಇಲ್ಲ ಎನ್ನುವುದನ್ನೂ ಇಲ್ಲಿ ರಮೇಶ ಸ್ಪಷ್ಟಪಡಿಸುತ್ತಿದ್ದಾನೆ. ಬಿಯರ್ ಕುಡಿಯುವುದೋ ಮತ್ತೊಂದೋ ಲೋಕ ಒಪ್ಪದ ನಡವಳಿಕೆಗಳನ್ನು ಆರಾಮವಾಗಿ ರೂಢಿಸಿಕೊಂಡವಳಿಗೆ ಮಗಳ ಆಯ್ಕೆಯ ಬದುಕು ನೀಡುವ ಆಘಾತ ಬದಲಾವಣೆಯ ಕಷ್ಟಗಳನ್ನು ಧ್ವನಿಸುತ್ತದೆ. ತಲೆಮಾರಿನ ಅಂತರವಾದರೂ ಎಲ್ಲ ಕಾಲಕ್ಕೂ ನಮ್ಮನ್ನು ಕಾಡುವಂಥದ್ದೇ ಎನ್ನುವ ಲೋಕಸತ್ಯವೂ ಇಲ್ಲಿದೆ.
ರಮೇಶನ ಪಾತ್ರ ಸ್ವಲ್ಪ ಆದರ್ಶದ್ದು ಎನ್ನುವ ಹಾಗೆ ಕೆಲವೊಮ್ಮೆ ಭಾಸವಾಗುತ್ತದೆ. ಆಧುನಿಕ ಹೌದೋ ಅಲ್ಲವೋ, ಆದರೆ ಹೆಣ್ಣು ಬಯಸುವ 'ಹೆಂಗರುಳಿ'ನವನಂತೂ ಖಂಡಿತಾ ಹೌದು.
ಹೆಂಡತಿಯ ಮುಟ್ಟಿನ ನೋವನ್ನೂ ಅರ್ಥಮಾಡಿಕೊಳ್ಳಬಲ್ಲ, ಬಿಯರ್ ಕುಡಿದು ಬಂದ ಹೆಂಡತಿಯನ್ನು ಯಾರ ಜೊತೆಗೆ ಹೋಗಿ ಕುಡಿದೆ ಎನ್ನುವ ಪ್ರಶ್ನೆಯನ್ನೇ ಹಾಕದೇ, ಅದೊಂದು ಕಾಫಿ ಕುಡಿದಷ್ಟೇ ಸರಳ ಸಂಗತಿ ಎನ್ನುವಂತೆ ತಿಳಿಯಬಲ್ಲ ಪ್ರಬುದ್ಧತೆ, ನಾಗರಿಕತೆಯನ್ನು ಮೈಗೂಡಿಸಿಕೊಂಡ ವ್ಯಕ್ತಿ ಈತ. ಹಲವೊಮ್ಮೆ ಹೆಣ್ಣು ಅಪೇಕ್ಷಿಸುವ ಗಂಡಿನ ಗುಣಗಳ ಸಾಕಾರ ರೂಪದಂತೆಯೂ ಇವನು ಕಾಣಬಲ್ಲ. ಇವನೊಬ್ಬ ಅಪ್ಪಟ ಸಖ.
ಆದ್ದರಿಂದಲೇ ಇವನ ಬಗ್ಗೆ ಎತ್ತಬಹುದಾದ ಪ್ರಶ್ನೆಗಳಿದ್ದೂ ಇವನಂತಹವರ ಸಂತತಿ ಸಾಸಿರವಾಗಲಿ ಎನ್ನುವ ಆಸೆ ಹುಟ್ಟುತ್ತದೆ! ಮನೆಯವರಿಗೆ ಹೇಳದೇ ವಿನುತ ಸೈಕಲ್ ಒಂದನ್ನ ಇಟ್ಟುಕೊಳ್ಳುವುದನ್ನೂ ಅದು ಗೊತ್ತಾದಾಗಲೂ ಕಿರಿಕಿರಿ ಮಾಡದೇ ಸ್ವೀಕರಿಸಬಲ್ಲ ಈ ರಮೆಯ ಈಶ. ಆ ಸೈಕಲ್‌ನ ಪ್ರಸಂಗ ಕೂಡ ಕುತೂಹಲಕಾರಿಯಾಗಿದೆ. ನಾನು ನನ್ನಿಷ್ಟ ಎನ್ನುವಂತೆ ವಿನುತ ಕೊಂಡ ಸೈಕಲ್ ಕೂಡ ಅವಳಿಗೆ ಬಿಡುಗಡೆಯ ದಾರಿಯಾಗಿ ಮಾತ್ರವಲ್ಲ ಹೊಸಲೋಕದ ಹರಿಕಾರನಾಗುತ್ತದೆ. ಎಂಥ ಸಣ್ಣ, ಸಾಧಾರಣ ಸಂಗತಿಗಳು ಹೆಣ್ಣಿಗೆ ಬೆಳಕಿನ ದಾರಿಗಳಾಗುತ್ತವೆ, ಅಥವಾ ಬೆಳಕಿನ ದಾರಿಗಳಾಗಿಸಿಕೊಳ್ಳುವ ಶಕ್ತಿ ಹೆಣ್ಣಿಗಿದೆ ಎನ್ನಬಹುದೆ?
ಇಷ್ಟೆಲ್ಲ ಜೀವಪರವಾದ ಒರತೆಗಳನ್ನು ಕಾಣಿಸಿಯೂ ಕೃತಿಯುದ್ದಕ್ಕೂ ದುಃಖ ಮತ್ತು ವಿಷಾದದ ಎಳೆಯೊಂದು ಕಂಡೂ ಕಾಣದಂತೆ ಓದುಗರ ಅನುಭವಕ್ಕೆ ಬರುತ್ತಲೇ ಇರುತ್ತದೆ. ಅದನ್ನು ಏನೆಂದು ಸ್ಪಷ್ಟವಾಗಿ ಹೇಳುವುದು ಕಷ್ಟ ಆದರೆ ಯಾವ ಘಳಿಗೆಯಲ್ಲಿ ಬೇಕಾದರೂ ಧುತ್ತೆಂದು ದುಃಖ ನಮ್ಮನ್ನು ಆವರಿಸಿಬಿಡಬಹುದು ಎನ್ನುವ ಆತಂಕ ಇಲ್ಲಿನ ಎಲ್ಲ ಪಾತ್ರಗಳನ್ನೂ ನೆರಳಿನಂತೆ ಹಿಂಬಾಲಿಸುತ್ತದೆ. ಬದುಕಿನಲ್ಲಿ ಸುಖದ ಅಪೇಕ್ಷೆ ಹೆಚ್ಚಾದಷ್ಟೂ ದುಃಖದ ಸಾಧ್ಯತೆಯೂ ಹೆಚ್ಚಾಗುತ್ತದೆ ಎನ್ನುವ ತಾರ್ಕಿಕತೆಯದಲ್ಲ, ಅನೂಹ್ಯವಾಗಿ ಅದು ಹುದುಗಿಯೇ ಇರುತ್ತದೆಯಲ್ಲವೆ ಎನ್ನುವ ಅರಿವಿನಿಂದ ಹುಟ್ಟಿದ ತಲ್ಲಣ ಇದು.
ಇದರಾಚೆಗೂ ಈ ನಿರೂಪಣೆಗಳು ಕೆಲವೊಮ್ಮೆ ಚಲಿಸುವುದುಂಟು, ಸುಖ ಯಾವುದು, ದುಃಖ ಯಾವುದು ಎನ್ನುವ ವ್ಯತ್ಯಾಸ ಮಾಡುವುದೇ ಕಷ್ಟವಾಗುವ ಘಳಿಗೆಗಳೂ ಬದುಕನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ. ಸಿದ್ದಾರ್ಥನ ಸಾವಿನ ಸುದ್ದಿ ಮಾತನಾಡುತ್ತಿರುವಾಗಲೂ ಗೆಳತಿಯರಿಗೆ ದರ್ಶಿನಿಯ ರುಚಿಯಾದ ಫಿಲ್ಟರ್ ಕಾಫಿ ಸಿಕ್ಕಿದ್ದಿದ್ದರೆ ಅವನು ಸಾವಿನಿಂದ ಪಾರಾದರೂ ಆಗಿಬಿಡುತ್ತಿದ್ದನೇನೋ ಅನ್ನಿಸುವುದು ಅಸಂಗತ ಆಲೋಚನೆಯಾದರೂ ಅವನು ಸಾವಿನಿಂದ ತಪ್ಪಿಸಿಕೊಳ್ಳಲಾಗದಿದ್ದ ದುಃಖದ ತೀವ್ರತೆ ನಮ್ಮನ್ನು ತಟ್ಟುತ್ತದೆ. ವಿಭಾಳ ಹುಟ್ಟುಹಬ್ಬಕ್ಕೆ ಅವಳಿಗೆ ಸರ್‌ಪ್ರೈಸ್ ನೀಡಲು ಪುಣೆಗೆ ಹೊರಟ ವಿನುತೆಗೆ ಮಗಳು ಬೇರೆ ಏನಾದರೂ ಕಾರ್ಯಕ್ರಮ ಹಾಕಿಕೊಳ್ಳದಿದ್ದರೆ ಸಾಕು, ಏನೂ ತೊಂದರೆಯಾಗದಿದ್ದರೆ ಸಾಕು ಎನ್ನುವ ಹಾರೈಕೆಯ ಜೊತೆಯಲ್ಲೇ ಏನಾದರೂ ಆದೀತೇನೋ ಎನ್ನುವ ಒಳಆತಂಕಕ್ಕೆ ಸರಿಯಾಗಿ ಮಗಳು ಕೊಡುವ ಆ ಆಘಾತಕಾರಿ ಸುದ್ದಿ. ಒಂದು ಘಟ್ಟದಲ್ಲಿ ದುಃಖವನ್ನು ಎದುರಿಸಲು ಮನಸ್ಸು ಸದಾ ಸನ್ನದ್ದವಾಗಿರುತ್ತದೆಯೋ ಎಂದೂ ಅನ್ನಿಸಿಬಿಡುತ್ತದೆ.
ಕನ್ನಡದ ಅತ್ಯುತ್ತಮ ಕತೆಗಾರ್ತಿಯಾದ ಸುಮಂಗಲಾ ಅವರ ಈ ಕತೆಗಳು ಇವುಗಳನ್ನು ನಾನು ಉದ್ದಕ್ಕೂ ನಿರೂಪಣೆಗಳೆಂದೇ ಕರೆದಿದ್ದೇನೆ. ಇವು ಸಮಕಾಲೀನ ಸಂದರ್ಭದ ಗಮನಾರ್ಹ ನಿರೂಪಣೆಗಳಾಗಿವೆ.
ತೋರಿಕೆಯದಲ್ಲದ, ಕೇವಲ ಬುದ್ದಿಗತವೂ ಅಲ್ಲದ, ಭಾವುಕತೆಯನ್ನು ಮಾತ್ರ ಆಧರಿಸಿದವು ಎಂದೂ ಅನ್ನಿಸದ ಅಪ್ಪಟ ಮಾನವೀಯ ನಿರೂಪಣೆಗಳಾಗಿವೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.